ಭಾರತಕಥಾಮಂಜರಿ80
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಉದ್ಯೋಗ ಪರ್ವ - ಹನ್ನೊಂದನೆಯ ಸಂಧಿ
ಸೆಣಸುವದಟರ ಗಂಡ ಸಮರಾಂ
ಗಣಕತುಳ ಭೇರುಂಡನಾ ದಿನ
ಮಣಿಯ ಮಗನುದ್ದಂಡ ಕರ್ಣನ ಕಂಡಳಾ ಕುಂತಿ
ಯೋಧರಲ್ಲಿ ಅತಿ ಬಲನೂ, ಯುದ್ಧರಂಗದಲ್ಲಿ ಅಜೇಯವಾದ ಗಂಡಭೇರುಂಡಪಕ್ಷಿಯಂತಿರುವವನೂ ಆದ ಸೂರ್ಯಪುತ್ರ ಕರ್ಣನನ್ನು ಕುಂತಿಯು ನೋಡಿದಳು.
ಒಲಿದವರನುಜ್ಜೀವಿಸುವ ಬಗೆ
ಬಲುಹು ಮುರಮಥನಂಗೆ ಮುನಿದೊಡೆ
ತಲೆಯ ಬರಹವ ತೊಡೆವನಲ್ಲದೆ ಬಳಿಕ ಸೈರಿಸನು
ನಳಿನನಾಭನು ಭಜಕರಿಗೆ ಬೆಂ
ಬಳಿಯ ಬಿರುದನು ಭೇದದಲಿ ಕುರು
ಕುಲವ ಕೊಂದನು ಕೇಳು ಜನಮೇಜಯ ಮಹೀಪಾಲ ೧
ಇನ ತನೂಜನ ಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನೆಯೆ ದೇವ ಮುರಾರಿಯಂಜುವೆ
ನೆನಲು ತೊಡೆಸೋಂಕಿನೊಳು ಸಾರಿದು ಶೌರಿಯಿಂತೆಂದ ೨
ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯದ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದಿಲ್ಲರಿವೆನುತೆ ದಾನವ
ಸೂದನನು ರವಿಸುತನ ಕಿವಿಯೊಳು ಬಿತ್ತಿದನು ಭಯವ ೩
ದಾನವಾಂತಕ ಬೆಸಸು ವಂಶ ವಿ
ಹೀನನನು ನಿಮ್ಮಡಿಗಳೊಡನೆ ಸ
ಮಾನಿಸುವರೇ ಸಾಕೆನುತ ತಲೆವಾಗಿ ಕೈಮುಗಿಯೆ
ಮಾನ ನಿಧಿಯೆನ್ನಾಣೆ ಬಾರೈ
ನೀನು ನಮ್ಮೆಲ್ಲರ ಹವಣೆ ವರ
ಭಾನುವಂಶಲಲಾಮ ನೀಂ ರಾಮಂಗೆ ಸರಿಯೆಂದ ೪
ಕಳೆದುಕೊಂಡನು ವೀಳೆಯವನಂ
ಜುಳಿಯೊಳಾತಂಗಿತ್ತು ಕರ್ಣನ
ಕೆಲಕೆ ಬರಸೆಳೆದವನ ಕರದೊಳು ಕರತಳವನಿಕ್ಕಿ
ಎಲೆ ದಿವಾಕರ ತನಯ ನಿನ್ನಯ
ಕುಲವನರಿಯೆಯಲಾ ಸುಯೋಧನ
ನೊಳು ವೃಥಾ ಸೇವಕ ತನದೊಳಿಹುದುಚಿತವಲ್ಲೆಂದ ೫
ಲಲನೆ ತಾಂ ಪಡೆದೈದು ಮಂತ್ರಂ
ಗಳೊಳು ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರ ದೇವ ಮೂರನೆಯಾತ ಕಲಿ ಭೀಮ
ಫಲುಗುಣನು ನಾಲನೆಯಲೈದನೆ
ಯೊಳು ನಕುಲ ಸಹದೇವರಾದರು
ಬಳಿಕ ಮಾದ್ರಿಯೊಳೊಂದು ಮಂತ್ರದೊಳಿಬ್ಬರುದಿಸಿದರು ೬
ಅದರಿನಾ ಪಾಂಡವರೊಳೈವರ
ಮೊದಲಿಗನು ನೀನಿರಲು ಧರಣಿಯ
ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು
ಇದು ನಿದಾನವು ಕರ್ಣ ನಿನ್ನ
ಭ್ಯುದಯವನೆ ಬಯಸುವೆನು ನಿನ್ನಯ
ಪದಕೆ ಕೆಡಹುವೆನೈವರನು ಬಹುದೆನ್ನ ಸಂಗಾತ ೭
ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಕೌರವ
ಜನಪ ಪಾಂಡವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರ್ಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ ೮
ಎಡದ ಮೈಯೊಳು ಕೌರವೇಂದ್ರನ
ಗಡಣ ಬಲದೊಳು ಪಾಂಡುಪುತ್ರರ
ಗಡಣವಿದಿರೊಳು ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸವ ಬಿಸುಟು ಕುರುಪತಿ
ನುಡಿಯೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ೯
ಶೌರಿಯದೊಳಿದಿರಿಲ್ಲ ಕುಲದೊಳು
ಸೂರಿಯನ ಸುತನೊಡನೆ ಹುಟ್ಟಿದ
ವೀರರಗ್ಗದ ಪಾಂಡುತನಯರು ನಿನ್ನ ವೈಭವಕೆ
ಆರು ಸರಿಯೈ ಕರ್ಣ ನಡೆ ನಡೆ
ಧಾರಿಣೀಪತಿಯಾಗಿ ನೀನಿರೆ
ವೈರವಿತ್ತಂಡಕ್ಕೆ ಬಳಿಕಿಲ್ಲೆಂದನಸುರಾರಿ ೧೦
ಕೊರಳ ಸೆರೆ ಹಿಗ್ಗಿದವು ದೃಗುಜಲ
ವುರವಣಿಸೆ ಕಡುನೋಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ಜನನವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ೧೧
ಕಾದಿ ಕೊಲುವೊಡೆ ಪಾಂಡು ಸುತರು ಸ
ಹೋದರರು ಕೊಲಲಿಲ್ಲ ಕೊಲ್ಲದೆ
ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ
ಭೇದದೊಳು ಹೊಕ್ಕಿರಿದನೋ ಮಧು
ಸೂದನನು ತಾನಕಟೆನುತೆ ಚಿಂ
ತೋದಧಿಯೊಳದ್ದಂತೆ ಮೌನದೊಳಿರ್ದನಾ ಕರ್ಣ ೧೨
ಏನು ಹೇಳೈ ಕರ್ಣ ಚಿತ್ತ
ಗ್ಲಾನಿಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ದು
ಮ್ಮಾನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ ೧೩
ಮರುಳು ಮಾಧವ ಸಕಲ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ರಿಪುಗಳ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ೧೪
ಒಡನೆ ಹುಟ್ಟಿದರೆಂಬ ಕಥನವ
ನೆಡೆಗುಡದೆ ಬಣ್ಣಿಸಿದೆ ಪಾಂಡವ
