ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ34


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಸಭಾ ಪರ್ವ - ಹದಿನಾಲ್ಕನೆಯ ಸಂಧಿ


ಸೂಚನೆ: ರಾಯ ಪಾಂಡವರರಸಿ ಕಮಲ ದ
ಳಾಯತಾಕ್ಷಿಯ ಪರಿಭವವನೆರೆ
ಕಾಯಿದುದೆಲಾ ವೀರ ನಾರಾಯಣನ ಸಿರಿನಾಮ
---

ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಮಾತ ಮುರಿದು ನೃ
ಪಾಲನೆಚ್ಚರಿಸಿದನು ಕಣುಸನ್ನೆಯಲಿ ಸೌಬಲನ
ಏಳು ಧರ್ಮಜ ಸೋತೆಲಾ ನಿ
ನ್ನಾಳು ಕುದುರೆಯನಿನ್ನು ಸಾಕು ದ
ಯಾಳುವಲ್ಲ ಸುಯೋಧನನು ಧನವಿಲ್ಲ ನಿನಗೆಂದ ೧

ತೆಗೆವೆನೇ ಸಾರಿಗಳ ನಿನ್ನೀ
ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ
ಸೊಗಸು ಬೀಯದು ರಪಣವಿಲ್ಲದ
ಬೆಗಡು ನೋಯದು ಕ್ಷತ್ರಧರ್ಮದ
ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ ೨

ಎಲವೊ ಸೌಬಲ ವಿತ್ತವೀಸರ
ಲಳಿದುದೇ ನೀ ನಗುವವೋಲ್ನ
ಮ್ಮೊಳಗು ಡಿಳ್ಳವೆ ರಪಣವಿದೆಲಾ ಬಹಳ ಭಂಡಾರ
ಸುಳಿಸು ಹಾಸಂಗಿಗಳ ಮೋಹರ
ಗೊಳಿಸು ಸಾರಿಯನೊಂದು ರೇಖೆಯ
ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ ೩

ದುಗುಣಕಿಕ್ಕಿದನರಸನಾಚೆಗೆ
ತೆಗೆದನವ ಮೂರೆಂದು ನಾಲ್ಕ
ಕ್ಕುಗಿದನವ ನಿಪನೈದ ಕಳೆದನು ಬಹಳವನು ಶಕುನಿ
ತೆಗೆದ ನಿಮ್ಮಡಿಗರಸನವನಾ
ತ್ರಿಗುಣ ಪಂಚಕ ಸಪ್ತ ನವಮ
ಪ್ರಗುಣವೆಂದನು ಶಕುನಿ ಸೋಲಿಸಿದನು ಮಹೀಪತಿಯ ೪

ಎಣಿಸಿದನು ರೇಖೆಗಳ ನಿಮ್ಮೊಡ
ಗಣಿತ ಸಂಖ್ಯಾ ಸಿದ್ಧವಸ್ತುವ
ನೆಣಿಸಲರ್ಬುದ ಸಂಖ್ಯೆಯಾಯಿತು ಹಲಗೆಯೊಂದರಲಿ
ಗುಣನಿಧಿಯೆ ಮಗುಳೊಡ್ಡಲಾಪರೆ
ಪಣವ ಸಬುದಿಸು ಕೇಳ್ವೆನೆನೆ ನೃಪ
ಗುಣ ಶಿರೋಮಣಿ ಧರ್ಮಸುತ ನಸುನಗುತಲಿಂತೆಂದ ೫

ಹೂಡು ಸಾರಿಯ ರೇಖೆ ರೇಖೆಗೆ
ಮಾಡಿದರ್ಬುದ ಧನ ಸುಯೋಧನ
ನಾಡಿ ನೋಡಲಿ ಹಾಯ್ದು ಹಾಸಂಗಿಗಳ ಹಾಯ್ಕೆನುತ
ಆಡಿದನು ಯಮಸೂನು ಖಾಡಾ
ಖಾಡಿಯಲಿ ಸಾರಿಗಳೊಡನೆ ಹೋ
ಗಾಡಿದನು ಭಂಡಾರವನು ಭೂಪಾಲ ಕೇಳೆಂದ ೬

ಸಾರಿ ಸೋತವು ಸೋಲು ನಿನಗನು
ಸಾರಿ ನೀವೈವರು ವನಾಂತಕೆ
ಸಾರಿ ಸಾಕಿನ್ನೊಡ್ಡಲಾಪರೆ ಮತ್ತೆ ನುಡಿ ಧನವ
ಭೂರಮಣ ಹೇಳೆನಲು ರೇಖೆಯ
ಭಾರಿಯೊಡ್ಡಕೆ ಪದ್ಮ ಸಂಖ್ಯೆಯ
ಭೂರಿ ಧನವಿದೆ ರಪಣವೆಂದನು ನಗುತ ಯಮಸೂನು ೭

ಬರಹಕಿಮ್ಮಡಿ ನೂರು ಮಡಿ ಸಾ
ವಿರದ ಮಡಿ ಪರಿಯಂತವಿಕ್ಕಿತು
ಹರುಷ ನನಗೆ ಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು ವಾಸಿ ಪಾಡಿನ
ದುರುಳತನವುಬ್ಬೆದ್ದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ ೮

ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ ೯

ನಕುಲ ಸಹದೇವಾರ್ಜುನರ ಮಣಿ
ಮಕುಟ ಕರ್ಣಾಭರಣ ಪದಕಾ
ದಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧುಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ ೧೦

ಸೋತೆಲಾ ಕೌಂತೇಯ ನಿಮಿಷಕೆ
ಬೀತುದೇ ನಿನ್ನಖಿಳ ಸಿರಿ ವಿ
ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ
ಪ್ರೀತಿಯುಂಟೇ ನಿಮಗೆ ಮತ್ತೀ
ದ್ಯೂತದಲಿ ಧನವಿಲ್ಲಲಾ ಗ
ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ ೧೧

ಖಿನ್ನ ನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಬಳಚಿಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರಿದಕಿ
ನ್ನೆನ್ನನಿಕ್ಕಿ ದ್ಯೂತವಿಜಯವ ಸಾಧಿಸುವೆನೆಂದ ೧೨

ಎಲವೊ ಫಡ ಫಡ ಶಕುನಿ ಗರ್ವದ
ತಳಿ ಮುರಿವುದೇ ನಿನ್ನ ದುರ್ಮತಿ
ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ
ಉಳಿದ ಧನವೇಗುವುದು ಜೀವ
ಸ್ಥಳವಿದೇ ಮೇಲೊಡ್ಡವೊಂದೇ
ಹಲಗೆಗೊಡ್ಡಿದೆನೆನ್ನ ನಕುಲನನೆಂದನಾ ಭೂಪ ೧೩

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ದು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದನವನಿಪನ ಜರೆದ ೧೪

ಅರಸ ಸೋತೈ ನಕುಲನನು ಹೇ
ವರಿಸದಿರು ಹೇಳೊಡ್ಡವನು ವಿ
ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು
ವರಿಸಿದೆನು ಸಹದೇವನನು ನೆರೆ
ಮರಳಿಚುವೆನೆನನ್ನಖಿಳ ವಸ್ತೂ
ತ್ಕರವನೆಂದನು ಧರ್ಮನಂದನನರಸ ಕೇಳೆಂದ ೧೫

ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನಪೊಡ್ಡಿದನು ಮಾದ್ರೀ ಕುಮಾರಕನ
ಅರಸ ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರುಷ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ ೧೬

ಏನ ಬಣ್ಣಿಸುವೆನು ವಿಕಾರಿಗ
ಳೇನ ನೆನೆಯರು ಕಪಟ ವಿಧದಲಿ
ಮಾನನಿಧಿ ತಾ ಸೋತನನುಜದ್ವಯ ಮಹಾಧನವ
ಗ್ಲಾನಿಚಿತ್ತದೊಳಿಲ್ಲಲೇ ಸುಮ
ನೋನುರಾಗವೆ ಭೀಮ ಪಾರ್ಥರು
ತಾನಿದೊಮ್ಮಿಗೆ ಬದುಕಿದರು ನಿಮಗೆಂದನಾ ಶಕುನಿ ೧೭

ಭೇದ ಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನ ಪರಿ
ವಾದ ಪದನಿರ್ಭೀತನಕ್ಷ ವಿ
ನೋದ ಕರ್ದಮ ಮಗ್ನನೊಡ್ಡಿದನಾ ಧನಂಜಯನ ೧೮

ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನು ಮಾರಿದನಲಾ ಕೌರವೇಶ್ವರಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಸುಬಲನಂದನನ೧೯

ದೇಹಿಗೆರವೇ ದೇಹವೆಲವೋ
ದೇಹಿ ಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರಭಾವಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ ೨೦

ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಮ್ಮುನ್ನ ಶಕುನಿಗೆ
ಬೀಳುವುದು ಬೇಕಾದ ದಾಯವು
ಕೌಳಿಕದ ವಿಧಿ ಪಾಶ ತೊಡಕಿತು ನೀಗಿತರ್ಜುನನ ೨೧

ಸೋತಿರರಸರೆ ಮತ್ತೆ ಹೇಳೀ
ದ್ಯೂತ ಶಿಖಿಗಾಹುತಿಯನೆನೆ ಕುಂ
ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ
ಆತುದೊಂದರೆಗಳಿಗೆ ಸೌಬಲ
ಸೋತ ಧರ್ಮಜ ಗೆಲಿದ ಧರ್ಮಜ
ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನ ರಭಸ ೨೨
ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹುಹಿಡಿದ ಹಿಮಾಂಶು ಮಂಡಲದುಳಿದ ಕಳೆಯಂತೆ
ತೋಹಿನಲಿ ತೊಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರಸೂತ್ರದ
ಹೂಹೆಯಂತಿರೆ ನೃಪತಿ ತೆತ್ತನು ಹಗೆಗೆ ತನುಧನವ ೨೩

ಜನಪ ಮಾರಿದೆ ಭೀಮಸೇನಾ
ರ್ಜುನರು ಸಹಿತೊಡಹುಟ್ಟಿದರ ನಿ
ರ್ಧನಿಕನಾಗಿಯು ಮತ್ತೆ ಬಿಡದೇ ದ್ಯೂತ ದುರ್ವ್ಯಸನ
ಎನಲು ಶಕುನಿಯ ಜರೆದು ತಾನೇ
ಧನವಲಾ ಸಾಕೊಂದು ಹಲಗೆಯೊ
ಳೆನಗೆ ಜಯವೀ ದಾಯವೆಂದೊಡ್ಡಿದನು ಜನನಾಥ ೨೪

