ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ115


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಕರ್ಣ ಪರ್ವ - ಐದನೆಯ ಸಂಧಿ


ಸೂ.   
ವೈರಿ ವಿಜಯಕೆ ತ್ರಿಪುರದಹನದ
ಚಾರು ಕಥನವನರುಹಿ ಶಲ್ಯನ
ಸಾರಥಿಯ ಮಾಡಿದನು ಕರ್ಣಗೆ ಕೌರವರರಾಯ   
 
ಕೇಳು ಜನಮೇಜಯ ಧರಿತ್ರೀ
ಪಾಲ ದಿನವೊಂದಾಯ್ತು ಕರ್ಣನ
ಕಾಳೆಗದೊಳಲ್ಲಿಂದ ಮೇಲಣ ವರ ಕಥಾಮೃತವ
ಕೇಳಲಿಚ್ಛೈಸಿದ ಗತಾಕ್ಷನೃ
ಪಾಲಕಗೆ ವಿಸ್ತರಿಸಿ ಸಂಜಯ
ಹೇಳಿದನು ಬಳಿಕೆರಡನೆಯ ದಿವಸದ ರಣೋತ್ಸವವ        ೧  
 
ಹೊಗಳಿ ಕೆಲವರ ಹೊಳ್ಳುಗಳೆವುತ
ನಗುತ ಕೆಲವರನವರ ಮೋಹರ
ತೆಗೆದು ಹೋಯಿತು ಬಂದುದಿದು ತಂತಮ್ಮ ಪಾಳಯಕೆ
ಹೊಗಳುಭಟ್ಟರ ಸಾಲ ಕೈದೀ
ವಿಗೆಯ ಕಹಳಾರವದ ಲಗ್ಗೆಯ
ಬಿಗುಹಿನಲಿ ಕುರುರಾಯ ಬಂದನು ರಾಜಮಂದಿರಕೆ         ೨  
 
ಗುಳವನಿಳುಹಿದವಾನೆಗಳು ಹ
ಲ್ಲಳವ ಬಿಡೆ ಭುಲ್ಲೈಸಿದವು ಹಯ
ಕುಳ ವರೂಥವನಿಳಿದು ಸೂತರು ನಿಲಿಸಿದರು ರಥವ
ಕಳಚಿ ಸೀಸಕ ಜೋಡು ಕೈದುವ
ನಿಳುಹಿ ಸಮರ ಶ್ರಮವ ನಿಮಿಷಕೆ
ನಿಳಯ ವೇದಿಯಲಿದ್ದು ಕಳೆದುದು ಕೂಡೆ ಪರಿವಾರ         ೩  
 
ಘಾಯವಡೆದಾನೆಗಳು ಗುಳವನು
ಹಾಯಿಕಲು ನೆಲಕುರುಳಿದವು ವಾ
ನಾಯುಜಂಗಳು ಬಿಗುಹ ಬಿಡೆ ದೊಪ್ಪೆಂದವಾಚೆಯಲಿ
ಘಾಯದಲಿ ಮುರಿದಂಬನುಗುಳಿದು
ಸಾಯದಿಹರೇ ಭಟರು ಗಜ ಹಯ
ಲಾಯ ಹತ್ತೊಂದಾಗಿ ಹೆಚ್ಚಿತು ಕೌರವೇಶ್ವರನ        ೪  
 
ಬಂದುದಿರುಳೋಲಗಕೆ ರಾಯನ
ಮಂದಿ ದಳಪತಿ ಶಕುನಿ ಕೃಪ ಗುರು
ನಂದನಾದಿಪ್ರತತಿ ಸಚಿವ ಪಸಾಯಿತರು ಸಹಿತ
ಇಂದಿನಾಹವದೊಳಗೆ ಕುಂತೀ
ನಂದನರ ಬೊಬ್ಬಾಟ ಬಲುಹಾ
ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ         ೫  
 
