ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಿಪತಿ ದಾಸರು




 ಮಹಿಪತಿ ದಾಸರು


ಇಂದು ಮಹಿಪತಿ ದಾಸರ ಪುಣ್ಯದಿನ. 

ಮಹಿಪತಿ ದಾಸರು ವೈದಿಕ ವೃತ್ತಿಯಲ್ಲಿದ್ದು ರಾಜ್ಯ ವಾಳುವ ಬಾದಶಹನ ಆತ್ಮೀಯ ಅಧಿಕಾರಿಯಾದರು. ಆತ್ಮೋದ್ಧಾರದ ಮಾರ್ಗ ಕಂಡುಕೊಳ್ಳಲು ಸಂತೋಷ ದಿಂದ ಅದಿಕಾರ–ಅಂತಸ್ತುಗಳನ್ನು ತ್ಯಜಿಸಿದರು. ನೂರಾರು ಮಂದಿಗೆ ಸಾರ್ಥಕ ಜೀವನ ನಡೆಸಲು ಮಾರ್ಗದರ್ಶನ ಮಾಡಿದರು.

ಮಹಿಪತಿದಾಸರ ಪೂರ್ವಜರು ಮೂಲತಃ ವಿಜಾಪುರ ಜಿಲ್ಲೆಗೆ ಸೇರಿದ ಬಾಗಲ ಕೋಟೆಯವರು.  ಮಹಿಪತಿರಾಯರು 1612ರಲ್ಲಿ ಜನಿಸಿದರು.  ಇವರ ತಾತ ರಂಗಭಟ್ಟರು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿದವರು. ತಂದೆ ಕೋನೇರಿರಾಯರು. 

ಮಹಿಪತಿದಾಸರು ಸಂಸ್ಕೃತ ಸಾಹಿತ್ಯದಲ್ಲಿ ಮಹಾ ಪಾಂಡಿತ್ಯವನ್ನು ಸಂಪಾದಿಸಿದರು.  ವಿದ್ಯಾಭ್ಯಾಸ ಮುಗಿದ ನಂತರ ವಂಶಪಾರಂಪರ್ಯವಾಗಿ ಬಂದ ವೈದಿಕ ವೃತ್ತಿಯನ್ನೇ ಅವಲಂಬಿಸಿ ರಾಮಾಯಣ-ಮಹಾಭಾರತ ಗ್ರಂಥಗಳನ್ನು ಪ್ರವಚನ ರೂಪದಲ್ಲಿ ಹೇಳಲಾರಂಭಿಸಿದರು. ಸುಶ್ರಾವ್ಯವಾದ ಕಂಠದಿಂದ ಹೊರ ಹೊಮ್ಮುವ ಸಂಸ್ಕೃತ ಶ್ಲೋಕಗಳಿಗೆ ಅವರು ಕನ್ನಡ, ಮರಾಠಿ, ಉರ್ದು ಮೊದಲಾದ ಭಾಷೆಗಳಲ್ಲಿ ಅರ್ಥ ವಿವರಣೆಯನ್ನೀಯುತ್ತಿದ್ದರು. ಸಂಸ್ಕೃತದಂತೆ ಉಳಿದೆಲ್ಲ ಭಾಷೆಗಳ ಮೇಲೂ ಅವರು ಪ್ರಭುತ್ವವನ್ನು ಪಡೆದಿದ್ದರು. ಆದುದರಿಂದ ಮಹಿಪತಿರಾಯರ ಪ್ರವಚನವೆಂದರೆ ಎಲ್ಲಾ ಭಾಷೆಯವರೂ ಎಲ್ಲಾ ಮತೀಯರೂ ಒಂದು ಸೇರಲಾರಂಭಿಸಿದರು.

ಸಾಮ್ರಾಜ್ಯದ ಸಚಿವರಾದ ಖವಾಸ್ ಖಾನರು ಇವರ ಪ್ರವಚನ ಕೇಳಿ ಆನಂದ ಹೊಂದಿ ತಮ್ಮ ಮನೆಯಲ್ಲಿ ಮಹಿಪತಿರಾಯರ ಪ್ರವಚನಗಳನ್ನು ನಡೆಸಿದರು. ಅನ್ಯಮತೀಯರಲ್ಲಿ ಶಾಸ್ತ್ರಗ್ರಂಥಗಳ ಪ್ರವಚನ ಮಾಡುವುದು ಹಾಗೂ ಅವರಿಗೆ ತಿಳಿಯುವಂತೆ ಪಾರ್ಸಿ, ಉರ್ದು ಭಾಷೆಗಳಲ್ಲಿ ಕಥಾ ಭಾಗವನ್ನು ವರ್ಣಿಸಿ ಹೇಳುವುದು ಎಂದರೆ ಅಂದು ಬಹು ಆಶ್ಚರ್ಯದ ಮಾತಾಗಿತ್ತು. ಆದುದರಿಂದ ರಾಯರ ಪ್ರವಚನ ಕೇಳಲು ಮಹಾ ಪಂಡಿತರಾದ ಮೌಲ್ವಿಗಳೂ ಸಂಗೀತ ವಿದ್ವಾಂಸರೂ ಸಾಹಿತ್ಯ ಲಲಿತಕಲೆ ಮೊದಲಾದವುಗಳಲ್ಲಿ ಹೆಸರುವಾಸಿಯಾದ ಕಲಾವಿದರೂ ಶ್ರೇಷ್ಠವರ್ತಕರೂ ಬರಲಾರಂಭಿಸಿದರು. ರಾಮಾಯಣ-ಮಹಾಭಾರತದ ಕಥಾ ಸನ್ನಿವೇಶಗಳನ್ನು ಆರಿಸಿಕೊಂಡು ಅದರಲ್ಲಿ ಅಡಕವಾದ ತತ್ವಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ರಾಯರು ಬಿಡಿಸಿ ಹೇಳಲಾರಂಭಿಸಿದರು. ‘‘ಮಾನವ ಕುಲ ಉದ್ಧಾರವಾಗಬೇಕಾದರೆ ಸತ್ಯ ಅಹಿಂಸೆ ಹಾಗು ತತ್ವನಿಷ್ಠ ಜೀವನ ಇದೇ ಮೂಲ ಆಧಾರ’’ ಎಂಬುದನ್ನು ಅವರು ಒತ್ತಿ ಹೇಳುತ್ತಿದ್ದರು. ಜಾತಿಮತಗಳ ವ್ಯತ್ಯಾಸವಿಲ್ಲದೆ ಎಲ್ಲ ಮನುಷ್ಯರ ಬಾಳಿಗೆ ಬೆಳಕಾಗುವ ತತ್ತ್ವಗಳನ್ನು ಕೇಳುವವರ ಮನಸ್ಸುಗಳಿಗೆ ನಿಲ್ಲಿಸಿದರು.

ದಿನಗಳೆದಂತೆಲ್ಲಾ ರಾಯರು ಖವಾಸ್ ಖಾನರಿಗೆ ಪ್ರೀತಿ ಪಾತ್ರರಾಗತೊಡಗಿದರು. ಅವರ ನಡೆ-ನುಡಿ- ಶೀಲ-ಸದಾಚಾರ ಸಂಪನ್ನತೆ ಮೊದಲಾದವುಗಳಿಗೆ ಮಾರು ಹೋದ ಸಚಿವರು ಮಹಿಪತಿರಾಯರನ್ನು ತಮ್ಮ ಕರಣಿಕನನ್ನಾಗಿ ನಿಯಮಿಸಿಕೊಂಡರು. ಹೀಗಾಗಿ ವೈದಿಕ ವೃತ್ತಿಯಲ್ಲಿ ಜೀವಿಸುತ್ತಿದ್ದ ರಾಯರಿಗೆ ಸರಕಾರಿಯ ಚಾಕರಿ ಅಂಟಿಕೊಂಡಿತು.

