ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಣೇಶ್ ಎಲ್ ಭಟ್


 ಗಣೇಶ್ ಎಲ್ ಭಟ್

ಗಣೇಶ್ ಎಲ್. ಭಟ್ ಶಿಲ್ಪಕಲೆಗೆ ಹೊಸ ಆಯಾಮ ನೀಡಿ, ನವ ನವೀನ  ಸಂಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಮಹತ್ವದ ಕಲಾವಿದರು.

ಗಣೇಶ್ ಎಲ್. ಭಟ್‌ 1963ರ ಫೆಬ್ರುವರಿ 11ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ  ಇಡಗುಂಜಿಯಲ್ಲಿ ಜನಿಸಿದರು. ತಂದೆ ಲಕ್ಷ್ಮೀನಾರಾಯಣ ಭಟ್ಟ.  ತಾಯಿ ಮಂಗಳಾ ಭಟ್.  ಗಣೇಶರು ಸಾಮಾನ್ಯ ವಿದ್ಯಾಭ್ಯಾಸ ನಡೆಸಿದ್ದು  ಎಸ್.ಎಸ್.ಎಲ್.ಸಿ. ವರೆಗೆ ಮಾತ್ರವಾದರೂ,  ಕಲೆಯಲ್ಲಿ ಹೈಯರ್ ಡ್ರಾಯಿಂಗ್ ಮತ್ತು ಸಾಗರದಲ್ಲಿ  ಕರಕುಶಲ ತರಬೇತಿ ಪಡೆದರು. ರಾಷ್ಟ್ರಪ್ರಶಸ್ತಿ ವಿಜೇತ ದೇವಲಕುಂದ ವಾದಿರಾಜ್ ಅವರಲ್ಲಿ ಸುಮಾರು 10 ವರ್ಷಗಳ ತರಬೇತಿ ಪಡೆದ ಗಣೇಶ್,   ರಾಜ್ಯಪ್ರಶಸ್ತಿ ವಿಜೇತ ಕೆ.ಜಿ. ಶಾಂತಪ್ಪ ಗುಡಿಕಾರ್ ಅವರಲ್ಲಿ ಶಿಲ್ಪಕಲೆ ಕಲಿತರು. ಜೊತೆಗೆ ಪ್ರೊ. ಎಸ್.ಕೆ. ರಾಮಚಂದ್ರರಾಯರ ಬಳಿ ಶಿಲ್ಪಶಾಸ್ತ್ರದ ಅಧ್ಯಯನವನ್ನೂ ಮಾಡಿದರು.

ಹೀಗೆ ಹಲವಾರು ವರ್ಷಗಳ ಅನುಭವ ಗಳಿಸಿದ ಗಣೇಶ್ ಎಲ್ ಭಟ್ಟರು  ಮರ ಮತ್ತು ಕಲ್ಲು ಕೆತ್ತನೆಯಲ್ಲಿ  ಅಪಾರ ಸಾಧನೆ ಮಾಡಿದ್ದಾರೆ. ಭಾರತೀಯ ಸಾಂಪ್ರದಾಯಿಕ ಶಿಲ್ಪಕಲಾ ಪ್ರಕಾರದಲ್ಲಿ ನೂರಾರು   ವಿದ್ಯಾರ್ಥಿಗಳಿಗೆ  ತರಬೇತಿ ನೀಡುತ್ತಾ ಬಂದಿದ್ದಾರೆ.  ಅವರ ವಿದ್ಯಾರ್ಥಿಗಳಲ್ಲಿ ಬಹಳಷ್ಟು ವಿದೇಶೀ ವಿದ್ಯಾರ್ಥಿಗಳೂ ಇದ್ದಾರೆ. 

