ಡಿ. ಲಿಂಗಯ್ಯ
ಡಿ. ಲಿಂಗಯ್ಯ
ಡಿ. ಲಿಂಗಯ್ಯ ಪ್ರಾಧ್ಯಾಪಕರಾಗಿ, ಜಾನಪದ ತಜ್ಞರಾಗಿ, ಸಾಹಿತಿಗಳಾಗಿ, ಅನೇಕ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಹೆಸರಾಗಿದ್ದವರು.
ಡಿ. ಲಿಂಗಯ್ಯನವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀ ಹಳ್ಳಿಯಲ್ಲಿ 1939ರ ಡಿಸೆಂಬರ್ 16ರಂದು ಜನಿಸಿದರು. ತಂದೆ ದೇವೇಗೌಡ. ತಾಯಿ ಸಿದ್ದಮ್ಮ. ಪ್ರಾರಂಭಿಕ ಶಿಕ್ಷಣ ಕೊತ್ತತ್ತಿ ಮತ್ತು ಮಂಡ್ಯ ಮೈ ಷುಗರ್ ಹೈಸ್ಕೂಲುಗಳಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು.
ಡಿ. ಲಿಂಗಯ್ಯನವರು 1968ರಲ್ಲಿ ಬೆಂಗಳೂರಿನ ವಿಶ್ವೇಶ್ವರಪುರಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಚಾರ್ಯರಾಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ, ಬೆಂಗಳೂರು ವಿಶ್ವವಿದ್ಯಾಲಯ ಅಕೆಡಮಿಕ್ ಕೌನ್ಸಿಲ್, ಸ್ನಾತಕ ಅಧ್ಯಯನ ಮಂಡಲಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಡಿ. ಲಿಂಗಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ ಬಿ.ಎಂ.ಶ್ರೀ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ‍್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ, ಪರಿಷತ್ತಿನ ಗ್ರಂಥ ಪ್ರಕಟನಾ ಸಲಹಾ ಸಮಿತಿ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಹೀಗೆ ಸಂಘ ಸಂಸ್ಥೆಗಳೊಡನೆ ಕ್ರಿಯಾಶೀಲ ಒಡನಾಟ ಹೊಂದಿದ್ದರು.
ಡಿ. ಲಿಂಗಯ್ಯನವರು ಬಾಲ್ಯದಲ್ಲೇ ಜಾನಪದ ಶೈಲಿಯ ಹಾಡುಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡು ಸಾಂಸ್ಕೃತಿಕ ಲೋಕಕ್ಕೆ ಹೊಸ ಮೆರುಗು ತಂದರು. ಅವರ ಹುಟ್ಟೂರು ಪೀ ಹಳ್ಳಿಯಲ್ಲಿ ಕೊಂತಿಪೂಜೆ ಆಚರಣೆ ಅವರನ್ನು ತೀವ್ರವಾಗಿ ತಟ್ಟಿತು. ಅದರ ಬಗ್ಗೆ ವೈಜ್ಞಾನಿಕ ಹಿನ್ನೆಲೆ ಗುರುತಿಸುವಲ್ಲಿ ಸಫಲರಾದ ಡಿ. ಲಿಂಗಯ್ಯ ನಂತರ ಇದರ ಗಹನ ಅಧ್ಯಯನಕ್ಕೂ ಮುಂದಾದರು.
