ಹುಲ್ಷ್
ಜೂಲಿಯಸ್ ಥಿಯೊಡರ್ ಹುಲ್ಷ್
ಜೂಲಿಯಸ್ ಥಿಯೊಡರ್ ಹುಲ್ಷ್ ಪ್ರಸಿದ್ಧ ಶಾಸನತಜ್ಞರು, ಭಾಷಾ ವಿದ್ವಾಂಸರು, ದಕ್ಷ ಆಡಳಿತಗಾರರು. ಇವರು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಅನೇಕ ಮಹತ್ವದ ಶಾಸನಗಳ ಬಗ್ಗೆ ಬೆಳಕು ಚೆಲ್ಲಿದವರು. ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿಗಳಂತಹ ವಿದ್ವಾಂಸರು ಹುಲ್ಷ್ ಅವರೊಂದಿಗೆ ಕೆಲಸ ಮಾಡಿದ್ದರು.
ಹುಲ್ಷ್ ಜರ್ಮನಿ ದೇಶದ ಡ್ರೆಸ್ಡನ್ ಎಂಬಲ್ಲಿ 1857 ಮಾರ್ಚ್ 29ರಂದು ಜನಿಸಿದರು.
ಲೆಪ್‍ಜಿಗ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿ, ಬಾನ್ ನಗರದಲ್ಲಿ ಪ್ರಾಚೀನ ಸಾಹಿತ್ಯಗಳನ್ನು ಮತ್ತು ಪೌರಸ್ತ್ಯ ಭಾಷೆಗಳನ್ನು ವಿಶೇಷವಾಗಿ ಅಧ್ಯಯನ ಮಾಡಿ ಪರಿಣತಿ ಹೊಂದಿದರು. ಆನ್‍ಫ್ರೆಚ್ ಮತ್ತು ಬ್ಯೂಲರ್ ಮೊದಲಾದ ಪ್ರಸಿದ್ಧ ಜರ್ಮನ್ ವಿದ್ವಾಂಸರ ಮಾರ್ಗದರ್ಶನದಿಂದ ಅಭಿಜಾತ ಹಾಗೂ ಪ್ರಾಚ್ಯತತ್ತ್ವಶಾಸ್ತ್ರ ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿ ಪದವಿ ಪಡೆದರು. ವಿಯೆನ್ನ ನಗರದಲ್ಲಿ ಬ್ಯೂಲರ್ ಹಾಗೂ ಆನ್‍ಫ್ರೆಚ್‍ರ ಪ್ರಭಾವಕ್ಕೊಳಗಾದರಲ್ಲದೆ ತಾನೂ ಅವರಂತೆ ಸಂಶೋಧನ ಕಾರ್ಯ ಕೈಗೊಳ್ಳಬೇಕೆಂದು ಕಾರ್ಯ ಪ್ರವೃತ್ತರಾದರು.
ಬ್ರಿಟಿಷ್ ಭಾರತದ ಮದರಾಸು ಪ್ರಾಂತದಲ್ಲಿ 1881ರಲ್ಲಿ ಹೊಸದಾಗಿ ಸಂಘಟಿತವಾಗಿದ್ದ ದಕ್ಷಿಣ ಭಾರತದ ಪುರಾತತ್ವ ಸರ್ವೇಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಜೇಮ್ಸ್ ಬರ್ಜೆಸ್ ಎಂಬುವರು ಮದರಾಸು ವಿಭಾಗಕ್ಕೆ ಸಂಸ್ಕೃತ, ಪಾಲಿ ಹಾಗೂ ದ್ರಾವಿಡ ಭಾಷೆಗಳಲ್ಲಿ ಪಾಂಡಿತ್ಯವುಳ್ಳ ಶಾಸನತಜ್ಞರನ್ನು ನೇಮಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಇದರ ಫಲವಾಗಿ 1886 ನವೆಂಬರ್ 21ರಂದು ಹುಲ್ಷ್ ಈ ವಿಭಾಗಕ್ಕೆ ಪ್ರಪ್ರಥಮ ಶಾಸನತಜ್ಞರಾಗಿ ನೇಮಕಗೊಂಡರು. ಇಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ತರುವಾಯ ಇವರು ದಕ್ಷಿಣ ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಶಾಸನತಜ್ಞ ಹುದ್ದೆಗೆ ಪದೋನ್ನತಿಯನ್ನು ಪಡೆದು ಮೂರು ವರ್ಷಗಳ ಕಾಲ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರು. ಆಮೇಲೆ ಜರ್ಮನಿಯ ಹಾಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.
