ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರಿಹರಪ್ರಿಯ


 ಪುಸ್ತಕಮನೆ ಹರಿಹರಪ್ರಿಯ


ಹರಿಹರಪ್ರಿಯ ಅಗಾಧವಾಗಿ ಕನ್ನಡ, ತೆಲುಗು ಸಾಹಿತ್ಯ ಓದಿದವರು, ಲಕ್ಷಾಂತರ ಪುಸ್ತಕಗಳ ದೊಡ್ಡ ಸಂಗ್ರಹಮಾಡಿರುವವರು. ಪ್ರಗತಿಶೀಲರಾಗಿ ಬರವಣಿಗೆ, ಸಾಹಿತ್ಯ ಉಪನ್ಯಾಸಗಳಲ್ಲಿ ಮತ್ತು ಸಮಾಜಪರ ಚಟುವಟಿಕೆಗಳಲ್ಲಿ ನಿರಂತರ ಕ್ರಿಯಾಶೀಲರಾಗಿರುವವರು. 

ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು.  1952ರ ಜನವರಿ 20 ರಂದು ಮೈಸೂರಿನಲ್ಲಿ ಜನಿಸಿದ ಅವರು ಬೆಳೆದದ್ದು ಮಂಡ್ಯದಲ್ಲಿ.  ತಂದೆ ಆಂಜನೇಯ ಗುಡಿಯ ಅರ್ಚಕರಾಗಿದ್ದರು. ತುಂಡು ಹೊಲವೊಂದು ಇದ್ದರೂ, ಪುಂಡ ಜನಗಳ ನಡುವೆ ಬೇಸಾಯ ಮಾಡುವುದು ಆಗದೆ, ಊರೂರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೈಸೂರು, ಮಂಡ್ಯ, ಕೃಷ್ಣರಾಜಪೇಟೆ, ನಾಗಮಂಗಲ, ಕಿಕ್ಕೇರಿ, ಹೊಳೆನರಸೀಪುರ, ಕೊನೆಗೆ ಬೆಂಗಳೂರು, ಹೀಗೆ ತಿರುಗುತ್ತ ಕೊಟ್ಟವರ ಮನೆಯಲ್ಲಿ ಊಟ ಮಾಡುತ್ತ, ಹರಿಹರಪ್ರಿಯರು ತಮ್ಮ ಶಿಕ್ಷಣವನ್ನು ಹನ್ನೊಂದನೆಯ  ತರಗತಿಯವರೆಗೆ ಪೂರೈಸಿದರು. ಮುಂದೆ  ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದರು.  ಹರಿಹರಪ್ರಿಯ ಮಾಡದ ವೃತ್ತಿ ಇಲ್ಲ. ಸೊಸೈಟಿ ಗುಮಾಸ್ತೆಗಿರಿ, ಪತ್ರಿಕಾ ವರದಿಗಾರ, ವಾಚನಾಲಯದಲ್ಲಿ ಸಹಾಯಕ, ಮುದ್ರಣಾಲಯದಲ್ಲಿ ಪ್ರೂಫ್ ರೀಡರ್, ಹಲವು ಸಾಹಿತಿಗಳ ಬಳಿ ಶುದ್ಧ ಪ್ರತಿ ತಯಾರಕ, ಚಲನಚಿತ್ರ ನಿರ್ಮಾಣದಲ್ಲಿ ಸಹಾಯಕ ಹೀಗೆ , ಹೊಟ್ಟೆಪಾಡಿಗಾಗಿ ಹತ್ತು ಹಲವು ಕೆಲಸಗಳಲ್ಲಿ ಕೈಯಾಡಿಸಿದರು. 