ಒಂದು ಸಲ ಬಾದಶಹರ ಲೆಕ್ಕಪತ್ರದಲ್ಲಿ ಬಿಕ್ಕಟ್ಟು ತಲೆದೋರಿತು. ಅವರು ಈ ಮಾತನ್ನು ಸಚಿವರಾದ ಖವಾಸ್‌ಖಾನರಲ್ಲಿಯೂ ಹೇಳಿದರು. ಆಗ ಖಾನ್ ಸಾಹೇಬರು ಮಹಿಪತಿರಾಯರನ್ನು ಬರಮಾಡಿಕೊಂಡು ರಾಜ್ಯದ ಲೆಕ್ಕ ಪತ್ರಗಳನ್ನು ಸರಿಪಡಿಸಿಕೊಡುವಂತೆ, ಹೇಳಿದರು. ಮಹಿಪತಿ ರಾಯರಿಗೆ ಗಾಬರಿ. ಇಂಥ ಪ್ರಮಾಣದ ಇಷ್ಟು ಹೊಣೆಗಾರಿಕೆಯ ಕೆಲಸವನ್ನು ಅವರೊಬ್ಬರೇ ಮಾಡಬೇಕಾಗಿತ್ತು. ಮನದಲ್ಲಿಯೇ ತಮ್ಮ ಕುಲದೇವರನ್ನು ಸ್ಮರಿಸಿ ಲೆಕ್ಕ ಪತ್ರದ ಒಂದೊಂದೇ ಕಡತವನ್ನು ಪರಿಶೀಲನೆ ಮಾಡುತ್ತ ಹೋದರು. ಕೊನೆಗೆ ತಪ್ಪು ಎಲ್ಲಿದೆ ಎಂಬುದು ಸ್ಪಷ್ಟವಾಗಿ ತಿಳಿಯಿತು. ಅದನ್ನು ಬಾದಶಹರಿಗೆ ತೋರಿಸಿದರು. ಅಹಮ್ಮದ್ ಆದಿಲ್‌ಶಹನಿಗೆ ಪರಮಾನಂದವಾಯಿತು. ಆತನು ಮಹಿಪತಿರಾಯರನ್ನು ಯೋಗ್ಯರೀತಿಯಿಂದ ಸನ್ಮಾನ ಮಾಡಿದ. ಅವರನ್ನು ತನ್ನಲ್ಲೆ ಕೆಲಸಕ್ಕೆ ಉಳಿಸಿಕೊಳ್ಳಬೇಕೆಂದು ಬಾದಶಹನಿಗೆ ಎನ್ನಿಸಿತು. ಖವಾಸ್‌ಖಾನರಿಗೆ ಹೇಳಿ ಅವರನ್ನು ಒಪ್ಪಿಸಿದ. ಮಹಿಪತಿರಾಯರನ್ನು ತನ್ನ ಆಪ್ತ ಸಚಿವರೆಂದು ನೇಮಿಸಿಕೊಂಡನು.

ಮಹಿಪತಿರಾಯರ ಕೀರ್ತಿ ಎಲ್ಲೆಡೆಯೂ ಹಬ್ಬಿತು. ಅವರ ಪ್ರತಿಭೆಗೆ ಮಾರುಹೋದ ಕಲ್ಬುರ್ಗಿಯ ದೇಶಮುಖರು ತಮ್ಮ ಮಗಳಾದ ತಿರುಮಲಾದೇವಿಯನ್ನು ಧಾರೆಯೆರೆದು ಕೊಡಲು ಮುಂದೆ ಬಂದರು. ದಿವಾನ ಪದವಿ ಬಂದುದರಿಂದ ಆ ಪದವಿಗೆ ತಕ್ಕಂತಹ ಭವ್ಯವಾದ ಮನೆ ಆಳು ಸಂಚಾರಕ್ಕೆ ಯೋಗ್ಯವಾದ ವಾಹನ ಮೊದಲಾದ ಐಹಿಕ ಸಂಪತ್ತು ತಾನೇತಾನಾಗಿ ಬಂದಿತು. ಈ ಸಂಪತ್ತಿನೊಂದಿಗೆ ಸತ್ಕುಲ ಪ್ರಸೂತಳಾದ ತಿರುಮಲಾದೇವಿಯೂ ಅವರ ಮನದುಂಬಿ ಬಂದಳು. ಈ ಸಾಧ್ವಿ ಪತಿಗೆ ತಕ್ಕ ಸತಿಯಾಗಿದ್ದಳು. ಬಾದಶಹನ ಹಿರಿಯ ಅಧಿಕಾರಿಯಾಗಿ ತಮ್ಮ ಕೆಲಸದಲ್ಲಿ ಹೊಣೆಗಾರಿಕೆಯಿಂದ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿದ್ದರು. ಆದರೆ ಅಹಂಕಾರದ ನೆರಳು ಹತ್ತಿರ ಸುಳಿಯದಂತೆ ಎಚ್ಚರಿಕೆಯಿಂದಿದ್ದರು. ಗುಡಿಸಲಿನಲ್ಲಿದ್ದಾಗ ಹೇಗೆ ಸಾಮಾನ್ಯ ಜೀವನ ನಡೆಸುತ್ತಿದ್ದರೊ ಹಾಗೆ ದಿವಾನ ಪದವಿಗೆ ಬಂದರೂ ಅದೇ ರೀತಿ ಜೀವನ ನಡೆಸುತ್ತಿದ್ದರು. ತಮ್ಮ ಆದಾಯದ ಬಹು ಭಾಗವನ್ನು ದೀನದಲಿತರಿಗೆ ಹಂಚಿಬಿಡುತ್ತಿದ್ದರು.

ಮಹಿಪತಿ ದಾಸರು ರಾಜಕಾರಣದಲ್ಲಿದ್ದರೂ ಸಹ ನೀರಿನಲ್ಲಿರುವ ಕಮಲಪತ್ರದಂತೆ ನಿರ್ಲಿಪ್ತರಾಗಿ ಅವರು ಜೀವಿಸುತ್ತಿದ್ದರು. ಅವರಿಗೆ ಮಕ್ಕಳಾಗಿರಲಿಲ್ಲ. ರಾಯರ ಪತ್ನಿ ತಿರುಮಲಾದೇವಿಗೆ ಯಾವಾಗಲೂ ಇದೇ ಯೋಚನೆಯಾಯಿತು. ವಿಜಾಪುರದಿಂದ ಒಂಬತ್ತು ಮೈಲಿನ ಮೇಲಿರುವ ಸಾರವಾಡ ಗ್ರಾಮದಲ್ಲಿ ಭಾಸ್ಕರ ಸ್ವಾಮಿಗಳೆಂಬ ಮಹಾಮಹಿಮರಿದ್ದರು. ಈ  ಮಹಾನುಭಾವರ ಅನುಗ್ರಹವನ್ನು ಪಡೆಯಲು ತಿರುಮಲಾದೇವಿ ಸಾರವಾಡಕ್ಕೆ ಬರುತ್ತಿದ್ದಳು. ಇದೇ ಭಾಸ್ಕರ ಸ್ವಾಮಿಗಳು ಮಹಿಪತಿ ದಾಸರಿಗೆ ಪರಿಚಯವಾದದ್ದು ಹೀಗೆ. 

ವಿಜಾಪುರದಲ್ಲಿದ್ದ ಶಾನುಂಗ ಹಾಗೂ ಆತನ ಸೋದರಿ ಇಬ್ಬರೂ ಸೂಫಿ ಪಂಥಕ್ಕೆ ಸೇರಿದ ಮಹಾನುಭಾವರಾಗಿದ್ದರು. ಯಾವಾಗಲೂ ಜೊತೆಯಾಗಿಯೇ ಸಂಚರಿಸುತ್ತಿದ್ದರು. ವಿರಕ್ತ ಶಿಖಾಮಣಿಗಳಾದ ಇವರ ನಡೆನುಡಿಗಳು ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಕೆಲವರು ಇವರನ್ನು ಹುಚ್ಚರೆಂದು ಭಾವಿಸಿದ್ದರೆ ಮತ್ತೆ ಕೆಲವರು ಮಹಾಯೋಗಿಗಳೆಂದು ಮನ್ನಿಸುತ್ತಿದ್ದರು.

