ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ15


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 14


*ಸಂಕ್ಷಿಪ್ತ ಭಾವ*


ಈ ಭಾಗದಲ್ಲಿ ರಾಧೆಯು ಮಾಧವನೊಂದಿಗೆ ಬೇರೆ ಯಾರೋ ಹೆಣ್ಣು ಸುಖಿಸುತ್ತಿರುವಳೆಂದು ಬಗೆದು ಅದನ್ನು ಬಗೆಬಗೆಯಾಗಿ ಕಲ್ಪಿಸಿಕೊಂಡು ನುಡಿದ ಮಾತುಗಳಿವೆ.


ಯಾರೋ ಅಧಿಕ ಗುಣವುಳ್ಳವಳು ಕಾಮನ ಕೇಳಿಗೆ ತಕ್ಕ ವೇಷದಿಂದ ಕೂಡಿದವಳಾಗಿ, ಕೆದರಿದ ಮುಡಿಯಿಂದ ಉದುರಿದ ಹೂಗಳನ್ನುಳ್ಳವಳು ಹರಿಯೊಂದಿಗೆ ವಿಹರಿಸುತ್ತಿರುವಳು.


ಹರಿಯ ಅಪ್ಪುಗೆಯಿಂದ ಅನುರಾಗದಿಂದ ನಲಿಯುತ್ತ ದೊಡ್ಡದಾದ ಕುಂಭಕುಚಗಳ ಮೇಲೆ ಆಡುತ್ತಿರುವ ಹಾರದಿಂದ ಶೋಭಿಸುತ್ತಿರುವಳು.


ಚಂದ್ರಮುಖಿಯಾದ ಅವಳ ಮುಂಗುರುಳುಗಳು ನಲಿಯುತ್ತಿರಲು ಹರಿಯ ಅಧರಾಮೃತದ ಪಾನದಿಂದ ಮೈ ಮರೆತಿರುವಳು.


ಕುಂಡಲದ ಕಾಂತಿಯು ಕೆನ್ನೆಗಳಲ್ಲಿ ಪ್ರತಿಫಲಿಸಿರಲು ಜಘನದಲ್ಲಿನ ಒಡ್ಯಾಣದ ಘಲ್ ಘಲ್ ಸದ್ದಿನಲ್ಲಿ ಮೆರೆಯುವವಳು.


ಪ್ರಿಯನ ಮುಖಾವಲೋಕನದಲ್ಲಿ ನಾಚುತ್ತ, ನಗುತ್ತ, ರತಿಸುಖದಲ್ಲಿ ಸುಖದ ಶಬ್ದಗಳನ್ನು ಹೊರಡಿಸುತ್ತ ನಲಿಯುತ್ತಿರುವಳು.


ರೋಮಾಂಚನಗೊಳ್ಳುತ್ತ, ಒಲಿಯುತ್ತ, ನಿಡಿದಾದ ಉಸಿರನ್ನು ಬಿಡುತ್ತ ಕಣ್ಣನ್ನು ಮುಚ್ಚಿ ಸುಖಿಸುತ್ತಿರುವಳು.


ಸುಖದ ಆವೇಗದಲ್ಲಿ ಬೆವರಿದ ಮೈಯಿನ ಅವಳು ಪತಿಯ ಎದೆಯಲ್ಲಿ ರಭಸವಾಗಿ ಅಪ್ಪುವಳು.


ಹೀಗೆ ರಾಧೆಯ ಕಲ್ಪನೆಯ ಹೆಣ್ಣಿನ ವರ್ಣನೆಯನ್ನು ಜಯದೇವಕವಿಯು ಹಾಡಿರುವನು. ಹರಿಕೇಳಿಯ ಈ ನುಡಿಗಳು ಎಲ್ಲ ದೋಷಗಳನ್ನೂ ಪರಿಹರಿಸಲಿ.


