ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಿ ಕೆ. ಅಪ್ಪಣ್ಣ


 ಶಾಂತಿ ಕೆ. ಅಪ್ಪಣ್ಣ


ಶಾಂತಿ ಕೆ. ಅಪ್ಪಣ್ಣ ಉತ್ತಮ ಕಥೆಗಳಿಂದ ವಿದ್ವತ್‍ಲೋಕ ಮತ್ತು ಓದುಗಲೋಕಗಳೆರಡರಲ್ಲೂ ಖ್ಯಾತರಾಗಿದ್ದಾರೆ. 

ಶಾಂತಿ ಅವರ ಜನ್ಮದಿನ ಏಪ್ರಿಲ್ 8. ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಬಡಗಕೇರಿ ಅವರ ಊರು. ಕೊಡಗು, ಶಿವಮೊಗ್ಗ ಮುಂತಾದೆಡೆ ಓದಿದರು.  ದಕ್ಷಿಣ ರೈಲ್ವೇ ಅವರ ಉದ್ಯೋಗ ಕ್ಷೇತ್ರ.  ಪ್ರಸಕ್ತದಲ್ಲಿ ಅವರು ಕುಟುಂಬದೊಂದಿಗೆ ಚೆನ್ನೈ ನಿವಾಸಿಯಾಗಿದ್ದಾರೆ.

ದಶಕವನ್ನೂ ಮೀರಿ ಚೆನ್ನೈ ನಿವಾಸಿಯಾದರೂ ಶಾಂತಿ ಕೆ. ಅಪ್ಪಣ್ಣ ಅವರದ್ದು ಕನ್ನಡ ಸಂವಹನ ಮನ. ಬರವಣಿಗೆ ಅವರಿಗೆ ಮೊದಲ ಆದ್ಯತೆ. "ಬರವಣಿಗೆ ನನ್ನ ಬದುಕಿನ ಬಹುಮುಖ್ಯ ಪಾತ್ರ. ಬಾಲ್ಯದಿಂದಲೂ ಹೀಗೆಯೇ ನಡಕೊಂಡು ಬಂದಿದೆ.  ಹೆಚ್ಚಿನ ಗೆಳೆಯರು ಬಂಧು ಬಳಗ, ನೆರೆಹೊರೆಯವರು ಅಂತೆಲ್ಲ ಇಲ್ಲದೇ ಇದ್ದ ಕಾರಣ, ನನ್ನೊಳಗಿನ ಮಾತುಗಳನ್ನೆಲ್ಲ ನಾನು ಬರಹದ ಮೂಲಕವೇ ಹಂಚಿಕೊಳ್ಳುತ್ತಿದ್ದೆ.  ಚಿಕ್ಕಂದಿನಿಂದ ಪ್ರತೀದಿನ ಡೈರಿ ಬರೆಯುವುದರೊಂದಿಗೆ ಆರಂಭವಾದ ಬರಹದ ಬದುಕು ಇಲ್ಲೀತನಕ ಮುಂದುವರೆದುಕೊಂಡು ಬಂದಿದೆ.  ನಾನು ಒಳ್ಳೆಯ ಮಾತುಗಾರಳಲ್ಲ, ಭಾವನೆಗಳನ್ನು ಸಮರ್ಥವಾಗಿ ದಾಟಿಸಲು, ನನಗೆ ಮಾತಿಗಿಂತಲೂ ಬರಹವೇ ಆಪ್ತ.  ಹಾಗಾಗಿ ಬರವಣಿಗೆ ಅಂದರೆ ನನ್ನ ಬದುಕು" ಎಂಬ ಮಾತುಗಳು ಶಾಂತಿ ಅವರ ಒಂದು ಸಂದರ್ಶನದಲ್ಲಿ ಕಾಣಬರುತ್ತದೆ.

ಶಾಂತಿ ಕೆ. ಅಪ್ಪಣ್ಣ ಅವರು ಕಥೆಗಾರ್ತಿಯಾಗಿ ಹೆಸರಾಗಿದ್ದರೂ ಅವರ ಅನೇಕ ಕವಿತೆಗಳೂ ಗಮನ ಸೆಳೆಯುತ್ತವೆ.   ಅವರ ಕಾದಂಬರಿಯೂ ಬರಲಿದೆ.  ಹಲವು ಆಸಕ್ತಿಗಳುಳ್ಳ ಅವರು ಕೊಳಲು ನುಡಿಸುವಿಕೆಯನ್ನೂ ವಿದ್ವಾಂಸರಿಂದ ಕಲಿಯುತ್ತಿದ್ದಾರೆ.