ಬಲುಹಲೇ ಬಳಿಕೇನು ಹಗೆಯ
ಗ್ಗಳಿಕೆ ಮೆರೆಯದೆ ಮುರವಿರೋಧಿಯ
ಬಲುಹ ಹೇಳಾ ಪಾರ್ಥನೆಂಬವನಾವ ಮಾನಿಸನು
ಬಲುಹು ಸಾರಥಿಯಿಂದ ರಿಪುಗಳ
ಗೆಲವು ಸಾರಥಿಯಿಂದ ಸಾರಥಿ
ಯೊಲಿದಡೇನೇನಾಗದೆಂದನು ಭೂಪತಿಗೆ ಕರ್ಣ        ೬  
 
ಭಾರಿ ಧನುವಿದ್ದೇನು ತೋಳಿನ
ತೋರದಲಿ ಫಲವೇನು ಕೈದುಗ
ಳಾರನಂಜಿಸಲಾಪವಾಹವರಂಗ ಮಧ್ಯದಲಿ
ಸಾರಥಿಯ ಬಲುಹಿಲ್ಲದಿರ್ದಡೆ
ಭೂರಿಸಾಧನವಿವು ನಿರರ್ಥಕ
ವಾರಿಗುಸುರುವೆ ತನ್ನ ಕೊರತೆಯನೆಂದನಾ ಕರ್ಣ        ೭  
 
ತೃಣಕೆ ಕೊಂಬೆನೆ ಫಲುಗುಣನ ಕಣೆ
ಗಿಣೆಯನಾ ಸಾರಥಿಯ ಕೈ ಮೈ
ಗುಣವಲೇ ಗರುವಾಯಿಗೆಡಿಸಿತು ನಮ್ಮ ಮೋಹರವ
ರಣದೊಳೆನಗತಿಶಯದ ಸಾರಥಿ
ಮಣಿದನಾದಡೆ ನಾಳೆ ಹೆಣದೌ
ತಣದಲುಣ ಬಡಿಸುವೆನು ಜಂಬುಕ ಕಾಕಸಂತತಿಗೆ         ೮  
 
ಲೇಸನಾಡಿದೆ ಕರ್ಣ ನಿನಗಿ
ನ್ನೈಸಲೇ ಸಾರಥಿಯ ಕೊರತೆ ಸು
ರಾಸುರರ ಥಟ್ಟಿನಲಿ ತೊಡಕುವರಾರು ನಿನ್ನೊಡನೆ
ಈ ಸಮಸ್ತ ನೃಪಾಲವರ್ಗದೊ
ಳಾಸೆಯಾರಲಿ ಸೂತ ಕರ್ಮಾ
ಭ್ಯಾಸಿಯನು ಜೋಡಿಸುವೆನೆಂದನು ಕೌರವರರಾಯ         ೯  
 
ಹಲವು ಮಾತೇನರಸ ನುಡಿದುದು
ಫಲಿಸಲರಿಯದು ದೈವಗತಿಯಲಿ
ಫಲಿಸಿತಾದಡೆ ರಾಜ್ಯಲಕ್ಷ್ಮಿಗೆ ಸೂಳೆತನವಹುದೆ
ಸುಲಭವಾದಡೆ ಮಾದ್ರರಾಜನ
ತಿಳುಹಿ ಸೈರಿಸು ರಿಪುಗಳೈವರ
ತಲೆಗೆ ಹಾಯಿಕು ಸಂಚಕಾರವನೆಂದನಾ ಕರ್ಣ        ೧೦  
 
ಉಬ್ಬಿದನು ರೋಮಾಂಚ ಮೆಯ್ಯಲಿ
ಹಬ್ಬಿದುದು ಹೊರೆಯೇರಿ ಮರವೆಯ
ಮಬ್ಬು ಕವಿದುದು ಕರ್ಣನಾಡಿದ ಮಾತ ಸವಿಸವಿದು
ಟೆಬ್ಬರಿಸುವಿಂದ್ರಿಯ ತುರಂಗದ
ಕಬ್ಬಿ ಕಳಚಿತು ಕೌರವೇಂದ್ರನು
ಸಬ್ಬಲಗ್ಗೆಯ ಹರುಷದಲಿ ಹೊರವಂಟನರಮನೆಯ       ೧೧  
 
