ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ103


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಹನ್ನೆರಡನೆಯ ಸಂಧಿ

ಸೂ. 
ರಾಯಸೇನಾ ಸೂರೆಕಾರನ
ಜೇಯ ಮಾರುತ ಸುತನು ಕೌರವ
ರಾಯನನುಜರ ಸೀಳಿದನು ಕಳಶಜನ ಪರಿಹರಿಸಿ  
 
ದೃಗುಯುಗಳ ನೀರೇರಿದವು ಸೆರೆ
ಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ ತನ್ನೊಡನೆ ಫಲುಗುಣನೇಕೆ ಜನಿಸಿದನೊ
ಹಗೆಯ ಹರಿವಿಂಗೊಪ್ಪುಗೊಟ್ಟೆನು
ಮಗನಳಲು ಮಿಗೆ ಹೂಣೆ ಹೊಕ್ಕನು
ಮಗುಳಲರಿಯನು ತಮ್ಮನೆನುತವನೀಶ ಚಿಂತಿಸಿದ              ೧  
 
ಕಳುಹಲತ್ತಲು ಹೋಗಿ ಸಾತ್ಯಕಿ
ತಿಳಿದು ಮರಳಿದುದಿಲ್ಲ ಫಲುಗುಣ
ನಳಿದನೋ ಮೇಣುಳಿದನೋ ಶರಹತಿಗೆ ಬಳಲಿದನೊ
ತಿಳಿದು ಹೇಳುವರಾರು ಪಟುಭಟ
ರೊಳಗೆ ಮಕುಟದ ಮಹಿಮರೆನುತಳ
ವಳಿದು ಭೀಮನ ವದನವನು ನೋಡಿದನು ಭೂಪಾಲ  ೨  
 
ಎಲೆ ವೃಕೋದರ ವೈರಿಮೋಹರ
ದೊಳಗೆ ಸಿಲುಕಿದನೋ ಕಿರೀಟಿಗೆ
ನೆಲದ ಋಣಸಂಬಂಧ ಸವೆದುದೊ ಮೇಣು ಸಮರದಲಿ
ತಿಳಿಯಲಟ್ಟಿದ ಸಾತ್ಯಕಿಗೆ ಕೊಳು
ಗುಳದ ಭಾರಣೆಯಾಯ್ತು ಫಲುಗುಣ
ನಳಬಳವನರಿದಲ್ಲದೆನ್ನಸು ಸೈರಿಸದು ತನುವ          ೩  
 
ಮುರವಿರೋಧಿಯ ಪಾಂಚಜನ್ಯದ
ಪರಮ ರವ ಪಾರ್ಥನ ಪತಾಕೆಯ
ವರ ಕಪೀಂದ್ರನ ರಭಸವೇ ತುಂಬಿತು ಜಗತ್ರಯವ
ನರನ ಧನುವಿನ ದನಿಯ ಕೇಳೆನು
ಕರಗಿತಂತಃಕರಣವರ್ಜುನ
ನಿರವ ಕಾಣಿಸಿ ಬಾಯೆನಲು ಕೈಕೊಂಡನಾ ಭೀಮ     ೪  
 
ಅರನೆಲೆಯ ಸುಯ್ದಾನ ಪಾಂಚಾ
ಲರಿಗೆ ನೇಮಿಸಿತನಿಲತನಯನ
ಬೆರಳ ಸನ್ನೆಗೆ ತೀವಿದಂಬಿನ ತೇರ ಚಾಚಿದರು
ಕರೆದು ತನ್ನ ವಿಶೋಕಗಖಿಳಾ
ಭರಣವನು ಕೊಟ್ಟನು ವರೂಥದ
ಹರಿಗೆ ಹೊಡವಂಟಡರಿದನು ನವ ರತುನಮಯ ರಥವ  ೫  
 
ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳತತಿ ದಿಗುವಳೆಯದಲಿ ಕೈ
ಮೇಳವಿಸಿದವು ತಂಬಟಧ್ವನಿ ಜಡಿವ ಕಹಳೆಗಳು
ಕೀಳ ಬಗೆಯದೆ ಕೆರಳಿ ಹೊಯ್ದವು
ಕಾಲಲಿಳೆಯನು ಕುದುರೆ ಮೋರೆಯ
ತೋಳಿನಲಿ ಮೋದಿದವು ಮಹಿಯನು ಸೊಕ್ಕಿದಾನೆಗಳು  ೬  
 
