ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ4




ಕುಮಾರವ್ಯಾಸನ 
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ -  ನಾಲ್ಕನೆಯ ಸಂಧಿ

ಸೂ. ಭರತ ವಂಶದೊಳೈದು ಮಿಗೆ ನೂ
ರ‍್ವರು ಕುಮಾರರು ಪಾಂಡು ಧೃತರಾ
ಷ್ಟ್ರರಿಗೆ ಜನಿಸಿದರಮಲ ಮುನಿ ಮಂತ್ರೋಪದೇಶದಲಿ

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀಭೋಜಭೂಪತಿ
ಯಾಲಯದೊಳೀ ಕುಂತಿ ಮೆರೆದಳು ವಿವಿಧ ವಿಭವದಲಿ
ಕೇಳಿದನು ಗಾಂಗೇಯನಾ ನೀ
ಲಾಳಕಿಯ ಕುಲರೂಪು ಲಕ್ಷಣ
ಶೀಲವನು ಪಾಂಡುವಿಗೆ ಪಾಸಟಿಯೆಂದು ರಾಗದಲಿ  ೧

ಕರೆಸಿ ಕುಂತೀಭೋಜನನು
ಸತ್ಕರಿಸಿ ಕುಂತಿಯ ಪಾಂಡುವಿಗೆ ಭೂ
ಸುರರ ಮತದಿಂದಗ್ನಿ ಸಾಕ್ಷಿಕ ವರವಿವಾಹವನು
ಪರಮ ವಿಭವದಲೆಸಗಿ ಮುದ್ರೇ
ಶ್ವರನನುಜೆ ಮಾದ್ರಿಯನು ಪಾಂಡುವಿ
ಗರಸಿಯನು ಮಾಡಿದನು ವೈವಾಹಿಕ ಮುಹೂರ್ತದಲಿ  ೨

ವರ ವಿವಾಹ ಮುಹೂರ್ತ ಸಮನಂ
ತರ ಸುಲಗ್ನದೊಳಖಿಳ ರಾಜ್ಯದ
ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ
ಸುರನದೀಸುತ ಪಾಂಡುವಿಗೆ ವಿ
ಸ್ತರಿಸಿದನು ಧೃತರಾಷ್ಟ್ರ ವಿದುರರ
ಪರಮ ಪರಿತೋಷಾನುಮತದಲಿ ಮೆರೆದುದಾ ವಿಭವ  ೩

ಸೋಮಕುಲದವರಲಿ ಭವತ್ ಪ್ರಪಿ
ತಾಮಹನವೋಲ್ ಧರ್ಮದಲಿ ಸಂ
ಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ
ಸಾಮದಲಿ ಶೌರ್ಯದಲಿ ಸುಜನ
ಪ್ರೇಮದಲಿ ನೀತಿಯಲಿ ದೃಢದಲಿ
ಭೂಮಿಯಲಿ ನಾ ಕಾಣೆನವನೀಪಾಲ ಕೇಳೆಂದ  ೪

ಪಸರಿಸಿದ ಪರಿಧೌತ ಕೀರ್ತಿ
ಪ್ರಸರದಲಿ ಬೆಳುಪಾಯ್ತು ಜಗ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ  ೫

ಓಲಗಿಸುವುದು ಮಿತ್ರರಾಯಮೌಳಿಮಣಿ ಪಾಂಡುವಖಾಳಿಯನು ಸೆಣಸುವ ಮಹೀಶರ‍್ವ ಮೌಳಿಮಣಿ ಕಿರಣ
ಓಲಗಿಸಿತು ಪ್ರಣಯದಮರೀ
ಬಾಲೆಯರ ಪದನಖವನದನೇ
ವೇಳುವೆನು ಪಾಂಡುವಿನ ಖಂಡೆಯ ಸಿರಿಯ ಸಡಗರವ ೬

ಓಲಗಿಸಿ ಕೊಂಬಾತನಂಧ ನೃ
ಪಾಲನುಳಿದಂತಖಿಳ ಧರಣೀ
ಪಾಲಕತ್ವವ ಪಾಂಡುಭೂಪತಿಗೀ ಕುಮಾರಕರ
ಲಾಲಿಸುವ ಕುಲ ನೀತಿ ವಿಧದಲಿ
ಪಾಲಿಸುವ ಭರ ಭೀಷ್ಮನದು ಸಂ
ಬಾಳಿಸಿತು ನಳ ನಹುಷಚರಿತವನಿವರ ಪರಿಪಾಟಿ  ೭

ನೃಪ ಪರಂಪರೆಯಿಂದ ಬಂದೀ
ವಿಪುಳವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸಮುನಿ ಬಂದು
ಕೃಪೆಯ ಮಾಡನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ  ೮

