ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ3


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ -  ಮೂರನೆಯ ಸಂಧಿ

ಚಂಡಮುನಿ ಮಂತ್ರಾಹ್ವಯದಿ ಬರೆ
ಚಂಡಕರ ತತ್ತೇಜನಾಹವ
ಚಂಡ ವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ

ಅರಸ ಕೇಳೈ ಕೆಲವು ಕಾಲಾಂ
ತರಕೆ ನಿಮ್ಮ ವಿಚಿತ್ರ ವೀರ‍್ಯನು
ನೆರೆದನಮರಸ್ತ್ರೀಯರಲಿ ಬಳಿಕೀ ನದೀಸುತನ
ಕರೆದು ನುಡಿದಳು ಮಗನೆ ರಾಜ್ಯವ
ಧರಿಸು ನೀನಿನ್ನುತ್ತರದ ಹಿಮ
ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು  ೧

ತಾಯೆ ನಿಮ್ಮೋಪಾದಿ ರಾಜ್ಯ
ಸ್ತ್ರೀಯಳೆಂದಾ ನುಡಿಯೊಳಗೆ ಗಾಂ
ಗೇಯ ಮುಳುಗನು ಭೀಷ್ಮವಚನಕೆ ಬೇರೆ ಮೊಳೆಯುಂಟೆ
ಕಾಯದಲ್ಪ ಸುಖಕ್ಕೆ ಘನ ನಿ
ಶ್ರೇಯಸವ ಕೆಡಿಸುವೆನೆ ಯೆಲವದ
ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲೆಂದ  ೨

ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು  ೩

ಕೆಂಜಡೆಯ ಕೃಷ್ಣಾಜಿನದ ಮೊನೆ
ಮುಂಜೆರಗಿನುಡಿಗೆಯ ಬಲಾಹಕ
ಪುಂಜಕಾಂತಿಯ ಪಿಂಗತರಮುಖ ಕೇಶದುನ್ನತಿಯ
ಕಂಜನಾಭನ ಮೂರ್ತಿ ಶೋಭಾ
ರಂಜಿತನು ಜನದುರಿತದಶಮದ
ಭಂಜಕನು ತಾಯ್ಗೆರಗಿ ನುಡಿದನು ವ್ಯಾಸಮುನಿರಾಯ  ೪

ನೆನೆದಿರೇನೌ ತಾಯೆ ಕೃತ್ಯವ
ನೆನಗೆ ಬೆಸಸೆನೆ ಮಗನೆ ಭಾರತ
ವಿನುತಕುಲ ಜಲರಾಶಿಯೆಡೆವರಿತುದು ವಿಚಿತ್ರನಲಿ
ತನುಜ ನೀನೇ ಬಲ್ಲೆಯೆನೆ ಕೇಳ್
ಜನನಿ ನಿಮ್ಮಡಿಯಾಜ್ಞೆಯಲಿ ಸಂ
ಜನಿಪುವೆನು ವೈಚಿತ್ರವೀರ್ಯಕ್ಷೇತ್ರದಲಿ ಸುತರ  ೫

ಎಂದು ಬಳಿಕೇಕಾಂತ ಭವನದೊ
ಳಂದು ಮುನಿಯಿರಲಂಬಿಕೆಯನರ
ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೊರೆಗಾಗಿ
ಬಂದು ಮುನಿಪನ ದಿವ್ಯ ರೂಪವ
ನಿಂದುಮುಖಿ ಕಂಡಕ್ಷಿಗಳ ಭಯ
ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ  ೬

ಬಳಿಕಲಂಬಾಲಿಕೆಯನಲ್ಲಿಗೆ
ಕಳುಹಲಾಕೆಗೆ ಭಯದಿ ಮುಖದಲಿ
ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ
ಲಲನೆ ಮರಳಿದಳೊಬ್ಬ ಸತಿಯನು
ಕಳುಹಲಾವಧು ಚಪಲದೃಷ್ಟಿಯೊ
ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ  ೭

ಬಂದು ಮುನಿಪತಿ ತಾಯ್ಗೆ ಕೈಮುಗಿ
ದೆಂದನಂಬಿಕೆಯಲ್ಲಿ ಜನಿಸುವ
ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ
ಬಂದ ಬಳಿಕಿನ ಚಪಲೆಗತಿಬಲ
ನೆಂದು ಹೇಳಿದು ತನಗೆ ನೇಮವೆ
ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು  ೮

