ಸಿಪಿಕೆ
ಸಿ. ಪಿ. ಕೃಷ್ಣಕುಮಾರ್
ಕವಿ, ವಿಮರ್ಶಕ, ಗ್ರಂಥಸಂಪಾದಕ, ಸಂಶೋಧಕರಾಗಿ ಹೆಸರಾಗಿ ಸಿಪಿಕೆ ಎಂದೇ ಪ್ರಖ್ಯಾತರಾದವರು ಸಿ.ಪಿ. ಕೃಷ್ಣಕುಮಾರ್.
ಸಿಪಿಕೆ 1939ರ ಏಪ್ರಿಲ್ 8ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡ. ತಾಯಿ ಚಿಕ್ಕಮ್ಮ.
ಹುಟ್ಟಿದ ಒಂಬತ್ತು ತಿಂಗಳಿಗೇ ತಾಯಿಯ ಪ್ರೀತಿಯಿಂದ ವಂಚಿತರಾದ ಕೃಷ್ಣಕುಮಾರರು ಬೆಳೆದದ್ದು ಅಜ್ಜಿ ಹಾಗೂ ಸೋದರತ್ತೆಯರ ಮಡಿಲಲ್ಲಿ.
ಕೃಷ್ಣಕುಮಾರರ ಪ್ರಾಥಮಿಕ ಶಿಕ್ಷಣ ನೆರವೇರಿದ್ದು ಹುಟ್ಟಿದೂರಿನಲ್ಲಿ. ಪ್ರೌಢಶಾಲೆಯ ವಿದ್ಯಾಭ್ಯಾಸ ನಡೆದದ್ದು ಸಾಲಿಗ್ರಾಮದಲ್ಲಿ. ಶಿವಮೊಗ್ಗೆಯಲ್ಲಿ ಇಂಟರ್‌ಮೀಡಿಯೇಟ್ ಓದಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಆನರ್ಸ್ ಪದವಿ ಹಾಗೂ ಮಾನಸಗಂಗೋತ್ರಿಯಿಂದ ಎಂ.ಎ. ಪದವಿಗಳನ್ನು ಪಡೆದರು. “ನಾಗವರ್ಮನ ಕರ್ನಾಟಕ ಕಾದಂಬರಿ: ಒಂದು ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ” ಎಂಬ ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾರತೀಯ ವಿದ್ಯಾಭವನದಿಂದ ಸಂಸ್ಕೃತ ಕೋವಿದ ಪದವಿಯನ್ನು ಸಹಾ ಪಡೆದರು.
ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನ ಸಹಾಯಕರಾಗಿ ಸಿಪಿಕೆ 1961ರಲ್ಲಿ ಉದ್ಯೋಗ ಪ್ರಾರಂಭಿಸಿದರು. 1964ರಿಂದ 67ರವರೆಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ, 1969ರಲ್ಲಿ ಪ್ರವಾಚಕರಾಗಿ, 1980ರಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡು 1999ರಲ್ಲಿ ನಿವೃತ್ತರಾದರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದರು.
ಸಿ.ಪಿ.ಕೆ ಅವರು ಮಾಧ್ಯಮಿಕ ಶಾಲೆಯಲ್ಲಿದ್ದಾಗಿನಿಂದಲೇ ಪಠ್ಯೇತರ ಕೃತಿಗಳನ್ನು ಓದಿದ್ದೇ ಹೆಚ್ಚು. ಸರ್ವೇಯರ್ ಆಗಿದ್ದ ತಂದೆ ಪುಟ್ಟೇಗೌಡರು ‘ಕುಮಾರವ್ಯಾಸ ಭಾರತ’ವನ್ನು ವಾಚನ ಮಾಡುತ್ತಿದ್ದುದು ಮತ್ತು ಮಿಡ್ಲ್ ಸ್ಕೂಲಿನಲ್ಲಿದ್ದಾಗ ಸಾಲಿಗ್ರಾಮದಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು ನಡೆಸುತ್ತಿದ್ದ ಸಣ್ಣ ಗ್ರಂಥಾಲಯಕ್ಕೆ ಬರುತ್ತಿದ್ದ ಬೆಳಕು, ಪುಸ್ತಕ ಪ್ರಪಂಚ, ಪ್ರಜಾಮತ ಪತ್ರಿಕೆಗಳನ್ನು ಓದುತ್ತಿದ್ದುದು ಅವರಲ್ಲಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಲು ಪ್ರೇರಕವಾದವು.
ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗುತ್ತಿದ್ದ ಅನುವಾದಿತ ಲೇಖನಗಳನ್ನು ಓದುತ್ತ ಬಂದಂತೆ ಇವರಿಗೆ ಮುಂದೆ ಅನುವಾದದಲ್ಲಿ ಆಸಕ್ತಿ ಬೆಳೆಯಿತು. ಈ ಸಂದರ್ಭದಲ್ಲಿ ಗೊರೂರು ಮತ್ತು ಕಾರಂತರ ಬರಹಗಳ ಪರಿಚಯ ಮಾಡಿಕೊಂಡರು. ಸಿ.ಪಿ.ಕೆ ಅವರು ಪ್ರೌಢಶಾಲೆಯ ಆಂಗ್ಲ ಪಠ್ಯದಲ್ಲಿದ್ದ ‘ಗಾಂಧಾರೀಸ್ ಲ್ಯಾಮೆಂಟ್’ ಎಂಬುದನ್ನು ‘ಗಾಂಧಾರಿಯ ಪ್ರಲಾಪ’ ಎಂದು ಅನುವಾದಿಸಿದ್ದರು.
ಶಿವಮೊಗ್ಗ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ ಇವರ ಗುರುಗಳು. ಜಿ.ಎಸ್.ಎಸ್.ರವರು ಅಧ್ಯಕ್ಷರಾಗಿದ್ದ ಸಾಹಿತ್ಯ ಸಂಘಕ್ಕೆ ಇವರು ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ಹಲವಾರು ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಕವನಕ್ಕಾಗಿ ಬಿಎಂಶ್ರೀ ರಜತೋತ್ಸವ ಸುವರ್ಣ ಪದಕವನ್ನು ಪಡೆದರು.
ಸಿಪಿಕೆಯವರು ಮೊಟ್ಟಮೊದಲು ಹೊರತಂದ ಕವನ ಸಂಕಲನ ‘ತಾರಾಸಖ’ (1970). ಕ್ರಿಯಾಶೀಲರಾಗಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕವನ, ಹನಿಗವನ, ಖಂಡಕಾವ್ಯ, ವಚನ, ಮುಕ್ತಕ, ಸುನೀತ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ರಚಿಸಿದ ಕಾವ್ಯ ಕೃತಿಗಳಲ್ಲಿ ಅಂತರತಮ, ಒಳದನಿ, ಪ್ರಕೃತಿ, ಪರ್ಯಾಯ, ಬಿಂದು ಬೆರಗು, ಬೊಗಸೆ, ಮುಕ್ತಾಹಾರ, ಸಾನೆಟ್‌ಸಾಲು, ಸಿಪಿಕೆ ಚುಟುಕುಗಳು, ಸುನೀತೋಗ, ಹನಿ ಮಿನಿ ಮುಂತಾದವು ಪ್ರಮುಖವಾದವು.
ಕಿರಣ ತೋರಣ, ಕೋಲ್ಮಿಂಚು, ಚಿಂತನ ಸಂಚಯ, ಚಿಂತನ ಬಿಂದು, ಚಿಂತನಧಾರೆ ಮುಂತಾದ ಚಿಂತನ ಪ್ರಬಂಧಗಳು; ಅಧ್ಯಯನ, ಆಲೋಚನೆ, ಈ ಕ್ಷಣ, ಉಪಚಯ, ಕನ್ನಡ ಕಾವ್ಯ ಹತ್ತುವರುಷ, ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್ ಪ್ರಭಾವ, ಕಾವ್ಯತತ್ತ್ವ: ಕೆಲವು ಮುಖಗಳು, ಕುಮಾರ ವ್ಯಾಸ ಭಾರತ: ಒಂದು ನೋಟ, ಛಂದಸ್ಸು, ಕುವೆಂಪು ಸಾಹಿತ್ಯ: ಕೆಲವು ಮುಖಗಳು, ತೀನಂಶ್ರೀ: ಶ್ರೀಮುಖ, ನೂರು ವಿಮರ್ಶೆಗಳು ಮುಂತಾದ ವಿಚಾರ, ವಿಮರ್ಶೆ, ಸಂಶೋಧನ ಕೃತಿಗಳು; ಕೃತಿ ಪ್ರತಿ, ಗೀತಾಂಜಲಿ, ತಾಯಿ, ಠಾಕೂರ್ ವಚನಾಂಜಲಿ, ಎಲಿಯಟ್ಟನ ಮೂರು ಉಪನ್ಯಾಸಗಳು, ಕಲಾತತ್ತ್ವ, ಸಾಹಿತ್ಯ ಮತ್ತು ಮನೋವಿಜ್ಞಾನ, ಸಾಹಿತ್ಯ ವಿಮರ್ಶೆಯ ತತ್ತ್ವಗಳು ಮುಂತಾದ ಇಂಗ್ಲಿಷ್‌ನಿಂದ ಭಾಷಾಂತರಿಸಿದ ಕೃತಿಗಳು; ಅಗಮೆಮೊನನ್, ಈಸ್ಕಲಸ್‌ನ ನಾಟಕಗಳು, ಏಳು ಗ್ರೀಕ್ ನಾಟಕಗಳು, ಹೆಲೆನ್ ಮುಂತಾದ ಗ್ರೀಕ್‌ನಿಂದ (ಇಂಗ್ಲಿಷ್ ಮೂಲಕ) ಅನುವಾದಿಸಿದ ನಾಟಕಗಳು; ಅಭಿಜ್ಞಾನ ಶಾಕುಂತಲ, ಊರುಭಂಗ, ಕುಮಾರ ಸಂಭವ, ವೇಣಿ ಸಂಹಾರ, ಭಾಗವತ, ಭಾರತ, ರಾಮಾಯಣ ಮುಂತಾದ ಸಂಸ್ಕೃತದಿಂದ ಅನುವಾದಿಸಿದ ಕೃತಿಗಳು; ಇವಲ್ಲದೆ ಜಾನಪದದ ಕೃತಿಗಳು; ವ್ಯಕ್ತಿ ಚಿತ್ರಗಳು; ಹಾಸ್ಯ ಕೃತಿಗಳು; ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ ಕೃತಿಗಳು ಸೇರಿ ಮುನ್ನೂರಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.
