ಮಾರಿಯಾ ಮಾಂಟೆಸ್ಸರಿ
ಮಾರಿಯಾ ಮಾಂಟೆಸ್ಸರಿ
ಮಾರಿಯಾ ಮಾಂಟೆಸ್ಸರಿ ಮಕ್ಕಳ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದವರು. ಹೀಗಾಗಿ ಅವರು ರೂಪಿಸಿದ ಶಿಕ್ಷಣ ಪದ್ಧತಿ ಅವರ ಹೆಸರಾದ 'ಮಾಂಟೆಸ್ಸರಿ' ಪದ್ಧತಿ ಎಂದೇ ವಿಶ್ವಖ್ಯಾತಿ ಗಳಿಸಿದೆ. ಇಂದು ಇವರ ಸಂಸ್ಮರಣೆ ದಿನ.
ಮಾರಿಯಾ ಮಾಂಟೆಸ್ಸರಿ 1870 ರ ಆಗಸ್ಟ್ 31 ರಂದು ಇಟಲಿಯ ಚಿಯಾರವಲ್ಲೆ ಪಟ್ಟಣದಲ್ಲಿ ಜನಿಸಿದರು. ಆಕೆಯ ತಂದೆ ಅಲೆಸ್ಸಾಂಡ್ರೊ ನಾಗರಿಕ ಸೇವೆಯಲ್ಲಿ ಅಕೌಂಟೆಂಟ್ ಆಗಿದ್ದರು. ತಾಯಿ ರೆನಿಲ್ಡೆ ಸ್ಟೊಪಾನಿ ಉತ್ತಮ ಶಿಕ್ಷಣವನ್ನು ಹೊಂದಿದವರಾಗಿದ್ದು ಓದುವ ಉತ್ಸಾಹ ಹೊಂದಿದ್ದರು. ಮಾಂಟೆಸ್ಸರಿ ಕುಟುಂಬವು 1875ರಲ್ಲಿ ರೋಮ್‌ಗೆ ಸ್ಥಳಾಂತರಗೊಂಡಿತು. ಮರುವರ್ಷ ಮಾರಿಯಾ ಸ್ಥಳೀಯ ರಾಜ್ಯ ಶಾಲೆಗೆ ಸೇರಿಕೊಂಡರು. ಮಾರಿಯಾ ಮಾಧ್ಯಮಿಕ ಶಾಲೆಯಲ್ಲಿ ಓದಿ, ಮುಂದೆ ವೈದ್ಯಕೀಯ ಶಾಲೆ ಪ್ರವೇಶಿಸಿ ವೈದ್ಯೆಯಾಗಲು ನಿರ್ಧರಿಸಿದರು. ಪುರುಷ ಪ್ರಾಬಲ್ಯದ ವೈದ್ಯಕೀಯ ಕ್ಷೇತ್ರಕ್ಕೆ ಅವಕಾಶ ನೀಡಲು ಆರಂಭದಲ್ಲಿ ಮಾರಿಯಾ ಅವರಿಗೆ ನಿರಾಕರಿಸಲಾಯಿತಾದರೂ, ಪೋಪ್ ಲಿಯೋ ಅವರ ಅನುಮೋದನೆಯೊಂದಿಗೆ, ಮಾರಿಯಾ 1890ರಲ್ಲಿ ರೋಮ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದರು. ಹೀಗೆ ಇಟಲಿಯಲ್ಲಿ ವೈದ್ಯಕೀಯ ಶಾಲೆಯಲ್ಲಿ ಶಿಕ್ಷಣ ಪಡೆದ ಮೊದಲ ಮಹಿಳೆಯರಲ್ಲಿ ಆಕೆ ಒಬ್ಬರಾದರು. ಅನೇಕ ಅಡೆತಡೆಗಳನ್ನು ಎದುರಿಸಿದರೂ, ಮಾರಿಯಾ ಜುಲೈ 1896ರಲ್ಲಿ ವೈದ್ಯೆಯಾಗಿ ಹೊರಹೊಮ್ಮಿದರು.
ತಮ್ಮ ವೈದ್ಯಕೀಯ ವೃತ್ತಿಜೀವನ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ಮಾರಿಯಾ ಮಹಿಳಾ ಹಕ್ಕುಗಳ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಎಲ್ಲಾ ಸಾಮಾಜಿಕ ವರ್ಗಗಳ ರೋಗಿಗಳಿಗೂ ಯಾವುದೇ ಭೇದವಿಲ್ಲದ ಗೌರವ ತೋರುತ್ತ ಅವರು ತಮ್ಮ ಉನ್ನತ ಮಟ್ಟದ ಸೇವೆಗೆ ಹೆಸರುವಾಸಿಯಾದರು.