ಹೇಳಲೇನದನವರು ರಚಿಸಿದ
ಬೇಳುವೆಯನಾ ಶಕುನಿಯೊಡ್ಡಿದ
ಕಾಲು ಕುಣಿಕೆಯೊಳಾರು ಬೀಳರು ನೃಪತಿ ನಿಮಿಷದಲಿ
ಬೀಳುಗೊಟ್ಟನು ತನ್ನನಾ ಜನ
ಜಾಲವಿದ್ದುದು ಬಿಗಿದ ಬೆರಗಿನೊ
ಳಾಲಿಸುವಿರೇ ಜೀಯ ಪಣವೇನೆಂದನಾ ಶಕುನಿ ೨೫

ಎಲವೊ ಸೌಬಲ ಸಾಕಿದೊಂದೇ
ಹಲಗೆ ಸರ್ವಸ್ವಾಪಹಾರವ
ನಿಳುಹುವೆನು ನೀಲಾಳಕಿಯನೊಡ್ಡುವೆನು ಬಾಲಕಿಯ
ಉಳಿದ ಧನವೆಮ್ಮೈವರಿಗೆ ನಿ
ಷ್ಖಲಿತವಿದು ಹೂಡೆನಲು ಹರುಷದ
ಲಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ ೨೬

ಆಡಿದನು ಯಮಸೂನು ಮಿಗೆ ಹೋ
ಗಾಡಿದನು ಮನುಮಥನ ಖಾಡಾ
ಖಾಡಿ ಖಾತಿಯನಕಟ ಮದನನ ಮಂತ್ರದೇವತೆಯ
ಕೂಡೆ ತಿವಿದನು ಕಟ್ಟಿದನು ಕಳಿ
ದೋಡಿಸಿದ ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನ ಚಿತ್ತ ಭಿತ್ತಿಯಲಿ ೨೭

ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟ ಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೇತೋಭಾವ ಭಂಗಿಗಳ ೨೮

ಮೊಳೆನಗೆಯ ಕಟಕಿಗಳ ಹದಿರಿನ
ಹಳಿವುಗಳ ಸನ್ನೆಗಳ ಸವಿ ಬೈ
ಗುಳಿನ ಜಾಣಿನ ನೋಟಗಳ ಜೊತ್ತಿನ ನವಾಯಿಗಳ
ಒಳದೆಗಹಿನುಬ್ಬುಗಳ ಮೀಸೆಯೊ
ಳಿಳಿವ ಬೆರಳ್ಗಳ ಕರ್ಣ ಸೈಂಧವ
ಖಳತಿಲಕ ದುಶ್ಶಾಸನಾದಿಗಳಿದ್ದರೀಚೆಯಲಿ ೨೯

ಕಳಕಳದ ಕಂದೆರವೆಗಳ ಕುರು
ಕುಲದ ನಿರ್ಮೂಲನದ ನಿಶ್ಚಯ
ದೊಳಗುವರಿದಾಲೋಚನೆಯ ನಿರ್ದ್ರವದ ತಾಳಿಗೆಯ
ತಳಿತ ಮೋನದ ಬೀತ ಹರುಷದ
ಜಲದ ನಯನದಲಿದ್ದರಾ ವಿ
ಹ್ವಲರು ಭೀಷ್ಮ ವಿಕರ್ಣ ವಿದುರ ದ್ರೋಣ ಗೌತಮರು ೩೦

ಇಟ್ಟ ಮೂಗಿನ ಬೆರಳ ನೆಲದಲಿ
ನಟ್ಟ ದೃಷ್ಟಿಯ ಕಳವು ಜೂಜಿನ
ದಿಟ್ಟರಾಟಕೆ ಬಲಿದ ಬೆರಗಿನ ಬಿಗಿದ ಖಾತಿಗಳ
ತಟ್ಟಿಸುವ ರಿಪುವರ್ಗ ಶಿಖಿಯಲಿ
ಸುಟ್ಟ ಕರಣ ಚತುಷ್ಟಯದ ಜಗ
ಜಟ್ಟಿಗಳು ಭೀಮಾರ್ಜುನಾದಿಗಳಿರ್ದರೀಚೆಯಲಿ ೩೧

ಹಾಸಗರ್ವದ ಮೋನದಲಿ ಸಂ
ತೋಷ ಗರ್ವದ ದುಗುಡದಲಿ ಸುವಿ
ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
ವೈಸಿಕದ ಕಣಿ ಕುಟಿಲ ಮಂತ್ರದ
ಮಿಸಲಳಿಯದ ಕುಹಕ ವಿದ್ಯಾ
ವಾಸಗೃಹ ಧೃತರಾಷ್ಟ್ರನಿದ್ದನು ವಿಕೃತ ಭಾವದಲಿ ೩೨

ಜನಪತಿಯ ಜಾಡ್ಯವನು ಭೀಮಾ
ರ್ಜುನರ ಸೈರಣೆಗಳನು ದುರ್ಯೋ
ಧನನ ದುಶ್ಚೇಷ್ಟೆಯನು ಶಕುನಿಯ ಸಾರ ಕೃತ್ರಿಮವ
ತನತನಗೆ ಕಂಡರು ಮಹೀಸುರ
ಜನಪ ವೈಶ್ಯ ಚತುರ್ಥರುಕ್ಕಿದ
ಮನದಳಲಿನಲಿ ಬೈದರಚ್ಯುತ ಹರ ಚತುರ್ಮುಖರ ೩೩

ನ್ಯಾಯವೆಮ್ಮದು ಮುನ್ನ ಸೋತಿರಿ
ಜೀಯ ನಿಮ್ಮೊಡ ಹುಟ್ಟಿದರು ಸಹಿ
ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ
ರಾಯನೊಲಿದುದ ಮಾಡಲಾವ
ನ್ಯಾಯವರ್ತಿಗಳಲ್ಲಲೇ ಬೆಸ
ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ ೩೪

ಗೆಲಿದು ಕೊಟ್ಟೆನು ಸಕಲ ಚಾತು
ರ್ಬಲವನಾ ಭಂಡಾರ ಸಹಿತ
ಗ್ಗಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ
ಕಲಶವಿಟ್ಟೆನು ಕೊಟ್ಟ ಭಾಷೆಗೆ
ಎಲೆ ಸುಯೋಧನಯೆಂದು ನಯನಾಂ
ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ ೩೫

ವಿದುರ ಬಾ ನಮ್ಮಾಕೆಯಾ ದ್ರೌ
ಪದಿಯ ಕರೆ ಬೆಸಗೊಂಬೆ ತೊತ್ತಿರ
ಸದನದಿಚ್ಛೆಯೊ ರಾಣಿವಾಸದ ಮನೆಯಪೇಕ್ಷಿತವೊ
ಬೆದರಬೇಡಿನ್ನಬುಜಮುಖಿಗಾ
ವುದು ಮನೋರಥವೆಮ್ಮೊಳುಂಟೆಂ
ಬುದು ಲತಾಂಗಿಯ ಕರೆವುದೆಂದನು ಕೌರವರ ರಾಯ ೩೬

ಸಿಡಿಲ ಪೊಟ್ಟಣಗಟ್ಟಿ ಸೇಕವ
ಕೊಡುವರೇ ಹರನೇತ್ರ ವಹ್ನಿಯೊ
ಳಡಬಳವ ಸುಡಬಗೆದೆಲಾ ಮರುಳೆ ಮಹೀಪತಿಯೆ
ಹೆಡತಲೆಯ ತುರಿಸುವರೆ ಹಾವಿನ
ಹೆಡೆಯನಕಟಾ ಪಾಂಡುಪುತ್ರರ
ಮಡದಿ ತೊತ್ತಹಳೇ ಶಿವಾ ಎಂದಳಲಿದನು ವಿದುರ ೩೭

ಕಾಳಕೂಟದ ತೊರೆಗಳಲಿ ಜಲ
ಕೇಳಿಯೇ ಕಾಲಾಂತಕನ ದಂ
ಷ್ಟ್ರಾಳಿಯಲಿ ನವಿಲುಯ್ಯಲೆಯ ನೀವಾಡಲಾಪಿರಲೆ
ಕಾಲರುದ್ರನ ಲಳಿಯ ನಾಟ್ಯದ
ಕೇಳಿಕೆಗೆ ನೀವರ್ತಿಕಾರರೆ
ಹೋಲದೋ ಶಿವಯೆನುತ ಕಂಬನಿದುಂಬಿದನು ವಿದುರ ೩೮

ಬಡಗಲುತ್ತರ ಕುರುನರೇಂದ್ರರ
ನಡುಗಿಸಿದರುದಯಾದ್ರಿ ತನಕವೆ
ನಡೆದು ಮುರಿದರು ಮೂಡಣರಸುಗಳತುಳ ಭುಜಬಲರ
ಪಡುವಲಗಣಿತ ಯವನ ತೆಂಕಲು
ಗಡೆ ವಿಭೀಷಣನೀ ಮಹೀಶರ
ಬಡಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ೩೯

ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂತ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಲಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ೪೦

ಬಕನ ಮುರಿದರು ವನದಲಿ ಹಿಡಿಂ
ಬಕನ ಹಣಿದರು ಮಾಗಧನ ಸು
ಪ್ರಕಟ ಬಲನಂಬುಜದ ನಾಳವನಾನೆ ಕೀಳ್ವಂತೆ
ಸಕಲಜನ ನೃಪರರಿಯೆ ಸೀಳಿದ
ರಕಟ ಮಾರಿಯ ಬೇಟವೇ ಪಾ
ತಕವಲಾ ಪಾಂಚಾಲೆ ತೊತ್ತಹಳೆ ಶಿವಾಯೆಂದ ೪೧

