ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ56


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಅರಣ್ಯಪರ್ವ - ಇಪ್ಪತ್ತನೆಯ ಸಂಧಿ


ರಾಯದಳವನು ಮುರಿದು ಕೌರವ
ರಾಯನನು ಕೊಂಡೊಯ್ವ ಖೇಚರ
ರಾಯನನು ತಾಗಿದನು ಮರಳಿಚಿ ತಂದನಾ ಪಾರ್ಥ

ಕೇಳು ಜನಮೇಜಯ ಧರಿತ್ರೀ
ಪಾಲ ಸಿಕ್ಕಿದನತ್ತ ಕುರು ಭೂ
ಪಾಲನದನೇಹೇಳುವೆನು ಪಾಳೆಯದ ಗಜಬಜವ
ಆಳು ಹಾಯ್ದುದು ಕಂಡ ಮುಖದಲಿ
ಕೀಳು ಮೇಲೊಂದಾಯ್ತು ಧನಿಕರ
ಪೀಳಿಗೆಯ ಧನ ಸೂರೆಯೋದುದು ಕೇರಿಕೇರಿಯಲಿ ೧ 

ಕುದುರೆ ಹಾಯ್ದವು ಕಂಡ ಕಡೆಯಲಿ
ಮದಗಜಾವಳಿಯೋಡಿದವು ವರ
ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ
ಕದಡಿದುದು ಜನಜಲಧಿ ಝಾಡಿಸಿ
ಬೆದರಿದವು ಕೇರಿಗಳು ರಾಯನ
ಹದನದೇನೇನೆನುತ ಹರಿದರು ಹರದರಗಲದಲಿ ೨ 

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲುಬೀಯಗದಂಗರಕ್ಷೆಯ ಕಂಚುಕಿ ವ್ರಜದ
ಮೇಳವವದೇನಾಯ್ತೊ ಬೀದಿಯ
ಗಾಳುಮಂದಿಯ ನಡುವೆ ಕುರುಭೂ
ಪಾಲನರಸಿಯರಳುತ ಹರಿದರು ಬಿಟ್ಟಮಂಡೆಯಲಿ ೩ 

ಕುರುಪತಿಯ ದುಶ್ಯಾಸನಾದಿಗ
ಳರಸಿಯರು ಚೌಪಟದಲೊದರಿದ
ರರಸನುಪಹತಿಗೊಪ್ಪುತೊಟ್ಟರೆ ಕರ್ಣಶಕುನಿಗಳು
ಗುರುನದೀಸುತರಿದ್ದರೀ ಪರಿ
ಪರಿಭವಕೆ ಪಾಡಹುದೆ ಪಾಂಡವ
ರರಸನಿಹ ವನವಾವುದೆಂದೊರಲಿದಳು ಭಾನುಮತಿ ೪ 

ಅರಸಿಯರು ಸಖಿಯರು ಕುಮಾರಿಯ
ರರಸನನುಜನ ಹೆಂಡಿರನಿಬರು
ವೆರಸಿ ಬಂದಳು ಭಾನುಮತಿ ಯಮತನುಜನಾಶ್ರಮಕೆ
ಕರುಣಿ ರಕ್ಷಿಸು ಸೋಮವಂಶೋ
ದ್ಧರಣ ರಕ್ಷಿಸು ಸತ್ಯಧರ್ಮದ
ಸಿರಿಯೆ ರಕ್ಷಿಸೆನುತ್ತ ಧೊಪ್ಪನೆ ಕೆಡೆದಳಂಘ್ರಿಯಲಿ ೫ 

ನಾದಿದಳು ನೃಪನಂಘ್ರಿಯನು ನಯ
ನೋದಕದ ಧಾರೆಯಲಿ ಭಾಳವ
ತೇದು ತಿಲಕದ ಗಂಧದಲಿ ಬೈತಲೆಯ ಮುತ್ತಿನಲಿ
ಆದರಿಸಿ ನವ ಕುಸುಮದಲಿ ಘನ
ರೋದನದ ಮಂತ್ರದಲಿ ನೃಪ
ಪಾದಪೂಜೆಯ ರಚಿಸುವವೊಲೊಪ್ಪಿದಳು ಭಾನುಮತಿ ೬ 