ಒದಗಿತೆಡಬಲವಂಕದೊಯ್ಯಾ
ರದಲಿ ರಾವ್ತರು ಮುಂದೆ ತಲೆದೋ
ರಿದರು ಮುಂಗುಡಿಯವರು ಚೂಣಿಯ ಹೊಂತಕಾರಿಗಳು
ಅದಿರ್ವ ಖಡುಗದ ಕಾಂತಿ ಸೂರ‍್ಯನ
ಹೊದಿಸಿದುದು ಹೊದರೆದ್ದು ಕೊಂತದ
ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ  ೭  
 
ಕೆಲಕೆ ಹೊಳೆದವು ಕಡುಗುದುರೆ ನೆಲ
ನಳುಕೆ ನಡೆದವು ದಂತಿ ದೆಸೆಗಳ
ಹೊಲಿಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ
ತಳಪಟವ ತುಂಬಿತ್ತು ಪಯದಳ
ವುಲಿವ ಕಹಳೆಯ ಚೆಂಬುಕನ ಕಳ
ಕಳಿಕೆ ಮಿಗೆ ಕೈಕೊಂಡುದನಿಲಕುಮಾರಕನ ಸೇನೆ       ೮  
 
ಮುಸುಕಿದನು ರವಿ ಧೂಳಿಯಲಿ ಹೊಳೆ
ವಸಿ ಮುಸುಂಡಿ ತ್ರಿಶೂಲ ಕೊಂತ
ಪ್ರಸರ ಕಾಂತಿಗಳಿಳುಹಿದವು ಖದ್ಯೋತದೀಧಿತಿಯ
ಬಿಸಜಸಖನಡಗಿದರೆ ನಭದಲಿ
ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು          ೯  
 
ಎಲೆಲೆ ರಿಪುಸಂವರ್ತನೊಳು ಕೊಳು
ಗುಳಕೆ ವರ್ತಿಸಲರಿದೆನುತ ತ
ಲ್ಲಳಿಸಿ ತೆತ್ತುದು ಮನವನವನೀಪಾಲ ಸಂದೋಹ
ಹಳಿವಿನಬ್ಬರಕಂಜದಿರಿ ನಿಜ
ಗಳದ ಹಸುಗೆಯ ಹಾರದಿರಿಯೆಂ
ದಳಿಮನರು ಬೆಂಗೊಟ್ಟು ಹೊಕ್ಕುದು ಕಳಶಜನ ಮರೆಯ  ೧೦  
 
ಮಿಗೆ ವಿರೋಧಿಯ ಬಸುರನುಗಿ ಕು
ನ್ನಿಗಳ ಕೆಡೆ ಬಡಿ ಸೀಳು ಹೆಣನುಂ
ಗಿಗಳ ಹೊಯ್ ಹೊಯ್ ರಣಕೆ ಹೆದರುವ ಕೌರವಾನುಜರ
ಹಗೆಯ ಶೋಣಿತ ಪಾನದರವ
ಟ್ಟಿಗೆಗೆ ಕರೆ ಭೇತಾಳ ಭೂತಾ
ಳಿಗಳನೆನುತ ಸುಧೈರ‍್ಯ ನಡೆದನು ಗರುಡಿಯಾಚಾರ‍್ಯ    ೧೧  
 
ಏನಿದೆತ್ತಣ ರಭಸವೆಲೆ ಪವ
ಮಾನಸುತ ಫಡ ಮರಳು ನಿನ್ನನು
ಮಾನವಾವುದು ಗಮನವೆಲ್ಲಿಗೆ ಮಾಡು ಬಿನ್ನಹವ
ಆನಿರಲು ಕೈಕೊಳ್ಳದುರುಬುವ
ದಾನವಾಮರರಿಲ್ಲ ನಿನ್ನಳ
ವೇನು ಸಾಕೊಮ್ಮಿಂಗೆ ಕಾವೆನು ಬೇಡ ಮರಳೆಂದ  ೧೨  
 
ಎಲೆ ಮರುಳೆ ಗುರುವೆಮಗೆ ನೀ ಹೆ
ಕ್ಕಳಿಸಿ ನುಡಿದರೆ ಮೊದಲಲಂಜುವೆ
ನುಳಿದ ಮಾತಿನಲೇನು ನಿಮ್ಮೊಡನೆನಗೆ ಸಂಗ್ರಾಮ
ಬಳಿಕವೀಗಳು ನಿಮ್ಮ ಮೋಹರ
ದೊಳಗೆ ಕೊಡಿ ಬಟ್ಟೆಯನು ಸಿಲುಕಿದ
ಫಲುಗುಣನ ತಹೆನಣ್ಣದೇವನ ನೇಮ ತನಗೆಂದ  ೧೩  
 
