ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ105




 

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಹದಿನಾಲ್ಕನೆಯ ಸಂಧಿ

ಸೂ.ಸಂಗರದೊಳಂದಹಿತಭಟ ಮಾ
ತಂಗ ಕಂಠೀರವನು ರಣದೊಳ       
ಭಂಗ ಮುರಿದನು ಫಲುಗುಣನು ರಿಪುರಾಯ ಸೈಂಧವನ
 
ಚಿತ್ತವಿಸು ಧೃತರಾಷ್ಟ್ರ ರವಿಸುತ
ನಿತ್ತ ಮುರಿದನು ಸಾತ್ಯಕಿಯ ರಥ
ದತ್ತ ತಿರುಗಿದನನಿಲಸುತ ಭಾರಣೆಯ ದುಗುಡದಲಿ
ಇತ್ತ ಭೂರಿಶ್ರವನು ಭಾರಿಯ
ಹತ್ತು ಸಾವಿರ ರಥಸಹಿತ ಕೈ
ಗುತ್ತಿದನು ರಣವಿಜಯಲಕ್ಷ್ಮಿಯ ಲಲಿತಕಬರಿಯಲಿ             ೧  
 
ಒಂದು ಕಡೆಯಲಿ ಕರ್ಣ ಗುರುಸುತ
ರೊಂದು ದೆಸೆಯಲಿ ಶಲ್ಯ ಶಕುನಿಗ
ಳೊಂದು ದೆಸೆಯಲಿ ಭೂರಿ ಕೃತವರ್ಮಕ ಸುಯೋಧನರು
ಮುಂದುಗೆಡಿಸಿದರರ್ಜುನನನೀ
ಬಂದ ಭೂರಿಶ್ರವನ ನಿಲಿಸುವೆ
ನೆಂದು ಸಾತ್ಯಕಿ ಬಿಟ್ಟನಾತನ ಹೊರೆಗೆ ನಿಜರಥವ       ೨  
 
ಎಲವೆಲವೋ ಭೂರಿಶ್ರವನೆ ಫಡ
ಗೆಲಿದು ಹೋಗದಿರೆಲ್ಲಿ ಹೊಗುವಡೆ
ತಲೆವೆರಸಿ ಹೊಗಲೀಯೆನಿದಿರಾಗೆನುತ ಮೂದಲಿಸೆ
ಎಲವೊ ಸಾತ್ಯಕಿ ಸುಭಟ ಬಾಹಿರ
ಗಳಹದಿರು ದಿಟ ವೀರನೇ ಕೂ
ರಲಗಿನಲಿ ಮಾತಾಡು ಬರಿನುಡಿ ಭಂಡತನವೆಂದ     ೩  
 
ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ         ೪  
 
ದೂರದಲಿ ನಿಂದೊಬ್ಬರೊಬ್ಬರ
ನಾರು ಮಾಡುವುದೇನು ಸಾತ್ಯಕಿ
ಕೂರಸಿಯನುಗಿ ಬಿಸುಟು ಕಳೆ ಕೋದಂಡ ಮಾರ್ಗಣವ
ವೀರನಹಡಿದಿರಾಗೆನುತ ಬಹು
ಭಾರಣದ ಚಮ್ಮಟದ ಖಡುಗದ
ಪಾರಗದ ಪರಿಣತರು ಹೆಣಗಿದರುಬ್ಬಣಾಯತರು      ೫  
 
ನೆಲನ ತಗ್ಗಿನಲುಪ್ಪರದ ಮೆ
ಯ್ಯೊಲವಿನಲಿ ಪಾರಗದ ಬವರಿಯ
ಸುಳುಹಿನಲಿ ಚಮ್ಮಟದ ಪಯವಂಚನೆಯಲುಜ್ಝಟದ
ಬಲಿದ ದಂಡೆಯ ಮಸೆಯ ಬಯಸಿಕೆ
ಲುಳಿಯ ಮೈಗಳ ಲವಣಿಸಾರರು
ಕೊಳುಗಿಡಿಯ ಖಂಡೆಯದ ಖಣಿಕಟಿಲೆಸೆಯೆ ಕಾದಿದರು  ೬  
 
ತಳಿತ ಮಿಂಚಿನ ಮುರಿವುಗಳೊ ತನಿ
ಹೊಳಹುಗಳೊ ಖಂಡೆಯದ ಧಾರೆಯ
ಕೊಳುಗಿಡಿಯೊ ಖದ್ಯೋತರಾಸಿಯೊ ಹೇಳಲೇನದನು
ಖಳಿಕಟಿಲ ಬಿರುವೊಯಿಲೊ ಸಿಡಿಲಿನ
ಸುಳಿಯೊ ಮೈಮಸೆಯರುಣವಾರಿಯೊ
ಮಳೆಗಳಿಲ್ಲದ ಹೊನಲೊ ರಣದಲಿ ಚಿತ್ರವಾಯ್ತೆಂದ  ೭  
 