ಖಳರು ಕೌರವರಿಂದು ಸಜ್ಜನ
ಕುಲ ಶಿರೋಮಣಿ ನೀನು ಕರುಣಾ
ಜಲಧಿ ನೀನಪರಾಧಿಗಳು ನಾವಹೆವು ಜಗವರಿಯೆ
ಹುಳಿಗೆ ಹಾಲಳುಕಿದರೆ ಹಾಲಿನ
ಜಲಧಿ ಕೆಡುವುದೆ ಜೀಯ ತನ್ನವ
ರೆಳಸಿಕೊಂಡರು ಕಾಯಬೇಕೆಂದೊರಲಿದಳು ತರಳೆ ೭ 

ರಾಯರಿಗೆ ಬಿನ್ನಹದ ಮಾಡೌ
ತಾಯೆ ಕೇಳೌ ದ್ರೌಪದಿಯೆ ಹಿರಿ
ದಾಯಸವ ಬಡಿಸಿದನು ಕುರುಪತಿ ನಿನ್ನ ಮೈದುನನು
ನೋಯಿಸಲು ಶ್ರೀಗಂಧ ನಿಜಗುಣ
ದಾಯತವ ಬಿಡದಂತೆ ನೀವೇ
ಕಾಯಬೇಹುದು ಪತಿಯನೆಂದೊರಲಿದಳು ಭಾನುಮತಿ ೮ 

ಚುಂಬಿಸಿತು ಕಡುಶೋಕ ಮಿಡಿದನು
ಕಂಬನಿಯನುಗುರಿನಲಿ ಘನಕರು
ಣಾಂಬುನಿಧಿ ಸೀಗುರಿಸಿ ಮೈಗೂಡಿರಿದ ರೋಮದಲಿ
ಹಂಬಲಿಸ ಬೇಡಕಟ ಕುರುಪತಿ
ಯೆಂಬನಾರವ ಬೊಪ್ಪನವರೇ
ನೆಂಬರೇಳೌ ತಾಯೆಯೆನುತೆತ್ತಿದನು ಭಾಮಿನಿಯ ೯ 

ಭೀಮ ಬಾ ಕುರುರಾಜ ಕುಲ ಚೂ
ಡಾಮಣಿಯ ತಾ ಹೋಗು ಕದನೋ
ದ್ದಾಮ ದರ್ಪನ ತಾ ನಿಜಾನ್ವಯ ಕುಮುದ ಚಂದ್ರಮನ
ತಾ ಮನೋವ್ಯಥೆ ಬೇಡ ನೃಪ ಚಿಂ
ತಾಮಣಿಯ ತಾಯೆನಲು ಕರಯುಗ
ತಾಮರಸವನು ಮುಗಿದು ಬಿನ್ನಹ ಮಾಡಿದನು ಭೀಮ ೧೦ 

ಬೆಸಸ ಬೇಹುದು ನೀತಿ ಶಾಸ್ತ್ರದ
ಬೆಸುಗೆ ತಪ್ಪದೆ ರಾಜಧರ್ಮದ
ಮುಸುಡು ಕುಂದದೆ ಖೋಡಿವಿಡಿಯದೆ ಕುಶಲರಾದವರು
ಎಸಗುವದು ನಾವಾವ ಕಾರ್ಯದೊ
ಳಸುವನಿಕ್ಕಿ ತದರ್ಥವನು ಪರ
ರೆಸಗಿದೊಡೆ ನಮಗೇಕೆ ಬಾಧಕವೆಂದನಾ ಭೀಮ ೧೧ 

ತಮ್ಮ ಸಂಕಟಕಿವರು ವಿನಯವ
ನೆಮ್ಮಿ ಬಿನ್ನಹ ಮಾಡುತಿರ್ದೊಡೆ
ನಿಮ್ಮಡಿಗೆ ಪರಿತೋಷವೇ ಕರ್ತವ್ಯ ವಿಷಯದಲಿ
ಎಮ್ಮಮನ ಮುಂಚುವುದು ಕಾರ್ಯದ
ಹಮ್ಮುಗೆಯ ನೀವರಿಯಿರೇ ತಮ
ತಮ್ಮ ದುಷ್ಕೃತ ತಮಗೆ ಫಲಿಸಿದರೇನು ನಿಮಗೆಂದ ೧೨ 