ಹರಿದರರಸಾಳುಗಳು ರಾಯನ
ಬರವನೀತಂಗರುಹಿದರು ಕಡು
ಹರುಷದಲಿ ಕಲಿ ಶಲ್ಯ ಹೊರವಂಟನು ನಿಜಾಲಯವ
ಅರಸುಮಕ್ಕಳ ವಜ್ರಮಣಿಯಾ
ಭರಣ ಕಿರಣಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ         ೧೨  
 
ಅಂದಣವನಿಳಿದರಸನಾತಗೆ
ವಂದಿಸಿದನಾ ಮಾದ್ರಪತಿ ಸಾ
ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ
ಇಂದಿದೇನಿದ್ದಿದ್ದು ನೀನೇ
ಬಂದ ಕಾರ‍್ಯ ವಿಶೇಷವೇನುಂ
ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ          ೧೩  
 
ಏನ ಹೇಳುವೆ ನಮ್ಮ ಪುಣ್ಯದ
ಹಾನಿಯನು ನುಗ್ಗಾಯ್ತು ಬಲ ಸು
ಮ್ಮಾನ ಬೀತುದು ಬಿರುದರಿಗೆ ಕಾಲೂರಿತಪಮಾನ
ಜೈನದೀಕ್ಷೆಯ ಹಿಡಿದುದೆನ್ನ ಸ
ಮಾನ ಸುಭಟರು ಜಯಸಿರಿಯ ಸಂ
ಧಾನ ಮುರಿದುದು ಮಾವ ನಿಮಗಜ್ಞಾತವೇನೆಂದ         ೧೪  
 
ಸಮರಜಯಸಾಧಕರು ಮಂತ್ರ
ಭ್ರಮಿತರಾಯ್ತಪಜಯವಧೂ ವಿ
ಭ್ರಮ ಕಟಾಕ್ಷದ ಘಾಯದಲಿ ಕಳವಳಿಸದವರಾರು
ಸಮತೆಯಾಯಿತು ತವಕಿಗಳಿಗು
ದ್ಭ್ರಮಿಗಳಿಗೆ ತಿಳಿವಾಯ್ತು ವಾಸಿಯ
ಮಮತೆಯವರು ವಿರಕ್ತರಾದರು ಮಾವ ಕೇಳೆಂದ          ೧೫  
 
ಮುರಿವಡೆದು ಕಲಿ ಭೀಷ್ಮನೇ ಕು
ಕ್ಕರಿಸಿದನು ದ್ರೋಣಂಗೆ ಬಂದುದ
ನರುಹಲೇತಕೆ ಬಳಿಕ ಕರ್ಣನ ವೀರಪಟ್ಟದಲಿ
ನೆರವಣಿಗೆಯುಂಟಾದಡೊಂದೇ
ಕೊರತೆಯಿದು ನಿಮ್ಮಿಂದ ಕಡೆಯಲಿ
ನೆರತೆಯಹುದಿನ್ನುತ್ತರೋತ್ತರ ಸಿದ್ಧಿ ಬಳಿಕೆಂದ         ೧೬  
 
ದ್ರೋಣ ಭೀಷ್ಮರವೋಲು ನೆಟ್ಟನೆ
ಹೂಣಿಗರು ರಾಧೇಯ ಮಾದ್ರ
ಕ್ಷೋಣಿಪತಿಯೆಂದೆಂಬ ನುಡಿಯುಂಟೆರಡು ಥಟ್ಟಿನಲಿ
ಕೇಣವಿಲ್ಲದ ರಥಗತಿಯ ಬಿ
ನ್ನಾಣವನು ತೋರಿದಡೆ ತನ್ನಯ
ಗೋಣಿಗೊಡ್ಡಿದ ಕೈದುವನು ನೀ ತೆಗೆಸಿದವನೆಂದ          ೧೭  
 
