ಭಾರತಕಥಾಮಂಜರಿ107
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ದ್ರೋಣ ಪರ್ವ - ಹದಿನಾರನೆಯ ಸಂಧಿ
ಸೂ.
ಚಂಡಬಲ ಕುರುಪತಿಗೆ ಮಲೆವರ
ಗಂಡನಿರುಳಿನ ಕಾಳೆಗದೊಳು ದ್ದಂಡಭಟ ಕಲಿಕರ್ಣ ಕೊಂದನು ಭೀಮನಂದನನ
ಕೇಳು ಧೃತರಾಷ್ಟ್ರಾವನಿಪ ದೊರೆ
ಯಾಳನರಸುತ ಹೊಕ್ಕು ಸೂಠಿಯೊ
ಳಾಳುಕುದುರೆಯ ಥಟ್ಟನಿಬ್ಬಗಿಮಾಡಿ ದಳವುಳಿಸಿ
ಕೋಲ ತೊಡಚೈ ಕರ್ಣ ಕುರುಭೂ
ಪಾಲ ಕೈದುವ ಹಿಡಿ ಕೃಪಾದಿಗ
ಳೇಳಿ ಸಮ್ಮುಖವಾಗೆನುತ ಕೈಮಾಡಿ ಬೊಬ್ಬಿರಿದ ೧
ಚೆಲ್ಲಿತರಿಬಲಜಲಧಿ ಭಟರ
ಲ್ಲಲ್ಲಿ ಮುಕ್ಕುರುಕಿದರು ಸಬಳದ
ಸೆಲ್ಲೆಹದ ತೋಮರದ ಚಕ್ರದ ಸರಿಯ ಸೈಗರೆದು
ಘಲ್ಲಿಸಿದವಾನೆಗಳು ತೇರಿನ
ಬಿಲ್ಲವರು ತುಡುಕಿದರು ಕಂಬುಗೆ
ಯಲ್ಲಿ ಖುರ ಕುಣಿದಾಡೆ ಹೊಕ್ಕರು ರಾಯರಾವುತರು ೨
ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಗಿರಿಯನಬುಧಿಯ ತೆರೆಗಳೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಲಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ ೩
ಹೊಕ್ಕ ಸುಭಟರು ಮರಳದಿರಿ ಖಳ
ಸಿಕ್ಕಿದನು ಸಿಕ್ಕಿದನು ಚಲಿಸುವ
ಚುಕ್ಕಿಗರ ಹೊಯ್ ಬೀಳಗುತ್ತೆನುತರಸನುಬ್ಬರಿಸೆ
ಹೊಕ್ಕು ತಿವಿದರು ನೀಡಿ ಹರಿಗೆಯ
ನಿಕ್ಕಿ ನಿಂದರು ತಮತಮಗೆ ಮೇ
ಲಿಕ್ಕಿದರು ತೆರೆ ಮುರಿಯೆ ಬಳಿದೆರೆ ಮಸಗಿ ಕವಿವಂತೆ ೪
ಅಗಡು ದಾನವನಿವನು ಕಡ್ಡಿಗೆ
ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು
ಹೊಗೆದುದೈ ಹೆಚ್ಚಾಳುಗಳ ನಗೆ
ಮೊಗವು ಮೋಡಾಮೋಡಿಯಲಿ ಕೈ
ಮಗುಚಿ ಕಳೆದನು ನಿಮಿಷದಲಿ ಹೇರಾಳ ರಾಶಿಗಳ ೫
ಕೆಲರ ನುಂಗಿದನೊದೆದು ಕೊಂದನು
ಕೆಲಬರನು ಹೊರಕಯ್ಯ ಹೊಯಿಲಲಿ
ಕೆಲಬರನು ಧನುವಿನಲಿ ಗದೆಯಲಿ ಹೊಯ್ದು ಕೆಲಕೆಲರ
ಕಲಕಿದನು ಬಲಜಲಧಿಯನು ಮೇ
ಲುಲಿದು ಕವಿದುದು ಮತ್ತೆ ಹೆಣನನು
ತುಳಿದು ಮುಗ್ಗಿತು ಮೇಲೆ ಬಿದ್ದುದು ಮುಸುಕಿತರಿಭಟನ ೬
ಪೂತುರೇ ಕುರುಸೈನಿಕವಸಂ
ಖ್ಯಾತವೆಂದಿಗೆ ಸವೆವುದೋ ಕೈ
ಸೋತವೇ ಹರ ಕೊಲುವೆನೆನುತಮರಾರಿ ಚಿಂತಿಸಿದ
ಈತಗಳಿಗಿದು ಮದ್ದೆನುತ ಮಾ
ಯಾತಿಶಯ ಯುದ್ಧದಲಿ ಬಲಸಂ
