ವೀಣಾ ಕಿನ್ಹಾಳ್
ವೀಣಾ ಕಿನ್ಹಾಳ್
ವಿದುಷಿ ವೀಣಾ ಕಿನ್ಹಾಳ್ ವೀಣಾ ವಾದಕಿಯಾಗಿ ಮತ್ತು ಸಂಗೀತಲೋಕದ ಸಾಧಕಿಯಾಗಿ ಹೆಸರಾದವರು. ಮಹಾನ್ ಸಂಗೀತಜ್ಞ, ಕಲಾವಿದ, ಬರಹಗಾರರಾದ ವೀಣೆ ರಾಜಾರಾಯರ ಸುಪುತ್ರಿ.
ವೀಣಾ ಕಿನ್ಹಾಳ ಅವರು 1953ರ ಏಪ್ರಿಲ್ 16ರಂದು ಜನಿಸಿದರು. ಇವರು ವೀಣೆ ರಾಜಾರಾಯರು ಮತ್ತು ಇಂದಿರಾಬಾಯಿ ಅವರ ಹತ್ತು ಮಕ್ಕಳಲ್ಲಿ ಮೊದಲ ಮಗಳು. ಅವರು ಬೆಂಗಳೂರಿನ ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿ ಹುಟ್ಟಿ ಬೆಳೆದದ್ದು.
ವೀಣಾ ಬಾಲಪ್ರತಿಭೆ. ಐದು ವರ್ಷದ ಬಾಲೆಯಾಗಿದ್ದಾಗಲೇ ರಾಗಗಳನ್ನು ಗುರುತಿಸುತ್ತಿದ್ದರು. ಶಾಲೆ ಕಾಲೇಜು ದಿನಗಳಲ್ಲಿ ಎಲ್ಲ ಸಂಗೀತ ಸ್ಪರ್ಧೆಗಳಲ್ಲೂ ಇವರಿಗೇ ಪ್ರಥಮ ಬಹುಮಾನ. ಕರ್ನಾಟಕ ಸಂಗೀತದ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಮೂರೂ ಪರೀಕ್ಷೆಗಳಲ್ಲಿ ಪ್ರಥಮ ರ್‍ಯಾಂಕ್ ಸಾಧನೆ ಮಾಡಿದ ದಾಖಲೆ ಅವರದ್ದು. ಬಿ.ಎ. ಪದವಿಯಲ್ಲೂ ಚಿನ್ನದ ಪದಕ ಪಡೆದರು.
ವೀಣಾ ಅವರನ್ನು ಎರಡೂವರೆ ವರ್ಷಕ್ಕೇ ಆಚಾರ್ಯ ಪಾಠಶಾಲೆಯ ಒಂದನೇ ತರಗತಿಗೆ ಸೇರಿಸಿದ್ದರಿಂದ (ಅವರ ಸಹೋದರಿ ಪೂರ್ಣಿಮಾ ರಾಜಾರಾವ್ ಕೂಡಾ ಹಾಗೇ) 19 ವರ್ಷಕ್ಕೇ ಬಿ.ಎ., ಬಿ.ಎಡ್ ಮಾಡಿ ತಾವು ಓದಿದ ಪ್ರೌಢಶಾಲೆಯಲ್ಲೇ ಶಿಕ್ಷಕಿ ಆದರು.
ವೀಣಾ ಅವರಿಗೆ 20 ವರ್ಷ ತುಂಬುವ ಮೊದಲೇ ಅಮೆರಿಕದಲ್ಲಿದ್ದ ಇಂಜಿನಿಯರ್ ಜಯತೀರ್ಥ ಕಿನ್ಹಾಳ ಅವರೊಂದಿಗೆ ಮದುವೆ ಆಯಿತು. ಇಬ್ಬರು ಹೆಣ್ಣುಮಕ್ಕಳು ಭರತನಾಟ್ಯ ಕಲಾವಿದೆಯರು.
ವೀಣಾ ಅವರು 50 ವರ್ಷಗಳಿಂದ ಅಮೆರಿಕದಲ್ಲೇ ವಾಸವಿದ್ದಾರೆ. ಅವರು ಕ್ಯಾಲಿಫೋರ್ನಿಯದ ಸ್ಯಾನ್ ಡಿಯಾಗೋನಲ್ಲಿ ಸಂಗೀತ ಪಾಠ ಹೇಳಿಕೊಡುವ ಶಿಕ್ಷಕಿಯಾಗಿದ್ದಾರೆ.
ವೀಣಾ ಅವರಿಗೆ ಗಾನ ಕಲಾ ಪರಿಷತ್ತಿನ ಗಾನ ಕಲಾ ಕಸ್ತೂರಿ ಬಿರುದೂ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಅವರ ವೀಣಾ ವಿಹಾರ ಮತ್ತು ವೀಣಾ ವೈಭವ ಆಲ್ಬಮ್‍ಗಳು ಕಲಾ ವಿಮರ್ಶಕರಿಂದ ಮತ್ತು ಕಲಾ ರಸಿಕರಿಂದ ಅಪಾರ ಗೌರವ ಗಳಿಸಿವೆ.
ವೀಣಾ ಕಿನ್ಹಾಳ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕೃತಜ್ಞತೆ: Poornima Rajarao 🌷🙏🌷
Veena Kinhal
ಕಾಮೆಂಟ್‌ಗಳು