ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಪಾಲಸ್ವಾಮಿ


 ಎಂ. ವಿ. ಗೋಪಾಲಸ್ವಾಮಿ


ಮನಃಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ. ಎಂ. ವಿ. ಗೋಪಾಲಸ್ವಾಮಿ ಅವರು ಕರ್ನಾಟಕದಲ್ಲಿ ರೇಡಿಯೋ ಪ್ರಸಾರ, ಮೈಸೂರು ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಭಾಗದ ಸ್ಥಾಪನೆ,  ಮಕ್ಕಳ ಶಿಶುವಿಹಾರ ಸ್ಥಾಪನೆ ಮುಂತಾದ ಅನೇಕ ಕಾರ್ಯಗಳಿಂದ ಅವಿಸ್ಮರಣೀಯರೆನಿಸಿದ್ದಾರೆ.  

ಎಂ. ವಿ. ಗೋಪಾಲಸ್ವಾಮಿ ಅವರು 1896ರ ಡಿಸೆಂಬರ್ 31ರಂದು ತಮಿಳುನಾಡಿನಲ್ಲಿ ಜನಿಸಿದರು. ಮದರಾಸಿನ ಪಾಚಿಯಪ್ಪ ಕಾಲೇಜಿನಲ್ಲಿ ಪದವಿ ಪಡೆದು,  ಉನ್ನತ ಸಂಶೋಧನಾ ವ್ಯಾಸಂಗಕ್ಕೆ ಲಂಡನ್ನಿಗೆ ಹೋದರೆ ಭಾರತದಲ್ಲಿನ ಪದವಿಗೆ ಮಾನ್ಯತೆ ಇಲ್ಲ ಎಂಬ ಕಾರಣದಿಂದ ಅಲ್ಲಿ ಮತ್ತೊಂದು ಪದವಿ ಪಡೆದರು.  ನಂತರ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಡಾ.‍ ಚಾರಲ್ಸ್ ಸ್ಪಿಯರ್‍ಮನ್ ಅವರ ಮಾರ್ಗದರ್ಶನದಲ್ಲಿ ಮನಃಶಾಸ್ತ್ರದಲ್ಲಿ ಪಿಎಚ್.ಡಿ ಗಳಿಸಿದರು. 

ಯುನೈಟೆಡ್ ಕಿಂಗ್ಡಂನಿಂದ ಮೈಸೂರಿಗೆ ಬಂದ ಪ್ರೊ. ಎಂ. ವಿ. ಗೋಪಾಲಸ್ವಾಮಿ ಅವರು,  ಮೈಸೂರು ವಿಶ್ಬವಿದ್ಯಾಲಯದಲ್ಲಿ 
1924ರಲ್ಲಿ ದೇಶದಲ್ಲೇ ಎರಡನೆಯದಾದ ಮನಃಶಾಸ್ತ್ರ ವಿಭಾಗವನ್ನು ಪ್ರಾರಂಭಿಸಿದರು. ತಾವು ತಮಿಳಿಗರಾದರೂ ತಮ್ಮ ಮಕ್ಕಳನ್ನು ಕನ್ನಡದಲ್ಲೇ ಮಾತಾಡಬೇಕೆಂದು ಒತ್ತಾಯಿಸಿ ಮೈಸೂರು ರಾಜ್ಯವನ್ನು ಅಪಾರವಾಗಿ ಪ್ರೀತಿಸುತ್ತಾ ಬಂದರು. 

