ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ75


ಕುಮಾರವ್ಯಾಸನ

ಕರ್ಣಾಟ ಭಾರತ ಕಥಾಮಂಜರಿ 

ಉದ್ಯೋಗ ಪರ್ವ  ಆರನೆಯ ಸಂಧಿ


ಸಮರದನುಸಂಧಾನದಲಿ ಸಂ

ಭ್ರಮಿಸಿ ಶೌರಿ ಸಮೀರಸುತನಲಿ

ಸಮತೆಯನು ಸೇರಿಸಿದನಂದು ಸಮಗ್ರ ಸೂಕ್ತಿಯಲಿ

ಯುದ್ಧದ ನಿರ್ಣಯವನ್ನು ಕೈಗೊಳ್ಳಲು ಸಂಭ್ರಮಿಸಿ ಶ್ರೀಕೃಷ್ಣನು ತನ್ನ ಮಾತುಗಳಿಂದಭೀಮನನ್ನುಸಮಾಧಾನ ಪಡಿಸಿದನು.


ಕೇಳು ಜನಮೇಜಯ ಧರಿತ್ರೀ

ಪಾಲ ಧರ್ಮಜನಹಿತ ಮಂತ್ರಿಯ

ಬೀಳುಕೊಟ್ಟನು ಬಂದನಸುರಾರಾತಿಯಿದ್ದೆಡೆಗೆ

ಮೇಲಣನುವಿನ್ನೇನು ಲಕ್ಷ್ಮೀ

ಲೋಲ ಕರುಣಿಸು ಕೌರವ ಕ್ಷಿತಿ

ಪಾಲಕರಲೆನಗೇನು ಘಟಿಸುವುದೆಂದ ಯಮಸೂನು 


ಕ್ಷಮೆಗೆ ಸೇರುವರಲ್ಲ ಮೂರ್ಖರು

ಕುಮತಿಗಳು ಮುಂದರಿಯದವರ

ಕ್ರಮವ ನೆಗಳಿದಡಳಿವುದನ್ವಯದಮಳ ಕೀರ್ತಿಗಳು

ನಮಗೆ ಹದನೇನಿನ್ನು ಸಂಧಿಯೊ

ಸಮರವೋ ಚಿತ್ತೈಸಬೇಹುದು

ಕಮಲಲೋಚನಯೆಂದು ಬಿನ್ನೈಸಿದನು ಯಮಸೂನು 


ಏನು ನಿನ್ನಭಿಮತವು ವರಸಂ

ಧಾನವೋ ಸಂಗ್ರಾಮವೋ ನಯ

ವೇನು ಮನದೋವರಿಯೊಳಿರಿಸದೆ ಹೇಳು ನಿಶ್ಚಯವ

ನೀನೊಲಿದ ಹದನಾವುದದನೊಲಿ

ದಾನು ಘಟಿಸುವೆನೆಂದು ಕುಂತೀ

ಸೂನುವನು ಬೆಸಗೊಂಡನಸುರವಿರೋಧಿ ನಸುನಗುತ 


ಅಳಿವುವೊಡಲುಗಳವನಿ ಸಾಗರ

ವುಳಿಯಲುಳಿವುದು ಕೀರ್ತಿ ಸೋದರ

ರೊಳಗೊಳಗೆ ಹೊಯ್ದಾಡಿ ಕೆಟ್ಟರುಯೆಂಬ ದುರಿಯಶದ

ಹಳಿವು ಹೊರುವುದು ದೇವ ಸುಡಲಾ

ನೆಲನನಾ ಕೌರವನ ಕೈಯಲಿ

ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ 


ವರ ಕುಶಸ್ಥಳವನು ವೃಕಸ್ಥಳ

ಪುರವನಾವಂತಿಯನು ಕೌರವ

ಧರಣಿಪಾಲನಲೀಸಿಕೊಡುವುದು ವಾರಣಾವತವ

ಶರಧಿ ಮೇರೆಯೊಳೈದನೆಯಪುರ

ವರವನೊಲಿದುದ ಕೊಡಲಿ ಮನಮ

