ಕೇಶವ ಹೆಗಡೆ ಕೊಳಗಿ
ಕೇಶವ ಹೆಗಡೆ ಕೊಳಗಿ
ಶುದ್ಧ ಸಾಂಪ್ರದಾಯಿಕ ಮಟ್ಟಿನಲ್ಲಿ ಶುದ್ಧ ಭಾವದಲ್ಲಿ, ಪದ್ಯದ ಶಬ್ಧ, ಬಂಧಕ್ಕೆ ಚ್ಯುತಿ ಬಾರದಂತೆ ಪದ್ಯ ಹೇಳುವ ಭಾಗವತರಲ್ಲಿ ಒಬ್ಬರೆಂದು ಹೆಸರಾದವರು ಕೇಶವ ಹೆಗಡೆ ಕೊಳಗಿ ಅವರು. ಅಡಿಕೆ ಬೇಸಾಯದ ಜೊತೆ ಯಕ್ಷ ಕೃಷಿ ಮಾಡುತ್ತಾ ಸಾಗಿರುವ ಒಬ್ಬ ವಿಶಿಷ್ಟ ಕಲಾವಿದರು.
ಸರಳತೆ, ಮೃದುಭಾವದವರಾದ ಕೇಶವ ಹೆಗಡೆ ಅವರು ಶ್ರುತಿ ಪೆಟ್ಟಿಗೆ, ತಾಳಗಳ ಜೊತೆ ವೇದಿಕೆಗೆ ಬಂದರೆ ಪ್ರೇಕ್ಷಕರಿಂದ ಕರತಾಡನ. ಭೀಷ್ಮ ಪರ್ವದ ಶ್ರೀಮನೋಹರ ಸ್ವಾಮಿ ಫರಾಕು, ಶ್ರೀಕೃಷ್ಣ ಸಂಧಾನದ ಅನೇಕ ಪದ್ಯಗಳು, ಜಾಂಬವತಿ ಕಲ್ಯಾಣದ ರಾಮ ರಾಘವ, ರಾಮ ನಿರ್ಯಾಣದ ಲಲನೆ ಜಾನಕಿ ಮೊದಲೆ ಪೋದಳು, ಲವಕುಶ, ಬ್ರಹ್ಮ ಕಪಾಲ, ರತ್ನಾವತಿ ಕಲ್ಯಾಣ, ಕಾರ್ತ್ಯವೀರಾರ್ಜುನ, ಚಂದ್ರಹಾಸ ಚರಿತ್ರೆ, ರಾಮಾಂಜನೇಯ ಸೇರಿದಂತೆ ಆನೇಕ ಪದ್ಯಗಳಿವೆ ಇವರು ಜನಪ್ರಿಯರು.
ಉತ್ತರ ಕನ್ನಡದ ಸಿದ್ದಾಪುರ ಪೇಟೆ ಸಮೀಪದ ಕೊಳಗಿ ಎಂಬ ಪುಟ್ಟ ಗ್ರಾಮದವರಾದ ಕೇಶವ ಹೆಗಡೆ ಅವರು 1964ರ ಮಾರ್ಚ್ 29ರಂದು ಅನಂತ ಹೆಗಡೆ ಹಾಗೂ ಅರುಂಧತಿ ಹೆಗಡೆ ಅವರ ಪುತ್ರರಾಗಿ ಜನಿಸಿದರು. ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರಾ. ಆದರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸಣ್ಣದಲ್ಲ. ತಂದೆ ಅವರೂ ಇಡಗುಂಜಿ ಯಕ್ಷಗಾನ ಮೇಳದಲ್ಲಿ ವೇಷಧಾರಿಯಾಗಿದ್ದರ ಪ್ರೇರಣೆ ಇವರಿಗಿತ್ತು. ಎಸ್ಸೆಸ್ಸೆಲ್ಸಿ ನಂತರದಲ್ಲಿ ಓದಿಗೆ ಗೋಲಿ ಹೊಡೆದು ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಮೂರು ವರ್ಷ ಅಧ್ಯಯನ ಮಾಡಿದರು. ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಗುರುಗಳು ಎಂದೇ ಹೆಸರಾಗಿದ್ದ ನಾರ್ಣಪ್ಪ ಉಪ್ಪೂರು ಹಾಗೂ ಕೆ.ಪಿ.ಹೆಗಡೆ ಅವರಲ್ಲಿ ಭಾಗವತಿಕೆ ಕಲಿತರು. ಮುಂದೆ ಕಮಲಶಿಲೆ, ಮುಲ್ಕಿ, ಪಂಚಲಿಂಗ, ಶಿರಸಿ, ಬಚ್ಚಗಾರ, ಸಾಲಿಗ್ರಾಮ, ಕೊಂಡದಕುಳಿ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಮೇಳದಲ್ಲಿ ತಿರುಗಾಟ ಮಾಡಿ ಪ್ರಧಾನ ಭಾಗವತರಾಗಿದ್ದವರು. ಮೂರೂವರೆ ದಶಕಗಳ ಹಿಂದೆ ತಾಳ ಹಿಡಿದ ಕೋಗಿಲೆ ಗುನು ಗುಡಿಸುತ್ತಲೇ ಇದೆ.
