ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುರೈಯ


 ಸುರೈಯ

ಸುರೈಯ ಪ್ರಸಿದ್ಧ ಹಿಂದಿ ಚಲನಚಿತ್ರ ನಟಿ, ಹಿನ್ನೆಲೆ ಗಾಯಕಿ ಮತ್ತು ನೃತ್ಯ ಸಂಯೋಜಕಿ.  ಇಂದು ಅವರ ಸಂಸ್ಮರಣಾ ದಿನ. 

ಸುರೈಯ 1929 ಜೂನ್ 15ರಂದು ಲಾಹೋರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಸಿಗಲಿಲ್ಲ. ಹತ್ತನೆಯ ವಯಸ್ಸಿಗೆ ಅಭಿನಯಕ್ಕೆ ತೊಡಗಿದರು. ಹದಿನೈದನೆಯ ವರ್ಷಕ್ಕೆ ಪ್ರಸಿದ್ಧ ತಾರೆಯಾದರು. ಗುರು ಮುಖೇನ ಕಲಿಯದಿದ್ದರೂ ಶಾಸ್ತ್ರೀಯ ಸಂಗೀತವನ್ನು ಹಾಡಬಲ್ಲವಳಾಗಿದ್ದರು. ಪ್ರಸಿದ್ಧಗಾಯಕ ಸೈಗಲ್‍ರ ಮಧುರ ಸ್ವರಕ್ಕೆ ಮರುಳಾಗಿದ್ದರು. ಕಾನನ್-ಬಾಲಾ ಖುರ್ಷೀದರ ಹಾಡುಗಳೂ ಎಳವೆಯಲ್ಲಿ ಈಕೆಯ ಮನಸ್ಸಿನ ಮೇಲೆ ತುಂಬ ಪರಿಣಾಮವನ್ನುಂಟುಮಾಡಿದುವು.

ಸುರೈಯ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಕೆ ನಟಿಸಿದ ಮೊದಲ ಚಿತ್ರ ಮಮತಾಜ್ ಮಹಲ್ (1941). ಶಾರದಾ (1942) ಚಿತ್ರಕ್ಕೆ ಗಾಯನ ನೀಡಿದರು. ಇವರು ಹಾಡಿದ 'ಪಂಚೀ ಜಾ ಪೀಚೇ ರಹಾ ಬಚಪನ್ ಮೇರಾ' ಗೀತೆ ಪ್ರಸಿದ್ಧಿಯಾಯಿತು. ಹಮಾರಿ ಬಾತ್ ಎಂಬ ಚಿತ್ರಕ್ಕೆ ನೃತ್ಯ ಸಂಯೋಜಿಸಿದರು. ಇದು ಪ್ರಖ್ಯಾತಿ ಪಡೆಯಿತು. 

1948-49ರಲ್ಲಿ ಸುರೈಯ ಅವರು ನಟಿಸಿದ ಪ್ಯಾರ್ ಕಿ ಜೀತ್, ಬಡೀ ಬೆಹನ್ ಮತ್ತು ದಿಲ್ಲಗಿ ಈ ಮೂರೂ ಚಿತ್ರಗಳು ಒಳ್ಳೆಯ ಹೆಸರನ್ನೂ ಹಣವನ್ನೂ ತಂದು ಕೊಟ್ಟವು; ಆ ಕಾಲಕ್ಕೆ ಇವರು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿದ್ದರು. ಸೊಹ್ರಾಬ್ ಮೋದಿಯವರ ಮಿರ್ಜಾಗಾಲಿಬ್ ಚಿತ್ರದಲ್ಲಿ ಗಾಲಿಬ್‍ನ ಹೆಂಡತಿಯಾಗಿ ಅಮೋಘವಾಗಿ ನಟಿಸಿದ್ದರು. ಈಕೆಯ ಅಭಿನಯವನ್ನು ನೋಡಿದ ಜವಾಹರಲಾಲ್ ನೆಹರೂ ಪ್ರಶಂಸಿಸಿದ್ದರು. ಅನ್ಮೋಲ್‍ಘಡಿ ಈಕೆ ನಟಿಸಿದ ಇನ್ನೊಂದು ಪ್ರಖ್ಯಾತ ಚಿತ್ರ. 

1948ರಲ್ಲಿ ಸುರೈಯ ಜೆ.ಕೆ. ನಂದಾ ಅವರ ಪರವಾನ ಎಂಬ ಚಿತ್ರದಲ್ಲಿ ಸೈಗಲ್‍ರೊಡನೆ ಅಭಿನಯಿಸಿದರು. ಈ ಚಿತ್ರವೂ ಪ್ರಸಿದ್ಧಿಯಾಗಿ ಆ ಕಾಲಕ್ಕೆ ಶತದಿನೋತ್ಸವ ಆಚರಿಸಿತು. ಈಕೆಯ ಶ್ರೇಷ್ಠ ಅಭಿನಯಕ್ಕಾಗಿ ಬಂಗಾರದ ಪದಕ ನೀಡಿ ಸನ್ಮಾನಿಸಲಾಯಿತು (1950). 

ಸಾಹಿತ್ಯ ಕೃತಿಗಳ ಓದು, ಸಂಗೀತ, ಉಮರ್‍ಖಯ್ಯಾಮ್‍ನ ರುಬಾಯತ್ ಗಾಯನ ಮುಂತಾದವು ಸುರೈಯ ಅವರ ಹವ್ಯಾಸಗಳಾಗಿದ್ದುವು. 

ಸುರೈಯ 2004ರ ಜನವರಿ 31ರಂದು ಮುಂಬೈನಲ್ಲಿ ನಿಧನರಾದರು.

On Remembrance Day of great actress, singer and dance composer Suraiya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