ಭಾರತಕಥಾಮಂಜರಿ72
ವಿದುರ ನೀತಿ
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಉದ್ಯೋಗ ಪರ್ವ - ಮೂರನೆಯ ಸಂಧಿ
ತಿಳುಹಿದನು ವಿದುರನು ಮಹೀಪತಿ
ತಿಲಕನನು ನಯ ನೀತಿ ಧರ್ಮಂ
ಗಳ ಸುಸಂಗತಿಯಿಂದ ನೂಕಿದರವರು ಯಾಮಿನಿಯ
ಬಂದನಾ ಧೃತರಾಷ್ಟ್ರರಾಯನ
ಮಂದಿರಕೆ ಕಂಡನು ಮಹೀಶನ
ನೊಂದೆರೆಡು ಮಾತಿನಲಿ ಸೂಚಿಸಿ ಮನೆಗೆ ಮರಳಿದನು
ಅಂದಿನಿರುಳೊಳು ನಿದ್ರೆಬಾರದೆ
ನೊಂದು ವಿದುರನ ಕರೆದು ರಾಯನ
ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ ೧
ನಾಳೆ ಸಭೆಯಲಿ ಬಂದು ಸಂಜಯ
ಹೇಳುವನು ಸುದ್ದಿಯನು ಸಂಧಿಯೊ
ಕಾಳಗವೊ ಮುಂದರಿಯಬಾರದು ದುಗುಡ ವಾಯ್ತೆನಗೆ
ಹೇಳು ನಿರುತವನಿಂದಿನಿರುಳೊಳು
ಬೀಳುಕೊಂಡುದು ನಿದ್ರೆಯೆನೆ ಭೂ
ಪಾಲಕನ ಸಂತೈಸಿ ಬಳಿಕಿಂತೆಂದನಾ ವಿದುರ ೨
ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಲವಂಗೆ ಕಾಮದ
ಕಳವಳದೊಳಿರ್ದಂಗೆ ಧನದಳಲಿನೊಳು ಮರುಗುವಗೆ
ಕಳವಿನೊಳು ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ ೩
ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದಿಸದಿರೈದರಲಿ ವರ್ಜಿಪುದಾರನೇಳರಲಿ
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿವೊಂಬತ್ತರಲಿ ಮನ
ಗುಂದಿಸದಿರೀರೈದರಲಿ ಭೂಪಾಲ ಕೇಳೆಂದ ೪
ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನ ಮುಖ ನಾಲ್ಕು
ತನ್ನ ನೆನಹೆಂತಂತೆ ಕಾರ್ಯವು
ಚಿನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ ೫
ಒಂದು ವರ್ಣವನರುಹಿದವ ಗುರು
ವೊಂದಪಾಯದೊಳುಳುಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮ ಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲಯೋನಿಯೊಳರಸ ಕೇಳೆಂದ ೬
ತನ್ನ ಕಾರಿಯ ಕಾರಣವನುಳಿ
ದನ್ನಿಗರ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆ ಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆ ಮಾಡುವುದದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲೆಂದನಾ ವಿದುರ ೭
ಹಾವು ಹಲವನು ಹಡೆದು ಲೋಕಕೆ
ಸಾವ ತಹವೊಲು ನೂರು ಮಕ್ಕಳ
ನಾವ ಪರಿಯಲಿ ಹಡೆದು ಕೆಡಿಸಿದೆ ಭೂಮಿಭಾರಕರ
ಭಾವಿಸಲು ಸರ್ವಜ್ಞ ಸರ್ವ ಗು
ಣಾವಲಂಬನನೊಬ್ಬ ನರ್ಜುನ
ದೇವ ಸಾಲದೆ ನಾಡ ನಾಯ್ಗಳಲೇನು ಫಲವೆಂದ ೮
ದೀಪ ದೀಪವ ತೊಳಲಿ ಕರ್ಮಕ
ಳಾಪದಲಿ ಕುದಿ ಕುದಿದು ನಾನಾ
ರೂಪಿನಿಂದಾರ್ಜಿಸಿದ ಧರ್ಮದ ಗೊಡವೆ ತಾನೇಕೆ
ಭೂಪ ಕೇಳೈ ಸತ್ಯವೊಂದೇ
ಸೋಪನವು ಸಗ್ಗಕ್ಕೆ ಜನ್ಮದ
ಕೂಪರಕ್ಕಿದು ನಾವೆಯಾಗಿಹುದೆಂದನಾ ವಿದುರ ೯
ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಲ್ಲದೆ ವಿಷದ ಫಣಿಯಂತೆ
ಕಾಪಥವ ನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವ ಗುಣವೆಂದ ೧೦
ಬವರ ಮುಖದಲಿ ವೈರಿರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತ ಫಲವಿನಿತೆಂದು ಗಣಿಸುವೊಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈ ಧೃತರಾಷ್ಟ್ರ ಕೇಳೆಂದ ೧೧
ಧರಣಿಯಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಬ್ಬರದಿ ಹೆಚ್ಚಿಹುದರಿನೃಪಾಲರ ಯುದ್ಧ ಪರಿಯಂತ
ಜರಿದು ನಸಿವುದು ವಾಹಿನಿಗೆ ಮಲೆ
ತುರೆ ಮಳಲ ಕಟ್ಟೆಯವೊಲಿದನರಿ
ದರಸುಗಳು ವರ್ಣೋತ್ತಮರ ದೆಸೆಗಂಜ ಬೇಕೆಂದ ೧೨
ಉರಗನವುಡಿದೊಡದರ ವದನದೊ
ಳಿರದೆ ಮೇಣಾ ದಷ್ಟದೇಹದೊ
ಳಿರದೆ ರುಧಿರವು ಹರೆವವೊಲು ದುಷ್ಟಾಧಿಕಾರಿಗಳ
ಒರಸೊರಸಿನಿಂ ಜನಪದದ ಧನ
ಹರೆವುದರಸಂಗಲಸಿದಾ ಪ್ರಜೆ
ಗಿರದುಭಯ ಹಿಂಗುವುದನರಿ ಭೂಪಾಲ ಕೇಳೆಂದ ೧೩
ಹರಿವ ನದಿ ತನ್ನಿಚ್ಛೆಯೊಳು ದಡ
ವೆರಡ ಕಿಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದೊಡುಭಯ ವಂಶವನು
ನೆರಪುವರು ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದೊಳು ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳೆಂದ ೧೪
ಧರೆಯೊಳಗೆ ಕಡು ಮೂರ್ಖರಿವರಿ
ಬ್ಬರು ಕಣಾ ದುರ್ಯೋಧನನು ದಶ
ಶಿರನು ಗೋಗ್ರಹಣದೊಳು ವನಭಂಗದೊಳು ಮುಂಕೊಂಡು
ಅರಿಭಟರ ಸತ್ವಾತಿಶಯದು
ಬ್ಬರದ ಬಲುಹನು ಕಂಡು ಕಂಡೆ
ಚ್ಚರದೆ ಮರುಳಹುದುಚಿತವೇ ಹೇಳೆಂದನಾ ವಿದುರ ೧೫
ಉರಗನಗಿದೊಡೆ ಮೇಣು ಶಸ್ತ್ರದ
ಲಿರಿದೊಡೊಬ್ಬನೆ ಸಾವನದರಿಂ
ದರಸು ನೆಗಳಿದ ಮಂತ್ರ ಭೇದಿಸಲರಿ ನೃಪಾಲಕರ
ಧರೆಸಹಿತ ತತ್ಸಕಲಬಲಸಂ
ಹರಣವಹುದಿದನರಿದು ಭೂಪೋ
ತ್ತರ ರಹಸ್ಯದ ಮಂತ್ರವುಂಟೇ ರಾಯ ನಿನಗೆಂದ ೧೬
ಏಸುಧರ್ಮದಲಾರ್ಜಿಸಿದ ಧನ
ವೈಸು ಸಿರಿವರ್ಧಿಸುವುದದರಿಂ
ದೇಶ ಮಂಗಳ ಪುತ್ರಮಿತ್ರ ಕಳತ್ರವರಿವಿಜಯ
ಪೈಸರಿಸುವುದು ಬಂದ ಬಳಿವಿಡಿ
ದಾಸುರದ ಪಥವಿದನರಿದು ಭೂ
ಮೀಶ ಧರ್ಮದ ಹಿಡಿಯಧರ್ಮವ ಬಿಟ್ಟು ಕಳೆಯೆಂದ ೧೭
ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಾಭಿವೃದ್ಧಿಯದು
ಅರಸಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವುವು ವಿಪ್ರವೈರಿಗೆ
