ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ35


ಕುಮಾರವ್ಯಾಸನ

ಕರ್ಣಾಟ ಭಾರತ ಕಥಾಮಂಜರಿ 

ಸಭಾ ಪರ್ವ - ಹದಿನೈದನೆಯ ಸಂಧಿ


ಸೂ. ಸೋಲದಲಿ ಮನನೊಂದ ಧರಣೀ

ಪಾಲರನು ಸಂತೈಸಿಯಂಧ ನೃ

ಪಾಲ ಕಳುಹಿದರಿವರು ಹೊರವಂಟರು ಪುರಾಂತರವ


ನಿಯತಮತಿ ಚಿತ್ತವಿಸು ಜನಮೇ

ಜಯ ಮಹೀಪತಿ ದೇವತಾ ಭ

ಕ್ತಿಯಲದೇನಾಶ್ಚರ್ಯವೊ ಶಿವಶಿವಾ ಮಹಾದೇವ

ಜಯ ಜಯೆಂದುದು ನಿಖಿಳಜನ ಝಾ

ಡಿಯಲಿ ಝೋಂಪಿಸಿ ಸೆಳೆವ ಸೀರೆಗೆ

ಲಯವ ಕಾಣೆನು ಕರುಣವೆಂತುಟೊ ದೇವಕೀಸುತನ ೧


ಉಗಿದು ಹಾಯ್ಕುವ ಖಳನ ನಿಡುದೋ

ಳುಗಳು ಬಳಿದವಳ್ಳೆ ಹೊಯ್ದವು

ಢಗೆಯ ಡಾವರವಾಯ್ತು ಬಹಳ ಸ್ವೇದಜಲ ಜಡಿಯೆ

ತೆಗೆದು ನಿಂದನು ಸೀರೆಯೊಟ್ಟಿಲು

ಗಗನವನು ಗಾಹಿಸಿತು ಗರುವೆಯ

ಬಗೆಗೆ ಬೀಸರವಿಲ್ಲ ಬೆರಗಾದುದು ಮಹಾಸ್ಥಾನ ೨


ಆ ಮಹಾಸತಿ ಶಿವಶಿವಾ ಲ

ಜ್ಜಾಮಹೋದಧಿ ಬತ್ತುವುದೆ ನಿ

ರ್ನಾಮರೇ ಕುಂತೀಸುತರು ಪಥ್ಯರೆ ಪರಾಭವಕೆ

ಆ ಮುಕುಂದನ ದಿವ್ಯ ನಾಮ

ಪ್ರೇಮ ರಸಕಿದು ಸಿದ್ಧಿಯೆಂದೆನ

ಲಾ ಮಹಾಸ್ಥಾನದಲಿ ಬೆಳೆದುದು ಬೆರಗು ಬಿಂಕದಲಿ ೩


ಅಹಹ ದೈವಪ್ರೇಮವಿದೆಲಾ

ಮಹಿಳೆಯಲಿ ಮಾನವರ ಕೃತಿ ಗೆಲ

ಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ

ಅಹಿತವಹ ಕುರುರಾಜಕುಲ ಘನ

ಗಹನ ಬೀಮ ಧನಂಜಯಾದ್ಯರ

ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ ೪


ಬೆಗಡಿನಲಿ ಮುದಖೇದ ನಯನಾಂ

ಬುಗಳೊಳಾನಂದಾಶ್ರು ಶೋಕದ

ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ

ದುಗುಡದಲಿ ಪಿರತೋಷ ಕಂದಿದ

ಮೊಗದಲುಜ್ಜ್ವಲವೃತ್ತಿ ಭೀಷ್ಮಾ

ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮುಹೂರ್ತದಲಿ ೫


ನೆನೆದೆ ನೀನನುಚಿತವನೀ ಹೊ

ತ್ತಿನಲಿ ದ್ರುಪದಾತ್ಮಜೆಯ ದೈವದ

ನೆನಹಿನಲಿ ದೂರಡಗಿತರೆಬೆಳೆ ಸಾದುದಪಕೀರ್ತಿ

ವನಿತೆಯನು ಬಿಡು ಪಾಂಡುನೃಪ ನಂ

ದನರ ನೀನೊಲಿದಂತೆ ಮಾಡುವು (೬

ದನುನಯವು ನಿನಗೆಂದು ನುಡಿದನು ವಿದುರ ಕುರುಪತಿಗೆ


ದೈವವೀ ದ್ರೌಪದಿಗೆ ಸೀರೆಯ

ನೀವುದಲ್ಲದೆ ಬಿಡಿಸಲಾಪುದೆ

ದೈವತೊತ್ತಿರ ಹುರುಡುಗೆಲಸದ ಹಿಂಡುಗೂಟದಲಿ

ದೈವವಿವಳಿಗೆ ತಾನಲೇ ತ

ನ್ನೈವರಿಕ್ಕಿದ ಮಾತು ರಿಪುಗಳ

ಮೈವಳಿಯ ನುಡಿಗಾರ ನೀ ಸಾರೆಂದನಾ ಭೂಪ ೭


ನೀತಿ ಮರುಳನು ವಿದುರನೀತನ

ಮಾತಿನಲಿ ಫಲವೇನು ತೊತ್ತಿರೊ

ಳೀ ತಳೋದರಿ ಬೆರೆಸಿ ಬದುಕಲಿ ಕರ್ಣ ಕಳುಹಿವಳ

ಈ ತತುಕ್ಷಣ ದೃಷ್ಟಿ ಬಂಧನ

ವೇತರಲಿ ಮಾಡಿದಳೊ ಲಜ್ಜಾ

ಜಾತವುಳಿದುದು ಬೆಳೆದ ಸೀರೆಯ ಕಟ್ಟಿ ಹೊರಿಸೆಂದ ೮


ಇವಳಲೇ ನಮ್ಮಿನಿಬಿರಭಿಮಾ

ನವನು ಸೆಳೆದಳಲಾ ಸ್ವಯಂವರ

ಭವನದಲಿ ಭಂಗಿಸಿದಳೆಮ್ಮನು ಸಭೆಯೊಳೆಡಹಿದರೆ

ಇವಳು ಬಹುವಿಧ ಪುಣ್ಯಶಕ್ತಿಯೊ

ಳೆವಗೆ ಸಿಲುಕಿದಳಿಂದು ತೊತ್ತಿರ

