ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಎಸ್. ಚಂದ್ರಕಲಾ



ಬಿ. ಎಸ್. ಚಂದ್ರಕಲಾ


ಬಿ. ಎಸ್. ಚಂದ್ರಕಲಾ ಅವರು ಸಾಹಿತ್ಯ ಮತ್ತು ಸಂಗೀತದಲ್ಲಿ ಸಾಧನೆ ಮಾಡಿದ್ದಲ್ಲದೆ, ಮಹಿಳಾ ಸಾಧಕಿಯರನ್ನು ಪ್ರೋತ್ಸಾಹಿಸಲು ಲಿಪಿ ಪ್ರಾಜ್ಞೆ, ಸ್ವರಭೂಷಿಣಿ ಅಂತಹ ಪ್ರಶಸ್ತಿಗಳನ್ನು ಸ್ಥಾಪಿಸಿದವರು.

ಚಂದ್ರಕಲಾರವರು 1931ರ ಮಾರ್ಚ್ 21ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಜಿ.ಆರ್. ಸಿದ್ದಪ್ಪ.  ತಾಯಿ ಭದ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಇಂಟರ್ ಮೀಡಿಯೇಟ್‌ವರೆಗೆ ಬೆಂಗಳೂರಿನಲ್ಲಿ ಓದಿದರು. ಬಾಲ್ಯದಿಂದಲೇ ಸಂಗೀತದ ಗೀಳು ಹತ್ತಿತು.  ಶ್ರೀಮತಿ ಪದ್ಮಾವತಮ್ಮನವರಲ್ಲಿ ಸಂಗೀತ ಪಾಠವಾಯಿತು. ಶಂಭುಲಿಂಗಪ್ಪನವರಿಂದ ರೇಣುಕ ಗೀತೆ ಪಾಠವಾಯಿತು. ಏಳನೇ ವರ್ಷದಲ್ಲೇ ರೇಣುಕ ಗೀತೆಗಳ ಕಛೇರಿ ನಡೆಸಿದ್ದರು. ಹಾರ‍್ಮೋನಿಯಂ ನುಡಿಸಿ ಸಂಗೀತ ಕಲಿಯುತ್ತಿದ್ದವರಿಗೆ ಸಂಬಂಧಿಯೊಬ್ಬರು ಪಿಟೀಲು ಕೈಲಿ ಹಾಕಿದರು. 

ಚಂದ್ರಕಲಾ ಅವರಿಗೆ ಹತ್ತೊಂಬತ್ತನೇ ವಯಸ್ಸಿಗೆ ವೈಧವ್ಯ ಬಂತು. ದುಃಖ ಮರೆಯಲು ಸಂಗೀತಕ್ಕೆ ಮೊರೆ ಹೋದರು. ಸಂಗೀತದ ಗುರು ಆರ್. ಆರ್. ಕೇಶವ ಮೂರ್ತಿಯವರ ಬಳಿ ಪಿಟೀಲು ಕಲಿತರು. ಸಂಗೀತದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕಿನಿಂದ ವಿಜೇತರಾಗಿ ಚಿನ್ನದ ಪದಕ ಪಡೆದರು. 1961ರಲ್ಲಿ ಬೆಂಗಳೂರು ನಗರಸಭಾ ಪ್ರೌಢಶಾಲೆಯಲ್ಲಿ  ಸಂಗೀತ ಶಿಕ್ಷಕಿ ಹುದ್ದೆ ಲಭ್ಯವಾಯಿತು. ಶಾಲೆಯಲ್ಲಿ ಸಂಗೀತ ತರಗತಿಗಳು ನಿಂತಾಗ ಜನಪದ ಗೀತೆಗಳ ಬೋಧನೆ ಆರಂಭಿಸಿದರು. 

ಚಂದ್ರಕಲಾ ಅವರು ಜಾನಪದ ಗೀತೆಗಳಿಗೆ ಸ್ವರಪ್ರಸ್ತಾರ ಹಾಕಿ ‘ಜಾನಪದ ಸ್ವರ ಸಂಪದ’ ಕೃತಿ ಪ್ರಕಟಣೆ ಮಾಡಿದರು. ನಿಜಗುಣರ ೪೨ ಪದಗಳಿಗೆ ಅರ್ಥ ಬರೆದು ರಾಗ ಸಂಯೋಜಿಸಿ, ಸ್ವರಪ್ರಸ್ತಾರ ಹಾಕಿ ಕೃತಿ ‘ನಿಜಗುಣ ಸ್ವರಸರಿತಾ' ಪ್ರಕಟಿಸಿದರು.  ಸ್ವಂತ ಕವನಗಳಿಗೆ ಸ್ವರಪ್ರಸ್ತಾರ ಹಾಕಿ ‘ಝೇಂಕಾರ’ ಎಂಬ ಕೃತಿ ಪ್ರಕಟಿಸಿದರು. 

ಚಂದ್ರಕಲಾ ಅವರು ರಾಮೋತ್ಸವ, ಸಂಘ, ಸಮಾಜಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿದರು.

ಸಂಗೀತ ಬಾಲಪಾಠ, ಝೇಂಕಾರ, ನಿಜಗುಣ ಸ್ವರಸರಿತಾ, ಜಾನಪದ ಸ್ವರಸಂಪದ ಮುಂತಾದವು ಚಂದ್ರಕಲಾ ಅವರ ಸಂಗೀತದ ಹೊತ್ತಗೆಗಳು. ಸಂಗೀತದ ಸುಳಿಯಲ್ಲಿ, ಬಿಸಿಲು ನೆರಳು ಕಾದಂಬರಿಗಳು. ಕಾಂಚನದ ಕಮರು ನಾಟಕ. ಕವಿತಾ ಕಿರಣ, ರಸರಾಗರಸಿಕೆ, ಪ್ರಕೃತಿಯಾರಾಧನೆ ಮುಂತಾದವು ಕವನ ಸಂಕಲನಗಳು. 

ಚಂದ್ರಕಲಾ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಸಂದಿತು.  ಸಂಗೀತರತ್ನ ಬಿರುದು ಪ್ರಾಪ್ತವಾಯಿತು. ನಿವೃತ್ತಿಯಿಂದ ಬಂದ ಹಣದಲ್ಲಿ 'ಸ್ವರ ಲಿಪಿ ಪ್ರತಿಷ್ಠಾನ' ಸ್ಥಾಪಿಸಿ ಪ್ರತಿವರ್ಷ ಹಿರಿಯ ವಿದುಷಿ ಹಾಗೂ ಹಿರಿಯ ಮಹಿಳಾ ಸಾಹಿತಿಗಳಿಗೆ ಸ್ವರಭೂಷಿಣಿ, ಲಿಪಿಪ್ರಾಜ್ಞೆ ಪ್ರಶಸ್ತಿ ಕೊಟ್ಟು, ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಇದ್ದ ಕಾಳಜಿ ಮೆರೆದರು. 

ಚಂದ್ರಕಲಾ ಅವರು 2005ರ ಮಾರ್ಚ್ 4ರಂದು ನಿಧನರಾದರು.


On the birth anniversary of musician and writer B. S. Chandrakala

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