ಒಂದು ಸಲ ಬಾದಶಹರ ಕಿರೀಟಿದಲ್ಲಿದ್ದ ಆಭರಣವು ಅಕಸ್ಮಾತ್ತಾಗಿ ನಡು ಬೀದಿಯಲ್ಲಿ ಬಿದ್ದು ಬಿಟ್ಟಿತು. ಅದೇ ಮಾರ್ಗದಲ್ಲಿ ಬರುತ್ತಿದ್ದ ಶಾನುಂಗರ ಕಾಲಿಗೆ ಬೆಲೆ ಬಾಳುವ ಆ ಆಭರಣ ತಾಗಿತು. ಆಗ ಆ ಮಹಾಮಹಿಮರು ಒಡವೆ ತಾಗಿದುದರಿಂದ ತಮ್ಮ ದೇಹದ ಒಂದು ಅಂಗವೇ ಅಪವಿತ್ರವಾಯಿತೆಂದು ತಿಳಿದು ಹೆಬ್ಬೆರಳನ್ನು ಕತ್ತರಿಸಿ ಕೊಂಡರಂತೆ. ಈ ಮಾತು ಬಾದಶಹರ ಕಿವಿಯವರೆಗೂ ಹೋಯಿತು. ಅವರು ಆ ಯೋಗಿಗಳನ್ನು ಹುಡುಕಿಕೊಂಡು  ಬಂದು ‘‘ತನ್ನಿಂದ ಅಪಚಾರವಾಯಿತು’’ ಎಂದು ಬೇಡಿಕೊಳ್ಳಲಾರಂಭಿಸಿದರು. ಆಗ ಆ ಸತ್ಪುರುಷರು ‘‘ಬಾದಶಹನೇ, ಇದರಲ್ಲಿ ನಿನ್ನೆ ತಪ್ಪೇನೂ ಇಲ್ಲ, ನಡೆದು ಹೋದುದಕ್ಕೆ ಕ್ಷಮೆ ಕೇಳುವ ಅಗತ್ಯವೂ ಇಲ್ಲ. ನೀನು ಸರ್ವಶಕ್ತನಾದ ದೇವರನ್ನು ಮೊರೆಹೋಗು. ಅದರಿಂದ ನಿನಗೆ ಕಲ್ಯಾಣವಾಗುವುದು’’ ಎಂದು ಹರಸಿದರು.

ವಿಜಾಪುರದ ನಾಗರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲು ಆದಿಲ್‌ಶಹನು ‘‘ಬೇಗಮ್ ತಲಾಬ್’ ಎಂಬ ಹೆಸರಿನ ಒಂದು ಕೆರೆಯನ್ನು ಕಟ್ಟಿಸಲಾರಂಭಿಸಿದನು. ಅದರ ಮೇಲ್ವಿಚಾರಣೆಯ ಭಾರವನ್ನು ಮಹಿಪತಿರಾಯರಿಗೆ ಒಪ್ಪಿಸಿದನು. ಸಾವಿರಾರು ಜನರು ಈ ಕೆರೆಯ ನಿರ್ಮಾಣ ಕಾರ್ಯದಲ್ಲಿ ದುಡಿಯಲಾರಂಭಿಸಿದರು. ಪ್ರತಿದಿನವೂ ಕೆಲಸದ ಮೇಲ್ವಿಚಾರಣೆಗಾಗಿ ರಾಯರು ಆ ಸ್ಥಳಕ್ಕೆ ಹೋಗಿ ಬರುತ್ತಿದ್ದರು.

ಒಂದು ಸಾಯಂಕಾಲ ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿಕೊಂಡು ರಾಯರು ಅರಮನೆಯತ್ತ ಹಿಂದಿರುಗುತ್ತಿದ್ದರು. ಕೋಟೆಯ ಒಳಗಿನ ಪ್ರಾಂಗಣಕ್ಕೆ ಬಂದಾಗ ಕಂದಕದ ಸಮೀಪದಲ್ಲಿಯೇ ಕುಳಿತಿದ್ದ ಶಾನುಂಗರು ಅರೇ ಬೇಟಾ (ಎಲೋ ಮಗು) ಎಂದು ಅವರನ್ನು ಕೂಗಿದರು. ರಾಯರು ಬಹು ಭಕ್ತಿಯಿಂದ ಶಾನುಂಗರಿಗೆ ನಮಸ್ಕರಿಸಿದರು. ಒಂದು ಸಲ ಆ ಯೋಗಿಯು ರಾಯರ ಮೇಲೆ ತನ್ನ ಕೃಪಾದೃಷ್ಟಿಯನ್ನು ಹರಿಸಿದರು. ರಾಯರ ಬೆರಳಿನಲ್ಲಿ ಒಂದು ಉಂಗುರವಿತ್ತು. ಅದು ಸರ್ಕಾರದ ಮೊಹರಿನ ಉಂಗುರ. ಶಾನುಂಗರು ಅದನ್ನು ತನಗೆ ಕೊಡುವಂತೆ ಕೇಳಿದರು. ಯೋಗಿಯ ಪ್ರಭಾವಕ್ಕೊಳಗಾದ ರಾಯರು ಹಿಂದುಮುಂದಿನ ದನ್ನು ಯೋಚಿಸದೆ ಆ ಕ್ಷಣವೇ ಉಂಗುರವನ್ನು ಶಾನುಂಗರಿಗೆ ಒಪ್ಪಿಸಿದರು. ಆತ ಆ ಉಂಗುರವನ್ನು ತಿರುವು ಮುರುವು ಮಾಡಿನೋಡಿ ‘‘ಮಗು ಇದು ವಿಷಯ ಸೂತ್ರವಾಗಿದೆ. ನಿನ್ನಂಥವರು ಇದನ್ನು ಧರಿಸಬಾರದು’’ ಎಂದು ಹೇಳಿ ಪಕ್ಕದಲ್ಲಿದ್ದ ಆಳವಾದ ಕಂದಕದಲ್ಲಿ ಬಿಸಾಡಿದರು.
ಈಗ ರಾಯರಿಗೆ ತುಂಬಾ ಗಾಬರಿಯಾಯಿತು. ರಾಜದರ್ಬಾರಿನ ಮೊಹರಿನ ಉಂಗುರವನ್ನು ಹೀಗೆ ಬಿಸಾಡುವುದೆ? ಇದು ತಮ್ಮ ಹೊಣೆಗಾರಿಕೆಯ ಆಲಕ್ಷ್ಯವನ್ನು ಎತ್ತಿ ತೋರಿಸಿದಂತಾಯಿತಲ್ಲವೇ? ಎಂದು ಮನಸ್ಸು ವಿಚಲಿತಗೊಂಡಿತು. ಆಳವಾದ ನೀರಿನಲ್ಲಿ ಎಸೆದ ಉಂಗುರವನ್ನು ಮರಳಿ ಪಡೆಯುವ ಬಗೆ ಹೇಗೆ? ಕಂದಕದ ತುಂಬಾ ಮೊಸಳೆಗಳು ವಾಸಿಸುತ್ತಿದ್ದವು. ಇನ್ನು ಇಂಥ ಕೆಲಸ ಮಾಡಿದ ಶಾನುಂಗರನ್ನು ಶಿಕ್ಷಿಸಬೇಕೆಂದರೆ ಅವರೊಬ್ಬ ಮಹಾನುಭಾವರೆಂದು ಖ್ಯಾತರಾಗಿದ್ದಾರೆ. ಹೋಗಲಿ, ಉಂಗುರದ ಹಂಬಲವನ್ನೇ ಬಿಟ್ಟುಬಿಡಬೇಕೆಂದರೆ ಅದು ಅವರ ವೈಯಕ್ತಿಕ ಸೊತ್ತಲ್ಲ. ರಾಜ್ಯಾಧಿಕಾರದ ಗುರುತಾಗಿದ್ದ ಉಂಗುರವಿಲ್ಲದೆ ಬಾದಶರನ್ನು ಕಾಣುವುದಾದರೂ ಹೇಗೆ? ಹೀಗೆ ಅನೇಕ ಸಮಸ್ಯೆಗಳು ಅವರನ್ನು ಕಾಡಲಾರಂಭಿಸಿದವು. ಕೊನೆಗೆ ವಿಪತ್ತಿನಿಂದ ಪಾರಾಗಬೇಕಾದಲ್ಲಿ ಈ ಮಹಾನುಭಾವರನ್ನೇ ಶರಣು ಹೋಗುವುದು ವಿಹಿತವೆಂದು ಭಾವಿಸಿ ಶಾನುಂಗರಲ್ಲಿಯೇ ಪ್ರಾರ್ಥನೆ ಮಾಡಿಕೊಂಡರು.

