ಭಾರತಕಥಾಮಂಜರಿ5
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ - ಐದನೆಯ ಸಂಧಿ
ವರಮುನಿಯ ಶಾಪದಲಿ ಸರಿದನು
ಸುರರ ನಗರಿಗೆ ಪಾಂಡು ಹಸ್ತಿನ
ಪುರಕೆ ತಂದರು ಪರಮಮುನಿಗಳು ಪಾಂಡುನಂದನರ
ಕೇಳು ಜನಮೇಜಯ ಧರಿತ್ರೀ
ಪಾಲ ಶತಶೃಂಗಾದ್ರಿಯಲಿ ಭೂ
ಪಾಲನಿರ್ದನು ತನ್ನ ವೀರಕುಮಾರಕರು ಸಹಿತ
ವ್ಯಾಳ ವನಗಜ ಸಿಂಹ ವೃಕ ಶಾ
ರ್ದೂಲ ಭಯವನು ಪರಿಹರಿಸಿ ಮುನಿ
ಪಾಳಿಗಾಶ್ರಯವೆನಿಸಿದನು ಪಾವನ ತಪೋವನವ ೧
ಆ ಸಮಸ್ತ ಮುನೀಂದ್ರರೊಡನ
ಭ್ಯಾಸವಾ ದಿವ್ಯಾಶ್ರಮದ ಸಹ
ವಾಸವಾ ತಪವಾ ಕುಮಾರ ಪರಾಕ್ರಮಾಲೋಕ
ಆ ಸಮಂಜಸ ಸತಿಯರಿಬ್ಬರು
ಪಾಸನೆಗಳಾ ವಿಭವಕಿಭಪುರಿ
ಯಾ ಸಮಸ್ತೈಶ್ವರ್ಯವದು ತೃಣವಾಯ್ತು ಭೂಪತಿಗೆ ೨
ಸುತ ವಿನೋದದ ಸಿರಿಗೆ ಅಮರಾ
ವತಿಯ ಸಿರಿ ತೊತ್ತೆಂದು ವಿಮಲ
ವ್ರತ ತಪೋಲಕ್ಷ್ಮಿಗೆ ವಿಲಾಸಿನಿ ಮುಕ್ತಿವಧುವೆಂದು
ಯತಿಪದಾಂಬುಜ ನಿತ್ಯ ಸೇವಾ
ಸತಿಗೆ ದಾಸಿ ಜಗತ್ರಯಾದಿ
ಸ್ಥಿತಿ ಪದವಿಯೆಂದುಬ್ಬಿದನು ಕಲಿಪಾಂಡು ವಿಪಿನದಲಿ ೩
ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ ೪
ತೆಗೆದುದಗ್ಗದ ತಂಪು ನದಿ ಸರ
ಸಿಗಳ ತಡಿಯಲಿ ಹೆಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೂರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ ೫
ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರೆದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ ೬
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ
ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ ೭
ಫಲಿತಚೂತದ ಬಿಣ್ಪುಗಳ ನೆರೆ
ತಳಿತ ಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ ೮
ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು ೯
ಎಗವ ಹೊರೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಿಗಳ ವಳಯವ ಹೊಲ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳೆಂದ ೧೦