ಬರಿದೆ ಬೋಳೈಸದಿರು ಕಾರ‍್ಯದ
ಹೊರಿಗೆಯೇನದ ಹೇಳು ಮೇಗಡೆ
ಮೆರೆವವರು ನಾವಲ್ಲ ನುಡಿಯಾ ಬಯಲ ಡೊಂಬೇಕೆ
ಅರುಹು ಕೇಳುವೆನೆನಲು ಶಲ್ಯನ
ಬಿರುನುಡಿಗೆ ಬೆಚ್ಚದೆ ಮಹೀಪತಿ
ಯರಿವು ತಪ್ಪದೆ ಬಿನ್ನವಿಸಿದನು ಮಾದ್ರರಾಜಂಗೆ         ೧೮  
 
ಮಾವ ಸಾರಥಿಯಾಗಿ ಕರ್ಣನ
ನೀವು ಕೊಂಡಾಡಿದಡೆ ಫಲುಗುಣ
ನಾವ ಪಾಡು ಸುರಾಸುರರ ಕೈಕೊಂಬನೇ ಬಳಿಕ
ಆವುದೆಮಗಭ್ಯುದಯವದ ನೀ
ನಾವ ಪರಿಯಲಿ ಮನ್ನಿಸಿದಡರೆ
ಜೀವ ಕೌರವ ವಂಶವೇ ಸಪ್ರಾಣಿಸುವುದೆಂದ         ೧೯  
 
ಕೇಳಿದನು ಕುರುಪತಿಯ ಮಾತಿನ
ಗಾಳಿ ತುಡುಕಿತು ಮನದ ರೋಷ
ಜ್ವಾಲೆಯನು ಮೀಸೆಗಳು ಕುಣಿದವು ಕಾಯ ಕಂಪಿಸಿತು
ಮೇಲು ಮೂಗಿನ ಬೆರಳ ಕಡುಗಾ
ದಾಲಿಗಳ ಮಣಿಮಕುಟದೊಲಹಿನ
ನಾಲಗೆಯ ನಿರ್ದ್ರವದ ಮಾದ್ರಾಧೀಶನಿಂತೆಂದ         ೨೦  
 
ಖೂಳನೆಂಬೆನೆ ನೀ ಸಮಸ್ತ ಕ
ಳಾಳಿ ನಿಪುಣನು ಬಾಲನೆಂಬೆನೆ
ಮೇಲೆ ಪಲಿತದ ಬೀಡು ಬಿಟ್ಟಿದೆ ತಳಿತ ತನುವಿನಲಿ
ಹೇಳು ಹೇಳಿನ್ನೊಮ್ಮೆ ನುಡಿ ನುಡಿ
ಕೇಳುವೆನು ಕಿವಿಯಾರೆ ಕರ್ಣನ
ಕಾಳೆಗಕೆ ನಾವ್ ಸಾರಥಿಗಳೇ ಶಿವಶಿವಾ ಎಂದ         ೨೧  
 
ತಾರತಮತೆಯ ಬಲ್ಲೆ ಪುರುಷರ
ಚಾರುಚರಿತವನರಿವೆ ಸುಭಟರ
ವೀರ ವೃತ್ತಿಯ ಬಲ್ಲೆ ಮಾನ್ಯರ ಮೈಸಿರಿಯ ತಿಳಿವೆ
ಆರವನು ರಾಧೇಯ ದಿಟ ನಾ
ವಾರವರು ನಮ್ಮಂತರವ ನೀ
ನಾರ ಕೈಯಲಿ ಕೇಳಿದರಿಯಾ ಶಿವಶಿವಾ ಎಂದ        ೨೨  
 
ಖೂಳನನು ಹಿಡಿತಂದು ಧರಣೀ
ಪಾಲರಲಿ ಸರಿಮಾಡಿ ರಾಜ್ಯದ
ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ
ಕೀಳುಮೇಲಿನ ಸೀಮೆ ನಿನ್ನಲಿ
ಬೀಳುಕೊಂಡುದು ಸಾಕು ನಮಗಿ
ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ         ೨೩  
 