ನಿರುತ ಬದ್ಧದ್ವೇಷ ಲೇಸಲ್ಲೆಂದನಾ ವಿದುರ ೧೮
ಧರೆಯೊಳಗೆ ರವಿ ಮಂಡಲವನೊದೆ
ದುರವಣಿಸಿ ಹಾಯ್ವವರು ತಾವಿ
ಬ್ಬರು ಕಣಾ ಸಂನ್ಯಾಸಿಯಾಗಿಯೆ ಯೋಗ ಮಾರ್ಗದಲಿ
ಹರಣವನು ಬಿಟ್ಟವರು ಘನಸಂ
ಗರದೊಳಭಿಮುಖರಾಗಿ ಮರಣಾಂ
ತರವನೆಯ್ದುವರವರು ಅವನೀಪಾಲ ಕೇಳೆಂದ ೧೯
ಮಾತೃ ಪಿತೃಗಳು ಶತ್ರು ಭಾವವ
ನಾತು ನಿಜ ಸಂತಾನದಲಿ ಸಂ
ಪ್ರೀತಿಯನು ನೆಲೆಗೊಳಿಸಿ ಸರ್ವಜ್ಞಾಧಿಕಾರದಲಿ
ಖ್ಯಾತರನು ಮಾಡದಡೆ ಹಂಸ
ವ್ರಾತ ಮಧ್ಯದ ಬಕನವೊಲು ವಿ
ಖ್ಯಾತ ಸಭೆಯೊಳು ಯೋಗ್ಯರಹರೇ ಭೂಪ ಕೇಳೆಂದ ೨೦
ಸುರರ ಮೇಳದಲಾಡುವವರಿ
ಬ್ಬರೆ ಕಣಾ ಪ್ರಭುವಾಗಿಯು ಕ್ಷಮೆ
ವೆರಸಿದವನು ದರಿದ್ರನಾಗಿಯು ದಾನಿಯೆನಿಸುವನು
ಅರಿದೆನಿಸದತಿಬಲನ ಧರ್ಮೋ
ತ್ಕರುಷ ದುರ್ಬಲಯುತನ ಸೈರಣೆ
ಸರಿಸವೆನಿಸದು ರಾಯ ಚಿತ್ತೈಸೆಂದನಾ ವಿದುರ ೨೧
ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರ ಸಿದ್ಧವಲೆ
ಅರಸು ಕುಲದೊಳು ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯೊ
ಳುರಗನಂತೊಳಗಿಹುದು ಧರ್ಮವೆಯೆಂದನಾ ವಿದುರ ೨೨
ನರಜನುಮವತ್ಯಧಿಕವದರೊಳು
ಗುರು ಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ
ಕರೆದಪಾತ್ರಂಗಿತ್ತು ಪಾತ್ರನ
ಪರಿಹರಿಸಲೀ ಎರಡರಿಂ ಸಂ
ಹರಣವೈದುವುದಾರ್ಜಿಸಿದ ಧನವರಸ ಕೇಳೆಂದ ೨೩
ತಂದೆ ತಾಯಿಗಳಿಬ್ಬರಾತ್ಮಜ
ವೃಂದವನು ಮಿಗೆ ಸಲಹಿ ತತ್ಸುತ
ರಿಂದ ಲೇಸನು ಪಡೆವವೊಳು ತಜ್ಜನಪದದ ಧನವ
ಕುಂದಿಸದೆ ನೃಪಮಂತ್ರಿಗಳು ಸಾ
ನಂದದಲಿ ರಕ್ಷಿಸಲು ಬಳಿಕವ
ರಿಂದ ಸಕಲೈಶ್ವರ್ಯ ಪದವಹುದರಸ ಕೇಳೆಂದ ೨೪
ಕಾಮಿನಿಯರುಗಳಾರು ಕೆಲಬರು
ಕಾಮಿತವ ಕಾಮಿಸುವರಲ್ಲದೆ
ತಾಮಸದಿನಾ ಮೂರುಖರು ಪೂಜಿಸಿದ ಪೂಜೆಗಳ
ಪ್ರೇಮದಿಂದೊಡಬಡುವರಲ್ಲದೆ
ಸೀಮೆವಿಡಿದಿಹುದಾಗದೆಂಬುದ
ನಾ ಮಧಾಂಧರು ಬಲ್ಲರೇ ಧೃತರಾಷ್ಟ್ರ ಕೇಳೆಂದ ೨೫
ತನ್ನ ಸುಖ ದುಃಖಂಗಳಿಗೆ ನಿ
ರ್ಭಿನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡುಜಾರುವ ಗಾವಿಲರ ಕೊಡಿ
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ ೨೬
ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾವ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ ೨೭
ಬೆಳಸು ಘನ ತೃಣವಧಿಕ ಜಲನಿ
ರ್ಮಳವೆನಿಪ ಕಾಲದಲಿ ಪರಮಂ
ಡಳಕೆ ನಡೆವುದು ದುಷ್ಟಘಾತ ವಿಹೀನನೆಂದೆನಿಸಿ
ಬಲುಹಹುದು ನಿಜ ಬಲಕೆ ಬರವಾ
ನೆಲನ ಮುಟ್ಟಲು ವೈರಿ ಸೇನಾ
ವಳಿಗೆ ಹೀನತೆಯಾಗುವುದು ಧೃತರಾಷ್ಟ್ರ ಕೇಳೆಂದ ೨೮
ಮಾಲೆಗಾರ ಸಿಳೀಮುಖನ ಪಶು
ಪಾಲಕನವೋಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ ೨೯
ಎಲ್ಲಿಹುದು ಋಣ ಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದು ಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜ್ಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ ೩೦
ರಕ್ಷಿಸಿದ ಧನದಿಂ ಪುರಂಧ್ರಿಯ
ರಕ್ಷಿಸುವುದು ಪುರಂಧ್ರಿಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದೊಳು
ಲಕ್ಷಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮರಕ್ಷೆಯ
ಲಕ್ಷಿಸುವುದನುನಯವಲೈ ಧೃತರಾಷ್ಟ್ರ ಕೇಳೆಂದ ೩೧
ತಿಳಿದು ನಾಲ್ವರೊಳೊರೆದ ಕಾರ್ಯವ
ನುಳಿವುದಿಬ್ಬರನಿಬ್ಬರೊಳು ಮ
ತ್ತುಳಿವುದೊಬ್ಬನನೊಬ್ಬನಿಂ ನಿಶ್ಚಯಿಸಿ ಬಳಿಕವನ
ಕಳೆದು ತಾನೇ ತನ್ನೊಳಗೆ ಬಗೆ
ಗೊಳೆ ವಿಚಾರಿಸಿ ಮಾಳ್ಪ ಕಾರ್ಯಕೆ
ಹಳಿವು ಹೊರುವುದೆ ರಾಯ ಚಿತ್ತೈಸೆಂದನಾ ವಿದುರ ೩೨
ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ ೩೩
ಹಿರಿದು ಮನೋನ್ನತಿಕೆಯನು ಬಂ
ಧುರದ ಧನವನು ಗಾರುಹಸ್ತ್ಯದ
ಪರಮ ದರ್ಮವನಾವ ಬಯಸುವನವನ ಭವನದಲಿ
ನಿರುತ ವೃದ್ಧ ಜ್ಞಾನಿ ವಂಶೋ
ತ್ತರ ದರಿದ್ರ ಪ್ರಿಯನಪತ್ಯಾಂ
ತರ ಭಗಿನಿಯೀ ನಾಲ್ವರಿರಬೇಕೆಂದನಾ ವಿದುರ ೩೪
ರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತ ವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ ೩೫
ಆವುದೀ ಲೋಕಕ್ಕೆ ಹಿತವದ
ನೋವಿ ನಡೆಸುವ ಜನಕೆ ನಿಂದೆಯ
ದಾವುದದನಾಚರಿಸದಿಹ ನಾಸ್ತಿಕರ ನಂಬುಗೆಯ
ಠಾವುಗಾಣಿಪ ತತ್ತ್ವವಿಜ್ಞಾ
ನಾವಲಂಬನನೆನಿಪನಾತನು
ಭೂವಲಯದೊಳಗುತ್ತಮನು ಭೂಪಾಲ ಕೇಳೆಂದ ೩೬
ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನವು ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳನು ದೇವರನು ವೃದ್ಧರ
ನತಿಥಿಗಳ ಯತಿಗಳನು ಪೂಜಿಸಿ
ವಿತತ ಧರ್ಮದ ಕೀರ್ತಿಯನು ಪಡೆದವನೆ ಸುತನೆಂದ ೩೭
ವರುಷವೈದರೊಳರಸೆನಿಸಿ ದಶ
ವರುಷ ದಾಸ್ತ್ವದೊಳು ಭಾವಿಸಿ
ಬರಲು ಹರಿನಾರನೆಯ ವರುಷವು ಮಿತ್ರನೆಂದೆನಿಸಿ
ಪರಿವಿಡಿಯೊಳಾರೈದು ಮದಮ
ತ್ಸರವ ಕಿಡಿಸದೆ ನೆರೆದ ಮಕ್ಕಳ
ನರಮೃಗಗಳನು ಮಾಡಿದೈ ಧೃತರಾಷ್ಟ್ರ ಕೇಳೆಂದ ೩೮
ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲ ಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ ೩೯
ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ ೪೦
ಧನಮದದಿ ಕುಲಮದದಿ ವಿದ್ಯಾ
ಘನದಿ ಯವ್ವನ ಮದದಿ ದ್ವಿಜ ಗುರು
ವನು ವಿಭಾಡಿಸಿ ನೀನು ತಾನೆಂದೆನುತಹಂಕರಿಸಿ
ಕನಲಿ ವಿಪ್ರಸಭಾಸ್ಥಳದೊಳೊ
ಬ್ಬನ ವಿಭಾಡಿಸಿ ನುಡಿಯೆ ನರಕದಿ
ಮುಣುಗಿದಲ್ಲದೆ ಬೇರೆಗತಿಯಿಲ್ಲೆಂದನಾ ವಿದುರ ೪೧
ಸಲಹಿದೊಡೆಯನ ದಿವ್ಯಮಂತ್ರವ
ಕಲಿಸಿದಾಚಾರಿಯನನನುವರ
ದೊಳಗೆ ತಲೆಗಾಯ್ದವನ ದುರ್ಭಿಕ್ಷದಲಿ ಸಲಹಿದನ
ಜಲದೊಳಾಳ್ದನ ನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ರಿಳಿವರೈ ಕುಲಕೋಟಿ ಸಹಿತ ಮಹಾಂಧ ನರಕದೊಳು ೪೨
ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವನರಿಯದುದ ತಾ ಬಲ್ಲೆನೆಂಬುವನು
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳೆಂದ ೪೩
ಹರುಷದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನ ವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೈಸಲದರಿಂ
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು ೪೪
ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿಹೋತ್ರಾ
ಚರಿತನನು ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳ್ವಂದಿಸುವರೈ ತ್ರೈಮೂರುತಿಗಳೆಂದ ೪೫
ಬಿಸುಟು ಕಳೆವುದು ನೀತಿಶಾಸ್ತ್ರವ
ನುಸಿರದಾಚಾರಿಯನ ವೇದ
ಪ್ರಸರವಿಲ್ಲದ ಋತ್ವಿಜನ ರಕ್ಷಿಸದ ಭೂಭುಜನ
ಒಸಯದಬಲೆಯನೂರೊಳಾಡುವ
ಪಶುವಕಾವನನಡವಿಗುರಿಯಹ
ನುಸಿಯ ನಾಪಿತನಿಂತರುವರನು ರಾಯ ಕೇಳೆಂದ ೪೬
ವ್ಯಸನವೇಳರ ಕಾಲುಕಣ್ಣೀಯ
ಹಸರದೊಳಗಳವಳಿದು ಹೆಚ್ಚಿದ
ವಿಷಮದಿರುವಿನೊಳದ್ದು ಮಾಯಾಮಯದ ತೋಹಿನಲಿ
ಬಸವಳಿದು ಷಡುವರ್ಗ ವೇಧೆಯ
ನುಸುಳುಗಂಡಿಯ ನೀಕ್ಷಿಸದೆ ತಾ
ಮಸದೊಳಿರುತಿಹುದುಚಿತವೇ ಹೇಳೆಂದನಾ ವಿದುರ ೪೭
ಅತಿಬಲನ ಹಗೆಗೊಳುವನಿಹಪರ
ಗತಿ ವಿಚಾರವ ಮರೆವ ಲೋಕ
ಸ್ಥಿತಿಯನುಲ್ಲಂಘಿಸುವ ಮರ್ಮಜ್ಞರ ವಿರೋಧಿಸುವ
ವಿತಥ ಭಾಷಿತನಪ್ಪ ತನ್ನಿಂ
ಗಿತವನವರಾಯತವನರಿಯದ
ಕ್ಷಿತಿಪನವ ಮೂಢಾತ್ಮನೈ ಭೂಪಾಲ ಕೇಳೆಂದ ೪೮
ಬಲುಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗೆಯ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳೆಂದ ೪೯
ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ದಾನವಿಲ್ಲದ ಸುದತಿ ಸೂರಿಗಳಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳೆಂದ ೫೦
ದಿನವ ಬಂಜೆಯ ಮಾಡದಾವಗ
ವಿನಯಪರನಹ ದೈವ ಗುರು ಪೂ
ಜನೆಯ ಬುಧಸೇವನೆಯ ಕಾಲೋಚಿತದಿ ವಿವರಿಸುವ
ಮನನದಿಂದಾ ಶ್ರವಣ ನಿಧಿ ಧ್ಯಾ
ಸನದೆ ದಿನವನು ಕಳೆಯುವಾತನು
ಮನುರರೊಳಗುತ್ತಮನಲೈ ಧೃತರಾಷ್ಟ್ರ ಕೇಳೆಂದ ೫೧
ಸಲುವೆನೆಂದಂತಃಪುರಕೆ ಸಂ
ಚಲಿಸುವವನಾಪ್ತರನು ಬಿಸುಟ
ಗ್ಗಳಿಸುವವನಹಿತರಲಿ ಧರ್ಮವನುಳಿದಧರ್ಮವನು
ಬಳಸುವವನೇಕಾಂತದಲ್ಲಿಗೆ
ಸುಳಿವವನು ಹಸಿವಿಲ್ಲದುಂಬುವ
ನಿಳೆಯೊಳಗೆ ಮೂಢಾತ್ಮನೈ ಧೃತರಾಷ್ಟ್ರ ಕೇಳೆಂದ ೫೨
ಬುಧರೊಳಗೆ ಹಗೆಗೊಳುವ ಬುಧರನು
ನಿಧನವೈದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರನು ಹೊಗಳುವರ ಹಳಿವ
ಬುಧರನಧಮರ ಮಾಳ್ಪ ಬುಧರಂ
ವಿಧಿಗೊಳಿಪ ಬುಧರೆನಲು ಕನಲುವ
ನಧಮ ಭೂಪರಿಗೆಂಟು ಗುಣವು ವಿನಾಶಕರವೆಂದ ೫೩
ಕುಸುಮ ಫಲ ತಾಂಬೂಲ ಗಂಧ
ಪ್ರಸರ ಭೋಜನಗಮನ ನೆನಹಿಂ
ದೆಸೆವ ಕಾರ್ಯದೊಳಿನಿಬರೊರಗಿದೊಡೊಬ್ಬನೆಚ್ಚರಿಕೆ
ಎಸೆಯಲನಿತುವನೊಬ್ಬನೇ ಭೋ
ಗಿಸುವಡವನೀಪಾಲರಿಗೆ ತಾ
ಸಸಿನವೆನಿಸದು ರಾಯ ಚಿತ್ತೈಸೆಂದನಾ ವಿದುರ ೫೪
ಕಳಿತ ತರಣಿಯ ಕಿರಣದಲಿ ನಿ
ರ್ಮಳದ ಜಲದಲಿ ದುಗ್ಧಪಾನಂ
ಗಳಲಿ ವರಯುವತಿಯರ ಸಂಭೋಗಾಂತರಂಗದಲಿ
ತಳಿತ ಹೋಮದ ಹೊಗೆಗಳಲಿ ದಿನ
ಗಳೆಯಲವಗಾಯುಷ್ಯ ವೃದ್ಧಿಯು
ಬಲಿವುದೈ ದಿನದಿನದೊಳವನೀಪಾಲ ಕೇಳೆಂದ ೫೫
ಎಳೆಯ ರವಿ ರಶ್ಮಿಯಲಿ ಪ್ರೇತಾಂ
ಗಳದ ಧೂಮಜ್ವಾಲೆಯಲಿ ಗಾ
ವಿಲರಹ ಸುವೃದ್ಧೆಯರ ಸಂಭೋಗಾಂತರಂಗಳಲಿ
ಕೊಳಚೆ ನೀರಿನ ಬಳಕೆಯಲಿ ಕ
ತ್ತಲೆಯ ದಧ್ಯೋದನದಲಾಯುಷ
ವಿಳಿದುಹೋಗದೆ ದಿನದಿನದೊಳವನೀಶ ಕೇಳೆಂದ ೫೬
ಮಸುಳಿಸಿರ್ದ ದುಕೂಲ ರದನೊದೊ
ಳೆಸೆವ ಹಾವಸೆ ಭುಕ್ತದುನ್ನತ
ದೆಸಕ ನಿಷ್ಠುರ ವಾಕ್ಯವುದಯಾಸ್ತಮಯ ಕಾಲದೊಳು
ಎಸೆವ ನಿದ್ರಾಂಗನೆಯಲೊಂದಿರೆ
ಬಿಸಜಲೋಚನನಾದಡೆಯು ವ
ರ್ಜಿಸುವಳವರನು ಭಾಗ್ಯವಧು ಭೂಪಾಲ ಕೇಳೆಂದ ೫೭
ಒಂದು ಮೊದಲಾರಂತ್ಯ ವಾದಾ
ಸಂದ ಪೂಗಫಲ ಕ್ರಮಂಗಳ
ಚಂದವನು ಚಿತ್ತೈಸು ಲಾಭಾಲಾಭ ಸುಖ ದುಃಖ
ಕುಂದದಿಹ ಆಯುಷ್ಯ ಮರಣವಿ
ದೆಂದು ತತ್ಕಾಲದಲಿ ಭೋಗಿಸು
ವಂದವನು ಚಿತ್ತೈಸುವುದು ತಾಂಬೂಲ ಧಾರಕರು ೫೮
ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣ ಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳೆಂದ ೫೯
ಸ್ಥಾನ ಪಂಚಕದಿಂದ್ರಿಯದ ಸಂ
ಸ್ಥಾನದಲಿ ನಿದ್ರಾಂಗನೆಯ ಸ
ನ್ಮಾನಿಸುವೊಡಾ ಸಾಧನದ ಪಂಚಕದ ಪರಿವಿಡಿಯ
ಸ್ಥಾನವರಿದಾರೋಗಣೆಯ ಸಂ
ಧಾನದಲಿ ಚಿತ್ತೈಸುವುದು ರಾ
ಜಾನುಮತವಿದು ಭೂಪಚಿತ್ತೈಸೆಂದನಾ ವಿದುರ ೬೦
ಜನಜನಿತ ಮಲ ಮೂತ್ರಗಳು ಮೂರಾ
ರೆನಿಸುವುದು ರತಿಯೊಂದು ನಿಜ ಭೋ