ಗೋಪಾಲಸ್ವಾಮಿ ಅವರು ರೇಡಿಯೊ ಕುರಿತಾಗಿ ಮಾಡಿದ ಹವ್ಯಾಸಿ ಕಾರ್ಯ  ಅವರಿಗೆ,  ಅವರು ಮಾಡಿದ ಉಳಿದ ಎಲ್ಲ ಸಾಧನೆಗಳನ್ಮೂ ಮೀರಿದ ಜನಪ್ರಿಯತೆ ನೀಡಿತು.  ಮೈಸೂರಿನಲ್ಲಿ  ಅವರು ಬಾಡಿಗೆಗೆ ನೆಲೆಸಿದ್ದ ಸುಂದರವಾದ 'ವಿಠಲ್ ವಿಹಾರ'ದಲ್ಲಿ ಅವರು 1936ರಲ್ಲಿ ತಮ್ಮ ಸ್ವಂತ ನಿಧಿಯಿಂದ ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರವನ್ನು ಸ್ಥಾಪಿಸಿದರು. ಅವರಿಗೆ ಆ ಕುರಿತಾಗಿ ಒಂದು ಹವ್ಯಾಸದ ಮನೋಭಾವ ಇತ್ತೇ ವಿನಃ ಅದೊಂದು ದೊಡ್ದ ವ್ಯವಸ್ಥೆಗೆ ನಾಂದಿ ಹಾಡಬಹುದು ಎಂಬ ಪರಿಕಲ್ಪನೆಯೂ ಇದ್ದಿರಲಿಕ್ಕಿಲ್ಲ.  

ಡಾ.ಎಂ.ವಿ.ಜಿ ಅವರು ತಮ್ಮ ಸ್ನೇಹಿತ, ರೇಡಿಯೋ ತಂತ್ರಜ್ಞ ಜಗದೀಶ್ ಅವರೊಂದಿಗೆ ಕೆಲವು ಕಾಲ ರೇಡಿಯೋ ಮಾಧ್ಯಮದಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದರು.  ನಂತರ ಖಾಸಗಿ ನಿಲ್ದಾಣವನ್ನು ಸ್ಥಾಪಿಸುವ ಆಲೋಚನೆಯೊಂದಿಗೆ ಟ್ರಾನ್ಸ್‌ಮಿಟರ್ ಅನ್ನು ತರಿಸಿಕೊಂಡರು. 

ಗೋಪಾಲಸ್ವಾಮಿ ಅವರು ರೇಡಿಯೋ ವ್ಯವಸ್ಥೆ ಸ್ಥಾಪಿಸುವಾಗ, ಕಂಬವು 60 ಅಡಿ ಉದ್ದವಾಗಿದ್ದು, ಅದರ ತುದಿಯಲ್ಲಿ ಆಂಟೆನಾವನ್ನು ಕಟ್ಟಬೇಕಾಗಿತ್ತು.  ಮಲ್ಲ ಎಂಬ ಕೆಲಸದ ಆಳು ಈ ಸಾಹಸವನ್ನು ಮಾಡಿದರು. ಸುಮಾರು 10 ವರ್ಷ ವಯಸ್ಸಿನ ತಮ್ಮ ಮೊದಲ ಮಗನನ್ನು ಮೈಕ್‌ನಲ್ಲಿ 'ಬಾ ಬಾ ಬ್ಲ್ಯಾಕ್ ಶೀಪ್' ಎಂದು ಹಾಡಲು ಮನವೊಲಿಸಿದರು. ಹುಡುಗ ಭಯಭೀತನಾಗಿ ತನ್ನ ಸಾಲುಗಳನ್ನು ಮರೆತು ಕಣ್ಣೀರಿಟ್ಟರೆ, ಗೋಪಾಲಸ್ವಾಮಿ 'ಯುರೇಕಾ, ಸಕ್ಸಸ್' ಎಂದು ಸಂಭ್ರಮಿಸಿದರು.  ಮೊದಲ ರೇಡಿಯೋ ಪ್ರಸಾರ ಯಶಸ್ವಿಯಾಗಿ ಭಿತ್ತರಗೊಂಡಿತ್ತು.

1935ರ ಸೆಪ್ಟೆಂಬರ್ 10ರಂದು ಭಾರತದ ಪ್ರಥಮ ಖಾಸಗಿ ರೇಡಿಯೋ ಕೇಂದ್ರ ಮೈಸೂರಿನ ಎಂ. ವಿ. ಗೋಪಾಲಸ್ವಾಮಿ ಅವರ ಮನೆಯಲ್ಲಿ ಹಲವು ಆತ್ಮೀಯರ ಒಡನಾಟದಲ್ಲಿ ಆರಂಭಗೊಂಡಿತು.
ಮೈಸೂರು ವಾಸುದೇವಾಚಾರ್ಯರು,  ಎಚ್. ವಿ. ರಾಮರಾವ್ ಅವರ ವಯೊಲಿನ್ ವಾದನ ಮತ್ತು ವೆಂಕಟೇಶ್ ದೇವರ್ ಅವರ ಮೃದಂಗ ವಾದನದೊಂದಿಗೆ ಮೊದಲ ರೇಡಿಯೊ ಸಂಗೀತ ಕಚೇರಿ ನೀಡಿದರು. 