ಅರಸ ಚಿತ್ತೈಸೊಂದು ದಿನ ಮುನಿ
ವರನು ಬಿಜಯಂಗೈದು ಹಸ್ತಿನ
ಪುರವ ಹೊಕ್ಕನು ರಾಜಭವನಕೆ ಬಂದು ಹರ್ಷದಲಿ
ಸುರನದೀತನುಜಾದಿಗಳ ಸ
ತ್ಕರುಣೆಯನು ಕೈಕೊಂಡು ಮಕ್ಕಳ
ಮುರಿದ ವಿಭವಕೆ ಮೈಯನಾಂತು ಮುನೀಂದ್ರನಿಂತೆಂದ ೯

ಭರತಕುಲದಲಿ ಮಕ್ಕಳಿಲ್ಲದ
ಕೊರತೆ ಕೋಮಲ ಸೌಖ್ಯಲತೆಗಿದು
ಕರಗಸವಲಾ ತಂದೆ ಬಾ ಧೃತರಾಷ್ಟ್ರ ಬಾಯೆನುತ
ಕರೆದು ಕಟ್ಟೇಕಾಂತದಲಿ ನಿ
ನ್ನ ರಸಿಗನುಪಮ ಪುತ್ರ ಶತವವ
ತರಿಸುವುದು ಕೊಳ್ಳೆಂದು ಕೊಟ್ಟನು ಮಂತ್ರಪಿಂಡಕವ  ೧೦

ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡು ನೃಪಾಲನೋಲಗಕೆ ೧೧

ಕೇಳಿದನು ಮೃಗದಿಕ್ಕೆ ಹಕ್ಕೆಯ
ಗಾಳಿಯನು ಕೊಂಬುಗಳನಾಗಳೆ
ಬೀಳು ಕೊಟ್ಟನು ರಾಜಸಭೆಯನು ರಾಯನುಚಿತದಲಿ
ಬೋಳೆ ಕವಲಂಬುಗಳ ಹದವಿಲು
ತಾಳಿಕೆಯ ಕುಪ್ಪಸದ ಬೇಂಟೆಯ
ಮೇಳದಲಿ ಭೂಪಾಲ ಹೊರವಂಟನು ನಿಜಾಲಯವ  ೧೨

ಏನನೆಂಬೆನು ನಿಮ್ಮನು ಪಿಶಾ
ಚನ್ನೃಪಾಲಕರೆಂಬವೋಲ್ ವ್ಯಸ
ನಾನು ಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ
ಕಾನನದೊಳಾಯತದ ಶರ ಸಂ
ಧಾನ ಕಲಿತಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ  ೧೩

ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನಲೊಬ್ಬ ಮುನಿ ಮೃಗ ಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೋಡಿದನಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ  ೧೪

ಹಾ ಮಹಾದೇವಾಯೆನುತ್ತೆ ಸ
ನಾಮಮುನಿ ತೆತ್ತಿಸಿದ ಬೆನ್ನಿನ
ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ
ಕಾಮಿನಿಯೆ ಕಡುನೊಂದೆಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವರನಪ್ಪಿ ಮುಂಡಾಡಿದನು ನಿಜಸತಿಯ  ೧೫

ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲಕೊಪ್ಪಿನ
ಲಾತ ಕದಪಿನ ಮುಕುಟದೊಲವಿನ ಬೆರಳ ಬಿರುದನಿಯ
ಬೀತಸೊಂಪಿನ ತಳಿತಬೆರಗಿನ
ಪಾತಕದ ಪರುಠವದ ಮುಖದ ಮ
ಹೀತಳಾಧಿಪ ಸುಯ್ದು ನೊಂದನು ಶಿವಶಿವಾಯೆನುತ  ೧೬

ಅರಿಯೆ ನಾನಿವರೆಂದು ಮೃಗವೆಂ
ದಿರಿದೊಡಿದು ಮತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ
ಸರವಿಯೇ ಹಾವಾದುದೇನೆಂ
ದರಿಯೆ ನೀ ಕೌತುಕವನುರೆ ಮೈ
ಮರೆಸಿಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ  ೧೭

ಉಗಿದು ಬಿಸುಟನು ಸರಳ ಮಗ್ಗುಲ
ಮಗುಚಿ ನೆತ್ತರಹೊನಲಿನೀಚೆಗೆ
ತೆಗೆದು ತೊಳೆತೊಳೆದೊರಸಿದನು ಸಗ್ಗಳೆಯ ನೀರಿನಲಿ
ಮೃಗವಹರೆ ಮಾನಿಸರಕಟ ಪಾ
ಪಿಗಳಿಗೆತ್ತಣ ತಪವಿದೆತ್ತಣ
ಮೃಗವಿನೋದಕ್ರೀಡೆ ಕೊಂದಿರೆನುತ್ತ ಬಿಸುಸುಯ್ದ  ೧೮

ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿವ ಮೇಲುಸುರ
ಎತ್ತಿ ಹಾಯ್ಕುವ ಕೊರಳ ಬಿಕ್ಕುಳ
ತೆತ್ತು ವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ  ೧೯