ಘಾತವನು ಬೆದರಿಸಿದನದನೇವಣ್ಣಿಸುವೆನೆಂದ ೭
ಮಾಯದಲಿ ಹುಲಿಯಾಗಿ ಗರ್ಜಿಸಿ
ಹಾಯಿದನು ಕಲಿಸಿಂಹವಾಗಿ ಗ
ದಾಯುಧದಲಪ್ಪಳಿಸಿದನು ಭೈರವನ ರೂಪಾಗಿ
ಬಾಯಲಡಸಿದನಹಿತರನು ದಂ
ಡಾಯುಧದ ನಿಲವಿನಲಿ ಸುಭಟರ
ದಾಯಗೆಡಿಸಿದನೊಂದುನಿಮಿಷದೊಳೊರಸಿದನು ಬಲವ [ ೮
ಬೀಳಹೊಯ್ದನು ಬಿರುದರನು ಬಿಱು
ಗಾಳಿಯಾಗಿ ವರೂಥಚಯವನು
ಕಾಳುಕಿಚ್ಚಾಗುರುಹಿದನು ಫಣಿಯಾಗಿ ತುಡುಕಿದನು
ಮೇಲುಗವಿದನು ಜಲಧಿಯಾಗಿ ನೃ
ಪಾಲನಿಕರದೊಳುರುಳಿದನು ಗಿರಿ
ಜಾಳವಾಗಿ ಘಟೋತ್ಕಚನು ಘಲ್ಲಿಸಿದನತಿರಥರ ೯
ಎರಗಿದನು ಸಿಡಿಲಾಗಿ ಕಂಗಳೊ
ಳಿರುಕಿದನು ಮಿಂಚಾಗಿ ಮಳೆಯನು
ಕಱೆದು ನಾದಿದನಾತಪತ್ರ ತನುತ್ರ ಸೀಸಕವ
ತುರುಕಿದನು ಹೊಗೆಯಾಗಿ ಮಿಗೆ ಬೊ
ಬ್ಬಿರಿದನೊಂದೆಡೆಯಲ್ಲಿ ಸುಭಟರ
ನೊರಲಿಸಿದನೊಂದೆಡೆಯಲೇನೆಂಬೆನು ಮಹಾರಣವ ೧೦
ಸುರಿದ ಕರುಳ್ಗಳ ಸಿಡಿದ ಹಲುಗಳ
ಜರಿದ ತಲೆಗಳ ಹಾಯ್ದ ಮೂಳೆಯ
ಹರಿದ ನರವಿನ ಬಿಗಿದ ಹುಬ್ಬಿನ ಬಿಟ್ಟ ಕಣ್ಣುಗಳ
ಮುರಿದ ಗೋಣಿನ ಬಸಿವ ತೊರಳೆಯ
ಹರಿವ ರಕುತದ ತಳಿತ ಖಂಡದ
ಬಿರಿದ ಬಸುರಿನ ರೌರವದ ರಣಭೂಮಿ ರಂಜಿಸಿತು ೧೧
ಗರುಡನುಬ್ಬಟೆಗಹಿ ನಿಕರ ಜ
ಜ್ಝರಿತವಾದವೊಲಿವನ ಕಡು ನಿ
ಬ್ಬರದ ಧಾಳಿಗೆ ಧೈರ‍್ಯಗೆಟ್ಟುದು ಕೂಡೆ ಕುರುಸೇನೆ
ಹೊರಳಿಯೊಡೆದರು ಭಟರು ಸಿಡಿದರು
ಜರುಗಿದರು ಜವಗುಂದಿದರು ಮಡ
ಮುರಿದು ಬಿರುದರು ತಣಿದುದೈ ಪರಿಭವದ ಸೂರೆಯಲಿ ೧೨
ಧಾತುಗೆಟ್ಟುದು ದೊದ್ದೆಯೆಂದೇ
ಭೂತಳಾಧಿಪ ಬಗೆಯದಿರು ತೆಗೆ
ಮಾತು ಹುಸಿ ಮರಳಿದರು ನಿನ್ನಯ ಪಟ್ಟದಾನೆಗಳು
ಭೀತಿಗೊಂಡನು ದ್ರೋಣ ಸೋಲಕೆ
ಕೇತುವಾದನು ಶಲ್ಯನಪಜಯ
ಮಾತೃಕಾಕ್ಷರನಾದನಶ್ವತ್ಥಾಮನಿಂದಿನಲಿ ೧೩
ಇವನ ಧಾಳಿಯನಿವನ ಧೈರ‍್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ ೧೪
ಹಾಯಿಕಲಿ ಟೆಕ್ಕೆಯವ ಭಟ್ಟರ
ಬಾಯ ಹೊಯ್ ಗಡಬಡೆಯ ಹೊತ್ತ
ಲ್ಲಾಯುಧವನೀಡಾಡು ಕೊಯ್ ಕೊಯ್ ಜೋಡು ಹೊಲಿಗೆಗಳ
ರಾಯ ಕೊಂದರೆ ಕೊಲಲಿ ಸುಕೃತವು
ಬೀಯವಾಗಲಿ ನಾವು ರಕ್ಕಸ
ನಾಯ ಕಯ್ಯಲಿ ಸಾಯೆವೆನುತೊಡೆಮುರಿದರತಿರಥರು ೧೫
ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ ೧೬