ಜನವೆರಡು ನಿಶೆಯೊಂದೊರಗು ತಾಂಬೂಲ ಹದಿನೈದು
ಇನಿತುವನು ತಪ್ಪದೆ ನಡೆಸಲಾ
ಜನಪಗಾರೋಗ್ಯಾತ್ಮಸುಖ ಸಂ
ಜನಿಸುವುದು ದಿನದಿನದೊಳವನೀಪಾಲ ಕೇಳೆಂದ ೬೧
ನೆರೆದ ಸಚರಾಚರವಿವೆಲ್ಲವು
ನರರ ನಿಜ ಭೋಜನಕೆ ಜನಿಸಿದ
ವರಸ ಕೇಳಿದರೊಲಗೆ ಭೋಜ್ಯಾ ಭೋಜ್ಯವನು ತಿಳಿದು
ಪರಿಹರಿಸ ಬಲ್ಲವರುಗಳು ಘನ
ತರದ ಸುಕೃತವನೈದುವರು ಭೂ
ವರರೊಳಗೆ ಸಂದೇಹವೇ ಭೂಪಾಲ ಕೇಳೆಂದ ೬೨
ತುರಗ ಹೃದಯ ಧ್ವನಿಯ ಸಿಡಿಲಿನ
ಧರಧುರದ ಗರ್ಜನೆಯ ನಾರಿಯ
ರರಿವ ಪುರುಷನ ಭಾಗ್ಯ ದೇವತೆಯೊಲಿವ ಕಾಲವನು
ವರುಷದುದಯವ ಬರನ ಬರವನು
ವಿರಚಿಸುವೊಡೆ ವಿಧಾತ್ರಗಳವ
ಲ್ಲರಸ ಕೇಳ್ ಮಾನವರಿಗಿದು ಗೋಚರಿಸಲರಿದೆಂದ ೬೩
ಬಡತನದೊಳೊದಗಿದವ ಹಗೆಯಾ
ದೊಡೆಯು ನಂಟನು ನಂಟ ತಾನಾ
ದೊಡೆಯು ಬಂದ ವಿಪತ್ತಿನೊಳಗೆ ಪರಾಙ್ಮುಖನೆ ಆಗಿ
ನುಡಿಸದವನೇ ಹಗೆ ಶರೀರದೊ
ಳಡಸಿದಾ ರುಜೆ ಬಾಧೆಗಡವಿಯ
ಗಿಡ ಮರಂಗಳು ರಕ್ಶಿಸವೆ ಭೂಪಾಲ ಹೇಳೆಂದ ೬೪
ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರ ಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನುಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ ೬೫
ಮುಂದೆ ಗುರುವನು ಬಂಧುಜನವನು
ಹಿಂದೆ ಕರ್ಮಾಂತದಲಿ ಸೇವಕ
ವೃಂದವನು ಕೊಂಡಾಡುವುದು ಸಾಹಿತ್ಯ ಮಾರ್ಗವಿದು
ಹಿಂದು ಮುಂದೆಂದೆಂದು ನಿನ್ನಯ
ನಂದನರ ನಾರಿಯರ ಹೊಗಳುವು
ದಂದವೇ ಭೂಪಾಲ ಚಿತ್ತೈಸೆಂದನಾ ವಿದುರ ೬೬
ತುರಗದೆಡಬಲ ಗಜದ ಸಮ್ಮುಖ
ತರುಣಿಯರುಗಳ ಸರ್ವತೋಮುಖ
ಹಿರಿದು ದುರ್ಜನರಿರ್ದ ದೇಶವದೈವ ವ್ಯಾಘ್ರಮುಖ
ಭರದಿನಾದೇಶವನು ಬಿಟ್ಟರ
ವರಿಸದನ್ಯಗ್ರಾಮ ಗಮನಾಂ
ತರವನೈದುವುದಲ್ಲದಲ್ಲಿಹುದುಚಿತವಲ್ಲೆಂದ ೬೭
ಎತ್ತಲೆತ್ತಲು ಪೋಪ ಮನುಜಂ
ಗತ್ತಲತ್ತಲೆ ದೈವ ಕೂಡೆಬ
ರುತ್ತಿಹುದು ಬೆಂಬಿಡದೆ ನಾನಾ ದೇಶದೇಶದಲಿ
ಮಿತ್ರನುರು ಮಧ್ಯಸ್ಥ ಪುರುಷನ
ಮಿತ್ರನೌದಾಸೀನನೊಬ್ಬನು
ಕೃತ್ರಿಮನು ಸಹ ಜೀವಿಯಿಂತಿವರರಸ ಕೇಳೆಂದ ೬೮
ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಂ
ಹರಣ ಬಂಧು ದೇಷವತ್ಯಾಲೀಢ ವಾಕ್ಕಥನ
ಶರಣಜನ ದಂಡಿತ್ವವೆಂಬಿವ
ನರವರಿಸದಂಗೈಪ ಭೂಪನ
ಸಿರಿಗೆ ಮೂಡುಗು ಕೇಡು ನಿಮಿಷದೊಳರಸ ಕೇಳೆಂದ ೬೯
ಬಲು ಪ್ರಧಾನರ ವೈರ ಹಿತವಹ
ಲಲನೆಯರ ಮನದಳಲು ಹಗೆಯಲಿ
ಬಳಸುವಂತಸ್ಥತೆಯನಾಮಿಕರೊಡನೆ ಕೆಳೆ ಗೋಷ್ಠಿ
ಬಲದೊಡನೆ ನಿರ್ಬಂಧ ಧರ್ಮದ
ನೆಲೆಯನರಿಯದ ದಾನಿಗಳ ಸಿರಿ
ಸುಳಿವ ಗಾಳಿಗೆ ಮಲೆವ ದೀಪವು ಕೇಳು ಧೃತರಾಷ್ಟ್ರ ೭೦
ಹುಸಿ ಪರದ್ರೋಹವು ಪರಸ್ತ್ರೀ
ವ್ಯಸನ ನಿಂದೆಯಸೂಯೆ ಮಾನ್ಯ
ದ್ವಿಷತೆ ಪತಿತನ ಮೇಳ ಆತ್ಮಸ್ತುತಿಯೆನಿಪ್ಪಿವನು
ಬಿಸುಟು ತದ್ವಿಪರೀತದೊಳುವ
ರ್ತಿಸುವನವನೇ ರಾಯನಾತಗೆ
ವಸುಧೆಯೊಳಗೆಣೆಯಾವನೈ ಧೃತರಾಷ್ಟ್ರ ಕೇಳೆಂದ ೭೧
ಇದು ಸಮಾಹಿತವಿದು ಶುಭೋದಯ
ವಿದು ಸಕಲ ಪುರುಷಾರ್ಥ ಸಾಧನ
ವಿದು ಸುಜನ ಸನ್ಮಾನವಿದು ಸಂಸಾರ ಸೌಖ್ಯಫಲ
ಇದು ಸುಬಲವಿದಬಲ ವಿದಾಮ್ನಾ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು ೭೨
ಎಲ್ಲಿ ಸುಲಲಿತ ವಿದ್ಯೆ ಬಹುಗುಣ
ವೆಲ್ಲಿ ಗಣಿಕಾನಿಕರ ಮಣಿಗಣ
ವೆಲ್ಲಿ ಗಜ ಜಾತ್ಯಶ್ವವೆಲ್ಲಿ ವರೂಥ ಸಂದೋಹ
ಎಲ್ಲಿ ಸುಭಟ ನಿಕಾಯ ನೆರೆದಿಹು
ದಲ್ಲಿ ತನ್ನಾಧೀನ ಮಾಡಲು
ಬಲ್ಲವನೆ ನೃಪನಾತಗಿದಿರಾರೈ ಧರಿತ್ರಿಯಲಿ ೭೩
ದ್ವಾರವೊಂಬತ್ತಿಂದ್ರಿಯದಹಂ
ಕಾರ ಕರಣ ಚತುಷ್ಟಯಂಗಳ
ಸಾರ ಭೂತಾಳಿಗಳ ಸುಳಿವಿನ ಪಂಚವಾಯುಗಳ
ಹೋರಟೆಗಳೊಳು ಬಳಲಿ ಜೀವನ
ಧೀರನಹವೊಲು ಪಾಂಡುಪುತ್ರರ
ಕೌರವರ ಬೇಳಂಬದೊಳು ಬೆಂಡಾದೆ ನೀನೆಂದ ೭೪
ಮತ್ತನತಿಶಾಂತ ಪ್ರಮತ್ತೋ
ನ್ಮತ್ತನತಿ ಕುಪಿತಾನನನು ಚಲ
ಚಿತ್ತನತಿಕಾಮುಕನು ಲುಬ್ಧನು ಶೂರನೆಂಬವನು
ಕ್ಷುತ್ತು ಘನವಾಗುಳ್ಳನಿಂತೀ
ಹತ್ತು ಜನವಾವಾಗ ಧರ್ಮದ
ತತ್ತವಣೆಗಳನರಿಯರೈ ಭೂಪಾಲ ಕೇಳೆಂದ ೭೫
ದಾನವಿಷ್ಟಾಪೂರ್ತ ವಿನಯಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಸದಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥ ಬಂಧುವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು ೭೬
ಶತ್ರುಕಾಲ ಸುದೇಶವರ್ಗ ಸು
ಮಿತ್ರರುದಯೋಪಾಯ ಕರಣಸು
ಪಾತ್ರವೆಂಬಿವು ಮೂರು ತೆರನಾಗಿಪ್ಪುವಿದರೊಳಗೆ
ಕ್ಷತ್ರಧರ್ಮ ವಿವೇಕವೆಂಬಿವ
ಸತ್ರಗೊಳಿಪನೆ ರಾಯನವಗೆ ಧ
ರಿತ್ರಿಯೊಳಗೆಣೆಯಾವನೈ ಧೃತರಾಷ್ಟ್ರ ಕೇಳೆಂದ ೭೭
ಧರೆಯೊಳೀ ಹೊತ್ತಿನಲಿ ನಿನಗೈ
ಶ್ವರಿಯದಲಿ ಮಕ್ಕಳಲಿ ಖಂಡೆಯ
ಸಿರಿಯಲೋಡಹುಟ್ಟಿದರು ಸಪ್ತಾಂಗದಲಿ ಸತಿಯರಲಿ
ಗುರು ಪಿತಾಮಹ ಬಂಧುಜನಮಿ
ತ್ರರಲಿದಾವುದು ಕೊರತೆ ಕೌಂತೇ
ಯರ ನೆರವಿಗರ ಮಾಡುವರೆ ಧೃತರಾಷ್ಟ್ರ ಕೇಳೆಂದ ೭೮
ಉಭಯಕುಲ ಶುದ್ಧಿಯಲಿ ಹೆಚ್ಚಿದ
ವಿಭವದಲಿ ವಿಗ್ರಹದಲಧಿಕ
ಪ್ರಭೆಗಳಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ
ಅಭವನಂಘ್ರಿಯ ಸೇವೆಯಲಿ ಹರಿ
ನಿಭನೆನಿಸಿ ಬದುಕುವನು ರಾಜ್ಯಕೆ
ವಿಭುವೆನಿಸುವನು ರಾಯ ಚಿತ್ತೈಸೆಂದನಾ ವಿದುರ ೭೯
ವೇಸಿಯಹ ಪರ್ಯಂಕದೊಳು ನಿಜ
ದಾಸಿಯಹ ಶುಷ್ರೂಷೆಯಲಿ ನಿ
ರ್ದೋಷಿಯಹ ಪತಿಭಕ್ತಿಯಲಿ ಮೋಹದಲಿ ತಾಯೆನಿಸಿ
ಏಸು ಕಾರ್ಯಕೆ ಮಂತ್ರಿಯೆನಿಸುವ
ಮೈಸಿರಿಯನುಳ್ಳವಳು ರಾಣೀ
ವಾಸವೆಂದೆನಿಸುವಳಲೈ ಭೂಪಾಲ ಕೇಳೆಂದ ೮೦