ರಡಗು ಬಾಣಕೆ ಬಲಿಯೆನಿಪ್ಪೀ ಛಲವ ಮಾಣಿಸಿದೆ
ನುಡಿದ ಫಲವೇನಿನ್ನು ಕೌರವ
ರೊಡೆಯನಾದಂತಹೆನು ಬಾರೆನು
ಪೊಡವಿಯೊಳು ನೀಂ ಹರಹಿಕೊಳು ನಿನ್ನವರ ನಿಲಿಸೆಂದ ೧೫
ಹಲವು ಮಾತೇನಖಿಳಜನವೆ
ನ್ನುಳಿವ ಸಹಿಸದು ಕೌರವೇಶ್ವರ
ನೊಲವು ತಪ್ಪಿದ ಬಳಿಕ ಜಗದೊಳಗಾಪ್ತಜನವಿಲ್ಲ
ಸಲಹಿದನು ಮನ್ನಣೆಯೊಳೆನಗ
ಗ್ಗಳಿಕೆಯಲ್ಲದೆ ಹೀನವೃತ್ತಿಯ
ಬಳಸಿ ನಡೆಸನು ಕೌರವೇಂದ್ರನನೆಂತು ಮರೆದಪೆನು ೧೬
ನೋಡಿ ದಣಿಯನು ನಿಚ್ಚಲುಚಿತವ
ಮಾಡಿದಣಿಯನು ಬಿರುದ ಹೊಗಳಿಸಿ
ಹಾಡಿ ದಣಿಯನು ಮಾನನಿಧಿಯನದೆಂತು ಮರೆದಪೆನು
ಕಾಡಲಾಗದು ಕೃಷ್ಣ ಖಾತಿಯ
ಮಾಡಲಾಗದು ಬಂದೆನಾದೊಡೆ
ರೂಢಿ ಮೆಚ್ಚದು ಕೌರವನ ಹಗೆ ಹರಿಬವನೆಗೆಂದ ೧೭
ವೀರ ಕೌರವ ರಾಯನೇ ದಾ
ತಾರನಾತನ ಹಗೆಯೆ ಹಗೆ
ಕೈವಾರವೇ ಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆ ಸಮರದ
ಭಾರದೊಳು ತೋರುವೆನು ನಿಜಭುಜ
ಶೌರಿಯದ ಸಂಪನ್ನತೆಯನಾ ಪಾಂಡುತನಯರೊಳು ೧೮
ಅರುಣ ಜಲದಾಜ್ಯದೊಳು ಬಂಬಲು
ಗರುಳ ಚರುವಿನೊಳೆಲುವಿನೊಟ್ಟಿಲ
ಬೆರಳ ಸಮಿಧೆಯೊಳಡಗಿನಖಿಳಾಹುತಿಯ ರಚನೆಯೊಳು
ನರಕಪಾಲದ ಪಾತ್ರೆಯೊಳು ನಿಡು
ದೆರಳೆಗಳ ಕೇಶದ ಸುದರ್ಭಾಂ
ಕುರದೊಳಾಹವ ಯಜ್ಞದೀಕ್ಷಿತನಹೆನು ತಾನೆಂದ ೧೯
ಮಾರಿಗೌತಣವಾಯ್ತು ನಾಳಿನ
ಭಾರತವು ಬಹು ಜೀವಹರವೀ
ಕೌರವನ ಋಣ ಹಿಂಗೆ ರಣದೊಳು ಸುಭಟ ಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ಧೀರರೈವರ ನೋಯಿಸೆನು ರಾಜೀವಸಖನಾಣೆ ೨೦
ಎನಲು ಕರ್ಣನ ದೃಢವ ಕಂಡನು
ಮನದೊಳುತ್ಸಾಹಿಸಿದನಾದಡೆ
ಯನುಜರೈವರ ಹದನು ನಿನ್ನದು ಬಲುಹ ಮಾಡಿದೊಡೆ
ಮನಕೆ ಖತಿಯಹುದುರುಹದಿರ್ದೊಡೆ
ತನಗೆ ಗುಣವಲ್ಲೆಂಬ ಕಾರಣ
ವಿನಿತನಾನರುಹಿದೆನು ನೀ ಸುಖಿಯಾಗು ಹೋಗೆಂದ ೨೧
ಬಂದೊಡೊಳ್ಳಿತು ಬಾರದಿದ್ದೊಡೆ
ಕಂದ ಕೇಳೈ ಮಧುರವಚನದೆ
ಮಂದಮತಿಯನು ತಿಳುಹಿ ತಮ್ಮಂದಿರಿಗೆ ರಾಜ್ಯವನು
ಇಂದು ಕೊಡಿಸುವುದುಚಿತ ಸಂಪ್ರತಿ
ಗಿಂದು ಸೇರಿಸು ನಿನ್ನ ಮಾತನು
ಹಿಂದುಗಳೆಯನು ಕೌರವೇಶ್ವರನೆಂದನಸುರಾರಿ ೨೨
ಮಸೆದುದಿತ್ತಂಡಕೆ ಮತ್ಸರ
ವಸಮಸಂಗರರೀಗ ಸಂಧಿಯ
