ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ ಸುನಾದ


 ತಿರುಪ್ಪಾವೈ ಸುನಾದದ ಆರಂಭ


ಧನುರ್ಮಾಸ ಅಂದರೆ ಅದೆಂತದ್ದೊ ಶಾಂತಿಯುತ ಸೌರಭ ಸೂಸಿದಂತಹ ವಾತಾವರಣ ನಮ್ಮ ಮನೆಗಳಲ್ಲಿ ಮತ್ತು ಮನಗಳಲ್ಲಿ ಸೃಷ್ಟಿಯಾಗುತ್ತಿತ್ತು.  ಅಮ್ಮಾ ರಾಗವಾಗಿ ತಿರುಪ್ಪಾವೈ ಗುನುಗುತ್ತಿದ್ದಳು. ದೇವಸ್ಥಾನಕ್ಕೆ ಅಥವಾ ಶ್ರೀವೈಷ್ಣವ ಸಭಾಗೆ ಹೋದರೆ ಪರಮಾತ್ಮನ ಸನ್ನಿಧಿಯಲ್ಲಿ ಆಚಾರ್ಯರುಗಳು ಭಕ್ತಜನರೊಂದಿಗೆ ಸೇರಿ ಗೋಷ್ಟಿಯಲ್ಲಿ ತಿರುಪ್ಪಾವೈ ಅನ್ನು ರಾಗವಾಗಿ ಹಾಡುತ್ತಿದ್ದ ವೈಭವ ನಾವು ಈ ಲೋಕದಲ್ಲಿ ಇಲ್ಲವೇ ಇಲ್ಲ ಎಂಬ ಭಾವ ಮೂಡಿಸುತ್ತಿತ್ತು. ಜೊತೆಗೆ  ರುಚಿ ರುಚಿಯಾದ ಪೊಂಗಲ್ ದಿನಾ ಸಿಗುತ್ತೆ,  ಒಂದು ತಿಂಗಳೊಳಗೆ ಘಮ ಘಮಿಸುವ ಸಕ್ಕರ್ ಪೊಂಗಲ್ ಅಮೃತ ಸಿಗುತ್ತದೆ ಎಂಬ ಅಕ್ಕರೆಯ ಸದಾಶಯ ಸಹಾ.

ಆ ಆಂಡಾಳ್ ಪುಟ್ಟ ಹಡುಗಿಗೆ ಸದಾ ಪರಮಾತ್ಮನದೇ ಧ್ಯಾನ.  ಧನುರ್ಮಾಸದ ಆ ಸವಿವಾತಾವರಣದ ಆರಂಭದ ಪ್ರಾತಃಕಾಲದಲ್ಲಿ ಆಕೆಯ ಮನ ಅವ್ಯಕ್ತ ಆನಂದದಿಂದ ನಲಿಯುತ್ತಿದೆ.  ಆ ಪುಟ್ಟ ಬಾಲಕಿಯ ನಲಿವು ಒಲವು ಆಕೆಯನ್ನು ಕವಿಯಾಗಿಸಿದೆ.  ಓಡೋಡಿ ತನ್ನ ಗೆಳತಿಯರನ್ನೆಲ್ಲ ಉಲ್ಲಸಿತಗೊಳಿಸುತ್ತ ಉಲಿಯುತ್ತಿದ್ದಾಳೆ.... ಜೊತೆಗೆ ನಾವೂ ಸೇರೋಣ ಬನ್ನಿ....