ತ್ಸರವ ಮರೆದೋಲೈಸುವೆವು ಧೃತರಾಷ್ಟ್ರನಂಘ್ರಿಗಳ 


ನೀವು ಬಿಜಯಂಗೈದು ಸಂಧಿಯ

ನಾವ ಪರಿಯಲಿ ಘಟಿಸಿ ಕುರುಭೂ

ಪಾವಳಿಯೊಳೆಮ್ಮಿರವು ಸಂಭವಿಸುವವೊಲೆಸಗುವುದು

ಲಾವಕರ ನುಡಿಗಳಲಿ ಕೆಡುವುದು

ಕೋವಿದರ ಮತವವರ ಮೇಲೆಮ

ಗಾವ ಮನಮುನಿಸಿಲ್ಲ ಸಂಧಿಯ ಘಟಿಸಿ ಸಾಕೆಂದ 


ಎನೆ ಮುರಾಂತಕನಳುಕಿ ಯಮನಂ

ದನನ ನುಡಿ ಸಂಧಾನದಲಿ ಸಂ

ಜನಿಸಿತಾದೊಡೆ ಕಾಣೆನವನಿಯ ಹೊರಗೆ ಹರಿವುಗಳ

ಮನದೊಳನುಸಂಧಾನವಂತಕ

ತನುಜನಲಿ ತೊಳಸಾಯ್ತು ತೋಟಿಯ

ನೆನಹು ತಾನೇನೆನುತ ಚಿಂತಿಸುತಿರ್ದನಸುರಾರಿ 


ಎಲೆ ಕೃತಾಂತಜ ವೈರಿಭೂಮಿಪ

ಕುಲ ಕೃತಾಂತ ಸರಾಗನಹೆನಿ

ರ್ಮಲಿನ ಧರ್ಮದಲಾ ಸುಯೋಧನನಧಿಕ ಕಲ್ಮಷನು

ನೆಲವ ಕೊಡಲರಿಯನು ವೃಥಾಕ

ಕ್ಕುಲಿತೆಯಲ್ಲದೆ ಕಾಣೆನಿದರಲಿ

ಫಲವನೆನುತಸುರಾರಿ ನುಡಿದನು ಧರ್ಮತನಯಂಗೆ 


ಅರಸನಭಿಮತವಿಂದು ಸಂಧಿಗೆ

ಮರಳಿತೆಲೆ ಪವಮಾನಸುತ ನಿ

ನ್ನರಿತವಾವುದು ಮನವ ವಂಚಿಸಬೇಡ ಹೇಳೆನಲು

ಧರಣಿಪತಿ ತಪ್ಪುವನೆ ಕರ್ಕಶ

ಭರದ ಕದನದಲೇನು ಫಲ ಸೋ

ದರರ ವಧೆಗೊಡಬಡುವನಲ್ಲಸುರಾರಿ ಕೇಳೆಂದ 


ಹಗೆಯೊಳೆಮ್ಮವರೊಳಗೆ ಎದೆಗಿ

ಚ್ಚುಗಳ ಖುಲ್ಲ ಕುಠಾರರಪನಂ

ಬುಗೆಯ ಬಳಸಿದರದು ಪುರಾಕೃತ ಕರ್ಮದವಶೇಷ

ಬಗೆಯೆನವಮಾನವನು ಕೌರವ

ರಗಡು ಮಾಡಿದರೆಂಬ ಚಿತ್ತದ

ದುಗುಡವಿಂದೆಮಗಿಲ್ಲ ಸಂಧಿಯ ರಚಿಸಿ ಸಾಕೆಂದ ೧೦


ಎಲೆ ಮಹಾದೇವಾಯ್ತು ಹಾಲಾ

ಹಲ ಸುಧಾರಸ ಉಕ್ಕಿದುರಿಯ

ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು

ಕೊಳೂಗುಳಕೆ ಪವಮಾನನಂದನ

ನಳುಕಿದನು ಮಝಮಾಯೆ ಕುಂತೀ

ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ ೧೧


ಈತನಭಿಮತವಿದು ಜಗದ್ವಿ

ಖ್ಯಾತ ಸಾಹಸಿ ಪಾರ್ಥ ಹೇಳೈ