ನುಸಿರಿದೊಡೆ ಮನಗಾಣನೇ ಕೌರವ ಮಹೀಶ್ವರನು
ವಿಷಮನಹ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ಬೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ ೨೩
ಕಳುಹಬೇಹುದು ದೇವ ದಿನಪತಿ
ಯಿಳಿದನಪರಾಂಬುಧಿಗೆ ಸಂಪ್ರತಿ
ಯಳಿದ ಹೊತ್ತಿಂದೀಗ ನೆಟ್ಟನೆ ನೀವು ಪಾಂಡವರು
ಹುಲುಸರವಿ ಹಾವಹುದು ಹುತ್ತಿನ
ಬಳಿಯೊಳಿರಲಜ್ಞರಿಗೆ ಹಿಸುಣರ
ಬಳಕೆ ಹೊಗುವುದು ಕಳುಹಬೇಕೆಂದಂಘ್ರಿಗೆರಗಿದನು ೨೪
ಬೀಳುಕೊಂಡನು ಮನೆಗೆ ಬಂದು ವಿ
ಶಾಲಮತಿ ಚಿಂತಿಸಿದನಾ ಸಿರಿ
ಲೋಲ ಮಾಡಿದ ಮಂತ್ರ ಮನದೊಳು ನಟ್ಟು ಬೇರ್ವರಿಯೆ
ಕಾಳುಮಾಡಿದನಕಟ ಕುರುಪತಿ
ಬಾಳಲರಿಯದೆ ಕೆಟ್ಟನೀ ಗೋ
ಪಾಲ ಬರಿದೇ ಬಿಡನು ಜೀವವ ಕೊಳ್ಳದಿರನೆಂದ ೨೫
ದನುಜರಿಪು ತನಗೊರೆದ ಮಂತ್ರವ
ನಿನಸುತನು ಚಿಂತಿಸುತೆ ನಿದ್ರಾಂ
ಗನೆಯನುಳಿದನು ಕೌರವೇಂದ್ರಂಗಾಪ್ತರಿಲ್ಲೆನುತೆ
ಮನದೊಳಿರುಳು ವಿಚಾರಿಸುತ್ತಿರೆ
ವನಜವರಳಿದವಂದು ನೈದಿಲು
ಮನವನಿಳುಹಲು ಸೂರ್ಯನಡರಿದನುದಯ ಪರ್ವತವ ೨೬
ವೀರ ರವಿಸುತನೊಂದು ದಿನ ರವಿ
ವಾರದೊಳು ಪರಿತೋಷಮಿಗೆ ಭಾ
ಗೀರಥೀ ತೀರದೊಳು ತಾತಂಗರ್ಘ್ಯವನು ಕೊಟ್ಟು
ಸೌರಮಂತ್ರವ ಜಪಿಸುತಿರಲೌ
ದಾರಿಯದ ಸುರತರುವ ಕುಂತೀ
ನಾರಿ ಕಾಣಲು ಬಂದಳಾತ್ಮಜನಿದ್ದ ನದಿಗಾಗಿ ೨೭
ಬರಲು ತಾಯ್ಗಿದಿರಾಗಿ ರವಿಸುತ
ನಿರದೆ ಬಂದನು ದಂಡದಂತಿರೆ
ಚರಣದೊಳು ಮೈಯಿಕ್ಕಲಾತನ ನೊಸಲ ನೆಗಹಿದಳು
ಬರಸೆಳೆದು ಬಿಗಿಯಪ್ಪಿದಳು ನೀ
ರುರವಣಿಸಿದುದು ನಯನದೊಳು ಸೆರೆ
ಕೊರಳಿಗೌಕಿದುದಳಲಿನಬುಧಿಯೊಳಿದ್ದಳಾ ಕುಂತಿ ೨೮
ಆ ಸಮಯದೊಳು ಗಂಗೆ ನಾರೀ
ವೇಷದೊಳು ನಡೆತಂದಳೆಲೆ ಕುಂ
ತೀ ಸತಿಯೆ ಕೈಯೆಡೆಯ ಕಂದನನೊಪ್ಪುಗೊಳು ನೀನು
ಈಸುದಿನಮಿವನಾಗು ಹೋಗಿನ
ಗಾಸಿಯನು ಸಲೆ ಯಾದೆನೆನ್ನಯ
ಭಾಷೆಸಂದುದೆನುತ್ತೆ ತಾಯಿಗೆ ಕೊಟ್ಟಳಾತ್ಮಜನ ೨೯
ಇರಲಿರಲು ರವಿ ಬಂದನೆಕ್ಕಟಿ
ಗರೆದನೀತನ ಕಿವಿಯೊಳೆಲ್ಲವ
ನೊರೆದ ನಿನಗೆಲೆ ಮಗನೆ ಕುಂತೀ ದೇವಿ ತಾಯಹಳು
ಮುರಹರನ ಮತದಿಂದ ನಿನ್ನಯ
ಸರಳ ಬೇಡಲು ಬಂದಳಂದಾ
ಹರಿಗೆ ಕವಚವನಿತ್ತವೊಲು ಮರುಳಾಗಬೇಡೆಂದ ೩೦
