ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ57


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಅರಣ್ಯಪರ್ವ - ಇಪ್ಪತೊಂದನೆಯ ಸಂಧಿ

ಕಳುಹಿದನು ಯಮಸೂನು ವಂಶ
ಪ್ರಳಯನನು ಪ್ರಾಯೋಪವೇಶವ
ತಿಳುಹಿ ದೈತ್ಯರು ಸಂತವಿಟ್ಟರು ಕೌರವೇಶ್ವರ 

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪನ ತಂದು ಕೃ
ಪಾಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ
ತೋಳ ಹಿಂಗಟ್ಟುಗಳ ಮೋರೆಯ
ಕಾಳಿಕೆಯ ಬಿಡುದಲೆಯ ನೀರೊರೆ
ವಾಲಿಗಳ ಕುರುಭೂಪನಿದ್ದನು ತಮ್ಮದಿರು ಸಹಿತ ೧

ಕೊಳ್ಳಿ ಸೆರೆಯನು ನಿಮ್ಮ ಸಹಭವ
ರೆಲ್ಲರೂ ಕಡುಮೂರ್ಖರಿದು ನಿ
ಮ್ಮೆಲ್ಲರಿಗೆ ಮತವೈಸಲೇ ನಾವೆಂದು ಫಲವೇನು
ಖುಲ್ಲರಿವದಿರ ಬಿಡಿಸಿದೊಡೆ ತಳು
ವಿಲ್ಲದಹುದಪಘಾತ ಸಾಕಿ
ನ್ನೆಲ್ಲಿಯದು ನಯ ಬೀಳುಕೊಡಿ ನೀವೆಂದನಾ ಖಚರ ೨

ಮಾನಭಂಗವೆ ಬರಲಿ ಮೇಣಭಿ
ಮಾನವಾಲಿಂಗಿಸಲಿ ಚರಣದೊ
ಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು
ನೀನೆಮಗೆ ಬಾಂಧವನೆನ್ನುತ ಸ
ನ್ಮಾನದಲಿ ಕಳುಹಿಸಿದನು ಬಳಿಕು
ದ್ಯಾನದಲಿ ದೇವೇಂದ್ರನೆತ್ತಿದನಳಿದ ಖೇಚರರ ೩

ಕಳುಹಿದನು ಖೇಚರನನವನಿಪ
ತಿಲಕ ನೋಡಿದನೀತನನು ನಿಜ
ಲಲನೆಯನು ಕರೆದನು ಸುಯೋಧನ ನೊಂದನಕಟೆನುತ
ನಳಿನಮುಖಿ ಹೆಡಗೈಯ ಬಿಡು ಕಲು
ನೆಲನು ಹಾಸಿಕೆ ಹಂಸತಲ್ಪದ
ಪಳಿಕಿನಲಿ ಪವಡಿಸುವಗೀ ವಿಧಿಯೇ ಶಿವಾಯೆಂದ ೪

ಬಂದಳಬುಜಾನನೆ ಸುಯೋಧನ
ನಮ್ದವನು ನೋಡಿದಳು ಸುಯ್ದಳು
ಬೆಂದ ವಿಧಿ ಬಂಧನವ ತಂದುದೆ ಸಾರ್ವಭೌಮರಿಗೆ
ಒಂದು ಕೈ ಗಲ್ಲದಲಿ ಬಿಡಿಸಿದ
ಳೊಂದು ಕೈಯಲಿ ಭುಜದ ಪಾಶವ
ನಿಂದುಮುಖಿ ದುರಿಯೋಧನನ ದುಶ್ಯಾಸನನು ಸಹಿತ ೫

ಕೆಳದಿಯರ ಕೈಯಿಂದ ಕೊಯ್ಸಿದ
ಳುಳಿದ ಕೌರವನನುಜವರ್ಗದ
ಬಲು ಹುರಿಯ ನೇಣುಗಳನವದಿರ ಗೋಣುಗಳು ಮಣಿಯೆ
ಅಳಲಿಸಿದನೇ ಖಚರನಾತನ
ಕೊಲಿಸಬೇಹುದು ಕಳುಹಿ ಕಷ್ಟವ
ಬಳಸಿದಿರಿ ಭೂಪಾಲಯೆಂದಳು ನಳಿನಮುಖಿ ನಗುತ ೬

ಅರಸ ನೊಂದೈ ಮರ್ದನಕೆ ಮ
ಲ್ಲರುಗಳಿಲ್ಲೆಮಗೊತ್ತುವವು ಕಲು
ಹರಳು ಮಜ್ಜನ ಮಾಡುವೊಡೆ ಶೀತಾಂಬು ತಿಳಿಗೊಳದ
ಹರಿಣ ಶಾರ್ದೂಲಾದಿ ಚರ್ಮಾಂ
ಬರವೆ ಸಮಕಟ್ಟೆಮಗೆ ರತ್ನಾ
ಭರಣವೇ ರುದ್ರಾಕ್ಷಿಯೆಂದಳು ನಗುತ ತರಳಾಕ್ಷಿ ೭

ವಾರುವವು ವಟಶಾಖೆ ಗಿರಿಗಳು
ತೋರ ಕರಿಗಳು ಭದ್ರಗಜ ವನ
ಭೂರುಹದ ನೆಳಲೆಮಗೆ ಸತ್ತಿಗೆ ಪಲ್ಲವವ್ರಾತ
ಚಾರು ಚಾಮರ ಕಿರುಮೊರಡಿ ವಿ
ಸ್ತಾರ ಪೀಠವು ಹಂತಿಗಾರರು
ಭೂರಿ ಸರ್ಪಾವಳಿಗಳರಮನೆ ಹೊದರು ಹೊಸಮೆಳೆಯ ೮

ಈ ವಿಪತ್ತಿನ ನಿಮ್ಮಡಿಯ ಸಂ
ಭಾವಿಸುವರೆಮಗಾದ ವಸ್ತುಗ
ಳೀ ವಿಧಿಗಳೇಕೆಮ್ಮ ಬಾಳಿಕೆಯೆಂದು ದುಗುಡದಲಿ
ದೇವನಿರ್ಪನು ಧರ್ಮಸುತನಿ
ನ್ನಾವುದುಚಿತಾನುಚಿತವೆಂಬುದ
ಭಾವನವರೇ ಬಲ್ಲಿರೆಂದಳು ದ್ರೌಪದಾ ದೇವಿ ೯

