ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಲರಾಜ್ ಸಾಹನಿ


 ಬಲರಾಜ್ ಸಾಹನಿ
 

ಬಲರಾಜ್ ಸಾಹನಿ ಭಾರತೀಯ ಚಲನಚಿತ್ರ, ರಂಗಭೂಮಿ ಎರಡರಲ್ಲೂ ತಮ್ಮ ಅಭಿನಯ, ವಾಗ್ಮಿತೆಯಿಂದ ಜನರ ಮನಸ್ಸನ್ನು ಗೆದ್ದ ಒಬ್ಬ ಮಹಾನಟರಾಗಿದ್ದರು.

ಬಲರಾಜ್ 1912ರ ಮೇ 1ರಂದು ಪಂಜಾಬ್‌ನ ರಾವಲ್ಪಿಂಡಿಯಲ್ಲಿ ಜನ್ಮ ತಾಳಿದರು. ತಂದೆ ಊರಿನ ಜನಕ್ಕೆ ಲಾಲಾಜಿ ಎಂದು ಅಚ್ಚು ಮೆಚ್ಚಾಗಿದ್ದರು. ಆರ್ಯ ಸಮಾಜದ ಅನುಯಾಯಿ ಗಳಾಗಿದ್ದರು. ಧರ್ಮಪರಾಯಣರಾಗಿದ್ದ ಅವರಿಂದಲೇ ಮಗನಿಗೆ ಸಂಸ್ಕೃತ ಪಾಠ. ಮಾತೃಭಾಷೆ ಪಂಜಾಬಿಯಾದರೂ ಬಲರಾಜ್‌ರಿಗೆ ಸಂಸ್ಕೃತದ ಓದು ಬಲುಪ್ರಿಯ. ತಮ್ಮ ಭೀಷ್ಮ ಸಹಾನಿ ಇವರ ಒಡನಾಡಿ.

ಸಾಹನಿಯವರ ಆರಂಭದ ವಿದ್ಯಾಭ್ಯಾಸ ರಾವಲ್ಪಿಂಡಿಯಲ್ಲೆ ಜರುಗಿತು. ಸಾಹನಿಯನಿಯವರಿಗೆ ಅಂದಿನಿಂದಲೇ ಸಾಹಿತ್ಯದ ಗೀಳು ಹತ್ತಿತ್ತು. ಕಲೆ ಸಾಹಿತ್ಯ ಎರಡರಲ್ಲೂ ಅವರಿಗೆ ಅಭಿರುಚಿ ಉಂಟಾಯಿತು. ನಮ್ಮ ದೇಶಕ್ಕೆ ಆಗತಾನೇ ಚಲನಚಿತ್ರಗಳು ಬಂದಿದ್ದವು. ರಾವಲ್ಪಿಂಡಿಗೂ ‘ಬಯಾಸ್ಕೋಪ್’ ಬಂತು.  ಆ ಕುರಿತು ಆಸಕ್ತಿ ಹುಟ್ಟಿತು. ದುಡ್ಡಿಲ್ಲದೆ ಬಯಲು ರಂಗಮಂದಿರದಲ್ಲಿ ಮರದ ಮೇಲೆ  ಅಡಗಿ ಕುಳಿತು ಸಿನಿಮಾ ನೋಡುತ್ತಿದ್ದರು.‍

