ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ108


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಹದಿನೇಳನೆಯ ಸಂಧಿ


ಸೂ.     
ಇರುಳು ಸಮರದಲುಭಯರಾಯರ
ಗುರು ವಿರೋಧಿಮಹೀಶಸೇನಾ
ಶರಧಿಯನು ಕಲಕಿದನು ಗೆಲಿದನು ಮಕುಟವರ್ಧನರ  
 
ಕೇಳು ಧೃತರಾಷ್ಟ್ರಾವನಿಪ ನಿ
ಮ್ಮಾಳನವರಾಳನು ವಿಭಾಡಿಸಿ
ನೀಲಗಿರಿಯೆಡೆವೊಕ್ಕುದೆನೆ ಖಳನೊಡಲು ನಿಡುಗೆಡೆಯೆ
ಕಾಳೆಗದ ಕೈಚಳಕದವನು
ಬ್ಬಾಳುತನವಕ್ಕುಡಿಸೆಯಿಕ್ಕೆಲ
ದಾಳು ತೆಗೆದುದು ಬಿಗಿದ ಕತ್ತಲೆ ಮೊಗೆದುದಂಬರವ  ೧  
 
ಇನ್ನು ಬದುಕಿದೆವಮಮ ರಕ್ಕಸ
ಕುನ್ನಿಯೂಳಿಗವಡಗಿತೆಂದೇ
ನಿನ್ನವರ ಸುಮ್ಮಾನವುಕ್ಕಿತು ಸುಕ್ಕಿತತಿಭೀತಿ
ಇನ್ನು ಫಡಫಡ ಸೂತತನುಜನ
ಬೆನ್ನಲುಗಿವೆವು ಕರುಳನಾಹವ
ಕೆನ್ನ ಬಿಡುಬಿಡು ಎನುತ ಗರ್ಜಿಸಿ ಹೊಕ್ಕುದರಿಸೇನೆ    ೨  
 
ಅಂಗವಣೆ ಮನದಲ್ಲಿ ಪದದಲಿ
ಮುಂಗುಡಿಯ ದುವ್ವಾಳಿ ಕಯ್ಯಲಿ
ಸಿಂಗದಾಯತ ಸವೆಯದೆರಡೊಡ್ಡಿನಲಿ ಸುಭಟರಿಗೆ
ಕಂಗಳನು ಕಾರಿರುಳು ರಕ್ಕಸಿ
ನುಂಗಿದಳು ನಾನೇನನುಸುರುವೆ
ನಂಗವಿಸಿ ಕಡುಗಲಿಗಳಿರಿದಾಡಿದರು ತಮ್ಮೊಳಗೆ      ೩  
 
ಒಳಗೊಳಗೆ ಹೊಯಿದಾಡಿ ಹೊರಳುವ
ಬಲುಭಟರನಗಿದೊಗುವ ಬಲುಗ
ತ್ತಲೆಯ ಕೋಳಾಹಳವನುಭಯ ಚಾತುರಂಗದಲಿ                
ಬಲಿದ ತೂಕಡಿಕೆಗಳ ನಸು ಬೆದ
ರೊಲಹುಗಳ ಜವವೆದ್ದ ಝೊಮ್ಮಿನ
ಬಲೆಗೆ ಸಿಲುಕಿದ ಬಲವನರ್ಜುನದೇವನೀಕ್ಷಿಸಿದ                ೪  
 
ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ        ೫  
 
ಬಳಲಿದಿರಿ ಹಗಲಿರುಳಕಾಳೆಗ
ದೊಳಗೆ ಕೈಮಾಡಿದಿರಿ ಕಗ್ಗ
ತ್ತಲೆಯ ಬಲುಬಂದಿಯಲಿ ಸಿಲುಕಿತು ಕಂಗಳಂಗವಣೆ
ನಳಿನರಿಪುವುದಿಸಲಿ ಬೆಳುದಿಂ
ಗಳಲಿ ಕೈದುವ ಕೊಳ್ಳಿ ನಿದ್ರೆಯ
ನಿಳಿಯಬಿಡಬೇಡೆಂದು ಸೇನೆಗೆ ಸಾರಿದನು ಪಾರ್ಥ             ೬  
 