ಆ ಸಮಯಕ್ಕೆ ಸರಿಯಾಗಿ ಶಾನುಂಗರ ತಂಗಿ ಶಾನುಂಗಿಯೂ ಆ ಸ್ಥಳಕ್ಕೆ ಬಂದಳು. ಸಿಕ್ಕಾ ಸಿಕ್ಕಾ (ಮೊಹರಿನುಂಗುರ) ಎಂದು ಹೇಳಿಕೊಂಡು ಅವಳು ನಗಲಾರಂಭಿಸಿದಳು. ಅವರಿಬ್ಬರ ನಗುವಿನಿಂದ ರಾಯರ ಮನಸ್ಸು ಮತ್ತಷ್ಟು ಘಾಸಿಗೊಂಡಿತು. ಭಯದಿಂದ ಮುಖವು ಬಿಳುಪಿಟ್ಟುಕೊಂಡಿತು. ಅದನ್ನರಿತ ಶಾನುಂಗರು ತನ್ನ ಸೋದರಿಯನ್ನು ನೀರಿಗಿಳಿಸಿ ಉಂಗುರ ತೆಗೆದು ಕೊಡುವಂತೆ ಹೇಳಿದರು. ಅವಳು ಮಡುವಿಗೆ ಧುಮುಕಿ ತನ್ನ ಬೊಗಸೆ ತುಂಬಾ ಮುದ್ರೆಯುಂಗುರಗಳನ್ನು ತೆಗೆದುಕೊಂಡು ಬಂದಳು. ‘‘ಇದರಲ್ಲಿಯ ನಿನ್ನ ಉಂಗುರವನ್ನು ನೀನೆ ಗುರುತಿಸು’’ ಎಂದು ರಾಯರ ಮುಂದೆ ಬೊಗಸೆಯನ್ನೊಡ್ಡಿದಳು. ಒಂದೇ ತರಹದ ಎಷ್ಟೊ ಉಂಗುರಗಳನ್ನು ಕಂಡಾಗ ರಾಯರಿಗೆ ಪರಮಾಶ್ಚರ್ಯವಾಯಿತು. ಯಾವುದನ್ನು ಕೈಗೆತ್ತಿಕೊಳ್ಳಬೇಕೊ ತಿಳಿಯದಂತಾಯಿತು.
ಅವರ ಮನಸ್ಸಿನ ದುಗುಡವನ್ನರಿತ ಶಾನುಂಗರು ಒಂದು ಉಂಗುರವನ್ನು ಎತ್ತಿಕೊಂಡು ‘‘ಇಗೋ ಇದೇ ನಿನ್ನ ಮುದ್ರೆಯುಂಗುರ’’ ಎಂದು ಹೇಳಿ ಅವರನ್ನು ಸಮಾಧಾನಗೊಳಿಸಿದರು. ಸಂತೋಷಭರಿತರಾದ ರಾಯರು ಆ ಮಹಾನುಭಾವರಿಗೆ ನಮಿಸಿ ಹೊರಡಲುದ್ಯುಕ್ತರಾದಾಗ ಮೃತ ವಸ್ತುವಿನ ದುರ್ವಾಸನೆ ಎಂದು ಹೇಳುತ್ತ ಆ ಮಹಿಮರಿಬ್ಬರೂ ತಮ್ಮ ಮೂಗನ್ನು ಮುಚ್ಚಿಕೊಂಡರು. ಇದೇ ರೀತಿ ಒಂದು ಸಲ, ಇವರಿಬ್ಬರೂ ರಾಣೀವಾಸದಲ್ಲಿಯೂ ಸಹ ಈ ಮಾತನ್ನು ನುಡಿದಿದ್ದರು. ಆಗ ಸೇವಕರು ಹುಚ್ಚು ಹಿಡಿದವರೆಂದು ಭಾವಿಸಿ ಇವರನ್ನು ಹೊರಗೆಹಾಕಿದರಂತೆ. (ಸ್ವಲ್ಪ ಕಾಲದಲ್ಲಿಯೆ ಸಾವಿರಾರು ಜನ ಸಾಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದರು ಈ ಅಣ್ಣತಂಗಿಯರು.) ಈ ಎಲ್ಲ ವಿಷಯಗಳನ್ನು ಕೇಳಿ ತಿಳಿದುಕೊಂಡ ರಾಯರಿಗೆ ಯೋಗಿಗಳಿಂದ ಹೊರಟ ಈ ಮಾತಿನ ಅಂತರಾರ್ಥವೇನು ಎಂಬ ಚಿಂತೆ ಆರಂಭವಾಯಿತು.

ರಾಯರನ್ನು ಕಂಡಾಗಲೆಲ್ಲಾ ಶಾನುಂಗರಾಗಲಿ ಅಥವಾ ಅವರ ಸೋದರಿಯಾಗಲಿ ಈ ಮಾತನ್ನು ಹೇಳದೇ ಇರುತ್ತಿರಲಿಲ್ಲ. ಹೀಗೆ ಗುಹ್ಯಾರ್ಥದ ತಿರುಳನ್ನು ಅರಿಯದೇ ಕೊನೆಗೆ ಒಂದು ದಿನ ರಾಯರು ಆ ಬೈರಾಗಿಯನ್ನೆ ಭೆಟ್ಟಿಯಾಗಿ ‘‘ತಮ್ಮ ಮಾತಿನ ಅಂತರಾರ್ಥವೇನು ಅದನ್ನು ತಿಳಿಸಿ ನನ್ನನ್ನು ಉದ್ಧಾರ ಮಾಡಿರಿ’’ ಎಂದು ಕೇಳಿಕೊಂಡರು. ಆಗ ಶಾನುಂಗರು ‘‘ಮಗು, ಸಮೀಪದಲ್ಲಿಯೇ ಸಾರವಾಡದಲ್ಲಿ ಭಾಸ್ಕರ ಸ್ವಾಮಿಗಳಿದ್ದಾರೆ ನೀನು ಅವರಲ್ಲಿ ಹೋಗು. ಆ ಮಹಾನುಭಾವರಿಂದ ನಿನಗೆ ಮಾರ್ಗದರ್ಶನವಾಗುವುದು’’ ಎಂದು ಆಶೀರ್ವದಿಸಿ ಕಳಿಸಿದರು. ಆ ಸೋದರ ಸೋದರಿಯರೇ ಮಹಿಪತಿರಾಯರ ಮೊಟ್ಟ ಮೊದಲನೆಯ ಆತ್ಮೋದ್ಧಾರ ಗುರುಗಳಾದರು.