ಮಾನಿನಿಯ ಕಟಕಿಯ ಮಹಾಸ್ತ್ರಕೆ
ಮೌನವನು ಮರೆಗೊಂಡು ಕಲುಷ
ಧ್ಯಾನನಿದ್ದನು ಚಿತ್ತದಲಿ ಬೇರೊಂದು ಚಿಂತಿಸುತ
ಭಾನುಮತಿ ಕೈಮುಗಿದಳೀ ಕ
ರ್ಣಾನುಗತ ತಾಟಂಕ ಮುದ್ರೆಯ
ನೀನೆಲೈ ದಯೆಗೈದೆಯೆಂದೆರಗಿದಳು ಚರಣದಲಿ ೧೦

ಎತ್ತಿದನು ರಾಣಿಯನು ನೃಪ ತಲೆ
ಗುತ್ತಲೇಕೈ ನಿನಗೆ ಬಂದಾ
ಪತ್ತು ನಮ್ಮದು ನಮ್ಮ ತೊಡಕಿನ ತೋಟಿಗಳು ನಿನಗೆ
ಹೆತ್ತತಾಯ್ಗಾಂಧಾರಿ ಸತಿ ನಾ
ವಿತ್ತಡಿಗಳಕಟಕಟ ನೀದು
ಶ್ಚಿತ್ತನಾಗದಿರೆಂದು ನುಡಿದನು ನೃಪತಿ ಕೌರವಗೆ ೧೧ 

ದ್ರೋಣರೆಂದುದ ಮಾಡೆ ಭೀಷ್ಮನ
ವಾಣಿ ವಿಷವೈ ನಿನಗೆ ವಿದುರನು
ರಾಣಿಕವ ನಿನ್ನಲ್ಲಿ ಬಲ್ಲನೆ ಬಗೆಯ ನೀನವರ
ಪ್ರಾಣ ವಾಯುಗಳವರು ಸುಭಟ
ಶ್ರೇಣಿ ದೇಹಕೆ ನಿನ್ನ ತನುನಿ
ತ್ರಾಣವದರಿಂದಾಯ್ತು ಪರಿಭವವೆಂದನಾ ಭೂಪ ೧೨ ಪದ್ಯ

ಬಿಡಿಸಿದಧರದ್ವಯ ವಿಷಾದದ
ತಡಿಯ ಚಿತ್ರದ ನೆಯ್ಗೆ ಬೇರೊಂ
ದೆಡೆಯಲಿದ್ದುದು ಬೀಳುಕೊಂಡನು ಧರ್ಮನಂದನನ
ಒಡನೆ ಬಂದರು ರಾಣಿಯರು ಕೈ
ಗುಡಿಯವರ ಸುದ್ದಿಯಲಿ ಸೂಸಿದ
ಪಡೆಯು ನಿಮಿಷಕೆ ನೆರೆದುದಿನಸುತ ಸೌಬಲರು ಸಹಿತ ೧೩ 

ಭಟರ ಬೊಬ್ಬೆಗಳಡಗಿದವು ಬಾ
ಯ್ದುಟಿಗಳಾಡವು ವಂದಿನಿಕರಕೆ
ಪಟಹ ಪಣವ ಮೃದಂಗವಿದ್ದವು ಮೌನದೀಕ್ಷೆಯಲಿ
ಚಟುಲಗಜಹಯರಥದವರು ಲಟ
ಕಟಿಸದಿದ್ದರು ಕೌರವೇಂದ್ರನ
ಕಟಕ ದುಮ್ಮಾನದಲಿ ಬಂದುದು ಹಸ್ತಿನಾಪುರಿಗೆ ೧೪ 

ಹೊಗಲಿ ಪಾಳೆಯ ಪುರವನೆಂದು
ಬ್ಬೆಗದ ಬೆಳೆ ಸಿರಿವಂತನೆತ್ತಿದ
ದುಗುಡದಲಿ ಕುಳ್ಳೀರ್ದನಾ ಸುರನದಿಯ ತೀರದಲಿ
ಹೊಗೆವ ಮೋರೆಯ ನೆಲಕೆ ನೆಟ್ಟಾ
ಲಿಗಳ ನಿಖಿಳೇಂದ್ರಿಯದ ರೋಚಕ
ಬಿಗಿದ ಬೇಗೆಯ ಬೇಸರಿನ ಬಿಸುಗುದಿಯ ಸುಯ್ಲಿನಲಿ ೧೫

ತರಿಸಿ ಗಂಗಾಜಲವ ಗೋಮಯ
ವೆರಸಿ ಕುಶ ಸಂಮಾರ್ಜುನವ ವಿ
ಸ್ತರಿಸಿ ಪರಿಕರ ಸುದ್ಧಿಯಲಿ ಪಸರಿಸಿದ ಬಹಿರ್ಯಲಿ
ನಿರಶನ ವ್ರತವೆಂದು ಮಂತ್ರೋ
ಚ್ಚರಿತ ಸಂಕಲ್ಪದಲಿ ಕೌರವ
ರರಸ ಪವಡಿಸಿದನು ಕೃತ ಪ್ರಾಯೊಪವೇಶದಲಿ ೧೬

ಹೊಗಿಸ ಬೇಡಾರುವನು ಕರ್ಣಾ
ದಿಗಳು ಮೊದಲಾಗೆಂದು ದಡ್ಡಿಯ
ನುಗುಳುಗಂಡಿಯ ಕಾಹಕೊಟ್ಟನು ತನ್ನ ಬೇಹವರ
ದುಗುಡದಲಿ ಪರಿವಾರ ಬಂದೋ
ಲಗಿಸಿ ಹೊರಗೇ ಹೋಗುತಿರ್ದುದು
ನಗುತ ಹೊಕ್ಕಳು ಭಾನುಮತಿ ಕಂಚಿಕಿಯನೊಡೆ ನೂಕಿ ೧೭

ಏನು ದಿಟ ಸಂಕಲ್ಪವಿನಿತಕೆ
ನಾನು ಹೊರಗೇ ಹೊಗುವೆವೇಳು ಕೃ
ಶಾನುವನು ಬೀಳುವೆವು ನಡೆ ಭಾಗೀರಥೀ ಮಡುವ
ಮಾನನಿಧಿಯೇ ವಿವಿಧ ಗರಳ ವಿ
ತಾನವನು ತರಿಸುವೆನು ನಿಶ್ಚಯ
ವೇನು ನಿರಶನ ಮರಣವೇಕೆಂದಳು ಸರೋಜಮುಖಿ ೧೮

ತರುಣಿ ನೀ ಹೆಸರಿಸಿದವಿವು ದು
ರ್ಮರಣ ಸಾಧನವಮಲ ದರ್ಭಾ
ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ
ಪರಿಹರಿಸುವೆನು ದೇಹವನು ಸುಡ
ಲರಸುತನವನು ಪಾಂಡುಪುತ್ರರ
ಕರುಣ ಕಲುಷಿತ ಕಾಯವಿದನಾ ಧರಿಸುವೆನೆಯೆಂದ ೧೯