ಸಿಡಿವ ತಲೆಗಳ ಬಳಿವಿಡಿದು ಧಾ
ರಿಡುವ ರಕುತದಲೆರಡು ಬಲದಲಿ
ಹಿಡಿದ ದೀವಿಗೆ ನಂದಿದವು ಕುಂದಿದುದು ಚತುರಂಗ
ಮಡಮುರಿಯ ಮಯವಾಯ್ತು ಸುಭಟರ
ನಿಡು ಮುಸುಕು ಮೋಹಿಸಿತು ಮುರುಹಿನ
ಕಡುಹುಕಾರರು ಕೇಣಿಗೊಂಡರು ಬಹಳ ದುಷ್ಕೃತವ ೧೭
ದ್ರೋಣನೆಂಬರೆ ಮುನ್ನವೇ ನಿ
ರ‍್ಯಾಣದೀಕ್ಷಿತನಾದನಾತನ
ಕಾಣೆವೈ ಗುರುಸುತನದೃಶ್ಯಾಂಜನವೆ ಸಿದ್ಧಿಸಿತು
ಹೂಣಿಗರು ಮತ್ತಾರು ಶಲ್ಯ
ಕ್ಷೋಣಿಪತಿ ಕೃತವರ್ಮ ಕೃಪನತಿ
ಜಾಣರೋಟದ ವಿದ್ಯೆಗೆನುತಿರ್ದುದು ಭಟಸ್ತೋಮ ೧೮
ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾನರೇಂದ್ರ ನಿಕಾಯ ಹೊಕ್ಕುದು ರವಿಸುತನ ಮರೆಯ ೧೯
ಶರಣು ಹೊಕ್ಕುದು ಬಂದು ಮಕುಟದ
ಗರುವರವನೀಪಾಲಕರು ಮೋ
ಹರಕೆ ತೋರ್ಪಟ್ಟವರು ಭಾರಿಯ ಬಿರುದಿನತಿಬಳರು
ದುರುಳ ದೈತ್ಯನ ಬಾಧೆ ಘನ ಪರಿ
ಹರಿಸಲರಿಯೆವು ಕರ್ಣ ನೀನೇ
ಮರಳಿ ಸೇನೆಯ ರಕ್ಷಿಸೆಂದುದು ನಿಖಿಳಪರಿವಾರ ೨೦
ತಳಿತ ಮುಸುಕಿನ ಬೆರಳ ಮೂಗಿನ
ನೆಲನ ನೋಟದ ಮೆಯ್ಯ ತೂಕದ
ಝಳದ ಸುಯ್ಲಿನ ಮುಖದ ಮೋನದ ನಸಿದ ನೆನಹುಗಳ
ಕಳಿದ ಕಡುಹಿನ ಬೀತ ಬಿರುದಿನ
ಬಲಿದ ಭಂಗದ ನೃಪತಿಗಳನ
ಗ್ಗಳೆಯ ರವಿಸುತ ಕಂಡು ಹೊಗಳಿದನಾ ಘಟೋತ್ಕಚನ ೨೧
ಶಿವಶಿವಾ ಕೌರವನ ಸುಭಟರು
ದಿವಿಜರಿಗೆ ವೆಗ್ಗಳರು ನಿನಗಿಂ
ದಿವರು ಸೋತರು ಪೂತು ದಾನವ ನೀ ಕೃತಾರ್ಥನಲ
ಇವನ ಪಾಡಿನ ಸುಭಟರೇ ನ
ಮ್ಮವರು ಗೆಲವೇನಿವನದೇ ಮಾ
ಧವನ ಸೂತ್ರದಯಂತ್ರವಿದು ಲಯಕಾಲ ನಮಗೆಂದ ೨೨
ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವು ಮಾಡದಿರು
ಆಕೆವಾಳರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ ೨೩
ದುಗುಡವೋ ಮೇಣ್ ವಿಕ್ರಮಾಗ್ನಿಯ
ತಗಹುಗಳ ತನಿಹೊಗೆಯೊ ರಾಯರ
ಮೊಗವ ನೋಡೈ ಕೀರ್ತಿಕೌಮುದಿ ಕಳಿದ ಕತ್ತಲೆಯೊ
ಬಿಗಿದ ಭೀತಿಯ ಸೂರೆಗಳೊ ಮೋ
ರೆಗಳೊ ಸವಿವಾತುಗಳ ಸೋನೆಯ
ಸೊಗಸುಕಾರರು ನಿಂದ ನಿಲವನು ಕರ್ಣ ನೋಡೆಂದ ೨೪
ವಿಗಡತನವನು ವಹಿಲದಲಿ ಕೈ
ಮಗುಚಿ ಕಳೆದರು ಹೂಸಿಕದ ಹೂ
ಣಿಗತನವ ಸೊನ್ನಾರವಿದ್ಯೆಯ ಸಾಹಸೋನ್ನತಿಯ
ಸೊಗಸ ಹುಟ್ಟಿಸಿ ಸುಲಿವ ರಸವಾ