ನರನ ಮಾತಿಂ ಮುನ್ನ ನಿದ್ರಾ
ಭರದ ಭಾರಿಯ ಹೊರೆಯ ಭಟರಿ
ತ್ತರದಲೊಲೆದರು ಸಡಿಲಿದವು ಕೈದುಗಳು ಕರಗಳಲಿ
ನೆರೆದುಸುರ ವೈಹಾಳಿಗಳ ನಿ
ಬ್ಬರದ ಮೊರಹಿನ ಮುರಿದಗೋಣಿನ
ಕರದ ತಲೆಗಿಂಬುಗಳ ಕಾಲಾಳೊರಗಿತವನಿಯಲಿ      ೭  
 
ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಪೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ    ೮  
 
ಬಾಯ ಲೋಳೆಗಳಿಳಿಯೆ ಮೈ ಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ  ೯  
 
ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿ ವೆ
ಗ್ಗಳ ಗಜಾರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು              ೧೦  
 
ಕಲಹವನು ಕನಸಿನಲಿ ಕಂಡ
ವ್ವಳಿಸಿ ಹಳುಹಳು ಪೂತು ಸಾರಥಿ
ಭಲರೆ ಸಾರಥಿ ಜಾಗುರೆನುತಿರ್ದುದು ಮಹಾರಥರು
ತೊಲಗದಿರಿ ತಿನ್ನಡಗನಹಿತನ
ತಿಳಿರಕುತವನು ಸುರಿಯೆನುತ ಕಳ
ವಳಿಸುತಿರ್ದರು ವೀರರೆರಡೊಡ್ಡಿನಲಿ ರಭಸದಲಿ  ೧೧  
 
ಎಲೆಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರಿದವು ಹಿಮರುಚಿಯ ರಶ್ಮಿಗಳು  ೧೨  
 
ತಣಿದುದಂತಃಕರಣ ನಿದ್ರಾ
ಗಣಿಕೆಯರ ರತಿಯಲ್ಲಿ ರಿಂಗಣ
ಗುಣಿವ ಮನ ಹದುಳಿಸಿತು ತಿಳಿದುದು ಝೊಮ್ಮಿನುಮ್ಮೋಹ
ರಣವನೀಗಳೆ ಕಾಣಬಹುದೆಂ
ಬಣಕಿಗರನೆಬ್ಬಿಸುವವೊಲು ಸುಳಿ
ದಣೆದು ಹೊದರೆದ್ದುದು ಸುಧಾದೀಧಿತಿಯ ಕರನಿಕರ  ೧೩  
 
ಬಾಡಿದವು ತಾವರೆಗಳುರೆ ಝಳ
ವೂಡಿದವು ನೈದಿಲುಗಳಂಬುಧಿ
ಝಾಡಿ ಮಾಡಲು ಬೆರಸಿದವು ಝಷ ಮಕರ ಕರ್ಕಟಕ
ತೋಡಿದವು ಮುಖದಲ್ಲಿ ತುಂಡದ
ಲೀಡಿರಿದು ಕುಡಿಕುಡಿದು ಬೊಬ್ಬಿ
ಟ್ಟಾಡುತಿರ್ದವು ಸಾಂದ್ರಚಂದ್ರಿಕೆಯಲಿ ಚಕೋರಿಗಳು  ೧೪  
 
ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲುಮರುಗುತಿರ್ದವು ಜಕ್ಕವಕ್ಕಿಗಳು  ೧೫  
 
ವಿನುತ ಸುಕವಿಯ ಸೂಕ್ತಿ ತಾಗಿದ
ಮುನಿಗಳಂತಃಕರಣದಂತಿರೆ
ಹೊನಲುವರಿದವು ಚಂದ್ರಕಾಂತದ ಸಾಲಶಿಲೆ ಕರಗಿ
ಮನದ ಕತ್ತಲೆ ಗುರುವರನ ವಾ
ಕ್ಕಿನಲಿ ತೊಲಗುವವೋಲು ತುಂಬಿಯ
ತನತನಗೆ ನೂಕಿದವು ವಿಕಸಿತ ಕೈರವಾದಿಗಳು  ೧೬  
 
ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು
ಹರನ ಹಗೆಯಡ್ಡಣ ವಿಳಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ  ೧೭  
 
ತಳಿತ ತಂಪಿನ ತಂಗದಿರ ತೊರೆ
ಯೊಳಗೆ ತೇಕಾಡಿದುದು ಬಲವ
ಗ್ಗಳದ ಬಳಲಿಕೆ ಬೀಳುಕೊಂಡುದು ಬಲಿದುದಂಗವಣೆ
ಒಲೆದು ಬರಿಕೈತೂಗಿ ಕಿವಿಗಳ
ನಲುಗಿದವು ಕರಿನಿಕರವವಿಲಣ
ಘಲಿಲೆನಲು ಕೊಡಹಿದವು ವಳಯವನಖಿಳ ಹಯನಿಕರ  ೧೮  
 
ತುತುಬ ಬಲಿದೊಳಗೌಕಿ ಮೊನೆ ಮುಂ
ಜೆರಗನಳವಡೆ ಸೆಕ್ಕಿ ಸುತ್ತಿನೊ
ಳಿರುಕಿ ಬಿಗಿದ ಕಠಾರಿ ದಾರದ ಗೊಂಡೆಯವ ಕೆದರಿ
ಒರಗಿದೆಡಬಲದವರನೆಬ್ಬಿಸಿ
ಜರೆದು ವೀಳೆಯಗೊಂಡು ಕೈದುವ
ತಿರುಹುತಾಯತವಾಯ್ತು ಪಡೆಯೆರಡರಲಿ ಪಾಯದಳ  ೧೯  
 
ಬಿಗುಹನೇರಿಸಿ ಮತ್ತೆ ತುರಗಾ
ಳಿಗಳ ಬಿಗಿದರು ರಾವುತರು ಹೊರ
ಜೆಗಳ ಜೋಡಿಸಿ ಜೋದರಾಯತವಾಯ್ತು ಕರಿಗಳಲಿ
ಬಿಗಿದು ಕೀಲಚ್ಚುಗಳ ರಥಿಕಾ
ಳಿಗಳು ಮೇಳೈಸಿದರು ಕೈದುವ
ನುಗಿದು ಕಾಲಾಳೆದ್ದು ನಿಂದುದು ಕದನಕನುವಾಗಿ      ೨೦  
 
ಕದಡಿದವು ಬಲವೆರಡು ಕಲ್ಪದೊ
ಳುದಧಿಯುದಧಿಯನೊದೆವವೊಲು ತಾಗಿದರು ನೀಗಿದರಸುವನಸೆಮಸೆಗಕ್ಕುಡಿಸಿದವರು
ಬಿದಿರಿದರು ಕೊಯ್ದಲೆಗಳನು ಕಾ
ರಿದರು ಕರುಳನು ಕುಸುರಿ ಖಂಡದ
ಕದಳಿ ಮೈಗಳ ಚೂಣಿ ಮಲಗಿತು ತಾರು ಥಟ್ಟಿನಲಿ    ೨೧  
 
ಚೂಣಿ ತೆಗೆಯಲಿ ಮಿಸುಕಿದರೆ ನೃಪ
ನಾಣೆ ಬರಿದೇಕಾಳು ಕುದುರೆಯ
ಗೋಣನವರಿಗೆ ಮಾರುವಿರಿ ಕೌರವನ ಥಟ್ಟಿನಲಿ
ದ್ರೋಣನಲ್ಲಾ ರಕ್ಷಕನು ರಣ
ಹೂಣಿಗರು ನಿಲಿ ಭೀಮ ಪಾರ್ಥರ
ಕಾಣಬಹುದೋ ಕರೆಯೆನುತ ಗರ್ಜಿಸಿದನಾಚಾರ‍್ಯ              ೨೨  
 