ಸಾಹನಿ ಮೆಟ್ರಿಕ್ಯುಲೇಶನ್ ಮುಗಿಸಿ ಇಂಟರ್ ಸೇರಿದರು. 1930ರಲ್ಲಿ ರಾವಲ್ಪಿಂಡಿ ಬಿಟ್ಟು ಲಾಹೋರಿನ ಸರ್ಕಾರಿ ಕಾಲೇಜನ್ನು ಸೇರಿದರು. ಕಾಲೇಜಿನಲ್ಲಿ ಪ್ರಾಧ್ಯಾಪಕ ಬುಖಾರಿಯವರು ಸಾಹನಿಯವರ ಮೇಲೆ ಪ್ರಭಾವ ಬೀರಿದರು. ಕಾಲೇಜಿನ ನಾಟಕ ಮಂಡಳಿಯ ಹಲವಾರು ನಾಟಕಗಳಲ್ಲಿ ಸಾಹನಿ ಪಾತ್ರವಹಿಸಿದರು. ಅಲ್ಲಿಂದ ಅವರಿಗೆ ಕಲೆ ಪ್ರಧಾನ ವಿಷಯ ವಾಯಿತು. ಕಾಲೇಜಿನಲ್ಲಿ ಚೇತನ್ ಆನಂದ್ ಇವರ ಒಳ್ಳೆಯ ಮಿತ್ರರು. ಲಾಹೋರಿನಲ್ಲಿ ಇವರ ಇನ್ನೊಬ್ಬ ಒಳ್ಳೆ ಮಿತ್ರ ಪ್ರಸಿದ್ಧ ಕತೆಗಾರ ಕೃಷ್ಣ ಚಂದರ್. ಸಾಹನಿ ಕಾಲೇಜಿನಲ್ಲಿದ್ದಾಗ ಇಂಗ್ಲಿಷನಲ್ಲಿ ಕವಿತೆಗಳನ್ನು ಹೆಣೆಯುತ್ತಿದ್ದರು. ಕಾಲೇಜ್ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದವು.

1931ರಲ್ಲಿ ಭಾರತದಲ್ಲಿ ಪ್ರಥಮ ವಾಕ್ಚಿತ್ರ ‘ಆಲಂ ಅರಾ’ ತಯಾರಾಯಿತು. ಲಾಹೋರಿನಲ್ಲಿ ಸಾಹನಿ ಆ ಚಿತ್ರವನ್ನು ನೋಡಿದರು. ಮುಂದೆ ಕಲ್ಕತ್ತೆಯ ನ್ಯೂ ಥಿಯೇಟರ‍್ಸ್ ಸಂಸ್ಥೆ ತಯಾರಿಸಿದ ‘ಪೂರ್ಣಭಕ್’ ಸಿನಿಮ ನೋಡಿದ ಬಳಿಕ ಸಾಹನಿ ಅವರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಒಲವು ಮೂಡಿತು. ಸಾಹನಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಗಳಿಸಿದರು. ಅವರ ಪತ್ನಿ ದಮಯಂತಿ ಸಾಹನಿ ಬಿ. ಎ. ಪದವೀಧರೆ, ಸಂಗೀತ ಹಾಗೂ ಸಾಹಿತ್ಯ  ಪ್ರಿಯೆಯಾಗಿದ್ದರು.  

1937ರಲ್ಲಿ ಸಾಹನಿ ತಮ್ಮ ಪತ್ನಿಯೊಂದಿಗೆ ಕಲ್ಕತ್ತೆಗೆ ಬಂದರು. ಅಲ್ಲಿ, ಹಿಂದಿಯ ಖ್ಯಾತ ಬರಹಗಾರ ರಾಗಿದ್ದ ಹಜಾರಿಪ್ರಸಾದ್ ದ್ವಿವೇದಿಯವರ ಕೃಪೆಯಿಂದ ಶಾಂತಿನಿಕೇತನದಲ್ಲಿ ಅಧ್ಯಾಪಕ ಹುದ್ದೆ ದೊರೆಯಿತು. ಶಾಂತಿನಿಕೇತನದಲ್ಲಿ ಸಾಹಿನಿ ಹಲವಾರು ವಿಚಾರ ಪ್ರಚೋದಕ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದರು. ತಾವೂ ಅಭಿನಯಿಸುತ್ತಿದ್ದರು. ಸ್ತ್ರೀಪಾತ್ರಗಳನ್ನೂ ನಿರ್ವಹಿಸಿದರು.