ಈ ನಿರಾಹಾರವು ನಿರರ್ಥಕ
ವೇನನೆಂಬೆನು ಜೀಯ ಮುರಿದಭಿ
ಮಾನ ಬೆಸುವುದೆ ಬಣ್ಣವಳಿವುದೆ ಬಂದ ದುರಿಯಶದ
ಆ ನದೀಸುತ ವಿದುರರೆಂದುದ
ನೀನುಪೇಕ್ಷಿಸಿ ಕಳೆವೆ ಹೆಂಗಸು
ನೀನರಿಯೆಯೆನಬೇಡ ಚಿತ್ತೈಸೊಂದು ಬಿನ್ನಪವ ೨೦

ತಮ್ಮ ನೆರೆವೊಟ್ಟೈಸಿ ರಣದಲಿ
ನಮ್ಮ ಬಿಡಿಸಿದರವರು ನೀವಿ
ನ್ನೆಮ್ಮ ಹಿಂದಣ ಗುಣವ ನೋಡದಿರೆಂದು ಯಮಸುತನ
ನಮ್ಮ ನಗರಿಗೆ ಕರೆಸಿ ಧರೆಯನು
ನಮ್ಮ ಪಟ್ಟಣ ಸಹಿತ ಕೊಟ್ಟರೆ
ನಿಮ್ಮನೀಗಲು ಲೋಕ ಮೆಚ್ಚುವುದೆಂದಳಿಂದುಮುಖಿ ೨೧

ಕರೆಸಿದರೆ ದಿಟ ಬಾರರವರಾ
ಧರಣಿಯನು ಕೈಕೊಂಡು ನಿಲುವರು
ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ
ಅರಿಗಳುಪಟಲದಿಂದ ತಪ್ಪಿಸಿ
ಮರಳಿಚಿದ ಜೀವೋಪಕಾರಕೆ
ಕುರುಕುಲಾಗ್ರಣಿ ಲೇಸುಮಾಡಿದನೆಂಬುದೀ ಲೋಕ ೨೨

ನುಡಿದವಧಿ ಹದಿಮೂರು ವರುಷದ
ಹೆಡತಲೆಯನೊದೆದೆದ್ದು ನಮ್ಮೀ
ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಬಳಿಕ
ನುಡಿಯ ಸಲಿಸದ ಮುನ್ನನೀ ಕೊ
ಟ್ಟೊಡೆ ಕೃತಘ್ನತೆ ತಪ್ಪುವುದು ಮಿಗೆ
ನುಡಿಯಲಮ್ಮೆನು ರಾಜಕಾರ್ಯವನೆಂದಳಿಂದುಮುಖಿ ೨೩

ಮರೆವ ಹಗೆಯೇ ನಾವು ಮಾಡಿದ
ನರಿಯೆಲಾ ಮೂದಲಿಸಿ ಧರ್ಮಜ
ನಿರಿವ ಕತ್ತಿ ಕಣಾ ಸದಾ ಪಾಂಚಾಲಿ ಪವನಜರು
ಮರುಗಲೇತಕೆ ಭಾನುಮತಿನಿ
ನ್ನುರುವ ಮಗನಲಿ ರಾಜ್ಯಭಾರವ
ಹೊರಿಸಿ ಬದುಕುವುದೆನ್ನ ಕಾಡದೆ ಹೋಗು ನೀನೆಂದ ೨೪

ಸಾಕು ಸಾಕೀ ಮಾತಿನಲಿ ಜಗ
ದೇಕ ರಾಜ್ಯದ ಪಟ್ಟವಾಯ್ತವಿ
ವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ
ಮೂಕಭಾವದ ದೀಕ್ಷೆ ತನಗೆಂ
ದಾ ಕಮಲಮುಖಿಯಿದ್ದಳಿತ್ತಲು
ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ ೨೫

ಬಂದಳಾ ಗಾಂಧಾರಿ ಸೊಸೆಯರ
ವೃಂದಸಹಿತುರವಣಿಸಿ ಹೊಕ್ಕಳು
ನಿಂದು ನೋಡಿದಳಾತನಿರವನು ಕುಶೆಯ ಹಕ್ಕೆಯಲಿ
ಕಂದಿದಳು ಕಡುಶೋಕ ಶಿಖಿಯಲಿ
ಬೆಂದಳೇನೈ ಮಗನೆ ಹಾಸಿಕೆ
ಯಂದ ಲೇಸಾಯ್ತೆನುತ ಕುಳ್ಳಿರ್ದಳು ಸಮೀಪದಲಿ ೨೬

ಏನು ದರ್ಭಾಸ್ತರಣ ಶಯನ ವಿ
ದೇನು ಕಾರಣ ನಿರಶನ ವ್ರತ
ವೇನು ಸಾಧಿಸಲಾದುದೀ ಪ್ರಾಯೋಪವೇಶದಲಿ
ಏನು ಸಿದ್ಧಿಯಿದಕ್ಕೆ ಮೋಹಿದ
ಮೌನ ಮುದ್ರೆಯ ಬಿಸುಟು ಹೇಳೆ
ನ್ನಾಣೆಯೆನುತವೆ ಹಣೆಯ ಹಣೆಯಲಿ ಚಾಚಿದಳು ಮಗನ ೨೭

ತಾಯೆ ಹೇಳುವುದೇನು ಪಾಂಡವ
ರಾಯರುಳುಹಿದವೊಡಲನಿದನಿದ
ರಾಯಸವ ನಾ ಹೇಳಲರಿಯೆನು ಹೊರಗೆ ಕೇಳುವುದು
ನೋಯಲೇತಕೆ ನಿಮಗೆ ಮಕ್ಕಳು
ತಾಯೆ ನೂರುಂಟನಿಬರಲಿ ಕುಂ
ದಾಯಿತೊಂದೈಸಲೆ ಮನೋವ್ಯಥೆಯೇಕೆ ನಿಮಗೆಂದ ೨೮

ಮಾಡಿದೆನು ಸಂಕಲ್ಪವಿದರೊಳು
ಗೂಡ ಕಳಚುವೆನೊಮ್ಮೆ ನೀವೇ
ನೋಡಿ ಸಂತಸಪಡುವುದಾದುಶ್ಯಾಸನಾದಿಗಳ
ಕೇಡಿಗನು ಕುರುವಂಶಕೆಂದಿಳೆ
ಯಾಡುವುದು ತನ್ನೊಬ್ಬನನು ನಾ
ಮೂಡಿದನು ನೆರೆ ಮುಳುಗಿದೊಡೆ ಕುಲಕೆಲ್ಲ ಲೇಸೆಂದ ೨೯