ದಿಗಳನಿವರ ವಿಡಾಯಿಗಳ ನಂ
ಬುಗೆಯ ಕೇವಣ ಪಾಡುಕಾರರ ಕರ್ಣ ನೋಡೆಂದ ೨೫
ನಡೆವುತೆಡಹಿದ ಪಟ್ಟದಾನೆಯ
ಮಿಡಿಯ ಹೊಯ್ವರೆ ಜೀಯ ರಣವವ
ಗಡವು ನಮಗಿದು ರಾತ್ರಿ ದೈತ್ಯರಿಗಿದುವೆ ನಡುಹಗಲು
ಮೃಡನನೊಂದವಸರಕೆ ಬಗೆಯದ
ಕಡುಹುಕಾರರು ನಿನ್ನವರು ಕೆಡೆ
ನುಡಿದು ನೋಯಿಸಲೇತಕೆಂದನು ಕರ್ಣನರಸಂಗೆ ೨೬
ತಾಗಿ ವಜ್ರವ ಮುಕ್ಕುಗಳೆವಡೆ
ಸಾಗರವ ಹೊಗಲೇಕೆ ಗಿರಿಗಳು
ಹೋಗಲಿನ್ನಾ ಮಾತು ಮೀರಿದ ದೈತ್ಯನುಪಟಳವ
ಈಗ ಮಾಣಿಸು ನಮ್ಮ ಸುಭಟರು
ಯೋಗಿಗಳವೊಲು ದಂಡಹೀನರು
ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ ೨೭
ಕಳೆದ ಮೀಸಲ ಶಕ್ತಿ ಪಾರ್ಥನ
ತಲೆಗೆ ಬೈಚಿಟ್ಟಿಹುದನೀಗಳು
ಸೆಳೆದೆನಾದರೆ ಮುಂದೆ ಫಲುಗುಣನೆನ್ನ ಲೆಕ್ಕಿಸನು
ಉಳಿದ ಬಾಣಂಗಳಲಿ ದೈತ್ಯನ
ಗೆಲುವುದರಿದಿದಕಾವ ಹದನೋ
ತಿಳಿಯಲರಿಯೆನು ಜೀಯಯೆಂದನು ಕುರುಪತಿಗೆ ಕರ್ಣ ೨೮
ಈಗಳೀ ದಾನವನ ಬಲೆಯಲಿ
ತಾಗಿ ಸಿಲುಕಿತು ನಮ್ಮ ಮೋಹರ
ಮೇಗೆ ಫಲುಗುಣನಾರ ಕೊಲುವನು ಮರಣ ನಮಗಾಗೆ
ನೀಗಿ ಕಳೆ ಕೊಲೆಗಡಿಗನನು ಜಯ
ವಾಗಲೀಗಳೆ ಮುಂದೆ ನರನು
ದ್ಯೋಗಕಾರೈವೆವು ಚಿಕಿತ್ಸೆಯನೆಂದನಾ ಭೂಪ ೨೯
ಆದಡಮರವಿರೋಧಿಯಸುವನು
ಸೇದುವೆನು ಸರಿಸದಲಿ ನಿಂದರೆ
ನಾದುವೆನು ನಿಟ್ಟೊಡಲ ರಕುತದಲಖಿಳ ದಿಗುತಟವ
ಕಾದುವೆನು ನಮ್ಮವರು ಕಳಚಿದ
ಕೈದುವನು ಕೈವಶವಮಾಡಿ ವಿ
ನೋದವನು ನೀವ್ ನೋಡಿ ಎಂದನು ಕರ್ಣನರಸಂಗೆ ೩೦
ಇತ್ತಲೈ ದನುಜೇಂದ್ರ ಕದನವ
ದಿತ್ತಲಿತ್ತಲು ಗಮನ ಸುಭಟರ
ಕತ್ತಲೆಯೊಳೋಡಿಸಿದ ಕಡುಹನು ತೋರು ನಮ್ಮೊಡನೆ
ಮೃತ್ಯು ನಿನಗಾನೆನ್ನೊಡನೆ ತಲೆ
ಯೊತ್ತಿನೋಡೆಂದೆನುತ ಬೊಬ್ಬಿರಿ
ವುತ್ತ ದೈತ್ಯನ ತರುಬಿದನು ಬಲವೆಲ್ಲ ಬೆರಗಾಗೆ ೩೧
ಎಲವೊ ನೆರೆ ಗಂಡಹೆ ಕಣಾ ನೀ
ಮಲೆತು ನಿಂದುದು ಸಾಲದೇ ಸುರ
ರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು
ಕಲಿತನಕೆ ಮೆಚ್ಚಿದೆನು ಸತ್ತರೆ
ಮೊಳೆಯದಿಹುದೇ ಕೀರ್ತಿ ರಿಪುಬಲ
ದೊಳಗೆ ದಿಟ್ಟನು ಕರ್ಣ ನೀನೆನುತಸುರ ಮಾರಾಂತ ೩೨
ತಾನೆ ತನ್ನನೆ ಹೊಗಳಿಕೊಂಬರೆ
ಮಾನನಿಧಿಯಾದವರು ಸಾಕೀ
ದಾನವರ ಗರುವಾಯಿ ಭಾರಿಯ ಭಂಡವಿದ್ಯೆಗಳು
ಏನು ಹೊಸತೆಂತೆಂತು ಶರಸಂ