ತಂದೆ ತಾಯಿಗಳಾಜ್ಞೆಯನು ಸಾ
ನಂದದಲಿ ಪಾಲಿಸುತ ಮದವನು
ಮುಂದುಗೆಡಿಸಿ ಸುಧರ್ಮದಲಿ ರಾಜ್ಯವನು ಪಾಲಿಸುತ
ಬಂಧು ಬಳಗವ ಸಲಹಿ ಭೂಸುರ
ವೃಂದವನು ನೆರೆ ಹೊರೆವಡುವ ಸುತ
ವಂದ್ಯನೈ ಲೋಕಕ್ಕೆ ಚಿತ್ತೈಸೆಂದನಾ ವಿದುರ ೮೧
ಇಹಪರದ ಸುಖ ಸಂಗತಿಯ ಸಂ
ಗ್ರಹಿಸಿ ವೇದಾಚಾರದಲಿ ಸ
ನ್ನಿಹಿತನಾಗಿ ಸಮಸ್ತ ಕಳೆಯ ಲಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ ೮೨
ಇಂದ್ರಿಯವನೊಡೆತುಳಿದು ಕರ್ಮದ
ಬಂದಿಯನು ತಲೆ ಬಳಸಿ ವಿಷಯದ
ದಂದುಗವನೀಡಾಡಿ ಮಾಯಾಪಾಶವನು ಹರಿದು
ದ್ವಂದ್ವ ವಿರಹಿತನಾಗಿ ವಿಶ್ವದ
ಲೊಂದಿ ಮರೆಯಲು ಬಲ್ಲವನು ಗುರು
ವೆಂದೆನಿಸುವನು ರಾಯ ಚಿತ್ತೈಸೆಂದನಾ ವಿದುರ ೮೩
ಒಡಲೊಡವೆ ಮೊದಲಾದುವೆಲ್ಲವ
ಅಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯ ಬಲ್ಲವನವನೆ ಶಿಷ್ಯನು ರಾಯ ಕೇಳೆಂದ ೮೪
ಯುಕುತಿ ವಿದುರುಗಳಾಗಿ ವಿದ್ಯಾ
ಧಿಕರೆನಿಸಿ ಸಮ ಬುದ್ಧಿಗಳ ನಾ
ಟಕವ ನಟಿಸುತ ಪರಮತತ್ತ್ವಜ್ಞಾನ ಪರರಾಗಿ
ಸಕಲ ಕಳೆಯಲಭಿಜ್ಞರಹ ಧಾ
ರ್ಮಿಕರು ಪರಪುರುಷಾರ್ಥಿಗಳು ವೈ
ದಿಕರಲೇ ವಿದ್ವಾಂಸರೆನಿಸುವರರಸ ಕೇಳೆಂದ ೮೫
ದಂಡ ನೀತಿ ಸ್ಮಾರ್ತ ಶೌಚೋ
ದ್ದಂಡ ವೇದಾಧ್ಯಾಯನ ನಿಪುಣರು
ಪಂಡಿತಪ್ರಿಯ ಶಾಂತಿ ಪೌಷ್ಟಿಕ ಕರ್ಮ ದೇಶಿಕನ
ಚಂಡ ದೈವಜ್ಞನನುನುತಗುಣ
ಮಂಡಿತನ ಬಹುಶಾಸ್ತ್ರ ಪಠನಾ
ಖಂಡಿತನ ಪೌರೋಹಿತನ ಮಾಡುವುದು ಮತವೆಂದ ೮೬
ಸ್ಥೂಲ ಸೂಕ್ಷ್ಮ ಕೃತಜ್ಞನುತ್ಸವ
ಶೀಲನ ಕ್ರೋಧನನ ದೀರ್ಘವಿ
ಶಾಲಸೂತ್ರನು ವೃದ್ಧ ಸೇವಕ ಸತ್ಯ ವಾಕ್ಯುಚಿಯು
ಕಾಲವೇದಿ ವಿನೀತನವ್ಯಸ
ನಾಳಿ ಸೂರಿ ರಹಸ್ಯ ವಿಶ್ರುತ
ಪಾಲನಾನ್ವಿತ ಮಂತ್ರಿಯುಂಟೇ ರಾಯ ನಿನಗೆಂದ ೮೭
ತುರಗ ಗಜ ಭಟರಳವರಿವ ಸಂ
ಗರ ಮಹೋತ್ಸಾಹಕನ ಜಿತ ಶ್ರಮ
ನರಿ ಕಟಕ ಭೇದಕನ ನಾನಾಯುಧ ವಿಶಾರದನ
ಭರಿತ ಧೈರ್ಯನ ಪತಿಹಿತನ ಸಂ
ಗರ ಸದಾರನನೂ ರ್ಧ್ವರೋಮನ
ನಿರದೆ ಸೇನಾಪತಿಯ ಮಾಡುವುದರಸ ಕೇಳೆಂದ ೮೮
ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರನ ಮಂ
ಡಳಿಕ ಸಾವಂತರ ವಿಶೇಷದಲವಸರವನಂದು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕರ ದುಷ್ಕರ
ಕಳುಕದಾತನ ಸಂಧಿವಿಗ್ರಹಿಯೆನಿಸಬೇಕೆಂದ ೮೯
ಮಿಸುಪ ಮಣಿಗಣ ಲೋಹ ಕಾಂಚನ
ವಿಸರ ಭೇದವನರಿವ ಕೊಟ್ಟುದ
ನಸಿಯಲೀಯದೆ ತಾನು ಭಕ್ಷಿಸದಹಿನಿಧಾನವನು
ಒಸೆದು ಕಾದಿಪ್ಪಂತೆ ಕಾದಿಹ
ಹುಸಿಯದಾಪ್ತನ ಬಹು ಕುಟುಂಬ
ವ್ಯನಸವುಳ್ಳನ ಮಾಳ್ಪುದೈ ಭಂಡಾರ ರಕ್ಷಕನ ೯೦
ಮನ ವಚನ ಕಾಯದಲಿ ದಾತಾ
ರನ ಹಿತವನುಳ್ಳನ ವಿನೀತನ
ವಿನುತ ವನಿತಾನತಮುಖನ ನಿಷ್ಕಳಿತ ರೋಷಕನ
ಮುನಿವವರ ಬುದ್ಧಿಯಲಿ ಸಿಲುಕದ
ವನ ವಿಶೇಷ ಕಳಾಪ್ರವೀಣನ
ಜನಪ ಚಿತ್ತೈಸುವುದೆಲೈ ತಾಂಬೂಲಧಾರಕನ ೯೧
ಪಿತೃ ಪಿತಾಮಹ ಸೂಪ ಶಾಸ್ತ್ರಾ
ಗತನ ಕೈಕರಣೆಗಳೊಳಧಿಕನ
ನತಿ ಶುಚಿಯ ಸಾಧಕನನಕ್ರೋಧಿಯನನಾಲಸನ
ಪತಿಹಿತನ ಷಡ್ರಸ ವಿಶೇಷೋ
ನ್ನತನನಿತರಾಲಯ ವಿದೂರನ
ಪತಿಕರಿಸುವುದು ಸೂಪಕಾರತೆಗರಸ ಕೇಳೆಂದ ೯೨
ನಿಶಿತ ಪರಿಮಳದಿಂದ ವಾಮೋ
ದಿಸಿದ ಗಂಧ ದ್ರವ್ಯದೊಳು ಬಂ
ಧಿಸಿದ ಜೀವನ ವಿದುವೆ ತನ್ನಯ ಜೀವನವಿದೆಂದು
ವಸುಮತೀಶಂಗಿತ್ತು ತಾ ಭೋ
ಗಿಸದೆ ಬಳಸದೆ ದುರ್ಹೃದರ ತೊಲ
ಗಿಸುವವನೆ ಪಾನೀಯಧಾರಕನರಸ ಕೇಳೆಂದ ೯೩
ಉನ್ನತನ ರೂಪಾಧಿಕನ ಸಂ
ಪನ್ನ ದಕ್ಷನ ಅನ್ಯರೆನ್ನವ
ರೆನ್ನ ದವರವರಿಂಗಿತಾಕಾರ ಪ್ರಭೇದಕನ
ಮನ್ನಣೆಗೆ ಬೆರೆಯದನನಾಪ್ತನ
ತನ್ನ ಕಾರ್ಯದೊಳಶ್ರಮಪ್ರತಿ
ಪನ್ನನನು ಪದಿಯರನ ಮಾಡುವದರಸ ಕೇಳೆಂದ ೯೪
ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮಪದನಿಗಳ
ನೇಮ ತಪ್ಪದೆ ಹರಣಭರಣದ ಪರೆಪು ತಿರುಪುಗಳ
ಕೋಮಲಿತ ಶಾರೀರ ಹೃದಯದ
ರಾಮಣೀಯಕ ರಚನೆಗಳೊಳು ಸ
ನಾಮ ನೆನಿಸುವನವನೆ ಗಾಯಕನರಸ ಕೇಳೆಂದ ೯೫
ತಾಳಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ರಾಗ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣ ಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು ೯೬
ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪ ಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ರಾಯ ಕೇಳೆಂದ ೯೭
ಎಡಬಲವನಾರೈವುತೊಡೆಯನ
ಬಿಡದೆ ನೋಡುತೆ ಮಕ್ಷಿಕಂಗಳ
ಗಡಣವನು ಕೆದರಿಸುತ ಕಿಗ್ಗಣ್ಣಿಕ್ಕಿ ಕೆಲಬಲನ
ಜಡಿದು ನೂಕುವ ಸ್ವಾಮಿ ಕಾರ್ಯಕೆ
ಯೆಡೆಯಿನಿಸುತಾವಾಗ ಸೇವೆಯ
ಬಿಡದೆ ಮಾಳ್ಪನೆ ಚಮರಧಾರಕನರಸ ಕೇಳೆಂದ ೯೮
ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯ ಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಡಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ೯೯
ಹರುಷದಲಿ ನಿಜಜನನಿ ಗರ್ಭವ
ಧರಿಸಿಕೊಂಡಾಡುವವೊಲುತ್ತಮ
ಪುರುಷರರಂತರ್ಯಾಮಿಯನು ತಾಳ್ವಂತೆ ಭೂಭುಜರ
ಧರಿಸಿ ಸುಖಸಂಗತಿಗಳಲಿ ಸಂ
ಚರಿಸುತಾಳ್ದನ ಹಾನಿವೃದ್ಧಿಯ
ಲಿರಲು ಬೆಸದವರೆನಿಸುವರು ಭೂಪಾಲ ಕೇಳೆಂದ ೧೦೦
ಹೆಬ್ಬಲವನೊಡೆದುಳಿಸಿ ಭೂಮಿಯ
ನಿಬ್ಬಗೆಯ ಮಾಡಿಸುತ ಗಜಹಯ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರ ಮಳೆಯ ಸುರಿಸುರಿ