ಒಡನೆ ನಿಂದನು ಸೆರಗ ಹಿಡಿದವ
ಗಡಿಸಲೇಕಿನ್ನೆನುತ ಗುಣದಲಿ
ನುಡಿದು ಕುಳ್ಳಿರಿಸಿದನು ಸಂತೈಸಿದನು ವಿನಯದಲಿ
ನುಡಿಗೆ ಕೋಪಿಸಲೇಕೆ ಮನವೊಡ
ಬಡುವುದೇ ಕೈಕೊಂಬುದಲ್ಲದ
ಡೊಡೆಯರುಂಟೇ ನಿಮಗೆ ಎಂದನು ಕೌರವರ ರಾಯ     ೨೪  
 
ಅರುಣಸಾರಥಿ ಭುವನಕಾರ‍್ಯದ
ಧುರವ ಹೊರನೇ ಕೃಷ್ಣನಲ್ಲಾ
ನರನ ಸಾರಥಿಯಾಗನೇ ಪರಕಾರ‍್ಯದನುವರಿದು
ಹರನ ಸಾರಥಿ ಕಮಲಸಂಭವ
ಸುರರ ಕರ‍್ಯಕ್ಕೊದಗನೇ ಸ
ತ್ಪುರುಷರೇ ಪರಕಾರ‍್ಯನಿಷ್ಠರು ಕೋಪವೇಕೆಂದ        ೨೫  
 
ಸವರಿದರು ಕುರುವಂಶವನು ಪಾಂ
ಡವರು ಸಕಲ ಮಹಾರಥರು ಸಲೆ
ಸವೆದುದಿಲ್ಲಿ ನದೀಸುತ ದ್ರೋಣಾದಿಗಳು ಸಹಿತ
ಅವರೊಳಳಿದವರಿಬ್ಬರೇ ನೀ
ವವಸರಕೆ ಸಾರಥ್ಯವನು ನಿ
ಮ್ಮವರ ಮೇಲನುರಾಗವುಳ್ಳಡೆ ಮಾಡು ಮಾಣೆಂದ        ೨೬  
 
ನಿನ್ನ ಕೈಯಲಿ ಬರಲಿ ಸತ್ತಿಗೆ
ಯೆನ್ನ ಕೈಯಲಿ ಹೊಡೆಸು ಬಂಡಿಯ
ನಿನ್ನ ತಮ್ಮನ ಹೆಗಲಲಾತನ ಹಡಪ ಹಾಯ್ಕಿರಲಿ
ನಿನ್ನ ಬಂಧುಗಳವನ ಬೇಂಟೆಯ
ಕುನ್ನಿಗಳ ಹಿಡಿಯಲಿ ಸುಯೋಧನ
ನಿನ್ನ ಭಾಗ್ಯವನೊದೆದು ಕಳೆ ಕೇಡಾವುದೆಮಗೆಂದ         ೨೭  
 
ಗೆಲುವೆನವದಿರನೆಂಬ ಬರಿ ಕ
ಕ್ಕುಲಿತೆಯಲ್ಲದೆ ದ್ರೋಣಭೀಷ್ಮರಿ
ಗಳುಕದರಿಭಟರಿವನ ಕೊಂಬರೆ ಕಂಡು ಮರುಳಾದೈ
ಬಲುಬಿದಿರನುಚ್ಚಳಿಸುವಳಿಮುಖ
ಕೆಳೆಯಕಬ್ಬಾನುವುದೆ ಕೌರವ
ಕುಲವನದ್ದಿದೆ ಪಾಪಿ ಕಷ್ಟವ ನೆನೆದೆ ಹೋಗೆಂದ           ೨೮  
 