ಉಸುರು ಬೀಯದ ಮುನ್ನ ರಾಜ್ಯವ
ನೊಸೆದು ಕೊಟ್ಟೆನು ಪಟ್ಟಬಂಧನ
ದೊಸಗೆಯಲಿ ಕೌತುಕವನೀ ಕಿವಿಯಾರೆ ಕೇಳುವೆನು
ಅಸುವನಳುಕದೆ ಬಿಡುವೆನೌ ಶಂ
ಕಿಸದೆ ದುಶ್ಯಾಸನಗೆ ಪಟ್ಟವ
ನೆಸಗಿ ನಡೆಯೌ ತಾಯೆ ಬಿಜಯಂಗೈಯಿ ನೀವೆಂದ ೩೦

ಆ ಸಮಯದಲಿ ವಿಗತ ನಯನ ಮ
ಹೀಶ ಬಂದನು ಜನಪದದ ವಿ
ನ್ಯಾಸದುಗ್ಗಡಣೆಯಲಿ ವಿದುರನ ಹೆಗಲ ತೋಳಿನಲಿ
ಆಸರಿನ ಬಿಸುಗುದಿಯ ಚಿಂತೆಯ
ಬೇಸರಿನ ಬಿಸುಸುಯ್ಲ ರಾಣೀ
ವಾಸಕುಲವಿದಿರೆದ್ದುದಖಿಳಾಭರಣ ರಭಸದಲಿ ೩೧

ಸಂತವಿಡಿರೇ ಮಗನ ನಿಜ ದೇ
ಹಾಂತ ಕೃತ ಸಂಕಲ್ಪ ಗಡ ನೃಪ
ನಂತರಂಗರ ಕರೆಸಿಯೆಂದಳಲಿದಳು ಗಾಂಧಾರಿ
ಭ್ರಾಂತಿ ಬಿಗಿದಿದೆ ಚತುರ ಚಿತ್ತಕೆ
ಚಿಮ್ತೆ ಬೇರೊಂದಾಯ್ತು ರಾಯನ
ಹಂತಿಕಾರರು ಬರಲಿ ಹಿಡಿಯಲಿ ನಿರಶನವ್ರತವ ೩೨

ಸಾಕುಮಗನೆ ದುರಂತ ಇಂತೆಯಿ
ದೇಕೆ ಸಂಕಲ್ಪಾಭಿಯೋಗ
ವ್ಯಾಕುಲತೆ ಬೇಡೇಳು ಪಾಲಿಸು ಸಕಲಭೂತಳವ
ಆ ಕುಮಾರರ ಕರೆಸಿ ಗುಣದಲಿ
ಸಾಕುವುದು ಜೀವೋಪಕಾರಕೆ
ಕಾಕ ನೆನೆಯದಿರೆನುತ ಮುಂಡಾಡಿದನು ನಂದನನ ೩೩

ಸವೆದು ಹೋಯ್ತಾಯುಷ್ಯ ತನಗಿ
ನ್ನವನಿಯಾಗದು ಮರೆ ಯುಧಿಷ್ಠಿರ
ಪವನಜರು ನಿನಗನ್ಯರೇ ಕರೆಸುವುದು ರಾಜ್ಯದಲಿ
ಅವರುಗಳ ನಿಲಿಸುವುದು ನೆಲದ
ರ್ಧವನು ದುಶ್ಯಾಸನಗೆ ಕೊಡುವುದು
ನಿಮಗೆ ಚಿತ್ತಕೆ ಬಹರೆ ಎಂದನು ತಂದೆಗವನೀಶ ೩೪

ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೋಡೀ ಕುರುವಂಶವಳಿವುದು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚುಕುಂದೇನೆಂದನಂಧನೃಪ ೩೫

ಕಲಹ ಬೀದಿಯೊಳಾಯ್ತು ಕಟ್ಟಿದ
ರಳಿವಿನೋದದಲಹಿತರದ ಹೊ
ಯ್ದೆಳೆದು ತಂದನು ಪಾರ್ಥನೆಮ್ಮಯ ತೋಳ ನೇಣುಗಳ
ನಳಿನ ಮುಖಿ ಕಡುಮೌಳಿಯಲಿ ಮೂ
ದಲಿಸಿ ಕೊಯ್ದಳು ತನಗೆ ಭಂಗದ
ಲುಳಿವುದೆತ್ತಣ ಮಾತು ಕರುಣಿಸಿ ಬೊಪ್ಪನೀವೆಂದ ೩೬

ದೋಷ ನಿಮಗಿಲ್ಲೆನ್ನ ಮೇಲಭಿ
ಲಾಷೆಯನು ಬಿಡಿ ನಿಮ್ಮ ಮಗ ಕುಲ
ಭೂಷಣನಲಾ ಧರ್ಮಸುತನಾತನಲಿ ಹುರುಡಿಸುವ
ರೋಷವುಂಟೇ ತನಗೆ ನಿಮಗಿದು
ದೂಷಣವೆ ತಾನಲ್ಲ ನಾನೇ
ಘೋಷಿಸುವೆನೈ ಧರ್ಮಸುತನರಸಾಗಬೇಕೆಂದು ೩೭

ಸಾರವೀ ನುಡಿ ಕಟಕಿಯಲ್ಲ ವಿ
ಚಾರಪರರಿಗೆ ನಿಮ್ಮ ಚಿತ್ತಕೆ
ಬಾರದಿದ್ದರೆ ನಿಲಲಿ ದುಶ್ಯಾಸನನ ಕರೆಸುವುದು
ಸೇರಿಸುವುದವನಿಯನು ಮೇಣಿದು
ಭಾರವೇ ನಿಮ್ಮರಮನೆಗೆ ವಿ
ಸ್ತಾರದಿಂದವೆ ಬಿಜಯ ಮಾಡೆನೆನುತ್ತ ಮುಂದಾದ ೩೮

ಮುನಿಸಿನಲಿ ಧೃತರಾಷ್ಟ್ರ ತನ್ನರ
ಮನೆಗೆ ತಿರುಗಿದನಿತ್ತ ನಾರೀ
ಜನವನೆಲ್ಲವ ಬೀಳುಕೊಟ್ಟನು ಬೈದು ಖಾತಿಯಲಿ
ಮನಕತದಿ ಕಾತರಿಸಿ ಗಂಗಾ
ತನುಜ ರವಿಜ ದ್ರೋಣ ಗೌತಮ
ರನುಚಿತಪ್ರಾರಂಭ ಭೀತರು ಬಂದರೊಗ್ಗಿನಲಿ  ೩೯

