ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣದೇವರಾಯ


ಕೃಷ್ಣದೇವರಾಯ


ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅರಸು ಮನೆತನಗಳಲ್ಲಿ ಮೂರನೆಯದಾದ ತುಳುವ ವಂಶಕ್ಕೆ ಸೇರಿದ ಮತ್ತು ಆ ಸಾಮ್ರಾಜ್ಯದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧನಾದ ಚಕ್ರವರ್ತಿ. ಇವನ ಆಳ್ವಿಕೆಯ ಕಾಲ 1509-1529. 

ಧರ್ಮರಕ್ಷಣೆಗಾಗಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ತನ್ನ ಧ್ಯೇಯವನ್ನು ಸಾಧಿಸಿತಲ್ಲದೆ ಉನ್ನತ ಕೀರ್ತಿಯನ್ನೂ ಪಡೆಯಿತು. ಶ್ರೀ ಕೃಷ್ಣದೇವರಾಯನ ಆಡಳಿತ ಕಾಲದಲ್ಲಿ ಉಪಸ್ಥಿತರಿದ್ದ‍ ಪೇಸ್ ಮತ್ತು ಮುಂದೆ ಬಂದ ನ್ಯೂನಿಜ್, ಬರ್ಬೊಸ ಮೊದಲಾದ ಪೋರ್ಚುಗೀಸ್ ಪ್ರವಾಸಿಗಳು  ಆ ಕಾಲದ ವೈಭವಗಳ ಬಗ್ಗೆ ವರ್ಣಿಸಿದ್ದಾರೆ.  ದೊರೆ ಸ್ಫುರದ್ರೂಪಿ. ಆತ ಎತ್ತರವಾಗಿಲ್ಲದಿದ್ದರೂ ನಿತ್ಯವೂ ಗರಡಿ ಸಾಧನೆ ಮಾಡುತ್ತಿದ್ದುದರಿಂದ ಬಲವಾದ ಮೈಕಟ್ಟು ಪಡೆದಿದ್ದ. ಮುಖದಲ್ಲಿ ಸಿಡುಬಿನ ಕಲೆಗಳಿದ್ದರೂ ವರ್ಚಸ್ಸು ತುಂಬಿತ್ತು. ವಿದೇಶಿಯರಲ್ಲಿ ಇವನಿಗೆ ತುಂಬ ಗೌರವವಿತ್ತೆಂದೂ ಈತ ನ್ಯಾಯಪರನೆಂದೂ ಹೇಳಲಾಗಿದೆ. ಕತ್ತಿವರಸೆ, ಕುದುರೆ ಸವಾರಿ, ಕುಸ್ತಿ ಇವು ಈ ಈತನ ದಿನಚರಿಗಳಾಗಿದ್ದುವು. ಈತ ಸೂರ್ಯೋದಯಕ್ಕೆ ಮುಂಚೆಯೇ ಅಂಗಸಾಧನೆಗಳಲ್ಲಿ ನಿರತನಾಗುತ್ತಿದ್ದ. ಕೆಲವು ಬಾರಿ ಮುಂಗೋಪಿಯಾದರೂ ಕಾಲವನ್ನು ವ್ಯರ್ಥಮಾಡದೆ ಯಾವಾಗಲೂ ಜನರ ಯೋಗಕ್ಷೇಮವನ್ನೇ ಚಿಂತಿಸುತ್ತಿದ್ದ-ಇದು ಪೇಸನ ಬರಹಗಳಿಂದ ತಿಳಿದುಬಂದಿರುವಂತೆ ಕೃಷ್ಣದೇವರಾಯನ ವ್ಯಕ್ತಿತ್ವ. 

ಕೃಷ್ಣದೇವರಾಯ ಜನಿಸಿದ್ದು 1471ರ ಜನವರಿ 17ರಂದು ಎಂದು ಹಲವು ಕಡೆ ಕಂಡುಬಂತು.

