ಎನ್. ಶೇಷಗಿರಿ
ಭಾರತದ e-ಗವರ್ನೆನ್ಸ್ ಪಿತಾಮಹ,
ಪದ್ಮಭೂಷಣ
ಡಾ. ನರಸಿಂಹಯ್ಯ ಶೇಷಗಿರಿ
ಲೇಖಕರು: ರಘುರಾಮ್ ನಿಟ್ಟೂರು Raghuram Nittoor
ನಮ್ಮ ದೇಶ ಇನ್ಫರ್ಮೇಶನ್ ತಂತ್ರಜ್ಞಾನಕ್ಕೆ ಸಂಬಧಪಟ್ಟ ಚಟುವಟಿಕೆಗಳಿಗೆ ಜಗದ್ ಪ್ರಸಿದ್ಧಿಗಳಿಸಿದೆ. ಸುಮಾರು ಮೂರು ದಶಕಗಳ ಹಿಂದೆ ಪ್ರಾರಂಭವಾದ ಈ ತಂತ್ರಜ್ಞಾನದ ಚಟುವಟಿಕೆಗಳಿಂದ ಭಾರತದ ಜಿಡಿಪಿಗೆ (GDP) ಸುಮಾರು160 ಬಿಲಿಯನ್ ಡಾಲರ್ ಅಷ್ಟು ಅಂಶದಾನ ಬರುತ್ತಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್ಸಿಎಲ್, ಕಾಗ್ನಿಸಂಟ್ ನಂತ ದೈತ್ಯ ಉದ್ಯಮಗಳು ಸೃಷ್ಟಿಯಾಗಿವೆ. ಅವುಗಳಲ್ಲಿ ಲಕ್ಷಾಂತರ ಜನಕ್ಕೆ ಉದ್ಯೊಗ ದೊರಕಿದೆ. ಈ ಒಂದು ಉದ್ಯಮದಿಂದ ನಮ್ಮ ದೇಶದ ಮಧ್ಯಮ ವರ್ಗ ದೊಡ್ಡದಾಗಿ ಬೆಳಿದಿದೆ. ಇನ್ಫರ್ಮೇಶನ್ ತಂತ್ರಜ್ಞಾನ ಸಂಸ್ಥೆಗಳ ಬೆಳವಣಿಗೆಯಿಂದ ರಿಯಲ್ ಎಸ್ಟೇಟ್, ಸಾರಿಗೆ, ನಿರ್ವಹಣೆ, ಹೋಟೆಲ್ ಮತ್ತು ರೆಸ್ಟೊರಂಟ್ ಗಳಂತ ಪೂರಕ ಉದ್ಯಮಗಳ ಬೆಳವಣಿಗೆಯೂ ಆಗಿದೆ.
ಸುಮಾರು 36 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ತೆಗೆದುಕೊಂಡ ಒಂದು ಐತಿಹಾಸಿಕ ನಿರ್ಧಾರವು ಇನ್ಫರ್ಮೇಶನ್ ತಂತ್ರಜ್ಞಾನ ಸಂಸ್ಥೆಗಳು ಕೆಲವೇ ವರ್ಷಗಳಲ್ಲಿ ದೊಡ್ಡದಾಗಿ ಬೆಳೆಯಲು ಮೂಲ ಕಾರಣವಾಯಿತು ಎಂದು ತಿಳಿದುಬರುತ್ತದೆ. ಇದರ ರೂವಾರಿ ಒಬ್ಬ ಕನ್ನಡಿಗ ಎಂದು ತಿಳಿಸಲು ಹೆಮ್ಮೆಯಾಗುತ್ತದೆ.
ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕಾಲ ಅದು. ಅವರು ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಅವರವರ ಇಲಾಖೆಗಳು ಯಾವ ಯಾವ ಕಾರ್ಯಕ್ಷೇತ್ರಗಳಲ್ಲಿ ಆರ್ಥಿಕತೆಯನ್ನು ಉತ್ತಮಗೊಳಿಸಲು ಹೊಸ ಉದ್ಯಮಗಳನ್ನು ಸೃಷ್ಟಿಸಬಹುದು ಎಂಬ ಕರಡು ಕಾರ್ಯನೀತಿ ((Draft policy) ಸಿದ್ಧಪಡಿಸಬೇಕೆಂದು ಆದೇಶ ಮಾಡಿದ್ದರು. ಅಲ್ಲದೆ 90 ದಿನಗಳೊಳಗೆ ಕರಡು ಕಾರ್ಯನೀತಿಯನ್ನು ತಮ್ಮ ಮಂತ್ರಿ ಮಂಡಲಕ್ಕೆ ವಿವರಿಸಬೇಕೆಂದು ಆದೇಶ ಹೊರಡಿಸಿದ್ದರು. ಕರಡು ಕಾರ್ಯನೀತಿ ಪ್ರಸ್ಥಾವನೆ ಮಾಡಿದ ಇಲಾಖೆಗಳಲ್ಲಿ ಇಲೆಕ್ಟ್ರಾನಿಕ್ ಕಮಿಶನ್ ಕೂಡ ಒಂದು. ಅಂದಿನ ಇಲೆಕ್ಟ್ರಾನಿಕ್ ಕಮಿಶನ್ ನ ಕಾರ್ಯದರ್ಶಿಗಳಾಗಿದ್ದ ಡಾ. ಎನ್. ವಿಟ್ಟಲ್ ತಮ್ಮ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಕಿರಿಯ ವಯಸ್ಸಿನಲ್ಲೇ ದಕ್ಷ ಆಡಳಿತಗಾರ ಎಂದು ಹೆಸರುಗಳಿಸಿದ್ದ ಕನ್ನಡಿಗ, ಡಾ. ನರಸಿಂಹಯ್ಯ ಶೇಷಗಿರಿ ಅವರಿಗೆ ಈ ಜವಾಬ್ದಾರಿ ವಹಿಸಿದರು. ಇದು ನೆಡೆದಿದ್ದು 1984ರಲ್ಲಿ. ಕೇಂದ್ರ ಸರ್ಕಾರ, ಡಾ. ಶೇಷಗಿರಿ ಪ್ರತಿಪಾದಿಸಿದ ಐಟಿಯ ತಂತ್ರಾಂಶ ಕರಡು ಕಾರ್ಯನೀತಿಯನ್ನು (IT Software Draft policy), ಅಕ್ಷರಶಃ ಒಪ್ಪಿ ಅದನ್ನು ಪ್ರಕಟಿಸಿತು. ಐಟಿ ತಂತ್ರಾಂಶ ಕಾರ್ಯನೀತಿ ತಯಾರು ಮಾಡುವ ಮೊದಲು ಡಾ. ಶೇಷಗಿರಿ ಪ್ರಸ್ಥಾವನೆ ಮಾಡಿದ್ದ “Perspective Plan for Growth of Electronics Industry in India” ಎನ್ನುವ ಕರಡು ಪತ್ರಕ್ಕೆ ಶ್ರೀಮತಿ. ಇಂದಿರಾ ಗಾಂಧಿ ಅವರ ಸಂಪುಟದ ಮನ್ನಣೆ ದೊರೆತಿತ್ತು.
ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಕ್ಷೇತ್ರಗಳಲ್ಲದೆ ಡಾ. ಶೇಷಗಿರಿ ಅವರು ಹಲವಾರು ವಿಭಿನ್ನ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ್ದಾರೆ.