ಬೆಸಸಿದುದಕೆ ಹಸಾದವೆಂದನು
ಬಿಸಜ ಬಂಧುವ ಕಳುಹಿದನು ಮ
ನ್ನಿಸಿದನಿತ್ತಲು ಮಾತೆಯನು ಭಯ ಭರಿತ ಭಕ್ತಿಯೊಳು
ಒಸೆದು ಬಿಜಯಂಗೈದ ಹದನೇ
ನುಸಿರಬೇಹುದು ತಾಯಿಯೆನೆ ಶೋ
ಕಿಸುತೆ ನುಡಿದಳು ಕುಂತಿ ಕರ್ಣನ ತೆಗೆದು ಬಿಗಿಯಪ್ಪಿ ೩೧
ಮಗನೆ ತಮ್ಮಂದಿರನು ಪಾಲಿಸು
ವಿಗಡತನವನು ಮಾಣು ಪರರೋ
ಲಗವ ನೀಂ ಮಾಡುವುದೆ ನಿನಗಿತ್ತಂಡವನುಜರಲೇ
ಸೊಗಸು ನಾನೆಂದುದನು ಪಿಸುಣರ
ಹಗೆನುಡಿಯ ಕೇಳದಿರು ಪಟ್ಟವ
ಬಿಗಿಸಿಕೊಳು ಸಲಿಸೆನ್ನ ವಚನವನೆಂದಳಾ ಕುಂತಿ ೩೨
ತಾಯಹುದು ನಾಂ ಬಲ್ಲೆನಿದನಾ
ಕಾಯಜನ ಪಿತನರುಹೆ ತಿಳಿದೆನು
ರಾಯರಿತ್ತಂಡಕ್ಕೆ ಪಟ್ಟದ ಹಿರಿಯ ತಾನಹುದು
ರಾಯನೆನ್ನನು ನಚ್ಚಿ ಹೊರೆದನು
ಸಾಯಲಳುಕುವೆನೇ ಸುಡೇತರ
ದೀಯವನಿಬಾಳಿಕೆ ಕೃತಘ್ನರಿಗಿಲ್ಲಗತಿಯೆಂದ ೩೩
ಮಕ್ಕಳೈವರಿಗಾಂ ಹಿರಿಯನಿದು
ತಕ್ಕ ಮಾತೆಲೆ ತಾಯೆ ಸಂದೇ
ಹಕ್ಕೆ ನೆಲೆಯಿಲ್ಲದು ನಿಲಲಿ ಧಾರಿಣಿಯ ಬಯಸುವೊಡೆ
ತಕ್ಕುದೇ ದಾತಾರನರಸಿಯೊ
ಳೊಕ್ಕತನವಿರಲಾರು ಮೆಚ್ಚುವ
ರಕ್ಕ ಹೇಳೌ ಹೇಸಳೇ ಜಯಲಕ್ಷ್ಮಿ ತನಗೆಂದ ೩೪
ಇಂದು ನೀವರುಹಿದ ಬಳಿಕ ರವಿ
ನಂದನನೆ ಎಂದರಿದೆನಲ್ಲದೆ
ಹಿಂದೆ ದುರ್ಯೋಧನನದಾವುದ ನೋಡಿ ಸಲಹಿದನು
ಬಂದು ಪಾಂಡವರೊಡನೆ ಕೂಡಿದೊ
ಡಿಂದು ಬಹುದಪಕೀರ್ತಿ ತಮ್ಮಡಿ
ಬಂದ ಕಾರ್ಯವ ಬೆಸಸಿ ಬೇಗದೊಳೆಂದನಾ ಕರ್ಣ ೩೫
ಆದೊಡೈವರು ಮಕ್ಕಳನು ತಲೆ
ಗಾದು ತೋರೈ ಕಂದ ನಿನಗೇ
ನೀ ದುರಾಗ್ರಹವೊಪ್ಪುವುದೆ ಕೌರವನ ಸೇವೆಯೊಳು
ಹೋದ ಬಾಣವ ಮರಳಿ ತೊಡದಿರು
ಮಾದು ಕಳೆ ವೈರವನೆನಲ್ಕೆ ಹ
ಸಾದವೆಂದನು ಬೀಳುಕೊಂಡನು ಬಂದನರಮನೆಗೆ ೩೬
ಸಂಕ್ಷಿಪ್ತ ಭಾವ
ಯಾರು ಕೃಷ್ಣನಲ್ಲಿ ಅನನ್ಯ ಭಕ್ತಿಯನ್ನು ತೋರುತ್ತಾರೆ ಅವರನ್ನು ಪ್ರಾಣವಿತ್ತು ಬದುಕಿಸಬೇಕೆಂಬಸಂಕಲ್ಪವು ಕೃಷ್ಣನಲ್ಲಿ ಅತಿ ಪ್ರಬಲವಾಗಿತ್ತು. ಕೋಪಗೊಂಡರೆ ಹಣೆಬರಹವನ್ನೇಅಳಿಸಿಹಾಕಿಯಾದರೂ ಕೊಲ್ಲುವನೇ ಹೊರತು ಸಹಿಸಿಕೊಳ್ಳುವವನಲ್ಲ. ಕಮಲನಾಭನು ಭಕ್ತರಬೆನ್ನು ಹಿಂದೆ ನಿಂತು ಕಾಪಾಡುವವನೆಂಬ ಬಿರುದನ್ನು ಪಡೆದಿರುವವನು. ಭೇದೋಪಾಯದಿಂದಕೌರವ ಕುಲವನ್ನೇ ನಾಶಮಾಡಿದನು.
ಕರ್ಣನಿಗೆ ತನ್ನ ಜನ್ಮರಹಸ್ಯ ಕೃಷ್ಣನಿಂದ ತಿಳಿಯುವುದು. ಕುಂತಿಯು ಆತನನ್ನು ಭೇಟಿ ಮಾಡಿದಳು.
ಕೃಷ್ಣನು ಕರ್ಣನನ್ನು ಸರಸದಿಂದ ರಥದಲ್ಲಿ ಹತ್ತಿಸಿಕೊಂಡು ತನ್ನ ಸಮೀಪದಲ್ಲಿ ಪೀಠದಲ್ಲಿ ಕುಳ್ಳಿರಿಸಿಕೊಳ್ಳಲು ಕರ್ಣನು ಸಂಕೋಚದಿಂದ ನಾನು ನಿನ್ನ ಸರಿಸಮನಾಗಿ ಕೂರುವುದು ಸರಿಯೆ ಎಂದನು ವಿನಯದಿಂದ.
ಕರ್ಣಾ ನೀನು ರವಿಸುತನು. ಕುಂತಿಯು ಪಡೆದ ಐದು ಮಂತ್ರಗಳಲ್ಲಿ ಮೊದಲಿಗೆ ಜನಿಸಿದವ ನೀನು. ನಿನ್ನ ಬಳಿಕ ಉಳಿದವರು. ನೀನು ಕೌರವನ ಸಂಗ ಬಿಟ್ಟು ಬಾ. ನಿನ್ನನ್ನು ರಾಜನಾಗಿಸಿ ಉಳಿದವರು ಓಲೈಸುವರು. ಯುದ್ಧದ ಗೊಡವೆ ಬೇಡ. ದುರ್ಯೋಧನನು ನಿನ್ನ ಮಾತನ್ನು ಕೇಳುವನು. ಅವನನ್ನು ಸಂಧಿಗೆ ಒಡಂಬಡಿಸು ಎಂದೆಲ್ಲ ಹೇಳಲು ಕರ್ಣನಿಗೆ ಆಘಾತವಾಯಿತು. ಬೇಧದಲಿ ಹೊಕ್ಕು ಇರಿದನು ಇವನು. ತನ್ನ ಜನನವನರುಹಿ ಕೊಂದನು. ಕೌರವೇಂದ್ರನಿಗೆ ಕೇಡನ್ನು ತಂದನು ಎಂದು ಕರ್ಣ ವ್ಯಾಕುಲತೆಯಿಂದ ಚಿಂತಿಸಿದನು.
ಏಕೆ ಮೌನವಾಗಿರುವೆ? ಏನು ಚಿಂತೆ ಹೇಳೆನಲು ಇಷ್ಟು ದಿನಗಳು ಸಾಕಿದ, ಸ್ನೇಹವನ್ನು ತೋರಿದ ದುರ್ಯೋಧನನನ್ನು ಬಿಡಲಾರೆ. ಹಾಗೆ ಬಿಟ್ಟರೆ ಅಪಕೀರ್ತಿ. ರಾಜ್ಯದ ಸಿರಿಗೆ ನಾನು ಸೋಲುವವನಲ್ಲ. ಕೌರವರೊಂದಿಗೆ ಇರುವೆನು. ಆದದ್ದು ಆಗಲಿ. ಅವನು ನನ್ನನ್ನು ಪ್ರತಿದಿನವೂ ಗೌರವಿಸುವನು. ಪ್ರೀತಿಸುವನು. ಇನ್ನು ನನ್ನ ಶೌರ್ಯವೇನಿದ್ದರೂ ಅವನಿಗೆ. ನಿನ್ನ ಐವರನ್ನು ನೋಯಿಸೆನು ಎಂದು ಮಾತು ಕೊಡುತ್ತಿದ್ದೇನೆ. ಹೊತ್ತಾಯಿತು. ಕಳಿಸಿಕೊಡು ಎಂದು ಹೊರಟನು.