ಸೋಲಿಸಿದೆ ನೀನೀಗಲೀ ನರ
ಪಾಲರನು ಜೂಜಿನಲಿ ಮೇಲಣ
ಕಾಳಗದ ಕಳನೊಳಗೆ ಕವಿತಹ ಕೋಲ ತೋಹಿನಲಿ
ಸೋಲವೊಂದಕೆ ನೂರು ನೂರರ
ಮೇಲೆ ಸಾವಿರ ಸಾವಿರದ ಮೈ
ಸಾಲ ಲಕ್ಷವನಂತವಾಗಿಯೆ ತೆಗೆವರವರೆಂದ ೪೨

ಎಳೆದು ತರಿಸಾ ದ್ರೌಪದಿಯ ನೀ
ಕಳಕಳಕೆ ಕೈಗೊಟ್ಟವೋಲ
ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ
ಬಳಿಕ ನೂರ್ವರ ಸತಿಯರಕ್ಕೆಯ
ಕಳವಳದ ಬಿಡುಮುಡಿಯ ಬಸುರಿನ
ತಳದ ಬಿರುವೊಯ್ಲುಗಳ ಭಂಗವ ಕಾಂಬರಿವರೆಂದ ೪೩

ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆ ಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ ೪೪

ಬಂದು ಬಾಗಿಲ ಕಾಹಿಗಳ ಕರೆ
ದೆಂದನರಸಿಗೆ ಬಿನ್ನವಿಸಿ ತಾ
ಬಂದ ಹದನನು ಕಾರ್ಯವುಂಟೆನೆ ಹಲವು ಬಾಗಿಲಲಿ
ಬಂದುದಲ್ಲಿಯದಲ್ಲಿಗರುಹಿಸ
ಲಿಂದುಮುಖಿ ಕೇಳಿದಳು ಬರ ಹೇ
ಳೆಂದರಾತನ ಹೊಗಿಸಿದರು ಹೊಕ್ಕನು ಸತೀಸಭೆಯ ೪೫

ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯ ಲಹರಿಗಳ
ಎಳೆನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವೆನೆ ಬಾಲಕಿಯರಿದ್ದರು ಸತಿಯ ಬಳಸಿನಲಿ ೪೬

ಗಿಳಿಯ ಮೆಲು ನುಡಿಗಳ ವಿನೋದದಿ
ಕೆಲರು ವೀಣಾಧ್ವನಿಯ ರಹಿಯಲಿ
ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ
ಕೆಲರು ನೆತ್ತದಲಮಳ ಮುಕ್ತಾ
ವಳಿಯ ಚೆಲುವಿನ ಚದುರೆಯರು ಕಂ (೪೭

ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳೆಯದಲಿ
ಸಕಲ ಶಕ್ತಿಪರೀತ ವಿಮಳಾಂ
ಬಿಕೆಯವೋಲ್ ವರಮಂತ್ರ ದೇವೀ
ನಿಕರ ಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ
ವಿಕಟರಶ್ಮಿ ನಿಬದ್ಧ ರತ್ನ
ಪ್ರಕರ ಮಧ್ಯದ ಕೌಸ್ತುಭದವಲ್
ಚಕಿತ ಬಾಲಮೃಗಾಕ್ಷಿ ಮೆರೆದಳು ಯುವತಿ ಮಧ್ಯದಲಿ ೪೮

ಸುತ್ತಲೆಸೆಯ ವಿಳಾಸಿನೀಜನ
ಹತ್ತು ಸಾವಿರ ನಡುವೆ ಕಂಡನು
ಮತ್ತ ಕಾಶಿನಿಯನು ಪತಿವ್ರತೆಯರ ಶಿರೋಮಣಿಯ
ಹತ್ತಿರೈತರಲಂಜಿದನು ತ
ನ್ನುತ್ತ ಮಾಂಗಕೆ ಕರಯುಗವ ಚಾ
ಚುತ್ತ ಬಿನ್ನಹ ಮಾಡಿದನು ಪಾಂಚಾಲನಂದನೆಗೆ ೪೯

ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ಕುರು
ರಾಯ ಗೆಲಿದನು ಕೋಶವನು ಗಜತುರಗ ರಥಸಹಿತ
ನೋಯಲಾಗದು ಹಲವು ಮಾತೇ
ನಾ ಯುಧಿಷ್ಠಿರ ನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ ೫೦

ಅರಳಿದಂಬುಜ ವನಕೆ ಮಂಜಿನ
ಸರಿಯು ಸುರಿವಂದದಲಿ ಸುಗ್ಗಿಯ
ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿವಂತೆ
ಚರನ ಬಿನ್ನಹಕರಸಿ ಮೊದಲಾ
ಗಿರೆ ಸಮಸ್ತ ಸಖೀಜನದ ಮುಖ
ಸರಸಿರುಹ ಬಾಡಿದವು ಮುಸುಕಿತು ಮೌನಮಯಜಲಧಿ ೫೧

ದೂತ ಹೇಳೈ ತಂದೆ ಜೂಜನ
ಜಾತರಿಪುವಾಡಿದನೆ ಸೋತನೆ
ಕೈತವದ ಬಲೆಗಾರರವದಿರು ಶಕುನಿ ಕೌರವರು
ದ್ಯೂತದಲಿ ಮುನ್ನೇನನೊಡ್ಡಿದ
ಸೋತನೇನನು ಶಿವಶಿವಾ ನಿ
ರ್ಧೂತಕಿಲ್ಬಿಷನರಸನೆಂದಳು ದ್ರೌಪದಾದೇವಿ ೫೨

ತಾಗಿದುದಲಾ ನಾರದಾದ್ಯರ
ನಾಗತವನರುಹಿದರು ಹಿಂದೆ ವಿ
ಯೋಗವಾಯಿತೆ ಲಕ್ಷ್ಮಿಗಿಂದ್ರಪ್ರಸ್ಥ ಪುರವರದ
ಹೋಗಲದು ಮುನ್ನೇನನೊಡ್ಡಿದ
ನೀಗಿದನು ಗಡ ತನ್ನನೆಂತಿದ
ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ ೫೩

ಮೊದಲಲರ್ಥವ ಹೆಸರುಗೊಂಡೊ
ಡ್ಡಿದನು ಸೋತನು ಮರಳೆ ಮಗುಳೊ
ಡ್ಡಿದನು ಹೇರಾಳದಲಿ ಧನವನು ಕರಿಘಟಾವಳಿಯ
ಕುದುರೆ ರಥ ನಿಮ್ಮಡಿಯ ಮೇಳದ
ಸುದತಿಯರನೊಡ್ಡಿದನು ಸೋತನು
ತುದಿಯಲನುಜರನೊಡ್ಡಿ ಸೋತನು ತಾಯೆ ಕೇಳೆಂದ ೫೪

ಬಳಿಕ ತನ್ನನೆ ಸೋತನಲ್ಲಿಂ
ಬಳಿಕ ನಿಮ್ಮಡಿಗಳಿಗೆ ಬಂದುದು
ಖಳರು ಶಕುನಿ ಸುಯೋಧನರು ನೀವಾಗಳೆಂದಿರಲೆ
ಅಳುಕಬೇಡಿನ್ನೇನು ಭೂಪತಿ
ತಿಲಕ ತನ್ನನು ಮುನ್ನ ಸೋಲಿದು
ಬಳಿಕ ತನ್ನನು ಸೋತನೇ ಹೇಳೆಂದಳಿಂದುಮುಖಿ ೫೫

ಅಹುದು ತನ್ನನು ಮುನ್ನ ಸೋತನು
ಮಹಿಳೆಗೊಡ್ಡಿದೆನೆಂದು ನಿಮ್ಮನು
ಮಹಿಪ ಸೋತನು ತಾಯೆ ಬಿಜಯಂಗೈಯ್ಯಬೇಹುದೆನೆ
ವಿಹಿತವಿದು ಮಾನುಷವೆ ದೈವದ
ಕುಹಕವೈಸಲೆ ಮಗನೆ ತಾನೇ
ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ ೫೬

ಮುನ್ನ ತನ್ನನು ಸೋತ ಬಳಿಕಿನೊ
ಳೆನ್ನ ಸೋತರೆ ಸಲುವುದೇ ಸಂ
ಪನ್ನ ವಿಮಲಜ್ಞಾನರರಿದೀ ಪ್ರಶ್ನೆಗುತ್ತರವ
ಎನ್ನ ಮೆಚ್ಚಿಸಿಕೊಡಲಿ ತಾ ಬಹೆ
ನೆನ್ನು ಹೋಗೆನಲವನು ಭಯದಲಿ
ತನ್ನೊಳಗೆ ನಡುಗುತ್ತ ಬಂದನು ಕೌರವನ ಸಭೆಗೆ ೫೭

ಜೀಯ ದೇವಿಯರೆಂದ ಮಾತಿದು
ರಾಯ ಮುನ್ನವೆ ತನ್ನ ಸೋತಬು
ಜಾಯತಾಕ್ಷಿಯ ಬಳಿಕ ಸೋತರೆ ಧರ್ಮಸೂಕ್ಷ್ಮದಲಿ
ರಾಯಸಭೆಯಲಿ ಹಿರಿಯರರಿದದ
ರಾಯತವನರುಹಿದರೆ ಬಹೆನೆಂ
ದಾ ಯುವತಿ ಬಿನ್ನಹ ಮಾಡಿದಳೆಂದು ಕೈ ಮುಗಿದ ೫೮

ರಾಯ ಸೋತನು ತನ್ನ ನಾವ
ನ್ಯಾಯದಲಿ ತಹುದಿಲ್ಲ ತೊತ್ತಿರ
ಲಾಯದಲಿ ಕೂಡುವೆವು ಕರೆಯೆನಲಿವನು ಗರ ಹೊಡೆದು
ವಾಯುಸುತನಂಜಿಸುವನೆಂದೀ
ನಾಯಿ ಬೆದರಿದನಕಟ ದೂತನ
ಬಾಯ ನೋಡಾಯೆನುತ ಮಿಗೆ ಗರ್ಜಿಸಿದ ಕುರುರಾಯ ೫೯

ತಮ್ಮ ಬಾರೈ ಹೋಗು ದಿಟ ನೀ
ನಮ್ಮುವರೆ ಹಿಡಿದೆಳೆದು ತಾ ನೃಪ
ರೆಮ್ಮ ಕಿಂಕರರೈವರಿದ್ದೇನ ಮಾಡುವರು
ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ‍್ಮವಿ
ದೆಮ್ಮ ಕಾರಣವಲ್ಲ ನೀ ಹೋಗೆಂದನಾ ಭೂಪ ೬೦