ನೂತನಾಳಾಪವನು ಕೇಳ್ವೆವು ಶ್ರುತಿರಸಾಯನವ

ಭೀತಿ ಬೇಡೆಂದೆನಲು ನಮಗಿ

ನ್ನೇತರಭಿಮತವೇನ ಹೇಳಿದೊ

ಡಾತುಕೊಳ್ವೆನು ಶಿರದೊಳೆಂದನು ಪಾರ್ಥ ಕೈಮುಗಿದು ೧೨


ನಕುಲ ನೀ ಹೇಳೇನು ಹದನಿ

ನ್ನುಕುತಿ ಸಾಮವೊ ಮೇಣು ಸಮರವೊ

ಸುಕರ ಮಂತ್ರವನರುಹು ನೀನೆಮಗಂಜಬೇಡೆನಲು

ಯುಕುತಿ ನಮಗಿನ್ನೇನುಭಯರಾ

ಜಕವ ಸಂತೈಸುವುದು ಬೇರೆ

ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯ ವಿನಯದೊಳು ೧೩


ಆವುದಭಿಮತವೇನು ಹದ ಸಹ

ದೇವ ನೀ ಹೇಳೆನಲು ಬಿನ್ನಹ

ದೇವ ಸೇರದು ಸಂಧಿ ಸಂಗರವೆಮಗೆ ಸೇರುವುದು

ಆವ ವಿಧದಲಿ ಸಮರವನೆ ಸಂ

ಭಾವಿಸುವುದೆನೆ ನಗುತ ವರರಾ

ಜೀವನಾಭನು ಕಳುಹಿದನು ದ್ರೌಪದಿಗೆ ಚರರುಗಳ ೧೪


ದೇವಿ ಚಿತ್ತೈಸುವುದು ವರವಸು

ದೇವನಂದನಟ್ಟಿದನು ಸಂ

ಭಾವಿಸುವುದರಿರಾಯರಲಿ ಸಂಧಾನ ಸಂರಂಭ

ನೀವು ಬಿಜಯಂಗೈದು ಚಿತ್ತದೊ

ಳಾವ ಹದನಾ ಹದನನಾ ರಾ

ಜೀವನಾಭಾದಿಗಳಿಗರುಹುವುದೆಂದರಾ ಚರರು ೧೫


ಏನು ಹದನೇನೆಲವೊ ವರ ಸಂ

ಧಾನವೇ ಕೌರವರೊಳದು ಸು

ಮ್ಮಾನವೇ ಪತಿಗಳಿಗೆ ಪಾಪಿಗಳಿರಿದರೋ ಸತಿಯ

ದಾನವಾಂತಕನೆಸಗುವನೆ

ತಪ್ಪೇನು ತಪ್ಪೇನೆನುತ ನಸು ಮಸು

ಳ್ದಾನನಾಂಬುಜವದನೆ ಬಂದಳು ಕೃಷ್ಣನೋಲಗಕೆ ೧೬


ಭ್ರೂಲತೆಯ ಸುರಚಾಪದುರುಕೇ

ಶಾಳಿಗಳ ಕಾರ್ಮುಗಿಲಪಾಂಗದ

ಸಾಲ ಕುಡಿಮಿಂಚುಗಳ ನೂಪುರರವದ ಮೊಳಗುಗಳ

 ಲತಾಂಗಿಯ ಗಮನವೇ ಮಳೆ

ಗಾಲದಂತಿರೆ ಧಾರ್ತರಾಷ್ಟ್ರ ಕು

ಲಾಳಿ ನಿಲುವುದೆ ಪವನಜನ ಸಂಪ್ರತಿಯ ಸೇರುವೆಗೆ ೧೭


ಕವಿದ ಚಿತ್ರಾವಳಿಯ ದಡ್ಡಿಯ

ವಿವಿಧ ಭಟರುಗ್ಗಡಣೆಯಲಿ ವರ

ಯುವತಿ ಬಂದಳು ಸಖಿಯರೊಯ್ಯಾರದಲಿ ನೃಪಸಭೆಗೆ

ನವ ಬಲಾಹಕದೊಳಗೆ ಮಿಂಚಿನ

ಗವಿ ಸಹಿತ ಮರಿಮೋಡವಾವಿ