ತುಂಬಿದುದು ನವಮಾಸ ಜನಿಸಿದ
ನಂಬಿಕೆಯ ಬಸುರಿನಲಿ ಸೂನು ಗ
ತಾಂಬಕನು ಮಗನಾದನಂಬಾಲಿಕೆಗೆ ಪಾಂಡುಮಯ
ಚುಂತಿಸಿತು ಪರಿತೋಷ ನವ ಪುಳ
ಕಾಂಬುಗಳು ಜನಜನಿತವದನೇ
ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ ೯

ಜಾತಕರ್ಮಾದಿಯನು ಪಾರ್ಥಿವ
ಜಾತಿ ವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿ ಪಡಿಸಿದ ನಿಖಿಳಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀ ಸಂ
ಭೂತನೀತನು ವಿದುರನೆಂದಾಯ್ತವರಿಗಭಿಧಾನ  ೧೦

ಬೆಳೆವುತಿರ್ದರು ಹರಿಣಪಕ್ಷದ
ನಳಿನರಿಪುವಿನವೊಲ್ ಕುಮಾರರು
ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ
ಕಲಿತ ವಿದ್ಯರ ಮಾಡಿ ತಾಯು
ಮ್ಮಳಿಸದಂತಿರೆ ಸಮವಂಶದ
ಬೆಳವಿಗೆಯನೇ ಮಾಡಿ ಕೊಂಡಾಡಿದನು ಕಲಿಭೀಷ್ಮ ೧೧

ಧಾರುಣೀಪತಿ ಚಿತ್ತವಿಸು ಗಾಂ
ಧಾರ ದೇಶದ ಸುಬಲರಾಜ ಕು
ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ
ನಾರಿಯರೊಳುತ್ತಮೆಯಲಾ ಗಾಂ
ಧಾರಿಯೆನಿಸಿ ಪತಿವ್ರತಾ ವಿ
ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನಹೊಗಳೆ ೧೨

ಇತ್ತ ಕುಂತೀಭೋಜನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವನೃಪನನುಜೆ
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮನರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ  ೧೩

ಒಂದು ದಿನ ದೂರ್ವಾಸಮುನಿ ನೃಪ
ಮಂದಿರಕೆ ಬರಲಾ ಮಹೀಪತಿ
ಬಂದ ಬರವಿನಲವರ ಮರೆದನು ರಾಜಕಾರ್ಯದಲಿ
ಇಂದು ಕುಂತೀಭೋಜನೊಡೆತನ
ಬೆಂದು ಹೋಗಲಿಯೆಂಬ ಶಾಪವ
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ  ೧೪

ತರುಣಿಯೊಡಗೊಂಡೊಯ್ದು ಕನ್ಯಾ
ಪರಮಭವನದಲಾ ಮುನಿಯನುಪ
ಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ
ಹರ ಮಹಾದೇವೀ ಮಗುವಿನಾ
ದರಣೆಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ ೧೫

ಮಗಳೆ ಬಾ ಕೊಳ್ ಐದು ಮಂತ್ರಾ
ಳಿಗಳನಿವು ಸಿದ್ಧಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು
ಮಗನು ಜನಿಸುವನೆಂದು ಮುನಿ ಕುಂ
ತಿಗೆ ರಹಸ್ಯದೊಳರುಹಿ ಮುನಿಮೌ
ಳಿಗಳ ಮಣಿ ಪರಿತೋಷದಲಿ ಸರಿದನು ನಿಜಾಶ್ರಮಕೆ  ೧೬

ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ೧೭

ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ
ಧರೆಗೆ ಬಂದನು ಸೂರ‍್ಯನಾತನ
ಕಿರಣ ಲಹರಿಯ ಹೊಯ್ಲಿನಲಿ ಸರ
ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ  ೧೮

ಎನ್ನಬಾರದಲೇ ಋಷಿಪ್ರತಿ
ಪನ್ನ ಮಂತ್ರವಮೋಘವದರಿಂ
ದೆನ್ನ ತೂಕದ ಮಗನಹನು ನೀನಂಜ ಬೇಡೆನುತ
ಕನ್ನಿಕೆಯ ಮುಟ್ಟಿದನು ಮುನ್ನಿನ
ಕನ್ನೆತನ ಕೆಡದಿರಲಿಯೆನುತವೆ
ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ  ೧೯

ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ
ಕುರುಳುದಲೆ ನಿಟ್ಟೆಸಳುಗಂಗಳ
ಚರಣ ಕರಪಲ್ಲವದ ಕೆಂಪಿನ
ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ  ೨೦

ಅಳುವ ಶಿಶುವನು ತೆಗೆದು ತೆಕ್ಕೆಯ
ಪುಳಕ ಜಲದಲಿ ನಾದಿ ಹರುಷದ
ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ
ಕುಲದಸಿರಿ ತಪ್ಪುವುದಲಾ ಸಾ
ಕಿಳುಹ ಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ  ೨೧

ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲ ದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯ ಕೇಳೈ ಸಕಲ ಲೋಕದ
ತಾಯಲಾ ಜಾಹ್ನವಿ ತರಂಗದಿ ೨೨

ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ
ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ ೨೩

ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ  ೨೪

ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪ ಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತ ನರ್ಭಕನ  ೨೫

ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವವ ಮಾಡಿ ಮ
ಹೀದಿವಿಜರನು ದಾನ ಮಾನಂಗಳಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ ೨೬

ಹೊಳೆ ಹೊಳೆದು ಹೊಡಮರಳಿ ನಡು ಹೊ
ಸ್ತಿಲಲಿ ಮಂಡಿಸಿ ಬೀದಿ ಬೀದಿಗ
ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ
ಲಲಿತರತ್ನದ ಬಾಲದೊಡಿಗೆಯ
ಕಳಚಿ ಹಾಯ್ಕುವ ಹೆಸರು ಜಗದಲಿ
ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ  ೨೭

ಅರಸ ಕೇಳೈ ಕರ್ಣಪಾರಂ
ಪರೆಯೊಳೀತನ ಹೆಸರು ಜಗದಲಿ
ಹರಿದುದಲ್ಲಿಂ ಬಳಿಕಲೀತನ ನಾಮಕರಣದಲಿ
ಸುರನರೋರಗನಿಕರವೇ ವಿ
ಸ್ತರಿಸಿದುದು ಕರ್ಣಾಭಿಧಾನವ
ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ  ೨೮

ಸಂಕ್ಷಿಪ್ತ ಭಾವ:

ಯೋಜನಗಂಧಿಯು ತನ್ನ ಪುತ್ರರಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರ ಅಳಿವಿನಿಂದ ಶೋಕಿತಳಾಗಿ ತನ್ನ ಮೊದಲ ಪುತ್ರನಾದ ವ್ಯಾಸನನ್ನು ಕರೆಸಿಕೊಳ್ಳುತ್ತಾಳೆ. ಅವನ ಮೂಲಕ ಅಂಬಿಕೆ, ಅಂಬಾಲಿಕೆ ಮತ್ತು ಒಬ್ಬ ದಾಸಿಯಲ್ಲಿ ಧೃತರಾಷ್ಟ್ರ, ಪಾಂಡು ಮತ್ತು ವಿದುರ ಹುಟ್ಟುತ್ತಾರೆ. ಇವರನ್ನು ಪಾಲಿಸುವ ಹೊಣೆ ಭೀಷ್ಮನದಾಗುತ್ತದೆ. 

ಇನ್ನೊಂದೆಡೆ ಕುಂತಿಯು ದೂರ್ವಾಸರ ವರಪ್ರಸಾದದಿಂದ ಮಂತ್ರಗಳನ್ನು ಪಡೆಯುವಳು. ಅದರ ಪ್ರಯೋಗ ಮಾಡಲು ಹೊರಟು ಕನ್ಯೆಯಾಗಿರುವಾಗಲೇ ಸೂರ್ಯನ ಅನುಗ್ರಹದಿಂದ ಕರ್ಣನ ಜನನವಾಗುತ್ತದೆ. ಲೋಕಾಪವಾದಕ್ಕೆ ಅಂಜಿ ಆ ಮಗುವನ್ನು ಗಂಗೆಯಲ್ಲಿ ತೇಲಿ ಬಿಟ್ಟಳು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