ಅಂದಿನ ದಿನದಲ್ಲಿ ರಿಸೀವರ್ ಸೆಟ್‌ಗಳ ಬೆಲೆ ಸುಮಾರು 300 ರೂಪಾಯಿ.  ಅಷ್ಟು ದೊಡ್ಡ ಮೊತ್ತದ ಹಣ ಕೊಟ್ಟು ಜನಸಾಮಾನ್ಯರಿಗೆ ಅದನ್ನು ಕೊಳ್ಳುವುದು ಸಾಧ್ಯವೇ ಇರಲಿಲ್ಲ.  ಹೀಗಾಗಿ ಗೋಪಾಲಸ್ವಾಮಿ ಅವರು ಮೈಸೂರು ನಗರದ ಪಾರ್ಕ್‌ಗಳಲ್ಲಿ ರಿಸೀವರ್ ಸೆಟ್‌ಗಳನ್ನು ಅಳವಡಿಸಲು ವ್ಯವಸ್ಥೆ ಮಾಡಿದರು. ಆ ಮೂಲಕ ಮೈಸೂರಿನ ನಾಗರಿಕರು ಕಾರ್ಯಕ್ರಮಗಳನ್ನು ಆಲಿಸಲು ಅನುಕೂಲವಾಗುವಂತೆ ಧ್ವನಿವರ್ಧಕಗಳಿಗೆ ಸಂಪರ್ಕ ಕಲ್ಪಿಸಲಾಯಿತು. 

ಸಂಗೀತ ಮತ್ತು ಭಾಷಣಗಳನ್ನು ಕೇಳಲು ಜನರು ಈ ‘ರೇಡಿಯೋ ಪಾರ್ಕ್’ಗಳಿಗೆ ಹೋಗಿ ಬರುತ್ತಿದ್ದರು. ಎಂ. ವಿ. ಗೋಪಾಲಸ್ವಾಮಿ ಅವರು ಹಲವಾರು ವರ್ಷಗಳ ಕಾಲ ಯಾವುದೇ ಅನುದಾನ ಅಥವಾ ಸಹಾಯವಿಲ್ಲದೆ ಈ ವ್ಯವಸ್ಥೆ ನಡೆಸಿದರು. ಅವರು ಮಹಾರಾಜಾ ಕಾಲೇಜಿನಲ್ಲಿ ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಕಾರಣ, ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಕಲಾವಿದರು, ನಾಗರಿಕರು ಮತ್ತು ಜನರ ಅಪಾರ ಅಭಿಮಾನವನ್ನು ಗಳಿಸಿದ್ದರು. ಹೀಗಾಗಿ  ತಮ್ಮ ಮನೆಯಲ್ಲಿದ್ದ ರೇಡಿಯೋ  ಮೂಲಕ ವಿವಿಧ ವಿಷಯಗಳ ಕುರಿತು ಕೇಳುಗರನ್ನು ಉದ್ದೇಶಿಸಿ ಮಾತನಾಡಲು ವ್ಯವಸ್ಥೆ ಮಾಡಿದರು. ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಕಾರ್ಯಕ್ರಮ ನಡೆಸುತ್ತಿದ್ದವರಿಗೆ ಸಲ್ಲುತ್ತಿದ್ದ ಸಂಭಾವನೆ ಎಂದರೆ ಅವರ ಹೆಂಡತಿ ಮಾಡುತ್ತಿದ್ದ ಉಪ್ಪಿಟ್ಟು ಮತ್ತು ಕಾಫಿ. ಮಹಿಳಾ ಕಲಾವಿದರು ಬಂದರೆ ಅವರಿಗೆ ಎಲೆ ಅಡಿಕೆ ತೆಂಗಿನಕಾಯಿ ತಾಂಬೂಲ ನೀಡುತ್ತಿದ್ದರು. ಕಲಾವಿದರನ್ನು ಟಾಂಗದಲ್ಲಿ ಕರೆದು ತಂದು ಮುಗಿದ ನಂತರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರು.  ಬಾಡಿಗೆ ಮನೆಯಲ್ಲಿದ್ದು ತಮ್ಮದೇ ಕುಟುಂಬ ಹೊಂದಿದ್ದ ಎಂ. ವಿ. ಗೋಪಾಲಸ್ವಾಮಿ ಅವರು ಇದನ್ನೆಲ್ಲ ತಮ್ಮ ಕೈಯಿಂದ ಹಣ ಖರ್ಚು ಮಾಡಿ ಯಾವುದೇ ಗಳಿಕೆಯ ಅಸೆಯಿಲ್ಲದೆ ಮಾಡುತ್ತಿದ್ದರು ಎಂದರೆ ಅಚ್ಚರಿಯಾಗುತ್ತದೆ.  ಕನ್ನಡದ ಕಾರ್ಯಕ್ರಮಗಳ ಮೇಲೆ ಅವರು ಇಟ್ಟಿದ್ದ ಗಮನ ವಿಶೇಷವಾಗಿ ಮೆಚ್ಚುವಂತದ್ದು.