ಎಲವೊ ರಾಜಬ್ರುವನೆ ತನ್ನಯ
ಲಲನೆಯೊಡನಿರೆ ಕೊಂದೆ ನಿನ್ನಯ
ಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು
ಹಲವು ಮಾತೇಕೆನುತ ಹರಣವ
ಕಳೆದುದಾ ಮುನಿ ಮಿಥುನವವನಿಪ
ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ  ೨೦

ಆದ ಹದನನು ಭೀಷ್ಮ ಧೃತರಾ
ಷ್ಟ್ರಾದಿಗಳಿಗರುಹಿದರೆ ಹಯ ಮೇ�ಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ
ವೈದಿಕೋಕ್ತಿಯ ಮಂತ್ರದಲಿ ಸಂ
ಪಾದಿಸುವೆವೆನೆ ಶಿರವ ಬಿದುರಿ ಮ
ಹಾದುರಾಗ್ರಹ ಬುದ್ಧಿಯಲಿ ಹೊರವಂಟನರಮನೆಯ  ೨೧

ಸಕಲ ಭಂಡಾರವನು ಭೂಸುರ
ನಿಕರದಲಿ ಚೆಲ್ಲಿದನು ಸುಜನ
ಪ್ರಕರವನು ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ
ಚಕಿತಚಿತ್ತನು ಮುನಿಹತಿಯ ಪಾ
ತಕದ ನೆತ್ತಿಯ ಸಬಳವಾವುದೊ
ಸಕಲ ಯೋಗಾವಳಿಯೊಳೆನುತೈದಿದನು ಕಾನನವ  ೨೨

ಅರಸ ಕೇಳ್ ಶತಶೃಂಗ ಶೈಲದ
ವರತಪೋಧನರಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ
ಹರುಷದಲಿ ಜಾಬಾಲಿ ಗಾರ್ಗ್ಯಾಂ
ಗಿರಸ ಗಾಲವ ಗೌತಮಾದ್ಯರು
ಧರಣಿಪನ ಸಂಭಾವಿಸಿದರರ್ಘ್ಯಾಸನಾದಿಯಲಿ  ೨೩

ಈತನಮಲಾಷ್ಟಾಂಗಯೋಗವಿ
ಧೂತ ಕಿಲ್ಬಿಷನಾಗಿ ಬಳಿಕ ಮ
ಹಾ ತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ
ಆ ತಪೋನಿಷ್ಠಂಗೆ ತಾವತಿ
ಭೀತಿ ಭಕ್ತಿಯೊಳಧಿಕ ಶುಶ್ರೂ
ಷಾತಿಶಯದಲಿ ಮನವ ಹಿಡಿದರು ಕುಂತಿ ಮಾದ್ರಿಯರು  ೨೪

ಪರಮ ವೈರಾಗ್ಯದಿ ನಿರಂತಃ
ಕರಣ ನಿರುಪಮ ಭಾವ ಶುದ್ಧಿಯ
ಮುರಹರ ಧ್ಯಾನೈಕ ಪೀಯೂಷಾಭಿಷೇಕದಲಿ
ಹೊರೆದು ಹೊಂಗಿದ ನಿಷ್ಪ್ರಪಂಚೋ
ತ್ಕರದ ಸುಖದುನ್ನತಿಯಲಿದ್ದನು
ಧರಣಿಪತಿ ಮುನಿಪನ ಮಹಾಪಾತಕವ ಕೆಡೆಯೊದೆದು  ೨೫

ನಾರಿಯರು ಮರುಗಿದರಕಟ ಮುದಿ
ಹಾರುವನ ತನಿಬೇಂಟೆ ನಮ್ಮಯ
ಬೇರುಗೊಲೆಯಾಗಿರ್ದುದೇ ಹಾಯೆನುತ ಬಿಸುಸುಯ್ದು
ವಾರಿಜಾನನೆ ಕುಂತಿ ಮೆಲ್ಲನೆ
ಸಾರಿದಳು ನಯದಲಿ ರಹಸ್ಯದ
ಲಾರುವರಿಯದವೋಲು ಬಿನ್ನಹ ಮಾಡಿದಳು ಪತಿಗೆ  ೨೬

ಭರತ ವಂಶಕೆ ಪುತ್ರಶತವವ
ತರಿಸುವುದು ಗಾಂಧಾರಿ ದೇವಿಗೆ
ವರಮುನೀಶ್ವರನಿತ್ತ ವರವದು ನಿಮ್ಮಡಿಗಳರಿಯೆ
ದುರುಳ ಮುನಿಪನ ಶಾಪವೇ ಸ್ತ್ರೀ
ಪುರುಷ ಸಂಗವಿರೋಧ ನಮಗಿ
ನ್ನ ರಸ ನಾಪುತ್ರಸ್ಯಗತಿಯೆಂದಿರದೆ ಶ್ರುತಿವಚನ  ೨೭