ಶಾನುಂಗರ ಭೆಟ್ಟಿಯ ನಂತರ ರಾಯರು ಬಾದಶಹರನ್ನು ಕಂಡು ತಮ್ಮನ್ನು ಕೆಲಸದಿಂದ ನಿವೃತ್ತಿಗೊಳಿಸಬೇಕೆಂದು ಕೇಳಿಕೊಂಡರು.
ಮರುದಿನ ಪತಿ-ಪತ್ನಿಯರಿಬ್ಬರೂ ನಸುಕಿನಲ್ಲಿ ಎದ್ದು ಸ್ನಾನ ಸಂಧ್ಯಾದಿ ಕರ್ಮಗಳನ್ನು ತೀರಿಸಿಕೊಂಡು ಸಾರವಾಡಕ್ಕೆ ಪ್ರಯಾಣ ಬೆಳೆಸಿದರು. ಅವರು ಗುರುಗಳ ನಿವಾಸಕ್ಕೆ ಹೋದಾಗ ಅದೇ ತಾನೇ ಗುರುಗಳು ಯೋಗಸಮಾಧಿಯಿಂದ ಎಚ್ಚೆತ್ತಿದ್ದರು. ತಮ್ಮ ಸಮ್ಮುಖದಲ್ಲಿ ನಿಂತಿರುವ ದಂಪತಿಗಳನ್ನು ಕಂಡು ‘‘ಸರ್ವಾಭೀಷ್ಟ ಸಿದ್ಧಿರಸ್ತು’’ಎಂದು ಆಶೀರ್ವದಿಸಿದರು. ಭಾಸ್ಕರ ಸ್ವಾಮಿಗಳ ದರ್ಶನವಾಗುವುದೇ ತಡ, ರಾಯರ ಆತ್ಮಜ್ಯೋತಿ ಪ್ರಕಾಶಗೊಂಡಿತು. ಅವರು ಬಹು ಭಕ್ತಿಯಿಂದ

ಕರುಣಿಸೋ ಗುರುತಾರಿಸೋ|
ಶರಣ ರಕ್ಷಕ ನಮ್ಮಕರುಣಾಕರದೇವಾ||

ಎಂಬ ಪದ್ಯವನ್ನು ಭಾವಪರವಶರಾಗಿ ಹಾಡಿ ಗುರುಗಳ ಮಹಿಮೆಯನ್ನು ಕೊಂಡಾಡಿದರು. ಸುಪ್ರೀತರಾದ ಭಾಸ್ಕರ ಸ್ವಾಮಿಗಳು ರಾಯರ ತಲೆಯ ಮೇಲೆ ತಮ್ಮ ವರದ ಹಸ್ತವನ್ನಿಟ್ಟು ಗುರೂಪದೇಶ ಮಾಡಿದರು. ಅನಂತರ ತಿರುಮಲಾದೇವಿಯನ್ನು ಕುರಿತು ತಾಯಿ ಭಗವದುಗ್ರಹದಿಂದ ನಿನ್ನ ಮನೋರಥವು ಪೂರ್ಣವಾಗುವುದು. ನಿಮಗೆ ಇಬ್ಬರು ಗಂಡು ಮಕ್ಕಳಾಗುವರು ಎಂದು ಹೇಳಿ ಆ ಸಾಧ್ವಿಯ ಉಡಿಯಲ್ಲಿ ಎರಡು ಫಲಗಳನ್ನು ಪ್ರಸಾದವೆಂದು ಹಾಕಿ ಆಶೀರ್ವದಿಸಿದರು. ಹೀಗೆ ಗುರುಗಳ ಅಪ್ಪಣೆಯನ್ನು ಪಡೆದು ಮನೆಗೆ ಮರಳಿದ ರಾಯರು ತಮ್ಮ ಸಂಪತ್ತನ್ನೆಲ್ಲ ಬಡಬಗ್ಗರಿಗೆ ದಾನ ಮಾಡಿ ವಿರಕ್ತರಾಗಿ ಜೀವನ ನಡೆಸಲಾರಂಭಿಸಿದರು.

ಗುರೂಪದೇಶ-ಗುರು ಅನುಗ್ರಹ, ಇವುಗಳ ಸಾಧನೆಗಾಗಿ ರಾಯರ ಕೆಲವು ದಿನ ಸಾರವಾಡದಲ್ಲಿಯೇ ಇದ್ದುಕೊಂಡು ಗುರುಗಳ ಸೇವೆ ಮಾಡುತ್ತ ಸಾಧನೆಯಲ್ಲಿ ನಿರತರಾದರು. ಇಂದ್ರಿಯ ನಿಗ್ರಹ, ಪ್ರಾಣಾಯಾಮಾದಿಗಳಿಂದ ಯೋಗಾಭ್ಯಾಸದ ಒಂದೊಂದೇ ಹಂತವನ್ನು ಮುಟ್ಟಲಾರಂಭಿಸಿದರು. ಸದಾ ಗುರುಗಳ ಮತ್ತು ಭಗವಂತನ   ಧ್ಯಾನದಲ್ಲಿ ಮಗ್ನರಾದ ಮಹಿಪತಿರಾಯರಿಗೆ ಭಗವಂತನ ಸನ್ನಿಧಿಯಲ್ಲೆ ಇರುವಂತೆ ಅನುಭವವಾಯಿತು. ತಮ್ಮ ಆಸೆ, ಸುಖಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಿ ಭಗವಂತನ ಇಚ್ಛೆಯಂತೆ ಬದುಕುವುದನ್ನು ಕಲಿತರು. 

ತಮ್ಮ ಈ ಸಾಧನೆಯನ್ನು ಕುರಿತು ಅವರು ಒಂದು ಕೀರ್ತನೆಯಲ್ಲಿ

ದಾಸನಾದೆನಯ್ಯಾ ನಿಮ್ಮ ಏಸು ಜನಮಕ್ಕೆ|ವಾಸನೆ ಪೂಜಿಸೊ ಶ್ರೀ ಹರಿಯೆ ಜೀವಕ್ಕೆ||
ಎಂದು ಹಾಡಿದರು. ಭಾಸ್ಕರ ಸ್ವಾಮಿಗಳು ಅವರ ಯೋಗ ಸಿದ್ಧಿಯನ್ನು ಮೆಚ್ಚಿಕೊಂಡು ‘‘ಇನ್ನು ಲೋಕ ಕಲ್ಯಾಣ ಕಾರ್ಯದಲ್ಲಿ ತೊಡಗಿರಿ’’ ಎಂದು ಅಪ್ಪಣೆ ಮಾಡಿದರು.

ಶಾನುಂಗರು ಹಿಂದೆ ಭವಿಷ್ಯ ನುಡಿದಂತೆ ರಾಜಧಾನಿ ಯಾದ ವಿಜಾಪುರ ನಗರದ ಮೇಲೆ ಪರಚಕ್ರವರ್ತಿಗಳು ದಾಳಿ ಮಾಡುವುದನ್ನೂ ಆ ದಾಳಿಯಲ್ಲಿ ಸಾವಿರಾರು ಜನರ ಪ್ರಾಣ ಹಾನಿಯಾಗುವುದನ್ನೂ ಜ್ಞಾನ ದೃಷ್ಟಿಯಿಂದ ತಿಳಿದುಕೊಂಡ ಮಹಿಪತಿರಾಯರು ತಮ್ಮ ವಾಸಸ್ಥಳವನ್ನು ಬದಲಾಯಿಸಿ ಗುಲಬರ್ಗಾ ಜಿಲ್ಲೆಯ ಶಹಾಪೂರ ಗ್ರಾಮದ ಸಮೀಪದಲ್ಲಿರುವ ಮಂದಾಕಿನಿ ತೀರ್ಥದ ದಂಡೆಯ ಮೇಲೆ ಬಿಡಾರ ಮಾಡಿದರು. ಅಲ್ಲಿ ತಮ್ಮ ದಿನನಿತ್ಯದ ಪೂಜೆಗಾಗಿ ಒಂದು ಆಂಜನೇಯನ ವಿಗ್ರಹವನ್ನು ಹೊಂಡದ ಮೇಲೆಯೇ ಪ್ರತಿಷ್ಠಾಪನೆ ಮಾಡಿದರು. ಮೂರು ವರ್ಷಗಳ ಕಾಲ ಈ ಮಂದಾಕಿನಿತೀರ್ಥದ ದಂಡೆಯ ಮೇಲೆ ತಪವನ್ನು ಆಚರಿಸಿದರು.