ರ್ಭವಿಸಿತೆನೆ ದಂಡಿಗೆಯ ನಿಳಿದಳು ಹೊಕ್ಕಳೋಲಗವ ೧೮


ಎಲೆ ಸಮೀರಕುಮಾರ ಸಂಪ್ರತಿ

ಗೆಳಸಿದೈ ಕಲಿತನವ ನೀರೊಳು

ಕಲಕಿದೈ ಕೈವಾರವಾದುದೆ ಕೌರವೇಂದ್ರನಲಿ

ಕಲಿಸಿದೈ ಕೃಷ್ಣಂಗೆ ನೀತಿಯ

ಬಳಸಿದೈ ಬಹುಮತವ ನರಕದೊ

ಳಿಳಿಸಿದೈ ಶಶಿಕುಲವನೆಂದನಿಲಜನ ನೋಡಿದಳು ೧೯


ಬೇಡಲಟ್ಟುವನೇ ಮಹೀಪತಿ

ನಾಡೊಳೈದೂರುಗಳನವರಲಿ

ಮಾಡುವಾತನು ಕೃಷ್ಣನೇ ಸಂಧಾನವನು ನಿಮಗೆ

ಕೇಡಿಗರ ಕೌರವ ನೃಪಾಲರ

ಕೂಡಿಬದುಕುವ ಭೀಮಸೇನನೆ

ರೂಢಿಸಿತಲಾ ನಿಮ್ಮ ಸಿರಿ ಸೋದರರ ಸೇರುವೆಗೆ ೨೦


ಯತಿಗಳಾದಿರಿ ನೀವು ರೋಷ

ಚ್ಯುತರಲೇ ಬಳಿಕೇನು ಧರ್ಮ

ಜ್ಞತೆಯ ನೆಲೆಗಳನರಿದ ಮನವೆರಗುವುದೆ ಕಾಳಗಕೆ

ಕ್ಷಿತಿಯ ಪಾಲಿಸುವುದು ವಿರೋಧ

ವ್ಯತಿಕರವ ಬಿಸುಡುವುದು ಕುಂತೀ

ಸುತರು ಕೌರವನೊಡನೆ ಸುಖದೊಳು ರಾಜ್ಯವಾಳುವುದು ೨೧


ಭೀಮ ಬಲವದರಾತಿ ಸೇನಾ

ಭೀಮ ಕುರುಕುಲ ಕುಸುಮ ಮಾರ್ಗಣ

ಭೀಮ ಮರೆದೈ ಮಾನಿನಿಯ ಘನಮಾನಹಾನಿಗಳ

ರಾಮನಬಲೆಗೆ ಕುದಿದ ಬಲು ಸಂ

ಗ್ರಾಮವನು ನೀ ಕೇಳಿದರಿಯಾ

ಪ್ರೇಮದಲಿ ನೋಡೆನ್ನನೆಂದಳು ದ್ರೌಪದೀ ದೇವಿ ೨೨


ಧರೆಗೆ ಕಟ್ಟಭಿಮಾನ ಹೆಂಡಿರ

ಹರಿಬವಾ ಹರಿಬದಲಿ ಕೆಡಹುವು

ದರಿಯನವಗಡಿಸಿದರೆ ಸಾವರು ಪಂಥವುಳ್ಳವರು

ಸುರನರೋರಗರೊಳಗೆ ನಿಮ್ಮೈ

ವರಿಗೆ ಸರಿಯಿಲ್ಲಬಲೆಯೊಬ್ಬಳ

ಹರಿಬದಲಿ ಹಂಗಾದಿರೆಂಬಪದೆಸೆಯ ನೋನುವರೆ ೨೩


ಸೋಲ ಗೆಲ್ಲವದೇಕೆ ಕುರುವಂ

ಶಾಳಿಯೊಳು ಸೋದರರು ನೀವ್ ಪಾಂ

ಚಾಲರಾವೇ ಹೊರಗು ನಿಮ್ಮೊಳು ಸಲುಗೆ ನಮಗೇಕೆ

ಮೇಳವೇ ಸಿರಿಗಳಿಸಲರಿದು 

ನಾಳಿ ಹೆಂಡಿರಪೂರ್ವವೇ ಕ್ಷಿತಿ

ಪಾಲಕರು ನೀವಾಗಲೆಮಗದು ಪರಮ ಪರಿಣಾಮ ೨೪


ಮುಂದಲೆಯ ಹಿಡಿದೆಳೆದು ಸಭೆಯಲಿ

ತಂದು ಸೀರೆಯ ಸುಲಿದಡವದಿರ

ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದಿರೆ

ಅಂದು ನೀ ಹಿಂದಿಕ್ಕಿಕೊಂಡುದ

ನಿಂದು ಮರೆದೈ ಸಂಧಿಗೋಸುಗ

ಮುಂದುವರಿದೈ ಕೃಷ್ಣಯೆಂದಳು ದ್ರೌಪದೀ ದೇವಿ ೨೫


ತನಯರೈವರು ವೀರ ಸಹದೇ

ವನು ಘಟೋತ್ಕಚನೀ ಸುಭದ್ರಾ

ತನಯನೆಮ್ಮಯ ತಂದೆ ಮೂರಕ್ಷೋಹಿಣಿಯ ಸೇನೆ

ಇನಿಬರೇಕಾದುವರು ದುಶ್ಯಾ

ಸನನ ರಕುತವ ಕುಡಿದು ಕುರುಕುಲ

ವನವ ಸುಡುವರು ನಿಮ್ಮ ಹಂಗೇಕೆಂದಳಿಂದುಮುಖಿ ೨೬


ವರಸತಿಯ ಬಿಸುಸುಯ್ಲ ಗಾಳಿಗೊ

ಳುರಿ ಚಡಾಳಿಸಿ ರೋಷಮಯದು

ಬ್ಬರದೊಳೌಡೊತ್ತಿದನು ಹಿಡಿದನು ಖತಿಯ ನಹಿತರೊಳು

ತರುಣಿ ಸೈರಿಸು ಸೈರಿಸಿನ್ನೀ

ಸುರಿವ ಕಂಬನಿಗಳಿಗೆ ಶತ ಸಾ

ವಿರಮಡಿಯ ಕಂಬನಿಯ ಸುರಿಸುವೆ ಹಗೆಯ ಹೆಂಡಿರಲಿ ೨೭


ಉರಿಯೊಗುವ ಮೀಸೆಯನು ಬೆರಳೊಳು

ಮುರಿದು ನೆಗಹಿದ ವಾಮಕರದೊಳು

ತರುಣಿಯನು ಸಂತೈಸಿ ಕಿಡಿಕಿಡಿಯಾಗಿ ಖಾತಿಯೊಳು

ನರಕಮರ್ದನ ಕೇಳು ಕೌರವ

ನರಿಗಳಿದಿರೇ ಕೀಳುವೆನು ಕುಲ

ಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ ೨೮


ಯಮಸುತನ ಬಗೆಯೆಂತುಟೆಂದಾ

ಕ್ರಮಕೆ ಮೊಗದಿರುಹಿದೆನು ದಿಟವೀ

ಕಮಲವದನೆಯ ಹರಿಬವೆನ್ನದು ಪತಿಗಳನಿಬರೊಳು

ಎಮಗೆ ಸಂಪ್ರತಿಗಿಲ್ಲಮನ ಘನ

ಸಮರವೇ ಸರ್ವಾರ್ಥ ಕೋಪ

ಶ್ರಮಕೆ ರಿಪುರುಧಿರಾಂಬುಪಾನವೆ ವಿಪುಳ ಫಲವೆಂದ ೨೯


ಕೆಡಹಿರಿಪುವನು ಕರುಳದಂಡೆಯ

ಮುಡಿಸುವೆನು ಮಾನಿನಿಗೆ ರಕುತವ

ಕುಡ್ಯಲೆರೆವೆನು ಶಾಕಿನಿಯರಿಗೆ ತತ್ಸಹೋದರರ

ನಡೆದು ಸಂಧಿಯ ಮಾಡು ಮುರರಿಪು

ಕೊಡಿಸು ನಾಲ್ಕೂರುಗಳನಿವರಿಗೆ

ತಡೆಯದೆರಡೂರುಗಳ ಕೊಳ್ವೆನು ಕೌರವೇಂದ್ರನೊಳು ೩೦ 


ಸಂಕ್ಷಿಪ್ತ ಭಾವ


ಕೃಷ್ಣನು ಭೀಮಾದಿಗಳನ್ನು ಸಮರಕ್ಕೆ ಮನಸ್ಸು ಮಾಡುವಂತೆ ಮಾಡಿದ್ದು.


