ಭಾರತಕಥಾಮಂಜರಿ81
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಉದ್ಯೋಗ ಪರ್ವ - ಹನ್ನೆರಡನೆಯ ಸಂಧಿ
ಅವನಿಯದಿರಿತು ಗಗನ ತಾರಾ
ನಿವಹವದು ಬಿದಿರಿತ್ತು ವರಪಾಂ
ಡವರು ಕಣನೊಳು ವೆಂಠಣಿಸಿದರು ಕಮಠ ಟೆಂಟಣಿಸೆ
ಪಾಂಡವರು ರಂಅ ಭೂಮಿಗೆ ಬಂದು ನಿಲ್ಲಲು, ಭೂಮಿ ಅದುರಿತು, ನಕ್ಷತ್ರಗಳು ಕಂಪಿಸಿದವು, ಕೂರ್ಮನು ಭಯಗ್ರಸ್ತನಾದನು
ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲನೈತರುತಿವರ ಹೊರೆಗಟ್ಟಿದನು ಸಾತ್ಯಕಿಯ
ಕೇಳಿದನು ಮುರಹರನ ಬರುವನು
ಮೌಳಿಮಸ್ತಕದಖಿಳ ಧರಣೀ
ಪಾಲರೊಡನಿದಿರಾಗಿ ಬಂದನು ಧರ್ಮ ನಂದನನು ೧
ದೂರದಲಿ ದುಮ್ಮಾನಿಸಿದ ವದ
ನಾರವಿಂದವ ಕಂಡು ಸಂಧಿಗೆ
ಸೇರರವದಿರು ಬಲಿದುದಾಹವವೀತನಂಗದಲಿ
ಶೌರಿಗಾಯ್ತವಮಾನವಿದೆಲೇ
ಮಾರಿಗುತ್ಸವವೆನುತ ಬಂದನು
ಮಾರುತನಮಗನಸುರಮರ್ದನ ನಿಂಗಿತವನರಿದು ೨
ದರುಶನವ ನೀಡಿದನು ಕೃಷ್ಣನ
ಚರಣದಲಿ ಮೈಯಿಕ್ಕಿದರು ಮಿ
ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ
ಪರಮ ಬಾಂಧವರೆಲ್ಲ ಜೀವಂ
ತರೆ ನದೀಸುತ ವಿದುರ ಗುರು ನೃಪ
ಗುರು ತನುಜ ಧೃತರಾಷ್ತ್ರರೆಂದನು ಧರ್ಮನಂದನನು ೩
ಭೂಮಿಪತಿ ನಿಜಬಾಂಧವರು ಸು
ಕ್ಷೇಮಿಗಳು ತಾವೆಲ್ಲ ನಿಮ್ಮೀ
ಕ್ಷೇಮ ಕುಶಲವ ಕೇಳಿದರು ಕಳುಹಿದರು ಹರಕೆಗಳ
ಆ ಮಹಾ ಸಂಗ್ರಾಮ ಮುಖದಲಿ
ತೋಮರದ ಕಾಣಿಕೆಗಳಲಿ ಸು
ಪ್ರೇಮವನು ಬೆಸಸುವುದು ದುರ್ಯೋಧನನ ಮತವೆಂದ ೪
ಭೂಮಿಯೊಳಗರ್ಧವನು ಬೇಡಿದೊ
ಡಾ ಮಹೀಪತಿಯೈವರಿಗೆ ಸಂ
ಗ್ರಾಮ ಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು
ಸಾಮದಲಿ ಸೊಗಸಿಲ್ಲ ನೀವ್ ನಿ
ಸ್ಸೀಮರಾದೊಡೆ ಜೋಡಿಸುವುದು
ದ್ಧಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ ೫
ಮುನಿದೊಡೆಯು ನಿಮ್ಮೊಳಗೆ ನೀವೇ
ಮನಕತವ ಮಾಡುವಿರಿಯಗ್ರಜ
ರನುಜರಲಿ ಕದಡಾದೊಪಶಮಿಸುವಿರಿ ನಿಮ್ಮೊಳಗೆ
ಎನಗೆ ನಿಮ್ಮಯ ದೂಸರಿಂದಾ
ಯ್ತನಿತು ಸಭೆಯಲಿ ಮಾನಹಾನಿಗ