ದುಬ್ಬರದ ಬವರದೊಳಗಹಿತರಿ
ಗುಬ್ಬಸವನೆಸಗುವನೆ ಜೋದನು ರಾಯ ಕೇಳೆಂದ ೧೦೧
ಹಿಂದೆ ಮಾಡಿದ ಸುಕೃತಫಲವೈ
ತಂದು ಸಾರುವವೋಲು ನಾನಾ
ಚಂದದಾಪತ್ತಿನಲಿ ಹರಿ ನಿಜಭಕ್ತ ಸಂತತಿಯ
ಮುಂದೆ ನಿಲುವವೊಲವನಿಪಾಲರ
ದಂದುಗದ ಹೊತ್ತಿನಲಿ ಗಜಹಯ
ವೃಂದವನು ಚಾಚುವನು ವಾಹಕನರಸ ಕೇಳೆಂದ ೧೦೨
ಕುದುರೆಗಳನಾರೈದು ರಥವನು
ಹದುಳಿಸುತೆ ಸಾರಥಿಯ ನೋಡುತೆ
ಯಿದಿರ ಮುರಿಯುತೆ ತನ್ನ ಕಾಯಿದುಕೊಳುತೆಯೆಡಬಲನ
ಸದೆದು ಮರಳುವ ಲಾಗು ವೇಗದ
ಕದನ ಕಾಲಾನಲನು ತಾನೇ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ ೧೦೩
ಬಿಟ್ಟ ಸೂಟಿಯಲರಿನೃಪಾಲರ
ಮುಟ್ಟಿ ಮೂದಲಿಸುತ್ತ ಮೋಹಿದ
ಥಟ್ಟನೊಡೆಹಾಯ್ದಹಿತಬಲದೊಳಗಾನೆವರಿವರಿದು
ಹೊಟ್ಟುಗುಟ್ಟುತ ಹೆಣನ ವಟ್ಟಾ
ವಟ್ಟಿಮಸಗಲು ಕಳನ ಔಕದ
ಲಟ್ಟಿಯಾಡಿಸಬಲ್ಲಡವ ರಾವುತನು ಕೇಳೆಂದ ೧೦೪
ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಖಂಡವ
ಸೂಸಿ ಕಡಿಕಡಿದೊಟ್ಟಿದಂದದಲಹಿತ ಬಲದೊಳಗೆ
ಓಸರಿಸದೊಳ ಹೊಕ್ಕು ಸಮರವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಗೊದಗುವನವನೆ ಕಾಲಾಳರಸ ಕೇಳೆಂದ ೧೦೫
ಬರಲು ಕಂಡಡೆ ವಂದಿಸುತಲಂ
ತರಿಸಿ ಮಿಗೆ ಹತ್ತಿರವೆನಿಸದತಿ
ತರದ ದೂರವ ಸಾರದೀಪರಿ ಮಧ್ಯಗತನೆನಿಸಿ
ಪರಿವಿಡಿಯಲೋಲಗಿಸುತರಸನ
ಸಿರಿಮೊಗವ ನೀಕ್ಷಿಸುವ ಬೆಸಸಿದ
ನರವರಿಸದಾಕ್ಷಣಕೆ ಮಾಡುವನವನೆ ಸೇವಕನು ೧೦೬
ಕುನಖಿ ಕುಷ್ಠಿ ಕುಚೇಲನನುಕು
ಬ್ಜನನು ವಿಧವಾಂಗನೆಯ ದಾಸಿಯ
ತನುವಿಕಾರಿಯನಂಗಹೀನನ ಪಂಗುವಂಧಕನ
ಘನ ರುಜಾಂಗನ ಬಿಡುದಲೆಯರೋ
ದಿನಿಯನುಪ್ಪದಿಸುವ ಸಮಯದೊ
ಳಿನಿಬರನು ಕಾಣ್ಬುದು ಮಹೀಶರಿಗಂಗವಲ್ಲೆಂದ ೧೦೭
ಶ್ವಾನ ಕುಕ್ಕುಟ ಕಾಕ ಬಕ ಪವ
ಮಾನ ಖಗಪತಿ ದಿವಿಜ ರಜನಿ ಕೃ
ಶಾನುವಿನ ಗಾರ್ಧಭನ ವೃಷಭನ ಶಿಂಶುಮಾರಕನ
ವಾನರನ ಹಯ ಕುಂಜರನ ಪಂ
ಚಾನನನ ಮೃಗ ಪೋತಕನ ಗುಣ
ವಾನರೆಂದ್ರನೊಳಿರಲು ಬೇಹುದು ಭೂಪ ಕೇಳೆಂದ ೧೦೮
ಪರಿಪರಿಯ ದಾನಂಗಳನು ಕರೆ
ಕರೆದು ಲೋಗರಿಗಿತ್ತು ಪರರನು
ಹೊರೆದು ತನ್ನಾಶ್ರಿತರ ನತಿಗಳೆದಾಪ್ತ ಬಾಂಧವರ
ಸರಕು ಮಾಡದೆ ಗರ್ವದಿಂದು
ಬ್ಬರಿಸುತಿಹ ಪಾತಕರ ಪದವಿಯ
ನರಸ ಬಣ್ಣಿಸಲಾರು ಬಲ್ಲರು ಯಮನ ನಗರಿಯಲಿ ೧೦೯
ಮೂರು ಕೋಟಿಯ ಕೋಟಿಯರ್ಧವ
ಮೀರದಿಹ ರೋಮಾಳಿ ಸಂಖ್ಯೆಯೊ
ಳಾರೆನೆನ್ನದೆ ನಿಜಪತಿಯ ಸಹಗಮನದೊಳ ತನುವ
ಮಾರಿದಬಲೆಯರುಗಳ ದೆಸೆಯಿಂ
ದಾರುಮಡಿ ಸ್ವರ್ಗಾದಿ ಭೋಗವ
ಸೂರೆಗೊಂಬರು ತಪ್ಪದವನೀಪಾಲ ಕೇಳೆಂದ ೧೧೦
ಕಲಶ ಕನ್ನಡಿ ಕರಿ ತುರಗ ಗೋ
ಕುಲ ವೃಷಭ ಬುಧ ನಿಚಯ ಗಿರಿಸಂ
ಕುಳ ಸುವಾಸಿನಿ ಮಾತೃ ಪಿತೃವರ ವಾಹಿನೀ ನಿಚಯ
ಜಲಧಿ ವಸನಚ್ಛತ್ರ ಊರ್ವೀ
ಲಲನೆಯರನೀಕ್ಷಿಸುವುದವನಿಪ
ತಿಲಕರುಪ್ಪಡಿಸುವ ಸಮಯದೊಳರಸ ಕೇಳೆಂದ ೧೧೧
ಆವನೊಬ್ಬನು ಸತ್ಯಕೋಸುಗ
ಭಾವ ಶುದ್ಧಿಯಲೊಡರಿಚುವ ಶಪ
ಥಾವಸಾನದಲವನಧರ್ಮದಲರ್ಧವನು ಯಮನು
ಓವನನ್ಯಾಯದಲಿ ಸೂರುಳ
ನೋವಿ ರಚಿಸಿದವಂಗೆ ಗತಿಯಿ
ನ್ನಾವುದೆಂಬುದನಾರು ಬಲ್ಲರು ಭೂಪ ಕೇಳೆಂದ ೧೧೨
ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದುರುತರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ ೧೧೩
ವಿದ್ಯೆಯೊಳು ವೈದ್ಯದೊಳು ಪರಹಿತ
ದುದ್ಯಮದ ಶೀಲರೊಳು ಪತಿಯೊಳು
ಸದ್ಯಮಿಯ ಯೋಗದೊಳು ನಿಜಗುರು ಪದದ ಭಕ್ತಿಯೊಳು
ಸದ್ದ್ಯುಮಣಿ ತೇಜದೊಳು ಖತಿಯೊಳ
ವಿದ್ಯೆಯಂ ಮಾಳ್ಪರಿಗೆ ಮಹಿಯೊಳು
ಸದ್ಯಫಲವದು ತಪ್ಪದವನೀಪಾಲ ಕೇಳೆಂದ ೧೧೪
ಗರುವ ಮಾನ್ಯನು ಮಾನಿ ಸುದಯಾ
ಪರನು ಕಡುಶುಚಿ ಭೋಗಿ ರೂಪೋ
ತ್ತರನು ಧನಿಕನು ರಾಜಪೂಜ್ಯನು ಕೀರ್ತಿವಲ್ಲಭನು
ಗುರು ಜನಕೆ ಗುರು ವಿದ್ಯೆಯುಳ್ಳವ
ನರಸ ಕೇಳೈ ವಿದ್ಯೆಯಿಲ್ಲದ
ನರನು ನರಪಶುವವನ ಜನ್ಮ ನಿರರ್ಥ ಕೇಳೆಂದ ೧೧೫
ವಿದ್ಯೆ ಸತ್ಕುಲ ಬಹು ವಿವೇಕವು
ಬುದ್ಧಿ ಜಾಣ್ಮೆಯ ನುಡಿಯ ಸಡಗರ
ಶುದ್ಧ ಚಿತ್ತ ಸುಶೀಲ ಭುಜಬಲ ಭದ್ರನೆಂದೆನಿಸಿ
ಉದ್ಯುಗವು ಮೊದಲಾದ ಗುಣಗಳಿ
ವಿದ್ದು ಫಲವೇನೀ ಜಗದ ತೊರೆ
ಮದ್ದು ಹೊದ್ದದ ನರಗೆ ದಾರಿದ್ರಂಗನಾ ವರಗೆ ೧೧೬
ಧರೆಯೊಳಗೆ ಶುಚಿಯಹನು ವೈಶ್ವಾ
ನರನು ಮಾಯಾಕ್ರಾಂತಿ ಹಿಂಗಿದ
ನರನು ಸುವ್ರತಕಾಮನೆನಿಸುವ ಬ್ರಾಹ್ಮಣೋತ್ಮನು
ಹರಿಹರಾತ್ಮಕ ನಾಮಕೀರ್ತನ
ವೆರಸಿ ಬದುಕುವನೊಬ್ಬನೀ ನಾ
ಲ್ವರುಗಳಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ೧೧೭
ವನಿತೆ ಮಕ್ಕಳು ಒಡನೆ ಬಾರರು
ತನುದೊರೆಯೆ ಬಂಧುಗಳು ಬಾರರು
ದಿನ ದಿನದೊಳೊಡರಿಚಿದ ದುಷ್ಕೃತ ಬೆನ್ನಬಿಡದಿಹುದು
ಅನವರತ ನೀನೊಲಿದು ಮಾಡಿದ
ವಿನಯಧರ್ಮ ಪರೋಪಕಾರವು
ನಿನಗೆ ಬೆಂಬಲವಾಗಿಹುದು ಕೇಳೆಂದನಾ ವಿದುರ ೧೧೮
ದ್ಯೂತದೊಳು ಮದ್ಯದೊಳು ಘನ ಕಂ
ಡೂತಿಯೊಳು ನಿದ್ರೆಯೊಳು ಕಲಹ ವಿ
ಘಾತಿಯೊಳು ಮೈಥುನದೊಳಾಹಾರದೊಳು ಬಳಿಸಂದ
ಕೈತವದೊಳುದ್ಯೋಗದೊಳು ದು
ರ್ನೀತಿಯೊಳು ಪರಸತಿಯರೊಳು ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ರಾಯ ಕೇಳೆಂದ ೧೧೯
ಹರಿಭಕುತಿ ಲೋಲುಪನೆನಿಸಿ ಶಂ
ಕರನ ಬದ್ಧ ದ್ವೇಷಿಯಹ ಶಂ
ಕರನ ಭಕ್ತಿಯೊಳಧಿಕನಾಗಿಯು ವಿಷ್ಣುವಿನ ಮೇಲೆ
ಎರಕವಿಲ್ಲದ ಕರ್ಮಚಂಡಾ
ಲರುಗಳೆಪ್ಪತ್ತೇಳು ಕೋಟಿಯ
ನರಕದೊಳಗೋಲಾಡುತಿಹರೆಲೆ ರಾಯ ಕೇಳೆಂದ ೧೨೦