ಧರ್ಮಜನು ಕೃಷ್ಣನಿದ್ದಲ್ಲಿಗೆ ಬಂದು ಇನ್ನು ಮುಂದಿನ ಪಾಡೇನುಸಂಧಿಯೊಸಮರವೊಹೇಳಬೇಕು ಎಂದನುಮೊದಲು ನಿನ್ನ ಮನದಲ್ಲಿ ಇರುವುದೇನು ನಿಶ್ಚಯವಾಗಿ ಹೇಳು ಎಂದುಕೃಷ್ಣನು ಕೇಳಲು ಧರ್ಮಜನು  ಐದು ಊರುಗಳನ್ನು ಕೊಡಿಸು ಸಾಕು ಯುದ್ಧ ಬೇಡಕುಶಸ್ಥಳವೃಕಸ್ಥಳಆವಂತಿವಾರಣಾವತ ಮತ್ತು ಅವರಿಗೆ ಇಷ್ಟ ಬಂದ ಇನ್ನೊಂದು ಊರು ಸಾಕುಎಂದನು


ಭೂಭಾರವನ್ನು ಇಳಿಸುವ ಪರಿ ಹೇಗೆ ಎಂದು ಚಿಂತಿಸುತ್ತಿದ್ದ ಕೃಷ್ಣನಿಗೆ ಧರ್ಮಜನ ಮಾತು ಕೇಳಿ ಕೆಲಸವಾಗುವುದಾದರೂ ಎಂತು ಅನಿಸಿತು.


ಅರಸನ ಅಭಿಮತ ಸಂಧಿಯ ಕಡೆಗಿದೆ ನಿನ್ನದೇನು ಎಂದು ಭೀಮನನ್ನು ಕೇಳಲು ಸೋದರನಅಭಿಮತವನ್ನು ಪಾಲಿಸುವವರು ನಾವು ಎಂದನುಅರ್ಜುನನು ನೀನು ಹೇಳಿದಂತೆ ಎಂದನುನಕುಲನೂ ಅಣ್ಣನ ಮಾತನ್ನು ಮೀರಲಾರೆ ಎಂದನುಆದರೆ ಸಹದೇವನು ಇದಕ್ಕೆ  ಒಪ್ಪಲಿಲ್ಲಸಂಧಿಯು ಸಾಧ್ಯವಿಲ್ಲ ಸಮರವೇ ಇರಲಿ ಎಂದನು.


ದ್ರೌಪದಿಗೆ ಬರಲು ಕರೆ ಕಳಿಸಿದನು ಕೃಷ್ಣಇಲ್ಲಿ ದ್ರೌಪದಿಯ ಆಗಮನವನ್ನು ಮಳೆಗಾಲಕ್ಕೆ ಹೋಲಿಕೆಮಾಡಿದ್ದಾನೆ ಕುಮಾರವ್ಯಾಸದ್ರೌಪದಿಯ ಹುಬ್ಬುಗಳು ಕಾಮನಬಿಲ್ಲಿನಂತೆಆಕೆಯ ಕೇಶವುಕರಿಮೋಡಗಳ ಸಾಲಿನಂತೆಕುಡಿನೋಟವು ಮಿಂಚಿನಂತೆಕಾಲುಗೆಜ್ಜೆಗಳ ಸದ್ದು ಗುಡುಗಿನಂತೆಅವಳ ಆಗಮನವೇ ಮಳೆಗಾಲ ಬಂದಂತೆ ಮಳೆಗಾಲದ ಜೊತೆ ವಾಯುಪುತ್ರನು ಸೇರಿದರೆಧೃತರಾಷ್ಟ್ರನ ವಂಶಕ್ಕೆ ಉಳಿವುಂಟೆ!