ಳೆನಲು ನೊಂದನು ಧರ್ಮಸುತನಿಂತೆಂದ ನಸುನಗುತ ೬
ಮುಳಿದು ಸುರಗಿಯನುಗಿದು ಗಗನಕೆ
ನಿಲುಕಿ ಮಾಡುವುದೇನು ನಿಮ್ಮಡಿ
ಗಳಿಗೆ ತಪ್ಪಿದ ತರಳರಖಿಳವ್ಯಾಪ್ತಿಯೇಗುವುದು
ಖಳರು ಮಾಡಿದ ಖತಿಯನೆನ್ನೊಳು
ತಿಳಿದು ಮರೆಯಲುಬೇಕು ಕರುಣಾ
ಜಲಧಿ ನೀನೆಂದಂಘ್ರಿಗಳ ಹಿಡಿದನು ಯುಧಿಷ್ಥಿರನು ೭
ಬರಿದೆ ಕಾಡದಿರೇಳು ಮನದಲಿ
ಮರೆದೆವಾಗಳೆ ಕೌರವನು ಮುಂ
ದರಿಯದವಗಡಿಸಿದನು ಹೋಗಲಿ ನಿಮ್ಮ ದೂರೇಕೆ
ನೆರವಣಿಗೆಯುಂಟಾದಡಿಂದಿನ
ಮರುದಿವಸ ಸಂಗ್ರಾಮ ಸೈರಿಸ
ಲರಿಯರವದಿರು ನಡೆ ಕುರುಕ್ಷೇತ್ರಕ್ಕೆ ಬೇಗದಲಿ ೮
ಮಾರಿಯರಕೆಗಳಡಗದಂತಕ
ನೂರು ತುಂಬದೆ ಶಾಕಿನಿಯರೊಡ
ಲೋರೆ ನನೆಯದೆ ಡಾಕಿನಿಯರಿಗೆ ಡೊಳ್ಳು ಸಾಲಿಡದೆ
ಕೌರವನ ತನಿಗರುಳ ದಂಡೆಯ
ತೋರಣದ ಬಾಗಿಲಿನ ವಿಭವದಿ
ವಾರಣಾಹ್ವಯ ನಗರಿಯನು ಹೊಗದಿಹೆನೆ ಹೇಳೆಂದ ೯
ಮಾರಿಯರಕೆಗಳಡಗದಂತಕ
ನೂರು ತುಂಬದೆ ಶಾಕಿನಿಯರೊಡ
ಲೋರೆ ನನೆಯದೆ ಡಾಕಿನಿಯರಿಗೆ ಡೊಳ್ಳು ಸಾಲಿಡದೆ
ಕೌರವನ ತನಿಗರುಳ ದಂಡೆಯ
ತೋರಣದ ಬಾಗಿಲಿನ ವಿಭವದಿ
ವಾರಣಾಹ್ವಯ ನಗರಿಯನು ಹೊಗದಿಹೆನೆ ಹೇಳೆಂದ ೧೦
ತೋರುನಡೆ ಗಜಬಜಿಸಲೇ ಕಿ
ನ್ನಾರು ತಿಂಗಳೆ ನಾಳೆ ಪಯಣಕೆ
ಸಾರಿಸೇಳೆಂದವರುಪಪ್ಲವ್ಯಕ್ಕೆ ನಡೆತಂದು
ಬೇರೆ ಬೇರವನೀಶರಿಗೆ ಪಡಿ
ಹಾರರನು ಕಳುಹಿದನು ಕೃಷ್ಣನ
ದೂರು ಬರಲಳವಡಿಸಿದರು ಸಂಗ್ರಾಮ ಸಾಧನವ ೧೧
ಗುಡಿಯ ಮಂಡವಿಗೆಗಳ ಹೊರೆಗೆ ಗ
ಳೊಡನೊಡನೆ ಸಂಭ್ರಮಿಸಿದವು ಬರ
ಸಿಡಿಲು ಬೊಬ್ಬಿಡುವಂತೆ ಮಸೆದವು ಕೂಡೆ ಕೈದುಗಳು
ದಡಿಯ ಬಲಿಸುವ ಗುಳವ ರೆಂಚೆಯ
ಗಡಣಿಸುವ ಬಲುಗೀಲಗಾಲಿಯ
ತೊಡಿಸುವುತ್ಸವವಾಯ್ತುಪಪ್ಲಾವ್ಯದೊಳು ರಭಸದೊಳು ೧೨
ಹಿಳುಕ ತಿದ್ದುವ ಬಿಲ್ಲಬಾಗಿನ
ಹೊಳಹನೊಯ್ಯಾರಿಸುವ ಮಾರ್ತಿರು
ಗಳನು ಜೋಡಿಸುವಖಿಳ ಕೈದುವ ಮಸೆವ ಮಂಡಲಿಯ
ಕಳಕಳಿಕೆ ಬಲುಹಾಯ್ತು ರಾವುತ
ರಲಿ ಗಜಾರೋಹಕರ ರಥಿಕಾ
ವಳಿಯಲವರವರಂಗದಲಿ ಸಂವರಣೆಯೊಪ್ಪಿದವು ೧೩
ಜೋಳಿ ಹರಿದುದು ದೆಸೆದೆಸೆಗೆ ಭೂ
ಪಾಲರಿಗೆ ರಾಯಸದ ಹದನನು
ಕೇಳಿದಾಗಳೆ ಕವಿದು ಬಂದರು ತಮ್ಮ ದಳ ಸಹಿತ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳವಂದಿನ ಮರುದಿವಸ ವೈ