ರಥವ ಸಂವರಿಸಿದನು ನಿಜ ಸಾ
ರಥಿಯ ಬೋಳೈಸಿದನು ಬಳಿಕತಿ
ರಥ ಮಹಾರಥ ರಾಜಿಗಿತ್ತನು ರಣಕೆ ವೀಳೆಯವ
ಪೃಥೆಯ ಮಕ್ಕಳ ಕರೆ ಮಹೀಸಂ
ಪ್ರಥಿತಬಲರನು ಕರೆಯೆನುತ ನಿ
ರ್ಮಥಿತ ರಿಪು ಪರಬಲವ ಹೊಕ್ಕನು ಬಿಟ್ಟ ಸೂಟಿಯಲಿ  ೨೩  
 
ರಾಹುವೆತ್ತಲು ಲಲಿತ ತಾರಾ
ವ್ಯೂಹವೆತ್ತಲು ದಳ್ಳಿಸುವ ದವ
ದಾಹವೆತ್ತಲು ನೀರಸದ ತೃಣರಾಶಿ ತಾನೆತ್ತ
ಗಾಹುಗತಕವನುಳಿದು ಕಾದುವ
ಡಾಹವಕೆ ಗುರು ಭೀಷ್ಮರಿಗೆ ಸರಿ
ಸಾಹಸಿಕರಾರುಂಟು ಮುರಿದುದು ಪಾಂಡುಸುತಸೇನೆ  ೨೪  
 
ಉದಧಿಯುದರದೊಳಿಳಿದು ತೆರೆಗಳ
ನೊದೆವ ಮಂದರದಂತೆ ಮದಕರಿ
ಕದಳಿಯಲಿ ಕೈಮಾಡುವಂತಿದೆ ಪರರ ಥಟ್ಟಿನಲಿ
ಹೊದರ ಹರೆಗಡಿದೌಕಿದನು ತೋ
ಕಿದನು ಸುಭಟರ ಜೀವವನು ಹಳೆ            
ವಿದಿರ ಮೆಳೆಯಲಿ ಮೊಳಗಿದುರಿಯವೊಲುರುಹಿದನು ದ್ರೋಣ [  ೨೫
 
ಹೊಕ್ಕ ಸಾಲರುಣಾಂಬುಮಯ ಕೈ
ಯಿಕ್ಕಿದತ್ತಲು ಖಂಡಮಯ ಮೊಗ
ವಿಕ್ಕಿದತ್ತಲು ಮೊರೆವ ಹೆಣಮಯವೇನನುಸುರುವೆನು
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕು ಡೊಳ್ಳಾಸದ ಮಹಾಭಯ
ವೆಕ್ಕಸರದಲಿ ಕಾಣಲಾದುದು ವೈರಿಬಲದೊಳಗೆ        ೨೬  
 
ಹಸಿದ ಹೆಬ್ಬುಲಿ ಮಸಗಿದರೆ ಮೃಗ
ವಿಸರವೇನಹುದರಸ ಕೇಳ್ ನಿ
ಪ್ಪಸರದಲಿಪಾಳಿಸಿದನಹಿತರನುಗಿದ
ನುಸುರುಗಳ
ಕುಶಲರೇ ಭೀಮಾರ್ಜುನರು ಪಾ
ಲಿಸುವ ಬಿರುದೇ ಕೃಷ್ಣನದು ಹರಿ
ಹುಸಿಕನೋ ಬೆಸಗೊಂಬೆವೆನುತರೆಯಟ್ಟಿದನು ದ್ರೋಣ  ೨೭  
 
ಆರು ಸಾವಿರ ಕುದುರೆಯೊಂಬೈ
ನೂರು ಗಜಘಟೆ ಸಾವಿರದ ಮೂ
ನೂರುರಥವೊಗ್ಗಾಗಿ ಬಿದ್ದುದು ಲಕ್ಷಪಾಯದಳ
ಏರುವಡೆದವರನು ಪಲಾಯನ
ಸೂರೆಕಾರರನವರ ದಳದಲಿ
ತೋರಿ ಹೇಳುವರೆನ್ನ ಹವಣೇ ಭೂಪ ಕೇಳೆಂದ      ೨೮  
 