ಧರೆಯ ರಾಜ್ಯ ಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ  ೨೮

ವನಜಮುಖಿ ಕೇಳ್ ಪುತ್ರಮುಖ ದ
ರ್ಶನವು ಸುಲಭವೆ ಪುಣ್ಯಹೀನರಿ
ಗೆನಿತು ಹಲುಬಿದರೇನು ಹಂಗಿಗರಾವು ದುಷ್ಕೃತಿಗೆ
ಮುನಿಯ ಬೇಟದ ಬೇಳುವೆಯ ಮಾ
ತಿನ ಹವಣ ನೀ ಬಲ್ಲೆ ಹೇಳಿ
ನ್ನೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ  ೨೯

ನಾರಿಯರು ಮತ್ತಲ್ಲಿ ರಾಜ ಕು
ಮಾರಿಯರು ಛಲವಾದಿಗಳು ಗಾಂ
ಧಾರಿಗಾದುದು ಪುತ್ರ ಸಂತತಿಯೆಂಬ ಭೇದದಲಿ
ಧೀರ ಬಿನ್ನವಿಸಿದೆನು ಕಾರ್ಯದ
ಭಾರವನು ನೀ ಬಲ್ಲೆಯಿವಳು ವಿ
ಕಾರಿಯೆನ್ನದಿರೆಂದು ರಾಯನ ಚರಣಕೆರಗಿದಳು  ೩೦

ಲೋಲಲೋಚನೆ ದೃಢ ಪತಿವ್ರತೆ
ಯೇಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ
ಓಲಗಿಸುವುದು ದುಷ್ಕೃತಿಗೆ ನಿ
ಷ್ಪಾಳೆಯವು ಬಳಿಕಹುದು ಮಂತ್ರವಿ
ಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳೆಂದ  ೩೧

ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭವಿಸಿದರೆ ದುಷ್ಕೀರ್ತಿವಧುವೆಂಜಲಿಸಳೇ ಕುಲವ
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭವರ ಪಾರಂಪರೆಗೆ ಗತಿಯೇನೆಂದಳಾ ಕುಂತಿ  ೩೨

ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ
ಪರಮ ವೈದಿಕ ಸಿದ್ಧವಿದು ಸರ
ಸಿರುಹಮುಖಿ ನಿಶ್ಶಂಕೆಯಲಿ ನೀ
ಧರಿಸು ಮುನಿ ಮಂತ್ರೋಪದೇಶವನಿದುವೆ ನಿರ್ದೋಷ  ೩೩

ಆದಡವನಿಪ ಬಿನ್ನಹವು ತನ
ಗಾದಿಯಲಿ ದೂರ್ವಾಸಮುನಿ ಕರು
ಣೋದಯದಲಿತ್ತೈದು ಮಂತ್ರಾಕ್ಷರದ ವರವುಂಟು
ನೀ ದಾಯಾಂಬುಧಿ ನಿನ್ನನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೆನು ಪುತ್ರಕಾಮ್ಯವನೆಂದಳಾ ಕುಂತಿ  ೩೪

ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೇ ನಮ್ಮ ಭಾಗ್ಯವಿ
ದೈಸಲೇ ನೀ ದೃಢ ಪತಿವ್ರತೆಯೆನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೃತ ಶತ್ರು ಪಕ್ಷ ವಿ
ನಾಶರನು ಬೆಸಲಾಗು ಹೋಗೆನ್ನಾಣೆ ಹೋಗೆಂದ  ೩೫

ತರುಣಿ ಪಾಂಡುವಿನಾಜ್ಞೆಯನು ನಿಜ
ಶಿರದೊಳಾಂತು ಸಮಸ್ತ ಮುನಿ ಮು
ಖ್ಯರಿಗೆ ವಂದಿಸಿ ಹರಿ ಹರಬ್ರಹ್ಮಾದಿಗಳಿಗೆರಗಿ
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು
ಚ್ಚರಿಸಿ ನೆನೆದಳು ಯಮನನಾಕ್ಷಣವಾತನೈತಂದ  ೩೬

ಸತಿಯ ಸಮ್ಮುಖನಾಗಿ ವೈವ
ಸ್ವತನು ನುಡಿದನಿದೇಕೆ ನಮ್ಮ
ಕ್ಷಿತಿಗೆ ಬರಿಸಿದೆಯೆನಲು ಲಜ್ಜಾವನತಮುಖಿಯಾಗಿ
ಸುತನ ಕರುಣಿಪುದೆನಲು ಭಯ ಪರಿ
ವಿತತ ವಿಮಲ ಸ್ವೇದಜಲ ಕಂ
ಪಿತೆಯ ಮುಟ್ಟಿ ತಥಾಸ್ತುವೆನುತ ಕೃತಾಂತ ಬೀಳ್ಕೊಂಡ  ೩೭

ಧಾರುಣೀಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವ ಪೂರ್ಣಮಾಸದಲಿ
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ  ೩೮

ನಿರ್ಮಲಿನವಾಯ್ತಖಿಲ ದೆಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ
ದುರ್ಮಹೀಶರ ಹೊತ್ತ ಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನಿಕರ  ೩೯