ಗಾಳಿಯಳ್ಳೆಯನಿರಿಯಲಗ್ನಿ
ಜ್ವಾಲೆಯಲಿ ತಟ್ಟಿಯವೆ ಕಡುಹಿನ
ಕಾಳಕೂಟದ ನದಿಗೆ ನಂಜಿನ ಹೊನಲು ಬೆರೆಸಿದರೆ
ವಾಳೆಯವೆ ದುಶ್ಶಾಸನನು ಜಗ
ದೂಳಿಗದ ದುರುದುಂಬಿ ಕುರುಪತಿ
ಮೇಲೆ ನೇಮಿಸಲುಚಿತಗೈವನೆ ಭೂಪ ಕೇಳೆಂದ ೬೧

ಹರಿದನವ ಬೀದಿಯಲಿ ಬಿಡುದಲೆ
ವೆರೆಸಿ ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ
ತರುಣಿಯರು ಕಂಡಂಜಿ ಹೊಕ್ಕರು
ಸರಸಿಜಾಕ್ಷಿಯ ಮರೆಯನೀ ಖಳ
ನುರವಣಿಸಿದನು ರಾಹು ತಾರಾಧಿಪನ ತಗುಳ್ವಂತೆ ೬೨

ಬಂದನಿವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿದು ಕುರುರಾಜ ಭವನದಲಿ
ಇಂದು ಮರೆನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ ೬೩

ಜನಪನನುಜನು ನೀನೆನಗೆ ಮೈ
ದುನನಲೇ ತಪ್ಪೇನು ಯಮ ನಂ
ದನನು ಸೋಲಲಿ ನನ್ನ ಪ್ರಶ್ನೆಗೆ ಕೊಡಲಿ ಮರುಮಾತ
ಅನುಜ ಕೇಳೈ ಪುಷ್ಪವತಿ ತಾ
ನೆನಗೆ ರಾಜಸಭಾ ಪ್ರವೇಶವ
ದನುಚಿತವಲೇ ಹೇಳೆನಲು ಖಳರಾಯ ಖತಿಗೊಂಡ ೬೪

ಎಲ್ಲಿಯದು ದುಷ್ಪ್ರಶ್ನೆ ಮರು ಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ ೬೫

ಆ ಮಹೀಶಕ್ರತುವರದೊಳು
ದ್ದಾಮ ಮುನಿಜನರಚಿತ ಮಂತ್ರ
ಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು ವರ
ಕಾಮಿನೀ ನಿಕುರುಂಬವಕಟಕ
ಕಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ ೬೬      ಕೆದರಿದವು ಸೂಸಕದ ಮುತ್ತುಗ
ಳುದುರಿದವು ಸೀಮಂತ ಮಣಿಗಳ
ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು
ಸುದತಿಯರು ಗೋಳಿಡುತ ಬರೆ ಮೆ
ಟ್ಟಿದನು ತಿವಿದನು ಕಾಲಲಡಬಿ
ದ್ದುದು ಸಖೀಜನವೆಳೆದು ಝಾಡಿಸಿ ಜರೆದು ಝೋಂಪಿಸಿದ ೬೭

ಮಣಿದ ತನುವಿನ ವೇಗಗತಿಯಲಿ
ಝಣಝಣಿಪ ನೂಪುರದ ರವ ಕಂ
ಕಣದ ದನಿ ಕೇವಣದ ಹೊಂಗಿರುಗೆಜ್ಜೆಗಳ ರಭಸ
ಗಣಿಕೆಯರ ಕೆಳದಿಯರ ಹಾಹಾ
ರಣಿತಕಿವು ನೆರವಾದವಾ ಪ
ಟ್ಟಣವ ತುಂಬಿತು ಶೋಕವದನೇನೆಂಬೆನದ್ಭುತವ ೬೮

ಹಡಪಗಿತಿಯರು ಸೀಗುರಿಯ ಕ
ನ್ನಡಿಯವರು ಮೇಳದ ವಿನೋದದ
ನುಡಿನಗೆಯ ಸಖಿಯರು ಪಸಾಯ್ತೆಯರಾಪ್ತ ದಾಸಿಯರು
ಒಡನೆ ಬಂದರು ಕಂಬನಿಯ ಬಿಡು
ಮುಡಿಯ ಹಾಹಾ ರವದ ರಭಸದ
ನಡೆಯಲಖಿಳ ವಿಲಾಸಿನಿಯರು ಸಹಸ್ರ ಸಂಖ್ಯೆಯಲಿ ೬೯

ನಗೆಮೊಗವನೊಮ್ಮೆಯು ಪಯೋಧರ
ಯುಗಳ ನೋಡುವ ಸಖ್ಯದಲಿ ದೃಗು
ಯುಗಳ ಜಲಬಿಂದುಗಳಿಗಾ ಜಲಬಿಂದು ಸುರಿವಂತೆ
ಒಗುವ ಖಂಡಿತ ಹಾರ ಮುಕ್ತಾ
ಳಿಗಳು ಮೆರೆದವು ಮಾನಿನಿಯರು
ಬ್ಬೆಗದ ರೋದನ ರೌರವದೊಳೈತಂದಳಿಂದುಮುಖಿ ೭೦

ಬೆದರುಗಂಗಳ ಬಿಟ್ಟ ಮಂಡೆಯ
ಹುದಿದ ಹಾಹಾರವದ ತೊಡಕಿದ
ಪಡಯುಗದ ಮೇಲುದಿನ ಬೀದಿಯ ಧೂಳಿ ಧೂಸರದ
ವದನಕಮಲದ ಖಳನ ವಾಮಾಂ
ಗದಲಿ ಬಾಗಿದ ತನುಲತೆಯ ವರ
ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳೆಂದ ೭೧

ಅಹಹ ಪಾಂಡವ ರಾಯ ಪಟ್ಟದ
ಮಹಿಳೆಗೀ ವಿಧಿಯೇ ಮಹಾಕ್ರತು
ವಿಹಿತಮಂತ್ರಜಲಾಭಿಷಿಕ್ತ ಕಚಾಗ್ರಕಿದು ವಿಧಿಯೆ
ಮಿಹಿರಬಿಂಬವ ಕಾಣದೀ ನೃಪ
ಮಹಿಳೆಗಿದು ವಿಧಿಯೇ ವಿಧಾತನ
ಕುಹಕವೈಸಲೆ ಶಿವಶಿವಾಯೆಂದರು ಸಭಾಜನರು ೭೨

ತುಳುಕಿದವು ಕಂಬನಿಗಳಾ ಸಭೆ
ಯೊಳಗೆ ದುಶ್ಶಾಸನ ಸುಯೋಧನ
ಖಳಶಿರೋಮಣಿ ಶಕುನಿ ಕರ್ಣ ಜಯದ್ರಥಾದ್ಯರಿಗೆ
ತಳಿತುದದ್ಭುತಹರ್ಷ ಮುಖಮಂ
ಡಲಕೆ ಸೀರೆಯನವುಚಿ ನಯನೋ
ದ್ಗಳಿತ ಜಲಧಾರೆಯಲಿ ನೆನೆದುದು ಸಭೆ ವಿಷಾದದಲಿ ೭೩

ವ್ಯಾಕುಲವನಿದ ಕಾಂಬ ಕಣ್ಣುಗ
ಳೇಕೆ ರಾಜ ಕುಮಾರಿಯೀಕೆಯ
ಶೋಕ ರಸವನು ಕುಡಿವ ಕರ್ಣದ್ವಯವಿದೇಕೆಮಗೆ
ಏಕೆ ವಿಧಿ ನಿರ್ಮಿಸಿದನೋ ನಾ
ವೇಕೆ ಸಪ್ರಾಣರೊ ಶಿವಾಯೆಂ
ದಾ ಕುಠಾರರ ಬೈದುದಾ ಸಭೆಯಲಿ ಬುಧವ್ರಾತ ೭೪

ವನಜಮುಖಿಯಕ್ಕೆಯನು ದುಶ್ಶಾ
ಸನನ ದಿರ್ನೀತಿಯನು ದುರ್ಯೋ
ಧನನ ದುಶ್ಚೇಷ್ಟೆಯನು ಕಂಡೀ ಭೀಮ ಫಲುಗುಣರು
ಮನದೊಳಗೆ ಕೌರವನ ಕರುಳನು
ತನಿ ರಕುತದಲಿ ಕುದಿಸಿದರು ವಾ
ಜನಿಕ ಕರ‍್ಮಕ್ರಿಯೆಗೆ ನೆನೆವುದನರಿದನಾ ಭೂಪ ೭೫

ಹುಬ್ಬಿನಲಿ ನಿಲಿಸಿದನು ಪವನಜ
ನುಬ್ಬ ಟೆಯನರ್ಜುನನ ವಿಕೃತಿಯ
ನಿಬ್ಬರಾಲಾಪವನು ಧರ್ಮರಹಸ್ಯ ನಿಷ್ಠೆಯಲಿ
ಹಬ್ಬಿದುದು ಭೀಷ್ಮಂಗೆ ಶೋಕದ
ಮಬ್ಬು ಗುರು ಗೌತಮರು ವಿದುರನು
ಸರ್ಬ ಖೇದಾಂಬುಧಿಯೊಳದ್ದರು ಭೂಪ ಕೇಳೆಂದ ೭೬

ಅರಸ ಕೇಳೈ ಬಳಿಕ ಹಸ್ತಿನ
ಪುರದೊಳಾಯ್ತಿಯಾ ವಾರ್ತೆ ಬಳಿಕೀ
ಪುರದ ಬಹಿರೋದ್ಯಾನ ವೀಧಿಗಳೊಳಗೆ ಹರಹಿನಲಿ
ಅರಸಿಯರು ಸೌಭದ್ರನವರೈ
ವರ ಕುಮಾರರು ಮಂತ್ರಿಗಳು ಮು
ಖ್ಯರು ಪಸಾಯ್ತರು ಕೇಳಿದರು ಪಾಂಡವ ಪರಾಜಯವ ೭೭