ಸಹಾನಿ ಪತ್ನಿಯೊಡನೆ 1938ರಲ್ಲಿ ಮಹಾತ್ಮ ಗಾಂಧೀಜಿಯವರಿಂದ ರೂಪಿತವಾಗಿದ್ದ ಸೇವಾಗ್ರಾಮಕ್ಕೆ ಬಂದರು. ಅಲ್ಲಿ ಶಿಕ್ಷಕರಾದ ಮೇಲೆ ಸಿನಿಮಾ ಖಯಾಲಿ ಬಿಟ್ಟು ಹೋಗಿತ್ತು. ಅಲ್ಲಿದ್ದಾಗಲೇ ಸಾಹನಿ ‘ಹಂಸ’ ಮೊದಲಾದ ಹಿಂದಿ ಪತ್ರಿಕೆಗಳಿಗೆ ಕಥೆಗಳನ್ನು ಬರೆಯತೊಡಗಿದರು. ಸಾಹಿತ್ಯದ ಅಭ್ಯಾಸವೂ ಜೊತೆಗೆ ನಡೆಯಿತು. ಅವರಿಗೆ ಅನೇಕ ರಾಷ್ಟ್ರ ನಾಯಕರ ಪರಿಚಯವಾಯಿತು.‍ ಸಾಹನಿ 1940ರಲ್ಲಿ ಲಂಡನ್ನಿಗೆ ಪ್ರಯಾಣ ಬೆಳೆಸಿದರು. ಗಂಡ ಹೆಂಡತಿ ಇಬ್ಬರಿಗೂ ಬಿ.ಬಿ.ಸಿ. ವಾರ್ತಾಪ್ರಸಾರ ಇಲಾಖೆಯಲ್ಲಿ ಕೆಲಸ. ಲಂಡನ್‌ನಲ್ಲಿ ಯೂನಿಟಿ ಥಿಯೇಟರ್‌ನ ಸದಸ್ಯರಾಗಿ ಅಲ್ಲಿ ಪ್ರದರ್ಶಿತವಾಗುತ್ತಿದ್ದ ನಾಟಕಗಳನ್ನು ದಂಪತಿಗಳಿಬ್ಬರೂ ತಪ್ಪದೆ ನೋಡುತ್ತಿದ್ದರು. ಕೆಲವು ರಷ್ಯನ್ ಸಿನಿಮಗಳನ್ನು ನೋಡಿದರು. ರಷ್ಯನ್ ಸಾಹಿತ್ಯ ವನ್ನು ಓದಿ ಅಲ್ಲಿನ ವಿಚಾರಗಳನ್ನು ತಿಳಿದು ಕೊಂಡರು.

1944ರಲ್ಲಿ ಸಾಹನಿ ಮುಂಬಯಿಗೆ ಬಂದರು. ಮುಂಬಯಿ ಕಲಾಕೇಂದ್ರ. ಬಲರಾಜ್ ಸಾಹನಿ ಅವರಿಗೆ ಮಂಬಯಿಯಲ್ಲಿ ತಮ್ಮ ಹಳೆಯ ಮಿತ್ರ ಚೇತನ್ ಆನಂದರು ದೊರೆತರು. ಚೇತನ್ ಆನಂದರ ಮನೆಯಲ್ಲಿ ಸಾಹನಿ ಹೆಂಡತಿ, ಮಗಳೊಡನೆ ಉಳಿದುಕೊಂಡರು. ಅವರಿಗೆ ಅಲ್ಲಿ ಸೂಕ್ತ ಅವಕಾಶ ಸಿಗಲಿಲ್ಲ. ಲಂಡನ್‌ನಿಂದ ತಂದ ಹಣವೆಲ್ಲ ಖರ್ಚಾಗಿತ್ತು. ಕಾಲೇಜು ಗೆಳೆಯನ ನೆರವಿನಿಂದ ಮುಂಬಯಿಯಲ್ಲಿನ ಬ್ಯಾಂಕೊಂದ ರಲ್ಲಿ ಸಾಲಪಡೆದರು. ಸಾಲ ತೀರಿಸಲು ಪುಸ್ತಕಗಳನ್ನು ಅನುವಾದಿಸುವ ಕಾರ್ಯ ಮಾಡಿದರು. ಫಿಲ್ಮ್ಸ್ ಡಿವಿಜನ್‌ಗೆ ಸಾಹಿತ್ಯ ಒದಗಿಸಿದರು.

