ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ14


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 13

*ಸಂಕ್ಷಿಪ್ತ ಭಾವ*

ಮಾಧವನ ಬರವಿಗಾಗಿ ಪರಿತಪಿಸುತ್ತಿರುವ ರಾಧೆಯ ವಿಲಾಪದ ನುಡಿಗಳು ಇಲ್ಲಿವೆ.

ಚಂದ್ರೋದಯವಾಗಿದೆ. ಬೆಳದಿಂಗಳು ಎಲ್ಲೆಡೆ ಪಸರಿಸುತ್ತಿದೆ. ನುಡಿದಂತೆ ಕಾಲಕ್ಕೆ ಸರಿಯಾಗಿ ಮಾಧವನು ಬರದಿದ್ದರೆ ಈ ರೂಪವಿದ್ದು ಫಲವೇನು? ಈ ಹರೆಯವು ಹಾಳು ಎನ್ನುವಳು. ಯಾರು ಬರುವರೆಂದು ನಾನು ಈ ರಾತ್ರಿಯಲ್ಲಿ ಅಲೆದೆನೋ, ಕುಸುಮಶರನ ಬಾಧೆಯಲ್ಲಿ ಬೆಂದೆನೋ ಅವನು ಬರಲಿಲ್ಲವಾಗಿ ನನಗಿನ್ನು ಮರಣವೇ ಮಹಾನವಮಿ. ನಾನು ಬದುಕಿದ್ದು ಪ್ರಯೋಜನವಿಲ್ಲವೆನ್ನುವಳು.

ಮಧುರವಾದ ಈ ರಾತ್ರಿಯು ನನ್ನನ್ನು ಪರಿಭವಕ್ಕೆ ಒಳಮಾಡಿರುವುದು. ಯಾರೋ ಪುಣ್ಯವಂತೆ ಮುರಾರಿಯನ್ನು ಪಡೆದಿರುವಳು ಎಂದು ಶಂಕಿಸುವಳು.

ಈ ಒಡವೆಗಳೆಲ್ಲವೂ ಹರಿಯ ವಿರಹದಿಂದ ದೂಷಣಗಳಾಗಿರುವವು. ಸುಕುಮಾರಳಾದ ನನ್ನನ್ನು ಕೊರಳ ಸರವೂ ಇರಿಯುತ್ತಿಹುದು. ಬಿದಿರು ಬೆಳೆದಿರುವ ಈ ಮೆಳೆಯಲ್ಲಿ ಹೆದರದೆ ನಾನು ಬಂದು ನಿಂತು ಕಾದಿರುವೆನು. ಆದರೆ ಹರಿಯು ಇದನ್ನು ಗಮನಿಸುವನೆ ಇಂದು? 

ಜಯದೇವ ಕವಿಯು ಹರಿಚರಣಗಳಲ್ಲಿ ಶರಣಾಗಿ ರಚಿಸಿದ ಈ ನುಡಿಗಳು ಕಲಾವತಿಯಾಗಿ ವಾಣಿಯಲ್ಲಿ ನೆಲೆಸಿರಲಿ.

*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಳಿಜನವಂಚಿತಳು ನಾನಾರ ಮರೆಹೊಗಲಿ ಹೇಳು 
ನುಡಿದಂತೆ ಕಾಲಕೆ ಮುರಾರಿ ಅಹ ವನಕೆ ಬರದಿರಲು 
ಅಮಲತರ ರೂಪವಿರಲೇನು ಫಲ ಹರೆಯವಿದು ಹಾಳು. 1

ಅವನೈತಹನೆಂದು ಗಹನವನು ನಿಶಿಯೊಳಾನಲೆದೆ ಕೀಲಿಸಿಹುದೆನ್ನೆದೆಯೊಳಾತನಿಂದ ಸುಮಶರವಿರದೆ. 2

ಕೊನೆಗೆ ಮನೆ ಬರಿದಾಗೆ ಮರಣವೆ ಮಹಾನವಮಿಯೆನಗೆ 
ವಿರಹದುರಿಬೇಗೆಯನು ಬಗೆಗುಂದಿ ಸಹಿಸಿದಪೆನೆಹಗೆ. 3

ಮಧುರಮಧು ನಿಶಿಯನ್ನನಹಹ ಪರಿಭವಿಸುತಿಹುದಿಂತು 
ಕೃತಪುಣ್ಯಳಾವಳೊ ಮುರಾರಿಯನು ಪಡೆಗಳು ಸಮಂತು. 4

ವಲಯಾದಿ ಮಣಿಭೂಷಣಂಗಳಿವು ದೂಷಣಗಳೆಂದು 
ಅಹಹ ಪರಿಗಣಿಸುವೆನು ಹರಿವಿರಹದುರಿಯೊಳುರೆ ನೊಂದು. 5

ಅತಿ ವಿಷಮಲೀಲನೆನುವತನು ಶರಲೀಲೆಯೊಳು ಸಂದು
ಕುಸುಮ ಸುಕುಮಾರಳನು ಕೊರಳ ಸರವಿರಿಯುತಿಹುದಿಂದು. 6

ಬೆತ್ತ ಬೆಳೆದೆಡೆಯೊಳಿದನೆಣಿಸದೆಯೆ ನಿಂದೆ ನಾ ಬಂದು 
ಆದೊಡೇನೆಣ್ಣುವನೆ ನನ್ನನು ಮುರಾರಿ ತಾನಿಂದು. 7