ಲುಳಿಯ ಪಯಪಾಡುಗಳ ಬವರಿಯ
ಸುಳಿವುಗಳ ಜಾರುಗಳ ಘಾಯದ
ಕಳವುಗಳ ಕೈಮೆಗಳ ಮೋಡಾಮೋಡಿಯುಬ್ಬಣದ
ಲಲಿತ ಚಿತ್ರದ ಚದುರ ಭಟರ
ವ್ವಳಿಸಿ ಹೊಯ್ದಾಡಿದರು ನೋಟಕ
ರುಲಿದುದಿಬ್ಬರ ಶ್ರಮದ ಶೌರ‍್ಯದ ವೆಗ್ಗಳೆಯತನಕೆ  ೮  
 
ಮಸೆಯ ಮೈಗಳೊಳೊರೆವುತಿರ್ದುವು
ಬಿಸಿರಕುತ ಮೊನೆಗುತ್ತುಗಳ ಕಿ
ಬ್ಬಸುರಿನಲಿ ಜೋಲಿದವು ಕರುಳುಗಳಾಹವದ ಭಟರ
ಮಸಕ ಮಸುಳದು ಮನದ ಖಾತಿಯ
ಮುಸುಡು ಮುರಿಯದು ಬಿಗಿದ ಹುಬ್ಬಿನ
ಬೆಸುಗೆ ಸಡಿಲದು ಭೂಪ ಭೂರಿಶ್ರವನ ಸಾತ್ಯಕಿಯ  ೯  
 
ಬರಬರಲು ರಿಪುಭಟನ ಹೊಯ್ಗುಳ
ಧರಧುರಕೆ ಕಲಿ ಸಾತ್ಯಕಿಯ ತರ
ಹರಣೆ ತಗ್ಗಿತು ಮಹಿಮೆ ಮುಗ್ಗಿತು ಮುರಿದುದಗ್ಗಳಿಕೆ
ಉರವಣಿಸಿ ಭೂರಿಶ್ರವನು ರಿಪು
ವರನ ಖಡುಗವ ಮುರಿಯ ಹೊಯ್ದ
ಬ್ಬರಿಸಿ ಕಡೆಗಾಲಿಂದ ಹೊಯ್ದನು ಹಾಯ್ದು ಮುಂದಲೆಗೆ  ೧೦  
 
ಕೊಡಹಿ ಕುಸುಕಿರಿದಡ್ಡ ಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತೆರಹಿಲ್ಲೆಂದು ಮುರರಿಪು ಜರೆದನರ್ಜುನನ  ೧೧  
 
ದೇವ ನಮ್ಮದು ಧರ್ಮಯುದ್ಧವಿ
ದಾವ ಹದನನು ಬೆಸಸಿದಿರಿ ತಲೆ
ಗಾವುದೇನರಿದಲ್ಲ ಮೊದಲಲಿ ನುಡಿದ ಸಮಯವನು
ಭಾವಿಸುವುದೆನೆ ಮುಗುಳುನಗೆಯಲಿ
ರಾವಣಾಂತಕನೆಂದನೆಲೆ ಮರು
ಳಾವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ  ೧೨  
 
ನೆರೆದ ಷಡುರಥರೊಬ್ಬ ಹಸುಳೆಯ
ಕೊರಳನರಿವಂದಾವ ಧರ್ಮದ
ನಿರುತವನು ನೀ ಕಂಡೆಯೆನಲುರಿ ಮಸಗಿತುದರದಲಿ
ಸರಳ ಕೆನ್ನೆಗೆ ಸೇದಿದನು ಸಂ
ಗರದ ಭೂರಿಶ್ರವನ ಖಡುಗದ
ಕರವ ಕತ್ತರಿಸಿದನು ತಲೆಗಾಯಿದನು ಸಾತ್ಯಕಿಯ  ೧೩  
 
ಭರದಲೆತ್ತಿದ ತೋಳು ಕಡಿವಡೆ
ದುರುಳಿತವನಿಗೆ ಸುರಿವ ರಕುತದ
ಸರಿವಿನಲಿ ನೆರೆ ನನೆದು ಭೂರಿಶ್ರವನು ನಸುನಗುತ
ಮುರಿದು ಪಾರ್ಥನ ನೋಡಿ ವಾಮದ
ಬೆರಳನೊಲೆದನು ಲೇಸು ಲೇಸ
ಬ್ಬರದ ಬಿರುದಿನ ಧರ್ಮನಿಷ್ಠರು ಪಾಂಡುಸುತರೆಂದ  ೧೪  
 
ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋಣರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ  ೧೫  
 
ಅರಿದೆ ನೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗಗಳನರಿಯರಿಂದ್ರ ದ್ರೋಣ ಶಂಕರರು
ಮಱರೆಮರೆಯಲಿರಿಗಾರರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟಿರಕಟೆಂದ  ೧೬  
 
ಓಡಿ ಕೊಂದನು ಕಾಲಯವನನು
ಬೇಡಿ ಕೊಂದನು ಕೈಟಭನ ಕೈ
ಮಾಡಿ ಕೊಲಿಸಿದ ಮಾಗಧನನಭಿಮಾನಗೇಡುಗನ
ಕೂಡಿಕೊಂಡಿರಿ ಮೂರುಲೋಕದ
ಬೀಡರಿಯೆ ಬಾಹಿರನನೀ ಹರಿ
ಯಾಡಿಸಿದವೋಲಾಡಿ ಕೆಟ್ಟಿರಿ ಖಳರು ನೀವೆಂದ      ೧೭  
 
ಪೊಡವಿಯೊಳು ಯಾದವರು ಕ್ಷತ್ರಿಯ
ಗೆಡುಕರದರೊಳು ಹುಟ್ಟಿದನು ಕೊಲೆ
ಗಡಿಗ ಹಾವಿನ ಹುತ್ತದಲಿ ಹಾವ್ಮೆಕ್ಕೆ ಬೆಳೆದಂತೆ
ನಡೆವಳಿಯ ನೋಡಿದರೆ ಲೋಗರ
ಮಡದಿಯರು ತನ್ನವರು ಠಕ್ಕಿನ
ಕಡಲು ಕೃಷ್ಣನ ನಂಬಲಿಹಪರವಿಲ್ಲ ನಿಮಗೆಂದ  ೧೮  
 
ಎಂದಡೆಂದನು ಪಾರ್ಥನೆಲವೋ
ಮಂದಮತಿ ನೀನೆಂದರಹುದೆ ಮು
ಕುಂದನನು ನಂಬಿದರಿಗಿಹಪರಸೌಖ್ಯ ಭಯವಿಲ್ಲ
ಇಂದು ನಾವ್ ಮಾಡಿದುದು ಹೊಲ್ಲೆಹ
ವೆಂದೆ ನೀನದನರಿಯೆ ಶಿಷ್ಯನ
ಕುಂದು ಹೆಚ್ಚುಗಳಾರದೆಂಬುದ ಹೇಳು ನೀನೆಂದ  ೧೯  
 
ಎನಗೆ ಸಾತ್ಯಕಿ ಕೋಲಮಗನಾ
ತನ ವಧೆಯನಾ ಕಾಣಲಾಗದು
ಮನಕೆ ಮತವೇ ನಮ್ಮ ಹರಿಬಕೆ ಬಂದು ಕಾದುವನ
ನಿನಗೆ ಕೊಡುವೆನೆ ನಮ್ಮ ಧರ್ಮವ
ಜನವರಿಯದೇ ಹೋಗು ಹೋಗೆನೆ
ಮನದೊಳಗೆ ನಗುತಿರ್ದನಾ ಭೂರಿಶ್ರವ ಕ್ಷಿತಿಪ        ೨೦  
 
ಎಲವೊ ಸಾತ್ಯಕಿ ಬದುಕಿದೈ ನರ
ನುಳುಹಿಕೊಂಡನು ಹೋಗೆನುತ ಹೆಡ
ತಲೆಯನೊದೆದನು ನಿಂದು ಬರಿಕೈ ಮುರಿದ ಗಜದಂತೆ
ಒಲೆವುತೈತಂದೊಂದು ರಣಮಂ
ಡಲದೊಳಗೆ ಪದ್ಮಾಸನವನನು
ಕೊಳಿಸಿ ಯೋಗಾರೂಢನಾದನು ವರಸಮಾಧಿಯಲಿ  ೨೧  
 
ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯದ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ  ೨೨  
 
ಆಗದಾಗದು ಕಷ್ಟವಿದು ತೆಗೆ
ಬೇಗವೆನಲರ್ಜುನನ ಕೃಷ್ಣನ
ನಾಗಳವ ಕೈಕೊಳ್ಳದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ  ೨೩  
 
ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮರ್ತ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿದ್ದರು ಕೃಷ್ಣಫಲುಗುಣರ  ೨೪  
 