ಶಾಂತಿ ಅವರ ಒಂದು ಕವಿತೆ ಹೀಗೆ ಲೋಕವನ್ನರಸುತ್ತದೆ:

ಈ ಜಗತ್ತಿನಲ್ಲಿ ಎಲ್ಲರೂ ಇದ್ದಾರೆ..
ಕವಿಗಳು,ರಾಜಕಾರಣಿಗಳು, ಲೇಖಕರು, ನಟರು, ನೃತ್ಯಗಾರರು 
ಹಾಡುಗಾರರು, ಧರ್ಮಾಧಿಕಾರಿಗಳು,ಧರ್ಮಪರಿಪಾಲಕರು,
ಸಾಧುಸಂತರು,ಪ್ರವಾದಿಗಳು,ಲೆಕ್ಕಿಗರು,
ಸುಂಕದವರು,ಕಾವಲಿನವರು,
ಹೋರಾಟಗಾರರು,
ನ್ಯಾಯ ಹೇಳುವವರು ಇತ್ಯಾದಿ ,ಇತ್ಯಾದಿ ,ಇತ್ಯಾದಿ.. ಎಲ್ಲರೂ ಇದ್ದಾರೆ..
ಕೊರತೆ ಇರುವುದು ಮನುಷ್ಯರದ್ದು ಮಾತ್ರ.

ಶಾಂತಿ ಅವರ ಕಥಾಸೃಷ್ಟಿಗಳಲ್ಲಿ ಘಟನೆಗಳು ಮತ್ತು ವ್ಯಕ್ತಿಗಳಿಗಿಂತ ಅವು ಸೃಷ್ಟಿಗೊಳ್ಳುವ ಮನಸ್ಥಿತಿಗಳನ್ನು ಅರಸುತ್ತವೆ.

ಶಾಂತಿ ಕೆ. ಅಪ್ಪಣ್ಣ ಅವರ 'ಬಾಹುಗಳು' ಕಥೆ 2015ರ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತು.  2016ರಲ್ಲಿ ಛಂದ ಪ್ರಕಾಶನದಿಂದ ಪ್ರಥಮ ಬಹುಮಾನದೊಂದಿಗೆ ಅವರ ಪ್ರಥಮ ಕಥಾಸಂಕಲನ 'ಮನಸು ಅಭಿಸಾರಿಕೆ'  ಹೊರಬಂತು.  ಇದೇ ಕೃತಿಗೆ 2017ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಂದಿದೆ. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ, ಮಣಿಪಾಲದ ಡಾ.  ಶಾಂತರಾಮ್ ಪ್ರಶಸ್ತಿ ಮುಂತಾದ ಇತರ ಪ್ರಶಸ್ತಿಗಳೂ ಸಂದಿವೆ.

ಶಾಂತಿ ಕೆ. ಅಪ್ಪಣ್ಣ ಅವರ ಮತ್ತೊಂದು ಕಥಾಸಂಕಲನ "ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು" ಕೂಡಾ ವಿಮರ್ಶಕರು ಮತ್ತು ಓದುಗರಿಂದ ಮೆಚ್ಚುಗೆ ಪಡೆದಿದ್ದು ಪ್ರತಿಷ್ಟಿತ ಸರಳಾ ರಂಗನಾಥ ರಾವ್ ಸಾಹಿತ್ಯ ಪ್ರಶಸ್ತಿ  ಸಂದಿದೆ. 

ಶಾಂತಿ ಕೆ. ಅಪ್ಪಣ್ಣ ಅವರ ಕಥೆಗಳು ತಮಿಳು, ಮಲಯಾಳ ಮುಂತಾದ ಭಾಷೆಗಳಿಗೆ ತರ್ಜುಮೆಗೊಂಡಿವೆ. ತೆಲುಗಿನವರು ನಡೆಸಿದ ಬಹುಭಾಷಾ ಕಥಾ ಸಮ್ಮೇಳನದಲ್ಲಿ
ಕನ್ನಡದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.