ಬಾಲ್ಯ ಹಾಗೂ ಶಿಕ್ಷಣ
ಡಾ. ಆರ್. ನರಸಿಂಹಯ್ಯ ಹಾಗೂ ಡಾ. ಆರ್. ಲಕ್ಷ್ಮೀದೇವಿ ದಂಪತಿಗಳಿಗೆ ಮೇ 10, 1940ರಲ್ಲಿ ಶೇಷಗಿರಿ ಅವರು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸತ್ಯಮಂಗಳದಲ್ಲಿ ಜನಿಸಿದರು. ತಂದೆ ನರಸಿಂಹಯ್ಯನವರು ಉಡುಪಿ ಜಿಲ್ಲೆಯ ಕೋಟಾದವರು. ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಸತ್ಯಮಂಗಳದಲ್ಲಿ ನೆಲಸಿ, ವೈದ್ಯಕೀಯ ವೃತ್ತಿ ನೆಡೆಸುತ್ತಿದ್ದರು. ತಾಯಿ ಲಕ್ಷ್ಮಿದೇವಿ ಆಂಧ್ರಪ್ರದೇಶದ ಅನಂತಪುರದವರು. ನಾಲ್ಕು ಜನ ಅಕ್ಕತಂಗಿಯರಿಗೆ ಶೇಷಗಿರಿ ಒಬ್ಬನೇ ಆದರದ ಸಹೋದರ.
ಶೇಷಗಿರಿ ಅವರ ಪ್ರಾಥಮಿಕ ಶಿಕ್ಷಣ ಸತ್ಯಮಂಗಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಾರಂಭವಾಯಿತು. ನರಸಿಂಹಯ್ಯ ದಂಪತಿಗಳು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಗಾಗಿ ಸತ್ಯಮಂಗಳದಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಬಂದು ನೆಲಸಿದರು. ಶೇಷಗಿರಿ ನ್ಯಾಶನಲ್ ಹೈಸ್ಕೂಲ್ ಸೇರಿದರು. ಅನಂತರ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ನಲ್ಲಿ 1961ರಲ್ಲಿ ಪದವಿ ಪಡೆದರು. ಚಿಕ್ಕ ವಯಸ್ಸಿನಿಂದಲೇ ತಾಂತ್ರಿಕ ವಿಷಯಗಳ ಬಗ್ಗೆ ಆಸಕ್ತಿ ಇದ್ದ ಅವರು ಸಾಮಗ್ರಿಗಳನ್ನು ಕಲೆಹಾಕಿ ಸಂಶೋಧನೆ ನಡೆಸುತ್ತಿದ್ದರು. ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗಲೇ ಯಂತ್ರ ಮಾನವನ (Robot) ಬಗ್ಗೆ ಸಂಶೋಧನೆ ಮಾಡಿ ಸಂಶೋಧನ ಪತ್ರಿಕೆ ತಯಾರು ಮಾಡಿದ್ದರು. ಇಂಜಿನೀಯರಿಂಗ್ ಓದುತ್ತಿದಾಗಲೇ The Indian Institute of Scienceನ (IISc) ವಿಜ್ಞಾನಿ ಪ್ರೊ.ಅಯ್ಯ ಅವರ ಮಾರ್ಗದರ್ಶನದಲ್ಲಿ Microwave ತಂತ್ರಜ್ಞಾನದ ಬಗ್ಗೆಯೂ ಸಂಶೋಧನೆ ಮಾಡಲು ಪ್ರಾರಂಭಿಸಿದ್ದರು. ಇಂಜಿನೀಯರಿಂಗ್ ಪದವಿ ಮುಗಿದ ನಂತರ IIScಗೆ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಬಯಸಿದ ಅರ್ಜಿಯೊಂದಿಗೆ ಶೇಷಗಿರಿಯ ತಾವು ಯಂತ್ರ ಮಾನವನ ಬಗ್ಗೆ ತಯಾರು ಮಾಡಿದ್ದ ಸಂಶೋಧನಾ ಪತ್ರಿಕೆಯನ್ನೂ ಕಳುಹಿಸಿದ್ದರು. ಸಂಶೋಧನಾ ಪತ್ರಿಕೆಯನ್ನು ಪರಿಶೀಲಿಸಿದ IIScಯ ಅಕೆಡೆಮಿಕ್ ಕೌನ್ಸಿಲ್ ಶೇಷಗಿರಿ ಅವರಿಗೆ PHDಗೆ ನೇರವಾಗಿ ಪ್ರವೇಶ ಕೊಟ್ಟಿತು. ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿಯ ನಂತರ ನೇರವಾಗಿ PHDಗೆ ಪ್ರವೇಶ ಪಡೆದವರಲ್ಲಿ ಶೇಷಗಿರಿ ಅವರೇ ಬಹುಶಃ ಮೊದಲನೆಯವರಿರಬೇಕು.
ಶೇಷಗಿರಿ Microwave Telecommunication Engineering ಎಂಬ ವಿಷಯದಲ್ಲಿ IIScನಲ್ಲಿ PHD ಮುಗಿಸಿದರು. PHD ಮುಗಿಸಿದಾಗ ಅವರಿಗೆ ಇನ್ನೂ 24 ವರ್ಷ. PHD ಮಾಡುತ್ತಿರುವ ಸಮಯದಲ್ಲೇ ಶೇಷಗಿರಿ ಅವರು Missileಗಳ ಬಗ್ಗೆಯೂ ಸಂಶೋಧನೆ ಮಾಡಿ ಸಂಶೋಧನಾ ಪತ್ರಿಕೆ ತಯಾರು ಮಾಡಿದ್ದರು. ನಮ್ಮ ದೇಶದ Missile Man ಎಂದೇ ಪ್ರಸಿದ್ಧವಾಗಿರುವ ಡಾ. ಅಬ್ದುಲ್ ಕಲಾಮ್ ಅವರಿಗೆ ತಾವು Missileಗಳ ಬಗ್ಗೆ ಸಂಶೋಧನೆ ಮಾಡಿದ್ದನ್ನು ವಿವರಿಸಿ ಡಾ.ಕಲಾಮ್ ಅವರ ಪ್ರಶಂಸೆಗೆ ಪಾತ್ರರಾಗಿದ್ದರು.
TIFRನಲ್ಲಿ ಸಂಶೋಧನೆ, Prof. M G K ಮೆನನ್ ಅವರ ಗಮನ ಸೆಳೆದ ಯುವ ಸಂಶೋಧಕ
ಡಾ.ಶೇಷಗಿರಿ PHD ಮುಗಿಸಿದ ನಂತರ TIFRನ Satellite Communication ಮತ್ತು Spacecraft Design ವಿಭಾಗದಲ್ಲಿ 1964ರಲ್ಲಿ ಕೆಲಸ ಪ್ರಾರಂಭಿಸಿದರು. ಅವರಿಗೆ 30 ವರ್ಷ ಆಗುವುದರೊಳಗೇ ಅವರು ಬರೆದ 21 ಸಂಶೋಧನ ಲೇಖನಗಳು ಪ್ರಪಂಚದ ಪ್ರತಿಷ್ಠಿತ ವೈಜ್ಞಾನಿಕ ಪ್ರಕಾಶನಗಳಲ್ಲಿ ಪ್ರಕಟಿತಗೊಂಡಿದ್ದವು. ಅವರ “Optimal Design Simulation of Low Energy Consumption Spacecraft Design” ಸಂಶೋಧನೆಗೆ ಪ್ರತಿಷ್ಠಿತ ವಿಕ್ರಮ್ ಸಾರಾಭಾಯಿ ಪ್ರಶಸ್ತಿ ದೊರಕಿತು.