ಹಾಳಿಯನು ಹೊರವಂಟರನಿಬರು ದೈತ್ಯರಿಪು ಸಹಿತ ೧೪
ಎಲೆಲೆ ನೆಲ ಬೆಸಲಾದುದೆನೆ ಬಲು
ದಳದ ತೆರಳಿಕೆ ತೀವಿತವನಿಯ
ತಳಪಟದ ಹಬ್ಬುಗೆಯೊಳಬ್ಬರಿಸಿದವು ಬೊಬ್ಬೆಗಳು
ತಲೆವರೆಯ ತೂಕದೊಳು ಫಣಿಪತಿ
ಯಳುಕೆ ತೊಟ್ಟನು ತರಣಿ ಸೇನೋ
ಚ್ಚಳಿತ ಧೂಳಿಯ ಝಗೆಯನದ್ಭುತವಾಯ್ತು ದೆಖ್ಖಾಳ ೧೫
ಹಿಣಿಲ ಹಾಹೆಯ ಬಿರುದುಗಳ ಡಾ
ವಣಿಯ ನಾಯಕವಾಡಿಗಳ ಸಂ
ದಣಿಯ ಸುಕರದ ಕೈದುಗಳ ವರವೀರ ನೂಪುರದ
ಕುಣಿವ ಸುಭಟರ ಪಳರವದ ಡೊಂ
ಕಣಿಯ ಖೇಟಕ ಖಡ್ಗ ಬಲು ಬಿಲು
ಗಣೆಯ ತಿಳಿವೊಡಸಂಖ್ಯೆಯಹ ಕಾಲಾಳ ನೋಡಿದರು ೧೬
ಅಳವಿಗೊಟ್ಟೊಡೆ ರವಿಯ ತುರಗವ
ನುಳುಹಿ ಮುಂಚುವ ಜವದ ನೊಸಲೊಳು
ಹೊಳೆದ ಕನ್ನಡಿಗಳ ಖುರಾಂತದ ಜಡಿವ ಜೋಡುಗಳ
ಬಿಳಿಯ ಚೌರಿಯ ಜಲ್ಲಿಗಳ ಹ
ತ್ತಳದ ರಾಹುತ ಸನ್ನೆಯೊಳು ನೆಲ
ನಲುಗೆ ನಿಗುರುವ ನಿಲುವ ನಿರುಪಮ ಹಯವ ನೋಡಿದರು ೧೭
ಶೈಲದೆಡಬಲದೊರತೆಯೆನಲು ಕ
ಪೋಲದೊಳು ದಾರಿಡುವ ಮದಜಲ
ದಾಳಿಗಳ ಭರಿಕೈಯ ಲವುಡಿಯ ವಜ್ರಮುಷ್ಟಿಗಳ
ನಾಳಿವಿಲುಗಳ ರಾಯಜೋದರ
ಮೇಲುಗಣೆಗಳ ಚಿತ್ರಗತಿ ಶುಂ
ಡಾಲಗಳ ನೋಡಿದರು ಗಜಸೇನಾ ಸಮುದ್ರದಲಿ ೧೮
ಥಳಥಳಿಪ ಸೂಲಿಗೆಯ ಮುಮ್ಮೊನೆ
ಗಳ ರಥಾಂಗದ ಮೇಲು ಪಸರದ
ಪಳಹರದ ಖುರಗತಿಯ ಜೋಡ ಜವಾಯ್ಲ ಕುದುರೆಗಳ
ಬಲದ ಬದ್ದರಗೊಟ್ಟಿದಂಬಿನ
ಹೊಳೆವ ಹೊದೆಗಳ ಸೂತರುರವಣೆ
ಗಳ ಸುರೇಖೆಯ ಗತಿಯ ವಾಜಿಯ ರಥವ ನೋಡಿದರು ೧೯
ಅವನಿಪಾಲರ ಮಕುಟ ಮಣಿಗಣ
ನಿವಹವೆತ್ತಿಗ ಖಡ್ಗ ಪರಶುಗ
ಳವಿರಳದ ತೆರೆಗಳ ಪತಾಕಾವಳಿಯ ಬೆಳುನೊರೆಯ
ವಿವಿಧಗಜ ಯಹ ಜಲ ಚರೌಘದ
ಪವನಜನ ಕೈಸನ್ನೆಗಳ ಘನ
ಪವನಗತಿಯಲಿ ಲಹರಿಮಸಗಿತು ಬಹಳ ಬಲಜಲಧಿ ೨೦
ಹರಿಯುಧಿಷ್ಠಿರರೊಂದು ಗಜಕಂ
ಧರದೊಳಿದ್ದರು ನಿಖಿಳಸೇನೆಯ
ತೆರಳಿಕೆಯ ತೋರಿಸುತೆ ಬಂದರು ಭೀಮ ಫಲುಗುಣರು
ಬಿರುದ ಧೃಷ್ಟದ್ಯುಮ್ನ ಮೊದಲಾ
ಗಿರೆ ಕುತೂಹಲಿ ದ್ರುಪದ ಭೂವರ
ನುರವಣಿಸಿ ತೋರಿಸಿದನೊಂದ ಕ್ಷೋಹಿಣೀ ಬಲವ ೨೧
ವರ ಯುಧಾಯನ್ಯೂತ್ತಮೌಜಸ
ರುರು ಶಿಖಂಡಿ ಸುಚೇಕಿತಾನ ಸ
ಮರ ದುರಂಧರ ವೀರ ಪಾಂಚಾಲ ಕ್ಷಿತೀಶ್ವರರು