ಧಾನವುಳಿದಗ್ಗಳಿಕೆಗಳ ಮಾ
ತೇನು ಬಲ್ಲರೆ ಬಿಲ್ಲ ಹಿಡಿ ಹಿಡಿ ಕಾಣಲಹುದೆಂದ ೩೩
ಫಡ ದೊಠಾರಿಸಿ ನುಡಿದ ಜಿಹ್ವೆಯ
ಹೆಡತಲೆಯಲುಗಿವೆನು ಕಣಾ ಕೇಳ್
ತೊಡಕಿ ತನ್ನಲಿ ಬದುಕುವವರಾರಿಂದ್ರ ಯಮರೊಳಗೆ
ಕಡುಹುಕಾರರ ಗರ್ವವಿಷಗಾ
ರುಡವನೆನ್ನಲಿ ನೋಡು ನೋಡೆನು
ತೊಡನೊಡನೆ ಶರವಳೆಯ ಕರೆದನು ಪವನಸುತಸೂನು ೩೪
ದಾನವರು ದಕ್ಕಡರು ಧರ‍್ಯೋ
ದ್ದಾನಶೀಲರು ಘಾಯವನು ಗಿರಿ
ಯಾನಬಾರದು ಮುಷ್ಟಿಬಲವೆಗ್ಗಳರು ಸತ್ವದಲಿ
ಈ ನಿರಂತರ ಬಾಣ ರಚನಾ
ನೂನ ಧನುರಭ್ಯಾಸದನುವನ
ದೇನ ಹೇಳುವೆ ಲೇಸೆನುತ ಕಲಿಕರ್ಣ ತೆಗೆದೆಚ್ಚ ೩೫
ಹಾರಿದವು ಗರಿಸಹಿತ ದೇಹವ
ಡೋರುಗಳೆದಂಬುಗಳು ನೆತ್ತರ
ಜೋರು ಮಸಗಿತು ಕೂಡೆ ಜಾಜಿನ ಗಿರಿಯ ರೌಕುಳದ
ಏರ ಬಾಯ್ಗಳ ತಳಿತಖಂಡವ
ಸೂರೆಗೊಂಡವು ಹಿಂದಣಂಬುಗ
ಳಾರೆನಭಿವರ್ಣಿಸಲು ಕರ್ಣಘಟೋತ್ಕಚಾಹವವ ೩೬
ತಾರಕನ ಕೈಟಭನ ಮಹಿಷನ
ವೀರಜಂಭನ ಕಾಲನೇಮಿಯ
ತಾರಕಾಕ್ಷನ ಕುಂಭಕರ್ಣನ ಮುರ ಗುಹಾಸುರನ
ಆರುಭಟೆ ರಣದುಬ್ಬಟೆಯ ಜ
ಜ್ಝಾರತನವಿವನೊಬ್ಬನಲಿ ಕೈ
ವಾರವೇ ನೆರೆ ಕಾಣಲಾಯ್ತೆಂದುದು ಸುರಸ್ತೋಮ ೩೭
ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ ೩೮
ಎರಡು ಬಲವಿವರಿಬ್ಬರಾಹವ
ದುರವಣೆಯನೇ ನೋಡುತಿರ್ದುದು
ಸರಿಮಿಗಿಲ ಕಾದಿದರು ಶಿವ ಶಿವ ಭಾರಿಯಂಕದಲಿ
ಸರಳು ತೀರಲು ತೀರದಸುರನ
ಕೆರಳಿದುರಿ ಕುಡಿಯಿಟ್ಟುದಿವನ
ಬ್ಬರಣೆ ಕೆಡೆಬೀಳೆನುತ ಶೂಲದಲಿಟ್ಟನಿನಸುತನ ೩೯
ಹೊಗರುಗಿಡಿಗಳ ಬಾಯಿಧಾರೆಯ
ಲೊಗೆವ ಹೊಗೆಗಳ ಹೊದರಿನುರಿ ಜಾ
ಳಿಗೆಯ ಭೋಂಕಾರದ ಭಯಂಕರ ಶೂಲವೈತರಲು
ನಗುತ ಮೂರಂಬಿನಲಿ ಕೈದುವ
ತೆಗೆಸಿದನು ನೆರೆ ಹತ್ತು ಶರವನು
ಹಗೆಯ ಹೇರುರದೊಳಗೆ ಹೂಳಿದು ಕರ್ಣ ಬೊಬ್ಬಿರಿದ ೪೦
ದರಿಗಳೊಳು ದರ್ವೀಕರಾವಳಿ
ಯುರವಣಿಸಿದರೆ ಬಲ್ಲುದೇ ಕುಲ
ಗಿರಿ ಮಹಾದೇವಾವ ಸತ್ವವೊ ದಾನವೇಶ್ವರಗೆ
ಅರಿಯ ಶರಹತಿಗೊಡಲು ನೆರೆ ಜ
ಜ್ಝರಿತವಾಗಲು ನೊಂದುದಿಲ್ಲ
ಬ್ಬರಿಸಿ ಪರಿಘದಲಿಟ್ಟನಂಬುಜಬಂಧುನಂದನನ ೪೧
ತಿರುಗುತೈತಹ ಪರಿಘಕಾಂತರೆ
ಗಿರಿಗಳಡಿ ಮೇಲಹವು ನಾವಿ
ನ್ನರಸ ಹೇಳುವುದೇನು ಕರ್ಣನ ಬಾಹುವಿಕ್ರಮವ
ಪರಿಘವದು ಪರಮಾಣುಮಯವಾ