ಮಂದಾಕಿನಿ ತೀರ್ಥವನ್ನು ಹುಡುಕಿಕೊಂಡು ಬರುವ ಜನರ ಗದ್ದಲವು ಹೆಚ್ಚಾದುದರಿಂದ ರಾಯರು ಆ ಸ್ಥಳವನ್ನು  ಬಿಟ್ಟು ವಿಜಾಪುರದ ಸಮೀಪದಲ್ಲಿರುವ ಕಾಖಂಡಕಿ ಎಂಬ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡರು.. ಅವರ ವಾಸಕ್ಕಾಗಿ ಕಾಖಂಡಕಿಯ ಗೌಡರು ತಮ್ಮ ತೋಟದಲ್ಲಿಯೇ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟರು. ಬಲು ರಮ್ಯವಾದ ಏಕಾಂತ ಸ್ಥಳ ವಾದುದರಿಂದ ಪ್ರಸನ್ನಚಿತ್ತರಾದ ರಾಯರು ತಮ್ಮ ಅನುಷ್ಠಾನದಲ್ಲಿ ನಿರತರಾದರು. ಈ ಸಮಯದಲ್ಲಿಯೇ ತಿರುಮಲಾದೇವಿಗೆ ಪುತ್ರ ಸಂತಾನವಾಯಿತು. ಆ ಮಗುವಿಗೆ ದೇವರಾಯ ಎಂದು ನಾಮಕರಣ ಮಾಡಿದರು.

ದಾಸರು ‘‘ಇನ್ನು ಈ ಮನೆಯಲ್ಲಿ ಇಲಿ ಹೆಗ್ಗಣ ಇವುಗಳ ಕಾಟ ನಿಂತು ಹೋಗುವುದು’’ ಎಂದು ಮಾರ್ಮಿಕವಾಗಿ ಹೇಳಿ, ‘‘ಮನದ ಬಿಲವನ್ನು ಮುಚ್ಚಲು ಯತ್ನಿಸಿರಿ, ಆಗ ನಿಜವಾದ ಸಂಪತ್ತು ಎಲ್ಲಿದೆ ಎಂಬುದನ್ನು ನೀವೇ ಕಂಡುಕೊಳ್ಳುವಿರಿ’’ ಎಂದು ಜನರಿಗೆ ಉಪದೇಶ ಮಾಡಿದರು.

ಗುರುಗಳಾದ ಭಾಸ್ಕರ ಸ್ವಾಮಿಗಳು ಈ ಮೊದಲೇ ಆಶೀರ್ವದಿಸಿದಂತೆ ರಾಯರಿಗೆ ಎರಡನೆಯ ಗಂಡು ಸಂತಾನವಾಯಿತು. ಆತನಿಗೆ ಕೃಷ್ಣರಾಯ ಎಂದು ನಾಮಕರಣ ಮಾಡಿದರು. ಗಂಡ-ಹೆಂಡತಿ ಎರಡು ಮಕ್ಕಳು ಹಾಗೂ ಅತ್ತಿಗೆ ಹೀಗೆ ಐದು ಜನರು ದಾಸರ ಕುಟುಂಬದಲ್ಲಿದ್ದರು. ಇಂಥ ಕುಟುಂಬದ ಹೊರೆಯನ್ನು ರಾಯರು ಹೇಗೆ ನಡೆಸಿಕೊಂಡು ಹೋಗುತ್ತಾರೆ ಎಂಬುದೇ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಏಕೆಂದರೆ ಅವರು ತಾವಾಗಿ ಯಾರಿಂದಲೂ ಎಂದೂ ಯಾವ ಪದಾರ್ಥವನ್ನೂ ಕೇಳಿ ಪಡೆದುಕೊಳ್ಳುವ ಸಂಪ್ರದಾಯವಿಟ್ಟುಕೊಂಡಿರಲಿಲ್ಲ. ಭಗವಂತನ ಅನುಗ್ರಹದಿಂದ ತಾನಾಗಿಯೇ ಯಾವ ಪದಾರ್ಥ ದೊರೆಯುತ್ತದೆಯೋ ಅದರಲ್ಲಿಯೇ ಆ ಕುಟುಂಬವು ಸಂತೋಷದಿಂದ ಜೀವನ ಸಾಗಿಸುತ್ತಿತ್ತು.

ಸಂಸಾರ ಚಿಂತೆಯು ಸ್ವಾಮಿ ಶ್ರೀ ಹರಿಗುಂಟು|
ಕಂಸಾರಿ ಕೃಷ್ಣ ಕರುಣಿಸುವ ಇದಿರಿಟ್ಟು  ||ಪ||

ತುತ್ತಾಯತವ ಮಾಡಿ ಹೊತ್ತು ನಡೆಸುವ ಪಡೆಯ|ಮತ್ತೆ ಚಿಂತಿಸಲೇಕೆ ಹತ್ತು ಕಡೆಯ
ಭಕ್ತವತ್ಸಲ ಸ್ವಾಮಿ ಚಿಂತಾಯತೆನ್ನೊಡೆಯ|
ನಿತ್ಯ ನಡೆಸುವ ಗ್ರಾಸ ಭಕ್ತರೊಡೆಯ|  ||೧||

ಆನೆಮೊದಲಿರುವೆ ಕಡೆ| ತಾ ನಡೆಸುತಿರಲಿಕ್ಕೆ|ಜನಕೊಡ್ಡಿ ಕೈಯ ನಾ ದಣಿಯಲೇಕೆ|
ಅನುದಿನ ಹರಿವಾಕ್ಯ ಅನುಭವಿಸುತಿರಲಿಕ್ಕೆ|ಅನುಮಾನವಿಡಿದು ನಾ ಹೆಣಗಲೇಕೆ|  ||೨||

ಭಾರ ವಹಿಸಿರೊಂಡಿರಲು ಮಾರಪಿತ ಪರಿಪೂರ್ಣ|
ಸಾರಾಂಶವಿತ್ತು ವರಕೃಪೆಯ ಜ್ಞಾನ|
ಆರ ಹಂಗೇಕೆ| ತೋರುತಿದೆ ನಿಧಾನ|
ತರಳ ಮಹೀಪತಿ ಪೊರೆವ ಗುರುಕರುಣ  ||೩||

ಹೀಗೆ ಅವರು ತಮ್ಮ ಸಂಸಾರದ ಭಾರವನ್ನೆಲ್ಲಾ ಶ್ರೀಹರಿಗೆ ಒಪ್ಪಿಸಿ ನಿಶ್ಚಿಂತರಾಗಿ ತಮ್ಮ ಸಾಧನೆಯಲ್ಲಿ ತೊಡಗಿದ್ದರು.

ಮಹಿಪತಿದಾಸರ ಮಕ್ಕಳಲ್ಲಿ ಕೃಷ್ಣರಾಯರು ತಾಳ-ತಂಬೂರಿಗಳನ್ನು ತೆಗೆದುಕೊಂಡರು; ದೇವರಾಯರು ಖಡ್ಗ-ಲೇಖನಿಯನ್ನು ಕೈಗೆತ್ತಿಕೊಂಡರು. ಆದುದರಿಂದಾಗಿ ದೇವರಾಯರು ದೇಸಾಯಿ ಮನೆತನದವರಾದರು; ಕೃಷ್ಣರಾಯರು ಹರಿದಾಸ ಪಂಥವನ್ನು ಸ್ವೀಕರಿಸಿದರು. ಹೀಗೆ ದಾಸರ ಸಂತಾನದಲ್ಲಿ ಬ್ರಹ್ಮತೇಜ ಹಾಗೂ ಕ್ಷಾತ್ರ ತೇಜಗಳು ಹರಿದು ಬರುವಂತಾದವು.