ಆ ವಸಂತದೊಳೊಮ್ಮೆ ಮಾದ್ರೀ
ದೇವಿ ವನದೊಳಗಾಡುತಿರ್ದಳು
ಹೂವಿನಲಿ ಸರ‍್ವಾಂಗ ಶೃಂಗಾರದ ವಿಲಾಸದಲಿ
ಆವಳಿವಳೂರ್ವಶಿಯೊ ರಂಭೆಯೊ
ದೇವವಧುಗಳ ಸುಳಿವೊ ತಾನೆನ
ಲಾವ ಚೆಲುವಿಕೆ ಶಿವಶಿವಾಯೆಂದರಸ ಬೆರಗಾದ ೧೧
ತಾಗಿದವು ಶರನಿಕರ ಕಾಮನ
ಲಾಗು ವೇಗವದೆಂತುಟೋ ತೆಗೆ
ಹೂಗಣೆಗಳೈದಲ್ಲ ರೋಮಗಳೆಂಟುಕೋಟಿಯಲಿ
ತೂಗಿ ನೆಟ್ಟವು ಕಣೆಗಳೆಂಬವೊ
ಲಾ ಗರುವನಳುಕಿದನು ಪ್ರಜ್ಞ
ಸಾಗರಂಗಳು ಮಧ್ಯ ಕಟಿ ಜಾನ್ವಂಘ್ರಿ ಮಿತವಾಯ್ತು ೧೨
ಮರೆದು ಹಿಂದೆಲ್ಲವನು ಕುಂತಿಯ
ನರಿಯಲೀಯದೆ ಮೆಲ್ಲಮೆಲ್ಲನೆ
ತುರುಗಿದೆಳಲತೆ ವನದೊಳಾಡುವ ವಧುವ ಸಾರಿದನು
ಸೆರಗ ಹಿಡಿದರೆ ಬೇಡ ಬೇಡೆಂ
ದೆರಗಿದಳು ಚರಣದಲಿ ತರುಣಿಯ
ತುರುಬ ಹಿಡಿದೆತ್ತಿದನು ಹೆಣಗಿದರೊಡನೆ ಝೋಂಪಿಸಿದ ೧೩
ಕೊಂದೆಲಾ ಕಡುಪಾಪಿ ಮರೆದಾ
ಹಿಂದೆ ಮಾಡಿದ ಕೃತ್ಯವನು ಮುನಿ
ಯೆಂದ ನುಡಿ ಹೊಳ್ಳಹುದೆ ಸುಡು ದುರ್ವಿಷಯಕೆಳಸಿದಲಾ
ಬೆಂದುದೇ ನಿನ್ನರಿವು ಧೈರ್ಯವ
ನಿಂದು ನೀಗಿದೆಯಕಟ ನಿನ್ನಯ
ನಂದನರಿಗಾರುಂಟೆನುತ ಹೆಣಗಿದಳು ಲಲಿತಾಂಗಿ ೧೪
ಕೊಂಬುದೇ ಬಯಲರಿತಗಿರಿತದ
ಡೊಂಬಿನಾಗಮ ನೀತಿಗೀತಿಯ
ಶಂಬರಾರಿಯ ಸಬಳವಲ್ಲಾ ಬೇಗೆ ಮೂಡಿದುದು
ಬೆಂಬಿಡದೆ ಮರಳಿದೊಡೆ ಮರುಮೊನೆ
ಗೊಂಬುದೆಂಬವೊಲವನಿಪತಿಯೊ
ತ್ತಂಬರದಿ ಹಿಡಿದಬಲೆಯನು ಕೂಡಿದನು ಕಳವಳಿಸಿ ೧೫
ಆ ಸುಖದ ಝೋಂಪಿನಲಿ ಮೈಮರೆ
ದೋಸರಿಸಿದುದು ವದನ ಕಂಗಳು
ಪೈಸರಿಸಿದವು ತೆಕ್ಕೆ ಸಡಲಿತು ದೇಹ ಬಾರಿಸಿತು
ಸೂಸಿದುದು ನಿಟ್ಟುಸುರು ರಾಣೀ
ವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ ಹದನ ಕಂಡಳು ಕಾಂತೆ ಭೀತಿಯಲಿ ೧೬
ಅಕಟ ಪಾಂಡು ಮಹೀಶ ವಿಷಕ
ನಿನ್ನಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತನಾಡೆಂದೊರಲಿದಳು ಮಾದ್ರಿ ೧೭
ಏನಿದೆತ್ತಣ ರಭಸ ಮಾದ್ರೀ
ಮಾನಿನಿಯೊ ಹಾ ರಾಯನಾವೆಡೆ
ಹಾನಿ ಹಿರಿದುಂಟರಿವೆನಂಗಸ್ಫುರಿತ ಶಕುನದಲಿ
ಏನು ಮಾರಿಯೊ ಶಿವ ಶಿವಾಯೆನು