ಮಾರ್ಕಳಿ ತ್ತಿಂಗಳ್ಮದಿನಿರೈಂದ ನನ್ನಾಳಾ।
ನೀರಾಡ ಪ್ಪೋದುವೀರ್, ಪೋದುಮಿನೋ ನೇರಿಲೈಯೀರ್।
ಶೀರ್ ಮಲ್ಗುಂ ಆಯ್ ಪ್ಪಾಡಿ ಶೆಲ್ವಚ್ಚಿರು ಮೀರ್ ಕಾಳ್ ।
ಕೂರ್ವೇಲ್ ಕೊಡುಂದೊಳಿಲನ್ ನಂದಗೋಪನ್ ಕುಮರನ್।
ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ
ಕಾರ್ಮೇನಿಚ್ಚಜ್ಞ್ಗಣ್ ಕದಿರ್ಮದಿಯಂ ಬೋಲ್ ಮುಗತ್ತಾನ್
ನಾರಾಯಣನೇ ನಮಕ್ಕೇ ಪರೈತರುವಾನ್ ಪಾರೋರ್
ಪುಗಳಪ್ಪಡಿಂದೇಲೋ ರೆಂಬಾವಾಯ್ ॥1॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:
ನಂದಗೋಪಕುಮಾರ, ನಳಿನಾಕ್ಷ, ರವಿಚಂದ್ರರಂದವಡೆದಿಹ,
ವದನ ಮಂಡಲದಿ ಶೋಭಿಸುವ ಮಂದಹಾಸ ತ್ರಿಮುಖ,
ಸರ್ವಜೀವ ಪ್ರಮುಖ, ಮೇಘವರ್ಣಾಂಗ ಹರಿಯು |
ಚಂದದೀ ಮಾರ್ಗಶಿರಮಾಸದಲಿ , ಶೋಭಿಸಿಹ.
ಚಂದಿರನ ಬೆಳಕಿನೊಳು ಕ್ರೀಡೆಗೆಳಸುವ ಸೊಬಗಿನಿಂದು
ಮುಖಿಯರೇ ಬನ್ನಿ,
ಬನ್ನಿ ನೀವ್ ಗೆಳತಿಯರೆ,
ಕಾದಿರ್ಪ ವ್ರತಾಮುಕ್ತಿಗೆ  ||1||

ಮಾಸಗಳೊಳಗೆ ಉತ್ತಮವಾದ ಮಾರ್ಗಶೀರ್ಷ ಮಾಸವು ಬಾರ್ಹ್ಯಸ್ಪತ್ಯ ರೀತ್ಯ ಮೊದಲ ತಿಂಗಳು. ಗೋದಾದೇವಿಗೆ ಈ ತಿಂಗಳು ‘ಯುಗಾದಿ’ ಅಂದರೆ ಮೊದಲನೆಯ ದಿನವಾಗಿ ಕಂಡು ಬಂದಿದೆ. ದ್ವಾದಶ ನಾಮಗಳಿಗೆಲ್ಲ ಮೊದಲನೆಯದಾದ ಶ್ರೀ ಕೇಶವನೆಂಬ ನಾಮವುಳ್ಳ ಮಾಸವಿದು. ಈ ತಿಂಗಳಿಗೆ ‘ಕೇಶವನೇ” ಅಧಿದೇವತೆ. ಆದ್ದರಿಂದಲೇ ಒಂದು ಕಾಲದಲ್ಲಿ ವರ್ಷಾರಂಭವಿದ್ದಿತೆಂದು ಕೆಲವೆರೆನ್ನುವರು:-
“ಆದಾಯ ಮಾರ್ಗಶೀರ್ಷಾದಿದೌದೌ ಮಾಸೌ ಋತುರ್ಮತಃ”– (ಕಾತ್ಯಾಯನ)
“ಮಾರ್ಗಾದೀನಾಂ ಯುಗೈಹಿ ಕ್ರಮಾತ್” – (ಅಮರಸಿಂಹ)