ಕೃಷ್ಣದೇವರಾಯನ ರಾಜ್ಯಾರೋಹಣದ ವಿಷಯವಾಗಿ ಜನಜನಿತವಾದ ಕಥೆಯೊಂದಿದೆ. ಇವನಿಗೆ ಹಿಂದೆ ದೊರೆಯಾಗಿದ್ದ ಇಮ್ಮಡಿ ನರಸಿಂಹ ತನ್ನ 8 ವರ್ಷದ ಮಗನಿಗೆ ಪಟ್ಟ ಕಟ್ಟುವ ಸಲವಾಗಿ, ಬಲತಮ್ಮನಾದ ಕೃಷ್ಣದೇವನನ್ನು ಕೊಂದು ಅವನ ಕಣ್ಣುಗುಡ್ಡೆಗಳನ್ನು ತನಗೆ ತೋರಿಸುವಂತೆ ಮಂತ್ರಿ ಸಾಳುವ ತಿಮ್ಮರಸನಿಗೆ ಆಜ್ಞಾಪಿಸಿದುದಾಗಿಯೂ ಮಂತ್ರಿ ಇವನನ್ನು ಗೋಪ್ಯವಾಗಿಟ್ಟು ಮೇಕೆಯ ಕಣ್ಣುಗುಡ್ಡೆಗಳನ್ನು ದೊರೆಗೆ ತೋರಿಸಿದನೆಂದೂ ನರಸಿಂಹ ನೆಮ್ಮದಿಯಿಂದ ಸತ್ತ ಅನಂತರ ಕೃಷ್ಣದೇವನಿಗೆ ಪಟ್ಟಕಟ್ಟಿದುದಾಗಿಯೂ ಈ ಕಥೆ ತಿಳಿಸುತ್ತದೆ. ಇದನ್ನು ನ್ಯೂನಿಜ್ ಬರೆದಿಟ್ಟಿದ್ದಾನೆ. ಆದರೆ ಇದನ್ನು ಸಮರ್ಥಿಸುವ ಐತಿಹಾಸಿಕ ದಾಖಲೆಗಳು ಯಾವುವೂ ದೊರಕಿಲ್ಲ. ಆ ಸೋದರರಲ್ಲಿ ಅನ್ಯೋನ್ಯತೆ ಇದ್ದುದಾಗಿಯೂ ತಿಳಿದು ಬರುತ್ತದೆ.

ಕೃಷ್ಣದೇವರಾಯ ಪಟ್ಟಕ್ಕೆ ಬಂದೊಡನೆ ಸೈನ್ಯವನ್ನು ಸುವ್ಯವಸ್ಥೆಗೊಳಿಸಿ ಯುದ್ಧ ನಿರತನಾಗಬೇಕಾಯಿತು. ದಕ್ಷಿಣದಲ್ಲಿ ಉಮ್ಮತ್ತೂರಿನ ಗಂಗರಾಜನ ಮೇಲೆ ಮಾಡಿದ ಯುದ್ಧದಲ್ಲಿ (1510-1512) ಉಮ್ಮತ್ತೂರು, ಪೆನುಗೊಂಡೆ, ಶಿವಸಮುದ್ರ ಮತ್ತು ಶ್ರೀರಂಗಪಟ್ಟಣಗಳು ಇವನ ವಶವಾದುವು. ಈ ಪ್ರದೇಶಗಳನ್ನು ಶ್ರೀರಂಗಪಟ್ಟಣ ಪ್ರಾಂತ್ಯವನ್ನಾಗಿ ಮಾಡಲಾಯಿತು. ಅನಂತರ ಈತ ಪೂರ್ವ ದೇಶಕ್ಕೆ ನುಗ್ಗಿ ಕೊಂಡವೀಡು, ಉದಯಗಿರಿ ಕೋಟೆಗಳನ್ನು ಹಿಡಿದು, ಪ್ರತಾಪರುದ್ರ ಗಜಪತಿಯನ್ನು ಸೋಲಿಸಿ, ಅವನ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದ. ಈ ವಿಜಯದ ಅನಂತರ 1514ರಲ್ಲಿ ತಿರುಮಲೈಗೆ ಹೋಗಿ ಶ್ರೀ ವೆಂಕಟೇಶ್ವರನಿಗೆ ಕಾಣಿಕೆ ಸಲ್ಲಿಸಿದ. ಆ ಸಂದರ್ಭದಲ್ಲಿ ಮಾಡಿಸಲಾದ ಈತನ ಮತ್ತು ರಾಣಿಯರಾದ ತಿರುಮಲಾದೇವಿ ಮತ್ತು ಚಿನ್ನಾದೇವಿಯರ ಪ್ರತಿಮೆಗಳು ಈಗಲೂ ಆ ದೇವಸ್ಥಾನದಲ್ಲಿವೆ. ಮಾಧ್ವ ಯತಿಗಳಾದ ಶ್ರೀ ವ್ಯಾಸರಾಯರು ಆ ಸಂದರ್ಭವನ್ನು ಕೊಂಡಾಡಿ ದೇವರನಾಮಗಳನ್ನು ರಚಿಸಿದ್ದಾರೆ. 