ಅನುಜ ಕೇಳಪಚಾರಿ ಜನದಲಿ
ನೆನೆವುದು ಪಕಾರವನು ಗುಣ ಹೀ
ನನಲಿ ಗುಣವನು ತೋರುವುದು ಗರುವರಿಗೆ ಕೊಡಿಗೆಯಿದು
ಅನುಜನಲ್ಲಾ ನಮಗೆ ಕೌರವ
ಜನಪನವರಪರಾಧ ಶತವನು
ನೆನೆವೊಡಿದು ಹೊತ್ತೇ ಮಹಾದೇವೆಂದನಾ ಭೂಪ ೧೩ 

ಭರತವಂಶದೊಳವರ ಭಂಗವೆ
ನಿರುತವೆಮ್ಮದು ನಮ್ಮ ಭಂಗ
ಸ್ಫುರಣವವರದು ತಾವರಿಯರಾವರಿವೆವೀ ಹದನ
ಪರರ ಕಲಹಕೆ ನಾವು ನೂರೈ
ವರುಗಳಂತಃಕಲಹಕದು ನೂ
ರ್ವರು ವಿಚಾರಿಸಲೈವರಾವೆಂದನು ಮಹೀಪಾಲ ೧೪ 

ಆವನಾಗಲಿ ಬೇಡಿದಂಗೊಲಿ
ದೀವುದೇ ನೃಪಧರ್ಮ ಹಗೆ ಕೆಳೆ
ಯಾವನಾಗಲಿ ಸೆಣಸಿದಡೆ ಕಾದುವುದೆ ನೃಪನೀತಿ
ಆವನಾಗಲಿ ಶರಣುವೊಕ್ಕರೆ
ಕಾವುದೇ ಕ್ಷತ್ರಿಯರ ಮತವಿಂ
ತಾವುದುಚಿತವು ಭೀಮ ನೀ ಹೇಳೆಂದನಾ ಭೂಪ ೧೫ 

ಆರಿಗಾರುಪಕಾರಿಗಳು ಮೇ
ಣಾರಿಗಾರಪಕಾರಿಗಳು ತಾ
ನಾರಿಗಾರುಂಟವರವರ ಕೃತಕರ್ಮ ಸಂಸ್ಕಾರ
ಹೋರಿಸುವುದಳಿಸುವುದು ಸೌಖ್ಯಕೆ
ಸೇರಿಸುವುದಿದಕಹಿತ ಹಿತರೆಂ
ದಾರ ಮುರಿವುದು ಮನ್ನಿಸುವುದೈ ಭೀಮ ಹೇಳೆಂದ ೧೬ 

ಅದರಿನಾಚೆಯ ಭವದ ದುಷ್ಕೃತ
ವೊದಗಿತೀ ಜನ್ಮದಲಿ ವನವಾ
ಸದ ಪರಿಕ್ಲೇಶಾನುಭವಕಿವರೇನ ಮಾಡುವರು
ಒದಗಿದುತ್ಸವದಲ್ಲಿ ಪರರ
ಭ್ಯುದಯವನು ಬಯಸುವದು ಪರರಿಗೆ
ಮುದವನಾಚರಿಸುವುದು ಧರ್ಮಜ್ಞರಿಗೆ ಗುಣವೆಂದ ೧೭ 

ಎಣಿಸಲೇಕಿನ್ನದನು ಕೌರವ
ಗಣ ಮರಳಿ ಬಂದಲ್ಲದಾರೋ
ಗಣೆಯ ಮಾಡೆನು ಪಾರ್ಥ ನೀ ನುಡಿ ನಿನ್ನ ಹವಣೇನು
ರಣದೊಳರಿಗಳ ಮುರಿದು ಕುರುಧಾ
ರುಣಿಪತಿಯ ತಹುದುಂಟೆಯೆನೆ ಬಿಲು
ಗಣೆಗಳನು ತಿದ್ದಿದನು ಫಲುಗುಣ ಹೂಡಿದನು ರಥವ ೧೮ 