ಇತ್ತ ರವಿರಶ್ಮಿಗಳು ನೆರೆ ಕೆಂ
ಪೊತ್ತಿದವು ಸೈಂಧವನನೀಗೊ
ತ್ತೊತ್ತೆಯಲಿ ನೆಲೆ ಕಾಣಬಾರದು ಸಾಕು ದುಮ್ಮಾನ
ಇತ್ತ ನಿಜ ಭಾಷೆಗೆ ಪರಾಭವ
ಹತ್ತಿರಾಯಿತು ನರ ನಿದಾನಿಸೆ
ನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ  ೨೫  
 
ಕಾದಿರೈ ಷಡುರಥರು ನೃಪತಿಗೆ
ಕಾದು ಕೊಡಿರೈ ಸೈಂಧವನನಿದು
ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
ಮೂದಲೆಗಳಿವು ಮುಟ್ಟುವಡೆ ಮುನಿ
ಸಾದಡೊಳ್ಳಿತು ನಿಪ್ಪಸರದಲಿ
ಕಾದುವಿರಲೈ ಕಾಣಲಹುದೆಂದೊರಲಿದನು ಪಾರ್ಥ  ೨೬  
 
ಜರಿದುದೀ ಬಲರಾಸಿ ಗಾಳಿಯ
ಹೊರಳಿಗೊಡ್ಡಿದ ಹೊಟ್ಟು ಹಾರುವು
ದರಿದೆ ಗಿರಿಗಳು ನೆಲನ ಬಿಟ್ಟುದನೇನ ಹೇಳುವೆನು
ಗುರುತನುಜ ಕೃಪ ಕರ್ಣ ಮಾದ್ರೇ
ಶ್ವರ ಸುಯೋಧನ ಚಿತ್ರಸೇನರು
ಮುರಿದು ತರಹರಿಸಿದರು ಸೂಚೀವ್ಯೂಹದಗ್ರದಲಿ  ೨೭  
 
ಹರಿಯ ಬೊಬ್ಬೆ ರಥಾಶ್ವದಬ್ಬರ
ನರನ ಬಿಲುಟಂಕಾರ ತೇರಿನ
ಧರಧುರದ ಚೀತ್ಕಾರ ಹನುಮನ ಸಿಂಹನಿರ್ಘೋಷ
ಅರಿಬಲವ ತಿವಿದುದು ಚತುರ್ಬಲ
ಹೊರಳಿಯೊಡೆದುದು ಸುಭಟರೆದೆ ಜ
ರ್ಝರಿತವಾದುದು ಪಾರ್ಥ ಹೊಕ್ಕನು ಸೈಂಧವನ ದಳವ  ೨೮  
 
ಅಳವಿಗೊಡಲಿ ಮಹಾರಥರು ಕೈ
ಕೊಳಲಿ ಸೈಂಧವ ನೃಪನನೊಂದರೆ
ಘಳಿಗೆ ಕಾಯ್ದರೆ ನಾವು ನೆರೆ ಕೊಂದವರು ಫಲುಗುಣನ
ಹೊಳಹುಗಳೆದುದು ಕಾಲವಿನ್ನರೆ
ಘಳಿಗೆ ಸೈರಿಸಿ ಶಿವ ಶಿವಾಯೆಂ
ದೊಳಗೊಳಗೆ ಮೂದಲಿಸುತಿರ್ದರು ಭಟರು ತಮ್ಮೊಳಗೆ  ೨೯  
 
ಧನುವನೊದರಿಸಿ ಸಕಲ ಸುಭಟರು
ಮನವ ಬಲಿದೊಗ್ಗಾಗಿ ಸರಳಿನ
ಜಿನುಗುವಳೆಯಲಿ ನಾದಿದರು ನಾರಾಯಣಾರ್ಜುನರ
ಅನಿಬರಂಬನು ಕಡಿದು ಗುರುನಂ
ದನನ ಕರ್ಣನ ಕೃಪನ ದುರಿಯೋ             
ಧನನ ಮೆಯ್ಯಲಿ ಮೆತ್ತಿದನು ಮುಮ್ಮೊನೆಯ ಬೋಳೆಗಳ    [  ೩೦   
 
ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕಡುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ  ೩೧  
 
ದ್ಯುಮಣಿಯೊದೆದರೆ ತರಹರಿಸುವುದೆ
ತಿಮಿರ ರಾಜನ ದೇಹವೀ ವಿ
ಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ
ಸಮತಳಿಸಿ ಶರವಳೆಯ ಕರೆದು
ದ್ಭ್ರಮಿ ಮಹಾರಥ ಭಟರ ವಿಜಯದ
ಮಮತೆಗಳ ಮಾಣಿಸಿದನಂದಮಳಾಸ್ತ್ರಬೋಧೆಯಲಿ  ೩೨  
 