*ಪರಮೇಶ್ವರ ಭಟ್ಟರ ಕನ್ನಡ ರೂಪ*

ಅಷ್ಟಪದಿ ೧೪


ಯುವತಿಯದಾವಳೊ ಅಧಿಕಗುಣಾನ್ವಿತೆ ವಿಹರಿಪಳಾ ಮಧುರಿಪುವೆರೆದು 

ಕಾಮನ ಕೇಳಿಗೆ ಒಪ್ಪುವ ವೇಷದೊಳೆಸೆವವಳು ಸುಸಿಲಿನೊಳುದುರಿದ ಹೂಗಳ ಕೆದರಿದ ಮುಡಿಯವಳು. 1


ಹರಿಯಪ್ಪುಗೆಯಿಂದೊಗೆದನುರಾಗದೆ ನಲಿದವಳು 

ಕೊಡಮೊಲೆಗಳ ಮೇಲಾಡುವ ಹಾರದೊಳೆಸೆವವಳು. 2


ಚಂದ್ರಾನನದೊಳು ಮಿಳಿರುವ ಮುಂಗುರುಳೆಸೆವವಳು ಹರಿಯಧರಾಮೃತ ಪಾನಾನಂದದೆ ಮೈಮರೆತಿರುವವಳು. 3


ಕದಪಿನೊಳಲೆಯುವ ಕುಂಡಲ ಕಾಂತಿಯೊಳೆಸೆವವಳು 

ಜಘನದ ರಶನದ ಘಲಿಘಲಿರುಲಿಯೊಳು ಮೆರೆವವಳು. 4


ದಯಿತವಿಲೋಕನದೊಳು ಸಲೆ ನಾಚುತೆ ನಗುವವಳು

ಬಹುವಿಧಕೂಜಿತ ರತಿಸುಖದೊಳು ಸಲೆ ನಲಿವವಳು. 5


ಪೊಂಪುಳಿವೋಗುತೆ ಕಂಪನಗೊಳ್ಳುತೆ ಒಲಿವವಳು

ನಿಡಿದುಸಿರೆಳೆಯುತೆ ಕಣ್ಣನು ಮುಚ್ಚುತೆ ನಲಿದವಳು. 6


ಸೇದೆಯ ಬೆವರಿನ ಕಿರುವನಿ ಮಿರುಗುವ ಮೈಯವಳು 

ರತಿ ರಣಧೀರಳು ಪತಿಯುರದೊಳು ಸಲೆ ಹೋರುವಳು. 7


ಶ್ರೀ ಜಯದೇವನು ಹಾಡಿಹನೀ ಹರಿಕೇಳಿಯನು 

ಹರಿ ಪರಿಶಮಿಸಲಿ ಕಲಿಕಲುಷಂಗಳನೆಲ್ಲವನು. 8


*ಮೂಲ ಭಾಗ*

ಗೀತಂ ಅಷ್ಟಪದೀ 14 ಹರಿರಮಿತ ಚಂಪಕ ಶೇಖರಮ್

ಸ್ಮರಸಮರರೋಚಿತವಿರಚಿತವೇಶಾ

ಗಲಿತಕುಸುಮದರವಿಲುಲಿತಕೇಶಾ


ಕಾsಪಿ ಚಪಲಾ ಮಧುರಿಪುಣಾ ವಿಲಸತಿ ಯುವತಿರತ್ಯಧಿಕಗುಣಾ ||ಧ್ರುವಮ್|| ೧

ಹರಿಪರಿರಂಭಣವಲಿತವಿಕಾರಾ

ಕುಚಕಲಶೋಪರಿ ತರಲಿತಹಾರಾ  ೨


ವಿಚಲದಲಕಲಲಿತಾನನಚಂದ್ರಾ ತದಧರಪಾನರಭಸಕೃತತಂದ್ರಾ  ೩

ಚಂಚಲಕುಂಡಲದಲಿತಕಪೋಲಾಮುಖರಿತರಸನಜಘನಗತಿಲೋಲಾ  ೪


ದಯಿತವಿಲೋಕಿತಲಜ್ಜಿತಹಸಿತಾ ಬಹುವಿಧಕೂಜಿತರತಿರಸರಸಿತಾ  ೫

ವಿಪುಲಪುಲಕಪೃಥುವೇಪಥುಭಂಗಾ

ಶ್ವಸಿತನಿಮೀಲಿತವಿಕಸದನಂಗಾ  ೬


ಶ್ರಮಜಲಕಣಭರಸುಭಗಶರೀರಾ

ಪರಿಪತಿತೋರಸಿ ರತಿರಣಧೀರಾ  ೭

ಶ್ರೀಜಯದೇವಭಣಿತಹರಿರಮಿತಂ ಕಲಿಕಲುಷಂ ಜನಯತು ಪರಿಶಮಿತಂ ೮


ವಿರಹಪಾಂಡುಮುರಾರಿಮುಖಾಂಬುಜದ್ಯುತಿರಯಂ ತಿರಯನ್ನಪಿ ವೇದನಾಂ

ವಿಧುರತೀವ ತಮೋತಿ ಮನೋಭುವಃ

ಸುಹೃದಯೇ ಹೃದಯೇಮದನವ್ಯಥಾಮ್  ೯


ಕೃತಜ್ಣತೆ:

1. ಮೂಲ: ಜಯದೇವ ಕವಿಯ 'ಗೀತಗೋವಿಂದ'

 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ

3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