ಅತ್ಯುತ್ತಮ ವಿಜ್ಞಾನಿ ಅಲ್ಲದೆ ಒಳ್ಳೆಯ ಆಡಳಿತಗಾರ ಎಂದು TIFRನ ಸಹೋದ್ಯೋಗಿಗಳಿಂದ ಮೆಚ್ಚುಗೆ ಪಡೆಯುತ್ತಿದ್ದ ಯುವಕ ಡಾ. ಶೇಷಗಿರಿ, ಸಂಸ್ಥೆಯ ನಿರ್ದೇಶಕ ಪ್ರೊ.M G K ಮೆನನ್ ಅವರ ಗಮನಕ್ಕೆ ಬಂದಿದ್ದರು. ಕೇಂದ್ರ ಸರ್ಕಾರ ಪ್ರೊ.ಮೆನನ್ ಅವರಿಗೆ ನಮ್ಮ ದೇಶದ ಇಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಶನ್ ತಂತ್ರಜ್ಞಾನದ ಕಾರ್ಯನೀತಿಯನ್ನು ರೂಪಿಸಲು ಹಾಗೂ ಸಾಮಾನ್ಯ ಜನರ ನಿತ್ಯ ಜೀವನದ ಅಭಿವೃದ್ದಿಗೆ, Electronics Commision ಸ್ಥಾಪಿಸಲು ಆದೇಶಿಸಿತು. ಡಾ.ಶೇಷಗಿರಿ ಅವರ ಬುದ್ಧಿಶಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿದ್ದ ಪ್ರೊ.ಮೆನನ್, Electronics Commision ಸ್ಥಾಪಿಸಲು, ಡಾ.ಶೇಷಗಿರಿ ಅವರ ಸಹಾಯವನ್ನು ತೆಗೆದುಕೊಂಡರು.
National Data Center ಸ್ಥಾಪನೆ
ಡಾ.ಶೇಷಗಿರಿ ಅವರು ಪ್ರಸ್ತಾವಿಸಿದ “Perspective Plan for Growth of Electronics Industry in India” ಎನ್ನುವ ಕರಡು ಪತ್ರಕ್ಕೆ ಶ್ರೀಮತಿ. ಇಂದಿರಾ ಗಾಂಧಿ ಅವರ ಸಂಪುಟದ ಮನ್ನಣೆ ದೊರೆತಿತ್ತು ಎಂದು ಈಗಾಗಲೇ ಪ್ರಸ್ತಾಪಿಸಲಾಗಿದೆ. ಈ ಯೋಜನೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿ, ಇಲೆಕ್ಟ್ರಾನಿಕ್ ಉದ್ಯಮಗಳ ಸ್ಥಾಪನೆ, ಇಲೆಕ್ಟ್ರಾನಿಕ್ ಉಪಕರಣಗಳ ಮತ್ತು ಬಿಡಿ ಭಾಗಗಳ ಸ್ಥಳೀಕರಣ, R&Dಯಿಂದ ಉತ್ಪಾದನೆ ಮಾಡಲು ತಂತ್ರಜ್ಞಾನದ ವರ್ಗಾವಣೆಯಂತ ಚಟುವಟಿಕೆಗಳನ್ನು ಸಮರ್ಥವಾಗಿ ಮಾಡಲು ಹಾಗೂ ಈ ಚಟುವಟಿಕೆಗಳ ವಿಶ್ಲೇಷಣಾತ್ಮಕ ವರದಿಗಳನ್ನು ಅವುಗಳಿಗೆ ಸಂಬಂಧಪಟ್ಟವರಿಗೆ ಸುಲಭವಾಗಿ ದೊರಕಿಸಲು JNUನ School of Life Sciences and Automationನಲ್ಲಿ National Data Center ಸ್ಥಾಪಿಸಲಾಯಿತು. ಈ ಯೋಜನೆಯನ್ನು ಪರಿಕಲ್ಪನೆ ಮಾಡಿದ್ದಲ್ಲದೆ ಅದನ್ನು ಕಾರ್ಯರೂಪಕ್ಕೆ ತಂದಿದ್ದು ಡಾ.ಶೇಷಗಿರಿ ಅವರು.
Information Planning Analysis Group (IPAG)
ಡಾ.ಶೇಷಗಿರಿ ಇಲೆಕ್ಟ್ರಾನಿಕ್ ಉಪಕರಣಗಳ ಹಾಗೂ ಇನ್ಫರ್ಮೇಶನ್ ತಂತ್ರಜ್ಞಾನದ ಉದ್ಯಮಗಳಿಂದ ನಮ್ಮ ದೇಶದ ಆರ್ಥಿಕತೆ ಹೆಚ್ಚಿಸುವ ಸಾಧ್ಯತೆಗಳನ್ನು ಅರ್ಥ ಮಾಡಿಕೊಂಡದ್ದರು. ಈ ಉದ್ಯಮಗಳನ್ನು ನಮ್ಮ ದೇಶಕ್ಕೆ ಹೇಗೆ ಆಕರ್ಷಿಸಬೇಕೆಂದು ಯೋಜನೆಗಳನ್ನು ಮಾಡಲು, ಉದ್ಯಮಗಳು ನಮ್ಮ ದೇಶದಲ್ಲಿ ಸ್ಥಾಪಿಸಿದ ಮೇಲೆ ಇಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಭಾಗಗಳನ್ನು ಸ್ಥಳೀಕರಿಸುವ ಬಗ್ಗೆ ಸಂಶೋಧನೆ ಮಾಡಲು Information Planning Analysis Group (IPAG) ಎಂಬ ಸಂಸ್ಥೆಯನ್ನು Electronic Commisonನ ವ್ಯಾಪ್ತಿಯೊಳಗೆ ಸ್ಥಾಪಿಸಿದರು.
ಸೆಮಿಕಂಡಕ್ಟರ್ ಕಾರ್ಪೋರೇಷನ್ ಆಫ್ ಇಂಡಿಯಾ, ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ, ಕರ್ನಾಟಕದಲ್ಲಿ ಸ್ಥಾಪಿತಗೊಂಡ ಕಿಯೋನಿಕ್ಸ್ ಹಾಗೂ ಪ್ರಮುಖ ರಾಜ್ಯಗಳಲ್ಲಿ ಇಲೆಕ್ಟ್ರಾನಿಕ್ಸ ಸಂಸ್ಥೆಗಳು, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ನಂತ ಪ್ರತಿಷ್ಠಿತ ಕೇಂದ್ರ ಉದ್ಯಮಗಳಲ್ಲಿ ಸೆಮಿಕಂಡಕ್ಟರ್, ಮೈಕ್ರೋವೇವ್ ಟ್ಯೂಬ್, ಇಂಟೆಗ್ರೇಟೆಡ್ ಸರ್ಕ್ಯುಟ್ಸ್ ತಯಾರಿಸಲು ಕಾರ್ಖನೆಗಳು IPAG ಹಾಕಿದ ತಳಪಾಯದಿಂದ ಸ್ಥಾಪಿತವಾದವು. ನಮ್ಮ ದೇಶದಲ್ಲೇ ತಯಾರಾದ ಇಲೆಕ್ಟ್ರಾನಿಕ್ ಉಪಕರಣಗಳು ಮತ್ತು ಬಿಡಿ ಭಾಗಗಳಿಂದ ನೂರಾರು ಕೋಟಿ ವಿದೇಶಿ ವಿನಿಮಯ ಉಳಿಯಿತು.