ಪುಸ್ತಕ ಸಂಗ್ರಹಕಾರ, ಸಾಹಿತಿ, ಕವಿ, ವಿಮರ್ಶಕ, ಭಾಷಣಕಾರ ಹೀಗೆ ಹಲವು ರೀತಿಗಳಲ್ಲಿ ಏಕೀರ್ಭವಿಸಿರುವ ಹರಿಹರಪ್ರಿಯರು ತಮ್ಮನ್ನು  ಒಬ್ಬ ಸಾಮಾಜಿಕ-ಸಾಂಸ್ಕೃತಿಕ ಬರಹಗಾರ ಎಂದು ಕಂಡುಕೊಳ್ಳಲು ಆಶಿಸುತ್ತಾರೆ.

’ಪುಸ್ತಕಮನೆ’ ಎನ್ನುವುದು ಅವರ ಅಪರೂಪದ ಪುಸ್ತಕ ಸಂಗ್ರಹ. ಸತತ ಐದು ವರ್ಷಗಳ ಕಾಲ ಪುಸ್ತಕ ಪ್ರದರ್ಶನ ನಡೆಸಿದ ದಾಖಲೆ ಅವರದು. ಅಪರೂಪದ ಸಾಹಿತ್ಯ ಕೃತಿಗಳ ಮತ್ತು ವ್ಯಕ್ತಿಗಳ ಬಗ್ಗೆ ಅಧಿಕೃತ ಮಾಹಿತಿ ನೀಡಬಲ್ಲ ಮಾಹಿತಿಕೋಶ ಎಂದೇ ಅವರು ಖ್ಯಾತರು. ಯಾರಿಗಾದರೂ, ಎಲ್ಲೂ ಕಂಡಿರದ ಪುಸ್ತಕವನ್ನು ನೋಡಲೇಬೇಕು-ಓದಲೇಬೇಕು, ಅಧ್ಯಯನಕ್ಕೆ ಬೇಕೇಬೇಕು ಎಂದೆನಿಸಿದಾಗ ಥಟ್ಟನೆ ನೆನಪಿಗೆ ಬರುವುದು ಪುಸ್ತಕಮನೆ. ಹೆಚ್ಚೆಚ್ಚು ಪುಸ್ತಕಗಳನ್ನು ಯಾರು ಬೇಕಾದರೂ ಸಂಗ್ರಹಿಸಿಯಾರು, ಆದರೆ ಕನ್ನಡ ಪುಸ್ತಕಗಳ- ಕನ್ನಡ ಪತ್ರಿಕೆಗಳ ಸಮಗ್ರತೆಯ, ವ್ಯವಸ್ಥಿತ ಜೋಡಣೆಯ ವಿಶ್ವರೂಪ ದರ್ಶನ ಪಡೆಯಬೇಕಾದರೆ ಹರಿಹರಪ್ರಿಯ ಅವರ ಪುಸ್ತಕಮನೆ ನೋಡಬೇಕು ಎಂಬುದು ಪ್ರಖ್ಯಾತ ಮಾತು.

ಹರಿಹರಪ್ರಿಯರು ಹಲವು ವಿಧಗಳಲ್ಲಿ ಸಾಂಸ್ಕೃತಿಕ ಚಳುವಳಿಗಳಲ್ಲಿ ನಿರಂತರ ಪಾತ್ರವಹಿಸಿದವರು. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ಜೆ.ಪಿ.ಚಳುವಳಿ, ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ವಿಕಾಸ ವೇದಿಕೆ, ದಲಿತ ಸಂಘರ್ಷ ಸಮಿತಿ, ಪ್ರಜಾಸಾಹಿತಿ ಬಳಗ ಹೀಗೆ ಹಲವು ಸಂಘಟನೆಗಳಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದಾರೆ. ಕೆನ್ ಕಲಾಶಾಲೆ, ಕಲಾಮಂದಿರಗಳಲ್ಲಿ ಸಾಹಿತ್ಯ, ಕಲಾಚರಿತ್ರೆ ಕುರಿತು ಗೌರವ ಅಧ್ಯಾಪಕರಾಗಿ ಬೋಧಿಸಿದ್ದಾರೆ. 1976ರಲ್ಲಿ “ಕುವೆಂಪು ದರ್ಶನ” ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು. ಆನಂತರ ಕಾಗಿನೆಲೆಯ ಕನಕ ಪ್ರತಿಷ್ಠಾನದ “ಕನಕ ಸ್ಫೂರ್ತಿ” ಮಾಸಪತ್ರಿಕೆಯ ಗೌರವ ಸಂಪಾದಕರು ಹಾಗೂ ರಂಗಭೂಮಿ ಕುರಿತಾದ "ಈ ಮಾಸ ನಾಟಕ" ಪತ್ರಿಕೆಗೂ ಗೌರವ ಸಂಪಾದಕರಾಗಿದ್ದರು.