ಧರಣಿಪತಿ ಧರ್ಮಜನ ಮುಖ ಸಂ
ದರುಶನವ ಮಾಡಿದನು ಹೆಚ್ಚಿದ
ಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿ ತಡಿಗಡಿಗೆ
ಹರಿದು ಪುತ್ರೋತ್ಸವದ ನುಡಿ ಗಜ
ಪುರದೊಳಬ್ಬರವಾಯ್ತು ಪಾಂಡುವಿ
ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ  ೪೦

ಕೇಳಿದಳು ಗಾಂಧಾರಿ ಕುಂತಿಗೆ
ಬಾಲಕೇಳಿ ವಿನೋದವೇ ಕೈ
ಮೇಳವಿಸಿತೇ ಮುನ್ನ ಹಾ ತಪ್ಪೇನು ತಪ್ಪೇನು
ಕಾಳು ಮಾಡಿದನೆನಗೆ ಮುನಿಪತಿ
ಠಳಿಕಾರನಲಾ ಸುಡೀ ಗ  ೪೧

ರ್ಭಾಳಿಗಳನೆಂದಬಲೆ ಹೊಸೆದಳು ಬಸುರನೊಡೆ ಮುರಿದು
ಉದುರಿದವು ಧರಣಿಯಲಿ ಬಲು ಮಾಂ
ಸದ ಸುರಕ್ತದ ಘಟ್ಟಿಗಳು ಖಂ
ಡದ ಸುಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು
ಕೆದರಿದಳು ವಾಮಾಂಘ್ರಿಯಲಿ ನೂ
ಕಿದಳು ಹಾಯ್ಕಿವ ಹೊರಗೆನುತ ನೋ
ಡಿದಳು ಕರೆ ಕೈನೆಯರನೆನುತ ಕಠೋರ ಕೋಪದಲಿ  ೪೨

ತನ ತನಗೆ ನಡು ನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವ ನೂರ ಹೊರಗೆಂಬಾ ಮುಹೂರ್ತದಲಿ
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಾಹಲವಿದೇನೇನೆಂದು ಬೆಸಗೊಂಡ  ೪೩

ಭರತ ಸಂತಾನಕೆ ಕುಮಾರರ
ಹೆರುವೆ ನಾ ಮುನ್ನೆಂದು ಗರ್ಭವ
ಧರಿಸಿದೆನು ನಿಮ್ಮಡಿಯ ಕೃಪೆಯಲಿ ಮಂತ್ರ ಭಾವಿತವ
ವರುಷವೆರಡಾಯ್ತಿ ದರ ಭಾರವ
ಧರಿಸಿದೆನು ದಾಯಾದ್ಯರೊಳಗವ
ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ  ೪೪

ಮರುಳು ಹೆಂಗುಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು
ತರಿಸಿದನು ಘೃತಪೂರಿತದ ಕೊ
ಪ್ಪರಿಗೆಗಳನೊಂದೊಂದನೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ  ೪೫

ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆಂದು
ಕಂತುಪಿತ ಸನ್ನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ  ೪೬

ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈಮುಗಿದು
ಬಯಸಿದಳು ವಾಯುವನು ನಿಜ ಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು  ೪೭

ಬರಿಸಿದುದು ಬೇರೇನು ಸುತನನು
ಕರುಣಿಸುವುದೈಸಲೆಯೆನಲು ಸಂ
ಸ್ಪರುಶನದಿ ಭವದಿಷ್ಟಮಸ್ತುಯೆನುತ್ತಲಂಬರಕೆ
ಮರಳಿದನು ಪವಮಾನನೀ ಪಂ
ಕರುಹಮುಖಿ ಬೆಸಲಾದಳೊಂದೇ
ವರುಷ ಗರ್ಭವ ಧರಿಸಿ ಪರಬಲಕಾಲ ಭೈರವನ  ೪೮

ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭೀಮಸೇನನ ಜನನದದ್ಭುತವ  ೪೯

ಭೀಮನುದಯಿಸಿದಿರುಳು ರಾಯ ಪಿ
ತಾಮಹನು ಜನಿಸಿದನೆಲೈ ನಿ
ಮ್ಮಾ ಮಹಾತ್ಮನ ಹುಟ್ಟು ಬೆದರಿಸಿತಖಿಳಜನಮನವ
ಭೂಮಿ ನಡುಗಿತು ದೆಸೆಗೆ ಹರಿದವು
ಧೂಮಕೇತುಗಳೊದರಿದವು ಬಳಿ
ಕಾ ಮಹಾನಗರದಲಿ ಭರದಲಿ ಭೂರಿ ಗೋಮಾಯು  ೫೦

ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸಮನಂತರದಲುತ್ಪಾತ ಫಲಗತಿಯ
ಭರತವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು  ೫೧

ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ  ೫೨

ಸುತನ ಮೋಹದ ತಿಮಿರವಾ ದು
ಸ್ಥಿತಿಯನೀಕ್ಷಿಸಲೀವುದೇ ದು
ರ್ಮತಿಯೊಳೀತನ ಬಿಸುಡಲೀಸಿದುದಿಲ್ಲ ಗಾಂಧಾರಿ
ಸುತನಿರೀಕ್ಷಣ ಜಾತಕರ್ಮೋ
ಚಿತದ ದಾನಂಗಳಲಿ ಭೂಸುರ
ತತಿಯ ದಣಿಸಿದನನಿಬರಿಗೆ ಗುಣನಾಮಕರಣದಲಿ  ೫೩

ಎನಪ ದುರ್ಯೋಧನನು ದುಶ್ಶಾ
ಸನ ವಿಕರ್ಣ ಸುಬಾಹು ದುಸ್ಸಹ
ಕನಕವರ್ಣ ಸುಷೇಣ ದೀರ್ಘೋದರ ಮಹೋದರನು
ಎನವಿಜಯ ಜಲಸಂಧ ದೃಢವಾ
ಹನ ವಿವಿಂಶತಿ ಕುಂಡಧಾರಕ
ನೆನಲು ನೂರ್ವರ ನಾಮಕರಣವನರಸ ಮಾಡಿಸಿದ  ೫೪

ಜನಪತಿಗೆ ಬಳಿಕೊಬ್ಬ ವೇಶ್ಯಾಂ
ಗನೆಯ ಸುತನು ಯುಯುತ್ಸು ನೂರೊಂ
ದೆನಿಸಿತರಸು ಕುಮಾರಕರು ಗಾಂಧಾರಿಯುದರದಲಿ
ಜನಿಸಿದರು ನೂರೊಂದು ನೂರ್ವರಿ
ಗನುಜೆ ದುಸ್ಸಳೆಯಾದಳಾ ವರ
ಮಾನಿನಿ ಜಯದ್ರಥನರಸಿಯಾದಳು ರಾಯ ಕೇಳೆಂದ ೫೫

ಅತ್ತಲಾ ಹದನಾಯ್ತು ಬಳಿಕಿನ
ಲಿತ್ತ ಧರ್ಮಜ ಭೀಮಸೇನರ
ಹೆತ್ತ ಹರುಷದೊಳಿವರು ಮೆರೆದರು ಪಾಂಡು ಕುಂತಿಯರು
ಮತ್ತೆ ಕೇಳದ್ಭುತವನುರೆ ಮೊರೆ
ವುತ್ತ ಹೆಬ್ಬುಲಿ ವರತಪೋಧನ
ರತ್ತ ಲೈತರೆ ಪಾಂಡು ಕೆಡಹಿದನಾ ಮೃಗಾಂತಕನ  ೫೬

ಆ ಮಹಾ ರಭಸಕ್ಕೆ ಮುನಿಪ
ಸ್ತೋಮವಂಜಿತು ಪರ್ವತಾಗ್ರದ
ಲಾ ಮಹೀಪತಿಯರಸಿ ನಡುಗಿದಳಹಹ ಶಿವಯೆನುತ
ಭೀಮ ಬಿದ್ದನು ತೊಡೆಯ ಮೇಲಿಂ
ದೀ ಮಹಿಗೆ ತಚ್ಬೈಲ ಶಿಲೆ ನಿ
ರ್ನಾಮವಾದುದು ಹಸುಳೆ ಹೊರಳಿದು ಬಿದ್ದ ಭಾರದಲಿ ೫೭

ಶಿಶುವ ತೂಪಿರಿದಳು ನಿವಾಳಿಸಿ
ಬಿಸುಟು ರಜವನು ಮಂತ್ರ ರಕ್ಷಾ
ಪ್ರಸರವನು ಮುನಿಗಳಲಿ ಮಾಡಿಸಿದಳು ಕುಮಾರಂಗೆ
ವಸುಧೆಗತಿ ಬಲನೊಬ್ಬ ಕಂದನ
ಬೆಸಲಹೆನುಯೆಂದೆನುತ ಸಾರಸ
ಲಸಿತ ಕಮಲಾಕರದ ತೀರಕೆ ಬಂದಳಾಕುಂತಿ  ೫೮

ಮಿಂದು ಕಡು ಶುಚಿಯಾಗಿ ಸುಮನೋ
ವೃಂದದೊಳಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರ ಶಕ್ತಿಯಲಿ
ಬಂದನಲ್ಲಿಗೆ ಬಯಕೆಯೇನರ
ವಿಂದಲೋಚನೆ ಹೇಳೆನಲು ಪೂ
ರ್ಣೇಂದುಮುಖಿ ತಲೆವಾಗಿದಳು ಲಜ್ಜಾನುಭಾವದಲಿ  ೫೯

