ಭಾನುಪ್ರಿಯಾ
ಭಾನುಪ್ರಿಯಾ
ಭಾನುಪ್ರಿಯಾ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟಿ, ಕೂಚಿಪುಡಿ ನೃತ್ಯಕಲಾವಿದೆ ಮತ್ತು ಧ್ವನಿ ಕಲಾವಿದೆ.
ಭಾನುಪ್ರಿಯಾ 1967ರ ಜನವರಿ 15ರಂದು ರಾಜಮಂಡ್ರಿಯ ಬಳಿಯ ರಂಗಂಪೇಟಾ ಗ್ರಾಮದಲ್ಲಿ ಜನಿಸಿದರು. ತಂದೆ ಪಾಂಡು ಬಾಬು. ತಾಯಿ ರಾಗಮಾಲಿ. ಭಾನುಪ್ರಿಯಾ ಅವರ ಮೊದಲ ಹೆಸರು ಮಂಗಭಾನು. ಮುಂದೆ ಅವರ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತು. ಅವರ ಹಿರಿಯ ಸಹೋದರ ಗೋಪಿಕೃಷ್ಣ ಮತ್ತು ತಂಗಿ ಚಲನಚಿತ್ರ ಕಲಾವಿದೆ ಶಾಂತಿಪ್ರಿಯಾ.
ಭಾನುಪ್ರಿಯಾ ಕಳೆದ ನಾಲ್ಕು ದಶಕಗಳಲ್ಲಿ 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನವಾಗಿ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿರುವ ಅವರು ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳ ಕೆಲವು ಚಿತ್ರಗಳಲ್ಲೂ ನಟಿಸಿದ್ದಾರೆ
ಭಾನುಪ್ರಿಯಾ ತಮಿಳು ಚಲನಚಿತ್ರ ‘ಮೆಲ್ಲ ಪೆಸುಂಗಲ್’ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಂತರ ತೆಲುಗು ಯಶಸ್ವೀ ಚಿತ್ರ ‘ಸಿತಾರಾ’ದಲ್ಲಿ ಕಾಣಿಸಿಕೊಂಡರು. ಇದು ತೆಲುಗಿನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿತು. 1985ರ 'ಅನ್ವೇಷಣಾ'ದಲ್ಲಿ ಅವರು ಪಕ್ಷಿಶಾಸ್ತ್ರಜ್ಞರಾಗಿ ನಟಿಸಿದರು. 1986ರಲ್ಲಿ, ಅವರು 'ದೋಸ್ತಿ ದುಷ್ಮನಿ' ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. 1988ರಲ್ಲಿ, ಅವರು ಮಹಾನ್ ನಿರ್ದೇಶಕ ಕೆ. ವಿಶ್ವನಾಥ್ ಅವರ 'ಸ್ವರ್ಣಕಮಲಮ್'ನಲ್ಲಿ ಅದ್ಭುತವಾಗಿ ನಟಿಸಿ ಜನಪ್ರಿಯರಾದರು. ಇದು 1988ರ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಮತ್ತು ಆನ್ ಆರ್ಬರ್ ಫಿಲ್ಮ್ ಫೆಸ್ಟಿವಲ್‌ನ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದ ಅಭಿನಯ ಅವರಿಗೆ ಅನೇಕ ಪ್ರಸಸ್ತಿಗಳನ್ನು ತಂದಿತು.
ಭಾನುಪ್ರಿಯಾ ಅವರು ರವಿಚಂದ್ರನ್ ಅವರೊಂದಿಗೆ 'ರಸಿಕ', ವಿಷ್ಣುವರ್ಧನ್ ಅವರೊಂದಿಗೆ 'ಸಿಂಹಾದ್ರಿಯ ಸಿಂಹ',`ಕದಂಬ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಭಾನುಪ್ರಿಯಾ ಅವರು ಕಿರುತೆರೆಯಲ್ಲೂ ಅಭಿನಯಿಸಿದ್ದು ಪ್ರಸಿದ್ಧ ರಾಮಾಯಣ ಕಥಾನಕದ ವಿಶ್ವಾಮಿತ್ರ ಪ್ರಸಂಗದ ಮೇನಕೆಯಾಗಿ ಅವರ ಉಪಸ್ಥಿತಿ ಪ್ರಖ್ಯಾತವಾದುದು.
ಭಾನುಪ್ರಿಯಾ ಅವರಿಗೆ 'ಸ್ವರ್ಣಕಮಲಂ' ಚಿತ್ರದ ಅಭಿನಯಕ್ಕೆ 'ಇಂಡಿಯನ್ ಎಕ್ಸ್‌ಪ್ರೆಸ್ ಪ್ರಶಸ್ತಿ', 'ನಂದಿ ಪ್ರಶಸ್ತಿ' ಮತ್ತು 'ಫಿಲ್ಮ್‌ಫೇರ್ ಪ್ರಶಸ್ತಿ' ಸಂದವು. 1989 ಮತ್ತು 1991ರಲ್ಲಿ, ತಮಿಳಿನ 'ಆರಾರೋ ಆರಿರಾರೋ' ಮತ್ತು ‘ಅಳಗನ್’ ತಮಿಳು ಚಿತ್ರಗಳ ಅಭಿನಯ ಅವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಂದವು. ಇವರಿಗೆ ಜೀವಮಾನ ಸಾಧನೆಯ ಗೌರವಗಳೂ ಸಂದಿವೆ.
On the birth day of actress Bhanupriya
ಕಾಮೆಂಟ್‌ಗಳು