ನೊಂದು ಮರಳದೆ ಮಸಗಿ ಸೂರ‍್ಯನ
ನಂದನನು ತಾಗಿದನು ಗುರುಸುತ
ಮುಂದುವರಿದನು ತಲೆ ಹರಿದರೆನ್ನಟ್ಟೆ ಕಲಿಯೆನುತ
ಇಂದಿನಲಿ ಮಹನವಮಿ ತಲೆಗಳಿ
ಗೆಂದು ಕವಿದರು ಸಕಲ ಭಟರರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ  ೩೩  
 
ಮೇಲೆ ಬಿದ್ದುದು ಸೇನೆ ಸವೆಯದು
ನಾಳೆ ಪರಿಯಂತರ ಘಳಿಗೆಗಿನ
ನಾಳುವನು ಜಲಧಿಯಲಿ ಕಾಣೆನು ವೈರಿ ಸೈಂಧವನ
ಹೇಳಿ ಫಲವೇನಿನ್ನು ವಹ್ನಿ
ಜ್ವಾಲೆ ಕೊಳ್ಳಲಿ ದೇಹವನು ಸಾ
ಕೇಳು ಮುರಹರ ತೇರ ತಿರುಹಿನ್ನೆಂದನಾ ಪಾರ್ಥ  ೩೪  
 
ಸಲಿಸಬೇಹುದು ಭಕುತ ಮಾಡಿದ
ಛಲದ ಭಾಷೆಯನೆನುತ ರವಿಮಂ
ಡಲಕೆ ಮರೆಯೊಡ್ಡಿದನು ಮುರರಿಪು ವರಸುದರ್ಶನವ
ಕಳನೊಳಗೆ ಕತ್ತಲಿಸಿತಹಿತನ
ಕೊಲೆಗೆ ಕಾವಳ ಕವಿದವೋಲರೆ
ಘಳಿಗೆಯಲಿ ಸುಮ್ಮಾನ ಮಸಗಿತು ಸಕಲ ಕುರುಬಲಕೆ  ೩೫  
 
ಸೆರಗ ಬೀಸಿದರಾರಿದರು ಬೊ
ಬ್ಬಿರಿದರುರು ಗಂಭೀರಭೇರಿಯ
ಬಿರುದನಿಗಳುಬ್ಬರಿಸಿದವು ಗಬ್ಬರಿಸಿದವು ನಭವ
ತೆರಹ ಕೊಡು ಕೊಡು ಭಾಷೆಕಾರನು
ಮೆರೆದು ಹೋಗಲಿ ವಹ್ನಿಕುಂಡದೊ
ಳೊರಗುವುದ ನೋಡುವೆವೆನುತ ತನಿಗೆದರಿತರಿಸೇನೆ  ೩೬  
 
ಹೊಲಬುದಪ್ಪಿದ ತಳಪಟದ ಹೆ
ಬ್ಬುಲಿಯವೊಲು ನಿನ್ನಾತ ಸಿಲುಕಿದ
ನಿಲುಕಿ ನೋಡಿದನೆಲ್ಲಿ ತೋರರ್ಜುನನನೆನಗೆನುತ
ಉಲಿಯೆ ಸೈಂಧವನಿತ್ತ ಪಾರ್ಥನ
ಮುಳಿದು ಜರೆದನು ಕೃಷ್ಣನಹಿತನ
ತಲೆಗೆ ಹರ ಹಿಡಿವಂಬ ತೊಡು ತೊಡು ಬೇಗ ಮಾಡೆಂದ  ೩೭  
 
ದೇವ ರವಿಯಸ್ತಮಿಸಿದನು ನೀ
ವಾವುದುಚಿತವ ಕಂಡಿರೆನೆ ನಿನ
ಗಾವ ಭಯ ಬೇಡಾಡಬಾರದು ತೊಡು ಮಹಾಶರವ
ಈ ವಿರೋಧಿಯ ಕೆಡಹು ಸೂರ‍್ಯನ
ನಾವು ತೋರಿಸಿ ಕೊಡುವೆವೆನೆ ಗಾಂ
ಡೀವದಲಿ ಹೂಡಿದನು ಫಲುಗುಣ ಪಾಶುಪತಶರವ  ೩೮  
 
ತೆಗೆಯೆ ಜಗ ಕಂಪಿಸಿತು ತಾರೆಗ
ಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ
ದಿಗಿಭತತಿ ನಡುನಡುಗೆ ತಳ ವಾ
ಸುಗಿ ಫಣಾಳಿಯ ಸೆಳೆಯೆ ಬಲುಸರ
ಳುಗಿದು ದಳ್ಳುರಿದಿರುಳ ಕಾರಿತು ಬೆಸಸು ಬೆಸಸೆನುತ  ೩೯  
 
