ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ಡಿ. ಬಗರಿ


 ಎನ್. ಡಿ. ಬಗರಿ


ಎನ್. ಡಿ. ಬಗರಿ ಅವರು ಮಹಾನ್ ವಿದ್ವಾಂಸರಾಗಿ,  ಸಮರ್ಥ ಆಡಳಿತಗಾರರಾಗಿ ಮತ್ತು ಕರ್ನಾಟಕ ಗ್ರಂಥಾಲಯ ಆಂದೋಲನದ ಪ್ರಮುಖರಾಗಿ ಪ್ರಸಿದ್ಧರಾಗಿದ್ದವರು. 

ಎನ್.ಡಿ. ಬಗರಿಯವರು 1926ರ ಡಿಸೆಂಬರ್ 22ರಂದು ರೊಟ್ಟಿಗವಾಡ ಗ್ರಾಮದಲ್ಲಿ ಜನಿಸಿದರು. ತಂದೆ ದ್ಯಾಮಪ್ಪ.  ತಾಯಿ ಎಲ್ಲಮ್ಮ. ಪ್ರಾರಂಭಿಕ ಶಿಕ್ಷಣ ಬ್ಯಾಹಟ್ಟಿ, ರೊಟ್ಟಿಗವಾಡ ಮತ್ತು ಕುಂದಗೋಳದಲ್ಲಿ ನಡೆಯಿತು. ಧಾರವಾಡದಲ್ಲಿ ಸೆಕೆಂಡರಿ ಶಿಕ್ಷಣ ನಡೆಯಿತು.

ಬಗರಿಯವರು ಮೆಟ್ರಿಕ್ ಮುಗಿಸಿದ ನಂತರ ಪೂನ ಮಿಲಿಟರಿ ಸರಬರಾಜು ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಆ ಉದ್ಯೋಗ ತೊರೆದು ಊರಿಗೆ ಬಂದು, ಧಾರವಾಡದ ಜಿಲ್ಲಾ ಸ್ಕೂಲ್ ಬೋರ್ಡಿನಲ್ಲಿ ಕೆಲಕಾಲ ಉದ್ಯೋಗ ಮಾಡಿದರು. 1949ರಲ್ಲಿ ಬೆಳಗಾವಿಯಲ್ಲಿ ವಿದ್ಯಾ ಇಲಾಖೆಯಲ್ಲಿ ಕೆಲಸ ದೊರೆಯಿತು. ಬೆಳಗಾವಿಯ ಬಿ.ಟಿ. ಕಾಲೇಜಿನಲ್ಲಿ ಲೈಬ್ರರಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಾ, ಬೆಳಗಾವಿ ಲಿಂಗರಾಜ ಕಾಲೇಜಿನಿಂದ ಪದವಿ ಪಡೆದರು. ಈಜು, ಬ್ಯಾಡ್ಮಿಂಟನ್, ಓಡುವುದು, ನಾಟಕಾಭಿನಯ ಮುಂತಾದ
ಅನೇಕ ಹವ್ಯಾಸಗಳನ್ನು ಬೆಳೆಸಿಕೊಂಡರು. 

ಬಗರಿ ಅವರು ಕರ್ನಾಟಕ ಸರಕಾರದಿಂದ 1957-58ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ಗ್ರಂಥಾಲಯ ಶಿಕ್ಷಣ ತರಬೇತಿಗಾಗಿ ಆಯ್ಕೆಗೊಂಡರು. 1958ರಲ್ಲಿ ಬೆಂಗಳೂರಿನ ಸ್ಟೇಟ್ ಎಜುಕೇಷನ್ ರಿಸರ್ಚ್ ಬ್ಯೂರೋದಲ್ಲಿ ಗ್ರಂಥಪಾಲಕರಾಗಿ ನೇಮಕಗೊಂಡರು. ನಂತರ ದೆಹಲಿ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಶಿಕ್ಷಣದಲ್ಲಿ ಸ್ನಾತಕೋತ್ತರ ಡಿಪ್ಲೊಮ ಮಾಡಿದರು.  1961ರಲ್ಲಿ ರಾಜ್ಯದ ಮೊಟ್ಟಮೊದಲ ಸ್ಟೇಟ್ ಎಜುಕೇಷನ್ ಲೈಬ್ರರಿಯನ್ ಆಗಿ ನೇಮಕಗೊಂಡರು. 1965ರಲ್ಲಿ ಕ್ಯೂರೇಟರ್ ಆಫ್ ಲೈಬ್ರರೀಸ್, ಗ್ರಂಥಾಲಯ ತರಬೇತಿ ಕೇಂದ್ರದ ರಿಜಿಸ್ಟ್ರಾರ್, ಮತ್ತು ಕಬ್ಬನ್‌ಪಾರ್ಕಿನ ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯದ ಅಧಿಕಾರಿ ಹುದ್ದೆಗಳನ್ನು  ನಿರ್ವಹಿಸಿದರು.  ಮೈಸೂರು ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್ ಸದಸ್ಯರಾಗಿ, ಫ್ಯಾಕಲ್ಟಿಆರ್ಟ್ಸ್ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ ಸೇವೆ ಸಲ್ಲಿಸಿದರು. 

ಬಗರಿ ಅವರು ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗ್ರಂಥಾಲಯ ವಿಜ್ಞಾನ, ಗ್ರಂಥಾಲಯ ಕೈಪಿಡಿ, ಪ್ರೌಢಶಾಲಾ ಗ್ರಂಥಾಲಯ, ಗ್ರಂಥಾಲಯ ನಡೆದು ಬಂದ ದಾರಿ, ಗ್ರಂಥಾಲಯ ಸಮೀಕ್ಷೆ, ಗ್ರಂಥಾಲಯ ವಿಚಾರ, ಗ್ರಾಮಾಂತರ ಗ್ರಂಥಾಲಯ ಮುಂತಾದ ಅನೇಕ ಕೃತಿಗಳನ್ನು ಪ್ರಕಟಿಸಿದರು. ವಿದೇಶಿ ಪ್ರವಾಸದ ಅನುಭವ  ಪ್ರಕಟಿಸಿದರು. ಕೆಳದಿ ಚೆನ್ನಮ್ಮ, ಹರಿಹರ ಮುಂತಾದವು ಅವರ ನಾಟಕ ರಚನೆಗಳು. ಇವರಿಗೆ ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥಗಳು ಜ್ಞಾನಪ್ರಭಾ, ಕಳಕಳಿ ಮತ್ತು ಗ್ರಂಥ ಸರಸ್ವತಿ.

ಎನ್. ಡಿ. ಬಗರಿ ಅವರು 1999ರ ಫೆಬ್ರವರಿ 11ರಂದು ನಿಧನರಾದರು.

On the birth anniversary of great scholar, librarian and administrator N. D. Bagari

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