ಎಂ. ರಾಮಾ ಜೋಯಿಸ್
ಎಂ. ರಾಮಾ ಜೋಯಿಸ್
ಎಂ. ರಾಮಾ ಜೋಯಿಸ್ ನಿವೃತ್ತ ನ್ಯಾಯಮೂರ್ತಿಗಳೂ, ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದವರೂ, ಲೇಖಕರೂ, ವಾಗ್ಮಿಗಳೂ, ಸ್ವಯಂಸೇವಕರೂ ಆಗಿದ್ದವರು.
ರಾಮಾ ಜೋಯಿಸ್ 1931ರ ಜುಲೈ 27ರಂದು ಶಿವಮೊಗ್ಗ ಜಿಲ್ಲೆಯ ಅರಗ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ನರಸಿಂಹ ಜೋಯಿಸ್. ತಾಯಿ ಲಕ್ಷ್ಮೀದೇವಿರಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಶಿವಮೊಗ್ಗದಲ್ಲಿ ಪದವಿ ಪಡೆದು, ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದರು. ಬಾಲ್ಯದಿಂದಲೇ ಕ್ರಿಯಾಶೀಲರಾಗಿದ್ದ ರಾಮಾ ಜೋಯಿಸ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕರಾಗಿದ್ದರು.
1959ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದ ರಾಮಾ ಜೋಯಿಸ್, ವೆಂಕಟರಂಗ ಅಯ್ಯಂಗರ್ ಅವರ ಜತೆ ಕೆಲಸ ಮಾಡಿದ್ದರು. ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ರಾಮಾ ಜೋಯಿಸರು 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ತೀವ್ರವಾಗಿ ಪ್ರತಿಭಟನೆ ನಡೆಸಿ ಜೈಲುವಾಸ ಅನುಭವಿಸಿದ್ದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ರಾಮಾ ಜೋಯಿಸ್ ಅವರು, ತಮ್ಮ ಕರ್ತವ್ಯದ ಅವಧಿಯಲ್ಲಿ ಹಲವು ಬಾರಿ ಪದ ನಿಮಿತ್ತ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಕಾರ್ಯ ನಿರ್ವಹಿಸಿದ್ದರು.
1992ರ ಮೇ 3ರಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ರಾಮಾ ಜೋಯಿಸರು ಕೇವಲ ನಾಲ್ಕು ತಿಂಗಳಿನಲ್ಲಿ ನಿವೃತ್ತರಾದರು. ಇದಾದ ಬಳಿಕ ಕಾನೂನು ಪ್ರಾಧ್ಯಾಪಕರಾಗಿ ಹಾಗೂ ಸುಪ್ರೀಂ ಕೋರ್ಟಿನ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದರು.
2002-2004 ಅವಧಿಯಲ್ಲಿ ರಾಮಾ ಜೋಯಿಸರು ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. 2008ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಅವರು 2014ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು.
ಮಹತ್ವದ ಲೇಖಕರಾಗಿದ್ದ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ಸರ್ವೀಸ್ ಅನ್ಡರ್ ಸ್ಟೇಟ್, ಹಿಸ್ಟಾರಿಕಲ್ ಬ್ಯಾಟಲ್, ನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸ್ಟಿಟ್ಯೂಷನ್, ರಾಜಧರ್ಮ ವಿಥ್ ದಿ ಲೆಸೆನ್ಸ್ ಆಫ್ ರಾಜನೀತಿ, ಲೀಗಲ್ ಅಂಡ್ ಕಾನ್ಸ್ಟಿಟ್ಯೂಷನ್ ಹಿಸ್ಟರಿ ಆಫ್ ಇಂಡಿಯಾ, ಏನ್ಷೆಂಟ್ ಇಂಡಿಯನ್ ಲಾ, ಸೀಡ್ಸ್ ಆಫ್ ಮಾಡರ್ನ್ ಪಬ್ಲಿಕ್ ಲಾ ಇನ್ ಏನ್ಷೆಂಟ್ ಇಂಡಿಯನ್ ಜುರಿಸ್ಪುಡೆನ್ಸ್, ಹ್ಯೂಮನ್ ರೈಟ್ಸ್ ಭಾರತೀಯ ವ್ಯಾಲ್ಯೂಸ್, ಅವರ್ ಪಾರ್ಲಿಮೆಂಟ್ ಮುಂತಾದ ಅನೇಕ ಕೃತಿಗಳನ್ನು ಪ್ರಕಟಿಸಿದ್ದರು. 'ಧರ್ಮ' ಎಂಬ ಅವರ ಕೃತಿಯನ್ನು ಭಾರತೀಯ ವಿದ್ಯಾಭವನವು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಕಟಿಸಿದೆ. ಧರ್ಮ, ಅರ್ಥ, ಕಾಮ ವಿವರಣೆಯ 'ತ್ರಿವರ್ಗ', ಚಾರಿತ್ರ್ಯವೇ ಜೀವನ ಮುಂತಾದ ಕೃತಿಗಳೂ ಕನ್ನಡದಲ್ಲಿ ಪ್ರಕಟಗೊಂಡಿದೆ. ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿರುವ ಎಲ್ಲ ಸಂಸ್ಕೃತ ಶ್ಲೋಕ ಹಾಗೂ ಬರಹಗಳನ್ನು ಭಾಷಾಂತರಿಸಿ, ಆ ಶ್ಲೋಕಗಳ ಭಾವಾರ್ಥಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದರು.
89 ವರ್ಷ ಜೀವನ ಪೂರೈಸಿದ ನ್ಯಾಯಮೂರ್ತಿ ಎಂ. ರಾಮಾ ಜೋಯಿಸರು 2021ರ ಫೆಬ್ರವರಿ 16ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ನಮನ.
On Remembrance Day of eminent jurist, writer and Governor Justice Rama Jois
ಕಾಮೆಂಟ್‌ಗಳು