ಆದರೆಲವೋ ಭೀಮ ಪಾರ್ಥನ
ಹಾದಿಯಲಿ ಗಮಿಸುವರೆ ಸಾತ್ಯಕಿ
ಹೋದವೊಲು ನೀನೆಮಗೆ ವಂದಿಸಿ ಮಾರ್ಗವನು ಪಡೆದು
ಹೋದಡೊಪ್ಪುವುದಲ್ಲದೇ ಬಿರು
ಸಾದಡಹುದೇ ಬೀಳು ಚರಣಕೆ
ಕಾದುವರೆ ಹಿಡಿ ಧನುವನೆಂದನು ದ್ರೋಣನನಿಲಜನ  ೧೪  
 
ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ  ೧೫  
 
ಫಡ ಫಡೆಲವೋ ಭೀಮ ಬಣಗುಗ
ಳೊಡನೆ ಸರಿಗಂಡೆನ್ನ ಬಗೆಯದೆ
ಕಡುಗುವೈ ಕಾಳೆಗಕೆ ತಪ್ಪೇನಾದಡನುವಾಗು
ಒಡಲನೀವೆನು ವಿನಯದೆಡೆಗವ
ಗಡಿಸಿದರೆ ಕೊಲುವೆನು ರಿಪುವ್ರಜ
ಮೃಡನನರಿಯಾ ದ್ರೋಣ ತಾನೆನುತೆಚ್ಚನನಿಲಜನ  ೧೬  
 
ಈತನೊಡನಂಬಿನಲಿ ಕಾದಲು
ಭೂತನಾಥಂಗರಿದು ಸಾರಥಿ
ಪೂತುರೇ ಎನುತಿಳಿದು ರಥವನು ತುಡುಕಿದನು ಗದೆಯ
ಆತನಸ್ತ್ರಕೆ ದಂಡೆಯೊಡ್ಡಿ ಮ
ಹಾತಿಬಳ ಕವಿದನು ವಿರೋಧಿಯ
ಸೂತನನು ಕೆಡೆಹೊಯ್ದು ಕೊಂದನು ರಥದ ಕುದುರೆಗಳ  ೧೭  
 
ಇದು ನಿಮಗೆ ವಂದನೆಯೆನುತ ನಿಜ
ಗದೆಯಲಾತನ ರಥವ ಹುಡಿಗು
ಟ್ಟಿದನು ಸುರಗಿಯನುಗಿಯಲಪ್ಪಳಿಸಿದನು ಮೋಹರವ
ಇದಿರಲಿರಲಳವಡದೆ ಗುರು ಹಿಂ
ಗಿದನು ಶಕಟವ್ಯೂಹವನು ಮ
ಧ್ಯದೊಳು ಥಟ್ಟುಗಿದುರವಣಿಸಿ ಪವಮಾನಸುತ ನಡೆದ  ೧೮  
 
ಹರಿಯ ಕುಲಿಶದ ಧಾಳಿಯಲಿ ಕುಲ
ಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ
ಅರಿ ವರೂಥಿನಿ ಕೆದರಿ ತಳಿತವು
ತುರಗ ಕರಿ ರಥ ಪಾಯಿದಳ ಬಲ
ಹೊರಳಿಯೊಡೆದುದು ಹೊದರು ತಗ್ಗಿತು ಹೂಣಿಗರ ಮನದ  ೧೯  
 
ಹೊಸರಥವ ತಾ ಹೋದನೇ ಸಂ
ಧಿಸುವೆನಿನ್ನನಿಲಜನು ಕುಂತಿಯ
ಬಸುರ ಹೊಕ್ಕರೆ ಹೊಗುವೆನೆನುತಾ ದ್ರೋಣ ಗಜಬಜಿಸೆ
ಕುಸುರಿದರಿದನು ಮುಂದೆ ವೈರಿ
ಪ್ರಸರವನು ಸಂವರ್ತ ರುದ್ರನೊ
ಹೊಸಬನಿವನಾರೆಂದು ತಲ್ಲಣಿಸಿತ್ತು ರಿಪುಸೇನೆ        ೨೦  
 