ಸಿ.ಪಿ.ಕೆ ಅವರು ನಿವೃತ್ತಿಯ ನಂತರವೂ ಹೊತ್ತ ಜವಾಬ್ದಾರಿಗಳು ಹಲವಾರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಗ್ರಂಥ ಪ್ರಕಟಣಾ ಸಮಿತಿ ಅಧ್ಯಕ್ಷರಾಗಿ, ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ಸಮಗ್ರವಚನ ಸಂಪುಟಗಳ ಸಂಪಾದಕ ಮಂಡಲಿ, ರಾಜ್ಯ ಗ್ರಂಥಾಲಯ ಇಲಾಖೆಯ ಗ್ರಂಥ ಖರೀದಿ ಅಯ್ಕೆ ಸಮಿತಿ, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದವುಗಳಲ್ಲೂ ತಮ್ಮ ಅತ್ಯಮೂಲ್ಯ ಸಲಹೆ, ಸಹಕಾರಗಳನ್ನು ನೀಡಿದ್ದಾರೆ.
ಸಿ. ಪಿ. ಕೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ವಿಚಾರ ಸಂಕಿರಣಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗೆಯಲ್ಲಿ ನಡೆದ ಅಖಿಲ ಭಾರತ 49ನೆಯ ಕನ್ನಡ ಸಮ್ಮೇಳನದ ಭಾಷಾಂತರ ಗೋಷ್ಠಿಯ ಅಧ್ಯಕ್ಷತೆ, 1971ರಲ್ಲಿ ನಾಗಮಂಡಲದಲ್ಲಿ ನಡೆದ ಜಾನಪದ ಸಮ್ಮೇಳನದ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ, ಟಿ. ನರಸೀಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1994ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, 1994ರಲ್ಲಿ ಲಕ್ನೋದಲ್ಲಿ ನಡೆದ ಗಣರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಕೆ, 2011ರಲ್ಲಿ ಗಂಗಾವತಿಯಲ್ಲಿ ನಡೆದ 78ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ – ಹೀಗೆ ಹಲವಾರು ಗೌರವಗಳು ಪ್ರೊ. ಸಿ.ಪಿ. ಕೃಷ್ಣಕುಮಾರ್ ಅವರಿಗೆ ಸಂದಿವೆ.
ಸಿ.ಪಿ.ಕೆ ಅವರ ಸಾಹಿತ್ಯದ ಬಹುಮುಖ ಕೊಡುಗೆಗಳಿಗಾಗಿ ಸಂದ ಪ್ರಶಸ್ತಿಗಳು ಹಲವಾರು. ‘ವಚನ ವಿಲೋಕನ’ ಕೃತಿಗೆ ಬಸವ ವೇದಿಕೆಯು ‘ಬಸವ ಸಾಹಿತ್ಯಶ್ರೀ’ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಚಿತ್ರದುರ್ಗದ ಬೃಹನ್ಮಠದ ‘ವಿದ್ವತ್ ಶಿರೋಮಣಿ’ ಪ್ರಶಸ್ತಿ, ಮುಕ್ತಕ ಅಕಾಡಮಿಯಿಂದ ‘ಹನಿಗವನ ಹರಿಕಾರ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಎಚ್.ಎಲ್. ನಾಗೇಗೌಡ ‘ಜಾನಪದ ತಜ್ಞ’ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಸ್.ವಿ.ಪಿ. ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಪ್ರೊ. ಸಿ.ಪಿ. ಕೃಷ್ಣಕುಮಾರ್ ಅವರಿಗೆ ಅಭಿಮಾನಿಗಳು ಅರ್ಪಿಸಿರುವ ಗೌರವ ಗ್ರಂಥ ‘ಸಾರ್ಥಕ’.
On the birthday of great scholar Prof. C.P. Krishna Kumar
ಕಾಮೆಂಟ್‌ಗಳು