ಕರ್ಣನಿಗೆ ರಾತ್ರಿಯೆಲ್ಲ ನಿದ್ರೆಯಿಲ್ಲ. ಈಗ ಈ ಸಮಯದಲ್ಲಿ ಕೃಷ್ಣ ಮಾಡಿದ ಕೆಲಸದಿಂದ ಕೌರವರಿಗೆ ಕೇಡಾಯಿತು. ಹೋರಾಡಿದರೆ ತಮ್ಮಂದಿರ ವಿರುದ್ಧ. ಹೋರಾಡದಿದ್ದರೆ ಅನ್ನದ, ಸ್ನೇಹದ ಋಣ. ಇನ್ನು ದುರ್ಯೋಧನ ಉಳಿಯುವುದಿಲ್ಲ. ಕೃಷ್ಣ ಅವನನ್ನು ಕೊಂದುಬಿಟ್ಟ ಹೀಗೆಲ್ಲ ಕರ್ಣ ದುಃಖಿತನಾದನು.
ಒಂದು ದಿನ ಬೆಳಿಗ್ಗೆ ಕರ್ಣನು ಸೂರ್ಯನಿಗೆ ಅರ್ಘ್ಯ ಕೊಡುತ್ತಿರಲು ಕುಂತೀದೇವಿಯು ಅಲ್ಲಿಗೆ ಬಂದಳು. ರವಿಯು ತನ್ನ ಮಗನಿಗೆ ಕಿವಿಯಲ್ಲಿ ಮೈಮರೆಯಬೇಡವೆಂದು ಸೂಚಿಸಿದನು. ಗಂಗೆಯು ಸ್ತ್ರೀ ರೂಪದಲ್ಲಿ ಬಂದು ಕುಂತಿಗೆ ನಿನ್ನ ಮಗನನ್ನು ಒಪ್ಪಿಸಿದ್ದೇನೆ ಎಂದಳು. ತಾಯಿಗೆ ನಮಸ್ಕರಿಸಿದ ಕರ್ಣ ವಿಷಯ ಏನೆಂದು ಕೇಳಲು ಅವಳು ಕೃಷ್ಣನು ಹೇಳಿದಂತೆ ರಾಜನಾಗು ಎಂದಳು. ಕರ್ಣ ಒಪ್ಪಲಿಲ್ಲ.
ಕೌರವನು ನನ್ನನ್ನೇ ನಂಬಿ ಕಾಪಾಡಿದನು. ಅವನಿಗಾಗಿ ನಾನು ಸಾಯಲು ಅಳುಕುವೆನೇ? ಈ ಲೋಕದ ಬಾಳನ್ನು ಸುಡು, ಕೃತಘ್ನರಿಗೆ ಇದು ಸಲ್ಲದು ಸದ್ಗತಿಯೂ ಅವರಿಗಿಲ್ಲ ಎಂದು ಕರ್ಣನು ನೇರವಾಗಿ ತಿಳಿಸಿದನು. ದುರ್ಯೋಧನನು ನನ್ನನ್ನು ಇದುವರೆಗೆ ಪಾಲಿಸಿದ್ದಾನೆ. ಬಿಡಲಾರೆನೆಂದನು. ಅಪಕೀರ್ತಿಗೆ ಒಳಗಾಗಲಾರೆ ಎಂದನು.
ಕೊನೆಗೆ ಒಮ್ಮೆ ಬಿಟ್ಟಬಾಣವನ್ನು ಮರಳಿ ತೊಡದಿರು ಎಂದು ಹೇಳಿ ವಚನವನ್ನು ತೆಗೆದುಕೊಂಡು ಕುಂತಿ ಹೊರಟಳು.

ಕಾಮೆಂಟ್‌ಗಳು