ತಾ ನಿತಂಬಿನಿ ಗಾಢ ಗತಿಯಲಿ
ಕಾನನದೊಳೈತಂದಳಕ್ಕೆಯ ಸರದ ಬಳಿವಿಡಿದು ೧೮
ಕಂಡಳವರಿಬ್ಬರನು ಧೊಪ್ಪನೆ
ದಿಂಡುಗೆಡೆದಳು ಮೂರ್ಛೆಯಲಿ ಮರೆ
ಗೊಂಡುದೆಚ್ಚರು ಮಾದ್ರಿ ಮಿಗೆ ಹಲುಬಿದಳು ಗೋಳಿಡುತ
ಚಂಡಿಕೆಗಳಲ್ಲಾಡೆ ಹರಿದರು
ಪಾಂಡುನಂದನರೈ ವರೀತನ
ಕಂಡು ಹಾಯೆಂದೊರಲಿ ಹೊರಳಿದರವನಿಪನ ಮೇಲೆ ೧೯
ಬೊಪ್ಪ ದೇಶಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವ ಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆಯಿ
ದೊಪ್ಪುದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು ೨೦
ಕೇಳಿ ಹರಿತಂದುದು ಮುನಿವ್ರಜ
ವೇಳಿಗೆಯ ಕಡು ಶೋಕರಸದ ಛ
ಡಾಳವನು ನಿಲಿಸಿದರು ಸಂತೈಸಿಯೆ ಕುಮಾರಕರ
ಆಲಿಸಿದಳಾ ಕುಂತಿ ಮೂರ್ಛಾ
ವ್ಯಾಳವಿಷ ಪರಿಹರಿಸಿ ಧರಣೀ
ಪಾಲಕನ ನೋಡಿದಳು ಬಿಸುಟೈ ತನ್ನನಿಂದೆನುತ ೨೧
ಅರಸ ತನಗರುಹದೆ ಸುರಸ್ತ್ರೀ
ಯರಿಗೆ ಹರಿದೈ ನಿನ್ನ ವಧುಗಳ
ತುರುಬ ಕೊಯ್ಸುವೆನವರ ತೊತ್ತಿರ ಮಾಡುವೆನು ತನಗೆ
ಅರಸಿ ನೀನೀ ಮಕ್ಕಳನು ಸಂ
ವರಿಸಿ ಕೊಂಡಿಹುದೆಂದು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಕಾಂತೆ ವಿನಯದಲಿ ೨೨
ಮರುಳೆಲೌ ನೀವಕ್ಕ ನಿಮ್ಮೈ
ವರು ಕುಮಾರರು ನಿಮ್ಮ ಕೈಯೆಡೆ
ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ
ಸುರವಧುಗಳೊಡನಿರಲಿ ನಿನ್ನಯ
ಹರಿಬವೆನ್ನದು ನೋಡು ತನ್ನಯ
ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು ೨೩
ಮುನಿಗಳೀಕೆಯ ತಿಳುಹಿ ಮಾದ್ರಿಗೆ
ಜನಪತಿಯ ಸಹಗಮನದಲಿ ಮತ
ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ
ಮುನಿಗಳೇ ಮಾಡಿದರು ಮಾದ್ರೀ
ವನಿತೆ ತನ್ನ ಕುಮಾರರಿಬ್ಬರ
ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು ೨೪
ಪತಿಯ ಸಹಗಮನದಲಿ ಮಾದ್ರೀ
ಸತಿ ಶರೀರವ ಬಿಟ್ಟಳೈವರು
ಸುತರು ಸಹಿತೀ ಕುಂತಿ ಮಿಂದು ಪರೇತಕೃತ್ಯವನು
ಶ್ರುತಿ ವಿಧಾನದೊಳಖಿಳ ಮುನಿಸಂ