ಬಲಿದು ಮಂಡಿಯನೂರಿ ಕೆನ್ನೆಗೆ
ಸೆಳೆದು ಮುಷ್ಟಿಯ ಪಾರ್ಥನಹಿತನ
ತಲೆಯನೆಚ್ಚನು ಗೋಣ ಕಡಿದುದು ಪಾಶುಪತ ಬಾಣ
ಹೊಳೆವ ಮಕುಟದ ವದನ ಗಗನಾಂ
ಗಳಕೆ ಚಿಮ್ಮಿತು ರಕುತಧಾರಾ
ವಳಿಯ ರಿಂಗಣವಾಯ್ತು ಮುಂಡದ ತಲೆಯ ಮಧ್ಯದಲಿ  ೪೦  
 
ಬೀಳು ಬೀಳಭಿಮನ್ಯುವಿನ ವಧೆ
ಬಾಳಲೀವುದೆ ನಿನ್ನನೆನುತು
ಬ್ಬಾಳುತನದಲಿ ಪಾರ್ಥ ಬೊಬ್ಬಿಡೆ ಕೃಷ್ಣ ಖಾತಿಯಲಿ
ಖೂಳ ಕೇಳಿಳೆಗವನ ತಲೆಯನು
ಬೀಳಿಕಿದನ ಕಪಾಲ ಸಾವಿರ
ಹೋಳಹುದು ತೊಡು ಪಾಪಿ ಬೇಗದಲಂಬ ಕಳುಹೆಂದ  ೪೧  
 
ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ              ೪೨  
 
ತುಡುಕಿ ಖಂಡವ ಕಚ್ಚಿ ನಭದಲಿ
ಗಿಡಿಗ ಹಾಯ್ವಂದದಲಿ ತಲೆಯನು
ಹಿಡಿದು ಹಾಯ್ದುದು ಬಾಣ ವೃದ್ಧಕ್ಷತ್ರನಿದ್ದೆಡೆಗೆ
ಕುಡಿತೆಯೆರಡರೊಳರ್ಘ್ಯಜಲವನು
ಹಿಡಿದು ಹಾಯ್ಕುವ ಸಮಯದಲಿ ತಲೆ
ನಡುವೆ ಬಿದ್ದುದು ಅರ್ಘ್ಯಜಲ ನರರಕ್ತಮಯವಾಗೆ             ೪೩  
 
ಏನಿದದ್ಭುತವೆನುತ ತಲೆಯನು
ತಾನೆ ಕೊಡಹಿದನಂಜಲಿಯನದ
ನೇನನೆಂಬೆನು ಕೃಷ್ಣರಾಯನ ಮಂತ್ರಶಕ್ತಿಯನು
ಆ ನರೇಂದ್ರನ ತಲೆ ಸಹಸ್ರವಿ
ಧಾನದಲಿ ಬಿರಿದುದು ಸುಯೋಧನ
ಸೇನೆ ಹರಿದುದು ಜರಿದುದರಿಭಟಧೈರ‍್ಯಗಿರಿನಿಕರ        ೪೪  
 
ನಡುಗಿ ಸಂಗರ ಭೀತಿಯಲಿ ಬೆಂ
ಗೊಡುವ ನಾಯಕವಾಡಿಗಳ ಪಂ
ಗಡವ ನೋಡುತ ಮರೆಯ ಚಕ್ರವ ತೆಗೆದನಸುರಾರಿ
ಪಡುವಲಿಳಿಯದ ರವಿಯ ಬಯ್ವುತ
ನಡೆದನಾ ಕುರುರಾಯನಿತ್ತಲು
ಹಿಡಿದ ಚೌರಿಗಳಾಡಿದವು ಪಾಂಡವರ ಸೇನೆಯಲಿ              ೪೫  
 
ದೈವ ಪೌರುಷದೊಳಗೆ ಶಿವ ಶಿವ
ದೈವ ಬಲವೇ ಬಲವಲಾ ನಿ
ರ್ದೈವರಂಗೈತಳಕೆ ಬಂದರೆ ಪರುಷ ಪಾಷಾಣ
ದೈವದೂರರು ಧರ್ಮಹೀನರು
ನೆಯ್ವ ನೆಯ್ಗೆಗಳೆನುತ ಮಿಗೆ ಬಿಸು
ಸುಯ್ವುತಿರ್ದರು ಕರ್ಣ ಕೃಪ ಗುರುನಂದನಾದಿಗಳು             ೪೬  
 
ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೊಡಗಿದೆವು ದೈವದಲಿ ಕಲಹವನೆಂದನಾ ಕರ್ಣ      ೪೭  
 
ಮುನಿದು ಮಾಡುವುದೇನು ಕೃಷ್ಣನ
ನೆನಹು ಘನ ನಮ್ಮಸುವ ನಾವೀ
ಜನಪತಿಗೆ ಮಾರಿದೆವು ನಮಗೀ ಚಿಂತೆಯೇಕೆನುತ
ಇನಸುತಾದಿಗಳಿದ್ದರಿತ್ತಲು
ಮನದ ಹರುಷದ ಹರಹಿನಲಿ ಪಾ
ರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ  ೪೮

ಸಂಕ್ಷಿಪ್ತ ಭಾವ
Lrphks Kolar

ಸೈಂಧವನನ್ನು ಕೊಂದು ಅರ್ಜುನ ತನ್ನ ಪ್ರತಿಜ್ಞೆ ನೆರವೇರಿಸಿಕೊಂಡದ್ದು.

ಕರ್ಣನಿಗೂ ಸಾತ್ಯಕಿಗೂ ಯುದ್ಧ ಮುಂದುವರಿಯಿತು. ಭೀಮ ಅತ್ತ ಕಡೆ ನಡೆದನು. ಇತ್ತ ಭೂರಿಶ್ರವ ತನ್ನ ದೊಡ್ಡ ಸೈನ್ಯದೊಂದಿಗೆ ಎದುರಾದನು. ಕರ್ಣ, ಅಶ್ವತ್ಥಾಮ, ಕೃತವರ್ಮ, ಭೂರಿಶ್ರವ ಎಲ್ಲರೂ ಸೇರಿ ಅರ್ಜುನನನ್ನು ಮುಂದೆ ಬಿಡದಂತೆ ತಡೆಯಲು ಸಾತ್ಯಕಿ ಎದುರಿಸಿದ. ಇಬ್ಬರಿಗೂ ಭಾರಿ ಯುದ್ಧ ನಡೆಯಿತು. ಕೊನೆಯಲ್ಲಿ ಸಾತ್ಯಕಿಯ ಬಲ ಕುಂದಿತು. ಭೂರಿಶ್ರವ ಕಾಲಿನಿಂದ ಸಾತ್ಯಕಿಯ ಮುಂದಲೆಗೆ ಹೊಡೆದನು.  ಕೃಷ್ಣ ಇದನ್ನು ಅರ್ಜುನನ ಗಮನಕ್ಕೆ ತಂದನು.

ಇದಾವ ಧರ್ಮವೆನ್ನಲು ಆರುಜನರು ಒಂದಾಗಿ ಹಸುಳೆಯನ್ನು ಮೋಸದಲ್ಲಿ ಕೊಂದರಲ್ಲ ಈಗ ಅವರಲ್ಲಿ ಯಾವ ಧರ್ಮವೂ ಉಳಿದಿಲ್ಲ. ಮೊದಲು ಅವನನ್ನು ಕೊಲ್ಲು ಎಂದನು. ಕೋಪಗೊಂಡ ಅರ್ಜುನ ಭೂರಿಶ್ರವನ ಕೈಯನ್ನು ಕತ್ತರಿಸಿದನು.  ಆಗ ಅದೇ ಸ್ಥಿತಿಯಲ್ಲಿಯೇ ಭೂರಿಶ್ರವನು ಯುದ್ಧ ಮುಂದುವರಿಸುತ್ತ ಅರ್ಜುನನನ್ನು ಮತ್ತು ಕೃಷ್ಣನನ್ನು ಹೀಯಾಳಿಸಿದನು. ಈ ಕೃಷ್ಣನನ್ನು ನಂಬಿ ನೀವು ಕೆಟ್ಟಿರೆಂದನು.ಇವನು ಹುಟ್ಟಿನಿಂದಲೂ ಎಲ್ಲರನ್ನೂ ಕೊಲ್ಲುತ್ತ ಬಂದವನೆಂದು ಜರಿದನು. ಭೂರಿಶ್ರವನು 
ರಣರಂಗದಲ್ಲಿ ಪದ್ಮಾಸನದಲ್ಲಿ ಕುಳಿತು ಯೋಗಾರೂಢನಾದನು. ಸಾತ್ಯಕಿಯು ಕಡು ಕ್ರೋಧದಿಂದ ಅವನ ಶಿರವನ್ನು ಕತ್ತರಿಸಿದನು. ಎಲ್ಲರೂ ಅವನನ್ನು ದೂರಿದರು.