ಆಗರ್ಭ ಶ್ರೀಮಂತರ ಮಗಳಾಗಿ ಜನಿಸಿ ನಿಷ್ಠಾವಂತ ಭಗವದ್ಭಕ್ತರ ಪತ್ನಿಯಾಗಿ ಅವರ ಬಾಳಿನೊಂದಿಗೆ ಒಂದಾಗಿ ಬೆರೆತು ಸಾರ್ಥಕ ಜೀವನ ನಡೆಸಿದ ತಿರುಮಲಾದೇವಿಯು ಆಕಸ್ಮಿಕವಾಗಿ ಒಂದುದಿನ ಪತಿಯ ಸಾನ್ನಿಧ್ಯದಲ್ಲಿ ಮರಣಹೊಂದಿದಳು. ಮಾತೃವಿಯೋಗದಿಂದ ಮಕ್ಕಳಿಬ್ಬರ ಮನಸ್ಸಿನ ಮೇಲೆ ತುಂಬ ಪರಿಣಾಮವಾಯಿತು. ತಬ್ಬಲಿಗಳಾದ ಅವರಿಬ್ಬರೂ ತಂದೆಯಂತೆ ಏಕಾಂತ ಜೀವಿಗಳಾಗತೊಡಗಿದರು. ಅದನ್ನರಿತ ತಿರುಮಲಾದೇವಿಯ ತಂದೆ ದೇವರಾಯನನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು. ಕಾಲಾನಂತರ ದೇವರಾಯರು ಬೀದರ ಶಾಹಿಯ ರಾಜ್ಯದಲ್ಲಿ ಬಹು ದೊಡ್ಡ ಸೈನ್ಯಾಧಿಕಾರಿಗಳಾಗಿ ಸರ್ದಾರರಾಗಿ ಕೆಲಸಮಾಡಿ ಅನೇಕ ಯುದ್ಧಗಳಲ್ಲಿ ಜಯವನ್ನು ಸಂಪಾದಿಸಿದರು. ಸುಪ್ರೀತರಾದ ಬಾದಶಹರು ಇವರಿಗೆ ಜಾಲವಾದಿ ಭಾಗದ ದೇಸಾಯಿ ಸ್ಥಾನವನ್ನು ಕೊಟ್ಟರು. ಮಹಾರಾಷ್ಟ್ರದ ಶಿವಾಜಿಯಂತೆ ಇವರ ಯುದ್ಧ ತಂತ್ರಗಳೆಲ್ಲಾ ನಿಗೂಢವಾಗಿರುತ್ತಿದ್ದವು. ಅಷ್ಟೇ ಅಲ್ಲದೆ ದೇವರಾಯರು ಮೈ ಕಟ್ಟಿನಿಂದಲೂ ತೇಜಃಪುಂಜವಾದ ಕಾಂತಿಯಿಂದಲೂ ಶಿವಾಜಿ ಮಹಾರಾಜರಂತೆಯೇ ಕಾಣುತ್ತಿದ್ದರು. ಆದುದರಿಂದ ಪರಿಸರದ ಜನರು ಇವರನ್ನು ‘ಡೋಣ ಶಿವಾಜಿ’ ಎಂದು ಕರೆಯುವುದು ರೂಢಿಯಲ್ಲಿತ್ತು. ಹೀಗೆ ಮಹಿಪತಿದಾಸರ ಸಂತಾನದ ಶಾಖೆಯು ಜಾಲವಾದಿಯ ದೇಸಾಯರಾಗಿ ಬೆಳೆಯುವಂತಾಯಿತು.

ದಾಸರಾಯರಿಗೆ ಕೃಷ್ಣರಾಯರಿಂದ ರಚಿತವಾದ ಪದ ಪದ್ಯಗಳ ಕಟ್ಟು ಕಾಣಸಿಕ್ಕಿತು. ಅದನ್ನೆಲ್ಲ ಪರಿಶೀಲಿಸಿದ ದಾಸರು ಮಗನನ್ನು ‘‘ಮಗು, ಯಾವಗ್ರಂಥದಲ್ಲಿ ಮಂಗಳಾಚರಣ ಪೂರ್ವಕವಾಗಿ ಗುರುಗಳನ್ನು ಪ್ರಾರ್ಥಿಸಿರುವುದಿಲ್ಲವೋ ಅಂಥ ಕೃತಿಗಳು ಹೆಚ್ಚು ದಿನ ಬಾಳಲಾರವು. ಅವುಗಳನ್ನು ಅಭ್ಯಸಿಸುವುದೂ ಸಹ ಪುಣ್ಯದ ಕೆಲಸವೆನಿಸುವುದಿಲ್ಲ, ಆದುದರಿಂದ ಈ ಕಟ್ಟನ್ನು ಮೊದಲು ಕೃಷ್ಣೆಗೆ ಸಮರ್ಪಿಸು. ಇದರಿಂದ ಆ ಭಾಗೀರಥಿ ಸುಪ್ರೀತಳಾಗುವಳು’’ ಎಂದರು. ತಂದೆಯ ಅಪ್ಪಣೆಯಂತೆ ಕೃಷ್ಣರಾಯರು ತಾರತಮ್ಯ ಪ್ರಕಾರವಾಗಿ ಮಂಗಳಾಚರಣದೊಂದಿಗೆ ಪುನಃ ಕೃತಿ ರಚನೆಗೆ ತೊಡಗಿದರು. ಕೃಷ್ಣರಾಯರಿಗೆ ಅವರ ತಂದೆಯೇ ಮೊದಲ ಗುರುಗಳಾದರು. ಅವರಿಂದ ಅನುಗ್ರಹ ರೂಪವಾಗಿ ದೊರೆತ ತಾಳ ತಂಬೂರಿಗಳೇ ಅವರಿಗೆ ಚಿರಂತನ ಆಸ್ತಿಯಾಗಿ ಉಳಿದುಕೊಂಡವು. ಗುರು ಅನುಗ್ರಹದಿಂದ ಅವರ ಕಾವ್ಯಧಾರೆ ಓತಪ್ರೋತವಾಗಿ ಹರಿಯಲಾರಂಭಿಸಿತು. ಈ ರೀತಿಯಲ್ಲಿ ಮಹಿಪತಿರಾಯರ ಇನ್ನೊಂದು ಸಂತಾನವು ಹರಿದಾಸ ವೃತ್ತಿಯನ್ನು ಕೈಕೊಂಡು ಹರಿಭಜನೆ ಹರಿಕಥಾ ಕಾಲಕ್ಷೇಪಗಳಿಂದ ಜನಮನವನ್ನು ರಂಜಿಸುತ್ತ ಸದ್ವೈಷ್ಣವರಾಗಿ ಜೀವಿಸುವಂತಾಯಿತು.

ಯೋಗ ಸಮಾಧಿಯಲ್ಲಿ ನಿರತರಾದ ಮಹಿಪತಿರಾಯರಿಗೆ ತಮ್ಮ ಅವತಾರ ಸಮಾಪ್ತಿಯ ಕಾಲವು ಸನ್ನಿಹಿತವಾಗಿದೆ ಎಂದು ಅರಿವಾಯಿತು. ತಕ್ಷಣವೇ ಅವರು ಕೃಷ್ಣರಾಯ ರೊಂದಿಗೆ ಕುಲಗುರುಗಳಾದ ಪ್ರಹ್ಲಾದ ಕೃಷ್ಣಾಚಾರ್ಯರನ್ನು ಕಾಣಲು ಹೊರಟುಬಿಟ್ಟರು. ನಿಸರ್ಗ ರಮಣೀಯವಾದ ಕೊಲ್ಲಾರ ಗ್ರಾಮದ ಕೃಷ್ಣಾ ತೀರದಲ್ಲಿ ಏಳುದಿನಗಳ ಕಾಲ ತಪಸ್ಸು ಮಾಡಿ (ಸುಮಾರು ಕ್ರಿ.ಶ.1681ರಲ್ಲಿ) ಕಾರ್ತೀಕ ಮಾಸ ಅಮಾವಾಸ್ಯೆಯದಿನ ಅಲ್ಲಿಯೇ ಕಾಲವಶರಾದರು. ಅವರ ಚಿತಾಭಸ್ಮಮಾಡಿದ ಸ್ಥಳದಲ್ಲಿ ಇಂದಿಗೂ ಕಾಣಸಿಗುವ ವೃಂದಾವನವನ್ನು ಮಹಿಪತಿದಾಸರ ವೃಂದಾವನವೆಂದು ಕೊಲ್ಲಾರ ನಿವಾಸಿಗಳು ತೋರಿಸುತ್ತಾರೆ.