ಎಲ್ಲಕ್ಕೂ ಒಳ್ಳೆಯ ಕಾಲವೆಂಬುದು ಬಹು ಮುಖ್ಯ. ಅನಾದಿ ಕಾಲದಿಂದ ನಡೆದು ಬಂದ  ವಿಪರೀತರುಚಿ ನೀಗಿ ನಿರ್ವೇದದಿಂದ ಭಗವಂತನಲ್ಲಿ ರುಚಿ ಹುಟ್ಟುವ ಕಾಲವೇ ಆತ್ಮನಿಗೆ ಒಳ್ಳೆಯ ಕಾಲ.  ಬರೀ ಬಾಹ್ಯ ಮುಂಜಾನೆ ಮಾತ್ರವಲ್ಲದೆ ಆಂತರಕ್ಕೂ ಮುಂಜಾನೆಯಿದು. ಅನಾದಿ ಮಾಯೆಯಿಂದ ನಿದ್ರಿಸುತ್ತಿರುವ ಜೀವನಿಗೆ ಆಂತರ ಪ್ರಬೋಧವಿದು. ಸಂಸಾರ ಚಕ್ರದಲ್ಲಿ ಸಿಕ್ಕಿ ಸ್ವಕರ್ಮಗಳಿಂದ ಸುತ್ತುತ್ತ ದುಃಖಾಕುಲನಾದ ಜೀವನಿಗೆ ಭಗವತ್ಪ್ರಸಾದ ವಿಶೇಷ ಲಭಿಸುವಂತೆ ಮಾಡುವ ಒಂದು ವಿಶೇಷ ವ್ರತಾಚರಣೆ ಏರ್ಪಟ್ಟ ದಿವಸವಾದ್ದರಿಂದ ಇದಕ್ಕೆ ಬಹಳ ಪ್ರಾಮುಖ್ಯವಿದೆ.

ಮಾರ್ಗಳಿ ತ್ತಿಂಗಳ್: ‘ಮಾ’ ಎನ್ನುವ ಮಂಗಲವಾಚಕ ಅಕ್ಷರವು ಮೊದಲಲ್ಲಿದೆ. ಇಂತಹ ಶ್ರೇಷ್ಠವಾದ ಮಾಸದಲ್ಲಿ (ಮತಿನಿರೈನ್ದ) ಚಂದಿರನ ಪೂರ್ಣವಾದ ಬೆಳದಿಂಗಳಿಂದ ಕೂಡಿದ ಶುಭ ದಿನದಲ್ಲಿ ಸ್ನಾನ ಮಾಡ ಹೋಗಲು ಆಸಕ್ತಿವುಳ್ಳವರೇ ಬನ್ನಿರಿ. ಐಶ್ವರ್ಯದಿಂದ ತುಂಬಿ ತುಳುಕುವ ಗೋಕುಲದ ಶ್ರೀಮಂತ ಕನ್ಯೆಯರೇ, ಸುಂದರ ಬಾಲೆಯರೇ, ಶ್ಲಾಘ್ಯವಾದ ಆಭರಣವುಳ್ಳವರೇ, ಅಂದರೆ ಪರಮಾತ್ಮನನ್ನು ಸೇರಬೇಕೆಂಬ ಭಕ್ತಿ ಪರವಶತೆಯುಳ್ಳ ಶೇಷತ್ವ ಜ್ಞಾನವುಳ್ಳವರೆ ಬನ್ನಿ- ಹೀಗೆ  ಗೋದಾದೇವಿ ಮಾಸದ ಮಹಿಮೆಯನ್ನು ಹಾಗು ಸಖಿಯರನ್ನು ವರ್ಣಿಸುತ್ತಾಳೆ.