ಎಮಗೆ ನುಡಿ ಬೇರುಂಟೆ ನೀತಿ
ಭ್ರಮಿತರಾವಲ್ಲನಿಲಸುತನು
ಭ್ರಮಿತನವ ಸೈರಿಸುವುದೈ ಕಾರುಣ್ಯನಿಧಿ ನೀನು
ನಿಮಿಷದಲಿ ಗಂಧರ್ವಕನನಾ
ಕ್ರಮಿಸಿ ಕೌರವಗಣವನೀ ಪದ
ಕಮಲದಿದಿರಲಿ ಕೆಡಹಿತೋರುವೆನೆಂದು ಹೊರವಂಟ ೧೯ 

ಮುರಿದು ಚೆಲ್ಲಿದ ಸಕಲ ಕುರುಬಲ
ನೆರೆದುದರ್ಜುನನೊಡನೆ ಸೂಟಿಯೊ
ಳರಿಭಟನ ಬೆಂಬತ್ತಿದನು ಫಡ ನಿಲ್ಲು ನಿಲ್ಲೆನುತ
ಸೆರೆಯಬಿಡು ಗಂಧರ್ವಲೋಕವ
ನುರುಹುವೆನು ಹಿಂದಿಕ್ಕಿ ಕೊಂಬನ
ಶಿರವ ಚೆಂಡಾಡುವೆನೆನುತ ಕವಿದೆಚ್ಚನಾ ಪಾರ್ಥ ೨೦ 

ಸರಳಿನುಬ್ಬೆಗೆ ಸೆಡೆದು ಸಮರಕೆ
ತಿರುಗಿ ನಿಂದುದು ಖಚರಬಲವು
ಬ್ಬರದ ಬೊಬ್ಬೆಯಲುರುಬಿದುದು ಶರಹತಿಗೆ ಸೈರಿಸುತ
ಉರುಳಿದವು ಗಂಧರ್ವಶಿರ ನಭ
ಸರಳಮಯ ದಿಗುಜಾಲವಂಬಿನ
ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾಪಾರ್ಥ ೨೧

ಮೊರೆವ ಗರಿಗಳ ಮೊನೆಯಲುದುರುವ
ಹೊರಳಿಗಿಡಿಗಳ ಬಾಯಧಾರೆಗ
ಳುರಿಯ ಹೊದರಿನ ಹುದಿದ ಹೊಂಬರಹದ ಸುರೇಖೆಗಳ
ಸರಳು ಹೊಕ್ಕವು ಹೆಕ್ಕಿದವು ಖೇ
ಚರಬಲವನೊಕ್ಕಿದವು ತೂರಿದ
ವರಿಭಟರ ಚುಚ್ಚಿದವು ಹೆಚ್ಚಿದವೆಂಟುದೆಸೆಗಳಲಿ ೨೨ 

ಕೋಲಬಲುವಳೆಗೊಡ್ಡಿ ಹರಿಗೆಯ
ಮೇಳಯವ ಮರೆಗೊಂಡು ಖೇಚರ
ರಾಳು ನಿಂದೆಚ್ಚರು ನಿಹಾರದೊಳರ್ಜುನನ ರಥವ
ಕೋಲುಗಳನಾ ಹರಿಗೆ ಹಲಗೆಯ
ಮೇಳಯವನಾ ಮರೆಯಲುಗಿದೆಸು
ವಾಳನೊಂದಂಬಿನಲಿ ಸಂದಣಿಗೆಡಹಿದನು ಪಾರ್ಥ ೨೩ 

ಮೆಟ್ಟಿ ಹೆಣನನು ಖಚರಬಲ ಹುರಿ
ಗಟ್ಟಿ ತಲೆವರಿಗೆಯಲಿ ಪಾರ್ಥನ
ಕಟ್ಟಳವಿಯಲಿ ಚೂರಿಸಿದರುಬ್ಬಣದ ಮೊನೆಗಳಲಿ
ದಿಟ್ಟರಹಿರೋ ಕೌರವೇಂದ್ರನ
ಕಟ್ಟಿದಾತನ ಕರೆಯಿ ನಿಮ್ಮನು
ಮುಟ್ತಿದೊಡೆ ನೃಪನಾಣೆಯೆನುತೊಡಹಾಯ್ಸಿದನು ರಥವ ೨೪ 