ಹುಲ್ಷ್ ಪುರಾತತ್ತ್ವ ಸರ್ವೇಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅನೇಕ ಮಹತ್ತ್ವದ ಶಾಸನಗಳನ್ನು ಬೆಳಕಿಗೆ ತಂದು, ಅವುಗಳನ್ನು ವ್ಯವಸ್ಥಿತವಾಗಿ ಅನುವಾದ, ಪಾಠ, ಸಾರಾಂಶ, ಟಿಪ್ಪಣಿ ಇತ್ಯಾದಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ಹೀಗೆ ದೇಶದ ವಿವಿಧ ಭಾಗಗಳಲ್ಲಿ ಅನೇಕ ವಿದ್ವಾಂಸರು ಹೊಸದಾಗಿ ಬೆಳಕಿಗೆ ತರುತ್ತಿದ್ದ ಶಾಸನಗಳನ್ನು ಒಂದೆಡೆ ಕಲೆಹಾಕಿ ಪ್ರಕಟಿಸಿದರೆ ಇತಿಹಾಸ ತಜ್ಞರಿಗೆ, ಸಂಶೋಧಕರಿಗೆ, ಶಾಸನಾಧ್ಯಯನಾಸ್ತಕರಿಗೆ ಉಪಯುಕ್ತವಾಗುತ್ತದೆ ಎಂಬ ದೃಷ್ಟಿಯಿಂದ ಎಪಿಗ್ರಾಫಿಯ ಇಂಡಿಕ(1886) ಎಂಬ ತ್ರೈಮಾಸಿಕವನ್ನೂ ಸೌತ್ ಇಂಡಿಯನ್ ಇನ್ಸ್ಕ್ರಿಪ್‍ಶನ್ಸ್ ಎಂಬ ಶಾಸನ ಸಂಪುಟಗಳನ್ನೂ ಪ್ರಕಟಿಸಲಾಯಿತು.
ಹುಲ್ಷ್ ಎಪಿಗ್ರಾಫಿಯ ಇಂಡಿಕ ಸಂಪುಟ-1ರ ಉಪಸಂಪಾದಕರಾಗಿ, ತರುವಾಯ 2-9ನೆಯ ಸಂಪುಟದವರೆಗೂ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಇದರಂತೆ ಸೌತ್ ಇಂಡಿಯನ್ ಇನ್ಸ್‍ಕ್ರಿಪ್‍ಶನ್ಸ್ ಸಂಪುಟ 1 ಮತ್ತು 2 (ಭಾಗ- 1) ಹಾಗೂ 3-ಇವುಗಳ ಸಂಪಾದಕ ಹಾಗೂ ಅನುವಾದಕರಾಗಿಯೂ ಕಾರ್ಯ ನಿರ್ವಹಿಸಿದರು.
ಹುಲ್ಷ್ ಮದರಾಸು ಪ್ರಾಂತದ ಪರಿಸರದಲ್ಲಿ ಅನೇಕ ಮಹತ್ವದ ಶಾಸನಗಳನ್ನು ಬೆಳಕಿಗೆ ತಂದರು. ಇವುಗಳನ್ನೆಲ್ಲ ಎಪಿಗ್ರಾಫಿಯ ಇಂಡಿಕ ಸಂಪುಟಗಳಲ್ಲಿ ಪ್ರಕಟಿಸಿದರು. ಸಂಪುಟ-1ರಲ್ಲಿ ಎಂಟು, ಸಂಪುಟ-3ರಲ್ಲಿ ಹದಿಮೂರು, ಸಂಪುಟ-4ರಲ್ಲಿ ಹದಿನೈದು, ಸಂಪುಟ-5ರಲ್ಲಿ ಐದು, ಸಂಪುಟ-6ರಲ್ಲಿ ಹನ್ನೊಂದು, ಸಂಪುಟ-7ರಲ್ಲಿ ಹತ್ತು, ಸಂಪುಟ-8ರಲ್ಲಿ ಹತ್ತು, ಸಂಪುಟ-9ರಲ್ಲಿ ಏಳು, ಸಂಪುಟ-10ರಲ್ಲಿ ನಾಲ್ಕು, ಸಂಪುಟ-11ರಲ್ಲಿ ಐದು, ಸಂಪುಟ-12ರಲ್ಲಿ ಆರು, ಸಂಪುಟ-17ರಲ್ಲಿ ಆರು, ಸಂಪುಟ-18ರಲ್ಲಿ ಒಂಬತ್ತು ಶಾಸನಗಳನ್ನು ಪ್ರಕಟಿಸಿದರು. ಇವುಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹನ್ನೊಂದು ಶಾಸನಗಳಿವೆ. ಈ ಸಂಪುಟಗಳ ಪ್ರಕಟಣೆಗಳಲ್ಲಿ ಇವರ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳ ಪಾಂಡಿತ್ಯ, ದ್ರಾವಿಡ ಭಾಷೆಗಳ ಬಗ್ಗೆ ವಿಶೇಷವಾಗಿ ತಮಿಳಿನ ಬಗ್ಗೆ ಇವರಿಗಿದ್ದ ಪಾಂಡಿತ್ಯ ವ್ಯಕ್ತವಾಗುತ್ತದೆ.