ಕೆಳಗಲಹಟ್ಟಿ ಸಿದ್ಧಮ್ಮನಿಂದ ಜಾನಪದ ಹಾಡುಗಳ ದೀಕ್ಷೆ ಪಡೆದುಕೊಂಡ ಲಿಂಗಯ್ಯ ತಮ್ಮ ಶೈಕ್ಷಣಿಕ ರಂಗದಲ್ಲೂ ವಿಶೇಷ ವಿಷಯವನ್ನಾಗಿಸಿಕೊಂಡರು. ಕೊಂತಿಪೂಜೆ ಅಧ್ಯಯನದ ಅವರ ಕೃತಿ ಹಿರಿಯ ಸಾಹಿತಿಗಳಾದ ತೀನಂಶ್ರೀ, ಪಿ.ಕೆ. ವೆಂಕಟರಾಮಯ್ಯ ಅಂತಹ ಹಿರಿಯರ ಮೆಚ್ಚುಗೆಗೂ ಪಾತ್ರವಾಯಿತು. ಮಣ್ಣಿನ ಮಿಡಿತ, ಪಡಿನೆರಳು ಬಯಲುಸೀಮೆಯ ಜನಪದ ಗೀತೆಗಳು ಹೀಗೆ ಅನೇಕ ಜಾನಪದ ಕೃತಿಗಳ ರಚನೆ ಅವರ ಹೆಗ್ಗಳಿಕೆ.
ಜಾನಪದ ಕೃತಿಗಳೇ ಅಲ್ಲದೆ ಡಿ. ಲಿಂಗಯ್ಯನವರ ಕೃತಿಗಳಲ್ಲಿ ಆಟಿಕೆ, ಕನಸಿನ ರಾಣಿ, ರಣಕಾಟಿಗಳು ಮುಂತಾದ ಕಥಾನಕಗಳು; ಅಂತರಂಗದ ಹಾಡು, ವೀಕ್ಷಕ, ಕಲಬೆರಕೆ, ಭಗ್ನ ಪ್ರತಿಮೆ, ಮಹಾತ್ಮಗಾಂಧೀಜಿ, ವಚನ ರಚನ, ಚುಟುಕಾಂಜಲಿ, ವಚನ ದವನ, ಚೇತನ ಚಿಲುಮೆ, ಗಂಧವತಿ ಮುಂತಾದ ಕಾವ್ಯಗಳು; ದಡ್ಡ ಶಿಖಾಮಣಿ, ಬಡತನದ ಬಾಳು, ಬ್ರಹ್ಮಚಾರಿ, ಬ್ರಹ್ಮ ಬರಹ ಮುಂತಾದ ನಾಟಕಗಳು; ಕಾವ್ಯಾಸ್ವಾದನ, ಕಾವ್ಯಚಿಂತನ, ಕಾವ್ಯಾನುಭವ ಮುಂತಾದ ವಿಮರ್ಶೆಗಳು; ಕನ್ನಡ ರಥಿಕರು, ದೊಡ್ಡವರು ಮುಂತಾದ ವ್ಯಕ್ತಿ ಚಿತ್ರಣಗಳು; ಶಿಲಾಪದ್ಮ, ಶಿಕ್ಷಣದಲ್ಲಿ ಕನ್ನಡ, ಚಿಂತನ ಸಿಂಧು, ಕಣ್ಣಳತೆ ಮುಂತಾದ ಪ್ರಬಂಧಗಳು ಹೀಗೆ ಅಪಾರ ವೈವಿಧ್ಯವಿದೆ.
ಡಿ. ಲಿಂಗಯ್ಯನವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕರ್ನಾಟಕ ರಾಜ್ಯ ಪ್ರಶಸ್ತಿ, ಚುಟುಕ ಭೂಷಣ ಪ್ರಶಸ್ತಿ, ಡಾ. ಸಿಂಪಿಲಿಂಗಣ್ಣ ಪ್ರಶಸ್ತಿ, ಡಾ. ಜೀಶಂಪ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ ಮಂತಾದ ಅನೇಕ ಗೌರವಗಳು ಸಂದವು.
ಡಿ. ಲಿಂಗಯ್ಯನವರು ಬಿ. ಎಂ. ಶ್ರೀ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಸಂದರ್ಭಲ್ಲೇ ಹಾಗೇ ಕುಸಿದು 2012ರ ಸೆಪ್ಟೆಂಬರ್ 12ರಂದು ನಿಧನರಾದ ಕ್ರಿಯಾಶೀಲ ವ್ಯಕ್ತಿ.
On the birth anniversary of Prof. D. Lingaiah
ಕಾಮೆಂಟ್‌ಗಳು