ಮುಂಬಯಿಯ ದೇವಘರ್ ಹಾಲ್ ಪ್ರಗತಿಶೀಲ ಲೇಖಕ ಸಂಘ ಹಾಗೂ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ನಿನ (ಇಪ್ಪಾ) ಚಟುವಟಿಕೆಗಳ ಕೇಂದ್ರ ವಾಗಿತ್ತು. ಸಾಹನಿ ಇಪ್ಪಾಗೆ ಸದಸ್ಯರಾದರು. ಅಲ್ಲಿ ಅವರಿಗೆ ದಿವಂಗತ ಅಯೂಬ್ ಖಾನ್ (ನಟ ದಿಲೀಪ್ ಕುಮಾರರ ಸಹೋದರ) ನಿರ್ದೇಶಕ ನಿತಿನ್ ಬೋಸ್, ನಾಸಿರ್ ಖಾನ್, ಕೆ.ಎ. ಅಬ್ಬಾಸ್ (ಖ್ವಾಜಾ ಅಹ್ಮದ್ ಅಬ್ಬಾಸ್) ಅವರುಗಳ ಸ್ನೇಹ ಲಭಿಸಿತು. ಸಾಹನಿ ಅವರು ಅಲ್ಲಿನ ನಾಟಕಗಳಲ್ಲಿ ಭಾಗವಹಿಸಿ ಅವನ್ನು ಕಲಾತ್ಮಕವನ್ನಾ ಗಿಸುತ್ತಿದ್ದರು.
ದಮಯಂತಿ ಸಾಹನಿ ಅವರಿಗೆ ಪೃಥ್ವಿರಾಜ ಕಪೂರರ ಪೃಥ್ವಿ ಥಿಯೇಟರ‍್ಸ್‌ನಲ್ಲಿ ಕೆಲಸ ದೊರೆಯಿತು. ಅವರು ಆಡುತ್ತಿದ್ದ ಜನಪ್ರಿಯ ನಾಟಕ ‘ದೀವಾರ್’ (ಗೋಡೆ) ನಲ್ಲಿ ದಮಯಂತಿ ದುಡಿದರು.

ಕೆ.ಎ.ಅಬ್ಬಾಸರು ಇಪ್ಟಾ ಸಂಸ್ಥೆಯ ಮೂಲಕ ಚಿತ್ರವೊಂದನ್ನು ತಯಾರಿಸಲು ಮುಂದಾದರು. ಚಿತ್ರದ ಕಥೆಗೆ ಬಂಗಾಲದ ಬರಗಾಲ ಪೀಡಿತರನ್ನು ಕುರಿತ ವಸ್ತು ವನ್ನಾರಿಸಿದ್ದರು. ಅಬ್ಬಾಸರದೇ ಕಥೆ, ನಿರ್ದೇಶನ ಸಾಹನಿ ಅವರು ಅಬ್ಬಾಸರ ಚಿತ್ರಕ್ಕೆ ‘ಧರ್ತಿ ಕೆ ಲಾಲ್’ ಎಂದು ಹೆಸರಿಟ್ಟರು. ಸಾಹನಿ ಅವರಿಗೆ ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ದೊರೆಯಿತು. ರೈತರ ಜೀವನವನ್ನು ನಿರೂಪಿಸುವ ಈ ಚಿತ್ರದಲ್ಲಿ ದಮಯಂತಿ ಸಾಹನಿ, ಉಷಾ ಸೇನಗುಪ್ತ, ತೃಪ್ತಿ ಬಾಧುರಿ ಅವರೂ ನಟಿಸಿದರು. ಸಾಹನಿ ಅವರದು ಹೃದಯಂಗಮ ಅಭಿನಯ. ಖ್ಯಾತ ನಿರ್ದೇಶಕ ಬಿಮಲ್‌ರಾಯರನ್ನು ಚಿತ್ರ ಆಕರ್ಷಿಸಿತು. ಸಾಹನಿ ಅವರಿಗೆ ‘ಧರ್ತಿ ಕೆ ಲಾಲ್’ ಭವಿಷ್ಯಕ್ಕೆ ನಾಂದಿ ಹಾಕಿಕೊಟ್ಟಿತು. ದಂಪತಿಗಳಿಬ್ಬರೂ ಚಿತ್ರ ನಟರಾದರು. ಹಣಗಳಿಸಿದರೂ ಅದನ್ನು ದೇಶ ಸೇವೆ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದರು ಸಾಹನಿ. ಅನಂತರ ‘ಗುಡಿಯಾ’ದಲ್ಲಿ ಅಭಿನಯಿಸಿದರು.