ಸುತನನಿತ್ತೆನು ನಿನಗೆ ಲೋಕ
ತ್ರಿತಯದಲಿ ಬಲುಗೈ ಕಣಾ ಪಶು
ಪತಿಗೆ ಪುರುಷೋತ್ತಮಗೆ ಸರಿಮಿಗಿಲೆಂಬ ಸಂದೇಹ
ಶತಭವಾಂತರ ಪುಣ್ಯತರು ಕಾ
ಮಿತವ ಫಲಿಸಿತು ಹೋಗೆನುತ ಸುರ
ಪತಿ ಲತಾಂಗಿಗೆ ವರವನಿತ್ತಡರಿದನು ಗಗನವನು  ೬೦

ತೀವಿದವು ನವಮಾಸ ವಿಮಲ ವಿ
ಭಾವಸುವಿನುದಯದಲಿ ಶುಭ ಲ
ಗ್ನಾವಲಂಬನ ತಾರೆಯುತ್ತರೆ ಫಲುಗುಣಾಹ್ವಯದ
ಜೀವಕೇಂದ್ರ ಸ್ಥಿತಿದಶಾದಿ
ಗ್ಛಾವಿತಗ್ರಹರಾಶಿಯಿರೆ ಗಾಂ
ಡೀವಿ ಜನಿಸಿದನೊಡನೆ ಜನಿಸಿತು ಜನದ ಸುಮ್ಮಾನ  ೬೧

ದೇವ ದುಂದುಭಿ ಮೊಳಗಿದುವು ಕುಸು
ಮಾವಳಿಯ ಮಳೆ ಸುರಿದುದಾಡುವ
ದೇವ ವಧುಗಳ ಹೊಳೆವ ಕಂಗಳ ಢಾಳ ಮಿಂಚಿದವು
ತೀವಿದುತ್ಸಹವುಬ್ಬರಿಸೆ ಭುವ
ನಾವಳಿಯೊಳಿಂದ್ರಾದಿ ನಿಖಿಳ ಸು
ರಾವಳಿಗಳುರೆ ಕೂಡೆ ಕೊಂಡಾಡಿತು ಧನಂಜಯನ  ೬೨

ರಣಭಯಂಕರನರ್ಜುನನು ಧಾ
ರುಣಿಯೊಳುದಿಸದ ಮುನ್ನ ತಿಂಗಳ
ನೆಣಿಸಿದರೆ ಮೂರಾಯ್ತು ಮಧುರೆಯ ರಾಜಭವನದಲಿ
ಗುಣರಹಿತನಚ್ಯುತನು ವರಶ್ರಾ
ವಣ ಬಹುಳದಷ್ಟಮಿಯಿರುಳು ರೋ
ಹಿಣಿಯಲವತರಿಸಿದನಲೈ ದೇವಕಿಯ ಜಠರದಲಿ  ೬೩

ಈತ ನರಋಷಿ ನಿಖಿಳ ಭುವನ
ಖ್ಯಾತ ನಾರಾಯಣನಲೈ ಬಳಿ
ಕಾತನುರ್ವೀ ಭಾರ ಸಂಹರಣದ ವಿನೋದದಲಿ
ಭೂತಪತಿ ಮೊದಲಾದ ದಿವಿಜ
ವ್ರಾತವೇ ನರರೂಪದಲಿ ಸಂ
ಭೂತವಾದುದು ಕೇಳು ನೃಪ ಕೃಷ್ಣಾವತಾರದಲಿ  ೬೪

ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀ ದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ
ನಾಕ ನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕ ವಿಶ್ರುತರಶ್ವಿನೀ ದೇವರನು ಹರ್ಷದಲಿ  ೬೫

ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ
ಒಂದು ವರುಷಕೆ ಕಿರಿಯರರ್ಜುನ
ಗಿಂದ ಬಳಿಕವತರಿಸಿದರು ಮುನಿ
ವೃಂದ ನೆರೆಪತಿಕರಿಸಿ ಕೊಂಡಾಡಿತು ಕುಮಾರಕರ  ೬೬

ಕರಿತುರಗ ನಿಕರವನು ಕುಲ ಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋ ಮಹಿಷಾದಿ ವಸ್ತುಗಳ
ತರಿಸಿದನು ಕಶ್ಯಪನು ಯೆದು ರಾ
ಯರ ಪುರೋಹಿತನಲ್ಲಿಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಂಗೆ ವಸುದೇವ  ೬೭

ಬಂದನಾ ಕಶ್ಯಪನು ಕುಂತೀ
ನಂದನರ ಕಂಡಖಿಳ ವಸ್ತುವ
ನಂದು ಕಾಣಿಕೆಯಿತ್ತು ಕಂಡನು ಪಾಂಡುಭೂಪತಿಯ
ಅಂದು ವಸುದೇವಾದಿ ಯಾದವ
ವೃಂದ ರೋಹಿಣಿ ದೇವಕಿಯರಾ
ನಂದ ಸುಕ್ಷೇಮವನು ಕುಶಲವನರಸ ಬೆಸಗೊಂಡ  ೬೮

ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲ ಕ್ರಿಯೆಗಳನು ಗಾ
ರ್ಗ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ  ೬೯

ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಬಳಿಕ ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಭೇದ ರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ  ೭೦

ಸಂಕ್ಷಿಪ್ತ ಭಾವ

ಭೀಷ್ಮನು ಧೃತರಾಷ್ಟ್ರನಿಗೆ ಗಾಂಧಾರಿಯನ್ನು ಮತ್ತು ಪಾಂಡುವಿಗೆ ಕುಂತಿಯನ್ನು ತಂದು ವಿವಾಹ ಮಾಡಿಸಿದನು. ಮಾದ್ರಿಯೆಂಬುವಳೂ ಪಾಂಡುವಿನ ಮಡದಿಯಾದಳು. 

ಕಣ್ಣಿಲ್ಲದ ದೃತರಾಷ್ಟ್ರ ಮಕ್ಕಳಿಲ್ಲವೆಂದು ಕೊರಗುತ್ತಿರಲು, ಮುನಿವರನೊಬ್ಬ ಬಂದು ವರಪ್ರಸಾದವನಿತ್ತು ಇದರಿಂದ ನಿನ್ನ ಪತ್ನಿಗೆ ನೂರು ಮಕ್ಕಳಾಗುವರೆಂದ.   ಹೀಗೆ ಗಾಂಧಾರಿ ಗರ್ಭ ಧರಿಸಿದಳು. ಪಾಂಡು ಬೇಟೆಗಾಗಿ ಹೋಗಿದ್ದಾಗ ಮೃಗವೇಷದ ಮಿಥುನ ದಂಪತಿಗಳಿಗೆ ಬಾಣಬಿಟ್ಟು ಶಾಪಕ್ಕೊಳಗಾದನು. ಆ ಬೇಸರ ಹೋಗಿಸಲು ತನ್ನ ಪತ್ನಿಯರೊಂದಿಗೆ ಅರಣ್ಯವಾಸಿಯಾದನು. 
ತನಗೆ ಮಕ್ಕಳು ಆಗುವ ಯೋಗವಿಲ್ಲವೆಂದು ಪಾಂಡು ಚಿಂತಿತನಾಗಿದ್ದಾಗ ಕುಂತಿಯು ಪಡೆದಿದ್ದ ವರಗಳ ಬಗ್ಗೆ ತಿಳಿದು ಅದರಿಂದ ಪುತ್ರರನ್ನು ಪಡೆಯಲು ಸೂಚಿಸಿದನು. ಹೀಗೆ ಯಮನಿಂದ ಧರ್ಮಜ, ವಾಯುವಿನಿಂದ ಭೀಮ, ಇಂದ್ರನಿಂದ ಅರ್ಜುನ ಜನ್ಮ ತಾಳಿದರು. ಮಾದ್ರಿಗೂ ಒಂದು ವರವನ್ನು ಕುಂತಿ ಹಸ್ತಾಂತರಿಸಿ ಅಶ್ವಿನೀ ದೇವತೆಗಳಿಂದ ನಕುಲ ಸಹದೇವರು ಜನಿಸಿದರು. 

ಈ ಮಧ್ಯೆ ಮಥುರೆಯಲ್ಲಿ ದೇವಕಿಯಲ್ಲಿ ಶ್ರೀಕೃಷ್ಣ ಜನಿಸಿ, ಗೋಕುಲದಲ್ಲಿ ನಂದ ಯಶೋದೆಯರಲ್ಲಿ ಬೆಳೆಯತೊಡಗಿದ.  

ಇತ್ತ ಎರಡು ವರ್ಷವಾದರೂ ಗರ್ಭ ಹಾಗೆಯೇ ಇದ್ದುದರಿಂದ ಗಾಂಧಾರಿ ಕೋಪದಿಂದ ಹೊಸಕಿದಾಗ ಪಿಂಡ ಚೂರುಗಳಾಗಿ ಉದುರಿತು. ಆಗ ವ್ಯಾಸಮುನಿ ಬಂದು ಅದನ್ನು ಸರಿಪಡಿಸಿ ನೂರು ಜನ ಮಕ್ಕಳಾಗುವಂತೆ ಮಾಡಿದನು. ಈ ನೂರು ಗಂಡು ಮಕ್ಕಳೊಂದಿಗೆ ದುಸ್ಸಳೆ ಎಂಬ ಹೆಣ್ಣುಮಗಳೂ ಜನಿಸಿದಳು, ಆಕೆಯೇ ಮುಂದೆ ಜಯದ್ರತನ ಪತ್ನಿಯಾದಾಕೆ.  ದೃತರಾಷ್ಟ್ರನಿಂದ ವೇಶ್ಯಾಂಗನೆಗೆ ಯುಯುತ್ಸುವೆಂಬುವನೂ ಹುಟ್ಟಿದನು.
ಹೀಗೆ ಭರತ ವಂಶ ಬೆಳೆಯಿತು.

('ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