ತುರಗ ಗಜರಥ ಪಾಯದಳ ಸಾ
ಗರದ ಸಂರಂಭದೊಳು ನಿಜಸಂ
ವರಣೆಯನು ತೋರಿದರು ತಮ್ಮಕ್ಷೋಹಿಣೀ ಬಲವ ೨೨
ವರ ವಿರಾಟನು ಶಂಖ ನೃಪನು
ತ್ತರ ಶತದ್ಯುಮ್ನಕನು ಶತ ಚಂ
ದ್ರರು ಶತಾನೀಕರು ಶತಾಯುಧರೆನಿಪ ನೃಪವರರು
ತುರುಕರುರು ಸಾಹಣ ಸಮುದ್ರದ
ವರುಯವನ ಖುರಸಾಣ ಕಾಶೀ
ಶ್ವರರು ತಮ್ಮಕ್ಷೋಹಿಣಿಯ ತೋರಿದರು ಧರ್ಮಜಗೆ ೨೩
ಜಯಸಮರ ಸಾಮಗ್ರ ಬಲ ಕೈ
ಕಯ ನೃಪಾಲರು ತಮ್ಮೊಳಕ್ಷೋ
ಣಿಯನು ತೋರಿದರಿಅವರಿಭಕಂದರದ ಭೂಪತಿಗೆ
ಭಯವಿಹೀನನು ಪಾಂಡ್ಯನೃಪ ಸೃಂ
ಜಯರು ಸೋಮಕ ಭೂಪರಕ್ಷೋ
ಣಿಯನು ತೋರಿದರವನಿ ಕುಸಿದುದು ದಳದ ಪದಹತಿಗೆ ೨೪
ಚೈದ್ಯದೇಶದ ಧೃಷ್ಟಕೇತು ಬ
ಲೋದಧಿಯನಕ್ಷೋಹಿಣಿಯ ಮೊದ
ಲಾದುದೆನೆ ತೋರಿದನು ಕುಂತೀಭೋಜನಕ್ಷೋಣಿ
ಆದವೇಳಕ್ಷೋಣಿ ಬಲ ಬೇ
ರಾದ ನಾಯಕ ವಾಡಿಯಲಿ ಹಿರಿ
ದಾದುದಾಹವ ಸೇನೆ ಗೋಚರವಲ್ಲ ಗಣನೆಯಲಿ ೨೫
ಕ್ಷತ್ರಧರ್ಮನು ನೀಲನು ಬೃಹ
ತ್ಕ್ಷತ್ರ ಶೌರಿಯ ತನುಜ ವತ್ಸಜ
ಚಿತ್ರವರ್ಮ ಹಿರಣ್ಯವರ್ಮನು ಚಾರು ಚೇಷ್ಟಕನು
ಶತ್ರುಮಥನನು ವಿಂಧ್ಯಗಿರಿಯ ಸು
ಹೋತ್ರನನ್ವಯದವರು ಪಾಂಡವ
ಮಿತ್ರರೊದಗಿತು ಕೇಳು ಜನಮೇಜಯ ಮಹೀಪಾಲ ೨೬
ವೀರ ಪಾರ್ಥನಿಗಿರುಳು ಸೋತಂ
ಗಾರವರ್ಮನು ಗಗನಚರ ಪರಿ
ವಾರ ಬಹಳದಿ ಬಂದು ಕಂಡನು ಕಲಿ ಯುಧಿಷ್ಠಿರನ
ಕೌರವೇಂದ್ರನ ನೋಯಿಸಿದ ಧುರ
ಧೀರ ಸಾಹಸ ಚಿತ್ರಸೇನನು
ದಾರ ಗುಣನಿಧಿ ಬಂದು ಕಂಡನು ಮಿತ್ರಭಾವದಲಿ ೨೭
ಕಾರಿರುಳ ಪಟ್ಟಣಕೆ ಚಂದ್ರನ
ತೋರಣವ ಬಿಗಿದಂತೆ ದಾಡೆಗ
ಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ
ತೋರಹತ್ತನು ದೈತ್ಯಕುಲ ಪರಿ
ವಾರ ಬಹಳದಿ ಬಂದು ಕಂಡನು ಕಲಿ ಘಟೋತ್ಕಚನು ೨೮
ಬಲದ ದೆಖ್ಖಾಳವನು ನೋಡಿದ
ರೊಲವಿನಲಿ ನಿಜಸೇನೆ ಸಹಿತತಿ
ಬಲುರುಪಪ್ಲವ್ಯಕ್ಕೆ ಬಂದರು ಹೊಕ್ಕರಾಲಯವ
ಬಳಿಕ ಸುಮುಹೂರ್ತದಲಿ ಹೊರಗುಡಿ
ಗಳನು ಹಾಯ್ಕಿದರಂದು ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ ೨೯
ಪರಿಮಿತಕೆ ತನ್ನಾಪ್ತ ಸಚಿವರ
ಕರೆಸಿಕೊಂಡನು ಕೃಷ್ಣರಾಯಂ