ಎಚ್ಚನುಚ್ಚಳಿಸುವ ತುರಂಗವ
ನೊಚ್ಚತವೆ ಕೊಂದನು ರಥೌಘವ
ನಚ್ಚರಿಯರೊಡನಾಡಿಸಿದನುರವಣಿಪ ಕಾಲಾಳ
ಕಿಚ್ಚುಗಿಡಿಗೆದರುವ ಸಿಳೀಮುಖ
ಕೊಚ್ಚಲಿಭದವಯವವನಮರರಿ
ಗಚ್ಚರಿಯ ತನಿಸೂರೆಬಿಟ್ಟನು ಭೀಮ ಬವರದಲಿ       ೨೧  
 
ತನತನಗೆ ಮುಂಕೊಂಡು ಸಂಗರ
ವೆನಗೆ ತನಗೆಂಬಖಿಳವೀರಾ
ವನಿಪರಹಮಿಕೆಯಿಂದ ಹೊಯ್ದರು ಪವನನಂದನನ
ಮೊನೆಯಲಗಿನಂಬುಗಳ ಬಿರುಸರಿ
ಗನಿಬರಂಗವ ತೆತ್ತು ವಾತಾ
ಯನಿತ ವಿಗ್ರಹವಾಯ್ತು ನಿಗ್ರಹದತಿಮಹಾರಥರು       ೨೨  
 
ಸಿಡಿದ ಕಣ್ಣಾಲಿಗಳ ಮೀಂಗಳ
ಕೆಡೆದ ಸತ್ತಿಗೆಯಬುಜಪಂಕ್ತಿಯ
ಬಿಡುಮಿದುಳ ರಾಸಿಗಳ ರಚನೆಯ ರಾಜಹಂಸೆಗಳ
ಬಿಡದೆ ಬೆಂಡೆದ್ದೇಳ್ವ ತಲೆಗಳ
ಗಡಣ ನೀರ್ವಕ್ಕಿಗಳ ಸರಸಿಯ
ನಡುವೆ ನಲಿನಲಿದಾಡುತಿರ್ದುದು ಭೀಮ ವನದಂತಿ  ೨೩  
 
ಮಕುಟಬದ್ಧ ಮಹೀಶವೇಣು
ಪ್ರಕರದಲಿ ಛಟಛಟಿಸಿ ತುರಗ
ಪ್ರಕರ ಪಲ್ಲವ ಭೂಜರಾಜಿಗಳೊಳಗೆ ಘುಳುಘುಳಿಸಿ
ಸಕಲಗಜ ರಥ ಭೂಧರಾಧಿ
ತ್ಯಕೆಯೊಳಗೆ ಭುಗಿಭುಗಿಸಿ ರಿಪುವನ
ನಿಕರದಲಿ ಸಲೆ ಬೀದಿವರಿದುದು ಭೀಮ ದಾವಾಗ್ನಿ             ೨೪  
 
ಕಲಕೆ ಚಕ್ರವ್ಯೂಹ ಹಂಸಾ
ವಳಿಗೆ ಹಂಸವ್ಯೂಹ ಹಿಂದಣ
ಬಲದೊಳಾ ಮೋಹರಕೆ ತರಹರವಾಯ್ತು ಪದ್ಮದಲಿ
ಬಳಿಕ ಮಕರವ್ಯೂಹದಲಿ ಮಂ
ಡಳಿಕರಾಂತುದು ಭೀಮಸೇನನ
ಕೊಳುಗುಳಕೆ ಕೈಕೊಂಡರಾ ಕರ್ಣಾದಿ ಪಟುಭಟರು  ೨೫  
 
ನಿಲಿಸಿದರು ರವಿಸುತನನೀತನ
ತಲೆಯ ಮೀಸಲು ತಮ್ಮ ಸರಳದು
ಗೆಲವು ನಿಮಗಲ್ಲೆನುತ ಹೊಕ್ಕರು ಕೌರವಾನುಜರು
ಚಲಿಸಿತರನೆಲೆ ಕೋಡಕೈಯಲಿ
ಮೊಳಗಿದವು ನಿಸ್ಸಾಳ ಬಲುಮಂ
ಡಳಿಕರೆಡಬಲವಂಕದಲಿ ನೆರೆದುದು ಕುಮಾರಕರ       ೨೬  
 
