ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಛಾಯಾ ಶ್ರೀವತ್ಸ


 ಛಾಯಾ ಶ್ರೀವತ್ಸ ನಿಧನ


ಕಾರ್ಪೋರೇಟ್ ವಲಯದಲ್ಲಿ ಸಾರ್ವಜನಿಕ ಸಂಪರ್ಕ, ಜೀವನ ಶಿಕ್ಷಣ ಮತ್ತು ತರಬೇತಿ ಹಾಗೂ ಸಮಾಜಮುಖಿಯಗಿ ಸ್ತ್ರೀಸಬಲೀಕರಣ ಚಟುವಟಿಕೆಗಳಲ್ಲಿ ಹೆಸರಾಗಿದ್ದ ಛಾಯಾ ಶ್ರೀವತ್ಸ ಅವರು ನಿಧನರಾಗಿದ್ದಾರೆ.  ಅವರಿಗೆ 78 ವರ್ಷ ವಯಸ್ಸಾಗಿತ್ತು. 

ಛಾಯಾ ಅವರು ಮೂಲತಃ ಮೈಸೂರಿನವರು.  ಬೆಂಗಳೂರು ಮತ್ತು ಮುಂಬೈನಲ್ಲಿ ಉನ್ನತ ಶಿಕ್ಷಣ ಗಳಿಸಿದರು. ಎಂಬತ್ತರ ದಶಕದಲ್ಲಿ ಬಾಂಬೆ  ಆಕಾಶವಾಣಿ ಮತ್ತು ಹಲವು ನಿಯತಕಾಲಿಕಗಳಿಗೆ ಪ್ರಸಿದ್ಧ ಸಿನೆಮಾ ತಾರೆಯರ ಸಂದರ್ಶನ ಮಾಡಿದ್ದರು.  ಮುಂಬೈನ ಪ್ರತಿಷ್ಠಿತ ತಾಜಮಹಲ್ ಹೋಟೆಲಿನ  "inhouse journal ” ಸಂಪಾದಕರಾಗಿದ್ದರು. ಜಾಹಿರಾತು ಮತ್ತು ಮಾಡೆಲ್ಲಿಂಗ್ ನಲ್ಲಿಯೂ ಹೆಸರು ಮಾಡಿದ್ದರು. ಡೆಕ್ಕನ್  ಹೆರಾಲ್ಡ್  ನಲ್ಲಿ ಅವರ “notes from new york“ ಅಂಕಣ ಜನಪ್ರಿಯವಾಗಿತ್ತು. ಬಿಬಿಸಿಯ ಧಾರಾವಾಹಿಯೊಂದಕ್ಕೆ  ಸಾಹಿತ್ಯ  ಬರೆದಿದ್ದರು.  ಬೆಂಗಳೂರಿನಲ್ಲಿ “ಬ್ಲಾಸಂ ಸಿಟಿ” ಎಂಬ ಮೊದಲ ಸಿಟಿ ಮ್ಯಾಗಝಿನ್ ಆರಂಭಿಸಿದ್ದರು. ಎಚ್ಎಂಟಿ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ  ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದರು. ಇನ್ಫೋಸಿಸ್ನಲ್ಲಿ “life coach“ ಆಗಿದ್ದರು. 

ಛಾಯಾ ಶ್ರೀವತ್ಸ ಅವರ ಕೃತಿಗಳಾದ Corporate Droupadi, No-Nonsense Analysis, 16 Simple steps to become a confident woman, How to manage your husband ಮುಂತಾದವು ಹೆಸರಾಗಿದ್ದವು.

ಸ್ತ್ರೀಸಬಲೀಕರಣದ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದ ಛಾಯಾ ಅವರು ಹಲವು ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡ Guild of Women Achievers ಎಂಬ ಸಂಘಟನೆ ಮೂಡಿಸಿ ಗ್ರಾಮೀಣ ಮಹಿಳೆಯರ ಕರಕುಶಲ ಕಲೆಗಳಿಗೆ ಬೆಂಬಲವಾಗುವಂತಹ 'ನಾರೀಲೋಕ' ಎಂಬ ಮಳಿಗೆಗಳು ಮೂಡಲು ಶ್ರಮಿಸಿದ್ದರು.  

ಆಧ್ಯಾತ್ಮಿಕ ಪ್ರವೃತ್ತಿಯನ್ನೂ ರೂಡಿಸಿಕೊಂಡಿದ್ದ ಛಾಯಾ ಅವರು ಇತ್ತೀಚಿನವರ್ಷಗಳಲ್ಲಿ ಕಾವಿ ಬಣ್ಣದ ವಸ್ತ್ರಧಾರಿಯಾಗಿದ್ದರು. ಪ್ರತಿ ವರ್ಷ ಅಮೆರಿಕದ ನ್ಯೂಜೆರ್ಸಿ  ಸಮೀಪದ ಆಶ್ರಮದಲ್ಲಿ ಆಧ್ಯಾತ್ಮಿಕ ಶಿಬಿರದಲ್ಲಿ ಭಾಗವಹಿಸುತ್ತಿದ್ದರು.  ಮುಂಬೈನ ಕಿಶನ್ ಚಂದ್ ಚೆಲ್ಲಾರಾಮ್ ಕಾಲೇಜಿನಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕರಾಗಿದ್ದರು.

ನಾನು ಎಚ್ಎಮ್‍ಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಸಾರ್ವಜನಿಕ ಸಂಪರ್ಕದ ಮುಖ್ಯಸ್ಥರಾಗಿದ್ದ ಛಾಯಾ ಅವರು,  ಸದಾ ಹಸನ್ಮುಖಿಯಾಗಿದ್ದು,  ನಮ್ಮ ಕನ್ನಡ ಸಂಪದದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗಿಯಾಗುತ್ತಿದ್ದರು.  ಸ್ವಯಂ ಇಚ್ಛೆಯಿಂದ ಭಾಷಣ ಕಲೆ ಮತ್ತು ಕುಶಲತೆ ಅಭಿವೃದ್ಧಿ ಶಿಬಿರಗಳನ್ನು ನಿರ್ವಹಿಸುತ್ತ ನಮಗೆಲ್ಲ ಆಪ್ತರಾಗಿದ್ದರು.

ಛಾಯಾ ಶ್ರೀವತ್ಸ ಅವರ  ಸುಪುತ್ರರಾದ ಅನಿಲ್ ಶ್ರೀವತ್ಸ  ಅವರು ಅಂಗಾಂಗ ದಾನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಅಭಿಯಾನದಲ್ಲಿ ತೊಡಗಿದ್ದಾರೆ.  ಮತ್ತೊಬ್ಬ ಸುಪುತ್ರ ಅರ್ಜುನ್ ಶ್ರೀವತ್ಸ ಅವರು ಪ್ರಸಿದ್ಧ ನ್ಯೂರೋ ಸರ್ಜನ್  ಆಗಿದ್ದಾರೆ.

ನಿರಂತರ ಕ್ರಿಯಾಶೀಲರಾಗಿದ್ದ ಛಾಯಾ ಶ್ರೀವತ್ಸ ಅವರು 2025ರ ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ನಿಧನರಾದರು. ಅಗಲಿದ ಆತ್ಮಕ್ಕೆ ನಮ್ರ ನಮನ🌷🙏🌷

Respects to departed soul, multifaceted Chaya Srivatsa 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