1947ರ ಏಪ್ರಿಲ್ 17ರಂದು ದಮಯಂತಿ ಸಾಹನಿ ನಿಧನರಾದರು. ಸಾಹನಿಯವರು ವೀರೇಂದ್ರ ದೇಸಾಯಿ ಅವರ ‘ಗುಂಜನ್’ ಚಿತ್ರದಲ್ಲಿ ನಟಿಸಿದರು. ಸಾಹನಿ ‘ಜಾದೂಕಿ ಕುರ್ಸಿ’ ಎಂಬ ನಾಟಕ ಬರೆದರು. ರಾಮರಾವ್ ನಾಟಕವನ್ನಾಡಲು ನಿಶ್ಚಯಿಸಿದರು. ಮೋಹನ್ ಸೆಹಗಲ್‌ರದು ನಿರ್ದೇಶನ. ನಾಟಕದಲ್ಲಿ ಜವಹರ್‌ಲಾಲ್ ನೆಹರೂರವರ ನೀತಿಗಳನ್ನು ಅಣಕಿಸುವ ವಿಚಾರಗಳಿದ್ದವು. ನಾಟಕ ಜಯಭೇರಿ ಹೊಡೆಯಿತು. ಸಾಹನಿ ಅವರ ಅಭಿನಯ ಅಮೋಘವಾಗಿತ್ತು. ನಾಟಕದ ಪ್ರತಿಗಳಿಗೆ ಬಹಳವಾಗಿ ಬೇಡಿಕೆ ಬಂದವು. ಆದರೆ ಸಾಹನಿ ಅವರಿಗೆ ತಮ್ಮ ತಪ್ಪು ಅರಿವಾಗಿತ್ತು. ಜವಹಾರ್‌ಲಾಲ್ ನೆಹರೂರವರಂತಹ ಹಿರಿಯ ವ್ಯಕ್ತಿಯನ್ನು ಅಣಕಿಸಿ ತಾವೊಂದು ದೊಡ್ಡ ತಪ್ಪು ಮಾಡಿದ್ದೇನೆಂದು ಪಶ್ಚಾತ್ತಾಪ ಪಟ್ಟರು. ನಾಟಕದ ಪ್ರತಿಗಳನ್ನು ಯಾರಿಗೂ ಹಂಚಲಿಲ್ಲ.