ದ್ರೌಪದಿಯ ಅಭಿಮತ ಕೇಳಲು ಅವಳು ಕೋಪದಿಂದ ಧರ್ಮಜಾದಿಗಳನ್ನು ಮೂದಲಿಸಿದಳುಇಷ್ಟು ವರ್ಷಗಳ ಕಷ್ಟಅನುಭವಿಸಿದ ಅಪಮಾನಮಾಡಿದ ಶಪಥ ಎಲ್ಲವನ್ನೂ ಮರೆತಿರಾಎಂದು ಕನಲಿದಳುಹೆಣ್ಣಾದ ನಾನು ಅನುಭವಿಸಿದ ಅಪಮಾನದ ಬಗ್ಗೆಯೂ ನಿಮಗೆ ಕನಿಕರಬಾರದಾಯಿತಲ್ಲ ಎಂದು ಹಲುಬಿದಳು. "ಓಹೋ ವಾಯುನಂದನಪರಾಕ್ರಮಿಯಾದ ನೀನುಕಲಿತ ವಿದ್ಯೆಯನ್ನು ನೀರಲ್ಲದಿದೆಯಾಸಂಧಾನಕ್ಕೆ ಸಿದ್ಧನಾದೆಯಾಕೌರವರು ಪ್ರಶಂಸರಾದರೆಶ್ರೀಕೃಷ್ಣನಿಗೆ ನೀತಿಯನ್ನು ಬೋಧಿಸಲು ಹೊರಟೆಯಾಬಹುಮತಕ್ಕೆ ತಲೆತಗ್ಗಿಸಿ ಚಂದ್ರವಂಶವನ್ನುನರಕಕ್ಕೆ ಇಳಿಸಿದೆಯಾಎನ್ನುತ್ತಾ ಭೀಮನತ್ತ ನೋಡಿದಳು.


ಹೆಂಡತಿಯ ಮಾನ ಕಾಪಾಡುವುದು  ಭೂಮಿಯಲ್ಲಿ ಅತ್ಯಂತ ಹೆಚ್ಚಿನ ಕರ್ತವ್ಯಹೆಂಡತಿಯಮಾನವನ್ನು ರಕ್ಷಿಸಲು ಶತ್ರುವನ್ನು ಸಂಹರಿಸಬೇಕು ಇಲ್ಲವೆ ತಾನು ಸಾಯಬೇಕು ಇದುಛಲವುಳ್ಳವರ ಲಕ್ಷಣಐವರು ಗಂಡಂದಿರು ಒಬ್ಬ ಹೆಂಡತಿಯನ್ನು ರಕ್ಷಿಸಲಾರದೆ ಅವಳಹಂಗಿಗೊಳಗಾದರು ಎಂಬ ಅಪಕೀರ್ತಿಯನ್ನು ಬಯಸಿ ಪಡೆದ ನಿಮ್ಮಂಥವರಿಗೆ ಸರಿಯಾದಮನುಷ್ಯರು ಮೂರುಲೋಕದಲ್ಲೂ ಇಲ್ಲ ಎಂದು ತನ್ನ ಗಂಡಂದಿರನ್ನು ಜರಿದಳು.


ಅಂದು ರಾಜಸಭೆಯಲ್ಲಿ ನನ್ನ ತಲೆಯ ಜುಟ್ಟನ್ನು ಹಿಡಿದು ಎಳೆತಂದು ಉಟ್ಟ ಸೀರೆಯನ್ನು ಸೆಳೆವಾಗತಲೆತಗ್ಗಿಸಿ ಸುಮ್ಮನಿದ್ದರು  ಮಹಾರಾಯರುಗಳುಅವರೇನಾದರು ಅಂದು ಮಾತನಾಡಿದರೇ ಘೋರ ಪ್ರಸಂಗದಲ್ಲಿ ನೀನು ನನ್ನನ್ನು ಸಂರಕ್ಷಿಸಿದವನು ಅದನ್ನು ಇಂದು ನೀನು ಮರೆತುಸಂಧಿಗೆ ಮುಂದುವರಿದಿರುವೆಯಾ ಎಂದು ದ್ರೌಪದಿಯು ಶ್ರೀಕೃಷ್ಣನತ್ತ ನೋಡಿದಳು.