National Informatics Center (NIC)
ಡಾ.ಶೇಷಗಿರಿ Data ಮತ್ತು Information ದೇಶದ ಪ್ರಗತಿಗೆ ಎಷ್ಟು ಮಹತ್ವದ್ದು ಎಂದು ಗುರುತಿಸಿ, ಅವುಗಳ ಸರಿಯಾದ ಉಪಯೋಗದಿಂದ ಒಳ್ಳೆಯ ನಿರ್ಧಾರಗಳು ತಗೆದು ಕೊಳ್ಳಬಹುದು ಎಂದು ಗ್ರಹಿಸಿದರು. ಕೇಂದ್ರೀಕೃತ ಮಾಹಿತಿ ಕೇಂದ್ರ ಹಾಗೂ ವಿಶ್ಲೇಷಣ ಸಂಸ್ಥೆ ಸ್ಥಾಪಿಸಿದರೆ, ದೇಶದಾದ್ಯಂತ ನಡೆಯುವ ಸರ್ಕಾರದ ಎಲ್ಲ ಚಟುವಟಿಕೆಗಳ ಮಾಹಿತಿಗಳನ್ನು ಸಂಗ್ರಹಿಸಲು, ವಿಶ್ಲೇಷಣೆ ಮಾಡಲು, ಅದರಿಂದ ಕಾರ್ಯನೀತಿಗಳನ್ನು ತಯಾರು ಮಾಡಲು ಹಾಗೂ ಕಾರ್ಯನೀತಿಗಳನ್ನು ಹೇಗೆ ಕಾರ್ಯಗತಗೊಳಿಸಲಾಗಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ Available of the Right Information, At the Right Place, At the Right Time ಆಗುವುದರಿಂದ ದೇಶದ ಪ್ರಗತಿ ಇನ್ನೂ ಉನ್ನತ ಮಟ್ಟಕ್ಕೇರುತ್ತದೆ ಎಂದು ನಂಬಿದ್ದರು. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಮುಂದೆ ಪ್ರಸ್ಥಾವಿಸಿದರು. ರಾಜಕಾರಣಿಗಳಿಂದ, ಹಿರಿಯ ಅಧಿಕಾರಿಗಳಿಂದ ಈ ಪ್ರಸ್ಥಾವನೆಗೆ ತೀವ್ರ ವಿರೋದ ಬಂದರೂ, ಪ್ರೊ. M G K ಮೆನನ್ ಹಾಗೂ ಡಾ. ಶೇಷಗಿರಿ, ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಒಪ್ಪಿಸಿ, ಸರ್ಕಾರದಿಂದ ಮನ್ನಣೆ ದೊರಕಿಸಿಕೊಂಡರು. ಈ ದೂರದೃಷ್ಚಿ ಹಾಗೂ ಶ್ರಮದಿಂದ ಅಸ್ತಿತ್ವಕ್ಕೆ ಬಂದಿದ್ದೇ National Informatics Center (NIC). NIC 1976ರಲ್ಲಿ ದೆಹಲಿಯಲ್ಲಿ ಸ್ಥಾಪಿತವಾಯಿತು.
ಡಾ.ಶೇಷಗಿರಿ NICಯ ಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು. ಆಗ ಅವರಿಗೆ 36 ವರ್ಷ ವಯಸ್ಸು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ, ಉತ್ತಮ ನಿರ್ಧಾರಗಳನ್ನು ತೆಗೆದು ಕೊಳ್ಳಬೇಕಾದರೆ ಪ್ರತಿಯೊಂದು ಜಿಲ್ಲೆಯಿಂದಲೂ ಮಾಹಿತಿ ಕಲೆಹಾಕಬೇಕಾಗಿತ್ತು. ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಆಗುವ ಕೆಲಸಗಳ ಒಂದೊಂದು ಹಂತದ ಮಾಹಿತಿಯನ್ನು ಸಂಗ್ರಹಿಸಬೇಕಾಗಿತ್ತು.
ಡಾ. ಶೇಷಗಿರಿ ಅವರ ಸಾಧನೆ ಅರ್ಥವಾಗ ಬೇಕಾದರೆ 1976ರಲ್ಲಿ ಪರಿಸ್ಥಿತಿ ಹೇಗಿತ್ತು ಎಂದು ಒಂದು ಉದಾಹರಣೆಯಿಂದ ತಿಳಿದುಕೊಳ್ಳೋಣ. 1976ರಲ್ಲಿ ಮನೆಗಳಿಗೆ ದೂರವಾಣಿ ಹಾಕಿಸಿವುದಕ್ಕೆ ವರ್ಷಗಳು ಕಾಯಬೇಕಾಗಿತ್ತು. ಒಂದು ಊರಿನಿಂದ ಇನ್ನೊಂದು ಊರಿಗೆ ದೂರವಾಣಿಯಲ್ಲಿ ಸಂಪರ್ಕ ಮಾಡಬೇಕಾದರೆ ಟ್ರಂಕ್ ಕಾಲನ್ನು ಕಾದಿರಿಸಿ ಘಂಟೆಗಟ್ಟಲೆ ಕಾಯಬೇಕಾಗಿದ್ದ ಕಾಲ. ಆಗ ಇದ್ದ ತಂತ್ರಜ್ಞಾನದಲ್ಲಿ ದೂರವಾಣಿ ಜಾಲದ ಮುಖಾಂತರವೇ computerised dataವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡಬೇಕಾಗಿತ್ತು. ದೇಶದ ದೂರವಾಣಿ ಕೇಂದ್ರಗಳಲ್ಲಿ, ಅದಾಗಲೇ ಹಳೆಯದಾಗಿದ್ದ, ಕ್ರಾಸ್ ಬಾರ್ ಎಕ್ಸ್ಚೇಂಜ್ ಗಳಿದ್ದವು. ಇಂಥ ಕಾಲದಲ್ಲಿ ದೇಶದಾದ್ಯಂತ ಸರ್ಕಾರೀ ಯೋಜನೆಗಳ ಹಂತ ಹಂತದ ಪ್ರಗತಿಯ ಮಾಹಿತಿಯನ್ನು ಕಲೆಹಾಕಿ, ವಿಶ್ಲೇಷಿಸಿ, ಅಧಿಕಾರಿಗಳು ಉತ್ತಮ ಗುಣಮಟ್ಟದ ನಿರ್ಧಾರ ತೆಗೆದು ಕೊಳ್ಳಲು ಅನುಕೂಲವಾಗುವ ಮಹತ್ತರ ಕಾರ್ಯವನ್ನು ಡಾ.ಶೇಷಗಿರಿ ಯೋಜಸಿದ್ದರು ಹಾಗೂ ಕಾರ್ಯರೂಪಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಎಲ್ಲ ಜಿಲ್ಲೆಗಳಿಂದ ರಾಜ್ಯಗಳ ರಾಜಧಾನಿಗಳಿಗೆ, ರಾಜ್ಯಗಳ ರಾಜಧಾನಿಗಳಿಂದ ನವದೆಹಲಿಗೆ ಸಂಪರ್ಕ ಕಲ್ಪಿಸುವುದು ದೊಡ್ಡ ಸವಾಲೇ ಆಗಿತ್ತು. ದೇಶದ ಮೂಲೆ ಮೂಲೆಯಿಂದ ಮಾಹಿತಿಯನ್ನು ದೆಹಲಿಯಲ್ಲಿದ್ದ ಕಂಪ್ಯೂಟರ್ ಸರ್ವರ್ ಗೆ ದಾಖಲಿಸುವುದು ಹೇಗೆ ಎನ್ನುವುದು ದೊಡ್ಡ ಸಮಸ್ಯೆಯೇ ಆಯಿತು. ಇದಕ್ಕೆ ಪರಿಹಾರ ಹುಡುಕುವುದು ಡೊಡ್ಡ ಸವಾಲೇ ಆಯಿತು. ಈ ಸಮಸ್ಯೆಗೆ ಡಾ.ಶೇಷಗಿರಿ ಕಂಡು ಹಿಡಿದ ಪರಿಹಾರ ವಿಶ್ವ ದಾಖಲೆಯನ್ನೇ ಉಂಟು ಮಾಡಿತು.