ಯ್ತೆರಡುಶರದಲಿ ಸಾರಥಿಯನಿ
ಟ್ಟೊರಸಿದನು ಹದಿನೈದು ಶರದಲಿ ರಥದ ಕುದುರೆಗಳ ೪೨
ಸಮರಸಾಧನ ಸವೆಯೆ ಕೋಪದ
ತಿಮಿರ ಗರಿಗಟ್ಟಿತು ಮಹಾವಿ
ಕ್ರಮನ ಚಳಕವನೇನ ಹೇಳುವೆ ರಥದ ಬಳಸಿನಲಿ
ಸಮತಳಿಸಿ ಕೈದುಗಳ ಮಳೆಯನು
ದ್ಯುಮಣಿತನಯನ ಮೇಲೆ ಕರೆದನು
ನಿಮಿಷಕದ ಪರಿಹರಿಸಿ ದೈತ್ಯನನೆಚ್ಚನಾ ಕರ್ಣ ೪೩
ತೂರಿದರೆ ತನಿಹೊಟ್ಟು ಗಾಳಿಗೆ
ಹಾರುವುದು ಕುಲಗಿರಿಯ ಬೈಸಿಕೆ
ಜರುವುದೆ ಮಝ ಪೂತು ನಮ್ಮೀಯುಭಯ ಕಟಕದಲಿ
ತೋರಲಿಲ್ಲೆಣೆ ಜಗದೊಳೋಲೆಯ
ಕಾರ ನೀನಹೆಯೆನುತ ಸುರರಿರಿ
ಗಾರ ಕವಿದನು ಕರ್ಣನಳವಿಗೆ ಜಡಿವಡಾಯುಧದಿ ೪೪
ಫಡ ದೊಠಾರಿಸಿ ನಿಂದರೆರಡೇ
ಕಡಿಯ ಮಾಡುವೆನೆಲವೊ ನಿನ್ನಯ
ಗಡಣಿಗರ ಕರೆ ಕಾಯ್ದುಕೊಳಲಿ ಸುಯೋಧನಾದಿಗಳು
ಮಡಮುರಿಯದಿದಿರಾಗು ರಕುತವ
ಕುಡಿಸುವೆನು ಕೂರಸಿಗೆನುತ ಕೊಲೆ
ಗಡಿಗನೌಕಿದಡಿದಿರ ಬಿಟ್ಟನು ಕರ್ಣ ಕೆಲ ಸಿಡಿದ ೪೫
ಅಹಹ ಶಿವಶಿವ ದೈತ್ಯರಾಹು
ಗ್ರಹಣವಾಯಿತು ಕರ್ಣಸೂರ‍್ಯನ
ಮಹಿಮೆ ಮಸುಳಿತಕಟಕಟಾಯೆನುತಖಿಳಬಲ ಬೆದರೆ
ಅಹಿತನಿಟ್ಟಳಕಳುಕಿ ಕೆಲದಲಿ
ಮಿಹಿರನಂದನನೆಚ್ಚಡಂಬಿನ
ಲಹರಿ ಮಸಗಿತು ಖಳನ ಖಡುಗವ ಕಾಣೆನಾಕ್ಷಣಕೆ ೪೬
ಚಾರಿವರಿದನು ದನುಜ ಮಡ್ಡು ಕ
ಠಾರಿಯಲಿ ಕರ್ಣಾಸ್ತ್ರಧಾರಾ
ಸಾರದಲಿ ಮೈನನೆದು ಹೊನಲಿಡುವರುಣವಾರಿಯಲಿ
ಆರಿವನು ಹೈಡಿಂಬನೀಚೆಯ
ಲಾರು ಭೀಮಜನಿತ್ತಲಾರು ಬ
ಕಾರಿ ನಂದನನೆನಲು ಬಲವಿರುಳಸುರಮಯವಾಯ್ತು ೪೭
ಅಣೆದನಶ್ವತ್ಥಾಮನನು ತ
ಕ್ಷಣದೊಳರಸನ ತಾಗಿ ದ್ರೋಣನ
ಕೆಣಕಿ ದುಶ್ಶಾಸನನ ಮಸೆಗಾಣಿಸಿ ಕೃಪಾದಿಗಳ
ರಣದೊಳೋಡಿಸಿ ಮುರಿದು ಕರ್ಣನ
ಸೆಣಸಿ ನಿಂದನು ಮತ್ತೆ ಸಮರಾಂ
ಗಣದ ಚೌಪಟಮಲ್ಲನಿತ್ತನು ಪಡೆಗೆ ತಲ್ಲಣವ ೪೮
ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು ೪೯
ಕಾರಿಸುವೆನಿವನಸುವನಿವ ಮೈ
ದೋರಿ ನಿಂದರೆ ನಿಮಿಷದಲಿ ಬಾ
ಯಾರದಿರಿ ಕಳ್ಳೇರುಕಾಱನ ಕರುಳ ಹರಹುವೆನು
ಜಾರದಿರಿಯೆನುತಭಯಹಸ್ತವ
ತೋರಿ ತುಡುಕಿದನುಗ್ರಧಾರೆಯ
ತೂರುಗಿಡಿಗಳ ತುರುಗಿದುರಿಯ ಮಹಾಸ್ತ್ರವನು ಕರ್ಣ ೫೦
ತಳಿತ ಕಿಡಿಗಳ ಕೈದುವಿನ ಮೈ
ಝಳದ ಝಾಡಿಯೊಳುಭಯ ಬಲದ
ಗ್ಗಳದ ಹರುಷ ವಿಷಾದ ವಾರಿಧಿ ಕಾಲುಹೊಳೆಯಾಯ್ತು