ಸಾಲು ಗೋವಳಿಗಟ್ಟಿಗೆಯ ಕುಂ
ತಾಳಿಗಳ ತೂಗಾಟ ಮಿಗೆ ದು
ವ್ವಾಳಿಗಳ ದೆಖ್ಖಾಳ ಗಜ ರಥ ತುರಗ ಸೇನೆಯಲಿ
ಮೇಲೆ ಹೇಳಿಕೆಯಾಯ್ತು ಕವಿವ ನೃ
ಪಾಲಕರು ಭೀಮಂಗೆ ಹರಣದ
ಸಾಲಿಗರು ಸಂದಣಿಸಿತಬುಜವ್ಯೂಹದಗ್ರದಲಿ           ೨೭  
 
ದುರುಳರುರವಣಿಸಿದರು ಜವ್ವನ
ದುರು ಮದದ ಭರತಾನ್ವಯದ ದು
ರ್ಧರ ಮದದ ಘನಭುಜಮದದ ದಿವ್ಯಾಸ್ತ್ರದರಿಕೆಗಳ
ಭರಮದದ ಮರ್ಕಟವಿಲಾಸರು
ಧುರರಚಿತ ಪರಿಹಾಸರಭಿಜನ
ಕುರುವಿನಾಶರು ತಾವಕರು ಧೃತರಾಷ್ಟ್ರ ಕೇಳೆಂದ        ೨೮  
 
ಎಳೆಯ ಬಾಳೆಯ ಸುಳಿಗೆ ಸೀಗೆಯ
ಮೆಳೆಯೊಡನೆ ಸರಸವೆ ಕುಮಾರರ
ಬಲುಹ ನೋಡು ವಿಶೋಕ ತೊಡಗಿದರೆಮ್ಮೊಡನೆ ರಣವ
ಕಲಹದಲಿ ಮೈದೋರಿದಿವದಿರ
ತಲೆಗಳಿವು ವಾರಕದವಿವನರೆ
ಗಳಿಗೆಯಲಿ ತಾ ಕೊಂಬೆನೆಂದನು ನಗುತ ಕಲಿಭೀಮ  ೨೯  
 
ಬಿಲುದೆಗಹಿನಾಕರ್ಣಪೂರದ
ಹಿಳುಕಿನನಿಲಜನಿರಲು ಸಿಂಹದ
ಹೊಲನ ಹೊಗುವಿಭದಂತೆ ಹೊರಕಾಲ್ಗೊಳುತಲಿರೆ ಕಂಡು
ತೊಲಗದಿರಿ ತಮ್ಮಂದಿರಿರ ಕುರು
ಕುಲಲಲಾಮರು ಜಗದೊಳತಿ ವೆ
ಗ್ಗಳೆಯ ಸುಭಟರು ನೀವೆನುತ ತೆಗೆದೆಚ್ಚನಾ ಭೀಮ  ೩೦  
 
ಸರಳ ಸೊಂಪಿನ ಸೋಹಿನಲಿ ನಿರಿ
ಗರುಳ ದಾವಣಿವಲೆಗಳಲಿ ಸಂ
ಗರದ ಸುಭಟವ್ರಜದ ಮಧ್ಯದ ಗೂಡುವಲೆಗಳಲಿ
ಉರುಗದೆಯ ದಡಿವಲೆಯಲಸಿ ಮು
ದ್ಗರದ ಸಿಡಿವಲೆಗಳಲಿ ಸಮರದೊ
ಳರಿಮೃಗವ್ರಾತವನು ಭೀಮಕಿರಾತ ಕೈಕೊಂಡ         ೩೧  
 
ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು       ೩೨  
 
ಕೆಡೆದುದನುಜರು ಕೇಣವಿಲ್ಲದೆ
ತೊಡಗಿದಾಹವದೊಳಗೆ ಕೊಂದವ
ಕೊಡನಮಗನೋ ದೂರುಹೊತ್ತುದು ಬರಿದೆ ಹಗೆಗಳಿಗೆ
ನುಡಿದು ಫಲವೇನಿನ್ನು ಭೀಮನ
ಬಿಡದೆ ಸುಭಟರು ನೂಕಿಯೆಂಬೀ
ನುಡಿಯ ಕೇಳಿದು ಖಾತಿಗೊಂಡನು ಮತ್ತೆ ಕಲಿ ದ್ರೋಣ  ೩೩

ಸಂಕ್ಷಿಪ್ತ ಭಾವ
Lrphks Kolar

ಭೀಮನು ದ್ರೋಣರನ್ನು ಹಿಂದಿಕ್ಕಿ ಕೌರವನ ಸೋದರರನ್ನು ಸಂಹರಿಸುತ್ತ ಕದನದಲ್ಲಿ ಮೆರೆದನು.