ರಾಯನಿಹ ಹದನೇನು ನಿದ್ರಾ
ನಾಯಕಿಯ ಮೇಳವದಲೈದನೆ
ಜೀಯಯೆನಲೊಳಹೊಕ್ಕು ನಿಂದರು ನೃಪಸಮೀಪದಲಿ
ಆಯಿತೇ ನಾವೆಂದ ನುಡಿಯದು
ಹೋಯಿತನಶನದಿಂದ ದೇಹದ
ಬೀಯದಲಿ ಸಂಕಲ್ಪಗಡ ಹೇಳೆಂದನಾ ಭೀಷ್ಮ ೪೦

ಈಸುದಿನ ಸಾಮ್ರಾಜ್ಯ ಸೌಖ್ಯವಿ
ಲಾಸದಲಿ ಬಳಸಿದೆನು ಸಾಕಿ
ನ್ನೀ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ
ಆಶೆಯವನಿಯೊಳಿಲ್ಲ ವಿಷಯಾ
ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು
ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ ೪೧

ಕೇಳಿದೆವು ಹಿಂದಾದ ಖೇಚರ
ರೂಳಿಗವನಡಹಾಯ್ದು ನಿಮ್ಮುವ
ನೋಲಯಿಸಿದಂದವನು ನಿನಗದರಿಂದ ಪರಿಭವವ
ತಾಳದಂತಿರಲವರ ಕರೆಸುವೆ
ವೇಳು ಭೀಮಾರ್ಜುನರ ನಿನಗಿ
ನ್ನಾಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ ೪೨

ಮೊದಲು ಧೃತರಾಷ್ಟ್ರಂಗೆ ತಾ ಜನಿ
ಸಿದುದು ಬಳಿಕೀ ದೇಹ ಧರ್ಮಜ
ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ
ಅದು ನಿಲಲಿ ದುರ್ವಿಷಯ ವೈರಾ
ಗ್ಯದಲಿ ದೇಹವ ಬಿಡುವೆನಲ್ಲದೆ
ಬೆದರು ಭಂಗದೊಳಿಲ್ಲ ಬಿಜಯಂಗೈಯಿ ನೀವೆಂದ ೪೩

ನಾವು ಪಡಿ ಬಾಹಿರರು ಬೀಯದ
ಸೇವಕರು ಸಮಹಂತಿಕಾರರಿ
ಗೀವುದೈ ದೃಢ ಮುದ್ರಿತಾಂತರ್ಮಾನಸಾಮೃತವ
ಭೂವಧುವ ಬೋಳೈಸು ಕಾನನ
ಜೀವಿಗಳು ತಮ್ಮೊಲಿದುದಾಗಲಿ
ಸಾವುದನುಚಿತವೆಂದು ನುಡಿದರು ಭೀಷ್ಮಗುರು ಕೃಪರು ೪೪

ಎಮ್ಮ ನುಡಿಗಳಪಥ್ಯವಾದರೆ
ನಿಮ್ಮ ಕರ್ಣಾದಿಗಳ ಕರೆಸುವು
ದೆಮ್ಮನುಡಿಗವರೆಂದ ಮಾತನುಸಾರಿಯೆನಿಸಿದರೆ
ಒಮ್ಮೆ ಕೈಕೊಂಬುದು ವೃಥಾನೃಪ
ಧರ್ಮವನು ಬಿಡಬೇಡ ಸಮರವ
ನೆಮ್ಮಿಸಾವುದು ಗುಣವು ಗರುವರಿಗೆಂದನಾ ಭೀಷ್ಮ ೪೫

ಕದನವಾರಲಿ ಪಾಂಡುಸುತರಲಿ
ಕದನವಾಡುವುದುಚಿತವೇ ನಮ
ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ
ಇದನರಿತು ಸಂಕಲ್ಪ ಭಂಗಾ
ಸ್ಪದವ ಮಾಡುವುದೊಳ್ಳಿತೇ ನಿಜ
ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ ೪೬

ಐಸಲೇ ದೈವೋಪಹತ ಮನ
ದಾಸರಾರಿಮ್ದಡಗುವುದು ನಾ
ವೇಸನೊರಲಿದಡಾಗದವರೇ ಬಂದು ನಿಲಿಸುವರು
ಈಸರಲಿ ಮರಳುವೆವೆನುತ ನಿಜ
ವಾಸಕೈದಿದರಿತ್ತ ಮೋಹಿದ
ವಾ ಶಕುನಿ ಕರ್ಣಾದಿಗಳ ದಂಡಿಗೆಗಳೊಗ್ಗಿನಲಿ ೪೭

ಹೊಕ್ಕು ರಾಯನ ಕಂಡಿದೇನೀ
ಹಕ್ಕೆ ಹುಲ್ಲಿನಲಿರವು ಹರಹರ
ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ
ಸಿಕ್ಕುವನು ಹಗೆ ತನಗೆ ತಾನೇ
ಸಿಕ್ಕುವನು ಹಗೆಗಳಿಗೆ ಲೋಕದೊ
ಳಕ್ಕಜವೆ ಜಯವಿಜಯವೆಂದರು ಕರ್ಣ ಶಕುನಿಗಳು ೪೮

ಹರಿಬಬೇಕೇ ಮತ್ತೆ ಗಂಧ
ರ್ವರಿಗೆ ದೂತರನಟ್ಟು ಭೀಮನ
ನರನೊಳನುಸಂಧಾನವೇ ನಾಲ್ಕೆಂಟು ದಿವಸದಲಿ
ಧರೆಯೊಳವರಿರದಂತೆ ಧಟ್ಟಿಸಿ
ತೆರಳಿಚುವೆವಿದಕಕಟ ದರ್ಭೆಯ
ಹರಹಿ ಹಕ್ಕೆಯ ನಿಕ್ಕಲೇಕೆಂದೊದರಿದರು ಖಳರು ೪೯

ದೂತನಮರರಿಗಟ್ಟುವೆನೆ ತಾ
ಬೂತು ಭೀಮಾರ್ಜುನರ ಕೂಡೆ ವಿ
ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ
ಈ ತನುವನೀ ಪರಿಯಲೇ ನಿ
ರ್ಧೂತವನೆ ಮಾಡುವೆನು ನನ್ನನು
ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ ೫೦

