ಮುಕುಂದ್
ಬೆಂಗಳೂರು ಎಸ್. ಮುಕುಂದ್
ಬೆಂಗಳೂರು ಎಸ್. ಮುಕುಂದ್ ಪ್ರಸಿದ್ಧ ರಾಗ ಸಂಯೋಜಕರು ಮತ್ತು ಸಂಗೀತಜ್ಞರು.
ಮುಕುಂದ್ 1938ರ ಜನವರಿ 31ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ರೆವಿನ್ಯೂ ಕಮೀಷನರಾಗಿದ್ದ ಶ್ರೀನಿವಾಸನ್. ತಾಯಿ ಕನ್ನಡ ಹಾಗೂ ತಮಿಳು ಲೇಖಕಿಯಾಗಿ ಪ್ರಸಿದ್ಧರಾದ ಜಯಲಕ್ಷ್ಮೀ ಶ್ರೀನಿವಾಸನ್. ಮುಕುಂದ್ ಅವರು ಓದಿದ್ದು ಬಿ.ಎಸ್ಸಿ.
ಸಂಗೀತದ ಮನೆತನದ ಬಳುವಳಿಯಿಂದಾಗಿ ಮುಕುಂದ್ ಅವರಲ್ಲಿ ನಾಲ್ಕನೆಯ ವಯಸ್ಸಿನಲ್ಲೇ ಹಲವು ರಾಗಗಳನ್ನು ಸುಲಭವಾಗಿ ಹಾಡಬಲ್ಲ ಪರಿಣತಿ ಮೂಡಿತ್ತು. ಆರನೆಯ ವಯಸ್ಸಿನಲ್ಲಿ ಗಾಯನ ಸಮಾಜದ ವೇದಿಕೆ ಏರಿ ಪುರಂದರ ದಾಸರು, ತ್ಯಾಗರಾಜರ ಆರಾಧನೆ ಮಹೋತ್ಸವದಲ್ಲಿ ಆಲಾಪನೆ ಮಾಡಿ, ಕೀರ್ತನೆಗಳನ್ನು ಹಾಡಿ ಸಂಗೀತಗಾರರು, ಸಂಗೀತ ಪ್ರೇಮಿಗಳಿಂದ ಮೆಚ್ಚುಗೆ ಗಳಿಸಿದರು.
ಮುಕುಂದ್ ತಮ್ಮ 13ನೆ ವಯಸ್ಸಿನಲ್ಲಿ ರಾಗಮಾಲಾ ಚಿತ್ರ ಎಂಬ 72 ರಾಗಗಳ ಮೇಳ ಕರ್ತರಾಗ ನಕ್ಷೆಯನ್ನು ರಚಿಸಿ, ಹಾಡುಗಾರರಿಗೆ ಮಹದುಪಕಾರ ಮಾಡಿದರು. ಯಾವುದೇ ರಾಗವನ್ನು ಕ್ರಮ ಪಲ್ಲಟ ಮಾಡಿ ಮತ್ತೊಂದು ರಾಗಕ್ಕೆ ಹಾಡಲು ಅನುವು ಮಾಡಿಕೊಡುವುದೇ ಈ ನಕ್ಷೆಯ ವೈಶಿಷ್ಟ (Permutation Combination).
ಮುಕುಂದ್ ಸಂಸ್ಕೃತ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಯ ಹಾಡುಗಳು ಸೇರಿ ಸುಮಾರು ಮೂರು ಸಾವಿರ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಕೀರ್ತನೆಗಳ ರಚನೆ ಮಾಡಿದ್ದಾರೆ. ಹಲವಾರು ನೃತ್ಯ ರೂಪಕಗಳ ರಚನೆಯನ್ನೂ ಮಾಡಿದ್ದಾರೆ. ಬುದ್ಧ ಚರಿತವನ್ನು ಲೀಲಾ ರಾಮಚಂದ್ರನ್; ಶ್ರೀಕೃಷ್ಣ ಪಾರಿಜಾತವನ್ನು ಲಲಿತಾ ಶ್ರೀನಿವಾಸನ್ ಮತ್ತು ಶಾರದಾರುದ್ರ; ಆಂಡಾಳ್ ಕಲ್ಯಾಣ ಮತ್ತು ಹಿಮ ಶ್ವೇತವನ್ನು ಪದ್ಮಿನಿ ರಾಮಚಂದ್ರನ್; ರುಕ್ಮಿಣಿ ಪರಿಣಯವನ್ನು ಲಲಿತಾ ದೊರೈ; ಅಷ್ಟರಾಗಮಾಲಿಕೆ ವರ್ಣನೆಯನ್ನು ಯು.ಎಸ್. ಕೃಷ್ಣರಾವ್, ಚಂದ್ರಭಾಗಾದೇವಿ ಮುಂತಾದ ನಾಟ್ಯ ಭೂಷಣರು ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ಮುಕುಂದರ ರಚನೆಗಳಿಗೆ ಕೀರ್ತಿ ತಂದವರು.
ಮುಕುಂದ್ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತವನ್ನು ತುಲನಾತ್ಮಕವಾಗಿ ವಿವೇಚಿಸಿ ಕೃತಿ ರಚನೆ ಮಾಡಿದ್ದು ಮದರಾಸಿನ ರಾಮಾನುಜ ಅಯ್ಯಂಗಾರ್, ಪ್ರೊ. ಸಾಂಬಶಿವಮೂರ್ತಿ ಮುಂತಾದ ಸಂಗೀತಜ್ಞರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪುರಂದರ, ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು, ಶಾಮಶಾಸ್ತ್ರಿಗಳ ಕೀರ್ತನೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಪುಣೆ ಮಾಕ್ಸ್‌ಮುಲ್ಲರ್ ಭವನ, ಸಿಮ್ಲಾ, ಬೆಂಗಳೂರಿನ ಗಾಯನ ಸಮಾಜ, ಗಾನಕಲಾ ಪರಿಷತ್ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ.
Great Musician and composer Bengaluru S. Mukund
ಕಾಮೆಂಟ್‌ಗಳು