ತನ್ನ ಐವರು ಮಕ್ಕಳುಅಭಿಮನ್ಯುಘಟೋತ್ಕಚಸಹದೇವ ಮತ್ತು ತನ್ನ ತವರಿನವರು ಇಷ್ಟುಸಾಕುಯುದ್ಧವಾಗುತ್ತದೆನಿಮ್ಮ ಹಂಗೇಕೆ ಎಂದು ದ್ರೌಪದಿಯು ಗಂಡಂದಿರನ್ನು ಹಂಗಿಸಿದಳು.


ದ್ರೌಪದಿಯ ಹಂಗಿನ ದುಃಖದ ಮಾತುಗಳು ಭೀಮನ ಕೋಪದ ಕಿಚ್ಚಿಗೆ ಬೆಂಕಿಯನ್ನು ಹಚ್ಚಿಸಿತುಅವನ ಕೋಪಾಗ್ನಿಯು ಧಗ್ಗೆಂದು ಹೊತ್ತಿತುರೋಷದ ಆವೇಶದಿಂದ ತುಟಿಯನ್ನು ಕಚ್ಚಿ ಶತ್ರುಗಳಮೇಲೆ ಕೋಪವನ್ನು ತಾಳಿದನುದ್ರೌಪದಿ ಸೈರಿಸುಸೈರಿಸುನೀನೀಗ ಸುರಿಸುತ್ತಿರುವ ಕಂಬನಿಗಳನೂರು ಸಾವಿರದಷ್ಟು ಕಣ್ಣೀರನ್ನು ಶತ್ರುಗಳ ಪತ್ನಿಯರು ಸುರಿಸುವಂತೆ ಮಾಡುವೆ ಎಂದು ಭೀಮನುಗರ್ಜಿಸಿದನುಭೀಮನು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, "ಹೇ ಕೃಷ್ಣ ಅಣ್ಣನ ಮಾತಿಗೆ ಮನ್ನಣೆನೀಡುವುದಕ್ಕೋಸ್ಕರ ಸಂಧಿಗೆ ಒಲ್ಲದೆಯೆ ಒಪ್ಪಿದೆನುಇಷ್ಟು ಜನ ಗಂಡಂದಿರಲ್ಲಿ ದ್ರೌಪದಿಯಕೆಲಸವನ್ನು ಈಡೇರಿಸುವ ಭಾರ ನನ್ನದುನನಗೆ ಸಂಧಿಮಾಡಿಕೊಳ್ಳುವ ಇಷ್ಟವಿಲ್ಲನನ್ನ ಕೋಪದತಾಪಕ್ಕೆ ಶತ್ರುಗಳ ರಕ್ತಪಾನವೇ ಉಪಶಮನಎಂದನು. "ದುಶ್ಯಾಸನನನ್ನು ನೆಲಕ್ಕೆ ಕೆಡಹುವೆನುಅವನ ಕರುಳನ್ನು ಬಗೆದು ದ್ರೌಪದಿಗೆ ಹಾರವಾಗಿ ಮುಡಿಸುತ್ತೇನೆಅವನ ಸಹೋದರನ ರಕ್ತವನ್ನುಶಾಕಿನಿಯರಿಗೆ ಕುಡಿಯಲೆರೆಯುತ್ತೇನೆಹೇ ಕೃಷ್ಣನೀನು ಹೋಗೆ ಸಂಧಿಯನ್ನು ಮಾಡಿಕೊಂಡುಇವರಿಗೆ ನಾಲ್ಕು ಊರುಗಳನ್ನು ಕೊಡಿಸುನಾನು ದುರ್ಯೋಧನನ ಎರಡು ತೊಡೆಗಳನ್ನುಪಡೆದುಕೊಳ್ಳುತ್ತೇನೆಎಂದು ಗರ್ಜಿಸಿದನು.


ಕೃಷ್ಣನಿಗೆ ಒಳಗೇ ಸಂತಸವಾಯಿತು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