ಸ್ಯಾಟಲ್ಲೈಟ್ ಗಳನ್ನು ಉಪಯೋಗಿಸಿ ಅವುಗಳ ಮುಖಾಂತರ ದೇಶದ 520 ಜಿಲ್ಲೆಗಳಿಂದಲೂ ರಾಜ್ಯಗಳ ರಾಜಧಾನಿಗೆ ಹಾಗೂ ದೆಹಲಿಗೆ ಸಂಪರ್ಕಿಸಲು VSAT ಟರ್ಮಿನಲ್ಗಳ ಜಾಲವನ್ನು ಅಧಿಷ್ಟಿತಗೊಳಿಸಿದರು. ಈ ಜಾಲವೇ Nationwide Computer Network - NICNET ಎಂದು ಪ್ರಸಿದ್ಧವಾಯಿತು. ಇಡೀ ಪ್ರಪಂಚದಲ್ಲೇ ಯಾರೂ ಕಲ್ಪಿಸಿ ಕೊಳ್ಳಲೂ ಆಗದ ದೇಶದ ಮೂಲೆ ಮೂಲೆಯಿಂದ ಸರ್ಕಾರದ ಚಟುವಟುಕೆಗಳ ಮಾಹಿತಿಯನ್ನು ನೇರವಾಗಿ ಸಂಗ್ರಹಿಸಲು Integrated Computerised System ಸ್ಥಾಪಿಸಿದ ಕೀರ್ತಿ ನಮ್ಮ ದೇಶದ್ದು ಹಾಗೂ ಅದರ ರೂವಾರಿ ಡಾ.ಶೇಷಗಿರಿ. ಇಂತಹ ನೆಟ್ವರ್ಕ್ ಹಾಗೂ ಗಣಕೀಕರಣ ಆ ಕಾಲದಲ್ಲಿ ಪ್ರಪಂಚದಲ್ಲೇ ಮೊದಲನೆಯದು. ಅಮೆರಿಕ, ಇಂಗ್ಲೆಂಡ್, ಸೊವಿಯತ್ ಒಕ್ಕೂಟದಂತ ದೇಶಗಳು ತಂತ್ರಜ್ಞಾನದಲ್ಲಿ ನಮ್ಮ ದೇಶಕ್ಕಿಂತ ಮುಂದಿದ್ದವು. NICNET ಎಂಬ ಅದ್ಭುತ ಮಾಯಾ ಜಾಲ ಆ ದೇಶಗಳಿಗೆ ಆಶ್ಚರ್ಯ ಉಂಟು ಮಾಡಿದ್ದಲ್ಲದೆ, ಆ ದೇಶಗಳಿಂದ ತಂತ್ರಜ್ಞರು, ಆಡಳಿತಗಾರರು ಈ ಅದ್ಭುತ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ತಂಡ ತಂಡವಾಗಿ ನಮ್ಮ ದೇಶಕ್ಕೆ ಬಂದರು. ಇನ್ಫರ್ಮೇಶನ್ ತಂತ್ರಜ್ಞಾನದಲ್ಲಿ ಸುಮಾರು 10-15 ವರ್ಷಗಳು ಹಿಂದುಳಿದಿದ್ದ ದೇಶ ಒಂದೇ ಏಟಿಗೆ ದಾಪುಗಾಲು ಹಾಕಿಬಿಟ್ಟಿತ್ತು.
NIC ಹಾಗೂ NICNETನಿಂದ ದೇಶದ ಪ್ರಗತಿ ಇನ್ನೂ ವೇಗಗೊಂಡಿತು. ಸರ್ಕಾರೀ ಯೋಜನೆಗಳಲ್ಲದೆ, ರೈತರಿಗೆ ಸೂಕ್ತ ಸಲಹೆಗಳು, ಅವರ ಬೆಳೆಗೆ ಸೂಕ್ತ ಬೆಲೆ, ಗ್ರಾಮೀಣ ಮಟ್ಟದಲ್ಲಿ ನೆಡೆಯುವ ಎಲ್ಲ ಆರ್ಥಿಕ ಚಟುವಟಿಕೆಗಳ ಮಾಹಿತಿ, ಅದರ ವಿಶ್ಲೇಷಣೆ, ವಿಶ್ಲೇಷಣೆಯಿಂದ ನಿರ್ಧಾರ ಇವೆಲ್ಲವೂ ಗಣಕೀಕೃತಗೊಂಡು, ಡಾ.ಶೇಷಗಿರಿ ಅವರ ದೂರದೃಷ್ಟಿಯಿಂದ ಈ ಕನಸು ನನಸಾಯಿತು. NICಯ ಯಶಸ್ಸಿನಿಂದ ಸರ್ಕಾರದ ಇಲಾಖೆಗಳಲ್ಲಿದ್ದ ಅಧಿಕಾರಶಾಹಿ ವಿಳಂಬಗಳು ಕಡಿಮೆಯಾಗಿ ಸಾರ್ವಜನಿಕರಿಗೆ ಅನುಕೂಲವಾಯಿತು.
NIC ಮಹತ್ತರ ಕಾರ್ಯಗಳನ್ನು ಮಾಡುತ್ತಿದ್ದುದು ನವದೆಹಲಿಯಲ್ಲಿ ನಮ್ಮ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ ಮತ್ತೊಬ್ಬ ಕನ್ನಡಿಗರ ಗಮನಕ್ಕೆ ಬಂದಿತು. ಅವರೇ ಅಂದಿನ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟಿಸ್ M.N ವೆಂಕಟಾಚಲಯ್ಯ ಅವರು. ಜಸ್ಟಿಸ್ಸ್ ವೆಂಕಟಾಚಲಯ್ಯನವರು ಸರ್ವೋಚ್ಛ ನ್ಯಾಯಾಲಯದ ಕಾರ್ಯಕಲಾಪಗಳನ್ನು ಸುಧಾರಣೆ ಮಾಡಿದವರು ಎಂದು ಹೇಳಲಾಗುತ್ತದೆ. ಜಸ್ಟಿಸ್ ವೆಂಕಟಾಚಲಯ್ಯನವರು ಡಾ. ಶೇಷಗಿರಿ ಅವರನ್ನು ಸರ್ವೋಚ್ಛ ನ್ಯಾಯಾಲಯದ ಹಳೆಯ ಮತ್ತು ಹಾಲೀ ಮೊಕದ್ದಮೆಗಳನ್ನು ಮತ್ತು ದಿನ ನಿತ್ಯದ ಕಾರ್ಯಗಳನ್ನು ಗಣಕೀಕರಣ ಹೇಗೆ ಮಾಡಬಹುದು, ಅದರಿಂದ ನ್ಯಾಯಾಧೀಶರಿಗೆ, ನ್ಯಾಯವಾದಿಗಳಿಗೆ ಮತ್ತು ಕಕ್ಷಿದಾರರಿಗೆ ಯಾವ ರೀತಿ ಅನುಕೂಲಗಳಾಗುತ್ತವೆ ಎಂದು ಅಧ್ಯಯನ ಮಾಡಿ ವರದಿ ಸಲ್ಲಿಸಲು ಆದೇಶಿಸಿದರು. NIC ಸಲ್ಲಿಸಿದ ವರದಿಯ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯದ ಚಟುವಟಿಕೆಗಳನ್ನು NIC ಗಣಕೀಕೃತಗೊಳಿಸಿತು.
ಸ್ಥಾಪಿಸಿದ 45 ವರ್ಷಗಳಾದ ಮೇಲೂ NIC ಮಾಡುತ್ತಿರುವ ಅತ್ಯುತ್ತಮ ಕಾರ್ಯಗಳಿಂದ ದೇಶದ ಪ್ರಗತಿಗೆ ಭಾರೀ ಪ್ರಮಾಣದ ಉಪಯೋಗವಾಗುತ್ತಿದೆ.