ಕನ್ನಡನಾಡಿನ ಹರಿದಾಸರ ಪರಂಪರೆಯಲ್ಲಿ ‘‘ವಿಠಲ’’ ಎಂಬ ಅಂಕಿತವನ್ನಿಟ್ಟುಕೊಂಡು ಕವನಗಳನ್ನು ರಚಿಸಿದವರ ಸಂಖ್ಯೆ ಸಾಕಷ್ಟು ಕಾಣಸಿಗುತ್ತದೆ. ಆದರೆ ಈ ಮಹನೀಯರು ಮಾತ್ರ ‘‘ಗುರು ಮಹಿಪತಿ’’ ಎಂಬ ಅಂಕಿತವಿಟ್ಟುಕೊಂಡು ಸುಮಾರು ಏಳುನೂರು ಕೀರ್ತನೆಗಳನ್ನು ರಚಿಸಿದರು. ಇವರು ಹುಟ್ಟು ಮಾಧ್ವಮತಾವಲಂಬಿಗಳು. ಆದರೆ ಸಂಕುಚಿತ ಮನೋಭಾವದವರಾಗಿರಲಿಲ್ಲ. ಈ ಮಾತಿಗೆ ಸಾಕ್ಷಿಯಾಗಿ ಅವರು ರಚಿಸಿದ ಒಂದು ಪದ್ಯವನ್ನೇ ಇಲ್ಲಿ ಉದಾಹರಿಸ ಬಹುದು.

‘‘ದ್ವೈ ತ ಅದ್ವೆ ತೆಂದು ಹೊಡೆದಾಡದಿರೋ ಪ್ರಾಣಿ!ಚೇತಿಸೋ ಬ್ಯಾರಿಹ ವಸ್ತುಗಾಣಿ||ದ್ವೈ 
ತನೆಂದವನು ಪರಮ ವೈಷ್ಣವನಲ್ಲ! ಅದ್ವೈ ತನೆಂದವನು ಸ್ಮಾರ್ತನಲ್ಲ!ದ್ವೈತ ಅದ್ವೈತಕ್ಕೆ ಬ್ಯಾರಿಹ ಗುಟ್ಟು! ಅದನ್ನು ಗುರುಮಧ್ವಮುನಿ ಬಲ್ಲ||’’

ಹದಿನೇಳನೆಯ ಶತಮಾನದಲ್ಲಿ ವಿಜಾಪುರ ಪ್ರಾಂತದಲ್ಲಿ  ಮರಾಠಿಯ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿ ಇದ್ದಿತು. ಮಹಿಪತಿರಾಯರು ಹಲವು ಮರಾಠಿ ಪದ್ಯಗಳನ್ನು  ಕೂಡ ರಚಿಸಿದರು. ಒಂದು ಮಾತ್ರ ಇಲ್ಲಿ ಕೊಟ್ಟಿದೆ.

‘‘ದತ್ತ ದಿಗಂಬರ ತೂಚಿ ಮಾಝಾ ಗುರು!ಜಾಣಾತೊ ನಿರ್ಧಾರ ಸ್ವಾಮಿ ಮಾಝಾ!
ದತ್ತ ಮಾಝ ಮಾತಾ ದತ್ತ ಮಾಝಾ ಪಿತಾ!ಮಹಿಪತೀಚಾ ದಾತಾ ದತ್ತ ಏಕು’’ ||
ಮಹಿಪತಿರಾಯರ ಪದ್ಯಗಳಲ್ಲಿ ದಶಾವತಾರದ ಕೋಲಿನ ಪದ, ಪುಗುಡಿಯ ಆಟ, ಶ್ರೀರಾಮೇಶ್ವರಸ್ತವನ, ಭಾಗೀರಥಿ ಸ್ತೋತ್ರ, ದಶಾವತಾರ ಲೀಲೆ, ಭಾಗವತ ಸ್ತೋತ್ರ ಇವೇ ಮೊದಲಾದ ಕೃತಿಗಳು ಉತ್ತಮವಾಗಿವೆ.

ಕನ್ನಡನಾಡಿನ ದಾಸಪರಂಪರೆಯಲ್ಲಿ ಇವರ ಕೊಡುಗೆ ವಿಶಿಷ್ಟವಾದುದು. ನಮ್ಮ ನಾಡಿನ ಯಾವ ದಾಸರೂ ಬಳಸದಿದ್ದ ತ್ರಿಭಾಷಾ ಸೂತ್ರವನ್ನು ಆಧರಿಸಿಕೊಂಡು ಕನ್ನಡ-ಮರಾಠಿ-ಉರ್ದು ಭಾಷೆಗಳನ್ನು ತ್ರಿವೇಣಿ ಸಂಗಮದಂತೆ ಏಕತ್ರಗೊಳಿಸಿ ಪದ್ಯವನ್ನು ರಚಿಸಿದ್ದಾರೆ. ಮಾದರಿಗಾಗಿ ಒಂದು ಪದ್ಯವನ್ನು ಇಲ್ಲಿ ಕೊಡಲಾಗಿದೆ.

ರಾಗ-ಕೇದಾರ; ತಾಳ-ಆದಿ
ಬಾಟ ಪಕಡೊ ಸೀದಾ| ನಫಡೇ ತೇಥೆ ಬಾಧಾ|ಇದುವೆ ಗುರು ನಿಜ ಬೋಧ| ಸ್ವಸುಖ ಸಮ್ಮತವಾದಾ ||ಪ||
ಬಂದಗೀಕರ್ತಾ ಕರಕೇ ಝೂಟಾ| ತಿಳಿಯದು ನಿಜ ಘನದಾಟಾ| ಮರ್ಮನ-ಕಳತಾ ಕರಣೇಖೋಟಾ| ಕೇಳಿ ಶ್ರೀಗುರುವಿಗೆ ನೀಟಾ ||೧||
ಜಾನ ಭೂಜಕರ ಚಲನಾ ಭಾಯಿ | ಲಕ್ಷಲಾವುನೀ ಗುರು ಪಾಯಿ|ಇದು ಎಲ್ಲರಿಗೂ ದೋರುದೇನಯ್ಯ| ಹೇ ಸಮರೆsವಿರಲಾ ಕೋಯಿ ||೨||
ತಿಳಿದುನೋಡಿ ಶ್ರೀಗುರು ಕೃಪೆಯಿಂದ | ಹುವಾ ಖುದಾಕಾ ಬಂದಾ|ಮಹೀಪತಿಗಾಯಿತು ಬಲು ಆನಂದಾ|ಹರೀಮ್ಹಣಾ ಗೋವಿಂದಾ ||೩||

ಮಹಿಪತಿ ದಾಸರ ಎನ್ನ ಪಾಲಿಸೊ ಕರುಣಾಕರ, ನೀನೆ ಪರಮಪಾವನಿ ನಿರಂಜನಿ ಮುಂತಾದ ಅನೇಕ ಗೀತೆಗಳೂ ಜನಮಾನಸದಲ್ಲಿ ನಿರಂತರ ನಲಿಯುತ್ತಿವೆ.

Mahipati Dasaru 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