ಯತಿ ಕಿಡುಗು ದುಸ್ಸಂಗದೊಳು ಭೂ
ಪತಿ ಕಿಡುಗು ದುರ್ಮಂತ್ರಿಯೊಳು ವರ
ಸುತ ಕಿಡುಗು ಲಾಲನೆಗಳೊಳು ಕೃಷಿ ಕಿಡುಗುಪೇಕ್ಷೆಯೊಳು
ಮತಿ ಕಿಡುಗು ಮಧುಪಾನದೊಳು ಸ
ದ್ಗತಿ ಕಿಡುಗು ದುರ್ವ್ಯಸನದೊಳು ನಿಜ
ಸತಿ ಕಿಡುಗು ಸ್ವಾತಂತ್ರ್ಯದೊಳು ಭೂಪಾಲ ಕೇಳೆಂದ ೧೨೧
ಉಂಡು ತೀರಿಸಬೇಕು ತಾ ಮುಂ
ಕೊಂಡು ಮಾಡಿದ ಪುಣ್ಯ ಪಾಪದ
ತಂಡವನು ತರಹರಣವಿಲ್ಲದೆ ಭವ ಭವಂಗಳಲಿ
ಹಿಂಡಿ ಹಿಳಿವುದು ಬೆಂಬಿಡದೆ ಸಮ
ದಂಡಿಯಲಿ ಹಗೆ ಕೆಳೆಗಳೆನ್ನದೆ
ಗಂಡುಗೆಡಿಸದೆ ಬಿಡುವುದೇ ವಿಧಿಯೆಂದನಾ ವಿದುರ ೧೨೨
ಸ್ನೇಹ ಪೂರ್ವಕದಿಂದ ಮನದೊಳ
ಗಾಹಿಸಲು ಲಕ್ಷ್ಮೀಶನವರಿಗೆ
ಬೇಹ ಪುರುಷಾರ್ಥಂಗಳಹವೆಲ್ಲಿದ್ದರಲ್ಲಲ್ಲಿ
ಈ ಹದನು ತಪ್ಪುವುದೆ ಕೂರ್ಮನ
ಮೋಹದಲಿ ತತ್ಸಂತತಿಗೆ ನಿ
ರ್ವಾಹವಹವೋಲರಸ ಚಿತ್ತೈಸೆಂದನಾ ವಿದುರ ೧೨೩
ಕೂಡಿದೆಡೆಯಲಕೃತ್ಯಶತವನು
ಜೋಡಿಸಿದವರು ಮಿತ್ರರುಗಳಿಗೆ
ಕೇಡಚಿಂತಿಸಿದವರುಗಳು ಪುರುಷಾರ್ಥವನು ತಮಗೆ
ಮಾಡಿದವರುಗಳಿಗೆ ವಿಘಾತಿಯ
ಹೂಡಿದವದಿರು ನರಕದೊಳಗೋ
ಲಾಡದಿಹರೇ ರಾಯ ಚಿತ್ತೈಸೆಂದನಾವಿದುರ ೧೨೪
ಕುಲಜನಾಗಲಕುಲಜನಾಗಲಿ
ಜಲರುಹಾಕ್ಷನ ನಾಮಕೀರ್ತನ
ದೊಳಗೆ ಬದುಕುವನಾವನಾತನೆ ಸುಕೃತಿಯೆನಿಸುವನು
ಉಳಿದ ಜಪತಪ ಹೋಮ ನೇಮಂ
ಗಳಲಿ ಸಂಸಾರಾರ್ಣವವನು
ಚ್ಚಳಿಸಬಹುದೇ ರಾಯ ಚಿತ್ತೈಸೆಂದನಾ ವಿದುರ ೧೨೫
ಜಾತರೂಪದ ಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತನೆಂಬುದನರಸ ಚಿತ್ತೈಸೆಂದನಾ ವಿದುರ ೧೨೬
ಅವನಿಯಲಿ ಜನಜನಿತ ಧನಧಾ
ನ್ಯವನು ಕಳಹಲಗೈದು ಸಂತೋ
ಷವನು ಮಾಡುವ ಕಡೆಯೊಳೊಂದಕೆ ನೂರು ಮಡಿಯಾಗೆ
ಲವಲವಿಕೆ ಮಿಗೆಯತ್ತಿ ಸಪ್ತಾಂ
ಗವನು ಸಲಹುತ್ತಿರಲು ಬೇಹುದು
ರವಿಯವೊಲು ಸಾಸಿರಮೊಗದೊಳವನೀಶ ಕೇಳೆಂದ ೧೨೭
ಇನನುದಯಿಸಲಿ ಪಶ್ಚಿಮಾದ್ರಿಯೊ
ಳನಲನೊಮ್ಮೆ ಹಿಮಾಂಶುವಾಗಲಿ
ಕನಕಗಿರಿಗಲ್ಲಾಟವಾಗಲಿ ಪರ್ವತಾಗ್ರದಲಿ
ವನಜ ವಿಕಸಿತವಾದೊಡೆಯು ಸ
ಜ್ಜನರುಗಳು ನುಡೆದೆರಡನಾಡರು
ಮನವಚನಕಾಯದಲಿ ಚಿತ್ತೈಸೆಂದನಾ ವಿದುರ ೧೨೮
ನಾಯಿಗಳ ನುಡಿಗೇಳಿ ನೀನು ವೃ
ಥಾಯದೊಳು ಕೆಡದೆಯೆ ಯುಧಿಷ್ಠಿರ
ರಾಯನನು ಕರೆಸುವುದು ಭೀಷ್ಮಾದಿಗಳ ಮುಂದಿಟ್ಟು
ನ್ಯಾಯ ಮುಖದೊಳು ಸಕಲ ರಾಜ್ಯ
ಶ್ರೀಯೊಳರ್ಧವನಿತ್ತು ಬದುಕುವು
ದಾಯತಿಕೆಯೊಳಗಹುದು ಚಿತ್ತೈಸೆಂದನಾ ವಿದುರ ೧೨೯
ಹರನ ಕೊರಳಿಂಗಾಭರಣವಾ
ದುರಗ ಪವನಾಶನವೆನಿಸುವಂ
ತರಸ ನಿನ್ನಯ ಬಸುರ ಬಂದೇನಹರು ಪಾಂಡವರು
ನರಪಶುಗಳಾದರು ಕಣಾ ನೀ
ನಿರಲು ವನವಾಸದಲಿ ಸೊಪ್ಪನ
ವರತ ಮೆಲುವುದೆ ರಾಯ ಚಿತ್ತೈಸೆಂದನಾ ವಿದುರ ೧೩೦
ದೇವತಾ ಸ್ಥಾನದಲಿ ವಿಪ್ರಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ರವಿ ಶಶಿಗಳುದಯಾಸ್ತಮಯ ಕಾಲದಲಿ
ಗೋವುಗಳ ನೆರವಿಯಲಿ ವರವೃಂ
ದಾವನದೊಳುಪಹತಿಯ ಮಾಡುವು
ದಾವಗುಣ ಗರುವರಿಗೆ ಚಿತ್ತೈಸೆಂದನಾ ವಿದುರ ೧೩೧
ಚಕ್ರವರ್ತಿಗಳಾರ್ವರೀ ಭೂ
ಚಕ್ರದೊಳಗವರಿಗೆ ಮುರಾರಿಯ
ಚಕ್ರವೇ ಬೆಸಕೈವುದಲ್ಲದೆ ಪಾಂಡುತನಯರಿಗೆ
ಚಕ್ರಿ ತಾ ಬಂದವರ ಸೇವಾ
ಚಕ್ರದೊಳಗಿಹನಾ ಯುಧಿಷ್ಠಿರ
ಚಕ್ರವರ್ತಿಗದಾವನೈ ಸರಿಯೆಂದನಾ ವಿದುರ ೧೩೨
ನಳನೃಪತಿ ದಮಯಂತಿ ಸೀತಾ
ಲಲನೆ ರಾಘವದೇವ ದ್ರೌಪದಿ
ಕಲಿಯುಧಿಷ್ಠಿರ ದೇವನಿವರಿಂತಾರು ಮಾನಿಸರು
ಇಳೆಯೊಳುತ್ತಮ ಕೀರ್ತಿಗಳು ಜಾ
ವಳದ ಪುರುಷರೆ ಧರ್ಮಪುತ್ರನ
ಗೆಲುವ ಪರಿಯೆಂತೈ ಮಹಾದೇವೆಂದನಾ ವಿದುರ ೧೩೩
ಜನಪ ಕೇಳೈ ಸ್ಕಂದನನು ರಾ
ಮನನು ಹನುಮನ ಭೀಮಸೇನನ
ವಿನತೆಯಾತ್ಮಜನಿಂತಿದೈವರ ಭಾವ ಶುದ್ಧಿಯಲಿ
ನೆನೆದವರ ದುರಿತಂಗಳೋಡುವ
ವೆನಲು ನೀವೀ ಪವನಪುತ್ರನ
ನನುವರದೊಳೆಂತಕಟ ಜಯಿಸುವಿರೆಂದನಾ ವಿದುರ ೧೩೪
ಹರಿಹಯನು ಗುಹ ರಾಮ ಬಾಣಾ
ಸುರನು ದಶಶಿರ ಭೀಮಸೇನಾ
ದ್ಯರು ಕಣಾ ಗಿರಿಜಾಧಿನಾಥನ ಡಿಂಗರಿಗರಿವರು
ಸರಸವೇ ಮೃತ್ಯುಂಜಯನ ಕೂ
ಡರಸ ನಿನ್ನಳವರಿಯದೇ ಹರಿ
ಸುರರೊಡನೆ ಹಗೆಗೊಂಬನೇ ಧೃತರಾಷ್ಟ್ರ ಕೇಳೆಂದ ೧೩೫
ಬಲಿ ವಿಭೀಷಣ ಭೀಷ್ಮ ನಾರದ
ಫಲುಗುಣನು ಪ್ರಹ್ಲಾದ ದೇವನು
ಜಲರುಹಾಕ್ಷನ ನಚ್ಚುಮೆಚ್ಚಿನ ಡಿಂಗರಿಗರಿವರು
ಸುಲಭವೇ ನಿನಗವರ ಕೂಡಣ
ಕಲಹ ಭೀಭತ್ಸುವಿನ ಕೈಮನ
ದಳವನರಿಯಾ ಕಂಡು ಕಾಣದೆ ಮರುಳಹರೆಯೆಂದ ೧೩೬
ಎಲ್ಲಿ ಯೋಗಾಧಿಪತಿ ಮುರಹರ
ನೆಲ್ಲಿಯರ್ಜುನ ದೇವನಿಹನ
ಲ್ಲಲ್ಲಿ ಜಯಸಿರಿಯಲ್ಲದೇ ಬೇರಿಲ್ಲ ಕೇಳಿದನು
ಬಲ್ಲವರೆ ಬಲ್ಲರು ಕಣಾ ನೀ
ನಿಲ್ಲಿ ಪಾಂಡುಕುಮಾರರಿಗೆ ಸರಿ
ಯಿಲ್ಲ ಬಲ್ಲೈಹಿಂದೆ ಬಂದ ವಿಪತ್ಪರಂಪರೆಯ ೧೩೭
ಹಿಂದೆ ಗೋಗ್ರಹಣದಲಿ ದ್ರುಪದನ
ನಂದನೆಯ ವೈವಾಹದಲಿ ಬಳಿ
ಸಂದ ಗಂಧರ್ವಕನ ದೆಸೆಯಲಿ ಘೋಷಯಾತ್ರೆಯಲಿ
ಬಂದ ಭಂಗವ ಕಂಡುಕಂಡೇ
ನೆಂದು ಪಾಂಡುಕುಮಾರರೊಡನನು
ಸಂಧಿಸುವೆ ಕಲಹವನು ಚಿತ್ತೈಸೆಂದನಾ ವಿದುರ ೧೩೮
ಸಕಲ ನೀತಿ ರಹಸ್ಯವನು ಸು
ವ್ಯಕುತವೆನಲರುಹಿದೆನು ತತ್ತ್ವಕೆ
ಯುಕುತಿಯಾದರೆ ನೆನೆವುದಿನ್ನು ಸನತ್ಸುಜಾತನನು
ಮುಕುತಿಗಮಳ ಬ್ರಹ್ಮ ವಿದ್ಯಾ
ಪ್ರಕಟವನು ನೆರೆ ಮಾಡಿ ಚಿತ್ತದ
ವಿಕಳತೆಯನೊಡಮೆಟ್ಟಿ ಸಲಹುವನೆಂದು ಬೋಧಿಸಿದ ೧೩೯
ಸಂಕ್ಷಿಪ್ತ ಭಾವ
Lrphks Kolar
ವಿದುರನೀತಿ
ಧೃತರಾಷ್ಟ್ರನು ಚಿಂತಾಕುಲನಾಗಿ ನಿದ್ರೆಯಿಲ್ಲದೆ ತೊಳಲಿ ಕೊನೆಗೆ ವಿದುರನನ್ನು ಕರೆಸಿಕೊಂಡನು. ಇಡೀ ರಾತ್ರಿ ವಿದುರನು ಹೇಳಿದ ನೀತಿಮಾತುಗಳು ವಿದುರನೀತಿಯೆಂದೇ ಪ್ರಸಿದ್ಧವಾಗಿವೆ.