ಗಜದ ಪದಘಟ್ಟಣೆಯ ಬಹಳಂ
ಬುಜದವೊಲು ರಥ ಚಕ್ರಹತಿಯಲಿ
ಗಿಜಿಗಜಿಯ ಮಾಡಿಸಿದ ಖೇಚರ ಚಟುಲ ಪಟುಭಟರ
ವಿಜಯನಲ್ಲಾ ಸುರಪುರದ ಮೌ
ರಜಿಗನಾವೆಡೆ ಕುರುಬಲದ ಗಜ
ಬಜದ ಗರುವನ ತೋರೆನುತ ತೂಳಿದನು ಕಲಿಪಾರ್ಥ ೨೫ 

ಅಳವಿಯಲಿ ಕೈಮಾಡಿ ಖೇಚರ
ರಳಲಿಗರು ಮುಮ್ಮುಳಿತರಾದರು
ಬೆಳಗಿದವು ದಿವ್ಯಾಸ್ತ್ರಧಾರೆಗಳಖಿಳ ದಿಗುತಟವ
ತಳಪಟದೊಳಾ ಸೆರೆ ಸಹಿತ ಕೈ
ಚಳಕದಲಿ ತೆಗೆದೆಸುತ ಸಮರಕೆ
ಮಲೆತು ನಿಂದನು ಚಿತ್ರಸೇನನು ಪಾರ್ಥನಿದುರಿನಲಿ ೨೬ 

ಬಿಡು ಸೆರೆಯನವಗಡೆಯ ತನವೆ
ಮ್ಮೊಡನೆ ಸಲ್ಲದು ಸೂಳೆಯರ ಸುರೆ
ಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು
ಫಡಯೆನುತ ನಾರಾಚದಲಿ ಬಲ
ನೆಡನ ಕೀಲಿಸಿ ಪಿಂಗುಡಿಯ ಮುಂ
ಗುಡಿಯ ಕಟ್ಟಿದ ನಂಬಿನಲಿ ಖಚರಾಧಿಪನ ರಥವ ೨೭ 

ನೂಕದಿರಲಾಹವಕೆ ಸಮ್ಮುಖ
ವೇಕೆನುತ ಹತ್ತಿದನು ಗಗನವ
ನಾ ಕಿರೀಟಿಯ ಗೆಲುವೆನೆಂದುಬ್ಬರದ ಬೊಬ್ಬೆಯಲಿ
ನಾಕ ನಿಳಯರ ಮಾರ್ಗದೊಲಗ
ವ್ಯಾಕುಳನು ಭುಲ್ಲೈಸಿದೊಡೆ ಲೋ
ಕೈಕವೀರನಲಾ ಧನಂಜಯನಡರಿದನು ನಭವ ೨೮ 

ಎಲವೊ ಕೌರವ ಸಹಿತ ಕಮಠನ
ಕೆಳಗೆ ಧ್ರುವನಿಂ ಮೇಲೆ ಹೊಕ್ಕರೆ
ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲುನಿಲ್ಲೆನುತ
ತುಳುಕಿದನು ಕೆಂಗೋಲನಿನ ಮಂ
ಡಲಕೆ ದಿಗ್ಭ್ರಮೆಯಾಯ್ತು ನಭದಲಿ
ಸುಳಿವ ಸುರರ ವಿಮಾನತತಿ ಚೆಲ್ಲಿದವು ದೆಸೆದೆಸೆಗೆ ೨೯ 

ತಿರುಗಿ ನಿಂದನು ಖಚರಪತಿ ನಿ
ಷ್ಠುರವಿದೇನೈ ಪಾರ್ಥ ನೀಕಡು
ಮರುಳೊ ಮೂಢನೊ ಜಡನೊ ಪಿತ್ತ ಭ್ರಾಂತಿ ವಿಹ್ವಲನೊ
ಧುರದ ಕೌತುಕ ಗರಳ ಮೂರ್ಛಾಂ
ತರಿತ ಹೃದಯನೊ ನಿಲ್ಲು ಚಾಪದ
ಶರವನುಪಸಂಹರಿಸಿ ನಮ್ಮಯ ಮಾತ ಕೇಳೆಂದ ೩೦

ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ ೩೧

ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ ನೀರಲಿ
ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ
ಕೈದು ಮುರಿದೊಡೆ ಹಗೆಗೆ ತನ್ನಯ
ಕೈದು ಕೊಟ್ಟವರುಂಟೆ ಕುರುಪತಿ
ತೀದಡೀತನ ಬಿಡಿಸಿಕೊಂಬಿರೆ ಲೇಸು ಲೇಸೆಂದ ೩೨ 

ಜನಪನೀತಿಯೊ ಮೇಣು ಬೋಳೆಯ
ತನವೊ ಬಿಲು ಜಾಣಿಕೆಯೊ ಬಿಂಕವೊ
ನಿನಗೆ ಕದನದ ಕಲುಹೆಯೋ ನಾವರಿಯೆವಿದನೀಗ
ಬನಕೆ ಮರಳೈ ಮರುಳೆ ನೀ ಪುದು
ಮನೆಯ ಹಾವನು ಹದ್ದು ಹಿಡಿದರೆ
ಮನಕತವ ಮಾಡುವರೆ ಬಿಜಯಂಗೈಯಿ ನೀವೆಂದ ೩೩ 


ನಟರಲಾ ನೀವ್ ಸುರುಪುರದ ಚಾ
ವಟೆಯರೈ ಚತುರೋಕ್ತಿಗಳ ಲಟ
ಮಟಿಸಿದರೆ ನಾ ಮರಳುವೆನೆ ಬಿಡು ಬಿಡು ಸುಯೋಧನನ
ಕಟುಮಧುರವುರಿ ಶೀತವತಿ ಸಂ
ಕಟವು ಸುಖ ವಿಷವಮೃತವಾವುದು
ಘಟಿಸಲಗ್ರಜನಾಜ್ಞೆಯದು ತಮಗೆಂದನಾ ಪಾರ್ಥ ೩೪ 

ಧರ್ಮವಾಗಲಿ ಮೇಣು ಜಗದಲ
ಧರ್ಮವಾಗಲಿ ರಾಜಮಂತ್ರದ
ಮರ್ಮವಾಗಲಿ ನೀತಿ ಬಾಹಿರವಾಗಲದು ಮೇಣು
ಧರ್ಮಪುತ್ರನ ಬೆಸನು ವೈದಿಕ
ಧರ್ಮವೆಮಗದು ರಾಜಮಂತ್ರದ
ನಿರ್ಮಲಿನ ಮತವೆಮಗೆ ಬೇರೊಂದಿಲ್ಲ ಮತವೆಂದ ೩೫

ನುಸುಳುಗಂಡಿಯಿದಲ್ಲ ಕೌರವ
ವಸುಮತೀಶನನಕಟ ಬಿಡು ನಿ
ನ್ನುಸುರಿಗುಬ್ಬಸ ಮಾಡೆನಂಘ್ರಿಗಳಾಣೆ ಧರ್ಮಜನ
ಮಸಗುವರೆ ಹಿಡಿ ಧನುವನೆನುತೆ
ಬ್ಬಿಸಿದನವಿರಳ ಶರವನಾತನ
ಮುಸುಕಿದವು ಮುಕ್ಕುರಿಕಿದವು ರಥ ಸನ್ನಿವೇಶದಲಿ ೩೬

ಕೋಲ ಬರಿದೇ ಬೀಯ ಮಾಡದಿ
ರೇಳು ಫಲುಗುಣ ಮರಳು ನೀ ದಿಟ
ಕೇಳುವರೆ ನಾವಿವನ ಕಟ್ಟಿದೆವಿಂದ್ರನಾಜ್ಞೆಯಲಿ
ಪಾಲಿಸಾ ನಿಮ್ಮಯ್ಯ ಬೆಸಸಿದ
ನೇಳಿಸದೆ ಕೇಳೆನಲು ಕೆಂಗರಿ
ಗೋಲ ತೂಗುತ ಪಾರ್ಥನುಡಿದನು ಚಿತ್ರಸೇನಂಗೆ ೩೭ 

