ಎಚ್.ಆರ್.ಕೇಶವಮೂರ್ತಿ
ಗಮಕ ಕೋಗಿಲೆಯನ್ನರಸಿ ಬಂತು ಪದ್ಮಶ್ರೀ
ಎಚ್. ಆರ್. ಕೇಶವಮೂರ್ತಿಗಳ ಗಮಕ ವಾಚನ ಕೇಳಿದಷ್ಟೂ ಮತ್ತಷ್ಟು ಕೇಳಬೇಕು ಎಂಬ ಭವ್ಯತೆಯ ಬೆರಗು.
ಕೇಶವ ಮೂರ್ತಿ - ಮತ್ತೂರು ಕೃಷ್ಣಮೂರ್ತಿ ಜೋಡಿಯ ಗಮಕ ವಾಚನ - ವ್ಯಾಖ್ಯಾನವನ್ನು ಅದೆಷ್ಟೋ ಬಾರಿ ಭಾರತೀಯ ವಿದ್ಯಾ ಭವನದಲ್ಲಿ ಕೇಳಿ ತನ್ಮಯನಾಗಿ ಬಿಡುತ್ತಿದ್ದೆ. 1990ರ ಆಸುಪಾಸಿನಲ್ಲಿ ಒಮ್ಮೆ ಹಾಗೆ ಅವರ ಗಮಕವನ್ನು ಕೇಳಿ ಆನಂದಿಸಿ ಕಳೆದು ಹೋಗಿದ್ದ ನನ್ನನ್ನು ಹಿರಿಯರೊಬ್ಬರು ಬಳಿ ಬಂದು "ಅದೆಷ್ಟು ತಾದ್ಯಾತ್ಮದಿಂದ ಆಲಿಸುತ್ತೀರಿ ನೀವು" ಎಂದು ಬೆನ್ನುತಟ್ಟಿದ್ದರು. ಕೇಶವ ಮೂರ್ತಿಗಳ ಗಮಕ ಅಂದರೆ ನಾನು ಹಾಗೆ ಕಳೆದುಹೋಗುತ್ತಿದ್ದೆ. ಕೆಲವೊಮ್ಮೆ ಅವರ ಗಮಕದ ಸುಶ್ರಾವ್ಯತೆ ಕೇಳಿದಾಗ ವ್ಯಾಖ್ಯಾನ ಕೂಡಾ ಇಲ್ಲದೆ ಹಾಗೇ ಕೇಳುತ್ತಲೇ ಇರಬೇಕು ಎಂಬ ಪ್ರವಹಿನಿಯ ಆಶಯ ಮೂಡುತ್ತಿತ್ತು. ಅವರು ನಮ್ಮ ಎಚ್‍ಎಮ್‍ಟಿ ಕನ್ನಡ ಸಂಪದದ ಕಾರ್ಯಕ್ರಮದ ಸಂದರ್ಭವೊಂದರಲ್ಲಿ ವೇದಘೋಷ ಸಹಾ ಮಾಡಿದ್ದರು.
ನಮ್ಮ ಎಚ್. ಆರ್. ಕೇಶವಮೂರ್ತಿಗಳಿಗೆ ಪದ್ಮಶ್ರೀ ಕೊಡಬೇಕು ಅಂತ ತೋಚಿತಲ್ಲ ನಿಜಕ್ಕೂ ಹಾಗೆ ತೋಚಿದ ಹೃದಯವೇ ಧನ್ಯ.
ಎಚ್. ಆರ್. ಕೇಶವಮೂರ್ತಿ ಅವರು 1934ರಲ್ಲಿ ಜನಿಸಿದರು. ಶಿವಮೊಗ್ಗ ಸಮೀಪದ ಮತ್ತೂರು ಹೊಸಳ್ಳಿ ಅವರ ಊರು. ತಂದೆ ರಾಮಸ್ವಾಮಿ ಶಾಸ್ತ್ರಿ. ತಾಯಿ ಲಕ್ಷ್ಮೀದೇವಮ್ಮ.
ಕೇಶವಮೂರ್ತಿ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು.
ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾದ ಅವರು ಹದಿನಾರನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು.
ಕೇಶವಮೂರ್ತಿ ಅವರು ನೂರಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ‘ಶತರಾಗಿ’ ಎಂಬ ಬಿರುದಿಗೂ ಪಾತ್ರರಾದವರು.
ಕೇಶವಮೂರ್ತಿ ಅವರ ಗಮಕ ನಾದದ ಸುಧೆ ರಾಜ್ಯ ಮತ್ತು ದೇಶದ ಅನೇಕ ಕಡೆ ಉಲಿದಿದೆ. ಧ್ವನಿ ಸುರುಳಿಗಳಲ್ಲಿ ತುಂಬಿ ಹರಿದಿದೆ. ಎಷ್ಟೋ ಹೃದಯಗಳನ್ನು ಮೀಯಿಸಿ ಪುನೀತಗೊಳಿಸಿದೆ. ಅಂತಹ ಭಾಗ್ಯ ನನದೂ ಆಗಿದೆ.
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ! ಅದು ಕೊಟ್ಟವರ ಮತ್ತು ಅವರಿಗೆ ಬಂತು ಎಂದು ಸಂಭ್ರಮಿಸುವ ಹೃದಯಗಳಿಗಾಗಿ. ಕೇಶವಮೂರ್ತಿಗಳ ಆ ಗಮಕ ವಾಚನ ಶ್ರೇಷ್ಠತೆಗೆ ಸಂದಿರುವ 'ಕುಮಾರವ್ಯಾಸ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಇದೀಗ ಪದ್ಮಶ್ರೀ ಪ್ರಶಸ್ತಿಗಳು ನಮ್ಮ ಹೃದಯಗಳಿಗೆ ಸಂದ ಸಂತಸವಾಗಿದೆ. ಪ್ರಶಸ್ತಿಗೇನಾದರೂ ಬೆಲೆ ಇದ್ದರೆ ಇಂತಹ ಶ್ರೇಷ್ಠತೆಗೆ ಸಲ್ಲುವುದರಲ್ಲಿ. ಆ ಶ್ರೇಷ್ಠತೆಗೆ ಸಾಷ್ಠಾಂಗ ನಮನ 🌷🙏🌷
Padmashree came in search of our nightingale Gamaka Vidwan H. R. Keshava Murthy
ಕಾಮೆಂಟ್‌ಗಳು