ಆರ್. ಲಲಿತ
ಆರ್. ಲಲಿತ
ವಿದುಷಿ ಆರ್. ಲಲಿತ ಸಂಗೀತಲೋಕದ ಸಾಧಕಿ.
ಸಂಗೀತದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಆರ್. ಲಲಿತ ಅವರ ಜನ್ಮದಿನ ಜನವರಿ 18. ಸಂಗೀತದಲ್ಲಿ ವಿದ್ವತ್, ಎಪಿಎಸ್ ಕಾಲೇಜಿನಲ್ಲಿ ಸಂಗೀತದ ಬಿ.ಎ. ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಎಂ.ಎ. ಪದವಿ ಗಳಿಸಿದ ಸಾಧನೆ ಲಲಿತ ಅವರದ್ದು.
ವಿದುಷಿ ವಸಂತ ಮಾಧವಿ ಅವರಲ್ಲಿ ಸುದೀರ್ಘ ಕಾಲ ಸಂಗೀತ ಸಾಧನೆ ಮಾಡಿದ ಲಲಿತ ಅವರು ಪ್ರಸಕ್ತದಲ್ಲಿ ಸಂಗೀತ ಕಲಾರತ್ನ, ಸಂಗೀತ ಕಲಾ ಆಚಾರ್ಯ ವಿದ್ವಾನ್ ನೀಲಾ ರಾಮ್‍ಗೋಪಾಲ್ ಅವರಲ್ಲಿ ಉನ್ನತ ಸಂಗೀತ ಸಾಧನೆ ಮಾಡುತ್ತಿದ್ದಾರೆ.
ಲಲಿತ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಎರಡು ವರ್ಷಗಳ ಕಾಲ ಮತ್ತು ಡಿ. ಸುಬ್ಬರಾಮಯ್ಯ ಫೈನ್ ಆರ್ಟ್ಸ್ ಟ್ರಸ್ಟ್ ವತಿಯಿಂದ ಸಂಗೀತ ಸಾಧನೆಗಾಗಿ ಎರಡು ವರ್ಷಗಳ ವ್ಯಾಸಂಗವೇತನ ಗಳಿಸಿದವರು.
ಶಾಲಾ ದಿನಗಳಿಂದಲೂ ತಮ್ಮ ಗಾಯನಕ್ಕಾಗಿ ಬಹುಮಾನ ಗೆಲ್ಲುತ್ತ ಬಂದ ಲಲಿತ ಅವರು ಕಿರಿಯರಿರುವಾಗಲೇ ಗಾಯನ ಸಮಾಜ, ಹಂಸಧ್ವನಿ ಪ್ರತಿಷ್ಠಾನಗಳಂತಹ ವೇದಿಕೆಗಳಲ್ಲಿನ ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದರು. ಆಕಾಶವಾಣಿಯ ಚಿಗುರು, ಝೇಂಕಾರ, ಬಾಲವಿಹಾರ ಮತ್ತು ಮಹಿಳೆಯರಿಗಾಗಿ ಕಾರ್ಯಕ್ರಮಗಳಲ್ಲಿ ತಮ್ಮ ಧ್ವನಿ ಮೊಳಗಿಸುತ್ತಾ ಬಂದಿದ್ದಾರೆ.
ವಿದುಷಿ ಲಲಿತಾ ಅವರ ಕಾರ್ಯಕ್ರಮಗಳು ರಾಜ್ಯದ ಎಲ್ಲ ವೇದಿಕೆಗಳಲ್ಲಿ ಮತ್ತು ಎಲ್ಲ ಪ್ರಮುಖ ಉತ್ಸವಗಳಲ್ಲಿ ನಿರಂತರ ನಡೆಯುತ್ತ ಬಂದಿವೆ. ಇದಲ್ಲದೆ ತಿರುಪತಿ ತಿರುಮಲ ದೇವಸ್ಥಾನದ ಶ್ರೀವಾರಿ ಬ್ರಹ್ಮೋತ್ಸವದ ಸಂದರ್ಭದಲ್ಲಿ ಶ್ರೀ ಅಣ್ಣಮಾಚಾರ್ಯರ ಕೃತಿಗಳ ವಿಶೇಷ ಸಂಗೀತ ಕಾರ್ಯಕ್ರಮ ಮತ್ತು ವೆಲ್ಲೂರಿನ ಸ್ವರ್ಣ ದೇಗುಲದಲ್ಲಿನ ಸಹಾ ಕಚೇರಿ ನೀಡಿದ ಸಂತಸ ಇವರದ್ದಾಗಿದೆ.
ಲಲಿತ ಅವರು ಕುಮರನ್ಸ್ ಶಾಲೆ, ಅರಬಿಂದೊ ಶಾಲೆಗಳಲ್ಲಿ ಕೆಲವು ವರ್ಷ ಸಂಗೀತದ ಅಧ್ಯಾಪನ ಮಾಡಿದ್ದರಲ್ಲದೆ ಕಳೆದ ಎರಡು ದಶಕಗಳಿಂದ ಅನೇಕ ಸಂಗೀತಾಕಾಂಕ್ಷಿಗಳಿಗೆ ಗುರುವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಆನ್ಲೈನ್ ವ್ಯವಸ್ಥೆಗಳ ಮೂಲಕ ವಿಶ್ವದಾದ್ಯಂತ ಅನೇಕರು ಇವರ ಶಿಷ್ಯತ್ವದಲ್ಲಿ ಸಂಗೀತ ಕಲಿಯುತ್ತಿದ್ದಾರೆ.
ವಿದುಷಿ ಲಲಿತ ಅವರಿಗೆ ಶ್ರೀ ಶಾರದಾ ಗಾನಸಭಾ ದಿಂದ ಸಂದ ಗಾನಕಲಾ ಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ
ವಿದುಷಿ ಲಲಿತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
R. Lalitha
Happy birthday to classical singer Vidushi Lalitha Rajesh
ಕಾಮೆಂಟ್‌ಗಳು