ಬಂದರಿದಿರೊಳು ಕೌರವರ ಕಡೆ
ನಂದನರ ಕಡೆ ಯಾವುದೆನೆ ಸಾ
ವಂದದಲಿ ಹೊಯ್ದಾಡಿ ಹಿಡಿವೆವು ಸುರರ ಸೂಳೆಯರ
ಎಂದು ತಮ್ಮೊಳು ನೆರೆದು ಸೇನಾ
ವೃಂದ ಸಜ್ಜೋಡಿನಲಿ ಕಾಳಗ
ಕಂದು ಮೋಹರಿಸಿದರು ಹಸ್ತಿನಪುರದ ಬಾಹೆಯಲಿ ೭೮

ಇತ್ತಲಬಲೆಯ ವಿಧಿಯ ಕೇಳತಿ
ಮತ್ತನೈ ಧೃತರಾಷ್ಟ್ರ ಸುತನೀ
ಮತ್ತಗಜಗಾಮಿನಿಯ ಬಿಡಿಸಿದನವನ ಕೈಯಿಂದ
ನೆತ್ತ ಸೋತುದು ನಿನ್ನನೊಡ್ಡಿ ನೃ
ಪೋತ್ತಮನು ಸಲೆ ಮಾರ ಮಾರಿದ
ನತ್ತಡೇನಹುದೆಲೆಗೆ ತೊತ್ತಿರ ಹಿಂಡ ಹೊಗುಯೆಂದ ೭೯

ಲಲಿತ ಬುದ್ಧಿಗಳೀಗ ನೋಡಿರಿ
ಲಲನೆಯನು ಸತಿ ದಿಟ್ಟೆಯೆನ್ನದಿ
ರೆಲೆ ಸುಯೋಧನ ರಾಜ ಸಭೆಯಿದು ದೋಷರಹಿತವಲೆ
ಗೆಲವಿದೆಂತುಟೊ ತನ್ನ ಸೋಲಿದು
ಬಳಿಕ ಸೋತರೆ ಧರ್ಮಗತಿಯನು
ತಿಳಿದು ಹೇಳಲಿ ತತ್ಸಭಾ ಸದರೆಂದಳಿಂದುಮುಖಿ ೮೦

ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥಭಾಷಣಭೀತಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ ೮೧

ಚಪಳೆ ಫಡ ಹೋಗಿವಳು ಹಲಬರ
ನುಪಚರಿಸುವುದನರಿಯಲಾದುದು
ದ್ರುಪದನಂದನೆ ನಡೆ ವಿಳಾಸಿನಿಯರ ವಿಧಾನದಲಿ
ಕೃಪಣನೇ ಕುರುರಾಯ ನಿನಗಿ
ನ್ನಪದೆಸೆಯ ಹೊಲೆ ಹೋಯ್ತು ರಾಯನ
ವಿಪುಳ ವಿಭವವನನುಭವಿಸು ನಡೆಯೆಂದನಾ ಕರ್ಣ ೮೨

ಅಹುದೆಲೇ ಬಳಿಕೇನು ದಾಸ್ಯಕೆ
ವಿಹಿತವಾಯಿತು ನಿನ್ನ ತನುವಿನ
ಲಹ ಮನೋವ್ಯಥೆಯೇಕೆ ರಾಣೀವಾಸವೀಧಿಯಲಿ
ಮಹಿಳೆಯರ ಸಖ್ಯದಲಿ ಸೌಭಖ್ಯದ
ರಹಣಿಗೊಡಬಡು ವಾರಕದಲತಿ
ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ ೮೩

ವಾರಕದ ವಿವಿಧಾಭರಣ ಶೃಂ
ಗಾರವಂತಿರಲೀಕೆಯಾಡಿದ
ಸಾರ ಭಾಷೆಗೆ ನೆನೆಯರೇ ನಿರ್ವಾಹ ಸಂಗತಿಯ
ಓರೆಪೋರೆಯೊಳಾಡಿ ಧರ್ಮದ
ಧಾರಣೆಯ ಧಟ್ಟಿಸುವದಿದು ಗಂ
ಭೀರರಿಗೆ ಗರುವಾಯಿಯೇ ಸುಡಲೆಂದನಾ ಭೀಷ್ಮ ೮೪

ತುಟ್ಟಿಸಲಿ ಧನ ಮಾನಗರ್ವದ
ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು
ನೆಟ್ಟನೇ ನಿಶ್ಬೈಸಿದುದನೊಡ
ಹುಟ್ಟಿದರು ಮನ್ನಿಸಿದರಲ್ಲದೆ
ಹುಟ್ಟಿ ಹೊಂದಲು ಗತಿಯಹುದೆ ನಿನಗೆಂದನಾ ಭೀಷ್ಮ ೮೫

ಅಳಿಯದಂತಿರೆ ಸತ್ಯಧರ್ಮದ
ನೆಳಲು ನೆಗ್ಗದೆ ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯ ಸುರಕುಜದ
ಹಳಿವಿಗಳುಕದೆ ವೈರಿವರ್ಗದ
ಕಳಕಳಕೆ ಮೈಗೊಡದೆ ನೃಪ ನಿ
ರ್ಮಳದಲಿದ್ದರೆ ನಿನಗೆ ಸದರವೆಯೆಂದನಾ ಭೀಷ್ಮ ೮೬

ಸೋತ ಬಳಿಕಿವರೆಮ್ಮ ವಶವ
ಖ್ಯಾತಿಯಲಿ ನಾವ್ ನಡೆವರಲ್ಲ ವೃ
ಥಾತಿರೇಕದಿ ನೀವು ಘೂರ್ಮಿಸಲಂಜುವೆವೆ ನಿಮಗೆ
ಈ ತಳೋದರಿ ತೊತ್ತಿರಲಿ ಸಂ
ಘಾತವಾಗಲಿ ಸಾಕು ನಿಮ್ಮಯ
ಮಾತೆನುತ ಕುರುರಾಯ ಜರೆದನು ಭೀಷ್ಮ ಗುರು ಕೃಪರ ೮೭

ನೊಂದನೀ ಮಾತಿನಲಿ ಮಾರುತ
ನಂದನನು ಸಹದೇವನನು ಕರೆ
ದೆಂದನಗ್ನಿಯ ತಾ ಯುಧಿಷ್ಠಿರನೃಪನ ತೋಳುಗಳ
ಮಂದಿ ನೋಡಲು ಸುಡುವೆನೇಳೇ
ಳೆಂದು ಜರೆದರೆ ಹಿಡಿದುಮಾದ್ರೀ
ನಂದನನ ನಿಲಿಸಿದನು ಫಲುಗುಣ ನುಡಿದನನಿಲಜನ ೮೮




ಏನಿದೇನೈ ಭೀಮ ನಿಲು ಯಮ
ಸೂನು ಶಿವ ಶಿವ ಗುರುವಲಾ ನಮ
ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು
ಈ ನರೇಂದ್ರಗೆ ಸರಿಯೆ ಕುಂತೀ
ಸೂನುವೇ ಪ್ರಾಣಾರ್ಥದಿಂದ ಸ
ಘಾನನೈ ನಮಗೀತನೇ ಗತಿಯೆಂದನಾ ಪಾರ್ಥ ೮೯

ಹಿಂಗಿ ಹೋಗಲಿ ತನುವನಸು ಸ
ಪ್ತಾಂಗ ಬೇಯಲಿ ಖೋಡಿ ಮನದಲಿ
ಹಿಂಗುವದೆ ಹರಹರ ಧನಂಜಯ ಕಾಕ ಬಳಸಿದೆಲ
ಅಂಗನೆಯ ಮೇಲೊಡ್ಡವೇ ಲಲಿ
ತಾಂಗಿಗೀ ವಿಧಿಯೇಕೆ ನವಗೀ
ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ ೯೦

ಈಯವಸ್ಥೆಗೆ ತಂದ ಕೌರವ
ನಾಯಿಗಳ ನಿಟ್ಟೆಲುವ ಮುರಿದು ನ
ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ
ವಾಯುಸಖನಲಿ ಸುಡುವೆನೀಗಳೆ
ಬೀಯವಾಗಲಿ ದೇಹವಾಚಂ (೯೧

ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ
ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ ೯೨

ಕಂಗಳಿಂದನುಯೋಗ ನಿಜ ಹ
ಸ್ತಾಂಗುಲಿಯೊಳುತ್ತರ ಲಸದ್ಭ್ರೂ
ಭಂಗದಲಿ ಸಂದೇಹ ಮುಖ ವಿಕೃತಿಯಲಿ ದುರ್ನೀತಿ
ಇಂಗಿತದಲಾಂಗಿಕದ ಭಾವಾ
ಭಂಗ ಪರಿಯನು ಯೋಗಮುಕ್ತ ನ
ಯಂಗಳಲಿ ತಿಳಿದುಸುರದಿರ್ದುದು ಸಭೆ ಸುಭೀತಿಯಲಿ ೯೩

ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿ ದೂತನ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ ೯೪

ಹುಸಿವಚನ ಪೌರುಷ್ಯ ಲಲನಾ
ವಿಷಯ ಮೃಗತೃಷ್ಣಾಪಿಪಾಸಾ
ವ್ಯಸನಿ ಬಲ್ಲನೆ ಧರ್ಮತತ್ವರಹಸ್ಯ ನಿಶ್ಚಯವ
ಉಸುರಲಮ್ಮಿರೆ ವೈದಿಕದ ತನಿ
ರಸದ ಸವಿ ನಿವಗಲ್ಲದಾರಿಗೆ
ಬಸಿದು ಬೀಳ್ವುದು ಭೀಷ್ಮಯೆಂದು ವಿಕರ್ಣ ಗರ್ಜಿಸಿದ ೯೫

ತನ್ನ ಸೋತಾಗಲೆ ಮಹೀಪತಿ
ಯನ್ಯನಾದನು ಸತಿಗೆ ತನ್ನಿಂ
ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
ಅನ್ಯನನ್ಯಳ ಸೋತ ಗಡ ತಾ
ತನ್ನ ಧನವೆಂದರಸ ಶಕುನಿಯ
ಬಿನ್ನಣಕೆ ಬೆಳ್ಳಾದನೆಂದು ವಿಕರ್ಣ ಖತಿಗೊಂಡ ೯೬