ಸವಡಿವೇಟದ ಸವಿಯ ಸುರಿಯಲಿ ಭಂಡ ಮಿಂಡರಲಿ ೯


ಬೂತುಗೆಡೆವನೊಳೆಂಬೆನೇ ಮರು

ಮಾತನೆಲೆ ಗಾಂಗೇಯ ತಮ್ಮದು

ನೀತಿಯೇ ತಾನಿವರ ಧನವೇ ಧರ್ಮಮಾರ್ಗದಲಿ

ಸೋತನರಸನು ತನ್ನನೆನ್ನನು

ಸೋತುದನುಚಿತವೆಂಬ ಬೆಡಗಿನ

ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ ೧೦


ಸೋತುದಿಲ್ಲಾ ನಿನ್ನ ಸೋತುದ

ನೀತಿಯೆಂಬುದು ವಿಹಿತವೇ ತಾ

ನೀತ ನುಡಿಯಲಿ ಧರ್ಮಪುತ್ರನು ಸತ್ಯಸಂಧನಲೆ

ನೀ ತಳೋದರಿ ತರಿಚುಗೆಡದೀ

ಮಾತಿನಲಿ ತಾ ಬಿಡುವೆನೇ ನಿ

ನ್ನಾತುಗಳ ನುಡಿಸೆಂದು ಖಳ ಧಟ್ಟಿಸಿದನಂಗನೆಯ ೧೧


ಜೀಯ ಮಾತೇನಿವಳೊಡನೆ ರಿಪು

ರಾಯರಿಗೆ ದಾಸತ್ವವಾಗಲು

ಬಾಯಬಡಿಕೆಯದಾರೊಡವೆ ತದ್ದಾಸ ಧನವಲ್ಲ

ಆಯತಾಕ್ಷಿಯನಿನ್ನು ನಿಮ್ಮ ಪ

ಸಾಯಿತೆಯರಲಿ ಕೂಡು ತೊತ್ತಿರ

ಲಾಯಬೇಡುಪಕಾರವೆಂದೆರಗಿದನು ಕಲಿಕರ್ಣ ೧೨


ಎಲೆಗೆ ಭಜಿಸಾ ಕೌರವಾನ್ವಯ

ತಿಲಕನನು ನಿನ್ನವರ ಮರೆ ನಿ

ನ್ನುಳಿವ ನೆನೆಮೀ ಸಮಯದಲಿ ಕಾಲೋಚಿತ ಕ್ರಮವ

ಬಳಸು ನೀನೆನೆ ಗಜರಿದಳು ಕುರು

ತಿಲಕನನು ತರಿದೊಟ್ಟಿ ರಣದಲಿ

ತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ ೧೩


ಏಕೆ ಕೆಣಕಿದೆ ಕರ್ಣ ಬೂತಿನ

ಬೀಕಲಿನ ಬದಗಿಯನು ಸಮರದೊ

ಳೀಕೆಯನಿಲಜ ಮುರಿವನೆನುತವೆ ತನ್ನ ಮುಂಜೆರಗ

ನೂಕಿ ತೊಡೆಗಳ ತೋರಿಸುತ ಲೋ

ಕೈಕ ವೀರನನೇಡಿಸಿದರ ೧೪

ವ್ಯಾಕುಲನ ಮನ ಖಂಡಿಯೋದುದು ಖತಿಯ ಹೊಯ್ಲಿನಲಿ


ನೋಡಿದನು ಪರಿಘವನು ಕಡೆಗ

ಣ್ಣಾಡಿತಿವದಿರ ಮೇಲೆ ಮೈಯಲಿ

ಝಾಡಿಗೆದರಿತು ರೋಮ ಝಳಪಿಸಿತರುಣಮಯ ನಯನ

ಮೂಡಿತುರಿ ಸುಯ್ಲಿನಲಿ ರೋಷದ

ಬೀಡು ಭೀಮನ ಕಂಡು ಧರ್ಮಜ

ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ ೧೫


ಸೈರಿಸಕಟಾ ಭೀಮ ರೋಷ ವಿ

ಕಾರಕಿದು ಹೊತ್ತಲ್ಲ ಸರ್ವ ವಿ

ಕಾರದಲಿ ಕೌರವರು ಮೆರೆಯಲಿ ಕಾಲವವರದಲ

ಧಾರುಣೀಶನ ಧರ್ಮತತ್ವದ

ಸಾರವುಳಿದರೆ ಸಾಕು ಮಿಕ್ಕಿನ

ನಾರಿ ದನವಭಿಮಾನ ಬೇಯಲಿಯೆಂದನಾ ಪಾರ್ಥ ೧೬


ಕ್ಷಮೆಯೆ ಧನವೆಂದಿದ್ದೆವಿವಳಲಿ

ಮಮತೆಯನು ಮಾಡಿದೆವೆ ನಾವು

ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆವಗೆ

ರಮಣಿಯಾಡಿದ ಧರ್ಮಪದವಿದು

ಕುಮತಿಗಳ ಮತವಲ್ಲದಿದ್ದರೆ

ತಮಗೆ ದಾಸಿಯೆ ದ್ರುಪದನಂದನೆಯೆಂದನಾ ಪಾರ್ಥ ೧೭


ಶ್ರುತಿ ತದರ್ಥ ಸ್ಮೃತಿಗಳಲಿ ಪಂ

ಡಿತರು ಪರಿಣತರುಂಟು ಪಾರ್ಥ

ಸ್ಮೃತಿಯ ಬಳಿಕಾದರಿಸುವೆವು ನಿವಗಾದ ದಾಸ್ಯದಲಿ

ಕೃತಕವಿಲ್ಲದೆ ನಡೆದು ತೋರಾ

ಸತಿಯ ಸೆರೆಯನು ಬಿಡಿಸಲೆಮ್ಮೀ

ಕ್ಷತಿಯೊಳಾರುಂಟೆಂದು ಕೌರವರಾಯ ಗರ್ಜಿಸಿದ ೧೮


ಭಾಷೆಯೇಕಿವನೊಡನೆ ದ್ರೌಪದಿ

ದಾಸಿಯಲ್ಲೆಂಬವನ ದಿವಸವ

ದೇಸು ಬಲ ಹೋ ಪೂತು ಮಝ ತಾನಿಂದ್ರಸುತನೆಂಬ

ಐಸರಲಿ ದೇವೇಂದ್ರ ತೃಣ ಗಡ

ವೈಸಲೇ ನೀ ಮುನಿದಡೀ ನುಡಿ

ದಾಸಭಾವದ ಬಣಗುಗಳಿಗೇಕೆಂದನಾ ಕರ್ಣ ೧೯