ಸಾಹನಿ ಅವರು ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಹಲವಾರು ಅವಕಾಶಗಳು ದೊರೆತವು. ಕೆ. ಆಸೀಫರು ತಯಾರಿಸಿದ ‘ಹಲ್ ಚಲ್’ ನಲ್ಲಿ ಒಳ್ಳೆಯ ಪಾತ್ರ ದೊರೆಯಿತು. ಈ ಚಿತ್ರದಲ್ಲಿ ದಿಲೀಪ್ ಕುಮಾರ್. ನರ್ಗೀಸ್ ನಟಿಸಿದ್ದರು. ಸಾಹನಿಯವರದು ಜೇಲರನ ಪಾತ್ರ. ನಾಟಕಗಳಲ್ಲಿ ಅಭಿನಯಿಸುವುದನ್ನು ಬಿಡಲಿಲ್ಲ, ಪೃಥ್ವಿ ಥಿಯೇಟರ‍್ಸ್ ನಾಟಕಗಳಲ್ಲೂ ಭಾಗವಹಿಸಿದರು.  ಬಲವಂತ ಗಾರ್ಗಿ ಅವರ ’ಸಿಗ್ನಲ್ ಮನ್ ದೂಲಿ’ ನಾಟಕಗಳನ್ನು ನಿರ್ದೇಶಿಸಿದರು. 1949ರಲ್ಲಿ ಸಾಹನಿ ಸಂತೋಷ್ ಎಂಬಾಕೆ ಯನ್ನು ಮದುವೆಯಾದರು. ಸಂತೋಷ್ ಉತ್ತಮ ನಟಿಯಾಗಿದ್ದರು.

ಸ್ಥಾನಭ್ರಷ್ಟರನ್ನು ಕುರಿತ ಚಿತ್ರ ‘ಹಮ್ ಲೋಗ್’ ನಲ್ಲಿ ಸಾಹನಿಯವರದು ವಿಶಿಷ್ಟ ಅಭಿನಯ. ಚಿತ್ರಕ್ಕೆ ಅವರದೇ ಸಂಭಾಷಣೆ, ಚಿತ್ರಕಥೇ. ಸಾಹನಿ ಅವರ ರಾಜನೀತಿ, ಸಾಮಾಜಿಕ ವಿಷಯಗಳಲ್ಲಿನ ಜ್ಞಾನ ಚಿತ್ರದ ಯಶಸ್ಸಿಗೆ ನೆರವಾಯಿತು.
ಹಮ್‌ಲೋಗ್ ಚಿತ್ರದ ನಂತರ ಸಾಹನಿಯವರಿಗೆ ಬೇಡಿಕೆ ಹೆಚ್ಚಾಯಿತು. ಬಿಮಲ್‌ರಾಯರು ಸಾಹನಿ ಅವರಿಗೆ ತಮ್ಮ  ‘ದೋ ಬಿಘಾ ಜಮೀನ್’ ಚಿತ್ರದಲ್ಲಿ  ಮುಖ್ಯ ರೈತನ ಪಾತ್ರಕೊಡಬೇಕೆಂದು ತೀರ್ಮಾನಿಸಿದರು. ‘ದೋ ಬಿಘಾ ಜಮೀನ್’ನಲ್ಲಿ ಅದ್ಭುತವಾಗಿ ನಟಿಸಿದರು. ಅದಕ್ಕೆ ಸ್ಫೂರ್ತಿ ತಾವು ಸಂಧಿಸಿದ ಒಬ್ಬ ವೃದ್ಧ ಹೇಳಿದ ಆತ್ಮಕತೆ ಎಂದು ಎಲ್ಲರಿಗೂ ಹೇಳಿದರು. ಅವರ ನಟನೆಯನ್ನು ಕಲ್ಕತ್ತೆಯ ‘ಅಮೃತ ಬಜಾರ್’ ಪತ್ರಿಕೆ ಬಹುವಾಗಿ ಪ್ರಶಂಸಿಸಿತು. ‘ದೋ ಬಿಘಾ ಜಮೀನ್’ ಕಲಾ ದೃಷ್ಟಿಯಿಂದ ಅಪಾರ ಯಶಸ್ಸು ಕಂಡಿತು.