ಅರಿಶಿರವ ಸೆಂಡಾಡಿ ಎನ್ನೀ
ಕರವು ವಂದಿವ್ರಾತದೆಡರನು
ಪರಿಹರಿಸಿತೀ ಹದನು ನಾವ್ ಹಿಂದೀಸುಕಾಲದಲಿ
ಧರಣಿಪತಿ ನಿನ್ನಿಂದ ಕರ್ಣನ
ತುರಗವಾಘೆಯ ಚಮ್ಮಟಿಗೆಗೀ
ಕರವು ಹೂಡುವುದಾಯ್ತು ಹರಹರ ಧನ್ಯರಾವೆಂದ        ೨೯  
 
ಜಾತಿಹೀನರ ಕರ‍್ಮವುತ್ತಮ
ಜಾತಿಗಳ ಕರ್ತವ್ಯ ತಿರ‍್ಯ
ಗ್ಜಾತಿಗಳ ಗತಿ ಧರ್ಮವೃತ್ತಿಯ ಸೇರುವೆಯನರಿದು
ಆತನಳವಡಿಸಿದನು ವಿಧಿ ನಿಮ
ಗಾತ ಮಾಡಿದನಳಿವ ಸಾಮ
ರ್ಥ್ಯಾತಿಶಯವುಂಟೈಸಲೇ ಶಿವಯೆನುತ ಖತಿಗೊಂಡ      ೩೦  
 
ಆಸುರದ ಬೆರಗೇಕೆ ನಮ್ಮೊಡ
ನೀಸು ಮಾತೇಕೆಮ್ಮ ರಕ್ಷಿಸು
ವಾಸೆಯುಂಟೇ ಮಾಡಿ ಮಾಣ್ಬುದು ಕರುಣವಿಲ್ಲದಡೆ
ವಾಸಿವಟ್ಟವ ನೋಡಿದನೆ ಲ
ಕ್ಷ್ಮೀಶನವರಲಿ ಸೂತ ಕರ‍್ಮಾ
ಭ್ಯಾಸಿಯೇ ಮುರವೈರಿ ಮುನ್ನೆಂದನು ಸುಯೋಧನನು     ೩೧  
 
ಮುರಹರನ ಸಮಜೋಳಿ ನೀವಾ
ನರನ ಸಮಗೈ ಕರ್ಣನಿಂತಿ
ಬ್ಬರನು ನೀವಿಬ್ಬರು ವಿಭಾಡಿಸಿ ಗೆಲುವುದೇನರಿದು
ಸುರರ ಕಾರ‍್ಯದಲಂದು ಸಾರಥಿ
ಸರಸಿಜೋದ್ಭವನಾಗನೇ ಎ
ನ್ನರಸುತನವಿಂದಳಿದುದಿದ ನೀನುಳುಹಬೇಕೆಂದ         ೩೨  
 
ಒಣಗುತಿದೆ ಕುರುವಂಶಲತೆ ಫಲು
ಗುಣನ ಕೋಪಾನಳನ ನಾಲಗೆ
ಕೆಣಕುತಿದೆ ಕಕ್ಕುಲಿತೆಬಟ್ಟರೆ ಕಾಣೆ ಕಾವವರ
ಅಣಕಿಸದೆ ಕಾರುಣ್ಯವರ್ಷವ
ನೊಣಗಲಲಿ ಸುರಿ ಪಾಪಿ ಮಕ್ಕಳ
ಹೆಣನ ಕಾಣುತ ದುಃಖವಿಲ್ಲ ದುರಾತ್ಮ ನೀನೆಂದ         ೩೩  
 
ದೇವಕೀಸುತನೇನು ಬಂಡಿಯ
ಬೋವಗುಲದಲಿ ಜನಿಸಿದನೆ ಮೇ
ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ
ಕಾವುದೊಬ್ಬರನೊಬ್ಬರಿದರೊಳ
ಗಾವ ಹಾನಿ ಪರಪ್ರಯೋಜನ
ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ        ೩೪  
 