ನೂಕಿಸಾ ತೊತ್ತಿರ ಮನೆಗೆ ತಡ

ವೇಕೆ ತರುಣಿಯನಿನ್ನು ನೀನು ವಿ

ವೇಕದಲಿ ನನ್ನಂತೆ ತೆಗೆ ಸಾಕಿವರ ಮಾತೇನು

ಈ ಕುಠಾರರ ಕಳುಹಿ ಕಳೆ ತಾ

ವೇಕೆ ನೃಪಸಭೆಯಲಿ ವರಾಸನ

ವೇಕೆನುತ ಕುರುಪತಿಗೆ ನುಡಿದನು ಕರ್ಣ ಖಾತಿಯಲಿ ೨೦


ಅಹುದಲೇ ಬಳಿಕೇನು ನೀನತಿ

ಬಹಳ ಮತಿಯೈ ಕರ್ಣ ನೀನೀ

ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ

ರಹಣಿ ಸಾಕಂತಿರಲಿ ತೊತ್ತಿರ

ಸಹಚರರ ಸೂಳಾಯಿತರ ಕರೆ

ಮಹಿಳೆಯನು ನೂಕೆಂದು ದುಶ್ಶಾಸನಗೆ ನೇಮಿಸಿದ ೨೧


ಸುಳಿವ ಹುಲ್ಲೆಯ ಸೋಹಿನಲಿ ಕು

ಕ್ಕುಳಿಸಿದರೆ ಕುಕ್ಕುರನ ಕೈಯಲಿ

ತಳುವಹುದೆ ಜನಮೇಜಯ ಕ್ಷಿತಿಪಾಲ ನಿನ್ನವರ

ಬಳಲಿಕೆಯನೇನೆಂಬೆನೈ ಹಿಡಿ

ದೆಳೆಯೆ ಹಲುಬಿದಳಕಟ ರಾಯನ

ಲಲನೆಗೀ ವಿಧಿಯೇ ಮಹಾದೇವೆಂದುದಖಿಳಜನ ೨೨


ಮಾಣಿಸೈ ಗಾಂಗೇಯ ಗುರು ನಿ

ಮ್ಮಾಣೆಯಡಿ ಕೃಪ ಕೃಪೆಯ ಮಾಡೈ

ರಾಣಿವಾಸಂಗಳಿರ ನಿಲಿಸಿರೆ ನಿಮ್ಮ ಮೈದುನನ

ಪ್ರಾಣವಿದ ಕೊಳ ಹೇಳಿರೌ ಸಾ

ಕೂಣೆಯವ ಹೊರಲಾರೆನೆನುತಾ (೨೩

ರಾಣಿ ಹಲುಬಿದಳೊಡೆಮುರುಚಿ ಹೆಣಗಿದಳು ಖಳನೊಡನೆ

ಮಾವ ನಿಮ್ಮಯ ನೇತ್ರವಂತ

ರ್ಭಾವದಲಿ ಬೆರಸಿದೊಡೆ ವಿಜ್ಞಾ

ನಾವಲಂಬನ ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ

ದೇವಿಯರಿಗಿದು ಸೊಗಸಲಾ ಸ

ಖ್ಯಾವಳಿಗೆ ಸೇರುವುದಲಾ ನಿ

ರ್ಜೀವರಾದಿರೆ ನೀವೆನುತ ಹಲುಬಿದಳು ಲಲಿತಾಂಗಿ ೨೪


ಕ್ಷಿತಿಯೆ ಬಿಡಿಸಾ ಸೆರಗನೆಲೆ ಪಾ

ರ್ವತಿಯೆ ತನ್ನದು ಧರ್ಮವಾದೊಡೆ

ಗತಿ ತನಗೆ ನೀವಾಗಿರೌ ಕಮಲಾದಿಶಕ್ತಿಗಳೆ

ಸತಿಯಹಲ್ಯಾದಿತಿ ವರಾರುಂ

ಧತಿ ಮಹಾ ಮಾಯಾದಿ ದೇವ

ಪ್ರತತಿ ಬಿಡಿಸಿರೆ ಸೆರಗನೆಂದೊರಲಿದಳು ಪಾಂಚಾಲೆ ೨೫


ಅಂಧನೊಬ್ಬನೆ ಮಾವ ನೀವೇ

ನಂಧರಾದಿರೆ ಪಾಂಡು ಕರುಣಾ

ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ

ಅಂಧಕಾಸುರಮಥನ ನೀನೇ

ಬಂಧಿಸಿದೆಲಾ ಪೂರ್ವ ವರ ಸಂ

ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ ೨೬


ಸೊಸೆಯಲಾ ದೇವೆಂದ್ರಯೆನ್ನಯ

ಘಸಣಿ ಯಾರದು ಹಿರಿಯ ಮಾವನ

ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ

ಉಸುರು ನಿನ್ನಾಧೀನವೀ ದು

ರ್ವ್ಯಸನಿಗಳ ಕೊಂಡಾಡುವರೆ ಕರು

ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ ೨೭


ಮಾವದಿರು ಮೊದಲಾದ ದಿಕ್ಪಾ

ಲಾವಳಿಗೆ ನಮಿಸಿದೆನು ನೈದಿಲ

ತಾವರೆಯ ಮಿತ್ರರಿಗೆ ಮಂಡೆಯೊಳಿಟ್ಟೆನಂಜುಳಿಯ

ಕಾವುದೆನ್ನನು ಹೆಂಗುಸಲ್ಲಾ

ಹಾವು ಹಲಬರ ನಡುವೆ ಸಾಯದು

ದೇವರಿಗೆ ದೂರೈದಲೆಂದೊರಲಿದಳು ಲಲಿತಾಂಗಿ ೨೮


ಬಾಯ ಬಿಡಲೇಕಕಟ ಬಳಲಿದೆ

ತಾಯೆ ಕೈದೋರಿಸರು ನಿನ್ನಯ

ರಾಯರೈವರು ಕೆಲಬಲದ ಜನರೇನು ಮಾಡುವರು

ನ್ಯಾಯ ನಿನ್ನದು ದೈವದೊಲುಮೆಯ

ದಾಯ ತಪ್ಪಿತು ಬರಿದೆ ಧೈರ್ಯದ

ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ ೨೯


ಎಲೆಗೆ ನಿನ್ನವರೇನ ಮಾಡುವ

ರೊಲೆಯೊಳಡಗಿದ ಕೆಂಡವಿವರ

ಗ್ಗಳಿಕೆ ನಂದಿದುದೆನುತ ಮುಂಜೆರಗೆತ್ತಿ ಮಾನಿನಿಗೆ

ಖಳನು ತೊಡೆಗಳ ತೋರಿಸಿದೊಡತಿ

ಮುಳಿದು ಕೊಟ್ಟಳು ಶಾಪವನು ನಿ (೩೦

ನ್ನಳಿವು ತೊಡೆಯಲಿ ಮುಗಿವುದೆಂದಳು ಮುಗುದೆ ಖಾತಿಯಲಿ


ಕಡಲ ತೆರೆಗಳ ತರುಬಿ ತುಡುಕುವ

ವಡಬನಂದದಿ ಮೇಘಪಟಲವ

ನೊಡೆದು ಸೂಸುವ ಸಿಡಿಲಿನಂದದಿ ಸಭೆಯೊಳಡಹಾಯ್ದು

ಕುಡಿ ಕುಠಾರನ ರಕುತವನು ತಡೆ

ಗಡಿ ಸುಯೋಧನನೂರುಗಳನಿ

ಮ್ಮಡಿಸಿ ಮುನಿಯಲಿ ಧರ್ಮಸುತನೆನುತೆದ್ದನಾಭೀಮ ೩೧


ಹೆದರು ಹೊಕ್ಕದು ಸಭೆಗೆ ಕೌರವ

ನೆದೆ ಬಿರಿದುದಾಸ್ಥಾನ ಜಲನಿಧಿ

ಕದಡಿತುಕ್ಕಿದ ಬೆರಗಿನಲಿ ಬೆಳ್ಳಾದನವನೀಶ

ಹದನಹುದು ಹಾಯೆನುತಲಿದ್ದರು

ವಿದುರ ಭೀಷ್ಮ ದ್ರೋಣರಿತ್ತಲು

ಕೆದರುಗೇಶದ ಕಾಂತೆ ಹುದಿದಳು ಹರುಷ ಪುಳಕದಲಿ ೩೨


ಒಡೆಯನೈತರಲಿಕ್ಷುದೋಟದ

ಬಡ ನರಿಗಳೋಡುವವೊಲೀಕೆಯ

ಹಿಡಿದೆಳೆವ ಖಳ ಹಾಯ್ದನಾ ಕೌರವನ ಹೊರೆಗಾಗಿ

ನುಡಿ ತರುಣಿ ತನ್ನಾಣೆ ಭೀತಿಯ

ಬಿಡಿಸಿದೆನಲಾ ರಾಯನಾಜ್ಞಾಯ

ತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ ೩೩


ಉರಿವ ಕೋಪಾಗ್ನಿಯಲಿ ಕರ್ಣನ

ಶಿರದ ಭಾಂಡದಲಿವನ ನೊರೆ ನೆ

ತ್ತರಿನಲಿವನಗ್ರಜನ ಕೊಬ್ಬಿದ ನೆಣನ ಕೊಯ್ಕೊಯ್ದು

ದುರುಳ ಶಕುನಿಯ ಕಾಳಿಜದೊಳೊಡೆ

ವೆರೆಸಿ ಕುದಿಸಿ ಮಹೋಗ್ರಭೂತದ

ನೆರವಿಗುಣಲಿಕ್ಕುವೆನು ಸತಿ ಕೇಳೆಂದನಾ ಭೀಮ ೩೪


ಕೊಂಬೆನೇ ಧರ್ಮಜನ ಧರ್ಮದ

ಡೊಂಬನೀ ಮುದುಗುರುಡನಿಕ್ಕಿದ

ನಂಬುಗೆಯ ವಿಷವೈಸಲೇ ತಲೆಗೇರಿತಗ್ರಜನ

ಡೊಂಬಿಗರ ಡಾವರಿಗರಿವದಿರ

ತಿಂಬೆನೀಗಲೆ ತರುಣಿ ಕೇಳೆನು

ತಂಜುಜಾಕ್ಷಿಯ ಸಂತವಿಟ್ಟನು ಕುರುಳ ನೇರಿಸುತ ೩೫


ಇಳಿದನರ್ಜುನನಾ ಸಭಾಮಂ

ಡಲದ ವೇದಿಯನಹಹ ಧರ್ಮಜ

ನುಳಿವನೇ ನುಡಿಯೆಡಹಿದರೆ ಸಿಗುರೇಳ್ಗು ಸದ್ಗುಣಕೆ

ಕಳವಳದ ಕಾಹುರದ ಕಾಲುವೆ

ಗೊಳಗು ಕೊಡದಿರು ಭೀಮ ರಿಪುಗಳ

ಹಿಳಿವಡಿದು ಹೊತ್ತಲ್ಲೆನುತ ಹಿಡಿದನು ವೃಕೋದರನ ೩೬


ಮಾಣಲದು ಕೌರವರ ನೂರ್ವರ

ಗೋಣಬನ ಕಾಳಗದೊಳೆನ್ನಯ

ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ

ವಾಣಿಯವು ದುಶ್ಶಾಸನನ ತನಿ

ಶೋಣಿತವ ತಾ ಕುಡಿಯದಿರೆ ನಿ

ನ್ನಾಣೆ ಸೈರಣೆಗಿದುವೆ ಫಲವೆಂದೊದರಿದನು ಭೀಮ ೩೭


ಧರಣಿ ಜಲ ಪಾವಕ ಸಮೀರಾ

ದ್ಯರುಗಳರಿತಿರಿ ಶಕ್ರ ನೈಋತ

ವರುಣ ವಾಯು ಕುಬೇರ ಯಮರೆಂಬಖಿಳ ದಿಗಧಿಪರು

ಬರೆದುಕೊಂಡಿರಿ ಭಾಷೆಯನು ಸುರ

ನರ ಫಣಿವ್ರಜವೆಂಬ ಭೀಮನ

ಧರಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ ೩೮


ಬರಸಿರೈ ಭಾಷೆಯನು ದೇವಾ

ಸುರರ ಸಾಕ್ಷಿಯಲಾಯ್ತು ಕರ್ಣನ

ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ

ಸುರ ನರೋರಗರರಿದಿರೆಂದ