ಗರಸ ಬಿನ್ನಹ ಮಾಡಿದನು ನೃಪಕಾರ್ಯ ಸಂಗತಿಯ
ಧುರಕೆ ಸೇನಾನಾಥರಿಲ್ಲದೆ
ನೆರೆದ ಬಲ ಸಾಲಿರುಹೆ ಮುರಿದೊಡೆ
ಹರೆವವೊಲು ಹುರುಳಿಲ್ಲ ದಳಪತಿ ಯಾವನಹನೆಂದ ೩೦
ದ್ರುಪದನಾಗಲಿಯೆಂದು ಕೆಲಬರು
ವಿಪುಳ ಬಲದ ವಿರಾಟನಾಗಲಿ
ನೃಪ ಶಿಖಂಡಿಯೆಯೆಂದು ಕೆಲಬರು ಭೀಮಸುತನೆಂದು
ಅಪರಿಮಿತ ಮತವಾಗೆ ಸಮರ
ವೃಷಗತಾರಿ ಸುರೇಂದ್ರ ಸುತನೀ
ದ್ರುಪದಸುತ ಸೇನಾಧಿಪತಿಯಹುದೆಮ್ಮ ಮತೆವೆಂದ ೩೧
ಬಿಂಬವನು ಬೇರಿರಿಸಿ ಬಹುಮತ
ವೆಂಬ ಬಿಸಿಲಲಿ ರಾಜನಯವೆಂ
ದೆಂಬ ನೈದೆಲು ನಲವುಗೆಟ್ಟುದು ಕೃಷ್ಣ ಹೇಳೆನಲು
ಎಂಬುದೇನಿನ್ನಿಲ್ಲಿ ಸುಭಟಕ
ದಂಬದಧಿಪತಿತನಕೆ ಫಲುಗುಣ
ನೆಂಬ ಮಾತೆಮ್ಮಭಿಮತವು ಭೂಪಾಲ ಕೇಳೆಂದ ೩೨
ಕರೆಸಿ ಧೃಷ್ಟದ್ಯುಮ್ನನನು ಸಂ
ಗರಕೆ ಸೇನಾಪತ್ಯವನು ವಿ
ಸ್ತರದಿನಳವಡಿಸಿದರು ಸುಮುಹೂರ್ತದೆ ಸರಾಗದೊಳು
ಪುರಕೆ ಗುಡಿ ನೆಗಹಿದವು ಭೂ
ಸುರರು ವಿಮಳಾಮ್ನಾಯರವ ವಿ
ಸ್ತರಿಸಲಳವಡಿಸಿದರು ಮಂಗಳ ವಿಹಿತ ವಸ್ತುಗಳ ೩೩
ಸೂಳವಿಸಿದವು ಕಟಕದೊಳು ನಿ
ಸ್ಸಾಳ ಕೋಟಿಗಳಳ್ಳಿರಿಯೆ ಹೆ
ಗ್ಗಾಳೆಗಳು ಸಾರಿದವು ಭಟರುಬ್ಬಟೆಯ ಬಿರುದುಗಳ
ಬಾಲಕಿಯರಾರತಿಯ ತಳಿಗೆಗ
ಳೋಳಿ ಸಂದಣಿಸಿದವು ವರ ಪಾಂ
ಚಾಲತನುಜಂಗೆಸಗಿದರು ಮೂರ್ಧಾಭೀಷೇಚನವ ೩೪
ದರುಶನವನಿತ್ತಖಿಳ ಧರಣೀ
ಶ್ವರರು ಕಂಡರು ಸೂತ ಮಾಗಧ
ವರವಿಬುಧವೈತಾಳಿಕರ ಕಾರ್ಪಣ್ಯವಡಗಿದವು
ಧುರಕೆ ಧೃಷ್ಟದ್ಯುಮ್ನನಾಜ್ಞೆಯೊ
ಳಿರವು ನಿಮಗೆಂದೈದೆ ಭೂಪಾ
ಲರ ನಿವಾಸಂಗಳೊಳು ಹೊಯ್ಸಿದರಂದು ಡಂಗುರವ ೩೫
ರೂಢಿಸಿದ ಸುಮುಹೂರ್ತದೊಳು ಹೊರ
ಬೀಡ ಬಿಟ್ಟರು ರಣಕೆ ಪಯಣವ
ಮಾಡಲೋಸುಗ ಸಾರಿದರು ನೃಪಪಾಳೆಯಂಗಳೊಳು
ಕೂಡಿತಾಹವ ಸೈನ್ಯಸಾಗರ
ವೀಡಿರಿದು ನಡೆಗೊಂಡುದುದಧಿಯ
ನೋಡಿಸುವ ಜೋಡಿಗಳ ಜೋಕೆಯ ಘನರವಂಗಳೊಳು ೩೬
ಹರಿಯ ಚರಣಕ್ಕೆರಗಿ ವಿಜಯದ
ಹರಕೆಗಳ ಕೈಕೊಂಡು ರಥವನು
ತುರಗಗಜವನು ಗಡಣ ಮಿಗಲೇರಿದರು ಪಾಂಡವರು
ಗರುಡ ಸಿಂಧವನೆತ್ತಿ ದಾರುಕ
ನಿರದೆ ರಥವನು ಸುಳಿಸೆ ಯದುಮೋ
ಹರದ ಮಧ್ಯದೊಳಸುರ ಧೂಳೀಪಟಲ ಸೇರಿದನು ೩೭
ಮುಂದೆ ಹರಿರಥವಸುರ ವೈರಿಯ