ಇತ್ತ ಸಂಜೆಯು ಸಮೀಪವಾಗುತ್ತಿತ್ತು. ಮತ್ತೆ ಅರ್ಜುನನು ಇತ್ತ ತಿರುಗಿದನು. ಮಹಾರಥರೆಲ್ಲರೂ ಸೇರಿ ಇವನನ್ನು ತಡೆದರು. ಕೌರವನ ಪಕ್ಷದವರು ಇನ್ನು ಅರೆಘಳಿಗೆ ಇವನನ್ನು ತಡೆದರೆ ಜಯದ್ರಥ ಉಳಿಯುವನು, ಇವನು ಸಾಯುವನು ಎಂದು ಕಾಯುತ್ತಿದ್ದರು. ಅರ್ಜುನನಲ್ಲಿ ನಿರಾಸೆ ಕವಿಯಿತು. ರಥವನ್ನು ತಿರುಗಿಸು ಎಂದನು. ಅಗ್ನಿಪ್ರವೇಶಕ್ಕೆ ಸಿದ್ಧನಾದನು.

ಸೂರ್ಯನಿಗೆ ಮುರಹರನು ಸುದರ್ಶನವನ್ನು ಅಡ್ಡಹಿಡಿದನು. ಕತ್ತಲೆ ಆವರಿಸಿತು. ಕೌರವರು ಕುಣಿದಾಡಿದರು. ಅರ್ಜುನನ ಅಗ್ನಿಪ್ರವೇಶ ನೋಡಲು ಕಾತರಿಸಿತು ಕೌರವನ ಸೇನೆ. ಅದುವರೆಗೂ ಅಡಗಿದ್ದ ಸೈಂಧವನು ಅರ್ಜುನನನ್ನು ಕೆಣಕಲು ಎದ್ದು ಬಂದನು. ತಕ್ಷಣ ಅವನ ಮೇಲೆ ಬಾಣಪ್ರಯೋಗಿಸು ಎನ್ನಲು ರವಿಯು ಅಸ್ತಮಿಸಿದನಲ್ಲ ಎಂದು ಅರ್ಜುನನು ಮರುಗಿದನು. ಇಲ್ಲ, ನಾನು ಸೂರ್ಯನನ್ನು ತೋರಿಸುವೆನೆನ್ನಲು ಪಾಶುಪತಾಸ್ತ್ರವನ್ನು ಪ್ರಯೋಗಿಸಿದನು. ಅದರ ಪ್ರಯೋಗದ ಶಕ್ತಿ ಭೂಮಿಯನ್ನು ನಡುಗಿಸಿತು. 

ಅವನ ವದನವು ಗಗನಕ್ಕೆ ಹಾರಿತು. ಕೃಷ್ಣನು ತಕ್ಷಣ ಹೇಳಿದನು. ಇವನ ತಲೆಯನ್ನು ನೆಲಕ್ಕೆ ಬೀಳಿಸಿದವನ ಮಸ್ತಕ ಬಿರಿಯುವುದೆಂಬ ಶಾಪ ಉಂಟು. ಇವನ ತಂದೆಯದು. ಆದ್ದರಿಂದ ಈ ತಲೆಯು ಅವನ ಕೈಯಲ್ಲಿ ಬೀಳುವಂತೆ ಮಾಡು ಎಂದನು. ಪಾರ್ಥನು ಹಾಗೇ ಮಾಡಿದನು. ಅರ್ಘ್ಯ ಕೊಡುತ್ತಿದ್ದ  ವೃದ್ಧಕ್ಷತ್ರನ ಬೊಗಸೆಯಲ್ಲಿ ಬಂದು ಬಿದ್ದಿತು  ಸೈಂದವನ ಶಿರ. ತಕ್ಷಣ ಕೈ ಕೊಡವಲು ಅವನು ಸತ್ತುಬಿದ್ದನು.
ಸೂರ್ಯನಿಗೆ ಹಿಡಿದಿದ್ದ ಚಕ್ರವನ್ನು ತೆಗೆಯಲು ಸೂರ್ಯ ಕಾಣಿಸಿದನು. ಕೌರವರು ಬಯ್ದುಕೊಳ್ಳುತ್ತ ಸಾಗಿದರು. ದೈವಬಲದ ಮುಂದೆ ಯಾರೇನು ಮಾಡುವರು? ಅಂತಹಾ ವ್ಯೂಹವಿದ್ದೂ ಸೈಂಧವನನ್ನು ಉಳಿಸಲಾಗಲಿಲ್ಲವೆಂದು ಕರ್ಣ ಮರುಗಿದನು. ರಥ ಹಿಂತಿರುಗಿತು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