ಬ್ಬರಿಸಿದನು ಕಲಿಪಾರ್ಥ ಶಕುನಿಯ

ಶಿರಕೆ ಕೊಟ್ಟೆನು ಸಂಚಕಾರವನೆಂದ ಸಹದೇವ ೩೯


ಅರಸ ಕೇಳಾಶ್ಚರ್ಯವನು ಗಜ

ಪುರದೊಳಗೆ ನೆಲ ಬಾಯ ಬಿಟ್ಟುದು

ಸುರಿದುದರುಣಾಂಬುವಿನ ಮಳೆ ತತ್ಪುರದ ಮಧ್ಯದಲಿ

ನರಿಗಳವನಿಪನಗ್ನಿಹೋತ್ರದೊ

ಳೊರಲಿದವು ಸಸ್ವೇದದಲಿ ಹೂಂ

ಕರಿಸುತಿರ್ದವು ದೇವತಾ ಪ್ರತಿಮೆಗಳು ನಗರಿಯಲಿ ೪೦


ಉಗುಳಿದವು ಕುಳುಗಿಡಿಗಳನು ಕೈ

ದುಗಳು ವಾರುವ ಪಟ್ಟದಾನೆಗ

ಳೊಗುಮಿಗೆಯ ಕಂಬನಿಗಳಭ್ರದಿ ಧೂಮಕೇತುಗಳು

ನೆಗಳಿದವು ಬಿರುಗಾಳಿ ಗಿರಿಗಳ

ಮಗುಚಿ ಮುರಿದವು ದೇವತಾ ಭವ

ನಗಳ ಶಿಖರವನಂತವದ್ಭುತವಾಯ್ತು ನಿಮಿಷದಲಿ ೪೧


ಬಾರಿಸಿತು ದೆಸೆದೆಸೆಗಳಲಿ ಹಾ

ಹಾ ರವಾವಿರ್ಭಾವ ತೊಳಗಿರೆ

ತಾರಕೆಗಳಿನ ಬಿಂಬವನು ಝೋಂಪಿಸಿದನಾ ರಾಹು

ತೋರಣದಲುರಿ ತಳಿತು ರಾಜ

ದ್ವಾರ ಹೊಗೆದುದು ದೆಸೆಗಳಂಬರ

ಧಾರುಣಿಯೊಳುತ್ಪಾತ ಬಿಗಿದುದು ಮೊಗೆದುದದ್ಭುತವ ೪೨


ನಡುಗಿತಿಳೆ ನಡು ಹಗಲುಗತ್ತಲೆ

ಯಡಸಿತಾಕಾಶದಲಿ ಹೆಮ್ಮೆರ

ನುಡಿದು ಬಿದ್ದುವು ಸಲಿಲವುಕ್ಕಿತು ಕೂಡೆ ಕೆರೆತೊರೆಯ

ಉಡಿದವವದಿರ ಕೈಯ್ಯ ಕೈದುಗ

ಳೊಡನೊಡನೆ ಸಿಡಿಲೆರಗಿತಾ ಸಭೆ

ಸೆಡೆದುದಲ್ಲಿಯದಲ್ಲಿ ಹುದುಗಿತು ಭೀತಿಗರ ಹೊಡೆದು ೪೩


ಅಹಹ ಭೂತಕ್ಷೆಭವಿದು ನಿ

ರ್ದಹಿಸುವುದು ಕುರುಕುಲವನಕಟೀ

ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದೆಲೆ

ಕುಹಕಿ ಮಕ್ಕಳನಿಕ್ಕಿ ಮೌನದೊ

ಳಿಹರೆ ಬಾ ಧೃತರಾಷ್ಟ್ರ ಪಾಂಡವ

ಮಹಿಳೆಯನು ಸಂತೈಸು ನಡೆನಡೆಯೆಂದನಾ ಬೀಷ್ಮ ೪೪


ಇದಕೆ ನಿಸ್ಸಂದೇಹವೇ ವರ

ಸುದತಿಯನು ನೀ ಬೇಡಿಕೊಳು ಯ

ಜ್ಞದಲಿ ಪಾವಕಗುದಿಸಿದಳು ಪಾಂಚಾಲೆ ಮಾನಿನಿಯೆ

ಇದು ಭವತ್ಸಂತಾನ ವಿಲಯಾ

ಸ್ಪದ ಕಣಾ ನಡೆ ಪಾಪಿಯೆಂದಾ

ವಿದುರ ಗುರು ಕೃಪರೌಕಿದರು ಧೃತರಾಷ್ಟ್ರ ಭೂಪತಿಯ ೪೫


ಖೇದ ಮಿಗೆ ನಡೆತಂದು ನೃಪತಿ ತ

ಳೋದರಿಯ ನುಡಿಸಿದನು ಮಗಳೆ ವಿ

ಷಾದವನು ಬಿಡು ಮಾತ ಮನ್ನಿಸು ಮಾವ ನಾ ನಿನಗೆ

ಈ ದುರಾತ್ಮರ ಮಾತು ಬೇಡ ವಿ

ಭೇದವೇ ದುಸ್ಸಳೆಗೆ ನಿನಗೆಂ

ದಾದರಿಸಿ ನುಡಿದನು ವಿಪತ್ತಿನಲಾ ಮಹಾಸತಿಯ ೪೬


ಮಗಳಹೆನು ಸೊಸೆಯಹೆನು ನಿಮ್ಮಯ

ಮಗನ ಕಣ್ಣಿಗೆ ಕಾಳಕೂಟದ

ಮಗಳೊ ಸೊಸೆಯೋ ನಾದಿನಿಯೊ ಬೆಸಗೊಳ್ಳಿ ನಿಮ್ಮವನ

ಅಗಡು ಮಾಡಿದ ನಿಮ್ಮ ಮಕ್ಕಳ

ವಿಗಡತನಕಂಜಿದರೊ ದುರಿತದ

ಸೊಗಡಿಗಂಜಿದರೋ ಪೃಥಾ ಸುತರೆಂದಳಿಂದುಮುಖಿ ೪೭


ಧರ‍್ಮ ನಿಮ್ಮದು ತಾಯೆ ಕಿಲ್ಬಿಷ

ಕರ್ಮವೆಮ್ಮದು ಲೋಕವರಿಯಲು

ನಿರ್ಮಲರು ನೀವ್ ಪಾಪ ಪಂಕಿಲ ಹೃದಯರಾವ್ ಜಗಕೆ

ದುರ್ಮತಿಗಳಿವದಿರ ಕುಚೇಷ್ಟೆಯ

ನೆಮ್ಮ ನೀಕ್ಷಿಸಿ ಮರೆ ಮಗಳೆ ಸ

ದ್ಧರ್ಮಮತಿಗಳು ನೀವೆನುತ ತಿಳುಹಿದನು ದ್ರೌಪದಿಯ ೪೮


ದುರುಳರೆನ್ನವದಿರು ದುರಂತಃ

ಕರಣರಾವ್ ದುಶ್ಚೇಷ್ಟೆಯೆಮ್ಮದು

ದುರಭಿಮತ ದುಷ್ಪೂರ್ವರೆನ್ನ ಕುಮಾರರಭಿಧಾನ

ಕರುಣಿಗಳು ಕಮನೀಯ ಗುಣಬಂ

ಧುರರು ಶೌರ್ಯಬಲಪ್ರಭಾವೋ