"ಸಮಾಜವನ್ನು ಅಂತಃಕರಣದಿಂದ ನೋಡಿದರೆ ಮಾತ್ರ ಅದು ಗ್ರಹಿಕೆಗೆ ಸರಿಯಾಗಿ ಸಿಗುವಂತಾಗುತ್ತದೆ.  ಈ ನಿಟ್ಟಿನಿಂದ ನಾನು ನನ್ನ ಬರವಣಿಗೆಯಲ್ಲಿ ಯಾವುದೇ ಸಿದ್ಧಾಂತ ಅಥವಾ ವರ್ಗವನ್ನು ಪ್ರತಿನಿಧಿಸಲು ಇಷ್ಟಪಡುವುದಿಲ್ಲ.  ಮಾನವೀಯತೆಗೆ ಮಾತ್ರ ನಾನು ಬದ್ಧಳು.  ಬರಹಗಾರರು ಜಾತ್ಯತೀತ ಹಾಗೂ ಪಕ್ಷಾತೀತವಾಗಬೇಕು.  ಇಲ್ಲವಾದರೆ ಸಮಾಜದ ಒಂದು ಭಾಗ ಕುರುಡಾಗಿ ಉಳಿದುಬಿಡುತ್ತದೆ" ಎಂಬ ಶಾಂತಿ ಕೆ. ಅಪ್ಪಣ್ಣ ಅವರ ಮಾತುಗಳನ್ನು ಇತ್ತೀಚೆಗೆ ಓದುತ್ತಿದ್ದೆ.   ಈ ಮನದಿಂದ ನಾವು ಬಹಳಷ್ಟನ್ನು ನಿರೀಕ್ಷಿಸಬಹುದು ಎಂಬ ಭರವಸೆ ಹುಟ್ಟುತ್ತದೆ.

ನಾನೊಂದು ಹೂಮರವಾಗ ಬೇಕಿತ್ತು...
ಚೈತ್ರದ ಬಿಸಿಲಿಗೂ, ಶ್ರಾವಣದ ಮಳೆಗೂ
ಭೇದವೆಣಿಸದೇ ತೋಯಬಹುದಿತ್ತು...
ಶರತ್ಕಾಲದ ಬೆಳದಿಂಗಳ ಕುಡಿಯಬಹುದಿತ್ತು..
ಗಾಳಿಯ ಮೌನಕೆ ದನಿ ಕೊಡಬಹುದಿತ್ತು..
ಇರುಳಿನ ಮಾತಿಗೆ ಜೊತೆಯಾಗಬಹುದಿತ್ತು..

ಪ್ರತೀ  ಶಿಶಿರದಲಿ ದಿಗಂಬರಳಾಗಿ..ದಿಕ್ಕು ದಿಗಂತ ಕಾಣುವಂತೆ ನಗ್ನವಾಗಿ ನಿಲ್ಲಬಹುದಿತ್ತು..
ಮತ್ತೆ ವಸಂತದಲಿ 
ಹೊಸತಾಗಿ ಮೈ ನೆರೆದು 
ಚಿಗುರೊಡೆದು..
ಬಣ್ಣದ ಬಟ್ಟೆಯುಟ್ಟು ಹೊಸ ಕನಸಿಗೆ ತೆರೆದು ಕೊಳ್ಳಬಹುದಿತ್ತು.. 

ಹೂವುಟ್ಟು ಕಾಯಬಹುದಿತ್ತು..
ಮುತ್ತುವ ಜೇನ್ದುಂಬಿ ಹಿಂಡಿನ ಮುತ್ತಿನಲಿ..ಮೈ ಮರೆಯಬಹುದಿತ್ತು..
ಆ ಪ್ರೇಮಕೆ ತುಂಬಿಕೊಂಡು ಹೀಚು ಬಲಿಸಿ ಹಣ್ಣಾಗಬಹುದಿತ್ತು...

ಮುಖ್ಯ..
ಲೋಕ ನನ್ನ ಚಿಗುರು ತಳಿರು..
ಹೂವು ಹಸಿರನ್ನಷ್ಟೇ ನೋಡುತ್ತಿತ್ತು..
ಕಾಲಮಾನದ ಹಂಗಿಲ್ಲದೆ 
ನನ್ನ  ಹೂಗಳೂ ಅಲ್ಲಿ ಸಲ್ಲುವುದ
ಕಾಣಬಹುದಿತ್ತು..
...ಪುನರ್ವಸು.

ಹೀಗೆ ವಿಶಿಷ್ಟ ರೀತಿಯಲ್ಲಿ ಹಲವು ಚಿಂತನೆಗಳನ್ನು ಕಾಣಿಸುವ ಪ್ರತಿಭಾನ್ವಿತ ಬರಹಗಾರ್ತಿ ಶಾಂತಿ ಕೆ. ಅಪ್ಪಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Shanthi K. Appanna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