ತಮ್ಮ 16ನೇ ವಯಸ್ಸಿಗಾಗಲೆ ಸಾಹಿತ್ಯಕೃಷಿ ಆರಂಭಿಸಿದ ಹರಿಹರಪ್ರಿಯರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರೆದಿದ್ದಾರೆ.  ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ, ಮಕ್ಕಳ ಸಾಹಿತ್ಯ, ಅನುವಾದ ಮುಂತಾದ ಬಹು ಪ್ರಕಾರಗಳಲ್ಲಿ ಹರಿಹರಪ್ರಿಯರು ಕೃತಿ ರಚನೆ ಮಾಡಿದ್ದಾರೆ. 

ಹರಿಹರಪ್ರಿಯರ ಸಾಹಿತ್ಯಕ ಕೃತಿಗಳಲ್ಲಿ ಹೇಮಾವತಿ ಎಂಬ ಕಾವ್ಯ, ಬದುಕಗೊಡದ ಜನ ಎಂಬ ಕಾದಂಬರಿ ಇದೆ. ಇವರು ಕುವೆಂಪು, ಕುವೆಂಪು ಪತ್ರಗಳು, ಕುವೆಂಪು ಒಲವು ನಿಲವು, ಡಿ.ಲಿಂಗಯ್ಯನವರ ಸಾಹಿತ್ಯ ಪರಿಚಯ, ಕನ್ನಡದ ಹೇಮಾಹೇಮಿಗಳು, ದೇಸೀಯರು, ಅ.ನ.ಸುಬ್ಬರಾವ್, ಸಮಗ್ರ ವ್ಯಕ್ತಿಚಿತ್ರಗಳು, ಚದುರಂಗರ ಮನಸ್ಸು ಮತ್ತು ಮೌಲ್ಯಗಳು, ಎಸ್. ಎಲ್. ಭೈರಪ್ಪ ಎಂದರೆ ಇಷ್ಟೇ ಮುಂತಾದ ವಿಸ್ತೃತ ಅಧ್ಯಯನಾ ಬರಹಗಳಿವೆ. ಸಾಹಿತ್ಯರಂಗದಲ್ಲಿ ರಾಜಕೀಯ, ಸಾಂಸ್ಕೃತಿಕ ದಾಖಲೆಗಳು, ಸಾಹಿತ್ಯವು ಜೀವನವು, ಕಾಳಜಿ, ಉಪಾದೇಯ,ಬಂಡಾಯ ಮನೋಧರ್ಮ,
ಪರ್ಯಾಯ ಸಂಸ್ಕೃತಿ ಮುಂತಾದ ವಿಚಾರಗಳಿವೆ.  ಸಮಗ್ರ ವಿಚಾರ ವಿಮರ್ಶೆ ಇದೆ.  ಕುವೆಂಪು ರಾಮಾಯಣ ಬರಹಗಾರರ ಪ್ರತಿಕ್ರಿಯೆ, ಕನ್ನಡ ತೆಲುಗು ಸಾಹಿತ್ಯ ವಿನಿಮಯ, ಕಳಕಳಿ,ಗಮಕ ಶಾರದೆ, ಪ್ರಸ್ತುತ, ವರ್ಧಮಾನ ಮುಂತಾದ ವೈವಿಧ್ಯಗಳಿವೆ. ಮಕ್ಕಳಿಗಾಗಿ
'ತಿಳಿ ಹೇಳುವ ಕೃಷ್ಣ ಕತೆಯನು' ಇದೆ. 
ಜಾಬಾಲಿ ವಿಶ್ವನಾಥ ಸಾಹಿತ್ಯೋಪನ್ಯಾಸಗಳು, ರಸರೇಖೆ, ತೇಜೋರೇಖೆಗಳು, ಅಂತರಾಷ್ಟ್ರೀಯ ವ್ಯಕ್ತಿತ್ವಗಳು ಮುಂತಾದವು ತೆಲುಗಿನಿಂದ ಕನ್ನಡದ ಅನುವಾದಗಳು. ಪ್ರಾಚೀನ ಭಾರತದ ಕತೆಗಳು ಇಂಗ್ಲಿಷಿನಿಂದ ಕನ್ನಡದ ಅನುವಾದ. ಪರಿಶೋಧನ ಕನ್ನಡದಿಂದ ತೆಲುಗಿಗೆ ಅನುವಾದ. 'ಸಮಕಾಲೀನ ಇತಿಹಾಸ' ಅವರ ಅಂಕಣಗಳ ಸಂಗ್ರಹ. ತೆಲುಗಿನಲ್ಲಿ ನಾರ್ಲವಾರಿ ಉತ್ತರಾಲು ಎಂಬ ಕೃತಿಯಿದೆ.  ಹೀಗೆ ಅವರದು ವಿಶಾಲಹರವಿನ ಸಾಹಿತ್ಯ ಕೃಷಿ.