ತ್ತರರು ನಿನ್ನವರೆಂದು ನಯದಲಿ ತಿಳುಹಿದನು ಸತಿಯ ೪೯


ತಾಯೆ ಬೇಡೌ ವರವ ತಾನ

ನ್ಯಾಯದಲಿ ನಿಮ್ಮನು ನಿರರ್ಥಕ

ನೋಯಿಸಿದೆನದ ನೆನೆಯದಿರಿ ಸರ್ವಾಪರಾಧವನು

ದಾಯಗೆಡೆ ನಿನ್ನವರು ಕೊಲುವರೆ

ಕಾಯಲಾಪವರುಂಟೆ ವರಸ

ತ್ಯಾಯುಧರಲೇ ನೀವೆನುತ ತಿಳುಹಿದನು ಧೃತರಾಷ್ಟ್ರ ೫೦


ವರನನಿತ್ತಿರೆ ಮಾವ ಭೂಮೀ

ಶ್ವರರ ದಾಸ್ಯವ ಬಿಟ್ಟು ಕಳೆ ಮ

ತ್ತೆರಡನೆಯ ವರವೇನು ವಚನಿಸು ಕೊಟ್ಟೆ ನಾ ನಿನಗೆ

ವರ ವೃಕೋದರ ನಕುಲ ಸಹದೇ

ವರಿಗೆ ಕೊಡಿ ಶಸ್ತ್ರಾಸ್ತ್ರ ಗಜರಥ

ತುರಗ ನಿಕರವನೆಂದಡೆಂದನು ಮತ್ತೆ ಧೃತರಾಷ್ಟ್ರ ೫೧


ವರವೆರಡು ಸಂದವು ಮನೋರಥ

ಭರಿತವಾಗಲಿ ಮತ್ತೆ ಹೇಳೆನೆ

ತರುಣಿಯೆಂದಳು ಧರ್ಮಶಾಸ್ತ್ರ ಪ್ರಕಟ ಪದ್ಧತಿಯ

ವರವು ವೈಶ್ಯರಿಗೊಂದು ನೃಪಸತಿ

ಗೆರಡು ನೃಪರಿಗೆ ಮೂರು ಭೂದೇ

ವರಿಗೆ ನೂರಧಿಕಾರವೆಂದಳು ನಗುತ ಪಾಂಚಾಲೆ ೫೨


ಹಾರಲತಿಶಯ ತೃಷ್ಣೆ ನಾಶಕೆ

ಕಾರಣವಲೇ ಮಾವ ವರವಿದು

ಭಾರಿಯಾದರೆ ಬೇಡ ಲಘುವನು ಕರುಣಿಸುವುದೆನಲು

ಭಾರವಾವುದು ಮಗಳೆ ಕೊಟ್ಟೆನು

ಧಾರುಣೀಪತಿ ಬಿಜಯಮಾಡಲಿ

ವೈರಬಂಧದ ಕಂದು ಕಲೆಯನು ಮರೆದು ಕಳೆಯೆಂದ ೫೩


ಪೂತುರೇ ಪಾಂಚಾಲೆ ಭುವನ

ಖ್ಯಾತೆಯಾದೆಗೆ ಜಾಗು ನಿನ್ನಯ

ಬೈತಲೆಯ ಮಣಿ ಮಾರುವೋದುದ ಮತ್ತೆ ಬಿಡಿಸಿದಲೆ

ಬೀತ ಮರ ಫಲವಾಯ್ತಲಾ ನಿ

ನ್ನಾತಗಳ ಬಹುಖೇದ ಜಲಧಿಗೆ

ಸೇತುವಾದೆಗೆ ನೀನೆನುತ ತಲೆದೂಗಿದನು ಕರ್ಣ ೫೪

ಹೊಕ್ಕಗೂಡಿನ ಹುಲಿಗಳನು ಹೊರ

ಗಿಕ್ಕಿದೆಯಲಾ ಇರುಬಿನಲಿ ಬಿ

ದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲ

ಸೊಕ್ಕಿದುರು ಮೀನುಗಳ ಗಂಟಲೊ

ಳಿಕ್ಕಿದವಲಾ ಗಾಣ ಗಂಟಲ

ಸಿಕ್ಕ ಬಿಡಿಸಿದೆ ಗರುವೆ ನೀನೆಂದುಲಿದನಾ ಕರ್ಣ ೫೫


ಘುಡು ಘುಡಿಸಿದನು ರೋಷವಹ್ನಿಯ

ತಡಿಯ ಹೊಕ್ಕನು ಬಿಗಿದ ಹುಬ್ಬಿನ

ಬಿಡೆಯ ಬವರಿಯ ಲಳಿಯ ಲವಣಿಯ ಲೋಚನದ್ವಯದ

ಕಡು ಮುಳಿಸಿನುಬ್ಬಟೆಯ ಮಾರುತಿ

ಕಡುಹಿನಲಿ ಭುಗುಭುಗಿಪ ಭಾರಿಯ

ಕಿಡಿಗೆದರಿ ನೋಡಿದನು ಬಾಗಿಲ ಲಾಳವಿಂಡಿಗೆಯ ೫೬


ಹಗೆಗಳೇ ಕೌರವರು ತೆಗೆ ಬಲು

ವಗೆ ಕಣಾ ಕಾಮಾದಿ ರಿಪುಗಳು

ಸೆಗಳಿಕೆಯ ಸಸಿಯಾಗವೇ ನಿಜ ಸತ್ಯಭಾಷೆಗಳು

ಉಗುಳುಗುಳು ರೋಷವನು ರಾಧೆಯ

ಮಗ ವಿಕಾರಿ ಕಣಾ ವೃಕೋದರ

ಬೆಗಡುಗೊಳಿಸದಿರೆಮ್ಮನೆಂದನು ಧರ್ಮನಂದನನು ೫೭


ಬಾ ವೃಕೋದರ ನಕುಲ ಬಾ ಸಹ

ದೇವ ಬಾರೈ ತಮ್ಮ ಫಲುಗುಣ

ದೇವಿಯರು ನೀವ್ ಬನ್ನಿಯೆನಲವನೀಶನೈತಂದು

ಆವುದೈ ಕರ್ತವ್ಯ ನೀವೇ

ದೈವ ಗುರು ಪಿತರೆಂದು ಮಿಗೆ ಸಂ

ಭಾವನೋಕ್ತಿಯನಾಡಿದನು ಧೃತರಾಷ್ಟ್ರ ಭೂಪತಿಗೆ ೫೮


ಮಕ್ಕಳೆನಗಲ್ಲವರು ನೀವೇ

ಮಕ್ಕಳೈವರು ಮಗನೆ ನಮ್ಮದು

ಮಕ್ಕಳಾಟಿಕೆಯಾಯ್ತಲಾ ಸೌಬಲನ ದೆಸೆಯಿಂದ

ಮಿಕ್ಕು ನೀ ಸೈರಿಸುವುದೆಮ್ಮದು

ಬಕ್ಕುಡಿಯ ಬೇಳಂಬ ನಿಮ್ಮಲಿ

ಕಕ್ಕುಲಿತೆಯಿಲ್ಲೆಂದು ತೆಗೆದಪ್ಪಿದನು ಧರ್ಮಜನ ೫೯


