ಸೆಲೆ
ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು
ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ ಪ್ರೇಮವು ಹರಿಯಿತು
ಯಾವ ತಾಯಿಯೊ ಯಾವ ತಂದೆಯೊ ಯಾವ ದೇಶವೊ ನುಡಿಗಳೊ
ಎಂತೊ ಎಲ್ಲೋ ಕಾದಕಾವುಗಳಿತ್ತಲೆಮ್ಮನು ಬೆಸೆದವು
ದಿಕ್ಕುದಿಕ್ಕಿಗು ಹರಡಿ ಹಬ್ಬಿತು ಹಸುರು ಹುಚ್ಚನ್ನೆರಚಿತು
ಚಿಗುರು ಚಿಗುರಿಗೆ ಚೆಲುವ ತುಂಬಿಸಿ ಹೂವು ತೋರಣ ಕಟ್ಟಿತು
ಒಳಗು ಹೊರಗೂ ಬೆಳಗು ಸಂಜೆಯು ನಿನ್ನ ಮೊಗವೇ ತೇಲಿತು
ಎಂಟು ದಿಕ್ಕಿನ ಗಾಳಿಯಲ್ಲೂ ನಿನ್ನ ದನಿಯೇ ಕೇಳಿತು
ಇಂದು ಮಾಗಿಯು ಮುಗಿವ ಮುನ್ನವೆ ನಗುವ ಬೇಸಗೆ ಬಂದಿದೆ
ಕಾಮನಂಬಿನ ಕೆಳೆಯ ರಂಗುಗಳೆಲ್ಲವನ್ನೂ ತಂದಿದೆ
ಬಾಳ ದಾರಿಯ ಎರಡು ಕಡೆಯಲು ಕಣ್ಗೆ ಹಬ್ಬವು ಹರಡಿದೆ
ಮಾವು ಹೊಂಗೆಗಳಂತೆ ಮನವಿದು ಹೊಸತು ಚಿಗುರನು ಉಟ್ಟಿದೆ
ಸಾಹಿತ್ಯ: ವಿ. ಸೀತಾರಾಮಯ್ಯ
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳು 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ. ನಮಸ್ಕಾರ)

ಕಾಮೆಂಟ್‌ಗಳು