ಹಿಂದೆ ಧರ್ಮಜನೆಡಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದರು ಪಾಂಡುನಂದನರು ೩೮
ಸಿಡಿಲು ಸಿಗುರೆದ್ದಂತೆ ಬಾರಿಸಿ
ಜಡಿವ ಕೈದುಗಳುಗಿದುವಬುಧಿಯ
ಕಡುದೆರೆಯ ಲಹರಿಯ ವೊಲುರವಣಿಸಿದವು ಬೊಬ್ಬೆಗಳು
ನಡುಗಿತವನಿಯಜಾಂಡ ಖರ್ಪರ
ವೊಡೆಯಲವನಿಯ ಲಗ್ಗೆ ಸೂಳಿನ
ಹೊಡೆಗುಳಿನೊಳಬ್ಬರಿಸಿದವು ನಿಸ್ಸಾಳ ಕೋಟಿಗಳು ೩೯
ಪ್ರಳಯಜಲನಿಧಿಯಂತೆ ದಳ ಬರ
ಲಿಳೆ ಕುಸಿಯೆ ಕಮಠಗೆ ಮೇಲುಸು
ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ
ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ ನಡೆದುದು ಕಡುಭರದ ಕಾ
ಲ್ದುಳಿಯ ಕದನಾಳಾಪಕರ ಕಾಹುರತೆ ಹೊಸತಾಯ್ತು ೪೦
ಗಜರ ಬೃಂಹಿತರವದ ವಾಜಿ
ವ್ರಜದ ಹೇಷಾಧ್ವನಿಯ ತೇರಿನ
ವಿಜಯ ಚೀತ್ಕೃತಿರವದ ಬಿಲು ಟಂಕಾರ ಕಳಕಳದ
ಗಜಬಜಿಕೆ ಗಾಢಿಸಿತು ಬೊಬ್ಬೆಯ
ಗಜರುಗಳ ಗರ್ಜನೆಗೆ ನಡುಗಿತು
ತ್ರಿಜಗವೆನಲೈದಿದರು ಪಯಣದ ಮೇಲೆ ಪಯಣದಲಿ ೪೧
ಅರರೆ ನಡೆದುದು ರಾಯ ಕಟಕದ
ತೆರಳಿಕೆಯ ಸೌರಂಭವಿಳೆಗ
ಚ್ಚರಿಯ ಬೀರಿತು ವರಕುರುಕ್ಷೇತ್ರಕ್ಕೆ ಗಮಿಸಿದರು
ಅರಿವಿಜಯಿಗಳು ನೆಲನ ಗೆಲಿದರು
ಹರಿಯ ನೇಮದಲೆಡೆಯರಿದು ಬಲ
ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ ೪೨
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಲಗ್ಗೆಗಳಡಗಿದವು ಕಿರು
ಗಾಳೆ ಸನ್ನೆಯಲೂದಿದವು ಮಾಣಿಸಿದವಬ್ಬರವ
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಗಶ್ರಮದ ಸೇನಾ
ಜಾಲ ಸೈವೆರಗಾಗಿ ನಿಂದುದು ಕಳನ ಮಧ್ಯದಲಿ ೪೩
ಮೇಲು ಗುಡಿಗಳ ಭದ್ರದುಪ್ಪರ
ಶಾಲೆಗಳ ಮಂಡವಿಗೆಗಳ ಬ
ಲ್ಲಾಳ ದಡ್ಡಿಯ ಚಂಪೆಯದ ಗೂಡಾರದೋವರಿಯ
ಸಾಲುಕಳಸದ ಮೇಲುಗಟ್ಟಿನ
ಕೀಲಣದ ಹೊಂಗೆಲಸದಲಿ ರಾ
ಜಾಲಯವನನುಕರಿಸಿದರು ಕುಂತೀಕುಮಾರರಿಗೆ ೪೪
ಅರಮನೆಯ ಕೆಲದಲಿ ಮುರಾಂತಕ
ನರಮನೆಗಳಾ ಕೆಲದೊಳರ್ಜುನ
ನಿರವು ಹಿಂದಣ ಭಾಗದಲಿ ನಕುಲಂಗೆ ಗುಡಾರ
ಅರಿಭಯಕರ ಭೀಮಸೇನನ
ನಿರುಪಮಾಲಯವೆಡದ ಕಡೆಯಲಿ