1520ರಲ್ಲಿ ನಡೆದ ರಾಯಚೂರು ಯುದ್ಧದಲ್ಲಿ ಕೃಷ್ಣದೇವರಾಯನಿಂದ ಬಿಜಾಪುರ ಸುಲ್ತಾನ ಸಂಪೂರ್ಣವಾಗಿ ಸೋತ. ಕರ್ಣಾಟಕ ಸಾಮ್ರಾಜ್ಯದ ಎಲ್ಲೆಗಳು ಉತ್ತರದಲ್ಲಿ ಕೃಷ್ಣಾ ಗೋದಾವರಿಗಳವರೆಗೂ ಪೂರ್ವಪಶ್ಚಿಮಗಳಲ್ಲಿ ಸಮುದ್ರತೀರದವರೆಗೂ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ವಿಸ್ತರಿಸಿ ದಕ್ಷಿಣ ಭಾರತದಲ್ಲಿ ಶಾಂತಿ ನೆಲಸಿತು. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಾಧೀಶ್ವರ ಎಂಬ ಬಿರುದು ಕೃಷ್ಣದೇವರಾಯನಿಗೆ ಸಾರ್ಥಕವಾಯಿತು.

ಕೃಷ್ಣದೇವರಾಯ ಪ್ರಖ್ಯಾತನಾಗಿರುವುದು ತನ್ನ ವಿಜಯಯಾತ್ರೆಗಳಿಗಿಂತ ಅಧಿಕವಾಗಿ ತಾನು ಸಂಸ್ಕೃತಿಗೆ ಕೊಟ್ಟ ಪ್ರೋತ್ಸಾಹದಿಂದಾಗಿ. ಈತ ಮಹಮ್ಮದೀಯರಿಂದ ನಾಶವಾಗಿದ್ದ ಸುಪ್ರಸಿದ್ಧ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿ, ಹಿಂದೂಧರ್ಮದ ಪುನರೇಳಿಗೆಗೆ ಕಾರಣನಾದ. ಉದಯಗಿರಿಯಿಂದ ಬಾಲಗೋಪಾಲವಿಗ್ರಹವನ್ನು ತರಿಸಿ ರಾಜಧಾನಿಯಲ್ಲಿ ಪ್ರತಿಷ್ಠಿಸಿದುದಲ್ಲದೆ, ಹಂಪಿಯ ವಿಜಯವಿಠಲಸ್ವಾಮಿಯ ಕಲಾಪೂರ್ಣವಾದ ದೇವಾಲಯವನ್ನು ಕಟ್ಟಿಸಿದ. ಈತ ಎಲ್ಲ ಮತಗಳಿಗೂ ಆಶ್ರಯದಾತನಾಗಿದ್ದ. ಮಾಧ್ವ ಗುರು ವ್ಯಾಸರಾಯರು ವೈಷ್ಣವಮತವನ್ನೂ, ಶ್ರೀವೈಷ್ಣವ ಗುರು ತಾತಾಚಾರ್ಯರು ಶ್ರೀವೈಷ್ಣವ ಮತವನ್ನೂ, ವಲ್ಲಭಾಚಾರ್ಯರು ಶುದ್ಧಾದ್ವೈತ ಮತವನ್ನೂ ಪ್ರಚಾರ ಮಾಡಿದರು. ಪಂಡಿತರಿಂದಲೂ ಕವಿಗಳಿಂದಲೂ ಇವನ ಆಸ್ಥಾನ ತುಂಬಿತ್ತು. ತೆಲುಗು ಸಾಹಿತ್ಯ ಬಹಳ ಮಟ್ಟಿಗೆ ಅಭಿವೃದ್ಧಿ ಹೊಂದಿತು. ಇವರ ಕಾಲ ಸಾಹಿತ್ಯ ರಂಗದಲ್ಲಿ ಸ್ವರ್ಣಯುಗವೆಂದು ಪ್ರಸಿದ್ಧವಾಗಿದೆ. ಪ್ರಸಿದ್ಧರಾದ ಅಲ್ಲಸಾನಿಪೆದ್ದನ, ಪಿಂಗಳಿಸೂರನ, ಮಲ್ಲನ, ತಿಮ್ಮನ, ರಾಮಭದ್ರ, ತೆನಾಲಿ ರಾಮಕೃಷ್ಣ, ಧೂರ್ಜಟಿ, ರುದ್ರಕವಿ ಎಂಬ ಅಷ್ಟದಿಗ್ಗಜರು ಇವನ ಆಸ್ಥಾನವನ್ನು ಅಲಂಕರಿಸಿ ಉದ್ಗ್ರಂಥಗಳನ್ನು ರಚಿಸಿದರು. ಮನುಚರಿತ್ರೆಯನ್ನು ಬರೆದ ಅಲ್ಲಸಾನಿ ಪೆದ್ದನ ಇವರಲ್ಲಿ ಅಗ್ರಗಣ್ಯ. ಕೃಷ್ಣದೇವರಾಯ ಇತರ ಭಾಷೆಗಳಿಗೂ ಇದೇ ರೀತಿಯಾದ ಪ್ರೋತ್ಸಾಹ ನೀಡಿದ. ತಿಮ್ಮಕವಿ ಇವನ ಆಶ್ರಯದಲ್ಲಿ ಕನ್ನಡದಲ್ಲಿ ಗದುಗಿನ ಭಾರತವನ್ನು ಪೂರ್ತಿ ಮಾಡಿದ. ಪುರಂದರದಾಸರು ಅಮೋಘವಾದ ದೇವರನಾಮಗಳನ್ನು ಸೃಷ್ಟಿಸಿದರು. ಸಂಸ್ಕೃತದಲ್ಲಿ ಜಾಂಬವತೀ ಕಲ್ಯಾಣ, ಮದಾಲಸ ಚರಿತ್ರೆ, ಸತ್ಯವಧೂ ಪ್ರೀಣನ, ಸಕಲಕಥಾ ಸಾರಸಂಗ್ರಹಂ, ಜ್ಞಾನಚಿಂತಾಮಣಿ, ರಸಮಂಜರೀ-ಎಂಬ ಗ್ರಂಥಗಳನ್ನೂ ತೆಲುಗಿನಲ್ಲಿ ಅಮುಕ್ತಮಾಲ್ಯದ ಎಂಬ ಕಾವ್ಯವನ್ನೂ ಕೃಷ್ಣದೇವರಾಯನೇ ರಚಿಸಿದನೆಂದು ಹೇಳಲಾಗಿದೆ. ಇವುಗಳಲ್ಲಿ ಸದ್ಯಕ್ಕೆ ದೊರಕಿರುವವು ಜಾಂಬವತೀ ಪರಿಣಯ ಮತ್ತು ಅಮುಕ್ತಮಾಲ್ಯದ. 

ವಿಜಯನಗರದ ಅರಸರ ರಾಜಧಾನಿಯಾಗಿದ್ದ ಹಂಪೆ ತನ್ನ ಶಿಲ್ಪಕಲಾ ವೈಭೋಗವನ್ನು ಕೃಷ್ಣದೇವರಾಯನ ಹಿಂದಿನ ಕಾಲದಿಂದಲೂ ಮೊದಲುಗೊಂಡು, ಈತನ ಯುಗದಲ್ಲಿ ಸಾಕಷ್ಟು ವಿಸ್ತಾರಗೊಂಡು ವೈಭೋಗ ಪಡೆದುಕೊಂಡಿತು.

ಕೃಷ್ಣದೇವರಾಯನ ವೈಭವ ಭಾರತದ ಚರಿತ್ರೆಯಲ್ಲಿ ಚಿರಸ್ಮರಣೀಯವಾದುದು. 

ಮಾಹಿತಿ ಕೃಪೆ: ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ

On the birth anniversary of great name in history Sri Krishnadevaraya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