ತತಿಗಳನು ಮುಂದಿಟ್ಟು ಮಾಡಿಸಿ
ಸುತರ ಪಾಲಿಸುತಿರ್ದಳಾ ಶತಶೃಂಗ ಶೈಲದಲಿ ೨೫
ಅರಸನಪಗತನಾದನಾ ನೃಪ
ನರಸಿ ಬಾಲಕಿ ಮಕ್ಕಳೈವರು
ಭರತ ಕುಲಜರು ನಾವು ತಪಸಿಗಳಿರ್ಪುದಾರಣ್ಯ
ಅರಿಗಳಾ ರಾಕ್ಷಸರು ನಾವಿ
ನ್ನಿರಿಸುವುದು ಮತವಲ್ಲ ಹಸ್ತಿನ ೨೬
ಪುರದೊಳೊಪ್ಪಿಸಿಬಹುದು ಮತವೆಂದುದು ಮುನಿಸ್ತೋಮ
ಎಂದು ಕುಂತೀದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ
ಮುಂದೆ ಸೂಚಿಸಲುತ್ಸವದಿದಿ
ರ್ವಂದರನಿಬರು ಶುಭ ಮುಹೂರ್ತದೊ
ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ ೨೭
ಇವರ ಜನನ ಕ್ರಮವನಾ ಪಾಂ
ಡುವಿನ ವಿಕ್ರಮವನು ತಪೋಧನ
ನಿವಹ ಕೊಂಡಾಡಿದುದು ಬಳಿಕಿನ ಮರಣಸಂಗತಿಯ
ಅವನಿಪನ ಸಂಸ್ಕಾರ ಮಾದ್ರೀ
ಯುವತಿ ಸಹಗಮನೋರ್ಧ್ವ ದೇಹಿಕ
ವಿವಿಧ ಕೃತ್ಯವನೀ ಪ್ರಪಂಚವನವರಿಗರುಹಿದರು ೨೮
ಮುನಿಗಳಾಕ್ಷಣ ಮರಳಿದರು ತ
ಜ್ಜನಪ ವೃತ್ತಾಂತವನು ವಿವರಿಸೆ
ಜನಜನಿತ ಬಳಿಕುಬ್ಬಿ ಹರಿದುದು ಶೋಕರಸ ಜಲಧಿ
ಜನಪ ಧೃತರಾಷ್ಟ್ರಾದಿ ಬಾಂಧವ
ಜನ ಪುನಃ ಸಂಸ್ಕಾರದಲಿ ಭೂ
ಪನನು ದಹಿಸಿದ ರೂರ್ಧ್ವ ದೇಹಿಕವಾಯ್ತು ಮಗುಳಲ್ಲಿ ೨೯
ಅರಸ ಕೇಳೈ ಭೀಷ್ಮ ಧೃತರಾ
ಷ್ಟ್ರರನು ಬೋಧಿಸಿ ಬಹಳ ಶೋಕ
ಜ್ವರಕೆ ಬಿಡುಗಡೆ ಮಾಡಿದನು ಪಾರಾಶರಿವ್ರತಿಪ
ಕರೆದು ಯೋಜನಗಂಧಿಯನು ನೀ
ವಿರಲು ಬೇಡೌ ತಾಯೆ ನಿಮ್ಮೀ
ಭರತ ವಂಶದೊಳೊಗೆದ ಕಿಚ್ಚುರುಹುವುದು ನೃಪಕುಲವ ೩೦
ಹೇಳಬಾರದು ಮುಂದಣದು ದು
ಷ್ಕಾಲವಿಂದಿಗೆ ನಾಳೆ ನಾಳೆಗೆ
ನಾಳೆ ಬೆಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು
ಕಾಲ ವಿಷಮವು ಕೌರವಕ್ಷಿತಿ
ಪಾಲ ಪಾಂಡು ಕುಮಾರರಲಿ ಕೈ
ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ ೩೧
ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ ೩೨
ಸಂಕ್ಷಿಪ್ತ ಭಾವ
Lrphks Kolar
ಅರಣ್ಯದಲ್ಲಿ ಪಾಂಡು ತನ್ನ ಕುಮಾರರ ಬೆಳವಣಿಗೆಯನ್ನು ನೋಡುತ್ತಾ ಸಂತಸದಿಂದ ಇದ್ದನು. ಹೀಗೇ ಹದಿನಾರು ವರುಷಗಳು ಕಳೆದವು.