ಎಲೆಲೆ ದೊದ್ದೆಗರೇಕೆ ಕೊಬ್ಬಿದ
ರಳವನರಿಯದೆ ನುಗ್ಗುಮುರಿದರೆ
ದಳದ ದೊರೆಗದು ಭಂಗವೇ ಬಾಹಿರನ ಹೊಯ್ಯೆನುತ
ಒಳಸರಿವ ನಾಯಕರ ನೆರೆ ಮೂ
ದಲಿಸಿ ಲಗ್ಗೆಯ ಲಹರಿಯಲಿ ಪಡಿ
ತಳಿಸಿದರು ಪಾಂಚಾಲ ಸೃಂಜಯ ಮತ್ಸ್ಯ ಕೇಕೆಯರು  ೨೯  
 
ಬಲವ ಕಲಿಯೇರಿಸಿ ಛಡಾಳದೊ
ಳುಲಿವ ಪಟಹ ಮೃದಂಗ ಕಹಳಾ
ವಳಿಯ ಬೊಗ್ಗಿನ ಬೊಬ್ಬಿರಿವ ನಿಸ್ಸಾಳ ಕೋಟಿಗಳ
ತಳಿತ ಝಲ್ಲರಿಗಳ ಪತಾಕಾ
ವಳಿಯ ಬಲಿದು ಪವಾಡಿಗಳ ಕಳ
ಕಳದ ಕೈವಾರದಲಿ ಕವಿದರು ದ್ರೋಣನಿದಿರಿನಲಿ      ೩೦  
 
ಅರಿಬಲದ ಥಟ್ಟಣೆಯ ಬಿರುಬಿನ
ಬರವನೀಕ್ಷಿಸಿ ಪೂತು ಪಾಂಚಾ
ಲರ ಸಘಾಡಿಕೆ ಸಾಹಸಿಕರೈ ಹಾ ಮಹಾದೇವ
ದೊರೆಯಲೇ ಬಳಿಕೇನು ಪಾಂಡವ
ರರಸಿಯಯ್ಯನು ದ್ರುಪದನಲ್ಲಾ
ಹರಯೆನುತ ಗಹಗಹಿಸಿ ತಲೆದೂಗಿದನು ಕಲಿದ್ರೋಣ  ೩೧  
 
ಇರುಳುಗಳ್ಳನ ಕೂಡೆ ಸೇರಿದ
ಮರುಳಿನಂತಿರೆ ನೀವು ರಣದಲಿ
ತರಿಸಿಕೊಂಬಿರಿ ಹಾಯ್ದರವದಿರು ನಿಮ್ಮನೆಡೆಯೊಡ್ಡಿ
ಮರಳಿರೈ ಕೈಕೆಯರು ಮತ್ಸ್ಯರು
ಬಿರುದ ಸೃಂಜಯರಕಟಕಟ ಖೂ
ಳರು ವೃಥಾ ನಿಮಗೇಕೆ ಸಾವೆನುತಿರ್ದನಾ ದ್ರೋಣ             ೩೨  
 
ಬಿಲ್ಲ ಕೊಪ್ಪಿನ ಮೇಲೆ ಚಾಚಿದ
ಗಲ್ಲದುಪಹಾಸದ ನುಡಿಯ ಮೈ
ಭುಲ್ಲಣೆಯ ರೋಮಾಂಚನದ ಚಡ್ಡಣೆಯ ಚೇತನದ
ಗೆಲ್ಲದಲಿ ಘಾಡಿಸಿದ ಚಿತ್ತದ
ಕೆಲ್ಲೆಗಂಗಳ ನಗೆಯ ಚೌಪಟ
ಮಲ್ಲನಿದ್ದನು ರಿಪುಬಲವ ಲೆಕ್ಕಿಸದೆ ಕಲಿದ್ರೋಣ      ೩೩  
 
ಕೆಣಕಿದರು ಪಾಂಚಾಲ ನಾಯಕ
ರಣಕಿಗನ ಕೈಕೊಳ್ಳದುರೆ ಸಂ
ದಣಿಸಿದರು ಸಮರಥರು ಕವಿದರು ರಾಯ ರಾವುತರು
ಕಣೆಗೆದರಿಹೊದ್ದಿದರು ಜೋದರು
ಕುಣಿದು ಕಾಲಾಳೌಕಿತೊಂದೇ
ಕ್ಷಣದೊಳನಿಬರನೊರಸಿದನು ಬೆರಸಿದನು ದೊರೆಗಳಲಿ  ೩೪  
 