ಹರಿಚರಣ ಶರಣ ಜಯದೇವಕವಿ ವಾಣಿ ತಾನುರದೆ 
ಸಲೆ ನಲಿದು ನೆಲಸಿರಲಿ ಕೋಮಲ ಕಲಾವತಿಯ ತೆರದೆ. 8

*ಮೂಲ ಭಾಗ*
ಗೀತಂ ಅಪ್ಪಪದೀ_13 ನಾಗರನಾರಾಯಣ
 ರಾಸಾವಲಯಮ್
ಮಾಲವರಾಗ, ಯತಿತಾಲ

ಕಥಿತಸಮಯೇsಪಿ ಹರಿರಹಹ ನ ಯಯೌವನಂ
ಮಮ ವಿಫಲಮಿದನಮಲರೂಪಮಪಿ ಯೌವನಂ 
ಯಾಮಿ ಹೇ ಕಮಿಹ ಶರಣಂ ಸಖೀಜನವಚನವಂಚಿತಾ ||ಧ್ರುವಮ್||

ಯದನುಗಮನಾಯ ನಿಶಿ ಗಹನಮಪಿ ಶೀಲಿತಂ ತೇನ ಮಮ ಹೃದಯಮಿದಮಸಮಶರಕೀಲಿತಂ ೨

ಮಮ ಮರಣಮೇವ ವರಮಿತಿ ವಿತಥಕೇತನಾ 
ಕಿಮಿತಿ ವಿಷಹಾಮಿ ಏರಹಾನಲಮಚೇತನಾ  ೩

ಮಾಮಹಹ ವಿಧುರಯತಿ ಮಧುರಮಧುಯಾಮಿನೀ 
ಕಾಪಿ ಹರಿಮನುಭವತಿ ಕೃತಸುಕೃತಕಾಮಿನೀ  ೪

ಅಹಹ ಕಲಯಾಮಿ ವಲಯಾದಿಮಣಿಭೂಷಣಂ ಹರಿವಿರಹದಹನವಹನೇನ ಬಹುದೂಷಣಂ  ೫
 ಕುಸುಮಸುಕುಮಾರತನುಮಸಮಶರಲೀಲಯಾ 
ಸ್ರಗಪಿ ಹೃದಿ ಹಂತಿ ಮಾಮತಿವಿಷಮಲೀಲಯಾ  ೬

ಅಹಮಿಹ ನಿವಸಾಮಿ ನಗಣಿತವನವೇತಸಾ ಸ್ಮರತಿಮಧುಸೂದನೋ ಮಾಮಪಿ ನ ಚೇತಸಾ ೭

 ಹರಿಚರಣಶರಣಜಯದೇವಕವಿಭಾರತೀ
ವಸತು ಹೃದಿ ಯುವತಿರಿವ ಕೋಮಲಕಲಾವತೀ ೮

ತತ್ಕಿಂ ಕಾಮಪಿ ಕಾಮಿನೀಮಭಿಸೃತಃ ಕಿಂ ವಾ ಕಲಾಕೇಲಿಭಿ_
ರ್ಬದ್ಧೋ ಬಂಧುಭಿರಂಧಕಾರಿಣಿ ವನಾಭ್ಯರ್ಣೇ ಕಿಮುದ್ಭ್ರಾಮ್ಯತಿ
ಕಾಂತಃ ಕ್ಷಾಂತಮನಾ ಮನಾಗಪಿ ಪಥಿ ಪ್ರಸ್ಥಾತುಮೇವಾಕ್ಷಮಃ ಸಂಕೇತೀಕೃತಮಂಜುವಂಜುಲಲತಾಕುಂಜೇsಪಿ ಯನ್ನಾಗತಃ  ೯

ಅಥಾಗತಾಂಮಾಧವಮಂತರೇಣ
ಸಖೀಮಿಯಂ ವೀಕ್ಷ್ಯ ವಿಚಾದಮೂಕಾಂ
ವಿಶಂಕಮಾನಾ ರಮಿತಂ ಕಯಾsಪಿ
ಜನಾರ್ದನಂ ದೃಷ್ಟವದೇತದಾಹ. ೧೦

ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ 
Lrphks Kolar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