ಕನ್ನಡ ವಿದ್ವಾಂಸರಾದ ಟಿ.ಎಸ್.ವೆಂಕಣ್ಣಯ್ಯ ಎ.ಆರ್,ಕೃಷ್ಣಶಾಸ್ತ್ರೀ ಹುಲ್ಷ್ ಅವರ ಸಹಾಯಕರಾಗಿದ್ದರು. ರಾಷ್ಟ್ರಕೂಟ, ವಲ್ಲಭಿ, ಚಾಳುಕ್ಯ, ಚೋಳ, ಪಾಂಡ್ಯ, ಚೇರ ಮೊದಲಾದ ರಾಜಸಂತತಿಗಳಿಗೆ ಸಂಬಂಧಿಸಿದ ಶಾಸನಗಳ ಬಗ್ಗೆಯೂ ಹುಲ್ಷ್ ಬೆಳಕು ಚೆಲ್ಲಿದರು.
ಹುಲ್ಷ್ ಮದರಾಸು ಪ್ರಾಂತದ (ತಮಿಳುನಾಡು) ತಮಿಳು ಮತ್ತು ಸಂಸ್ಕೃತ ಶಾಸನಗಳನ್ನೂ ಸಂಗ್ರಹಿಸಿ ಪ್ರಕಟಿಸಿದ್ದಾರೆ.
ಸರ್ಕಾರಿ ಶಾಸನತಜ್ಞ ಹುದ್ದೆಯಿಂದ ನಿವೃತ್ತರಾದ ತರುವಾಯ ಹುಲ್ಷ್ ಸಂಪಾದಿಸಿ ಪ್ರಕಟಿಸಿದ (1925) ಕಾರ್ಪಸ್ ಇನ್ಸ್ಕ್ರಿಷ್ಯನಮ್ ಇಂಡಿಕೇರಮ್ ಸಂಪುಟ-1 ಇದು ಮೌರ್ಯ ಸಾಮ್ರಾಟ ಅಶೋಕನ ಶಾಸನಗಳ ಅಧ್ಯಯನಕ್ಕೆ ಬಹು ಉಪಯುಕ್ತವಾಗಿದೆ. ಪ್ರಾಕೃತ, ಸಂಸ್ಕೃತ, ತಮಿಳು, ಕನ್ನಡ ಭಾಷೆಗಳಲ್ಲಿ ಉತ್ತಮ ಪಾಂಡಿತ್ಯವನ್ನು ಪಡೆದಿದ್ದ ಹುಲ್ಷ್ ಬೋಧಾಯನನ ಧರ್ಮಶಾಸ್ತ್ರ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದರು(1884). ಇದೇ ರೀತಿ ಕಾಳಿದಾಸನ ಮೇಘದೂತ ಕಾವ್ಯವನ್ನೂ ವಲ್ಲಭದೇವನ ಭಾಷ್ಯದೊಡನೆ ಸಂಪಾದಿಸಿದ್ದರು. ಪಾರಿಜಾತ ಮಂಜರಿ, ತರ್ಕಸಂಗ್ರಹ, ತರ್ಕಕೌಮುದಿ, ಪ್ರಾಕೃತ ರೂಪಾವತಾರ ಮುಂತಾದ ಅನೇಕ ವಿದ್ವತ್ ಪೂರ್ಣಲೇಖನಗಳನ್ನು ಪ್ರಕಟಿಸಿದ್ದರು.
ಹುಲ್ಷ್ ಜರ್ಮನಿಯ ಹಲ್ಲೆ(ಸಾಳೆ) ಎಂಬಲ್ಲಿ 1927 ಜನವರಿ 16ರಂದು ನಿಧನರಾದರು.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
On the birth anniversary of Eugen Julius Theodor Hultzsch who gave light on many historic wealth in India
ಕಾಮೆಂಟ್‌ಗಳು