ಅಡಸಿದರು ಚತುರಂಗ ಬಲವನು
ಕಡಿದು ಹರಹಿ ವಿರಾಟನನು ಜವ
ಗಿಡಿಸಿ ದ್ರುಪದನನೆಚ್ಚು ವಿರಥರ ಮಾಡಿ ಕೈಕೆಯರ
ನಡೆದು ಬರೆ ನಿಮಿಷದಲಿ ಬಲವವ
ಗಡಿಸಿ ಹೊಕ್ಕುದು ಮಸಗಿದಂಬುಧಿ
ವಡಬನನು ಮೊಗೆವಂತೆ ಮುತ್ತಿತು ಕಳಶಸಂಭವನ  ೩೫  
 
ಮತ್ತೆ ಮುರಿದನು ವೈರಿಬಲದಲಿ
ಹತ್ತು ಸಾವಿರ ಕರಿಘಟೆಯನೈ
ವತ್ತು ಸಾವಿರ ಹಯವನಿರ್ಛಾಸಿರ ಮಹಾರಥರ
ಹತ್ತು ಕೋಟಿ ಪದಾತಿಯನು ಕೈ
ವರ್ತಿಸಿದನಂತಕನವರಿಗಿವ
ರತ್ತ ಬಿಟ್ಟನು ರಥವನಾ ದ್ರುಪದಾದಿ ನಾಯಕರ  ೩೬  
 
ಆಳನೊಪ್ಪಿಸಿ ಜಾರದಿರು ಪಾಂ
ಚಾಲಪತಿ ಫಡ ನಿಲ್ಲೆನುತ ಶರ
ಜಾಲದಲಿ ಹೂಳಿದನು ದ್ರುಪದನ ಕೆಲದ ಬಲದವರ
ಖೂಳ ಫಡ ಹಾರುವರು ಬಱರಿ ಮಾ
ತಾಳಿಗಳು ತಾವೇಕೆ ನಾವೇ
ಕಾಳುತನ ತನಗೆತ್ತಲೆನುತಿದಿರಾದನಾ ದ್ರುಪದ  ೩೭  
 
ಹಿಂದ ನೆನೆಯಾ ಖೂಳ ನಾವಾ
ರೆಂದು ಮರೆದಾ ಸಾಕದಂತಿರ
ಲೊಂದನಲ್ಲದೆ ನಿನ್ನ ತಲೆಗೆರಡಂಬ ತೊಡಚಿದರೆ
ಇಂದು ನಿನ್ನಯ ಬಾಯ ತಂಬುಲ
ತಿಂದವನು ನೋಡೆನುತ ಹೆರೆಯಂ
ಬಿಂದ ಕಡಿದಿಳುಹಿದನು ಪಾಂಚಾಲಾಧಿಪನ ಶಿರವ  ೩೮  
 
ದೊರೆಯಳಿದನೇ ಸ್ವಾಮಿದ್ರೋಹರು
ತಿರುಗಿಯೆನೆ ಪಾಂಚಾಲರಲಿ ಹ
ನ್ನೆರಡು ಸಾವಿರ ರಾಜಪುತ್ರರು ಜರಿದು ಜೋಡಿಸಿತು
ಹರಿಬವೆಮ್ಮದು ಸಾರಿ ನೀವೆಂ
ದರಸುಮಕ್ಕಳ ನಿಲಿಸಿ ಬಿಲುಗೊಂ
ಡುರವಣಿಸಿ ತಡೆದನು ವಿರಾಟನು ಕಳಶಸಂಭವನ  ೩೯  
 
ಅಡಸಿ ಗಿರಿಗಳ ನುಂಗುವನ ಬಾಯ್
ಹಿಡಿಯದಿಹುದೇ ಹಣ್ಣು ಹಂಪಲ
ಬಡ ವಿರಾಟನನಾರು ಬಲ್ಲರು ದ್ರೋಣನಿದಿರಿನಲಿ
ನಡೆದು ಬಹುದನು ಕಂಡೆವಾಗಲೆ
ಮಡಿದನೆಂಬುದನರಿಯೆವೈ ಬಿಲು
ದುಡುಕಿ ಕುಂತೀಭೋಜ ಹೊಕ್ಕನು ಮಿಕ್ಕನವರುಗಳ             ೪೦  
 