ನಿನ್ನೊಡನೆ ಹುತವಹನ ಹೊಗುವೆವು
ಮನ್ನಣೆಯ ಮಾತಲ್ಲ ನಿನ್ನಿಂ
ಮುನ್ನ ಮುಂಡಿತ ಶಿರದಲೆಸೆವೆವು ತೀರ್ಥಯಾತ್ರೆಯಲೊ
ಎನ್ನ ಮತ ಸೌಬಲನ ಮತವಿದ
ನಿನ್ನು ಕೆಲರಲಿ ಬೆರಸುವುದೆ ಬೇ
ರಿನ್ನು ಮಾತೇಕೆನುತ ಮುರಿದರು ತಮ್ಮ ಮನೆಗಳಿಗೆ ೫೧

ಉಲಿವ ಭಟ್ಟರ ನಿಲಿಸಿದನು ಸಮ
ನೆಲನ ಹೊಗಳುವ ವಾಹಕರ ಕಳ
ಕಳವ ನಭಕೊತ್ತಿದನು ಕಹಳಾರವಕೆ ಕೋಪಿಸುತ
ತಲೆಮುಸುಕಿನಲಿ ತಾರಿದೊಡಲಿನ
ತಳಿತ ದುಗುಡದ ಮೋರೆಯಲಿ ಕುರು
ಕುಲಭಯಂಕರ ನೈದಿದನು ದುಶ್ಯಾಸನನು ನೃಪನ ೫೨

ಹೊಕ್ಕನೊಳಗನು ರಾಯನಂಘ್ರಿಯೊ
ಳೊಕ್ಕನೊಡಲನು ಲೋಚನಾಂಬುಗ
ಳುಕ್ಕಿದವು ಕಳವಳಿಸಿದವು ಕರಣೇಂದ್ರಿಯಾದಿಗಳು
ಬಿಕ್ಕಿದನು ಬಿರಿಬಿರಿದು ಸೆರೆಗಳು
ಮುಕ್ಕುರಿಕಿದವು ಕೊರಳ ಹೃದಯದೊ
ಳೊಕ್ಕಲಿಕ್ಕಿತು ಶೋಕಪಾವಕವಾ ನೃಪಾಜುಜನ ೫೩

ಅನುಜನದ್ಭುತ ಶೋಕರಸದಲಿ
ಕೊನರಿತರಸನ ಮೋಹ ಕುರುಕುಲ
ವನಪರಶು ಕುಳ್ಳಿರ್ದನೊಯ್ಯನೆ ಮಾನಿನಿಯ ಮಲಗಿ
ನಿನಗಿದೇನುಬ್ಬೇಗವೀ ಹ
ಸ್ತಿನ ಪುರದ ಸಾಮ್ರಾಜ್ಯಸಿರಿ ರಿಪು
ಜನಪರಿಗೆ ಹುರುಡಿಸಳೆ ಹೇಳೆನುತೆತ್ತಿದನು ಹಣೆಯ ೫೪

ಸೆಳೆದು ಬಿಗಿಯಪ್ಪಿದನು ಲೋಚನ
ಜಲವ ತೊಡೆದನು ಪಾಂಡುಪುತ್ರರು
ಸೆಳೆದುಕೊಳ್ಳರೆ ನೆಲನನಕಟಾ ಮತ್ಪರೋಕ್ಷದಲಿ
ಕುಲವನೀನುದ್ಧರಿಸು ಸೇಸೆಯ
ತಳಿವೆ ನಾಮುಂದಿಟ್ಟು ಬರಿದಿ
ನ್ನಳಲದಿರು ಪ್ರಾಯೋಪವೇಶವ ಬಿಡೆನು ನಾನೆಂದ ೫೫

ಅಳಿದರಳಿವೆ ಭವತ್ಪರೋಕ್ಷದೊ
ಳುಳಿವೆನೇ ನಿನ್ನರಸಿ ಧರೆಗಾ
ನಳುಪುವೆನೆ ನಿನ್ನಳಿವನೀಕ್ಷಿಸಿ ಧೈರ್ಯವೇ ತನಗೆ
ನೆಲನ ಕುಂತಿಯ ಮಕ್ಕಳೇ ಐ
ಕೊಳಲಿ ಮಾಣಲಿ ಸಿರಿಗೆ ಸೇಸೆಯ
ತಳಿವರಿಗೆ ತಳಿ ನಿನ್ನ ಬಿಡದಿಅಹ್ ಭಾಷೆ ನನಗೆಂದ ೫೬

ಧಾತುಗೆಡಲೇಕೀಸು ಕಾತೊಡೆ
ಬೀತುಹೋಹುದು ಬೀತಮರನೇ
ಕಾತಿಹುದಲೈ ಹತವಿಧಿಗೆ ವಿಪರೀತ ಕೃತಿ ಸಹಜ
ಆತಗಳು ನಮಗುಪಕರಿಸಿ ವಿ
ಖ್ಯಾತರಾದರು ಮರಳಿ ತಾವಿ
ನ್ನಾತಗಳನಳಲಿಸುವುಪಾಯವ ಕಂಡೊಡೇನೆಂದ ೫೭

ಮರುಳು ತಮ್ಮ ವೃಥಾ ಖಳಾಡಂ
ಬರವಿದಲ್ಲದೆ ಪಾಂಡುಪುತ್ರರ
ಪರಿಭವಿಸಲೊಡಬಡುವರೇ ವಿದುರಾದಿ ಬಾಹಿರರು
ಅರಮನೆಗೆ ನೀ ಹೋಗು ಹಸ್ತಿನ
ಪುರಕೆ ನೀನರಸಾಗು ಮೋಹದ
ಮರುಳುತನವೀ ಕ್ಷತ್ರಧರ್ಮದೊಳಿಲ್ಲ ಕೇಳೆಂದ ೫೮

ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯೆಯಿದು
ಜಗದ ಪರಿವಿಡಿಯೆಮ್ಮೊಳಲ್ಲದೆ
ಸೊಗಸಿ ರಾಜ್ಯವನಿತ್ತೆ ನೀನಿದ
ಮಗುಚಿದೊಡೆ ಯೆನ್ನಾಣೆಯೆನುತಪ್ಪಿದನು ಸಹಭವನ ೫೯

ಭ್ರಾಂತಿಯೇಕೆ ಭವತ್ಪರೋಕ್ಷದೊ
ಳಂತಕನ ಪುರವಲ್ಲದುರ್ವೀ
ಕಾಂತೆಗಲುಪಿದೆನಾದರೊಡಹುಟ್ಟಿದನೆ ನಿಮ್ಮಡಿಯ
ಸಂತವಿಡುವೀಮಾತು ಸಾಕಿ
ನ್ನಂತಿರಲಿ ನಿಮಗೇನು ಹದನಾ
ಯ್ತಂತರದೊಳಾ ಹದನನೀಕ್ಷಿಪೆನೆನುತ ಹೊರವಂಟ ೬೦