ಈ ಪಾಶುರಂನಲ್ಲಿ ಗೋದಾದೇವಿ ತನ್ನ ಸಖಿಯರನ್ನು ವ್ರತದ ಸ್ನಾನಕ್ಕಾಗಿ ಕರೆಯುತ್ತಿದ್ದಾಳೆ. ವ್ರತಾಚರಣಕ್ಕೆ ಅನುಕೂಲವಾದ ಕಾಲದ ವರ್ಣನೆ, ತನ್ನ ಸಖಿಯರ ಸೌಂದರ್ಯ (ಶೆಲ್ವಚ್ಚಿರು ಮೀರ್ ಕಾಳ್) ವರ್ಣನೆ, ಕೃಷ್ಣನ ತಂದೆಯ ವಿವರಣೆ, ಆತನ ತಾಯಿಯ ಭಾಗ್ಯ, ಅಂತಹ  ಮಾತಾಪಿತೃಗಳಿಗೆ ಮಗನಾಗಿ ಅವತರಿಸಿದ ನಾರಾಯಣನ ಗುಣಾನುವರ್ಣನೆ ಹೇಳಿಯಾದ ಮೇಲೆ ಭಗವಂತನ ಶರಣಾಗತ ವಾತ್ಸಲ್ಯವನ್ನು ಕೊಂಡಾಡಿ ಅವನಲ್ಲಿ ತನಗಿರುವ ಭರವಸೆಯನ್ನು ಹೇಳಿಕೊಳ್ಳುತ್ತಾಳೆ.

ಚೂಪಾದ ವೇಲಾಯುಧವನ್ನು  ಧರಿಸಿ,  (ಕೂರ್ವೇಲ್ ಕೊಡುಂದೊಳಿಲನ್ ) ದುಷ್ಟ ನಿಗ್ರಹಕ್ಕಾಗಿ ಉಪಯೋಗಿಸಿ, ತನ್ನ ಭಕ್ತರನ್ನು ಸಂರಕ್ಷಿಸುವವನೂ, ನಂದಗೋಪನಿಗೆ ಮಗನಾದ, (ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ) ಯಶೋದೆಯ ವಾತ್ಸಲ್ಯ ಪೂರ್ಣ ನೇತ್ರಗಳಿಗೆ ಸಿಂಹದ ಮರಿಯಂತೆ ಇರುವವನೂ, ನೀಲ ಮೇಘ ಶ್ಯಾಮನಾಗಿ, ತಾವರೆ ಹೂವಿನ ದಳದಂತೆ ಕಣ್ಣುಳ್ಳವನೂ , ಸೂರ್ಯನ ತೇಜಸ್ಸಿನಂತೆ ಮುಖವುಳ್ಳವನೂ, ಜಗತ್ಕಾರಣನೂ, ರಕ್ಷಕನೂ, ಲಯಕರ್ತನೂ- ಆದ ದೈವವೇ ಈಗ ಶ್ರೀಕೃಷ್ಣನಾಗಿ ನಿಂತಿರುವವನು.  

ಅವನ ಪಾದಾರವಿಂದವನ್ನೇ ಅನನ್ಯರಾಗಿ ಆಶ್ರಯಿಸಿರುವ ನಮಗೆ ವ್ರತಸಾಧನೆಗಳನ್ನು ಕೊಡುವನು.  ಈ ಲೋಕದವರೆಲ್ಲ ಸ್ತೋತ್ರ ಮಾಡುವಂತೆ ಅವಧಾನದಿಂದ ಇದ್ದರೆ  ನಮ್ಮ ಈ ವ್ರತವು ಅದ್ವಿತೀಯವಾಗುವುದೆನ್ನುತ್ತಾಳೆ.
ಮಾರ್ಗಶೀರ್ಷ ಮಾಸವು, ಆಂಡಾಳ್ ದೇವಿಗೆ ಬಹು ಇಷ್ಟವಾದ ಮಾಸ.

ತಿರುಪ್ಪಾವೈ ಕುರಿತಾದ ತಿಳವಳಿಕೆಗೆ ಕೃತಜ್ಞತೆಗಳು: ವಿದ್ವಾನ್ 
ಬಿ. ಎಸ್. ಕೌಶಿಕ್, ಶ್ರೀಮತಿ ಕಮಲಮ್ಮ ವಿಠಲ ರಾವ್,  ಪೂರ್ಣಿಮಾ ವೆಂಕಟೇಶ್ ಮತ್ತು www.indica.today

Smt. Kamalamma Vittal Rao and Poornima Venkatesh

Time to think of divine melody Thiruppavai 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