ಕುರುಪತಿಯ ಕಟ್ಟುವೊಡೆ ಸುರಪತಿ
ಕರೆದು ಬೆಸಸಿದ ನಿನಗೆಯವಗೆ
ಮ್ಮರಸ ನೇಮವ ಕೊಟ್ಟನೀ ಕುರುಪತಿಯ ಬಿಡಿಸೆಂದು
ಸುರಪತಿಗೆ ಕೃತಕಾರ್ಯ ನೀನಾ
ಗಿರಲು ನಾವಕೃತಾರ್ಥರಾಗಿಯೆ
ಮರಳಿ ಭೂಪನ ಕಾಂಬೆವೈಸಲೆ ಜಾಣನಹೆಯೆಂದ ೩೮

ಬಿಡುವೆಯಾದರೆ ನೃಪನ ಸೆರೆಯನು
ಬಿಡಿಸುವೆನು ಮೇಣಲ್ಲದಿರ್ದೊಡೆ
ಬಿಡಿಸುವೆನು ನಿನ್ನುಸುರ ಸೆರ್ಯನು ನಿನ್ನ ದೇಹದಲಿ
ನುಡಿಗೆ ತೆರಹಿಲ್ಲೇಳೆನುತ ಕೈ
ಗಡಿಯಲೆಚ್ಚನು ಕಾಲಕೂಟದ
ಕಡಲು ಕವಿವಂದದಲಿ ಕವಿದವು ಪಾರ್ಥನಂಬುಗಳು ೩೯

ಕಡಿದನರ್ಜುನನಂಬನೀಸವ
ಗಡವಿದೇಕೈ ಮರುಳೆ ಕೆಂಡವ
ಮಡಿಲೊಳಿಕ್ಕುವುದರ್ತಿಯೇ ಸಂಧಾನ ನಿಮಗೆಮಗೆ
ಬಿಡುವೆನಿನಿಬರ ಸೆರೆಗಳನು ನಿ
ನ್ನೊಡೆಯನಲ್ಲಿಗೆ ಕೊಂಡು ನಡೆಯೆಂ
ದೊಡನೆ ಬಂದನು ಧರ್ಮರಾಯನ ಬಳಿಗೆ ಖಚರೇಂದ್ರ ೪೦ 

ಸೋಲವೆಮ್ಮದು ನಿಮ್ಮ ತಮ್ಮನೆ
ಮೇಲುಗೈ ನಿಮ್ಮಡಿಗಳಾಜ್ಞಾ
ಪಾಲಕರು ಭೀಮಾರ್ಜುನರು ಮಾದ್ರೀಕುಮಾರಕರು
ಕಾಳಗದೊಳೆಮ್ಮಖಿಳ ಖಚರರ
ಧೂಳಿಪಟಮಾಡಿದನು ಲಕ್ಷ್ಮೀ
ಲೋಲ ನಿಮಗೊಲಿದಿಹನು ಗದುಗಿನ ವೀರನಾರಯಣ ೪೧

ಸಂಕ್ಷಿಪ್ತ ಭಾವ

ಪಾರ್ಥನಿಂದ ದುರ್ಯೋಧನನ ಬಿಡುಗಡೆ.

ವೈಭವದಿಂದ ಬಂದಿದ್ದ ಕೌರವನ ಪರಿವಾರಕ್ಕೆ ದಿಕ್ಕು ತೋಚದಂತಾಯಿತು. ದುರ್ಯೋಧನನ ಪತ್ನಿ ಭಾನುಮತಿಯು ಧರ್ಮಜನಲ್ಲಿಗೆ ಬಂದು ಕಾಲಿಗೆ ಬಿದ್ದು ಪತಿಯನ್ನು ಉಳಿಸಿಕೊಡುವಂತೆ ಬೇಡಿಕೊಂಡಳು.ದ್ರೌಪದಿಯನ್ನೂ ಕೇಳಿಕೊಂಡಳು. 