ಗಣೇಶ್ ಎಲ್  ಭಟ್ ಅವರು ಮರಳು ಮಿಶ್ರಿತ ಕೆಂಪುಕಲ್ಲು, ಶೆಲ್‌ಸ್ಟೋನ್, ಫ್ರೆಂಚ್‌ಸ್ಟೋನ್, ಲಿಂಪ್ಲಿಸ್ಟೋನ್, ಬಾತ್‌ಸ್ಟೋನ್, ಅಲ್‌ಬಷ್ಟರ್ ಸ್ಟೋನ್ ಹೀಗೆ ಬಗೆ ಬಗೆಯ ವಸ್ತುಗಳಲ್ಲಿ ವಿಶಿಷ್ಟ ತಂತ್ರಗಳನ್ನು ಬಳಸಿ ಶಿಲ್ಪಗಳನ್ನು ರಚಿಸಿದ್ದಾರೆ.   ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ 32 ಮುದ್ಗಲಪುರಾಣದ ಗಣಪತಿಗಳು, ಇಂಗ್ಲೆಂಡಿನ ಶೂಟ್ ಫಾರ್ಮ ಕಲಾಶಾಲೆಗೆ 9 ಅಡಿ ಉದ್ದ 5 ಅಡಿ ಎತ್ತರದ ಕಾಮಧೇನುವಿನ ಸಂಯೋಜನೆ, ಆಂಗ್ಲೋ ಇಂಡಿಯನ್ ಶೈಲಿಯ ಸಂಗೀತಗಾರನ ಶಿಲ್ಪ, ಜಾನಪದ ಶೈಲಿಯಲ್ಲಿ ನಿರ್ಮಿಸಿದ ಮಾರಮ್ಮನ ಆರಾಧಕ ಸಮೂಹಶಿಲ್ಪ ಮುಂತಾದುವುಗಳ ಸಂಯೋಜನೆ ಮತ್ತು ಕೆತ್ತನೆಗಳು  ಗಣೇಶ್ ಎಲ್ ಭಟ್ಟರಿಗೆ ಪ್ರಖ್ಯಾತಿ ತಂದಿವೆ.  ಅಯೋಧ್ಯೆಯ ರಾಮಮಂದಿರದ ಮೂಲವಿಗ್ರಹದ ಆಯ್ಕೆಯಲ್ಲೂ ಇವರ ಶಿಲ್ಪ ಪ್ರಮುಖ ಪರಿಗಣನೆಯಲ್ಲಿತ್ತು. ಇತ್ತೀಚೆಗೆ ಕಾಶಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಅನ್ನಪೂರ್ಣೇಶ್ವರಿ ವಿಗ್ರಹ ಕೂಡ ಇವರದ್ದೇ ರಚನೆ.  ಅಸಂಖ್ಯಾತ  ಶಿಲ್ಪ ಕಲಾಕೃತಿಗಳ ರಚನೆ ಮಾಡಿರುವುದರ ಜೊತೆಗೆ ಗಣೇಶ್ ಭಟ್ ಅವರು  ಭಾರತ ಮತ್ತು ಇಂಗ್ಲೆಂಡಿನಲ್ಲಿ ಬಹಳಷ್ಟು  ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ.  ಹಲವಾರು ಕಲಾಶಿಬಿರಗಳಲ್ಲಿ ಭಾಗಿಯಾಗಿದ್ದಾರೆ.  

ತಮ್ಮ ಕಿರು ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿರುವ ಗಣೇಶ್ ಎಲ್ ಭಟ್ಟರಿಗೆ  ಕರ್ನಾಟಕ ರಾಜ್ಯ ಪ್ರಶಸ್ತಿ, ಶಿಲ್ಪಶ್ರೀ ಪುರಸ್ಕಾರ ಮುಂತಾದ ಅನೇಕ ಪ್ರತಿಷ್ಟಿತ ಗೌರವಗಳು ಸಂದಿವೆ.   

ಪ್ರಸಕ್ತದಲ್ಲಿ ಗಣೇಶ್ ಭಟ್ಟರು  ಕೆನರಾ ಬ್ಯಾಂಕ್ ಪ್ರಾಯೋಜಿತ ಬಿಡದಿಯ ಬಳಿಯ ಜೋಗರದೊಡ್ಡಿ ಕರಕುಶಲ ತರಬೇತಿ ಕೇಂದ್ರದಲ್ಲಿ ಶಿಲ್ಪಿ ಹಾಗೂ ಶಿಲ್ಪ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಈ ಮಹಾನ್ ಕಲಾವಿದರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.

On the birth day of sculptor and artiste Ganesh L Bhat  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