ಭೀಮರಾವ್
ಬಿ.ಎನ್. ಭೀಮರಾವ್
ಬಿ. ಎನ್. ಭೀಮರಾವ್ ಹರಿಕಥಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದವರು.
ಬಿ.ಎನ್. ಭೀಮರಾವ್ 1927ರ ಜನವರಿ 27ರಂದು ಕೊರಟಗೆರೆ ತಾಲ್ಲೂಕಿನ ಸೋಂಪುರದಲ್ಲಿ ಜನಿಸಿದರು. ತಂದೆ ನರಸಪ್ಪ. ತಾಯಿ ಲಕ್ಷ್ಮೀದೇವಿ. ಪ್ರಾರಂಭಿಕ ಶಿಕ್ಷಣ ಗೌರಿಬಿದನೂರಿನಲ್ಲಿ ನಡೆದು ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲದರ್ಜೆ ಗಳಿಸಿದರು. ಟಿ.ಸಿ.ಎಚ್. ತರಬೇತಿ ಪಡೆದ ನಂತರ ಮಧುಗಿರಿಯ ಹೆಣ್ಣುಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿ ಪ್ರಾರಂಭ ಮಾಡಿದರು. ತುಮಕೂರು, ಕೋಲಾರ ಜಿಲ್ಲೆಯಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಜೊತೆಗೆ ಹರಿಕಥಾ ಕಾಲಕ್ಷೇಪ ನಡೆಸುತ್ತ ಭೀಮೇಶದಾಸರೆಂದೇ ಖ್ಯಾತಿ ಗಳಿಸಿದರು.
ಭೀಮೇಶದಾಸರು ಕೇರಳದ ಕಾಸರಗೋಡು ಜಿಲ್ಲೆಯ ಆನಂದಾಶ್ರಮದ ಸಚ್ಛಿದಾನಂದ ಸ್ವಾಮೀಜಿ, ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ, ಸಂತ ಭದ್ರಗಿರಿ ಅಚ್ಯುತದಾಸರು, ವಿಶ್ವಶಾಂತಿ ಆಶ್ರಮದ ಶ್ರೀ ಕೇಶವದಾಸರು, ಶ್ರೀ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಳದವರು, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದವರು, ಕದ್ರಿ ಮಂಜುನಾಥ ದೇವಾಲಯದವರು, ಶೃಂಗೇರಿ ಮಠದ ಆಡಳಿತಾಧಿಕಾರಿಗಳು, ಉಡುಪಿಯ ವಿಶ್ವೋತ್ತಮ ತೀರ್ಥ ಶ್ರೀಪಾದರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ಮಂಗಳೂರಿನ ನಲ್ಲಿಕಾಯಿ ರಾಘವೇಂದ್ರ ಮಠದವರು, ಕಟೀಲು ದುರ್ಗಾ ಪರಮೇಶ್ವರಿ ದೇವಳದವರು, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ಆಂಧ್ರ ಪ್ರದೇಶದ ಅಗಳಿ ಮುಂತಾದವರ ಆಶ್ರಯದಲ್ಲಿ ನಡೆಸಿದ ಹರಿಕಥಾ ಕಾರ್ಯಕ್ರಮಗಳು ಅನೇಕ. ಕೊಡಗು, ಉಡುಪಿ, ಉತ್ತರ ಕನ್ನಡದ ಕಥಾಸಕ್ತರಿಂದ ಆಗಾಗ ಕರೆ ಬರುತ್ತಿತ್ತು. ದತ್ತಾತ್ರೇಯ ಅವತಾರ, ರಾಘವೇಂದ್ರ ವಿಜಯ, ಚಂದ್ರಹಾಸ, ಮಯೂರ ಧ್ವಜ, ಶಮಂತಕಮಣಿ, ಸುಧನ್ವ, ಕೃಷ್ಣರಾಯಭಾರ, ಸತ್ಯನಾರಾಯಣ ಮಹಿಮೆ, ಕನ್ನಿಕಾ ಪರಮೇಶ್ವರಿ ಅವತಾರ, ಗಿರಿಜಾ ಕಲ್ಯಾಣ, ಮಹಿಷಾಸುರ ಮರ್ಧಿನಿ, ಗಣೇಶ ಮಹಿಮೆ ಸೇರಿದಂತೆ ಅನೇಕ ಹರಿಕಥಾ ಕಾರ್ಯಕ್ರಮಗಳನ್ನು ಜನ ಮೆಚ್ಚುವಂತೆ ನಿರೂಪಿಸುತ್ತಿದ್ದರು. ಇವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
Harikatha Vidwan B. N. Bheema Rao ಬ
ಕಾಮೆಂಟ್‌ಗಳು