ಧರಣಿಪತಿ ಕೇಳ್ ಬಳಿಕ ಹಸ್ತಿನ
ಪುರದ ನಿಖಿಳಶ್ರೇಣಿಕುಲ ನಾ
ಗರಿಕ ಜನ ಪರಿವಾರ ಪಾಡಿ ಪಸಾಯ್ತ ಪೌರಜನ
ಅರಸ ಬಿಜಯಂಗೈದು ನಮ್ಮನು
ಹೊರೆವುದಲ್ಲದೊಡಾ ವನಾಂತರ
ವರಕೆ ನೇಮವ ಕೊಡುವುದೆಂದೊರಲಿದರು ತಮತಮಗೆ ೬೧

ಪರಿಜನದೊಳವರವರ ಮುಖ್ಯರ
ಕರೆಸಿದನು ದುಶ್ಯಾಸನನು ನಿಮ
ಗರಸು ನೃಪನೀತಿಯಲಿ ಪಾಲಿಸುವನು ಮಹೀತಳವ
ಧರೆಯನಾತಂಗಿತ್ತೆವೆಮಗೀ
ಸುರನದೀ ತೀರದಲಿ ಕಾಶೀ
ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ ೬೨ 

ರಾಯನೀಪರಿನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ ೬೩ 

ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಲೆಸಿದೆಲಾ
ಸುರರು ಪಾಂಡುಕುಮಾರರಾಗವ
ತರಸಿದರು ಗೆಲವವದಿರಿಗೆ ತಾ
ವಿರಲು ಸುಡಲೀ ದೈತ್ಯ ಜನ್ಮವನೆಂದರಾ ಖಳರು ೬೪ 

ಸಾಯದಿರು ನಿನಗಿಂದು ಮೊದಲು ಸ
ಹಾಯರಾವಾವಹಕೆ ರಿಪುಕೌಂ
ತೇಯರಿಗೆ ಕೊಡಬೇಡವಿನ್ನು ತಿಲಾಂಶ ಭೂತಳವ
ಲಾಯ ಸಹಿತೀ ಗಜರಥಾಶ್ವ ನಿ
ಕಾಯ ನಿನ್ನದು ದೈತ್ಯ ಸಚಿವ ಪ
ಸಾಯತರು ನಿನ್ನವರು ಸಾವೆವು ನಿಮ್ಮ ಸಮರದಲಿ ೬೫

ಮಾನವನು ನಾನಿನ್ನು ನೀವೋ
ದಾನವರು ಗಂಧರ್ವರಿಂದಭಿ
ಮಾನವೆನಗಕ್ಕಾಡಿ ಹೋಯಿತು ಹೇಳಲೇನದನು
ಮಾನಿನಿಯ ಮೂದಲೆಯ ನಾ ಪವ
ಮಾನ ಸುತನ ಸಗರ್ವ ವಚನವ
ನೇನ ಹೇಳುವೆನೆನುತ ಸುಯ್ದನು ಕೌರವರ ರಾಯ ೬೬ 

ನರರು ನೀವ್ ದಾನವರು ನಾವೆಂ
ದಿರದಿರೊಡಹುಟ್ಟಿದರು ನಿಮಗಿ
ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ
ಸುರಪುರದ ಸೂಳೆಯರ ಪಡಿಗವ
ನಿರಿಸುವರು ಗಂಧರ್ವರವದಿರ
ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ ೬೭ 

ಎಂದು ಭೂಪನ ತಿಳುಹಿ ಕಳುಹಲು
ಬಂದು ಮರಳಿ ಮಹೀತಳಕೆ ತ
ನ್ನಿಂದು ವದನೆಯ ಮಾತಿನಲಿ ನಿಂದವನು ತಾನಾಗಿ
ಬಂದನರಮನೆಗಖಿಳಜನವಾ
ನಂದ ರಸದಲಿ ಮುಳುಗೆ ಪುರದಲಿ
ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ ೬೮ 

ಮತ್ತೆ ನೆಗ್ಗಿತು ನಯವಧರ್ಮದ
ಕುತ್ತುದಲೆ ನೆಗಹಿದುದು ಸತ್ಯದ
ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ
ನೆತ್ತಿಗಣ್ಣಾಯ್ತಧಮತೆಗೆ ನಗೆ
ಯೊತ್ತಿ ತಾರಡಿ ಸುಜನಮಾರ್ಗವ
ಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ ೬೯ 

ಮರೆದು ಕಳೆದನು ಬಂದಲಜ್ಜೆಯ
ಬರನ ದಿನವನು ಮುಂದಣುಪಹತಿ
ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು
ಮುರಿದುದಿನ್ನೇ ನಹಿತ ದರ್ಪದ
ಹೊರಿಗೆಯೆಂದುತ್ಸವದಲವನಿಪ
ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ ೭೦ 

ಕೇಳಿದರು ಪಾಂಡವರು ಕುರು ಭೂ
ಪಾಲಕನ ಸಂಕಲ್ಪವನು ಪಾ
ತಾಳದಲಿ ಸುರವೈರಿ ವರ್ಗದ ಸತ್ಯ ಸಂಗತಿಯ
ಮೇಲಣಧ್ವರ ಕರ್ಮವನು ನಗು
ತಾಲಿಸಿದರಡಿಗಡಿಗೆ ಲಕ್ಷ್ಮೀ
ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ ೭೧

ಸಂಕ್ಷಿಪ್ತ ಭಾವ
Lrphks Kolar

ದುರ್ಯೋಧನನ ಪ್ರಾಯೋಪವೇಶ ಸಂಕಲ್ಪ ಪ್ರಸಂಗ.