ಎನ್ನನೀಕ್ಷಿಸಿ ಮಗನೆ ಮರೆ ನಿನ

ಗನ್ಯಳೇ ಗಾಂಧಾರಿ ಪಿತನೆಂ

ದೆನ್ನ ಕಾಬಿರಿ ವೃದ್ಧನೆಂದು ಗತಾಕ್ಷ ತಾನೆಂದು

ಮನ್ನಿಸುವಿರೆಲೆ ಮಕ್ಕಳಿರ ಸಂ

ಪನ್ನಸತ್ಯರು ನೀವು ಕರ್ಮಿಗ

ಳೆನ್ನವರು ದೋಷಾಭಿಸಂಧಿಯ ಮರೆದು ಕಳೆಯೆಂದ ೬೦


ರೂಢಿಗಗ್ಗದ ರಾಜಸೂಯದ

ಲೂಡಿ ನಿರ್ಜರಕಟಕವನು ಖಯ

ಖೋಡಿಯಿಲ್ಲದೆ ನಿಲಿಸಿದೈ ತ್ರಿದಿವದಲಿ ಪಾಂಡುವನು

ಮಾಡುವೆಯಲಾ ಮಗನೆಯೆನ್ನೀ

ಗೂಡ ಬಿಸುಟರೆ ಸುರರ ಸಂಗಡ

ವಾಡುವಂತಿರೆ ತನಗೆ ಗತಿ ನೀನಲ್ಲದಾರೆಂದ ೬೧


ಪಾಲಿಸವನಿಯನೆನ್ನ ಮಕ್ಕಳ

ಖೂಳತನವನು ಮನಕೆ ತಾರದಿ

ರಾಲಿಸದಿರಪರಾಧಿ ವಾಚಾಳರ ವಚೋತ್ತರವ

ಕಾಲ ದೇಶಾಗಮದ ನಿಗಮದ

ಡಾಳವರಿದೈಹಿಕ ಪರತ್ರ ವಿ

ಟಾಳಿಸದೆ ನಡೆ ಕಂದಯೆಂದನು ಮರಳಿ ತೆಗೆದಪ್ಪಿ ೬೨


ತರಿಸಿದನು ಮಡಿ ವರ್ಗದಮಲಾಂ

ಬರವನಂಬುಜಮುಖಿಗೆ ರತ್ನಾ

ಭರಣವನು ವಿವಿಧಾನುಲೇಪನ ಚಿತ್ರಸಂಪುಟವ

ಅರಸನಿತ್ತನು ವೀಳಯವ ಕ

ರ್ಪುರದ ತವಲಾಯಿಗಳನಭ್ಯಂ

ತರಕಿವರ ಕಳುಹಿದನು ಗಾಂಧಾರಿಯನು ಕಾಣಿಸಿದ ೬೩


ನೋಡಲಾಗದು ಮಕ್ಕಳಿರ ಕುಲ

ಗೇಡಿಗರ ಕಪಟವನು ನಮ್ಮನು

ನೋಡಿ ಮರೆವುದು ಪಾಂಡುವೆಂದಿಹುದಂಧ ಭುಪತಿಯ

ನಾಡೆ ನೊಂದೌ ತಾಯೆ ಬಾ ಮಗ

ಮಾಡಿದನುಚಿತ ಕರ್ಮವೆಲ್ಲವ

ಮಾಡಿದೆನು ತಾನೆಂದಳಾ ದ್ರೌಪದಿಗೆ ಗಾಂಧಾರಿ ೬೪


ಮರೆದೆನಾಗಳೆ ವಿಗಡ ವಿಧಿಯೆ

ಚ್ಚರಿಸಿದರೆ ಹರಿಭಕ್ತಿ ಮುಖದಲಿ

ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ

ಹೆರರನೆಂಬುದು ಖೂಳತನವೇ

ನರಿಯದವರೇ ಪಾಂಡುಸುತರೆಂ

ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ ೬೫


ಸಾಕು ನೇಮವ ಕೊಡಿಯೆನುತ ಕುಂ

ತೀಕುಮಾರರು ಬೀಳುಕೊಂಡರು

ನೂಕಿ ಹೊಕ್ಕುದು ದಾರವಟ್ಟ ದಲಿವರ ಪರಿವಾರ

ತೋಕಿದವು ಸೀಗುರಿಗಳೆಡಬಲ

ದಾಕೆಯಲಿ ಪಾಂಡವ ಕುಮಾರಾ

ನೀಕ ಬೆರಸಿತು ಗಜತುರಗ ರಥ ಪಾಯದಳ ಸಹಿತ ೬೬


ಕಳೆದೆವೇ ಖಳರೊಡ್ಡಿದಿರುಬಿನ

ಕುಳಿಗಳನು ಕೈ ತಪ್ಪು ಮಾಡದೆ

ಸಲಹಿದೆವೆ ಸತ್ಯವನು ಸುಜನರ ಕಲೆಗೆ ಸಂದೆವಲೆ

ಕಳವಳದ ಕಡುಗಡಲೊಳಾಳದೆ

ಸುಳಿದೆವಿತ್ತಲು ಶಿವ ಶಿವಾ ಯದು

ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ ೬೭


ಸಂಕ್ಷಿಪ್ತ ಭಾವ


ಭೀಮನ ಪ್ರತಿಜ್ಞೆ. ಧೃತರಾಷ್ಟ್ರನು ದ್ರೌಪದಿಯನ್ನು ಮತ್ತು ಪಾಂಡವರನ್ನು ಸಂತೈಸಿ ಸಕಲ ಬಲದೊಂದಿಗೆ ವಾಪಸ್ ಕಳಿಸಿದ್ದು.


ಶ್ರೀ ಕೃಷ್ಣನ ಕರುಣೆಯ ರಸಧಾರೆಯಂತೆ ಸೆಳೆದಷ್ಟೂ ಬರುತ್ತಿದ್ದ ಸೀರೆಯನ್ನು ಕಂಡು ಎಲ್ಲರೂ ನಿಬ್ಬೆರಗಾದರು. ಅವಳ ಪತಿವ್ರತಾ ಶಕ್ತಿಗೆ, ಕೃಷ್ಣಭಕ್ತಿಗೆ ತಲೆಬಾಗಿದರು. ದುಶ್ಶಾಸನನಿಗೆ ತೋಳು ನೋವು ಬಂದಿತು. ವಿದುರನ ನೀತಿ ಮಾತುಗಳು ಮತ್ತೂ ಫಲಿಸಲಿಲ್ಲ. ಇವಳನ್ನು ಸೆಳೆದೊಯ್ದು ದಾಸಿಯರ ಮನೆಗೆ ಬಿಡು ಎಂದು ಹೇಳಿದನು ದುರ್ಯೋಧನ. ಕರ್ಣ ಅದಕ್ಕೆ ಅನುಮೋದಿಸಿದನು.


