ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಎನ್. ಶ್ರೀನಾಥ್


 ಟಿ. ಎನ್. ಶ್ರೀನಾಥ್


ವಿದ್ವಾನ್ ಟಿ. ಎನ್. ಶ್ರೀನಾಥ್ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ಪ್ರಸಿದ್ಧ ಕೊಳಲು ವಾದಕರು. 

ಶ್ರೀನಾಥ್‌ 1958ರ ಮೇ 1ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಟಿ.ಎನ್. ರಾಮಮೂರ್ತಿ.  ತಾಯಿ ಕಮಲಮ್ಮ. ಶ್ರೀನಾಥ್ ಮೈಸೂರು ವಿಶ್ವವಿದ್ಯಾಲಯದ ಆಹಾರ ಮತ್ತು ಸಂಶೋಧನಾ ಕೇಂದ್ರ (CFTRI) ದಿಂದ ಸ್ವರ್ಣಪದಕದೊಡನೆ ಎಂ.ಎಸ್ಸಿ. ಪದವಿ ಪಡೆದರು. ಮುಂದೆ ಅನೇಕ ಪ್ರತಿಷ್ಠಿತ ಆಹಾರ ಸಂಶೋಧನಾ ಸಂಸ್ಥೆಗಳಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 

ಶ್ರೀನಾಥ್ ಅವರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಬೆಳೆದು ಬಂದ ಆಸಕ್ತಿಯಿಂದ ಕಲಿತದ್ದು ಕೊಳಲು. ಮೈಸೂರಿನ ಪ್ರಖ್ಯಾತ ಕೊಳಲು ವಾದಕರಾದ ಎ.ವಿ.ಪ್ರಕಾಶ್‌. ದಿಂಡಿಗಲ್ ಎಸ್.ಪಿ.ನಟರಾಜನ್ ಮತ್ತು ಬಿ.ಎನ್. ಸುರೇಶ್‌ರವರಲ್ಲಿ ಕೊಳಲು ವಾದನ ಶಿಕ್ಷಣ ಪಡೆದು, ಜಿ. ಎನ್. ನಾಗಮಣಿ ಶ್ರೀನಾಥ್ ಮತ್ತು  ರುದ್ರ ಪಟ್ನಂ ಆರ್‌.ಎನ್. ತ್ಯಾಗರಾಜನ್‌ರವರಲ್ಲಿ ಹಾಡುಗಾರಿಕೆ ಅಭ್ಯಾಸ ಮಾಡಿದರು. 

ಶ್ರೀನಾಥ್ ಶಾಲಾ ಕಾಲೇಜು ದಿನಗಳಿಂದಲೇ ಸ್ಪರ್ಧೆಯಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದರು. ಆಕಾಶವಾಣಿಯ ಶಾಸ್ತ್ರೀಯ ಸಂಗೀತದ ಸಹವಾದ್ಯ ವಾದಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿ ’ಬಿ ಹೈ’ ಗ್ರೇಡ್ ಕೊಳಲು ವಾದಕರಾಗಿ ಪ್ರವೇಶ ಪಡೆದ ಅವರು ಮುಂದೆ ಆಕಾಶವಾಣಿಯ ’ಎ’ ಗ್ರೇಡ್ ಕಲಾವಿದರಾದರು. 

ಟಿ. ಎನ್. ಶ್ರೀನಾಥ್ ಕರ್ನಾಟಕ ಗಾನ ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, ಆಕಾಶವಾಣಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಿದ್ಧ ಸಂಗೀತ ಕಂಪನಿಗಳಿಂದ ಇವರ ಹಲವಾರು ಧ್ವನಿ ಸುರುಳಿಗಳ ಬಿಡುಗಡೆಯಾಗಿವೆ. ಆಕಾಶವಾಣಿಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ವಲಯ ಸಂಗೀತ ಕಚೇರಿ, ರಾಷ್ಟ್ರೀಯ ಆಕಾಶವಾಣಿ ಕಾರ್ಯಕ್ರಮಗಳು, ದೂರದರ್ಶನದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲದೆ ಸಾರ್ಕ್‌ ಸಮ್ಮೇಳನ, ಮುಂಬಯಿಯ ’ನಾಡ ಕರ್ನಾಟಕ’, ಸಂಗೀತ ನೃತ್ಯ ಅಕಾಡೆಮಿಯ ರಾಷ್ಟ್ರೀಯ ಸಂಗೀತೋತ್ಸವ, ಹಂಪಿ ಉತ್ಸವ, ಗೋವಾ ಕೇಂದ್ರದ ಸಂಗೀತೋತ್ಸವ ಮುಂತಾದವುಗಳಲ್ಲಿ ಭಾಗಿಯಾಗಿದ್ದಾರೆ. 

ಶುದ್ಧ ಶಾಸ್ತ್ರೀಯ ಸಂಗೀತ ಮತ್ತು ಗಾಯಕಿ ಪದ್ಧತಿಯ ಸುಶ್ರಾವ್ಯ ಸಂಯೋಗಕ್ಕೆ ಹೆಸರಾದ ಟಿ. ಎನ್. ಶ್ರೀನಾಥ್ ವಿದೇಶಗಳಲ್ಲಿಯೂ ಶಿಬಿರ, ಪ್ರಾತ್ಯಕ್ಷಿಕೆ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.  ಯು.ಕೆ.ಯ ಯೂನಿವರ್ಸಿಟಿ ಆಫ್ ಸರ್‌ಕ್ಯೂಟ್ ಫಾರ್‌ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್, ಯು.ಕೆ.ಆರ್ಟ್ಸ್‌‌ಕೌನ್ಸಿಲ್ ಆಶ್ರಯದಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. 

ಟಿ. ಎನ್.  ಶ್ರೀನಾಥ್ ಅವರಿಗೆ 1998ರಲ್ಲಿ ಅನನ್ಯ ಯುವ ಪುರಸ್ಕಾರ, ಜಗದ್ಗುರು ರಂಭಾಪುರಿ ಪೀಠದಿಂದ ವೇಣುಗಾನಪಾಣಿ, ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ ’ಗಾನಕಲಾಶ್ರೀ’, 1998ರಲ್ಲಿ ಯುವ ಸಂಗೀತೋತ್ಸವದ ಅಧ್ಯಕ್ಷ ಪದವಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

On the birthday of our flutist Vidwan T. N. Srinath

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