ಧರ್ಮಜನು ಅವಳನ್ನು ಸಂತೈಸಿದನು. ಭೀಮನಿಗೆ ದುರ್ಯೋಧನನನ್ನು ಬಿಡಿಸಿಕೊಂಡು ಬರುವಂತೆ ಹೇಳಿದನು. ಆದರೆ ಭೀಮ ಒಪ್ಪಲಿಲ್ಲ. ಅವರಿಗೆ ತಕ್ಕ ಶಾಸ್ತಿ ಅದಾಗಿಯೇ ಆಗಿದೆ. ಅನುಭವಿಸಲಿ ಎಂದನು. ಅದಕ್ಕೆ ಧರ್ಮಜನು ಬೇರೆಯವರೆದುರು ಬಂದಾಗ ನಾವು ನೂರೈವರು. ನಮ್ಮ ನಮ್ಮಲ್ಲಿ ಕಲಹ ಬಂದಾಗ ಅವರು‌ ನೂರು ಜನ. ನಾವು ಐವರು ಎಂದು ನೂರೈವರಾವಲ್ಲವೆ ಎಂದು ಭೀಮನಿಗೆ ತಿಳಿಹೇಳಿದನು. ಅಲ್ಲದೆ ಶರಣಾಗತರನ್ನು ರಕ್ಷಿಸುವುದು, ಬೇಡಿದವರಿಗೆ ಬೇಡಿದ್ದನ್ನು ನೀಡುವುದು, ಎದುರು ಬಿದ್ದವರೊಂದಿಗೆ ಕಾದುವುದು ನಮ್ಮ ಧರ್ಮವೆಂದನು. ಭೀಮನು ಇನ್ನೂ ಸುಮ್ಮನೆ ಇದ್ದನು. ಆಗ ಅರ್ಜುನನಿಗೆ ಈ ಕೆಲಸವನ್ನು ವಹಿಸಿಕೊಟ್ಟನು. ಅಣ್ಣನ ಮಾತಿಗೆ ಎದುರಾಡದೆ ತಕ್ಷಣ ಸಿದ್ಧನಾಗಿ ದುರ್ಯೋಧನನ ಅಪಹರಣ ಮಾಡಿದ್ದ ಗಂಧರ್ವರ ಬೆಂಬತ್ತಿ ಹೋದನು. ಉಳಿದ ಸೇನೆಯೂ ಹಿಂಬಾಲಿಸಿತು.

ಅರ್ಜುನನಿಗೂ ಚಿತ್ರಸೇನನಿಗೂ ಭಾರೀ ಯುದ್ಧವಾಯಿತು. ಬಾಣಗಳ ಸುರಿಮಳೆಯಾಯಿತು. ಗಗನದಲ್ಲಿಯೂ ಯುದ್ಧವಾಯಿತು. ಚಿತ್ರಸೇನನು ಅರ್ಜುನನನ್ನು ಮೂದಲಿಸಿದನು. ಇವನು ನಿನ್ನ ಶತ್ರು. ಇವನನ್ನು ಬಿಡಿಸಲು ಬಂದಿರುವೆಯಲ್ಲ ಎಂದು. ಅದಕ್ಕೆ ಪಾರ್ಥನು ಅಣ್ಣನ ಆಜ್ಞೆಯೇ ಮುಖ್ಯವೆಂದನು. ಧರ್ಮಜನಾಣೆ, ಇವನನ್ನು ಬಿಟ್ಟರೆ ನಿನ್ನ ಉಳಿವು ಎಂದು ಹೆದರಿಸಿದನು. 

ಆಗ ಚಿತ್ರಸೇನನು ಇಂದ್ರನ ಆಜ್ಞೆಯಂತೆ ಇವನನ್ನು ಸೆರೆಹಿಡಿದು ಗರ್ವಭಂಗ ಮಾಡಬೇಕಾಯಿತು ಎಂದನು. ಈಗ ನಿನ್ನಾಜ್ಞೆಯಂತೆ ಬಿಡುವೆನೆಂದನು. ಆಗ ಎಲ್ಲರೂ ಧರ್ಮಜನಿದ್ದಲ್ಲಿಗೆ ಬಂದರು. ನಿಮ್ಮ ತಮ್ಮನ ಶೌರ್ಯ ದೊಡ್ಡದು. ನಾವು ಸೋತೆವು, ನಿಮಗೆ ಲಕ್ಷ್ಮೀಲೋಲನ ಕರುಣೆಯಿರುವುದೆಂದು ಹೇಳಿ ನಮಸ್ಕರಿಸಿದನು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