ಸರಿಸದಲಿ ಸೂತ್ರಿಸಿತು ಸಹದೇವರಿಗೆ ನೃಪಭವನ ೪೫
ವೀರ ಪಾಂಡವರಿವರರಸುಕು
ಮಾರ ವರ್ಗದ ಮಂಡವಿಗೆ ಗೂ
ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು
ವಾರಣದ ಸಾಲುಗಳ ಸುತ್ತಲು
ಭಾರಿಸಿತು ಪಾಂಚಾಲ ಮತ್ಸ್ಯರ
ಭೂರಿ ಬಲ ಬಿಟ್ಟುದು ಮಹೀಶನ ಗುಡಿಯ ಬಳಸಿನಲಿ ೪೬
ಕೇಳು ಜನಮೇಜಯ ಧರಿತ್ರೀ
ಪಾಲ ಬೀಡಿನ ತೆಕ್ಕೆ ಬಿಗಿದುದು
ಪಾಳಯದ ಬಲುಹೊದಕೆ ಹೊರವಳಯದೊಳು ಕಲುಗೋಟೆ
ಮೇಲೆ ಪಡಿಯಗಳಾಶ್ರಯಕೆ ಮುಳು
ವೇಲಿ ದೀಹದ ಸಿಂಹ ಶರಭ
ವ್ಯಾಳ ಶಾರ್ದೂಲಾವಳಿಯ ಸುಯಿದಾನಮೊಪ್ಪಿದುದು ೪೭
ಎರಡು ಬಾಗಿಲ ಸೂತ್ರದಲಿ ವಿ
ಸ್ತರಿಸಿದಂಗಡಿ ಸೋಮ ವೀಧಿಯ
ತರಣಿ ವೀಧಿಯ ಲವರವರ ಪಾಳೆಯಕೆ ಮುರಿವುಗಳ
ಸುರರು ಸೃಷ್ಟಿಸ ಬಾರದಿನ್ನೀ
ನರರುಗಳ ಪಾಡೇನು ಕೌಂತೇ
ಯರ ಸಮಗ್ರದ ಬೀಡು ಕುರುಭೂಮಿಯಲಿ ರಂಜಿಸಿತು ೪೮
ಬಲದ ಮುಂಗುಡಿ ಭೀಮನದು ಪಿಂ
ತಿಳೆಯೊಳಾತನ ಕಾಹು ಬೀಡಿನ
ವಳಯದಾರೈಕೆಗಳು ಸಾತ್ಯಕಿ ನಕುಲ ಪಾರ್ಥರಿಗೆ
ಬಲಮಹಾಂಬುಧಿಯೊಳಗಿರುಳು ಮೇ
ಲ್ತಳವರನು ಹೈಡಿಂಬಿ ಪಾಂಡವ
ರುಳಿವು ಗದುಗಿನ ವೀರನಾರಾಯಣನ ಸುಯಿದಾನ ೪೯
ಸಂಕ್ಷಿಪ್ತ ಭಾವ
ಪಾಂಡವರ ಸೈನ್ಯ ಕುರುಕ್ಷೇತ್ರದಲ್ಲಿ ಬೀಡುಬಿಟ್ಟುದು.
ಕೃಷ್ಣನು ಹಸ್ತಿನಾಪುರದಿಂದ ಬಂದ ವಿಷಯ ತಿಳಿದು ಪಾಂಡವರು ಬಂದು ಸ್ವಾಗತಿಸಿದರು. ಅಲ್ಲಿ ಆದ ವಿಷಯಗಳನ್ನು ತಿಳಿದ ಧರ್ಮಜನು ಕೃಷ್ಣನಿಗೆ ನಮ್ಮಿಂದ ಅಪಮಾನ ಆದಂತಾಯಿತು ಎಂದು ಕೊರಗಿದನು. ಭೂಮಿಯನ್ನು ಪಡೆಯಲು ಯುದ್ಧಕ್ಕೆ ಸಿದ್ಧನಾಗುವಂತೆ ಕೃಷ್ಣ ಸೂಚಿಸಿದನು. ಸಂಧಿ ಮುರಿದದ್ದರ ಬಗ್ಗೆ ಭೀಮನಿಗೆ ಸಂತಸವಾಯಿತು. ಕೃಷ್ಣನ ಸೂಚನೆಯಂತೆ ಎಲ್ಲ ರಾಜರುಗಳಿಗೂ ಓಲೆ ಕಳಿಸಲಾಯಿತು. ಅವರುಗಳು ಸೈನ್ಯ ಸಮೇತ ಬರತೊಡಗಿದರು.
ಯುದ್ಧಕ್ಕೆ ಸಿದ್ಧತೆ ಭರದಿಂದ ಸಾಗಿತು. ರಥದ ಗಾಲಿಯ ಕೀಲು ನೋಡುವವರು, ಕುದುರೆಗಳಿಗೆ ಲಾಳ ಹಾಕುವವರು, ಆಯುಧಗಳನ್ನು ಮಸೆಯುವವರು, ಬಿಲ್ಲುಬಾಣಗಳನ್ನು ಮಾಡುವವರು, ಗುಡಾರ ನಿರ್ಮಿಸುವವರು ಹೀಗೆ ಹಲವಾರು ಕಾರ್ಮಿಕರು ಹಗಲಿರುಳು ದುಡಿದರು.