ಬಲರಾಜ್ ಸಾಹನಿ ಮೂವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದರು. ಮೊದಲು ಹತ್ತು ವರ್ಷಗಳಲ್ಲಿ ಹತ್ತು ಚಿತ್ರಗಳಲ್ಲಿ ಅಭಿನಯಿಸಿದರೆ ಮತ್ತೆ ಹದಿನೆಂಟು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಯಾವುದೇ ಚಿತ್ರವಿರಲಿ, ಬಲರಾಜ್ ಸಾಹನಿ ಅಭಿನಯಿಸಿದ್ದಾರೆ ಎಂದರೆ ಅಲ್ಲಿ ವಿಶಿಷ್ಟ ಅಸ್ತಿತ್ವ, ಜೀವಂತಿಕೆ ಪ್ರಾಪ್ತಿ ಇರುತ್ತಿತ್ತು. ರಂಗಭೂಮಿ ಹಾಗೂ ಚಿತ್ರಗಳಲ್ಲಿ ಹೆಚ್ಚಾಗಿ ಸುಖಾಂತ ಪಾತ್ರಗಳನ್ನೇ ನಿರ್ವಹಿಸಿದರು. ಜನರು ಮೆಚ್ಚಿದ್ದು ಅವರು ಅಭಿನಯಿಸುತ್ತಿದ್ದ ದೀನದಲಿತರ ಪಾತ್ರಗಳನ್ನೆ. ಅವರು ನಟಿಸಿದ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ.‘ಸೀಮಾ’, ‘ಅನೂರಾಧಾ’, ‘ಲಾಜ್‌ವಂತಿ’, ‘ಚೋಟೆ ಬಹನ್’, ‘ಔಲಾದ್’, ‘ಭಾಬಿ’, ‘ಪಿಂಜರೇ ಕಿ ಪಂಛಿ’, ‘ಬದ್‌ನಾಮ್’, ‘ಕಾಬೂಲಿವಾಲಾ’, ‘ಕಠ್ ಪುತಿ’, ‘ಬಾಜಿ’, ‘ಹಕೀಕತ್’, ‘ಸಂಘರ್ಷ’, ‘ಗರ್ಮ್‌ಕೋಟ್’, ‘ಜಂಗಲ್‌ಮ ಮೆ ಮಂಗಲ್’, ‘ವಖ್’, ‘ಅನ್ ಪಡ್’, ‘ಗರಂ ಹವಾ’ ‘ಹಿಂದುಸ್ಥಾನ್ ಕಿ ಕಸಮ್’ ಮೊದಲಾದವು. ಅವರ ಜೀವಿತ ಕಾಲದ ಎಲ್ಲ ಹಿರಿಯ ಕಿರಿಯ ನಟನಟಿಯರೂ ಅವರೊಂದಿಗೆ ನಟಿಸಿದ್ದರು. ಕನ್ನಡ ಚಿತ್ರರಂಗದ ಪಂಡರಿಬಾಯಿಯವರೂ ಅವರ ಜತೆ ನಟಿಸಿದವರಲ್ಲಿ ಒಬ್ಬರು. ಖ್ಯಾತ ನಟ ದೇವಾನಂದರಿಗೆ ಸಾಹನಿ ಗುರುಗಳಂತೆ, ಸಾಹನಿ ಅವರಿಗೆ ಅವರಲ್ಲಿ ವಿಶೇಷ ಗೌರವ.

ಮುಂದೆ ಸಹಾನಿ ಅವರ ಪುತ್ರ ಪರೀಕ್ಷಿತ್ ಸಾಹನಿ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾದರು. ಮಗಳು ಶಬ್ನಮ್ ಬಹು ಬೇಗ ತೀರಿ ಕೊಂಡಳು.