1939ರಲ್ಲಿ, ಎರಡನೆಯ ಮಹಾಯುದ್ಧ ಪ್ರಾರಂಭವಾದ ನಂತರ ರೇಡಿಯೊ ಮೂಲಕ ಸುದ್ದಿಗೆ ಬೇಡಿಕೆ ಇತ್ತು. ಆಗ ಮೈಸೂರು ನಗರ ಪುರಸಭೆಯು ರೇಡಿಯೋ ಕೇಂದ್ರವನ್ನು ಸಾಧಾರಣ ವಾರ್ಷಿಕ ಸಂಭಾವನೆಯೊಂದಿಗೆ ಬೆಂಬಲಿಸುವ ಅಗತ್ಯವನ್ನು ಗುರುತಿಸಿತು.
ಡಾ.ಎಚ್.ಕೆ. ರಂಗನಾಥ್ ಅವರನ್ನು ವಾರ್ತಾ ವಾಚಕರಾಗಿ ತಿಂಗಳಿಗೆ 20 ರೂಪಾಯಿ ಸಂಬಳದ ಮೇಲೆ ನೇಮಿಸಲಾಯಿತು.
ನಾ. ಕಸ್ತೂರಿಯವರು ಬಿಬಿಸಿ ಕೇಳಿ ಮತ್ತು ವಿವಿಧ ದಿನದ ಪತ್ರಿಕೆಗಳನ್ನು  ಓದಿ ಸುದ್ದಿಗಳನ್ನು ಸಂಗ್ರಹಿಸುತ್ತಿದ್ದರು.  ಡಾ. ರಂಗನಾಥ್ ಅವರು ದಿನಕ್ಕೆ ಮೂರು ಬಾರಿ ಸುದ್ಧಿಗಳನ್ನು ಓದುತ್ತಿದ್ದರು. 

ಎಂ. ವಿ. ಗೋಪಾಲಸ್ವಾಮಿ ಅವರು ಆರು ವರ್ಷಗಳ ಕಾಲ ರೇಡಿಯೋ ಕೇಂದ್ರ ನಡೆಸಿ ಮುಂದೆ ಅದನ್ನು ಮಹಾರಾಜರ ಆಡಳಿತದ ಅಧೀನದಲ್ಲಿದ್ದ  ನಗರಾಡಳಿತಕ್ಕೆ 1942ರಲ್ಲಿ ಹಸ್ತಾಂತರಿಸಿದರು. 1943ರ ವರೆಗೆ ಗೋಪಾಲಸ್ವಾಮಿ ಅವರೇ ನಿರ್ದೇಶಕರಾಗಿದ್ದು ಮುಂದೆ ನಾ. ಕಸ್ತೂರಿ ಅವರನ್ನು ನಿರ್ದೇಶಕರಾಗಿ ನೇಮಿಸಿದರು. ಮುಂದೆ ಅದೇ 'ಆಕಾಶವಾಣಿ ಮೈಸೂರು ಕೇಂದ್ರವಾಗಿ' ಬೆಳೆದು ಮುಂದೆ ಬೆಂಗಳೂರಿಗೆ ಕಾಲಿಟ್ಟಿತು.