ಪಾರ್ಥ ದುರ್ಯೋದನನನ್ನು ಕರೆತಂದು ಧರ್ಮಜನ ಚರಣಗಳಲ್ಲಿ ಹಾಕಿದನು. ಚಿತ್ರಸೇನನನ್ನುಕಳಿಸಿಕೊಟ್ಟು ದ್ರೌಪದಿಯನ್ನು ಕರೆದು ದುರ್ಯೋಧನನ ಕಟ್ಟುಗಳನ್ನು ಬಿಚ್ಚಿ ಉಪಚರಿಸುವಂತೆಧರ್ಮಜನು ಹೇಳಿದನು. ಅವಳು ತನ್ನ ಜೊತೆಯ ಹೆಣ್ಣುಮಕ್ಕಳ ಸಹಾಯದಿಂದ ಎಲ್ಲವನ್ನೂಬಿಡಿಸಿದಳು. ನಿಮ್ಮ ಅರಮನೆಯ ಸೌಲಭ್ಯಗಳನ್ನು ಇಲ್ಲಿ ನೀಡಲಾರೆವು. ಇಲ್ಲಿ ಇವೇ ನಮಗೆಸಿಂಹಾಸನಗಳು ಎಂದು ಹೇಳುತ್ತಾ ನಕ್ಕಳು. ಅವಳ ವ್ಯಂಗ್ಯದ ನುಡಿಗಳು, ಭೀಮನ ಹುಸಿನಗುಮುಂತಾದುವುಗಳಿಂದ ದುರ್ಯೋಧನನಿಗೆ ಅಪಮಾನವಾಯಿತು. ಭಾನುಮತಿ ಬಂದುನಮಿಸಿದಳು. ಎಲ್ಲರಿಂದ ಬೀಳ್ಕೊಂಡು ಹಸ್ತಿನಾಪುರದತ್ತ ಪಯಣ ಬೆಳೆಸಿದನು. ಊರಿನ ಹೊರಗೆಉಳಿದು ಗಂಗಾತೀರದಲ್ಲಿ ಕುಶಾಸನ ರಚಿಸಿಕೊಂಡು ಎಲ್ಲರನ್ನೂ ಕಳಿಸಿ ತಾನೊಬ್ಬನೇ ಉಳಿದುಉಪವಾಸ ವ್ರತದಿಂದ ಪ್ರಾಣ ಬಿಡಲು ನಿರ್ಧರಿಸಿದನು.

ಭಾನುಮತಿ ಬಂದು ಅನುನಯಿಸಿದರೂ ಒಪ್ಪಲಿಲ್ಲ. ಆಗಿರುವ ಅವಮಾನ ಸಾಲದೇ, ತನಗೆ ಇನ್ನುಏನೂ ಬೇಡವೆಂದು ಹಠ ಹಿಡಿದನು. ಗಾಂಧಾರಿ, ಧೃತರಾಷ್ಟ್ರ ಬಂದು ಸಮಾಧಾನ ಹೇಳಿದರು. ಕೇಳಲಿಲ್ಲ. ತನಗೆ ಇನ್ನು ಯಾವ ಆಸೆಯೂ ಇಲ್ಲ. ದುಶ್ಶಾಸನನಿಗೆ ಪಟ್ಟ ಕಟ್ಟಿರಿ. ನಾನು ಮತ್ತೊಂದುಬಾರಿ ಧರ್ಮಜನಿಂದ ಹುಟ್ಟಿ ಬಂದಂತಾಯಿತು. ಯುದ್ಧವೂ ಬೇಡ, ಏನೂ ಬೇಡ ಎಂದು ಹೇಳಿಅವರನ್ನು ಕಳಿಸಿದನು. 

ಶಕುನಿ, ಕರ್ಣ, ಊರಿನ ಪ್ರಮುಖರು, ಅನುಜರು, ಸೇನಾ ಪ್ರಮುಖರು ಯಾರು ಬಂದುಹೇಳಿದರೂ ಇವನ ದುಗುಡ ಹೋಗಲಿಲ್ಲ. ಸಾಯುವ ಸಂಕಲ್ಪ ಮರೆಯಾಗಲಿಲ್ಲ. ತಮ್ಮದುಶ್ಶಾಸನನು ಬಂದು ನನಗೆ ಯಾವ ರಾಜ್ಯವೂ ಬೇಡ. ನೀನೊಬ್ಬ ಇದ್ದರೆ ಸಾಕು ಎಂದು ಜೋರಾಗಿಅತ್ತನು. ನಿನ್ನೊಡನೆ ನಾನೂ ಸಾಯುವೆನೆಂದನು. ಆದರೂ ದುರ್ಯೋಧನ ಮಣಿಯಲಿಲ್ಲ. ತಮ್ಮನನ್ನು ಸಂತೈಸಿ, ಎಲ್ಲರನ್ನೂ ಗದರಿಸಿ ಕಳಿಸಿ ಒಬ್ಬನೇ ಉಳಿದನು.

ಇದೆಲ್ಲವನ್ನೂ ಗಮನಿಸುತ್ತಿದ್ದ ದಾನವರು ಬಂದು ಅವನನ್ನು ರಸಾತಲಕ್ಕೆ  ಎತ್ತಿಕೊಂಡು ಹೋಗಿಅಲ್ಲಿ ಇವನಿಗೆ ತಾವು ಸದಾ ನಿನ್ನ ಕಡೆಯೇ ಇರುತ್ತೇವೆಂದೂ, ನೀನು ಪಾಂಡವರೊಡನೆ ಯುದ್ಧಮಾಡಲೇಬೇಕೆಂದೂ, ಸ್ವಲ್ಪ ಭೂಮಿಯನ್ನೂ ಬಿಟ್ಟುಕೊಡಬಾರದೆಂದೂ ಹೇಳುತ್ತ ಅವನಲ್ಲಿಧೈರ್ಯ ತುಂಬಿದರು. ಈಗ ನಿಧಾನವಾಗಿ ಇವನಿಗೆ ಮನಸ್ಸು ತಿಳಿಯಾಯಿತು. ಸಕಲ ದೈತ್ಯಬಲವೇತನ್ನೊಂದಿಗಿದೆ ಎಂದು ಸಮಾಧಾನ ಆಯಿತು. ಒಪ್ಪಿದನು. ಮತ್ತೆ ಅವನನ್ನು ಮೇಲೆ ತಂದರು. ತನಗಾದ ಲಜ್ಜೆಯನ್ನೂ, ಅವಮಾನವನ್ನೂ ಮರೆತ ದುರ್ಯೊಧನನು ಅರಮನೆಗೆ ಪ್ರವೇಶಮಾಡಿದನು. ಎಲ್ಲರಿಗೂ ಸಂತೋಷವಾಯಿತು. ಶಾಂತಿಗಾಗಿ ದೊಡ್ಡ ಯಾಗವನ್ನು ನಡೆಸಲಾಯಿತು.

ಈ ಎಲ್ಲ ಸಂಗತಿಗಳನ್ನು ಅಡಿಗಡಿಗೆ ನಗುತ್ತ ಆಲಿಸಿದ ಪಾಂಡವರು ಎಲ್ಲವೂ ದೈವಲೀಲೆಯೆಂದುಲಕ್ಷ್ಮೀಲೋಲನನ್ನು ನೆನೆಯುತ್ತಿದ್ದರು.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳು 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿಯೂ ಲಭ್ಯವಿದೆ. ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