ಅವರ ಹರಿಬವ ಬೇಡಿ ಸೃಂಜಯ
ರವಗಡಿಸಿದರು ಕೈಕೆಯರು ನೃಪ
ನಿವಹದಗಣಿತ ಚೈದ್ಯ ಯಾದವ ಮಗಧ ಮಾಳವರು
ವಿವಿಧ ವಾದ್ಯ ನಿನಾದ ಗಜ ಹಯ
ರವ ರಥಧ್ವನಿ ಜಗದ ಜಂತ್ರವ
ತಿವಿದು ಕೆದರಿ ವಿರೋಧಿಬಲ ಕೆಣಕಿದುದು ಕಳಶಜನ  ೪೧  
 
ಕೇಳಿದೆನು ರಭಸವನು ಬಲು ಕೆಂ
ಧೂಳಿಯನು ಕಂಡೆನು ವಿರೋಧಿಗ
ಳಾಳ ಕಂಡೆನು ಕಾಣೆನಿತ್ತಲು ಕಳಶಸಂಭವನ
ಕೇಳಿದೀ ನಿಮಿಷಾರ್ಧದಲಿ ಕೆಂ
ಧೂಳ ಕಾಣೆನು ಕಾಣೆನರಿಭೂ
ಪಾಲರನು ಕೇಳರಸ ಕಂಡೆನು ಚಾಪಧೂರ್ಜಟಿಯ  ೪೨  
 
ಅರಸುಮಕ್ಕಳು ಮತ್ಸ್ಯ ಪಾಂಚಾ
ಲರಲಿ ಕೈಕೆಯ ಚೈದ್ಯ ಯಾದವ
ತುರುಕ ಬರ್ಬರ ಗೌಳ ಮಾಗಧ ಪಾರಿಯಾತ್ರರಲಿ
ಉರುಳಿತೊಂದೇ ಲಕ್ಷವುಳಿದೀ
ಕರಿ ವರೂಥ ಪದಾತಿ ತುರಗವ
ನರಸ ಲೆಕ್ಕಿಸಲಾರು ಬಲ್ಲರು ವೈರಿಸೇನೆಯಲಿ          ೪೩  
 
ಮುರಿದುದಾ ಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲರಿಯೆ ನಾನೆಂದ         ೪೪  
 
 ಭೂರಿ ವಿರಹಾಗ್ನಿಯಲಿ ಲೋಚನ
ವಾರಿಯಾಜ್ಯಾಹುತಿಗಳಲಿ ರಿಪು
ಮಾರಣಾಧ್ವರವೆಸೆದುದಿರುಳು ರಥಾಂಗ ದೀಕ್ಷಿತನ
ತಾರಕೆಯ ಮುರಿವುಗಳು ಕುಣಿವ ಸ
ಮೀರಣನ ಶಶಿಯೆಡೆಗೆ ರಜನೀ
ನಾರಿ ತೋಳೆಡೆಗೊಟ್ಟಳಂಬುಜಬಂಧು ಹೊರವಂಟ  ೪೫

ಸಂಕ್ಷಿಪ್ತ ಭಾವ

ಇರುಳಿನ ಕಾಳಗದಲ್ಲಿ ದ್ರೋಣನು ಪಾಂಡವರ ಕಡೆಯ ಹಲವು ಮುಖ್ಯರನ್ನು ಸಂಹರಿಸಿದ್ದು.