ದೆಹಲಿ ಏಷಿಯನ್ ಗೇಮ್ಸ್
ನಮಗೆಲ್ಲ ತಿಳಿದಿರುವಂತೆ ದೆಹಲಿಯಲ್ಲಿ 1982ರಲ್ಲಿ ನೆಡೆದ ಏಷಿಯನ್ ಗೇಮ್ಸ್ ಯಶಸ್ವಿಯಾಯಿತು. ಏಷಿಯನ್ ಗೇಮ್ಸ್ ನ ಇತಿಹಾಸದಲ್ಲೇ ಮೊದಲ ಬಾರಿ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸಲಾಯಿತು. ಪ್ರತಿಯೊಂದು ಕ್ರೀಡೆಯ ಫಲಿತಾಂಶವನ್ನು ಕೆಲವೇ ಕ್ಷಣಗಳಲ್ಲಿ ದೊಡ್ಡ ಪರದೆಗಳ ಮೇಲೆ ಪ್ರಕಟಿಸಲಾಯಿತು. ಮಾಧ್ಯಮಗಳಿಗೆ ಮತ್ತು ಭಾಗವಸಿಹಿದ ರಾಷ್ಟ್ರಗಳ ಟಿವಿ ವರದಿಗಾರರು ಹಾಗೂ ಕಾಮೆಂಟೇಟರ್ಸಗೆ ನೇರವಾಗಿ ಕ್ರೀಡೆಗಳ, ಕ್ರೀಡಾಪಟುಗಳ ಮಾಹಿತಿ, ಅದುವರೆಗೂ ನಡೆದ ಒಲಂಪಿಕ್ಸ್, ವರ್ಲ್ಡ್ ಅತ್ಲೆಟಿಕ್ ಗೇಮ್ಸ, ಏಶಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ ನ ದಾಖಲೆಗಳು ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಇದರ ಹಿಂದೆ ವ್ಯಾಪಕವಾದ ಕಂಪ್ಯೂಟರ್ ಜಾಲವನ್ನೇ ಸ್ಥಾಪಿಸಲಾಗಿತ್ತು. ಇವೆಲ್ಲವನ್ನೂ ಯೋಜಿಸಿದ್ದು, ಕಾರ್ಯಗತಗೊಳಿಸಿದ್ದು ಡಾ.ಶೇಷಗಿರಿ. ಅವರ ಈ ಅದ್ಭುತ ಸಾಧನೆಗೆ ಕೇಂದ್ರ ಸರ್ಕಾರ “ಏಷ್ಯಾಡ್ ಜ್ಯೋತಿ” ಪುರಸ್ಕಾರ ಕೊಟ್ಟು ಗೌರವಿಸಿತು.
ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್
ಪೊ.M G K ಮನನ್ ಅಧ್ಯಕ್ಷರಾಗಿದ್ದ National Task Force on ITಯ ಸದಸ್ಯರು ಹಾಗೂ ಸಮಾವೇಶಕರಾಗಿದ್ದ ಡಾ.ಶೇಷಗಿರಿ, ನಮ್ಮ ದೇಶವನ್ನು 2008ರಷ್ಟಕ್ಕೆ ಜಾಗತಿಕ ಮಟ್ಟದಲ್ಲಿ ತಂತ್ರಾಂಶ ತಂತ್ರಜ್ಞಾನದಲ್ಲಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವದಕ್ಕೆ 108 ಶಿಫಾರಸುಗಳನ್ನು ತಯಾರು ಮಾಡಿ ಸರ್ಕಾರದ ಮನ್ನಣೆ ಪಡೆದು ಕೊಂಡರು. ಪ್ರೊ.ಮೆನನ್ ಅವರೇ ಹೇಳಿರುವಂತೆ ಈ ಕೆಲಸವನ್ನು ಡಾ.ಶೇಷಗಿರಿ ಎರಡೇ ತಿಂಗಳಲ್ಲಿ ಮಾಡಿ ಮುಗಿಸಿದರಂತೆ. ಡಾ.ಶೇಷಗಿರಿಯವರ ದೂರದೃಷ್ಟಿ ಹಾಗೂ ಪರಿಶ್ರಮದಿಂದ Software Technology Parks of India ಸ್ಥಾಪಿತಗೊಂಡಿತು. ಈಗಾಗಲೇ ಹೇಳಿರುವಂತೆ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್ಸಿಎಲ್, ಕಾಗ್ನಿಸಂಟ್ ಪ್ರಪಂಚದ ಹತ್ತಾರು ದೇಶಗಳಿಂದ ಇನ್ಫರ್ಮೇಶನ್ ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ವಹಿವಾಟುಗಳನ್ನು ನಿರ್ವಹಿಸಿ ನೂರಾರು ಬಿಲಿಯನ್ ಡಾಲರ್ ಗಳ ವ್ಯಾಪಾರ ಮಾಡಲು ಸಾಧ್ಯವಾಯಿತು.
ವಿಶ್ವದ ಪ್ರಮುಖ ಉದ್ಯಮಗಳ R&D ಕೇಂದ್ರಗಳನ್ನು ಸ್ಥಾಪಿಸಲು ಅನುಕೂಲವಾಗುವ ವಾತಾವರಣವನ್ನು Software Technology Parks ಹಾಗೂ ಡಾ.ಶೇಷಗಿರಿ ರೂಪಿಸಿದ “Flood-in and Flood out” ಕಾರ್ಯನೀತಿಯಿಂದ ಸುಲಭವಾಯಿತು. ಪ್ರಪಂಚದ ಪ್ರಮುಖ ಸಂಶೋಧನ ಕೇಂದ್ರಗಳು ನಮ್ಮ ದೇಶದಲ್ಲಿ ಸಂಶೋಧನೆ ನೆಡೆಸಿದರೆ ಆದರಿಂದ ನಮ್ಮವರಿಗೆ ಪ್ರಪಂಚದ ಶ್ರೇಷ್ಠ ಸಂಶೋಧನ ಪದ್ದತಿಗಳ ಬಗ್ಗೆ ತಿಳುವಳಿಕೆ ಬರುತ್ತದೆ ಹಾಗೂ ನಮ್ಮ ದೇಶವೂ ಸಂಶೋಧನಾ ಕೇಂದ್ರವಾಗಿ ಬೆಳೆದು ದೇಶದ ಆರ್ಥಿಕ ಮುನ್ನಡೆಗೆ ಬಲವಾದ ಅಡಿಪಾಯವಾಗುತ್ತದೆ ಎಂಬುದು ಡಾ.ಶೇಷಗಿರಿ ಅವರ ದೂರದೃಷ್ಟಿ. ವಿಶ್ವದ ಕೆಲವು ಪ್ರಮುಖ ಸಂಸ್ಥೆಗಳು ನಮ್ಮಲ್ಲಿ ಸಂಶೋಧನ ಕೇಂದ್ರಗಳನ್ನು ಸ್ಥಾಪಿಸಿದರೆ ಬೇರೆ ಸಂಸ್ಥೆಗಳೂ ಸಂಶೋಧನ ಕೇಂದ್ರಗಳನ್ನು ಸ್ಥಾಪಿಸುತ್ತವೆ ಎಂದು ಮನಗೊಂಡ ಅವರು, ಟೆಕ್ಸಸ್ ಇನ್ಸ್ಟ್ರುಮೆಂಟ್ಸ್, ಮೈಕ್ರೋಸಾಫ್ಟ್, ಡೆಲ್, ಒರೇಕಲ್, ಎಚ್.ಪಿ ಯಂತ ಸಂಸ್ಥೆಗಳು ಅವುಗಳ ಸಂಶೋಧನ ವಿಭಾಗಗಳನ್ನು ನಮ್ಮ ದೇಶದಲ್ಲಿ ಸ್ಥಾಪಿಸಲು ಒಪ್ಪಿಸಿದರು. ಇಲ್ಲೊಂದು ಗಮಾನರ್ಹ ವಿಷಯವೆಂದರೆ, ಕರ್ನಾಟಕ ಸರ್ಕಾರಕ್ಕೆ ಈ ಸಂಸ್ಥೆಗಳಿಗೆ ಸೂಕ್ತ ವಾತಾವರಣ ಕಲ್ಪಿಸಿ ಕೊಡಲು ಒಪ್ಪಸಿ ಹೆಚ್ಚು ಕಡಿಮೆ ಈ ಸಂಸ್ಥೆಗಳ ಸಂಶೋಧನ ಕೇಂದ್ರಗಳು ಬೆಂಗಳೂರಿನಲ್ಲಿ ಸ್ಥಾಪಿಸುವುದಕ್ಕೆ ಕಾರಣರಾದರು.