ಬಿಳಿಯ ಚೌರಿಗಳೆಸೆಯೆ ಘಂಟಾ
ವಳಿಗಳಣಸಿನ ಹೊಗರನುಗುಳುವ
ಹೊಳೆವ ಧಾರೆಯ ಭಾರಿಶಕ್ತಿಯ ತೂಗಿದನು ಕರ್ಣ ೫೧
ಕಾಯಲಾಪರೆ ದನುಜ ಕರೆ ಕಮ
ಲಾಯತಾಕ್ಷನನಿಂದು ಬದುಕುವು
ಪಾಯವುಳ್ಳಡೆ ಬೇಗ ಬೆಸಗೊಳು ಭೀಮ ಫಲುಗುಣರ
ಆಯುಧಕೆ ತೆರವಿಟ್ಟೆನೈ ನಿ
ನ್ನಾಯುಷವ ಹಿಂದಿಕ್ಕಿ ಕೊಂಬನ
ತಾಯೆನುತ ಬೊಬ್ಬಿರಿದು ಶಕ್ತಿಯಲಿಟ್ಟನಾ ಕರ್ಣ ೫೨
ಆರಿದನು ಪರಿಹರಿಸುವರು ಜಂ
ಭಾರಿ ಕೊಟ್ಟನು ಕಮಲಭವ ಕಾ
ಮಾರಿಗಳಿಗುಬ್ಬಸದ ಕೈದುವಜೇಯವೆಂದಿದನು
ಧಾರೆಯಲಿ ದಳ್ಳಿಸುವ ಕಿಡಿಗಳ
ಭಾರಿಯಾಯುಧವಸುರನುರವನು
ಡೋರುಗಳೆದುದು ಹಾಯ್ದುಹೋದುದು ವಾಸವನ ಹೊರೆಗೆ ೫೩
ಆರಿ ಬೊಬ್ಬಿರಿವುತ್ತ ಕಂಡುದು
ಪಾರುಖಾಣೆಯನಸುರನಸು ಬಲು
ಭಾರಿಯೊಡಲೊರ್ಗುಡಿಸಿ ಕೆಡೆದುದು ಬಿರಿದ ಗಿರಿಯಂತೆ
ತೇರು ತುರಗ ಪದಾತಿ ಕರಿಘಟೆ
ವೈರಿಬಲದಲಿ ನಮ್ಮ ಬಲದಲಿ
ತೀರಿತೊಂದಕ್ಷೋಣಿ ಸುರರಿಪು ಬಿದ್ದ ಭಾರದಲಿ ೫೪
ಕುರುಬಲದ ಕಳಕಳದ ಹವಣ
ಲ್ಲರಿಬಲದ ಸಂತೋಷವಿದು ಮುರ
ಹರನ ಮಂತ್ರವು ಜೀಯ ಹರಿ ಸೂಳೈಸಿದನು ಭುಜವ
ಗರಳವಿಲ್ಲದ ಕುಪಿತಫಣಿ ಹಲು
ಮೊರೆದು ಮಾಡುವುದೇನು ಕರ್ಣನ
ನೊರಸಿದೆವು ಹೋಗೆಂದು ಸಂತೈಸಿದನು ಪಾಂಡವರ ೫೫
ಸಾರಿದನು ಶರಮಂಚವನು ಭಾ
ಗೀರಥೀನಂದನನು ಕರ್ಣನು
ಬೇರುಹರಿದಾ ದ್ರುಮದವೊಲು ಗತಶೌರ‍್ಯನಿನ್ನೇನು
ಭಾರಿಯಾಳೈ ದ್ರೋಣನಾತನು
ತೀರಿದನು ಹಾ ಪಾಂಡುಸುತರಿ
ನ್ನಾರ ಮುರಿಯರು ವೀರನಾರಾಯಣನ ಕರುಣದಲಿ ೫೬
ಸಂಕ್ಷಿಪ್ತ ಭಾವ
Lrphks Kolar
ಕರ್ಣನಿಂದ ಘಟೋತ್ಕಚನ ಮರಣ
ಇರುಳಿನ ಕಾಳಗದಲ್ಲಿ ಘಟೋತ್ಕಚನ ಪ್ರತಾಪ ಮುಂದುವರಿಯಿತು. ಎಡಬಲ, ಹಿಂದೆಮುಂದೆ ಎಲ್ಲೆಡೆಯೂ ತಿರುಗುತ್ತ ಹೆಣಗಳ ರಾಶಿಯನ್ನು ಮೂಡಿಸಿದನು. ಕೆಲವರನ್ನು ನುಂಗಿ ಒಗೆದನು. ಮತ್ತೆ ಕೆಲವರನ್ನು ಗದೆಯಿಂದ ಹೊಯ್ದನು. ಕೆಲವರು ಅವನನ್ನು ನೋಡಿಯೇ ಅಸು ನೀಗಿದರು. ಸಿಡಿಲಾಗಿ ಎರಗಿದನು. ಮಿಂಚಾಗಿ ರಕ್ತದ ಮಳೆ ಸುರಿಸಿದನು. ಕೌರವನ ಕಡೆಯವರು ಭೀತಿಗೊಂಡರು. ಈ ರಕ್ಕಸನ ಕೈಯಿಂದ ಸಾಯುವುದು ಬೇಡವೆಂದು ಪಲಾಯನ ವಾದಿಗಳಾದರು ಹಲವರು. ಕೊನೆಗೆ ಕರ್ಣನ ಮೊರೆಹೊಕ್ಕರು. ರಕ್ಷಿಸೆಂದರು.