ಧರ್ಮಜನಿಗೆ ಅರ್ಜುನನ ಬಗ್ಗೆ ಯೋಚನೆ ಹೆಚ್ಚಾಯಿತು. ಮೊದಲೇ ಮಗನ ಸಾವಿನಿಂದ ನೊಂದವನು. ಅಲ್ಲದೆ ಪ್ರತಿಜ್ಞೆ ಬೇರೆ ಮಾಡಿದ್ದಾನೆ. ನೋಡಿ ಬರಲು ಹೋದ ಸಾತ್ಯಕಿಯ ಸುಳಿವೂ ಇಲ್ಲ. ಬಹಳ ಚಿಂತೆಯಾಯಿತು. ಭೀಮನನ್ನು ಕರೆದು ಅರ್ಜುನನ ಸ್ಥಿತಿಯನ್ನು ತಿಳಿಯಲು ಹೋಗು ಎಂದನು. ಅದರಂತೆ ಭೀಮ ರಥವೇರಿ ಹೊರಟನು. ಅವನ ಸೈನ್ಯ ಬಹಳ ಕೋಲಾಹಲದಿಂದ ಜೊತೆಗೂಡಿತು.  

ದ್ರೋಣನು ಇದನ್ನು ತಡೆದನು. ಎಲ್ಲಿಗೆ ಹೊರಟೆಯೆಂದನು. ಸಾತ್ಯಕಿಯಂತೆ ತಮಗೆ ನಮಿಸಿ ಅಪ್ಪಣೆ ಪಡೆದು ಮುಂದೆ ಸಾಗೆನ್ನಲು ನಾನು ಭೀಮ. ಇದು ಗರುಡಿಯ ಮನೆಯಲ್ಲ. ರಣರಂಗ ಎಂದು ಹೇಳುತ್ತ ರಥದಿಂದಿಳಿದು ಗದೆಯಿಂದ ದ್ರೋಣರ ರಥ, ಕುದುರೆ, ಸಾರಥಿಗಳನ್ನು ಹುಡಿಗೈದು ಇದೇ ನನ್ನ ನಮಸ್ಕಾರ ಎಂದು ಮುಂದೆ ಸಾಗಿಯೇಬಿಟ್ಟನು ಭೀಮ.

ಹೋ ಹೋ ಎನ್ನುತ್ತಾ ಕೌರವನ ಸೋದರರು ನಾನು ತಾನು ಎನ್ನುತ್ತ ಬಂದು ಭೀಮನನ್ನು ಮುತ್ತಿದರು. ರಣರಂಗವೆಂಬ ಕಾಡಿನಲ್ಲಿ ನುಗ್ಗಿದ ಮದಗಜದಂತೆ ಭೀಮ ಕಂಗೊಳಿಸಿದನು. ರಿಪುಗಳ ಶರೀರದ ಮೂಳೆಗಳು ಲಟಲಟನೆ ಮುರಿದು ಬಿದ್ದವು. ಭೀಮನೆಂಬ ದಾವಾಗ್ನಿಯಲ್ಲಿ ಎಲ್ಲವೂ ಹೊತ್ತಿ ಉರಿದುವು.

ಕರ್ಣಾದಿಗಳು ಎದುರಾದರು. ಆದರೆ ಕೌರವನ ಸೋದರರು ಇದು ನಮಗೆ ಮೀಸಲು ಎಂದು ಅವರನ್ನು ಹಿಂದಿಕ್ಕಿ ತಾವು ಭೀಮನೊಂದಿಗೆ ಸೆಣಸಿದರು. ಎಳೆಯ ಬಾಳೆಯ ಸುಳಿಗೆ ಸೀಗೆಯ ಮೆಳೆಯೊಡನೆ ಸರಸವಾದಂತಾಯಿತು. ವಿಂದ, ಅನುವಿಂದ, ಚಿತ್ರಕನಂದನ, ಚಿತ್ರಾಂಗದ, ಸುದೀರ್ಘ, ಬಾಹುಕ‌ ಮುಂತಾದವರನ್ನು ಕೊಂದು ಹಾಕಿದನು. ದುರ್ಯೋಧನನು ಇವರನ್ನು ಕೊಂದವರು ಭೀಮನೋ, ಅಥವಾ ದ್ರೋಣರೋ ಎಂದು ಕನಲಿದನು. ಅವನಿಗೆ ದ್ರೋಣರ ಮೇಲೆ ಕೋಪ. ಮತ್ತೆ ದ್ರೋಣನು ಕೋಪದಿಂದ ಕನಲಿದನು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