ಡಾ. ಗೋಪಾಲಸ್ವಾಮಿ ಅವರು ರೇಡಿಯೊ ಬಗ್ಗೆ ಮಾತ್ರ ಅಲ್ಲ. ಬಹುವಿಧದ ಆಸಕ್ತಿಗಳನ್ನು ಹೊಂದಿದ್ದರು. ಮನೋವಿಜ್ಞಾನವು ಅವರ ವೃತ್ತಿಯಾಗಿತ್ತು, ರೇಡಿಯೋ, ಬಾಲ ಶಿಕ್ಷಣ, ವಯಸ್ಕರ ಶಿಕ್ಷಣ, ಮಕ್ಕಳ ಶಿಕ್ಷಣ, ಕ್ರೀಡೆ  ವಿಶೇಷವಾಗಿ ಟೆನ್ನಿಸ್ ಹೀಗೆ ವಿವಿಧ ಆಸಕ್ತಿಗಳು ಅವರಲ್ಲಿ ಒಂದುಗೂಡಿದ್ದವು. ಅವರ ಪ್ರತಿಯೊಂದು ಆಸಕ್ತಿಗಳೂ ಆಳವಾಗಿದ್ದವು ಮತ್ತು ಶ್ರದ್ಧಾಪೂರ್ವಕವಾಗಿದ್ದವು.  
ಪ್ರತಿ ಕ್ಷೇತ್ರದಲ್ಲೂ  ಉತ್ತಮ ಕೆಲಸ ಮಾಡಿದ ಅವರ ಪರಿಶ್ರಮ ಎಷ್ಟು ಶಕ್ತಿಯುತವಾಗಿತ್ತೆಂದರೆ ಅವರು ಸ್ಥಾಪಿಸಿರುವ ಸಂಸ್ಥೆಗಳು ಇಂದೂ ಜೀವಂತವಾಗಿವೆ. ಶಿಶುವಿಹಾರ, ಶಾಲೆ, ಹಾಸ್ಟೆಲ್ ಇತ್ಯಾದಿ ಎಲ್ಲದರ ಕುರಿತೂ ಅವರು ಗಮನ ಹರಿಸಿದ್ದರು.  ಅವರು ಸ್ಥಾಪಿಸಿದ ಗೋಪಾಲಸ್ವಾಮಿ ಶಿಶುವಿಹಾರ ಇಂದೂ ಪ್ರಸಿದ್ಧ. 

ಎಂ. ವಿ. ಗೋಪಾಲಸ್ವಾಮಿ ಅವರು ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು. ತಮ್ಮ ವಿದ್ಯಾರ್ಥಿಗಳಿಂದ ಅಪಾರ ಪ್ರೀತಿ ಗಳಿಸಿದ್ದರು. ಜವಾನ ಬೆಲ್ ಹೊಡೆಯುವುದ ಮರೆತರೆ ಸ್ವಯಂ ತಾವೇ ಆ ಕೆಲಸ ಮಾಡುತ್ತಿದ್ದ ಸರಳ ವ್ಯಕ್ತಿಯಾಗಿದ್ದರು.

ಪ್ರೊ.ಎಂ.ವಿ.ಗೋಪಾಲ ಸ್ವಾಮಿಯವರು ನಿಮ್ಹಾನ್ಸ್ (ಮಾನಸಿಕ ಆರೋಗ್ಯ ಸಂಸ್ಥೆ) ಯಲ್ಲಿಯೂ ಕೆಲವು ವರ್ಷ ಸೇವೆ ಸಲ್ಲಿಸಿದರು.  

1954ರಲ್ಲಿ ವೃತ್ತಿಯಿಂದ ಪ್ರೊ. ಎಂ. ವಿ. ಗೋಪಾಲಸ್ವಾಮಿ ಅವರು 1957ರಲ್ಲಿ ಈ ಲೋಕವನ್ನಗಲಿದರು. 

Prof. M. V. Gopalaswamy  who established first private radio station in India at Mysore 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