ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಧರ್ಮಶ್ರೀ ಅಯ್ಯಂಗಾರ್


 ಧರ್ಮಶ್ರೀ ಅಯ್ಯಂಗಾರ್


ಧರ್ಮಶ್ರೀ ಅಯ್ಯಂಗಾರ್ ಅಪರಿಮಿತ ಉತ್ಸಾಹಿ, ಬಹುಮುಖಿ ಪ್ರತಿಭೆ ಮತ್ತು ಎಲ್ಲೆಲ್ಲಿಯೂ ಸ್ನೇಹಮಯಿ.

ಫೆಬ್ರವರಿ 20 ಧರ್ಮಶ್ರೀ ಅವರ ಜನ್ಮದಿನ. ಒಂದೆಡೆ ಇಂಜಿನಿಯರಿಂಗ್ ಪದವೀಧರೆಯಾದ ಧರ್ಮಶ್ರೀ ಅವರು ಮತ್ತೊಂದೆಡೆ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.  ಅವರು ಸಂಗೀತ ಬಲ್ಲ ಹಾಡುಗಾರ್ತಿ.  ಕರ್ನಾಟಕ ಸಂಗೀತದ ಒಲವಿನಲ್ಲಿ ಬೆಳೆದ ಧರ್ಮಶ್ರೀ, ಪಂಡಿತ್ ವೀರಭದ್ರಯ್ಯ ಯಾರಗಲ್ ಅವರ ಬಳಿ ಕೆಲ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದಾರೆ.   ಸಿ. ಅಶ್ವತ್ಥ್ ಅವರ ಸುಗಮ ಸಂಗೀತ ಕಾರ್ಯಕ್ರಮಗಳ ಕೂಲಂಕಷ ಅಧ್ಯಯನ ಮಾಡಿದ್ದಾರೆ. ಕನ್ನಡದಲ್ಲಿ ಅವರ ಬರಹಗಳು ಲವಲವಿಕೆಯಿಂದ ಅನುಪಮ ಸ್ವಾದವನ್ನು ತುಂಬಿಕೊಂಡಿರುವಂತದ್ದು.

ನಾನು ಧರ್ಮಶ್ರೀ ಅವರ ಬರಹದ ಸ್ವಾದವನ್ನು ಹೇಳ್ದೆ.  ಅವರ ಫೇಸ್ಬುಕ್ಕಿಗೆ ಹೋದ್ರೆ ಅಲ್ಲಿ ಅವರು ತುಂಬುವ ಸ್ವಾದಗಳು ಹೊಟ್ಟೆ ಉರಿಸುವ ಪರಿ ಅಷ್ಟಿಷ್ಟಲ್ಲ. 😊

ಧರ್ಮಶ್ರೀ ಅವರು ಬದುಕನ್ನು ವೈವಿಧ್ಯಗಳ ಪರಿಯಲ್ಲಿ ಸಾಗಿಸುತ್ತ ಬಂದವರು. ಹಲವು ವರ್ಷ ಅಮೆರಿಕದಲ್ಲಿದ್ದಾಗ ಅಲ್ಲಿನ ಭಾರತೀಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು.  ಅಕ್ಕ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದವರು.  ಅವರು 'ಕಾಫಿ ಬ್ರೇಕ್' ಎಂಬ (ರಂಗರಾಜ್ ಚಕ್ರವರ್ತಿ ಅವರ ಕೃತಿ ಅನುವಾದ) ಮತ್ತು 'ಅಪಾರ್ಥ ಮಂಜರಿ' ಕೃತಿ ಪ್ರಕಟಿಸಿದ್ದಾರೆ.  ಅನೇಕ ನಿಯತಕಾಲಿಕೆಗಳಲ್ಲಿ ಅವರ ಬರಹ, ವಿಮರ್ಶೆ, ಚಿಂತನೆಗಳು ಮೂಡಿವೆ.  ಉತ್ಸಾಹಿಯಾದ ಧರ್ಮಶ್ರೀ ದೊಡ್ಡಮ್ಮನ ಮಗಳೊಂದಿಗೆ ಕೂಡಿ 'ಮಾಮೀಸ್! ' ಎಂಬ ಉದ್ಯಮದ ಮೂಲಕ ಭಾರತದ ಉದ್ದಗಲಕ್ಕೂ ಅಲ್ಲದೇ ವಿದೇಶಗಳಿಗೂ ನಮ್ಮ ದೇಸಿ ಆಹಾರ ಉತ್ಪನ್ನಗಳನ್ನು ತಲುಪಿಸಿದ ಸಾಹಸಿ.

ಉತ್ಸಾಹ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಿಂತನೆ ತುಂಬಿಕೊಂಡ ಧರ್ಮಶ್ರೀ ಅವರನ್ನು ಮೈಸೂರಿನಲ್ಲಿದ್ದಾಗ  ಆಗಾಗ ಕುಕ್ಕರಹಳ್ಳಿ ಕೆರೆ ಆವರಣದ ವಾಕಿಂಗ್ ಸಮಯದಲ್ಲಿ ಮತ್ತು ಕುಟುಂಬದ ಸಮಾರಂಭಗಳಲ್ಲಿ ಕಂಡು ಮಾತನಾಡುವುದು ಸಂತಸದ ವಿಚಾರವಾಗಿತ್ತು.  ತಾವೂ ಉತ್ಸಾಹಿಯಾಗಿರುವ ಅವರು ತಾವಿರುವ ವಾತಾವರಣದಲ್ಲಿ ಅದರ ಹರಿವನ್ನು ಮೂಡಿಸುವ ಚೈತನ್ಯಶೀಲೆ. 

ಆತ್ಮೀಯರಾದ ಧರ್ಮಶ್ರೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ಅವರಿಗೂ ಅವರ ಕುಟುಂಬದವರಿಗೂ ಬದುಕು ಸುಂದರವಾಗಿರಲಿ. 

Happy birthday Dharmashree Iyengar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