ಇಷ್ಟೆಲ್ಲ ಚಟುವಟಿಕೆಗಳ ನಡುವೆ ತಾವಿರುವ ಪರಿಸರದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಗೂಡಿಸಿ ಅವುಗಳಿಗೆ ನಿರಂತರ ಆಡಳಿತಾತ್ಮಕ ಪರಿಹಾರಗಳನ್ನು ಹುಡುಕಿಕೊಡುವುದರಲ್ಲಿ ಸಹಾ ಹರಿಹರಪ್ರಿಯರು ಸದಾ ಮುಂದು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಆಂಧ್ರಪ್ರದೇಶದ ವಿ.ಆರ್. ನಾರ್‍ಲಾ ಪ್ರಶಸ್ತಿ,  ಕಾವ್ಯಾನಂದ ಪುರಸ್ಕಾರ, ವರ್ಧಮಾನ ಪೀಠ ಪ್ರಶಸ್ತಿ, ದೇಜಗೌ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಮುಂತಾದ ಅನೇಕ ಗೌರವಗಳೇ ಅಲ್ಲದೆ ಇಂಡಿಯನ್ ವರ್ಚುಯಲ್ ಅಕಾಡಮಿ ಫಾರ್ ಪೀಸ್ ಆಂಡ್ ಎಜುಕೇಷನ್ ಗೌರವ ಡಾಕ್ಟೊರೇಟ್ ಗೌರವಕ್ಕೆ ಹರಿಹರಪ್ರಿಯರು ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇವರ “ಪುಸ್ತಕದ ಮನೆ”ಯನ್ನು ಸಂಸ್ಥೆ ಎಂದು ಗುರುತಿಸಿ ಗೌರವಿಸಿದೆ.

ಹೀಗೆ ಬಹುಸಾಧನೆಯ ಶಿಖರಪ್ರಾಯರಾದ ಹರಿಹರಪ್ರಿಯರ ಬದುಕು ನಿತ್ಯಸುಂದರವಾಗಿ,  ಪ್ರಸಕ್ತ ಮತ್ತು ಮುಂದಿನ ತಲೆಮಾರುಗಳನ್ನು ನಿರಂತರ ಪ್ರೇರಿಸುತ್ತಿರಲಿ. 

On the birth day of Great book lover and collector, writer, orator and social worker Pustakamane Harharapriya  Sir 🙏

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