ವಿಧಿಯ ಹೊಂಚನ್ನು ಬಲ್ಲವರಾರು? ವಸಂತಕಾಲದ ಆಗಮನವಾಯಿತು. ಎಲ್ಲೆಲ್ಲೂ ಸೌಂದರ್ಯ. ವಸಂತಕಾಲದ ವರ್ಣನೆ ಸೊಗಸಾಗಿದೆ. ಇಂತಹ ಸಮಯದಲ್ಲಿ ಮಾದ್ರಿ ವನದಲ್ಲಿ ಸುಳಿದಾಡುತ್ತಿರುವಾಗ ಪಾಂಡುವಿಗೆ ಅವಳಲ್ಲಿ ಮೋಹ ಉಕ್ಕಿ ಬಂದಿತು. ಮುನಿ ಶಾಪವನ್ನು ನೆನಪಿಸಿದರೂ ಕೇಳದೆ ಅವಳನ್ನು ಕೂಡಿದನು. ಒಡನೆಯೇ ಅವನ ಪ್ರಾಣ ಹೋಯಿತು. ಎಲ್ಲರೂ ಗೋಳಾಡಿದರು. ತನ್ನ ಮಕ್ಕಳನ್ನು ಕುಂತಿ ಮತ್ತು ಧರ್ಮಜರಿಗೆ ಒಪ್ಪಿಸಿ ಮಾದ್ರಿ ಪತಿಯೊಡನೆ ಸಹಗಮನ ಮಾಡಿದಳು.
ಇಂತಹ ವೇಳೆಯಲ್ಲಿ ಇವರುಗಳು ಅರಣ್ಯದಲ್ಲಿ ಇರುವುದು ಸರಿಯಲ್ಲ ಎಂದು ಅಲ್ಲಿನ ಮುನಿಗಳು ಇವರನ್ನು ಹಸ್ತಿನಾಪುರಕ್ಕೆ ಕರೆತಂದು ಭೀಷ್ಮನಿಗೆ ಎಲ್ಲ ವಿಷಯಗಳನ್ನು ಹೇಳಿ ಅವನಿಗೆ ಒಪ್ಪಿಸಿ ವಾಪಸಾದರು. ಒಂದೆಡೆ ಇವರನ್ನು ಕಂಡ ಸಂತಸ, ಇನ್ನೊಂದು ಕಡೆ ಪಾಂಡುವಿನ ಮರಣದ ಶೋಕ. ಕರ್ಮಾಂತರಗಳನ್ನು ನಡೆಸಲಾಯಿತು.
ವ್ಯಾಸಮುನಿಯು ಆಗಮಿಸಿ ಯೋಜನಗಂಧಿಗೆ ಇನ್ನು ಇಲ್ಲಿರುವುದು ಸರಿಯಲ್ಲವೆಂದೂ, ಭವಿಷ್ಯದಲ್ಲಿ ಉಂಟಾಗುವ ಬೆಳವಣಿಗೆಗಳನ್ನು ತಾಳಿಕೊಳ್ಳುವುದು ಕಷ್ಟವೆಂದು ತಿಳಿ ಹೇಳಿ ಅವಳು ತನ್ನ ಸೊಸೆಯರೊಂದಿಗೆ ತಪೋವನಕ್ಕೆ ತೆರಳುವಂತೆ ಮಾಡಿದನು. ಭೀಷ್ಮನು ಪಾಂಡವ ಮತ್ತು ಕೌರವರನ್ನು ಸಲಹತೊಡಗಿದನು.
ಕಾಮೆಂಟ್‌ಗಳು