ಕೌರವರ ರಾಯನು ಕರ್ಣನನ್ನು ಘಟೋತ್ಕಚನನ್ನು ಕೊಲ್ಲಲು ಕೇಳಿಕೊಂಡನು. ದೈತ್ಯರಿಗೆ ರಾತ್ರಿಯಲ್ಲಿ ಶಕ್ತಿ ಹೆಚ್ಚು. ಅವನನ್ನು ಮಣಿಸಲು ನೀನೇ ಸರಿಯೆಂದನು. ಆಗ ಅರ್ಜುನನಿಗಾಗಿ ಮೀಸಲಿಟ್ಟಿದ್ದ ಶಕ್ತಿಯನ್ನು ಇವನಿಗೆ ಪ್ರಯೋಗಿಸಿದರೆ ಮುಂದೆ ಅರ್ಜುನನನ್ನು ಎದುರಿಸುವುದು ಹೇಗೆ ಎನ್ನಲು ಕೌರವರಾಯನು ಅದರ ಬಗ್ಗೆ ಮುಂದೆ ಯೋಚಿಸೋಣ. ಈಗ ಇವನನ್ನು ಮಣಿಸು ಎಂದನು.
ಈಗ ಕರ್ಣನಿಗೂ ಘಟೋತ್ಕಚನಿಗೂ ಯುದ್ಧ ಮೊದಲಾಯಿತು. ಒಬ್ಬರನ್ನೊಬ್ಬರು ಮೂದಲಿಸಿದರು. ರಕ್ಕಸರಿಗೇಕೆ ಬಾಣವೆನ್ನಲು ನಿನಗಾಗಿ ಎಂದನು. ದೇವತೆಗಳು ತಾರಕ, ಕೈಟಭ, ಮಹಿಷ, ಕಾಲನೇಮಿ ಮುಂತಾದವರಿಗಿಂತ ಇವನು ಶಕ್ತಿವಂತನು ಎಂದು ಘಟೋತ್ಕಚನನ್ನು ಹೊಗಳಿದರು.
ಸಮರಸಾಧನ ಸವೆಯಲು ಕೋಪದಿಂದ ಕರ್ಣನು ಮತ್ತೆ ತರಿಸಿದನು. ಎಲ್ಲಿಯ ಭೀಮ, ಎಲ್ಲಿಯ ಹೈಡಿಂಬ ಇವನು ನಮ್ಮ ಅಳಿವಿಗಾಗಿಯೇ ಬಂದವನು ಎಂದು ಸೇನೆ ಹುಯಿಲಿಟ್ಟಿತು. ಅಶ್ವತ್ಥಾಮನನ್ನು ಹಣೆದು, ದ್ರೋಣನನ್ನು ಕೆಣಕಿ, ದುಶ್ಶಾಸನನ ಮಸೆಗಾಣಿಸಿ, ಕೃಪಾದಿಗಳನ್ನು ಓಡಿಸಿ ಮತ್ತೆ ಕರ್ಣನೆದುರು ನಿಂತನು ಭೀಮನಂದನ.
ರಕ್ಷಿಸೆಂದು ಕರ್ಣನನ್ನು ಮೊರೆಹೋದರೂ ಅಗಲಿಲ್ಲವಲ್ಲ ಎಂದು ಸೈನ್ಯ ಬೊಬ್ಬಿಡಲು ಕನಲಿದ ಕರ್ಣನು ಮೀಸಲಿನ ಆಯುಧವನ್ನು ತೆಗೆದು ಘಟೋತ್ಕಚನ ಮೇಲೆ ಪ್ರಯೋಗಿಸಿಯೇ ಬಿಟ್ಟನು. ಘಟೋತ್ಕಚ ನೆಲಕ್ಕೆ ಬಿದ್ದ ರಭಸಕ್ಕೆ ಕೌರವನ ಒಂದು ಅಕ್ಷೋಹಿಣಿ ಸೈನ್ಯ ಪುಡಿಯಾಯಿತು.
ಕೃಷ್ಣನು ಪಾಂಡವರನ್ನು ಸಂತೈಸಿದನು. ಕರ್ಣನನ್ನು ಮುಗಿಸಿದಂತೆಯೇ ಆಯಿತು. ಈಗ ಅವನು ವಿಷವಿಲ್ಲದ ಹಾವು ಎಂದನು. ಭೀಷ್ಮ ಶರಮಂಚಕ್ಕೆ ಸಂದನು. ಕರ್ಣ ತನ್ನ ಶಕ್ತಿಯನ್ನು ಕಳೆದುಕೊಂಡನು. ಇನ್ನೇನು ಭಯವಿಲ್ಲವೆನ್ನುತ್ತ ಕರುಣಾಳು ವೀರ ನಾರಾಯಣನನ್ನು ನೆನೆದರು.
ಕಾಮೆಂಟ್‌ಗಳು