ಗೋಪಾಲಕೃಷ್ಣ ಭಟ್ಟ
ಕೆ. ಗೋಪಾಲಕೃಷ್ಣ ಭಟ್ಟ
ಡಾ.ಕೆ.ಗೋಪಾಲಕೃಷ್ಣ ಭಟ್ಟರು ಟ್ಯಾಕ್ಸಾನಮಿ ಭಟ್ಟರು ಎಂದೇ ವಿಶ್ವ ಖ್ಯಾತರಾಗಿದ್ದ ಸಸ್ಯ ವಿಜ್ಞಾನಿ.
ಗೋಪಾಲಕೃಷ್ಣ ಭಟ್ಟರು 1947ರ ಮೇ 17ರಂದು ಜನಿಸಿದರು. ಅವರು ಮೂಲತಃ ಕಾಸರಗೂಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರು. ಭಟ್ಟರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಗೋಪಾಲಕೃಷ್ಣ ಭಟ್ಟರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹುಲ್ಲುಗಳು ಮತ್ತು ಜೊಂಡುಗಳ ಬಗ್ಗೆ ಅಧ್ಯಯನ ನಡೆಸಿ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ., ಗೌರವ ಸಂದಿತ್ತು. ಹೆಚ್ಚು ಜನ ಬಯಸದ ಸಸ್ಯ ವರ್ಗೀಕರಣ ಶಾಸ್ತ್ರದ ಅಧ್ಯಯನ ಭಟ್ಟರಿಗೆ ಒಲವಿನ ಕ್ಷೇತ್ರವಾಗಿತ್ತು. ಇವರ 55 ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಪ್ರಕಟಗೊಂಡವು.
ಹಲವು ಹೊಸ ಪ್ರಭೇದಗಳನ್ನು ಕಂಡು ಹಿಡಿದು ನಾಮಕರಣ ಮಾಡಿದ್ದ ಭಟ್ಟರು ಫ್ಲೋರಾ ಆಫ್ ಉಡುಪಿ, ಫ್ಲೋರಾ ಆಫ್ ದಕ್ಷಿಣ ಕನ್ನಡ, ಕರ್ನಾಟಕದ ತಾಳೆಗಳು, ಕರ್ನಾಟಕದ ಜಿಂಜಿಬರೇಸಿ ಪ್ರಭೇದಗಳು , ಪಶ್ಚಿಮ ಘಟ್ಟ ಮತ್ತು ಕೆಳ ಪ್ರದೇಶ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಸ್ಯ ಸಂಪನ್ಮೂಲಗಳು ಮುಂತಾದ ಪುಸ್ತಕಗಳನ್ನು ಪ್ರಕಟಿಸಿದ್ದರು. 5 ಹೊಸ ಸಸ್ಯ ಪ್ರಭೇದಗಳ ಆವಿಷ್ಕಾರಗಳನ್ನು, ಭಾರತದಲ್ಲಿ ದಾಖಲಿಸಿರದ 4 ಸಸ್ಯಗಳನ್ನು ಹಾಗೂ ಕರ್ನಾಟಕದಲ್ಲಿ ದಾಖಲಿಸಿರದ 51 ಸಸ್ಯಗಳನ್ನು ಗುರುತಿಸಿ ದಾಖಲಿಸಿದ್ದು ಭಟ್ಟರ ಹೆಗ್ಗಳಿಕೆ.
ಗೋಪಾಲಕೃಷ್ಣ ಭಟ್ಟರ ಗೌರವಾರ್ಥ ಕೆಲವು ಸಸ್ಯ ಪ್ರಭೇದಗಳಿಗೆ ಅವರ ಹೆಸರನ್ನು ಲ್ಯಾಟಿನೈಜ್ ಮಾಡಿ ನಾಮಕರಣ ಮಾಡಲಾಗಿದೆ. ಅಸಾಮಾನ್ಯ ತಾಳ್ಮೆ ಹೊಂದಿದ್ದ ಸರಳ, ಸಜ್ಜನ ಗೋಪಾಲಕೃಷ್ಣ ಭಟ್ಟರು ಸಂಶೋಧನಾರ್ಥಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಸ್ಯ ಗುರುತಿಸುವಿಕೆಯಲ್ಲಿ ನೆರವಾಗುತ್ತಿದ್ದರು.
ಗೋಪಾಲಕೃಷ್ಣ ಭಟ್ಟರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಕನ್ನಡಿಗರ ನಡುವಿದ್ದ ಇಂತಹ ಅಪರೂಪದ ಸಸ್ಯ ವಿಜ್ಞಾನಿ ಡಾ. ಗೋಪಾಲಕೃಷ್ಣ ಭಟ್ಟರು 2022ರ ಏಪ್ರಿಲ್ 7ರಂದು ಈ ಲೋಕವನ್ನಗಲಿದರು.
On the birth anniversary of great botanist Dr. K. Gopalakrishna Bhat
ಕಾಮೆಂಟ್‌ಗಳು