25-30 ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯ ದಾರ್ಶನಿಕ ದೂರದೃಷ್ಚಿಯಿಂದ ಇಂದು, ಅಮೇರಿಕ, ಚೀನಾದ ನಂತರ ಅತ್ಯಧಿಕ Patentಗಳ ನೋಂದಣಿ ಭಾರತದಿಂದ ಆಗುತ್ತಿದೆ. ನಮ್ಮ ದೇಶದಲ್ಲಿ ಸಂಶೋಧನೆಗೆ ಪ್ರಾಮುಖ್ಯತೆ ದೊರೆತು ಆರ್ಥಿಕ ಮುನ್ನೆಡೆಗೆ ಬಲವಾದ ಅಡಿಪಾಯವಾಗುವುದು ಎಂಬ ಡಾ.ಶೇಷಗಿರಿ ಅವರ ಕನಸು ನನಸಾಗುತ್ತಿದೆ.
e-Governance Movement
ಡಾ.ಶೇಷಗಿರಿ ಅವರ ಮತ್ತೊಂದು ದೂರದೃಷ್ಟಿ e-Governance. 1980ರಿಂದ ಮತ್ತು 1990 ದಶಕದಲ್ಲೂ ಅವರು e-Governanceಗೆ ಭದ್ರವಾದ ಅಡಿಪಾಯ ಹಾಕಲು ಸಾಕಷ್ಟು ಕೃಷಿ ಮಾಡಿದರು. ಸುಮಾರು 25 ವರ್ಷಗಳು ವಿಜ್ಞಾನಿಗಳು, ಇಂಜಿನೀಯರ್ ಗಳು ಮತ್ತು ಅಧಿಕಾರಿಗಳನ್ನು ದೇಶದಾದ್ಯಂತ e-Governance ನೆಡೆಸುವುದಕ್ಕೆ ತಯಾರು ಮಾಡಿದ್ದಾರೆ.
ದೇಶದ ಪ್ರಗತಿಗೆ ಅತಿ ಪ್ರಮುಖ ಅಡಿಪಾಯವಾದ e-Governanceನ ರೂವಾರಿ ಡಾ.ಶೇಷಗಿರಿ, “ನಮ್ಮ ದೇಶದ e-Governanceನ ಪಿತಾಮಹ”, ಎಂದೇ ಹೆಸರುವಾಸಿಯಾಗಿದ್ದಾರೆ.
ದೂರದೃಷ್ಚಿಯುಳ್ಳ ಅಪರೂಪದ ದಾರ್ಶನಿಕ
ಡಾ.ಶೇಷಗಿರಿ ತಮ್ಮ ಇಲಾಖೆಯ ಕಲಸಗಳೇ ಅಲ್ಲದೆ ಬೇರೆ ಕ್ಷೇತ್ರಗಳಲ್ಲಿಯೂ ಸಂಸ್ಥೆಗಳನ್ನು ಸ್ಥಾಪಿಸಿದ್ದಲ್ಲದೇ ಮೆಂಟರಿಂಗ್ ಕೂಡ ಮಾಡಿದ್ದಾರೆ. ಅಂಥ ಸಂಸ್ಥೆಗಳಲ್ಲಿ ಕೆಲವು
● ITI Equatorial System Limited
● Center for Development of Advanced Computing (CDAC)
● National Center for Trade Information (NCTI)
● National Informatics Center Services Inc (NICSI)
● Computer Society of India
● Director, IT Pour-la-Development International, Paris
ಡಾ.ಶೇಷಗಿರಿ ಸರ್ವಗ್ರಾಹಿಯಾದ ಬರಹಗಾರರು. ಅವರು ಬರೆದ 16 ಪುಸ್ತಕಗಳು ಪ್ರಕಟಿತಗೊಂಡಿವೆ. ಅವುಗಳಲ್ಲಿ ಕೆಲವು
● Atom Can Take Over from Oil (1974),
● Bomb (1975),
● The Weather Weapon (1977),
● The Food Weapon (1979),
● Fountain Heads of Science (1983),
● Globalisation of computer and communication: Perspectives for Developing Economies (1994),
● Encyclopedia of Cities and Towns in India (2008) ಮತ್ತು
● Survey of Rural India (2013).
2013ರಲ್ಲಿ ಪ್ರಕಟಿತಗೊಂಡ Survey of Rural India, 27 ಸಂಪುಟಗಳ 15300 ಪುಟಗಳನ್ನು ಒಳಗೊಂಡಿದೆ ಎಂಬುದು ಗಮನಾರ್ಹ.
ವಿವಿಧ ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಡಾ.ಶೇಷಗಿರಿ ಬರೆದಿರುವ 48 ಸಂಶೋಧನ ಲೇಖನಗಳು ಪ್ರಪಂಚದ ಪ್ರತಿಷ್ಟಿತ ವೈಜ್ಞಾನಿಕ ಹಾಗೂ ತಾಂತ್ರಿಕ ಜರ್ನಲ್ಗಳಲ್ಲಿ ಪ್ರಕಟಣೆಯಾಗಿದೆ.
ಗೌರವಗಳು ಮತ್ತು ಪ್ರಶಸ್ತಿಗಳು
ಡಾ.ಶೇಷಗಿರಿ ಅವರಿಗೆ ದೊರತಿರುವ ಕೆಲವು ಪ್ರಮುಖ ಪ್ರಶಸ್ತಿಗಳು
● ಪದ್ಮಭೂಷಣ - 2005 - ಡಾ.ಶೇಷಗಿರಿ ಅವರ IT ಹಾಗೂ e-Governance ಕ್ಷೇತ್ರಗಳಲ್ಲಿ ಸಲ್ಲಿಸಿದ ಅತ್ಯುನ್ನತ ಸೇವೆಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯಿಂದ ಗೌರವಿಸಿತು.
● ವಿಕ್ರಮ್ ಸಾರಾಭಾಯಿ ಪ್ರಶಸ್ತಿ- 1966
● O. P. ಭಸಿನ್ ಪ್ರಶಸ್ತಿ - 1989
● ಏಶ್ಯಾಡ್ ಜ್ಯೋತಿ ಪ್ರಶಸ್ತಿ - 1983
● ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
● Gold Medal by Systems Society of India
● TECHIES Award for Networking
● ELCINA Award for Lifetime contribution to Electronics
● Dataquest Inaugural Lifetime Contribution Award in Information Technology - 1996
ಡಾ.ಶೇಷಗಿರಿ ಅನೇಕ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದರಲ್ಲದೆ ಅವುಗಳ ಪ್ರಗತಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅವುಗಳಲ್ಲಿ ಕೆಲವು
● Emeritus Professor at IISc
● Emeritus Scientist at CSIR’s Centre for Mathematical Modelling and Computer Simulation
● Governor of UNESCO Institute for IT Education
● Governor of International Council for Computer Communication
● Fellow at National Academy of Sciences
● Fellow at Indian Academy Of Sciences
● Fellow National Academy of Engineering
● Fellow at Institution of Electronics and Telecommunications Engineers (IETE)
● Advisor on IT and e-Governance to President Vladimir Putin of Russia
● Advisor on IT and e-Governance to PM Manmohan Singh of India
● Advisor on IT to PM of Malaysia
ಡಾ.ಶೇಷಗಿರಿ ಅವರ ವ್ಯಕ್ತಿತ್ವ
ಶೇಷಗಿರಿ ಚಿಕ್ಕ ವಯಸ್ಸಿಲ್ಲಿಯೇ ಅವರಿಗೆ ತಂದು ಕೊಟ್ಟ ಆಟದ ಸಾಮಾನುಗಳನ್ನು ಸ್ಕ್ರೂಡ್ರೈವರ್, ಸ್ಪಾನರ್ಗಳಿಂದ ಬಿಚ್ಚಿ ಬಿಡಿಭಾಗಗಳಾಗಿ ಮಾಡಿ ಬಿಡುತ್ತಿದ್ದರಂತೆ. ಅವರ ತಂದೆ ಡಾ.ನರಸಿಂಹಯ್ಯ, ಶೇಷಗಿರಿ ಅವರನ್ನು Lion Class Destroyer ಎಂದು ತಮಾಷೆ ಮಾಡುತ್ತಿದ್ದರಂತೆ. ಮುಂದೆ ಅವರು ಶ್ರೇಷ್ಠ ಸಂಶೋಧನಕಾರರಾಗುವದಕ್ಕೆ ಇದೇ ಮುನ್ಸೂಚನೆಯಾಗಿತ್ತೇನೋ? ಓದಿನಲ್ಲಿ ಅಲ್ಲದೇ ಆಟದಲ್ಲಿ ಕೂಡ ಶೇಷಗಿರಿ ಮುಂದಿದ್ದರು. ಬಾಡಿ ಬಿಲ್ಡಿಂಗ ಅವರ ಮತ್ತೊಂದು ಹವ್ಯಾಸ. ನಂತರದ ದಿನಗಳಲ್ಲಿ ಯೋಗ, ಪ್ರಾಣಾಯಾಮ ಕಲಿತು ಅವರು ಜೀವನ ಪರ್ಯಂತ ಅಭ್ಯಾಸ ಮಾಡುತ್ತಿದ್ದರು. ದೇವೀ ಆರಾಧಕರಾಗಿದ್ದ ಶೇಷಗಿರಿ ಪ್ರತಿನಿತ್ಯ ಚಾಚೂ ತಪ್ಪದೇ ದೇವರ ಪೂಜೆ ಮಾಡುತ್ತಿದ್ದರು. ಆದರೆ ಅವರು ಪೂಜೆ ಮಾಡುತ್ತಿದ್ದುದು ಕುರುಡು ನಂಬಿಕೆಯಿಂದಲ್ಲ. ದೇವರ ಬಗ್ಗೆ ಸಂಶೋಧನೆ ಮಾಡಿ ಅನೇಕ ಸಾದು ಸಂತರೊಂದಿಗೆ, ವೇದಾಂತಿಗೊಳೊಂದಿಗೆ ದೇವರ ವಿಷಯ ವಿಚಾರ ವಿನಿಮಯ ಮಾಡಿ, ದೇವರ ಅಸ್ತಿತ್ವವನ್ನು ನಂಬಿ ಪೂಜೆ ಮಾಡುತ್ತಿದ್ದರು.