ರಾಜನಿಗೆ ವಿದುರನು ಲೋಕವ್ಯವಹಾರ, ರಾಜಕೀಯ, ಅಧ್ಯಾತ್ಮಿಕ, ಸಾಮಾಜಿಕ, ಧರ್ಮ, ಗೃಹವಾಳ್ತನ, ರಾಜನ ಹೊಣೆ, ಅರಮನೆಯ ನೌಕರರ ನೇಮಕ, ಸೈನ್ಯ, ಮಂತ್ರಿಗಣ, ರಾಜನು ವಹಿಸಬೇಕಾದ ಜವಾಬ್ದಾರಿಗಳು ಹೀಗೆ ಸಮಸ್ತ ವಿಷಯಗಳನ್ನು ಕುರಿತು ವಿವರಿಸುತ್ತಾ ಹೋದನು. ಇದು ಪ್ರತಿಯೊಬ್ಬರಿಗೂ ಅನ್ವಯಿಸುವಂತೆ ಮೂಡಿಬಂದಿದೆ.
ಮೊದಲು ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಮನ್ನಿಸುವುದಾತ್ಮವನು ಮಿಕ್ಕಿದ್ದು ನಂತರ. ತಾನೇ ಸರಿಯಾಗಿ ಇಲ್ಲದಿದ್ದರೆ ಬೇರೆಯವರಿಗೆ ಏನು ಹೇಳಲು ಸಾಧ್ಯ? ಪಾಪ ಪುಣ್ಯಗಳ ಅರಿವು ಅಗತ್ಯ. ಅವು ನಮ್ಮನ್ನು ನಿಯಂತ್ರಿಸುತ್ತವೆ.
ಈ ಭೂಮಿಯಲ್ಲಿ ರಾವಣ ಮತ್ತು ದುರ್ಯೋಧನ ಈ ಇಬ್ಬರು ಕಡು ಮೂರ್ಖರು. ಭೂಸುರರೊಂದಿಗೆ ದ್ವೇಷ ಬೇಡ.ಈ ಮಾನವಜನ್ಮ ದೊಡ್ಡದು. ಇದನ್ನು ಅರ್ಥ ಮಾಡಿಕೊಂಡು ನಡೆದರೆ ಒಳ್ಳೆಯದು. ಎಲ್ಲಿಯವರೆಗೆ ನಮಗೆ ಋಣಭಯವು ಇರುತ್ತದೆಯೋ ಅಲ್ಲಿಯವರೆಗೆ ಧರ್ಮ, ದೇವರ ಬಗ್ಗೆ ಭಕ್ತಿ ಇರುತ್ತದೆ. ಮಂತ್ರಾಲೋಚನೆ ಮಾಡುವಾಗ ಕೊನೆಯಲ್ಲಿ ತನ್ನ ಮನದಲ್ಲಿರುವ ಭಾವ ಪ್ರಕಟವಾಗಬೇಕು. ಸಿರಿಯೆನ್ನುವುದು ಅಗತ್ಯ. ಅದಿದ್ದರೇ ಮರ್ಯಾದೆ. ಅದನ್ನು ಸರಿಯಾಗಿ ನಿರ್ವಹಿಸಬೇಕು.
ಅಕಾಲಗಳಲ್ಲಿ ಭೋಜನ, ಶಯನ, ಭೋಗ ಮುಂತಾದವನ್ಬು ಮಾಡಬಾರದು. ಬಡತನದಲ್ಲಿ ಬಂಧುಗಳು ಕಾಣರು, ಸಿರಿಯಿದ್ದರೆ ಓಡಿ ಬರುವರು, ಪರಸ್ತ್ರೀಗಮನ ಸಲ್ಲದು. ತಂದೆತಾಯಿಗಳನ್ನು ಆದರಿಸಬೇಕು. ಅವರ ಆಜ್ಞೆಯನ್ನು ಪಾಲಿಸಬೇಕು. ರಾಜನಾದವನಿಗೆ ತನ್ನ ಮಂತ್ರಿ, ಸೇನಾಪತಿ, ಸೇವಕ, ಅಡಿಗೆಯವ, ಚಾಮರದವ, ಛತ್ರದವ ಮುಂತಾದವರ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ನೇಮಿಸಿಕೊಳ್ಳುವಾಗ ಜಾಗರೂಕತೆಯಿಂದ ವರ್ತಿಸಬೇಕು. ಅವರವರ ವೃತ್ತಿಧರ್ಮಗಳನ್ನು ಅರಿತು ಪಾಲಿಸುವವರೇ ನಿಜವಾದ ಪರಿವಾರ.
ಹಾಗೆಯೇ ರಾಜನಿಗೆ ತನ್ನ ಸೈನ್ಯದ ಸಂಪೂರ್ಣವಾದ ಮಾಹಿತಿ ಇರಬೇಕು. ರಥ, ಕುದುರೆ, ಆನೆ ಮುಂತಾದ ಸೈನ್ಯದ ಬಗ್ಗೆ ತಿಳಿದಿರಬೇಕು. ರಾಜನು ಏಳುವ ಸಮಯದಲ್ಲಿ ಶುಭವಸ್ತುಗಳಾದ ಕಳಶ, ಕನ್ನಡಿ ಸುವಾಸಿನಿ ಮುಂತಾದ ಮಂಗಳ ವಾತಾವರಣ ಅಗತ್ಯ. ಮತ್ತು ನಾಯಿ, ಕೋಳಿ ಮುಂತಾದ ಸಾಮಾನ್ಯ ಜೀವಿಗಳಿಂದಲೂ ಕಲಿಯುವುದು ಬಹಳಷ್ಟು ಇರುತ್ತದೆಂದು ಹೇಳಿದನು. ನಡುವೆ ನಡುವೆ ಪಾಂಡವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ ಚಿಂತಿಸಬೇಕೆಂದು ಸೂಕ್ಷ್ಮವಾಗಿ ಹೇಳುತ್ತಿದ್ದನು.
ಕೋಪವೆಂಬುದು ಅನರ್ಥಕ್ಕೆ ಮೂಲ. ಆದ್ದರಿಂದ ಕೋಪ ಸಲ್ಲದು. ಸಹನೆ ಅಗತ್ಯ. ವಿದ್ಯೆಗೆ ಯಾವುದೇ ಸಮಯದಲ್ಲಿಯೂ ಬೆಲೆ ಇರುತ್ತದೆ. ದುಸ್ಸಂಗವೆಂಬುದು ಬಹಳ ಕಷ್ಟ. ಯತಿಯೂ ಕೆಡಬಹುದು ಇದರಲ್ಲಿ. ಸತ್ಸಂಗ ಎಲ್ಲಕ್ಕೂ ಒಳ್ಳೆಯದು. ದೇವಾಲಯಗಳಲ್ಲಿ, ರಾಜನ ಅಸ್ಥಾನದಲ್ಲಿ, ಉದಯಾಸ್ತಕಾಲಗಳಲ್ಲಿ ಸದಾ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಪಾಂಡುತನಯರಿಗೆ ಚಕ್ರಿಯ ನೆರವಿದೆ. ಅದೊಂದಿದ್ದರೆ ಎಲ್ಲವನ್ನೂ ಗೆಲ್ಲಬಹುದು. ಇನ್ನೂ ಕಾಲ ಮಿಂಚಿಲ್ಲ. ಯೋಚಿಸು ಎಂದು ಬುದ್ಧಿ ಹೇಳಿದನು. ಈಗಾಗಲೇ ಅವರ ಪ್ರಭಾವ ಕಂಡಿರುವೆ. ಅವರನ್ನು ಗೆಲ್ಲುವೆವೆಂಬುದು ಸುಳ್ಳು.
ಹೀಗೆ ವಿದುರನು ಬಹಳ ವಿಸ್ತಾರವಾದ ನೀತಿ ಮಾತುಗಳನ್ನು ತನಗೆ ತೋರಿದಂತೆ ಹೇಳಿದನು. ಚಿತ್ತದ ವಿಕಲತೆಯನ್ನು ಮೆಟ್ಟಿ ನಿಲ್ಲು ಎಂದು ಬೋಧಿಸಿದನು.

ಕಾಮೆಂಟ್‌ಗಳು