ಆಗ ದ್ರೌಪದಿಯು ಮುಂದೆ ಭೀಮನು ನಿನ್ನನ್ನು ರಕ್ತದಲ್ಲಿ ಮೀಯಿಸುವನೆಂದಳು. ಕರ್ಣ ಮುಂತಾದವರನ್ನೂ ಶಪಿಸಿದಳು. ಭೀಮ ಕೋಪದಿಂದ ಏಳಲನುವಾದಾಗ ಪಾರ್ಥ ಅವನನ್ನು ತಡೆದನು. ಈಗ ಅಣ್ಣನ ಮಾತನ್ನು ಮೀರದಿರುವುದೇ ಉಚಿತವೆಂದು ತಿಳಿಹೇಳಿದನು.


ದ್ರೌಪದಿಯನ್ನು ಸೆಳೆದೊಯ್ಯಲು ತಯಾರಿ ನಡೆಯಿತು. ಅವಳು ಇದರಿಂದ ತಪ್ಪಿಸಿಕೊಳ್ಳಲು ಹೆಣಗುತ್ತಾ ರಾಜ, ಹಿರಿಯರು, ರಾಣಿವಾಸ ಎಲ್ಲರ ಕಡೆ ನೋಡಿ ಈ ದುಷ್ಕೃತ್ಯವನ್ನು ನಿಲ್ಲಿಸಿರೆಂದು ಬೇಡಿಕೊಂಡಳು. ಅಂತರಂಗದ ಕಣ್ಣುಗಳೂ ಇಲ್ಲವಾದವೆ ಎಂದು ಧೃತರಾಷ್ಟ್ರನನ್ನು ಹಳಿದಳು.


ಸಕಲ ದೇವತಾಶಕ್ತಿಗಳನ್ನೂ ಬೇಡಿಕೊಂಡಳು. ಇಂದ್ರಾದಿ ದೇವತೆಗಳಿಗೂ ಮೊರೆಯಿಟ್ಟಳು. ವಿದುರನು ಅವಳನ್ನು ಸಂತವಿಟ್ಟನು. ಆಗ ದುರ್ಯೋಧನನು ತನ್ನ ತೊಡೆಯನ್ನು ತಟ್ಟಿ ತೋರಿಸಿದನು. ಆಗ ನಿನ್ನ ಅಳಿವು ನಿನ್ನ ತೊಡೆಯಲ್ಲಿಯೇ ಆಗಲೆಂದು ಶಾಪವಿತ್ತಳು. ಇನ್ನು ಭೀಮನಿಗೆ ತಡೆಯಲಾಗಲಿಲ್ಲ. ರೋಷದಿಂದೆದ್ದು ಬಂದಾಗ ಎಲ್ಲರೂ ಹೆದರಿದರು. ಅವನು ದ್ರೌಪದಿಗೆ ಸಮಾಧಾನ ಹೇಳಿ ಕಾಳಗದಲ್ಲಿ ಇವರೆಲ್ಲರನ್ನೂ ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿದನು. ಅರ್ಜುನ ಭೀಮನನ್ನು ಇದು ಸಮಯವಲ್ಲವೆಂದು ಸಮಾಧಾನ ಮಾಡಿದನು. ಆ ಸಮಯದಲ್ಲಿ ಪುರದೊಳಗೆ ಅನೇಕ ಉತ್ಪಾತಗಳು ನಡೆದವು. ನೆಲ ಬಿರಿಯಿತು. ರಕ್ತದ ಮಳೆ ಸುರಿಯಿತು. ಪ್ರತಿಮೆಗಳು ಹೂಂಕರಿಸಿದವು. ಹೀಗೆ ಹಲವು ಅಪಶಕುನಗಳಾದವು. ಇದು ಪತಿವ್ರತೆಯಾದ ದ್ರೌಪದಿಯನ್ನು ಕೆಣಕಿದ್ದರ ಫಲವೆಂದು ಅರಿತ ಭೀಷ್ಮ ಧೃತರಾಷ್ಟ್ರನನ್ನು ಎಚ್ಚರಿಸಿದನು. ವಿದುರ, ದ್ರೋಣ, ಕೃಪ ಮುಂತಾದವರೂ ಎಚ್ಚರಿಸಿದರು.


ಆಗ ಧೃತರಾಷ್ಟ್ರನು ದ್ರೌಪದಿಯನ್ನು ಸಂತೈಸಿ ಕ್ಷಮಿಸುವಂತೆ ಕೇಳಿಕೊಂಡನು. ತನ್ನ ಮಕ್ಕಳು ಮಾಡಿದ್ದು ಅಪರಾಧ ಎಂದನು. ನಿನಗೆ ಬೇಕಾದ ವರವನ್ನು ಕೇಳು ಎಂದಾಗ ಅವಳು ಪಾಂಡವರನ್ನು ದಾಸ್ಯದಿಂದ ಬಿಡುಗಡೆಗೊಳಿಸುವಂತೆಯೂ ಅವರವರ ಶಸ್ತ್ರಾಸ್ತ್ರಗಳನ್ನು, ಸೈನ್ಯವನ್ನು ಕೊಡಿಸುವಂತೆಯೂ ಕೇಳಿದಳು. ಅವನು  ಧರ್ಮಜನು ಕಳೆದುಕೊಂಡದ್ದೆಲ್ಲವನ್ನೂ ಮತ್ತೆ ಮರಳಿಸಿದನು. ದ್ರೌಪದಿಯ ಬಗೆ ಕಂಡು ಕರ್ಣನೂ ತಲೆದೂಗಿದನು. 

ಧೃತರಾಷ್ಟ್ರನು ಪಾಂಡವರನ್ನು ಕರೆದು ಆಲಂಗಿಸಿ ತನ್ನ ಮಕ್ಕಳು ಕೆಟ್ಟವರು. ನೀವೇ ನಮಗೆ ಗತಿಯನ್ನು ಕಾಣಿಸಬೇಕು ಎಂದೆಲ್ಲ ಬಿನ್ನವಿಸಿ ಮತ್ತೆ ಮತ್ತೆ ಅಪ್ಪಿಕೊಂಡನು. ಗಾಂಧಾರಿಯೂ ಇದರಲ್ಲಿ ಸೇರಿಕೊಂಡಳು. ಕೊನೆಗೆ ಎಲ್ಲ ಸುಖಾಂತವಾಗಿ ಪಾಂಡವರು ತಮ್ಮ ಪರಿವಾರಸಹಿತ ಯದುನಂದನನ ಕರುಣೆಯಿಂದ ಇಂದ್ರಪ್ರಸ್ಥದತ್ತ ಹೊರಟರು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