ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಆರ್. ಕಮಲ


 ಎಂ. ಆರ್. ಕಮಲ

ಎಂ. ಆರ್. ಕಮಲ ಅವರು ಬರಹಗಾರ್ತಿ, ಶಿಕ್ಷಣ‍ ತಜ್ಞೆ, ಭರತ ನಾಟ್ಯ ಕಲಾವಿದೆ, ವೀಣಾ ವಾದಕಿ ಹೀಗೆ ಬಹುಮುಖಿ ಸಾಧಕಿ.

ಕಮಲ ಅವರ ಜನ್ಮದಿನ ಮಾರ್ಚ್ 27.  ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿ ಕುರ್ಕೆಗ್ರಾಮ ಅವರ ಊರು. ತಂದೆ ಕೃಷಿಕರೂ,‍ ಶಾನುಭೋಗರೂ ಆದ ಎಂ.ಎಚ್. ರಾಮಸ್ವಾಮಿ.  ತಾಯಿ ವಿಶಾಲಾಕ್ಷಿ.  ಕಮಲ ಅವರ ಪ್ರಾಥಮಿಕದಿಂದ ಪ್ರೌಢಶಾಲೆಯವರೆವಿಗಿನ ವಿದ್ಯಾಭ್ಯಾಸ ಮೇಟಿಕುರ್ಕೆಯಲ್ಲಿ ನಡೆಯಿತು. ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಿಂದ ಪದವಿ ಪಡೆದು,  ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಗಳಿಸಿದರು. ಇವರದ್ದು ಸ್ನಾತಕೋತ್ತರ ವ್ಯಾಸಂಗದಲ್ಲಿ ’ಪಾಶ್ಚಿಮಾತ್ಯ ಸಾಹಿತ್ಯ’ ಅಧ್ಯಯನಕ್ಕಾಗಿ ’ಬಿ.ಎಮ್.ಶ್ರೀ’ ಸ್ವರ್ಣಪದಕ ಗಳಿಸಿದ ಪ್ರತಿಭೆ. 

ರಾಜಾಜಿನಗರದ ಶಿವನ ಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಉದ್ಯೋಗ ಆರಂಭಿಸಿದ ಕಮಲ ಅವರು ಕನ್ನಡ ಪ್ರಾಧ್ಯಾಪಕಿಯಾಗಿ, ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದವರು. 

ಎಂ. ಆರ್. ಕಮಲ ಅವರು ಕನ್ನಡ ಸಾಹಿತ್ಯದಲ್ಲಿ ಆಯ್ದುಕೊಂಡ ಕ್ಷೇತ್ರವು ಬಹು ವಿಶಿಷ್ಟವಾದುದು. ಅವರು ಬೆಳಕು ಚೆಲ್ಲಿದ  ಕಪ್ಪು ಜನಾಂಗೀಯರ ಬದುಕಿನ ಕಥೆಗಳು, ಸಾಹಿತ್ಯ, ಸಮಾಜ ಶಾಸ್ತ್ರೀಯ, ಸಾಂಸ್ಕೃತಿಕ ದೃಷ್ಟಿಗಳಿಂದ ಮತ್ತು ಐತಿಹಾಸಿಕ ದೃಷ್ಟಿಯಿಂದ ಮಹತ್ವ ಪಡೆದಿವೆ. ಆಫ್ರಿಕನ್ ಮಹಿಳೆಯರು ಗುಲಾಮಗಿರಿಯಿಂದ ಬಿಡುಗಡೆಗಾಗಿ ನಡೆಸಿದ ಹೋರಾಟದ ಬದುಕು  ‘ಕಪ್ಪು ಹಕ್ಕಿಯ ಬೆಳಕಿನ ಹಾಡು’,  'ಉತ್ತರ ನಕ್ಷತ್ರ’,  ‘ನನ್ನ ಕಥೆ' ಎಂಬ ನನ್ನ ಕಥೆ ರೋಸಾ ಪಾರ್ಕ್ಸ್ ಆತ್ಮಕಥೆ ಹಾಗೂ
'ಸೆರೆ ಹಕ್ಕಿ ಹಾಡುವುದು ಏಕೆಂದು ನಾ ಬಲ್ಲೆ' 
ಎಂಬ ಮಾಯಾ ಏಜೆಂಲೋ ಆತ್ಮಕಥೆಗಳಲ್ಲಿ ಮೂಡಿಬಂದಿವೆ.  ಇವರ 'ಕತ್ತಲ ಹೂವಿನ ಹಾಡು' ಎಂಬ ನಿಗ್ರೋ ಹಾಗೂ ಆಫ್ರಿಕನ್ ಮಹಿಳೆಯರ ಒಂದುನೂರಾ ಎರಡು ಕವನಗಳ ಅನುವಾದ ಸಂಪಾದನೆ ಕೂಡಾ ಈ ನಿಟ್ಟಿನಲ್ಲಿ ಮಹತ್ವದ ಕೃತಿ ಎನಿಸಿದೆ. 