ಫಡ ವಿಕಾರವೆ ನಮ್ಮೊಡನೆ ಬಾ
ಯ್ಬಡಿಕತನವೇ ಕುರು ಮಹೀಪತಿ
ಯೊಡನೆ ಹುಟ್ಟಿದೆಯಾದ ಕಾರಣ ಬಿಟ್ಟೆವೀಸದಲಿ
ನುಡಿದರೇ ಭೀಷ್ಮಾದಿಗಳು ನೀ
ನೊಡಬಡಿಸಲೆಂತರಿವೆ ಧರ್ಮದ
ಕಡೆ ಮೊದಲ ಕೈವಾರ ನಿನಗೇಕೆಂದನಾ ಕರ್ಣ ೯೭

ಏಕಪತಿ ಬಹುಸತಿಯರೆಂಬುದು
ಲೋಕ ಪದ್ಧತಿಯಾದುದದು ತಾ
ನೇಕಸತಿ ಬಹುಪತಿಗಳಿದು ವೈದಿಕ ವಿರುದ್ಧವಲೆ
ಲೌಕಿಕವ್ಯವಹಿತದ ಕರ್ಮವ
ನೀ ಕುಮಾರ್ಗಿಗಳಲ್ಲಿ ಕಂಡೆವು
ನೀ ಕುರುವ್ರಜದೊಳಗೆ ಜನಿಸೆ ವಿಕರ್ಣ ಹೋಗೆಂದ ೯೮

ಅಹುದು ಕರ್ಣನ ನುಡಿ ವಿಕರ್ಣನು
ಬಹುವಚನ ಪಂಡಿತನು ಬಾಹಿರ
ನಹುದಲೇ ಕುರುರಾಜ ವಂಶದೊಳುದಿಸಿ ಫಲವೇನು
ಅಹಿತಹಿತ ವಿಜ್ಞಾನಿಯಲ್ಲದ
ಬೃಹದುದರ ಕಿಂಕರನ ನುಡಿ ಕಿಂ
ಗಹನವೇ ಕಲಿಕರ್ಣಯೆಂದನು ನಗುತ ಕುರುರಾಯ ೯೯

ಹಾರ ಪದಕ ಕಿರೀಟ ಮಣಿ ಕೇ
ಯೂರ ಕರ್ಣಾಭರಣವೆಂಬಿವು
ಭಾರವಲ್ಲಾ ತೆಗೆಯ ಹೇಳ್ ದಾಕ್ಷಿಣ್ಯವೇನಿದಕೆ
ನಾರಿಗೀ ವಸ್ತ್ರಾಭರಣ ಶೃಂ
ಗಾರವೇಕಿನ್ನಿವನು ತೆಗೆ ಕೈ
ವಾರವಿದಕೇಕೆಂದು ದುಶ್ಶಾಸನಗೆ ನೇಮಿಸಿದ ೧೦೦

ತೆಗೆದು ಬಿಸುಟರು ಹಾರ ಪದಕಾ
ದಿಗಳ ನಿವರೈವರು ದುಕೂಲವ
ನುಗಿದು ಹಾಯ್ಕಿದರಿದ್ದರಿವರೊಂದೊಂದು ವಸ್ತ್ರದಲಿ
ಹೊಗೆಮೊಗದ ಕಿಡಿಗಣ್ಣ ಕೆಮ್ಮೀ
ಸೆಗಳ ಗುಜುರಿನ ಜುಂಜುಗೇಶದ
ವಿಗಡನೆದ್ದನು ಬಂದು ಹಿಡಿದನು ದ್ರೌಪದಿಯ ಸೆರಗ ೧೦೧

ಮುರುಹಿದರು ಮುಸುಡುಗಳ ಮಿಗೆ ನೀ
ರೊರೆವ ಕಂಗಳಲಕಟಕಟ ನಿ
ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ
ಕರಗಿದರು ಕಂದಿದರು ಮಮ್ಮಲ
ಮರುಗಿದರು ಭೀಷ್ಮಾದಿಗಳು ಜ
ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ ೧೦೨

ಅಳುಕಿದನೆ ಸುಡಲವನ ಮೇಲುದ
ಸೆಳೆದನುನ್ನತ ಕುಚವ ನಳಿತೋ
ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ನಿಷ್ಠುರಕೆ
ಕಳವಳಿಸಿದಳು ಬೆರಲಿನಲಿ ದೃಗು
ಜಲವ ಬಿದುರುತ ನೋಡಿದಳು ನೃಪ
ತಿಲಕನನು ಬೀಮಾರ್ಜುನರ ಮಾದ್ರೀಕುಮಾರಕರ ೧೦೩

ಮುರಿದವನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ ಸೋ
ದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳ ಕಟ ಗಂಗಾ
ವರಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ ೧೦೪

ಕ್ರೂರನಿವ ದುಶ್ಶಾಸನನು ಗಾಂ
ಧಾರಿ ಬಿಡಿಸೌ ಸೆರಗ ಸೊಸೆಯ
ಲ್ಲಾರು ಹೇಳೌ ತಂಗಿಯಲ್ಲಾ ನಿಮಗೆ ಭಾನುಮತಿ
ವೀರ ಸೈಂಧವನರಸಿ ರಾಜ ಕು
ಮಾರಿ ನೀ ನಾದಿನಿಯಲಾ ಖಳ
ರೌರವದೊಳದ್ದುವನು ಬಿಡಿಸೆಂದೊರಲಿದಳು ತರಳೆ ೧೦೫

ಎಲೆ ವಿಲಾಸಿನಿಯರಿರ ಭೂಪನ
ತಿಳಿಹಿರೌ ತಾಯ್ಗಳಿರ ನೀವಿಂ
ದೆಲೆ ಪಸಾಯ್ತೆ ಯರಿರ ಸಹೋದರಿಯೆಂದು ಕೌರವನ
ತಿಳುಹಿರೌ ಶರಣಾಗತರ ತಾ
ನುಳುಹಿ ಕೊಂಬುದು ಧರ್ಮವಕಟಾ
ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ ೧೦೬

ಧಾರುಣೀಪತಿಗಳಿರ ರಾಜ ಕು
ಮಾರರಿರ ಮಂತ್ರಿಗಳಿರಾ ಪರಿ
ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು
ನಾರಿಯೊಬ್ಬಳನಕಟ ಸಭೆಯಲಿ
ಸೀರೆಯುಡಿಯುರ್ಚುವರು ಕೆಟ್ಟೆನು
ಕಾರಣಿಕರಿಲ್ಲಾ ಶಿವಾಯೆಂದೊರಲಿದಳು ತರಳೆ ೧೦೭

ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿಯ ಕೊಂಡರು ಭೀಷ್ಮ ಮೊದಲಾ
ದತಿರಥರು ಪರಹಿತವ ಬಿಸುಟರು ವ್ಯರ್ಥ ಭೀತಿಯಲಿ
ಸುತನ ಸಿರಿ ಕಡುಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯ ಕಾಣೆನು ಶಿವಶಿವಾಯೆಂದೊರಲಿದಳು ತರಳೆ ೧೦೮

ಮೈದೆಗೆದವೀ ಪ್ರಾಣವಾಯುಗ
ಳೈದು ಬಳಿಕೆನಗಾರು ಮರುಗುವ
ರೈದೆತನವೊಂದುಳಿಯಲುಳಿವುದು ಮಿಕ್ಕ ಮಹಿಮೆಗಳು
ಬೈದು ಫಲವೇನಿನ್ನು ನಿನ್ನಯ
ಮೈದುನರ ಮರುಳಾಟಕೆನ್ನನು
ಕಾಯ್ದು ಕೊಳ್ಳೈ ಕೃಷ್ಣಯೆಂದೊರಲಿದಳು ಲಲಿತಾಂಗಿ ೧೦೯

ಸುಲಿವರೂರೊಳಗುಟ್ಟ ಸೀರೆಯ
ನೆಲೆ ಮುರಾಂತಕ ರಕ್ಷಿಸೈ ಶಶಿ
ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಳಿದಳು ತರಳೆ ೧೧೦

ಗತಿವಿಹೀನರಿಗಕಟ ನೀನೇ
ಗತಿಯಲೈ ಗೋವಿಂದ ರಿಪು ಬಾ
ಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲ
ಸತಿ ಪಶು ದ್ವಿಜ ಬಾಧೆಯಲಿ ಜೀ
ವಿತವ ತೊರೆವರು ಗರುವರದು ಹಿಂ (೧೧೧

ಗಿತೆ ಸುಯೋಧನ ಸಭೆಯೊಳೆಂದೊರಲಿದಳು ಲಲಿತಾಂಗಿ
ಕಾಯಿದೈ ಕರುಣದಲಿ ದಿವಿಜರ
ತಾಯ ಪರಿಭವವನು ಪಯೋಧಿಯ
ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ
ಕಾಯಿದೈ ಜಾನಕಿಯನೆನ್ನನು
ಕಾಯಬೇಹುದು ಹೆಣ್ಣ ಹರಿಬಕೆ
ನೋಯಬಲ್ಲರೆ ಕೆಲಬರೆಂದೊರಲಿದಳು ತರಳಾಕ್ಷಿ ೧೧೨

ವೇದವಧುಗಳ ಕಾಯ್ದೆಲಾ ತಮ
ಬಾಧೆಯಲಿ ಖಳನಿಂದ ಧರಣಿ ಮ
ಹೋದಧಿಯಲಕ್ಕಾಡಿದರೆ ದಾಡೆಯಲಿ ದಾನವನ
ಕೋದು ಹಾಕೀ ಭೂತ ಧಾತ್ರಿಯ
ಕಾದೆಲಾ ಕಾರುಣ್ಯಸಿಂಧುವೆ
ಮೇದಿನೀಪತಿ ಮನ್ನಿಸೆಂದೊರಲಿದಳು ತರಳಾಕ್ಷಿ ೧೧೩

ರಕ್ಷಿಸಿದೆ ಯೋಗಿಣಿಗೆ ಬೆದರುವ
ದಕ್ಷಸುತೆಯನು ಕೋಪಶಿಖಿ ತಿಮಿ
ರಾಕ್ಷನಾ ಜಮದಗ್ನಿ ಮುನಿಪನ ನುಡಿಯನನುಕರಿಸಿ
ರಕ್ಷಿಸಿದೆ ರೇಣುಕೆಯನೆನ್ನನು
ಪೇಕ್ಷಿಸದಿರೈ ಕರುಣದಲಿ ಕಮ
ಲಾಕ್ಷ ಬಿಡಿಸಾ ಸೆರಗನೆಂದೊರಲಿದಳುಹರಿಣಾಕ್ಷಿ ೧೧೪