ಗುರು ಪಿತಾಮಹರಿಂದ ಮೋರೆಯ
ಮುರಿದ ವಿಜಯವಧೂಕಟಾಕ್ಷವ
ತಿರುಹಿ ಹಾಯ್ಕುವ ಗಂಡನಾವನು ನೀವು ತಪ್ಪಿದಡೆ
ಕುರು ಕುಲೋದ್ಧಾರಕನು ಮಾದ್ರೇ
ಶ್ವರನೆನಿಪ ವಿಖ್ಯಾತಿ ಬಂದುದು
ಪರಿಹರಿಸದಿರು ಮಾವ ಎಂದೆರಗಿದನು ಚರಣದಲಿ        ೩೫  
 
ಶಿವ ಶಿವಾ ನಿರ್ಬಂಧವಿದು ಕೌ
ರವನಲಾಯಿತೆ ಮದ್ಯಮಯ ಗಂ
ಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
ಅವನಿಪತಿಗಳ ಸೇವೆಯಿದು ಕ
ಷ್ಟವಲೆ ಮೊದಲಲಿ ಬಳಿಕ ನಾವಿ
ನ್ನವಗಡಿಸಲೇನಹುದು ಸಾರಥಿಯಾದೆವೇಳೆಂದ        ೩೬  
 
ಆಯಿತೇ ಸಂತೋಷ ಕಮಲದ
ಳಾಯತೇಕ್ಷಣನೊಡನೆ ಬಂಡಿಯ
ಬೋಯಿಕೆಗೆ ವೀಳೆಯವ ಹಿಡಿದೆವು ಹಲವು ಮಾತೇನು
ದಾಯ ಬಂದುದೆ ನಿನಗೆ ಬೊಮ್ಮಂ
ಗಾಯಿತೇ ಸೂತತ್ವವಾದಡೆ
ರಾಯ ಹೇಳೈ ತ್ರಿಪುರ ದಹನದ ಕಥೆಯ ನೀನೆಂದ      ೩೭

ಸಂಕ್ಷಿಪ್ತ ಭಾವ
Lrphks Kolar

ಕರ್ಣನಿಗೆ ಸಾರಥಿಯಾಗಲು ಶಲ್ಯನನ್ನು ಒಪ್ಪಿಸಿದ ಪ್ರಸಂಗ

ಕರ್ಣನ ಸೇನಾಪಟ್ಟದ ಮೊದಲನೆಯ ದಿನದ ಯುದ್ಧ ಮುಗಿಯಿತು. ಎರಡನೆಯ ದಿನದ ವರದಿಯನ್ನು ಸಂಜಯನು ಆರಂಭಿಸಿದನು. ಹಿಂದಿನ ದಿನದ ಯುದ್ಧದ ನಂತರ ಎಲ್ಲ ವಿಶ್ರಾಂತಿ ಪಡೆದರು. ರಥಗಳನ್ನು ಸರಿಪಡಿಸುವುದು ಮುಂತಾದ ಕೆಲಸಗಳು ಸಾಗಿದವು. ಆ ರಾತ್ರಿ ಓಲಗದಲ್ಲಿ ತಮ್ಮ ಕಡೆಯ ಅಧಿಕ ಸೋಲಿನ ಬಗ್ಗೆ ದುರ್ಯೋಧನ ಕಳವಳ ವ್ಯಕ್ತಪಡಿಸಿದಾಗ ಕರ್ಣ ತನಗೆ ಸರಿಯಾದ ಸಾರಥಿಯಿಲ್ಲವೆಂದನು. ಪಾರ್ಥನಿಗೆ ಸಾರಥಿಯದೇ ಬಲವೆಂದನು. ಯಾರನ್ನು ಸಾರಥಿಯಾಗಿ ಮಾಡಲಿ ಹೇಳು ಎನ್ನಲು ಶಲ್ಯನ ಹೆಸರು ಸೂಚಿಸಿದನು ಕರ್ಣ.