ಘಟೋತ್ಕಚನ ಸಾವು ಕೌರವರಲ್ಲಿ ಹೊಸ ಉತ್ಸಾಹವನ್ನು ತಂದಿತು. ಇನ್ನು ಬದುಕಿದೆವು ಎಂಬ ಭಾವ. ಎರಡೂ ತಂಡದವರಿಗೆ ಹೋರಾಟ ನಡೆಯಿತು. ಕತ್ತಲೆಯಲ್ಲಿ ತೂಕಡಿಕೆ ಬೇರೆ. ಆಗ ಪಾರ್ಥನು ಬಂದು ತಮ್ಮ ಸೈನ್ಯಕ್ಕೆ ಸ್ವಲ್ಪ ವಿಶ್ರಮಿಸಲು ಹೇಳಿದನು. ಚಂದ್ರೋದಯವಾಗಲಿ. ಬೆಳುದಿಂಗಳಿನಲ್ಲಿ ಮತ್ತೆ ಹೋರಾಡಬಹುದೆನ್ನಲು ಸೈನ್ಯ ಹಿಂದೆ ಸರಿಯಿತು. ಎದುರು ಪಕ್ಷದವರಿಗೂ ಅದೇ ಬೇಕಾಗಿತ್ತು. ಎಲ್ಲೆಲ್ಲಿದ್ದರೋ ಅಲ್ಲಲ್ಲಿ ಒರಗಿ ತಕ್ಷಣ ನಿದ್ರಾವಶರಾದರು. ಆಯಾಸಗೊಂಡಿದ್ದ ದೇಹಕ್ಕೆ ವಿಶ್ರಾಂತಿ ಅಗತ್ಯವಿತ್ತು. ಶಸ್ತ್ರಗಳನ್ನು ಕೈಗಳಲ್ಲಿ ಹಿಡಿದೇ ಒರಗಿದರು. 

ಚಂದ್ರ ಮೂಡಿದನು. ತಕ್ಷಣ ಎಚ್ಚರಗೊಂಡ ಸೈನಿಕರು ಸಮರಕ್ಕೆ ಸಿದ್ಧರಾದರು. ದ್ರೋಣನು ರಥವನ್ನು ಏರಿ ಬಂದನು. ಅವನ ಪರಾಕ್ರಮದೆದುರು ಪಾಂಡುಸುತನ ಸೇನೆ ನಲುಗಿತು. ಕದಳಿಯ ವನದಲ್ಲಿ ಹೊಕ್ಕ ಮದದಾನೆಯಂತೆ ಎಲ್ಲವನ್ನೂ ಪುಡಿಗೈಯುತ್ತ ಸಾಗಿದನು. ಹಸಿದ ಹೆಬ್ಬುಲಿಯ ಮುಂದೆ ಸಿಕ್ಕ ಮಿಗಗಳಂತಾದರು ಪಾಂಡವ ಸೈನಿಕರು.

ಪಾಂಚಾಲ, ಸೃಂಜಯ, ಕೇಕಯ ಮುಂತಾದ ಪ್ರಮುಖರು ಎದುರಾದರು. ವೃಥಾ ಇವರೊಡನೆ ಸೇರಿ ಸಾಯುವಿರಿ ಎಂದು ಅವರನ್ನು ಮೂದಲಿಸಿದನು. ಅವರೆಲ್ಲರೂ ಸೇರಿ ಮುತ್ತಿದರು. ಸಾವಿರಾರು ಸಂಖ್ಯೆಯ ಆನೆ, ಕುದುರೆ, ಪದಾತಿ ಮುರಿದವು. ದ್ರುಪದನನ್ನು ಕೊಂದು ಹಾಕಿದನು ದ್ರೋಣ. ವಿರೋಧಿಸಿದ ವಿರಾಟನನ್ನು ಕ್ಷಣಮಾತ್ರದಲ್ಲಿ ಮುಗಿಸಿದನು. ಇಂದು ಅಪಜಯದ ಮಳೆ ಅವರಿಗೆ. ಜಯದ ಮಳೆ ಕೌರವರಿಗೆ. ಅವರ ಉತ್ಸಾಹವನ್ನು ಬಣ್ಣಿಸಲು ಅರಿಯೆನೆಂದನು ಸಂಜಯ. ಕುಂತೀಭೋಜ, ಕೈಕೆಯರು, ಮಗಧ, ಮಾಳವರು ಮುಂತಾದ ಹಲವು ರಾಜರುಗಳ ಮರಣದೊಂದಿಗೆ ಇರುಳು ಮುಗಿಯಿತು. ಸೂರ್ಯ ಹೊರಬಂದ.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