ದೇವಕೀದೇವಿಯರ ಸೆರೆಯನು
ದೇವ ಕೃಪೆಯಲಿ ಬಿಡಿಸಿದೈ ಕರು
ಣಾವಲಂಬದಿ ಕಳಚಿದೈ ಹದಿನಾರು ಸಾವಿರದ
ದೇವಕನ್ಯಾ ಬಂಧನವನಭಿ
ಭಾವಕರ ಕೌರವರ ಭಂಗಿಸಿ
ದೇವ ಬಿಡಿಸೈ ಸೆರಗನೆಂದೊರಲಿದಳು ಪಾಂಚಾಲೆ ೧೧೫

ಶಿಶು ವಧೆಗೆ ಸೀವರಿಸದಸುರನ
ಬಸುರ ಹೂಮಾಲೆಯನು ನೀ ತುರು
ಬಿಸಿದೆಲಾ ನಖರಾಜಿಗಬಲನ ಕಾಯ್ದು ಕರುಣದಲಿ
ಶಿಶುವನಯ್ಯಂಗಿತ್ತು ಜಲಧಿಯ
ಮುಸುಕನುಗಿದತಿ ಕರುಣಿಯೇ ಹೆಂ
ಗುಸಿನ ಹರಿಬಕೆ ಕೃಪೆಯ ಮಾಡೆಂದೊರಲಿದಳು ತರಳೆ ೧೧೬

ತುರುವ ನುಂಗಿದ ಫಣಿಯ ಗಂಟಲ
ಮುರಿದು ಕಾಯ್ದೈ ಗೋವುಗಳ ಗಿರಿ
ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
ಮೆರೆದೆಲಾ ಕೃಪೆಯಲಿ ಗಜೇಂದ್ರನ
ಮುರಿಯಲೀಯದೆ ಖಳನು ಸೋಕಿದ
ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ ೧೧೭

ಒದೆದೊಡೊಲಿದವರುಂಟೆ ಬೈದೊಡೆ
ಪದವನಿತ್ತವರುಂಟೆ ಕರುಣಾ
ಸ್ಪದರನಾ ಕೇಳ್ದರಿಯೆನೇ ಕಮಲಾಸನಾದ್ಯರಲಿ
ಪದವ ಸೋಂಕಿದ ಮೂಹೊರಡು ತಿ
ದ್ದಿದುದು ಗಡ ಹೆಂಗುಸಿನ ಹೇರಾ
ಳದ ಕೃಪಾಳುವೆ ಕೃಷ್ಣ ಸಲಹೆಂದೊರಲಿದಳು ತರಳೆ ೧೧೮

ಸೊಕ್ಕಿದಂತಕ ದೂತರನು ಸದೆ
ದೊಕ್ಕಲಿಕ್ಕಿಯಜಾಮಿಳನ ಹಿಂ
ದಿಕ್ಕಿಕೊಂಡೆಯಲೈ ದುರಾತ್ಮಕ್ಷತ್ರಬಂಧದಲಿ
ಸೊಕ್ಕಿದರು ಕೌರವರು ಖಳರಿಗೆ
ಸಿಕ್ಕಿದೆನು ನಿನಗಲ್ಲದಾರಿಗೆ
ಕಕ್ಕುಲಿತೆಬಡುವೆನು ಮುರಾಂತಕಯೆಂದಳಿಂದುಮುಖಿ ೧೧೯

ಚರಣ ಭಜಕರ ಮಾನ ಹಾನಿಯ
ಹರಿಬವಾರದು ಕೃಷ್ಣ ನಾಮ
ಸ್ಮರಣ ಧನಿಕರಿಗುಂಟೆ ಘಲ್ಲಣೆ ಘೋರ ಪಾತಕದ
ಪರಮ ಭಕ್ತ ಕುಟುಂಬಕನು ನೀ
ಕರುಣಿಯಲ್ಲದೊಡೀ ಕುಟುಂಬಕೆ
ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ ೧೨೦

ನಾಥರಿಲ್ಲದ ಶಿಶುಗಳಿಗೆ ನೀ
ನಾಥನೈ ಗೋವಿಂದ ಸಲಹೈ
ಯೂಥಪತಿಗಳು ಬಿಸುಟ ತುರಣಿಗೆ ಕೃಪೆಯ ನೀ ಮಾಡೈ
ನಾಥರಿಲ್ಲೆನಗಿಂದು ದೀನಾ
ನಾಥಬಾಂಧವ ನೀನಲೈ ವರ
ಮೈಥಿಲೀಪತಿ ಮನ್ನಿಸೆಂದೊರಲಿದಳು ಮೃಗನಯನೆ ೧೨೧

ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವವೈ ಕಾಗೆಗಳಕಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ ೧೨೨

ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕನ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ ೧೨೩

ಆರಿಗೊರಲುವೆನೈ ಖಳಾಪ
ಸ್ಮಾರವಿದೆ ಸೆರೆವಿಡಿದು ತನ್ನಸು
ವಾರಿಗೆಯು ವೈರಾಗ್ಯ ಗಡ ಮತ್ಪ್ರಾಣ ವಿಭುಗಳಿಗೆ
ಘೋರತರ ಭವದುರಿತತರುವಿನ
ಬೇರ ಸುಡುವೀ ನಿನ್ನ ನಾಮಕೆ
ನಾರಿಯಕ್ಕೆಯ ನಿಲಿಸಲೇನರಿದೆಂದಳಿಂದುಮುಖಿ ೧೨೪

ಕರುಣಿ ನೀ ಕಾರುಣ್ಯ ಪಾತ್ರದ
ತರಳೆ ತಾ ದೀನಾರ್ತಿ ದುಃಖೋ
ತ್ತರಣ ನೀ ದೀನಾರ್ತ ದುಃಖಿತೆಯಾನು ಜಗವರಿಯೆ
ಪರಮ ಪಾಲಕ ನೀನೆ ಗತ್ಯಂ
ತರದ ವಿಹ್ವಲೆ ತಾನಲಾ ನಿ
ಷ್ಠುರವಿದೇನೈ ಕೃಷ್ಣಯೆಂದೊರಲಿದಳು ತರಳಾಕ್ಷಿ ೧೨೫

ಮರೆದೆನಭ್ಯುದಯಲಿ ನೀನೆಂ
ದರಿವೆನಾಪತ್ತಿನಲಿ ಮದದಲಿ
ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ
ಅರಿಯದಜ್ಞರ ಗುಣವ ದೋಷನ
ನರಸುವರೆ ನಿನ್ನಡಿಯ ಕೃಪೆಯನು
ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ ೧೨೬

ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ ೧೨೭

ತುಸು ಮೊದಲು ಚತುರಾಸ್ಯ ಪರಿಯಂ
ತೆಸೆವುದೇ ಭುವನದಲಿ ಜೀವ
ಪ್ರಸರವಿದ್ದುದು ದುಃಖಸೌಖ್ಯದ ತಾರತಮತೆಯಲಿ
ಉಸುರು ಪಸರಣವಿಲ್ಲದೆನ್ನು
ಬ್ಬಸದ ಭೀತಿಯ ಬೇಗೆ ಮಿಗೆ ದಾ
ಹಿಸುವುದೈ ಕಾರುಣ್ಯ ನಿಧಿಯೆಂದೊರಲಿದಳು ತರಳೆ ೧೨೮

ನಂದಗೋಪ ಕುಮಾರ ಗೋಪೀ
ವೃಂದ ವಲ್ಲಭ ದೈತ್ಯಮಥನ ಮು
ಕುಂದ ಮುರಹರ ಭಕ್ತವತ್ಸಲ ಘನಕೃಪಾಜಲಧೆ
ನೊಂದೆನೈ ನುಗ್ಗಾದೆನೈ ಗೋ
ವಿಂದ ಕೃಪೆ ಮಾಡಕಟೆನುತ ಪೂ (೧೨೯

ರ್ಣೇಂದುಮುಖಿ ಹಲುಬಿದಳು ಬಲು ತೆರದಿಂದಲಚ್ಯುತನ
ಇತ್ತ ದ್ವಾರಾವತಿಯೊಳಗೆ ದೇ
ವೋತ್ತಮನು ಭಕುತರಿಗೆ ತನ್ನನು
ತೆತ್ತು ಬದುಕುವನೆಂಬ ಪರಮವ್ರತದ ನಿಷ್ಠೆಯನು
ಚಿತ್ತದಲಿ ನೆಲೆಗೊಳಿಸಿ ರುಕ್ಮಿಣಿ
ಸತ್ಯಭಾಮೆಯರೊಳು ಸಮೇಳದ
ನೆತ್ತ ಸಾರಿಯ ಹರಹಿ ಹಾಸಂಗಿಯನು ದಾಳಿಸುತ ೧೩೦

ಕೇಳಿದನು ಮುರವೈರಿ ತನ್ನಯ
ಮೇಳದೈವರ ಸತಿಯ ಹುಯ್ಯಲ
ನಾಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ
ಕೋಳುಹೋದುವೆ ಪಾಂಡುಪುತ್ರರ
ಬಾಳುವೆಗಳಕಟೆನುತ ಲಕ್ಷ್ಮೀ
ಲೋಲ ಚಿಂತಿಸಿ ನುಡಿದ ರುಕ್ಮಿಣಿದೇವಿಗೀ ಹದನ ೧೩೧

ಕ್ರೂರ ದುರ್ಯೋಧನನು ದುಪದ ಕು
ಮಾರಿ ಪಾಂಚಾಲೆಯನು ಸಭೆಯಲಿ
ಸೀರೆಯನು ಸುಲಿಯಲ್ಕೆ ಕಾಯೈ ಕೃಷ್ಣೆಯೆಂದೆನುತ
ನಾರಿಯೊರಲುತ್ತಿಹಳು ವುಟ್ಟಾ
ಸೀರೆ ಸೆಳೆಯಲು ಬಳಿಕಲಕ್ಷಯ
ಸೀರೆಯಾಗಲಿಯೆಂದ ಗದುಗಿನ ವೀರ ನಾರಯಣ ೧೩೨

ಸಂಕ್ಷಿಪ್ತ ಭಾವ
Lrphks Kolar

ದ್ಯೂತದಲ್ಲಿ ಧರ್ಮಜನ ಪರಾಜಯ. ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗ. ಕರುಣಾಳು ಕೃಷ್ಣನ ರಕ್ಷಣೆ.