ದುರ್ಯೋಧನನು ಸಂತಸದಿಂದ ಒಪ್ಪಿ ಮಾವ ಶಲ್ಯನನ್ನು ಕಾಣಲು ಬಂದನು. ಇವನೇ ಸ್ವತಃ ಬಂದಿದ್ದು ಕಂಡು ಅಚ್ಚರಿಗೊಂಡ ಶಲ್ಯ ಕಾರಣ ಕೇಳಿದನು. ಭೀಷ್ಮ, ದ್ರೋಣರದು ಮುಗಿಯಿತು. ಕರ್ಣನ ಪಟ್ಟದಲ್ಲಿ ಆಗುತ್ತಿರುವ ಕಷ್ಟ ನೀನೇ ಬಲ್ಲೆ. ನೀನೇ ಇದನ್ನು ಸರಿಮಾಡಲು ಸಾಧ್ಯವೆನ್ನಲು ಏನು ಮಾಡಬೇಕು ಎಂದು ಕೇಳಿದನು.

ಕರ್ಣನ ಸಾರಥಿಯಾಗಲು ಕೇಳಿದೊಡನೆ ರೋಷ‌ ಭುಗಿಲ್ ಎಂದಿತು. ಏನು ಹೇಳುತ್ತಿರುವೆ ನೀನು ಇನ್ನೊಮ್ಮೆ ನುಡಿ ಎಂದು ಕೆರಳಿದನು. ಕರ್ಣನಿಗೆ ನಾನು ಸಾರಥಿಯಾಗುವುದೇ..? ಶಿವಶಿವಾ ಎಂದನು. ಆದರೆ ಅವನ ಸೆರಗು ಹಿಡಿದು ನಿಲ್ಲಿಸಿ ವಿನಯದಿಂದ ಓಲೈಸಿದನು ದುರ್ಯೋಧನ.

ಇಡೀ ಜಗತ್ತಿನ ಬೆಳಕು ಸೂರ್ಯನಿಗೆ ಅರುಣ ಸಾರಥಿಯಲ್ಲವೆ? ಪಾರ್ಥನಿಗೆ ಕೃಷ್ಣ ಸಾರಥಿಯಾಗಲು ಒಪ್ಪಿಲ್ಲವೆ? ಹಿಂದೆ ಹರನಿಗೆ ಬ್ರಹ್ಮ ಸಾರಥಿಯಾಗಿರಲಿಲ್ಲವೆ? ನೀನೇಕೆ ಮಾಡಬಾರದು ಎನ್ನಲು ಶಲ್ಯನು ಮತ್ತೂ ಕೋಪದಿಂದ ಆಗಲಿ, ನೀನು ಅವನಿಗೆ ಸತ್ತಿಗೆ ಹಿಡಿ. ನನ್ನ ಕೈಯಲ್ಲಿ ಬಂಡಿ ಹೊಡಿಸು, ನಿನ್ನ ತಮ್ಮ ಹಡಪದವನಾಗಲಿ ಎಂದೆಲ್ಲ ಕೂಗಾಡಿದ. ಜಾತಿ, ಕುಲ, ಧರ್ಮಗಳೆಲ್ಲ ಬಿಟ್ಟುಹೋದವು ಎಂದು  ನುಡಿದ ಶಲ್ಯನನ್ನು ಸಮಾಧಾನಿಸುತ್ತ ಕೃಷ್ಣನೇನು ಬಂಡಿಯನ್ನು ಹೊಡೆಯುವವನೇ? ಕೌರವರನ್ನು ಉಳಿಸುವ ಮನಸ್ಸು ನಿನಗಿಲ್ಲವೆ ಎಂದು ಪರಿಪರಿಯಾಗಿ ಗೋಗರೆದ. ಕಾಲಿಗೆ ಬಿದ್ದು ಕೇಳಿದ. ಕೊನೆಗೆ ಶಲ್ಯನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಕೊನೆಯಲ್ಲಿ ದುರ್ಯೋಧನನು ಹೇಳಿದ ಬ್ರಹ್ಮನು ಸೂತತ್ವ ವಹಿಸಿದ ಕಥೆಯನ್ನು ವಿಸ್ತರಿಸಿ ಹೇಳಬೇಕೆಂದು ಕೇಳಲು ತ್ರಿಪುರ ದಹನದ ಕಥೆಯು ಮೊದಲಾಯಿತು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