ಕೇಶವ ಹೆಗಡೆಯವರು ಹೊಸತನಕ್ಕೆ ಬಾಗದೆ, ಹಳೆ ತನಕದ ಸೊಗಸು ಉಳಿಸಿಕೊಡುತ್ತಿರುವರೆಂದು ಯಕ್ಷಗಾನ ಲೋಕದಲ್ಲಿ ಕೇಳಿಬರುವ ಮಾತು. ಪದ್ಯ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುವಷ್ಟು ಮಧುರ ಲಯದ ಕಂಠದವರು. ಯಾವುದೇ ಯಕ್ಷಗಾನೀಯ ಪದ್ಯ ನೀಡಿದರೂ ಅದನ್ನು ರಾಗಕ್ಕೆ ಜೋಡಿಸಿಕೊಡಬಲ್ಲ ಚತರುರತೆ ಉಳ್ಳವರು. ಭಾಗವತಿಕೆಯಲ್ಲಿ ಕೊಳಗಿ ಶೈಲಿಯನ್ನು ಕಟ್ಟಿಕೊಟ್ಟವರು. ಸದಾ ಯಕ್ಷಗಾನದ ಪದ್ಯಗಳ ಲಹರಿಯಲ್ಲೇ ಇರುವ ಭಾಗವತರು.
ಯಕ್ಷಗಾನದ ಹಿರಿಯ ಕಲಾವಿದರಾದ ದೇವರು ಹೆಗಡೆ, ಪಿ.ವಿ.ಹಾಸ್ಯಗಾರ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಎಂ.ಎಲ್.ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ, ಗಣಪತಿ ಭಟ್ಟ ಕಣ್ಣಿ, ಗಣಪತಿ ಹೆಗಡೆ ತೋಟಿ, ವಿನಾಯಕ ಹೆಗಡೆ, ವಿ. ಉಮಾಕಾಂತ ಭಟ್ಟ ಸೇರಿದಂತೆ ಅನೇಕ ಹಿರಿಯ ಕಿರಿಯ ಕಲಾವಿದರನ್ನು ಕೇಶವ ಹೆಗಡೆ ಕೊಳಗಿ ಅವರ ಭಾಗವತಿಕೆ ಕುಣಿಸಿದೆ. ಮಕ್ಕಳಿಂದಲೂ ಹಿಡಿದು ಹಿರಿಯರನೇಕರನ್ನು ಪದ್ಯ ಹೇಳಿ ರಂಗದಲ್ಲಿ ಆಡಿಸಿದ್ದಾರೆ.
ಕೇಶವ ಹೆಗಡೆ ಕೊಳಗಿ ಅವರಿಗೆ ಕರಾವಳಿ ಕೋಗಿಲೆ, ಗಾನ ಗಂಧರ್ವ, ಯಕ್ಷ ಬಸವ, ಗಾನ ಗಂಧರ್ವ, ಯಕ್ಷ ಸಂಗೀತ ಕಲಾಶ್ರೀ, ಕರಾವಳಿ ರತ್ನಾಕರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸನ್ಮಾನ, ಪ್ರಶಸ್ತಿ, ಗೌರವಗಳು ಸಂದಿವೆ. ಶಿರಸಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರಲ್ಲದೇ ಮುಂಬಯಿ, ದೆಹಲಿ, ಪೂನಾ, ಚೆನ್ನೈ, ಕೇರಳ, ಅಮೇರಿಕಾ, ದುಬೈ, ಬೆಹರಿನ್, ಸಿಂಗಾಪುರಗಳಲ್ಲಿ ಪದ್ಯ ಹೇಳಿದ್ದಾರೆ. ದ್ವಂದ್ವ ಭಾಗವತಿಕೆ ಕೂಡ ಮಾಡಿದ್ದಾರೆ. ಇವರ ಹಾಡಿನ ಸಿಡಿ, ಯಕ್ಷಗಾನ ಪ್ರಸಂಗಗಳ ಡಿವಿಡಿಗಳೂ ಬಂದಿವೆ. ಅನಂತ ಹೆಗಡೆ ಕೊಳಗಿ ಯಕ್ಷ ಪ್ರತಿಷ್ಠಾನ ಕೂಡ ನಡೆಸುತ್ತಿದ್ದಾರೆ.
On the birth day of Yakshagana artiste Keshava Hegde Kolagi
ಕಾಮೆಂಟ್‌ಗಳು