ಧರ್ಮಜನ ಧನಕನಕ, ವಸ್ತು ವಾಹನ, ಸೈನ್ಯ, ಸೇವಕಜನ ಎಲ್ಲರೂ ದ್ಯೂತದ ಪಣದಲ್ಲಿ ಕೌರವರ ವಶರಾದರು. ಪ್ರತಿ ಆಟದ ಪ್ರಾರಂಭದಲ್ಲಿಯೂ ಗೆದ್ದೇ ಗೆಲ್ಲುವ ವಿಶ್ವಾಸದಿಂದ ಪಣದ ಮೇಲೆ ಪಣವನ್ನು ಇಡುತ್ತಾ ಬಂದ ಧರ್ಮಜ ತನ್ನನ್ನು ತಾನು ಮರೆತ. ನಕುಲನಿಂದ ಆರಂಭಿಸಿ ತನ್ನವರೆಗೂ ಪಣಕ್ಕೆ ಒಡ್ಡಿದ. ಪರಾಜಿತನಾದ. ಆಟದ ಮೇಲೆ ಆಟ ಸಾಗಿದಂತೆ ಸಭೆಯಲ್ಲಿ ಮೌನವಾವರಿಸಿತು. ದುಗುಡವೆದ್ದಿತು. ಹಿರಿಯರು ತಲೆತಗ್ಗಿಸಿದರು. ಶಕುನಿಯು ಇನ್ನೂ ಹೀಯಾಳಿಸುತ್ತಲೇ ಇದ್ದ. ಕೊನೆಯಲ್ಲಿ ದ್ರೌಪದಿಯನ್ನೂ ಪಣಕ್ಕಿಟ್ಟು ಸೋತ ಧರ್ಮಜ. ವಿಧಿಯು ಮುನಿದಾಗ ಮನುಜರೇನು ಮಾಡುವರು? 

ಕೌರವರು ಅಪಹಾಸ್ಯ ಮಾಡಿದರು. ವಿದುರನು ತುಂಬಾ ವ್ಯಥೆಪಟ್ಟನು. ರಾಜಕುಮಾರಿ ದ್ರೌಪದಿಗೆ ಇಂತಹಾ ಶಿಕ್ಷೆಯೇ ಶಿವಶಿವಾ ಎಂದು ಪರಿಪರಿಯಾಗಿ ಗೋಳಿಟ್ಟನು. ಆದರೆ ಅದಾವುದನ್ನೂ ಗಣನೆಗೆ ತೆಗೆದುಕೊಳ್ಳದ ದುರ್ಯೋಧನ ಮತ್ತು ಅವನ ಬಣ ದ್ರೌಪದಿಯನ್ನು ಆಗಲೇ ತಮ್ಮ ತೊತ್ತನ್ನಾಗಿ ಮಾಡಿಕೊಂಡ ಖುಷಿಯಲ್ಲಿದ್ದರು. 

ದ್ರೌಪದಿಯನ್ನು ಕರೆಯಲು ಮೊದಲು ಸೇವಕ ಹೋಗುವನು. ಅವಳಿಗೆ ಈ ಎಲ್ಲ ಸುದ್ದಿ ತಿಳಿಯುವುದು. ಧರ್ಮಜನು ಮೊದಲು ತನ್ನನ್ನು ತಾನೇ ಪಣಕ್ಕಿಟ್ಟುಕೊಂಡು ಸೋತ ನಂತರ ತನ್ನನ್ನು ಪಣಕ್ಕಿಡಲು ಹೇಗೆ ಸಾಧ್ಯ? ಇದನ್ನು ಅಲ್ಲಿ ಹೋಗಿ ಹೇಳು ಎಂದು ಕಳಿಸುವಳು. ಅಲ್ಲಿದ್ದವರೆಲ್ಲರೂ ದುಃಖಿತರಾದರು. ಸೇವಕನು ಬಂದು ಸಭೆಯಲ್ಲಿ ದ್ರೌಪದಿಯ ಮಾತುಗಳನ್ನು ಹೇಳಿದ. ಅದಕ್ಕೆ ದುರ್ಯೋಧನನು ಕೂಗಾಡಿ ತನ್ನ ತಮ್ಮ ದುಶ್ಯಾಸನನಿಗೆ ಹೋಗಿ ಅವಳನ್ನು ಎಳೆದು ತರಲು ಸೂಚಿಸಿದ. ಅವನು ಬಹಳ ವೇಗವಾಗಿ ಬಂದು ದ್ರೌಪದಿಯ ಮಾತುಗಳನ್ನು ಕೇಳದೆ ಅವಳ ಸಿರಿಮುಡಿಗೆ ಕೈ ಹಾಕಿ ಎಳೆದುಕೊಂಡು ಹೊರಟ. ರಾಜಸೂಯ ಯಾಗದ ಅವಭೃಥಸ್ನಾನ ಮಾಡಿ ಪವಿತ್ರವಾಗಿದ್ದ ಅವಳ ಕೇಶಕ್ಕೆ ಕೈ ಹಾಕಿದ್ದು ಮುಂದೆ ಇಡೀ ಕುರುಕುಲದ ಅವನತಿಗೆ ಕಾರಣವಾಯಿತು.
ಏಕವಸ್ತ್ರದಲ್ಲಿದ್ದ ಅವಳ ಆ ಸ್ಥಿತಿಯನ್ನು ನೋಡಿ ಇಡೀ ಸಭೆ ತಲೆತಗ್ಗಿಸಿತು. ಭೀಮ ಅರ್ಜುನರು ಕುಳಿತಲ್ಲಿಯೇ ಕುದಿದರು. ದಾಸಿಯರ ಗುಂಪಿಗೆ ಹೋಗಿ ಸೇರಲು ಅವಳಿಗೆ ಹೇಳಿದಾಗ ರಾಜಸಭೆಯಲ್ಲಿದ್ದ ಹಿರಿಯರ ಕಡೆಗೆ ನೋಡಿದಳು. ಭೀಷ್ಮ ಮಾತನಾಡಲು ಹೊರಟರೆ ದುರ್ಯೋಧನ ಬಿಡಲಿಲ್ಲ. ಅವರೆಲ್ಲರನ್ನೂ ಜರೆದ. ಭೀಮನಿಗೆ ಕೋಪವುಕ್ಕಿ ಬೆಂಕಿಯಿಂದ ಧರ್ಮಜನ ಕೈ ಸುಡುವೆನೆಂದು ಕೂಗಾಡಿದ. ಆದರೆ ಪಾರ್ಥ ಅವನನ್ನು ಸುಮ್ಮನಾಗಿಸಿದ. ವಿಕರ್ಣನೊಬ್ಬನು ಇಡೀ ಪ್ರಕರಣವನ್ನು ಖಂಡಿಸಿದನಾದರೂ ಪ್ರಯೋಜನವಾಗಲಿಲ್ಲ.

ದುಶ್ಶಾಸನನು ಅಣ್ಣ ಮತ್ತು ಕರ್ಣಾದಿಗಳ ಸೂಚನೆಯಂತೆ ದ್ರೌಪದಿಯ ಸೆರಗನ್ನು ಸೆಳೆಯಲು ಮುಂದಾದ. ಆಗ ಅವಳು ಶ್ರೀ ಕೃಷ್ಣನನ್ನು ದೃಢಭಕ್ತಿಯಿಂದ ಸಂಪೂರ್ಣ ಶರಣಾಗತಳಾಗಿ ಪ್ರಾರ್ಥಿಸತೊಡಗಿದಳು. ಈ ಜಗತ್ತಿನಲ್ಲಿ ಶರಣಾಗತರ ರಕ್ಷಕ ನಿನ್ನ ಹೊರತು ಮತ್ತೆ ಯಾರೂ ಇಲ್ಲ. ಕಷ್ಟಕಾಲದಲ್ಲಿ ಗಜೇಂದ್ರ, ಪ್ರಹ್ಲಾದ, ಭೂದೇವಿ, ಮುಂತಾದವರನ್ನು ರಕ್ಷಿಸಿದೆ. ಹಲವರು ರಾಕ್ಷಸರನ್ನು ಕೊಂದೆ. ನಾನು ಅನಾಥಳಾದೆ. ಪತಿಗಳೈವರು ನನ್ನನ್ನು ಮಾರಿ ಈ ಸ್ಥಿತಿಗೆ ತಂದರು. ಗತಿಗೆಟ್ಟ ನನಗೆ ನೀನೇ ಬಂಧು, ಬಳಗ ಎಲ್ಲವೂ. ಕೃಪಾಳು, ಕರುಣಾಕರ, ಭಕ್ತವತ್ಸಲ, ದೇವಾ ದಯೆತೋರು ಎಂದು ಹಲವು ರೀತಿಗಳಲ್ಲಿ ಬೇಡಿಕೊಂಡಳು. ಈ ಭಾಗದ ಪದ್ಯಗಳಲ್ಲಿ ಅವಳ ಭಕ್ತಿ, ಶೋಕರಸಗಳು ಮಡುಗಟ್ಟಿವೆ.

ಇತ್ತ ದ್ವಾರಾವತಿಯಲ್ಲಿ ತನ್ನ ಮಡದಿಯರೊಂದಿಗೆ ಸರಸದಲ್ಲಿದ್ದ ಕೃಷ್ಣನಿಗೆ ಇದೆಲ್ಲವೂ ವೇದ್ಯವಾಯಿತು. ರುಕ್ಮಿಣಿಗೆ ಎಲ್ಲವನ್ನೂ ವಿವರಿಸಿದ. ಕ್ರೂರ ದುಶ್ಶಾಸನನು ಸೆಳೆಯುತ್ತಿರುವ ಸೀರೆ ಅಕ್ಷಯವಾಗಲಿ ಎಂದು ಹೇಳಿ ಕರುಣಾಳು ಕೃಷ್ಣ ದ್ರೌಪದಿಯನ್ನು ಈ ಕಷ್ಟ ಪ್ರಸಂಗದಿಂದ ರಕ್ಷಿಸಿದ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