ಭೂಮಿ ಬಿರಿಯಿತೆನ್ನುವಂತೆ ಸೈನ್ಯವು ಸೇರತೊಡಗಿತು. ಕೃಷ್ಣನ ಜೊತೆಗೆ ಧರ್ಮಜನು ಸೈನ್ಯವನ್ನು ವೀಕ್ಷಿಸಿದನು. ಅಪರಿಮಿತ ಸಂಖ್ಯೆಯಲ್ಲಿ ರಥಗಳು, ಕುದುರೆಗಳು, ಗಜಪಡೆ, ಕಾಲಾಳುಗಳು, ಯುದ್ಧ ಸಾಮಗ್ರಿಗಳು, ಬಂಡಿಗಳು ಮುಂತಾದವನ್ನು ನೋಡುತ್ತಾ ಬಂದರು. ಇವರಿಗೆ ದ್ರುಪದನು ತನ್ನ ಒಂದು ಅಕ್ಷೋಹಿಣಿ ಬಲವನ್ನು ತೋರಿಸಿದನು. ಹೀಗೆಯೇ ವಿರಾಟ, ಕಾಶೀರಾಜ, ಶಂಖ, ಸೋಮಕ, ಕುಂತೀಭೋಜ, ಧೃಷ್ಟಕೇತು ಮೊದಲಾದವರು ತಮ್ಮ ತಮ್ಮ ಸೈನ್ಯದ ಬಲವನ್ನು ವಿವರಿಸಿದರು. ಏಳು ಅಕ್ಷೋಹಿಣಿ ಸೈನ್ಯ ಸೇರಿತ್ತು. ಇನ್ನೂ ಹಲವರು ಮಿತ್ರರ ಸಹಾಯ ಒದಗಿ ಬರುತ್ತಲೇ ಇತ್ತು. ಅಂಗಾರವರ್ಮ, ಚಿತ್ರಸೇನ, ಘಟೋತ್ಕಚ ಮುಂತಾದವರು ಬಂದು ಸೇರಿಕೊಂಡರು.
ಧರ್ಮಜನು ಕೃಷ್ಣನೊಂದಿಗೆ ಪರಿಮಿತ ಸಂಖ್ಯೆಯಲ್ಲಿ ಆಪ್ತರನ್ನು ಕರೆಸಿಕೊಂಡು ಸೇನಾಪತಿ ಪಟ್ಟವನ್ನು ಯಾರಿಗೆ ಕೊಡುವುದೆಂದು ಆಲೋಚಿಸಿದನು.ದ್ರುಪದ, ವಿರಾಟ, ಶಿಖಂಡಿ,ಘಟೋತ್ಕಚ ಮುಂತಾದ ಹೆಸರುಗಳು ಬಂದವು. ಕೊನೆಯಲ್ಲಿ ಅರ್ಜುನನು ದ್ರುಪದನ ಮಗ ಧೃಷ್ಟದ್ಯುಮ್ನನ ಹೆಸರು ಸೂಚಿಸಿದನು. ಅದು ಎಲ್ಲರಿಗೂ ಸಮ್ಮತವಾಯಿತು. ಕೂಡಲೇ ಅವನಿಗೆ ಸೇನಾಪತಿಯ ಪಟ್ಟ ಕಟ್ಟಿದರು.
ಸುಮುಹೂರ್ತದಲ್ಲಿ ಸೇನೆ ವ್ಯವಸ್ಥಿತವಾಗಿ ಹೊರಟಿತು. ಕುರುಕ್ಷೇತ್ರ ತಲುಪಿದ ಸೇನೆ ಆಯಕಟ್ಟಿನ ಸ್ಥಳದಲ್ಲಿ ಬಿಡಾರ ಹೂಡಿದರು. ಪ್ರತಿಯೊಬ್ಬರಿಗೂ ಅವರವರ ಸ್ಥಾನಗೌರವ ಮತ್ತು ಜವಾಬ್ದಾರಿಯನ್ನು ಗಮನದಲ್ಲಿ ಇಟ್ಟುಕೊಂಡು ಬಿಡಾರಗಳನ್ನು ರಚಿಸಿದರು. ಕಾವಲಿನವರನ್ನು ನಿಯಮಿಸಿದರು. ಸೈನ್ಯಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಲಾಯಿತು. ಶತ್ರುಗಳು ನುಸುಳದ ಹಾಗೆ ಬಿಗಿಯಾದ ಭದ್ರತೆ ಮಾಡಿದರು. ಹೀಗೆ ನಾರಾಯಣನ ಕೃಪೆಯಿಂದ ಎಲ್ಲ ಸಿದ್ಧತೆಗಳು ನಡೆದವು.
ಉದ್ಯೋಗಪರ್ವ ಸುಸಂಪನ್ನವಾಯಿತು

ಕಾಮೆಂಟ್‌ಗಳು