ಕಮಲ ಅವರ ಮೊದಲ ಕಾವ್ಯ ಕೃತಿ ಶಕುಂತಲೋಪಾಖ್ಯಾನ. ನಂತರದಲ್ಲಿ ಇವರ ಕವಿತೆಗಳು 'ಜಾಣೆ ಮತ್ತು ಇತರ ಕವಿತೆಗಳು', 'ಹೂವು ಚೆಲ್ಲಿದ ಹಾದಿ', 'ಮಾರಿಬಿಡಿ', 'ಗದ್ಯಗಂಧಿ', 'ಕ್ವಾರಂಟೈನ್' ಮುಂತಾದ ಸಂಕಲನಗಳಲ್ಲಿ ಮೂಡಿಬಂದಿವೆ.‍

'ಹೊನ್ನಾವರಿಕೆ',  'ಕಸೂತಿಯ ನೆನಪು' ಪ್ರಬಂಧಗಳು,  ‘ಕೊಳಲ ಮೇಲಿನ ಗಾಳಿ' ಎಂಬ ಪುತಿನ ಅವರ ಕವಿತೆಗಳ ಓದಿನ ಪರಿಣಾಮ ಪ್ರಬಂಧಗಳು, 'ಕಾಳನಾಮ ಚರಿತೆ' ಎಂಬ ಹಗುರ ಹರಟೆಯ ಹಂದರ, 'ಊರ ಬೀದಿಯ ಸುತ್ತು' ಎಂಬ ವರ್ತಮಾನದ ದಿನಚರಿಯ ಪುಟಗಳು, 'ನೆಲದಾಸೆಯ ನಕ್ಷತ್ರ' ಎಂಬ ವಿಸ್ಮೃತಿ ಸಮಯದ ಬರಹಗಳು ಮುಂತಾದವು ಕಮಲ ಅವರ ಇತರ ವೈವಿಧ್ಯ ಬರಹಗಳಲ್ಲಿ ಸೇರಿವೆ. 

ಕಮಲ ಅವರು ಹಲವಾರು ಉರ್ದು, ಬಂಗಾಲಿ ಕವಿತೆಗಳನ್ನು  ಕನ್ನಡಕ್ಕೆ ತಂದಿದ್ದಾರೆ. 'ನೆತ್ತರಲಿ ನೆಂದ ಚಂದ್ರ'  ಎಂಬುದು ಅರಬ್ ಲೋಕದ ಕವಿತೆಗಳ ಸಂಗ್ರಹ. ಇವರ ಕವಿತೆಗಳು ಇಂಗ್ಲಿಷ್, ಬಂಗಾಲಿ, ಮಲೆಯಾಳಂ, ಗುಜರಾತಿ, ಮರಾಠಿ ಮುಂತಾದ ಭಾಷೆಗಳಲ್ಲಿ ಮೂಡಿವೆ. ಕ್ಯಾಸೆಟ್ ಲೋಕದಲ್ಲಿ ಕಮಲ ಅವರ ಭಾವಗೀತೆಗಳ ‘ಭಾವವೀಣೆ’ಯ ಧ್ವನಿಸುರುಳಿಯು ಪ್ರಖ್ಯಾತಗೊಂಡಿದೆ. 

ಕಮಲ ಅವರಿಗೆ 'ಶಕುಂತಳೋಪಾಖ್ಯಾನ" ಕವನಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘ ನೀಡುವ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, 'ಜಾಣೆ ಮತ್ತು ಇತರ ಕವಿತೆಗಳು' ಕವನ ಸಂಕಲನಕ್ಕೆ ಮುದ್ದಣ ಪ್ರಶಸ್ತಿ, 'ಉತ್ತರ ನಕ್ಷತ್ರ' ಕೃತಿಗೆ ಕರ್ನಾಟಕ  ಸಾಹಿತ್ಯ ಅಕಾಡೆಮಿ ಪುರಸ್ಕಾರ, ಪಾಶ್ಚಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ.ಎಂ.ಶ್ರೀ ಸ್ವರ್ಣಪದಕ,  ಮಾಸ್ತಿ ಪ್ರಶಸ್ತಿ  ಮುಂತಾದ ಅನೇಕ ಗೌರವಗಳು ಸಂದಿವೆ.‍

ಆತ್ಮೀಯರೂ ಮಹಾನ್ ಸಾಧಕರೂ ಆದ ಎಂ. ಆರ್. ಕಮಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Metikurke Ramaswamy Kamala 🌷🙏🌷M. R. Kamala

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