ಕಾಲೇಜಿನಲ್ಲಿದ್ದಾಗಲೆ ಸಾಹನಿ ಸಾಹಿತ್ಯವನ್ನು ಮೆಚ್ಚಿದರು. ಅಧ್ಯಯನ ಮಾಡಿದ್ದರು. ಕವಿತೆ, ಕಥೆಗಳನ್ನು ಬರೆಯುವುದರಲ್ಲಿ ಅವರದು ಎತ್ತಿದ ಕೈ. ಚಿತ್ರರಂಗದಲ್ಲಿ ಅವರು ಬರಹಗಾರರೆಂದು ವಿಶಿಷ್ಟ ಗೌರವ ಪಡೆದಿದ್ದರು. ಮೊದಲಿನಿಂದಲೂ ಅವರು ಭಾಷಣ ಕಲೆಯನ್ನು ರೂಢಿಸಿಕೊಂಡಿದ್ದರು. ಹಲವು ವಿಷಯಗಳನ್ನು ಕುರಿತು ಅವರು ಅಲ್ಲಲ್ಲಿ ಉಪನ್ಯಾಸ ನೀಡಿದ್ದೂ ಉಂಟು. ಸಾಹನಿಯವರ ಸಣ್ಣ ಕಥೆಗಳ ಸಂಗ್ರಹ ಒಂದು ಪ್ರಕಟವಾಗಿದೆಯಲ್ಲದೆ ಪಾಕಿಸ್ತಾನ ಮತ್ತು ರಷ್ಯ ಗಳಲ್ಲಿಯ ತಮ್ಮ ಪ್ರವಾಸ ಕಥನವನ್ನು ಬರೆದಿದ್ದಾರೆ. ‘ಮೇರಿ ಫಿಲ್ಮಿ ಆತ್ಮ ಕಥಾ’ ಎಂಬ ಉತ್ತಮ ಬರವಣಿಗೆ ಅವರದಾಗಿದೆ. ಪಂಜಾಬಿ, ಬಂಗಾಳಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳನ್ನು ಬಲ್ಲವರಾಗಿದ್ದ ಸಾಹನಿ ಸಾಹಿತ್ಯದ ಆರಾಧಕರಾಗಿದ್ದರು.

ಭಾರತ ಸರ್ಕಾರ ಬಲರಾಜ್ ಸಹಾನಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನಿತ್ತು ಗೌರವಿಸಿತು. ಸಾಹನಿ ಅಭಿನಯಿಸಿದ್ದ ‘ದೋ ಬಿಘಾ ಜಮೀನ್’ ಚಿತ್ರವನ್ನು ರಷ್ಯಾ, ಚೀನಾ, ಪ್ರಾನ್ಸ್, ಸ್ವಿಟ್ಜರ್‌ಲೆಂಡ್ ಮೊದಲಾದ ದೇಶಗಳಲ್ಲಿ ಪ್ರದರ್ಶಿಸಲಾಗಿತ್ತು. ಅವರು ಅಭಿನಯಿಸಿದ “ಅನುರಾಧಾ” ಚಿತ್ರ 1969ರ ಶ್ರೇಷ್ಠ ಚಿತ್ರವೆಂದು ಪರಿಗಣಿಸಲ್ಪಟ್ಟಿತು. ಈ ಚಿತ್ರದಲ್ಲಿ ಅವರು ವೈದ್ಯನ ಪಾತ್ರವನ್ನು ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಅವರ ‘ಗರಂ ಹವಾ’ ರಾಷ್ಟ್ರೀಯ ಐಕ್ಯತೆಯನ್ನು ಪ್ರತಿಪಾದಿಸುವ ಚಿತ್ರವಾಗಿತ್ತು. ‘ಗರಂ ಹವಾ’ 1973ರ ಶ್ರೇಷ್ಠ ಚಿತ್ರವೆಂದು ಪರಿಗಣಿಸಲ್ಪಟ್ಟಿತು. ಮುಂಬೈನ ಪ್ರತಿಷ್ಟಿತ ರಸ್ತೆಗೆ ಅವರ ಹೆಸರಿದೆ.  ಅವರು ಬೇಡಿ ಬಂದವರಿಗೆ ಸಹಾಯ ನೀಡುತ್ತಿದ್ದರು.

ಮಹಾನ್ ನಟ ಬಲಾರಾಜ್ ಸಹಾನಿ 1973ರ ಏಪ್ರಿಲ್ 14ರಂದು ನಿಧನರಾದರು.  ಪ್ರಸಿದ್ಧರಾದರೂ ನಮ್ರರಾಗಿ ಸರಳರಂತೆ ಬಾಳಿದರು.


On the birth anniversary of great actor Balraj Sahni



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