ಡಾ.ಶೇಷಗಿರಿಯವರ ದೈನಂದಿನ ಮೊದಲ ಕೆಲಸ ಅಂದಿನ ಚಟುವಟಿಕೆಗಳ ಪಟ್ಟಿ ಮಾಡುವುದು ಮತ್ತು ಪ್ರತಿಯೊಂದು ಚಟುವಟಿಕೆಗಳಿಗೂ ಸಮಯವನ್ನು ನಿಗದಿ ಪಡಿಸುವುದು. ಪಟ್ಟಿಯಲ್ಲಿದ್ದ ಎಲ್ಲ ಚಟುವಟೆಕೆಗಳೂ ಮುಗಿದ ಮೇಲೇ ಅವರ ಅಂದಿನ ಕೆಲಸ ಮುಗಿದಂತೆ. ಶೇಷಗಿರಿ ಅವರ ಧರ್ಮ ಪತ್ನಿ ಶ್ರೀಮತಿ.ಉಷಾ. ಮಕ್ಕಳು ಸುಧೀರ್ ಮತ್ತು ಸುಪ್ರಿಯ. ಕೆಲಸದ ಒತ್ತಡವಿದ್ದರೂ ಪರಿವಾರದ ಎಲ್ಲ ಸದಸ್ಯರೊಡನೆ ಅವರಿಗೆ ಅತ್ಮೀಯವಾದ ಬಾಂಧವ್ಯವಿತ್ತು. ಕಿರಿಯರಿಗೆ ಅವರ ವೃತ್ತಿ ಜೀವನದ ಬಗ್ಗೆ ಬಹಳ ಉತ್ಸಾಹದಿಂದ ಮಾರ್ಗದರ್ಶನ ಮಾಡುತ್ತಿದ್ದರು.
ಅನೇಕ ವಲಯಗಳಲ್ಲಿ ಸಾಧನೆ ಮಾಡಲು ಇವರಿಗೆ ಹೇಗೆ ಸಮಯ ಸಿಕ್ಕಿತು ಎಂಬ ಪ್ರಶ್ನೆಗೆ ಸಿಗುವ ಉತ್ತರ ಅವರ ಅಪಾರವಾದ ಬುದ್ದಿವಂತಿಕೆಯ ಜೊತೆಗೆ ಸಮಯ ನಿರ್ವಹಣೆ. 2000ರಲ್ಲಿ ಕೇಂದ್ರ ಸರ್ಕಾರದಿಂದ ವಿಷೇಶ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ ಮೇಲೂ ದಿನ ನಿತ್ಯ 12-14 ಘಂಟೆಗಳು ಕೆಲಸ ಮಾಡುತ್ತಿದರು. ಶ್ರಮ ಜೀವಿ, ಶಿಸ್ತಿನ ಸಿಪಾಯಿ. ತಾಮಸ್ ಆಲ್ವ ಎಡಿಸನ್ ಹೇಳಿದಂತೆ “Genius is 1% inspiration and 99% perspiration” ಎಂಬ ಉಲ್ಲೇಖನಕ್ಕೆ ಡಾ. ಶೇಷಗಿರಿ ಒಬ್ಬ ಸೂಕ್ತ ಉದಾಹರಣೆ.
ಡಾ.ಶೇಷಗಿರಿ ನಮ್ಮ ದೇಶದ ಒಬ್ಬ ಅಪರೂಪದ ದಾರ್ಶನಿಕ, ವಿಜ್ಞಾನಿ, ಆಡಳಿತಗಾರ. ಲಕ್ಷಾಂತರ ಜನರ ಜೀವನದಲ್ಲಿ ಅವರಿಗೇ ಅರಿವಿಲ್ಲದಂತೆ ಪ್ರಭಾವ ಬೀರಿದ ವ್ಯಕ್ತಿ. ನಮ್ಮ ದೇಶದ ಆರ್ಥಿಕ ಪ್ರಗತಿಗೆ ಒಳ್ಳೆಯ ಅಡಿಪಾಯ ಹಾಕಿ “ಎಲೆಯ ಮರೆಯ ಕಾಯಿಯಂತೆ” ಸೇವೆ ಸಲ್ಲಿಸಿ 26, ಮೇ 2013ರಂದು ಅವರ ಅತ್ಯಂತ ಪ್ರೀತಿಯ ಕಾರ್ಯವಾಗಿದ್ದ - ಸಂಶೋಧನೆಯಲ್ಲಿ ನಿರತರಾಗಿದ್ದಾಗ ಹೃದಯಾಘಾತದಿಂದ ಕಾಲವಶರಾದರು.
ಇನ್ಫೋಸಿಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅವರು ದೆಹಲಿಯಲ್ಲಿ 2019ರಲ್ಲಿ ಡಾ.ಶೇಷಗಿರಿ ಮೆಮೋರಿಯಲ್ ಭಾಷಣದಲ್ಲಿ ಹೇಳಿದಂತೆ “ಡಾ.ಶೇಷಗಿರಿ ಅಪರೂಪದ ಸಾಮರ್ಥ್ಯಗಳುಳ್ಳ ಚಿಂತಕ, ದಾರ್ಶನಿಕ, ಸಂಶೋಧಕ ಹಾಗೂ ನಿರ್ವಾಹಕರಲ್ಲದೇ ಅದಮ್ಯ ದೇಶಪ್ರೇಮಿ. ಅವರು ದೇಶಕ್ಕೋಸ್ಕರ ದುಡಿಯ ಬೇಕೆಂದು ಇಲ್ಲೇ ಉಳಿದುಕೊಂಡಿದ್ದು ನಮ್ಮೆಲ್ಲರ ಅದೃಷ್ಟ”. ಡಾ.ಶೇಷಗಿರಿ ಅವರ ಕೊಡುಗೆಗಳು ಎಂದೆಂದಿಗೂ ಶಾಶ್ವತ.
ಉಲ್ಲೇಖಗಳು:
● Scientometric Profile of Dr.N Seshagiri - NIC Library
● Bio-data prepared by Dr. Seshagiri
● Internet
● From family members
On the birth anniversary of Father of e-Governancd Dr. N. Seshagiri
ಕಾಮೆಂಟ್‌ಗಳು