1897ರಲ್ಲಿ, ಮಾರಿಯಾ ರೋಮ್ ವಿಶ್ವವಿದ್ಯಾಲಯದ ಮನೋವೈದ್ಯಕೀಯ ಚಿಕಿತ್ಸಾಲಯದಲ್ಲಿ ಸ್ವಯಂಸೇವಕರಾಗಿ ಸಂಶೋಧನಾ ಕಾರ್ಯಕ್ರಮಕ್ಕೆ ಸೇರಿದರು. ಈ ಸಂದರ್ಭದಲ್ಲಿ ಅವರು ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳ ಅಗತ್ಯತೆಗಳ ಕುರಿತಾಗಿ ಆಳವಾದ ಆಸಕ್ತಿ ತಳೆದರು. ಮಾರಿಯಾ ಅವರು ಆರ್ಥೋಫ್ರೆನಿಕ್ ಸ್ಕೂಲ್ ಎಂಬ ಹೊಸ ಸಂಸ್ಥೆಯ ಸಹ-ನಿರ್ದೇಶಕಿಯಾಗಿ ನೇಮಕಗೊಂಡರು. ಶಾಲೆಯಲ್ಲಿ ಸಹನಿರ್ದೇಶಕ ಗಿಯುಸೆಪ್ಪೆ ಮೊಂಟೆಸಾನೊ ಅವರೊಂದಿಗಿನ ಸಂಬಂಧದಲ್ಲಿ ಅವರಿಗೆ 1898ರಲ್ಲಿ ಮಾರಿಯೋ ಜನಿಸಿದ.
ಮಾರಿಯಾ ತಮ್ಮ ಇಪ್ಪತ್ತೆಂಟನೇ ವಯಸ್ಸಿನಲ್ಲಿ “ಮಾನಸಿಕವಾಗಿ ಮತ್ತು ದೈಹಿಕವಾಗಿ ಬೆಳವಣಿಗೆ ಹೊಂದದ ಮಕ್ಕಳು ತಮಗೆ ಉಂಟಾಗುವ ಬೆಂಬಲದ ಕೊರತೆಯಿಂದಾಗಿ ಸಮಾಜದಲ್ಲಿ ಅಪರಾಧಿಗಳಾಗಿ ರೂಪುಗೊಳ್ಳುತ್ತಾರೆ" ಎಂಬ ತತ್ವವನ್ನು ಪ್ರತಿಪಾದಿಸಲು ತೊಡಗಿದರು. ಲಿಂಗ ಸಮಾನತೆ, ಮಕ್ಕಳ ಪರವಾದ ನಿಲುವಗಳಂತಹ ಸಾಮಾಜಿಕ ಸುಧಾರಣೆಯ ವಿಚಾರಗಳು ಮಾರಿಯಾ ಅವರ ಜೀವನ ಪರ್ಯಂತದ ನಿಲುವಾಗಿ ರೂಪುಗೊಂಡವು.
1901 ರಲ್ಲಿ ಮಾರಿಯಾ ವಿದ್ಯಾರ್ಥಿಗಳಿಗೆ ಉಪನ್ಯಾಸ ಮತ್ತು ಬೋಧನೆ ಮಾಡುವುದರ ಮೂಲಕ ಶೈಕ್ಷಣಿಕ ತತ್ತ್ವಶಾಸ್ತ್ರ ಮತ್ತು ಮಾನವಶಾಸ್ತ್ರದ ಕುರಿತು ತಮ್ಮದೇ ಆದ ರೀತಿ ಅಧ್ಯಯನಗಳನ್ನು ಪ್ರಾರಂಭಿಸಿದರು. 1904-1908ರವರೆಗೆ ಅವರು ರೋಮ್ ವಿಶ್ವವಿದ್ಯಾಲಯದ ಪೆಡಾಗೋಗಿಕ್ ಶಾಲೆಯಲ್ಲಿ ಉಪನ್ಯಾಸಕರಾಗಿದ್ದರು. ಈ ಅವಧಿಯಲ್ಲಿ ರೋಮ್ ತ್ವರಿತ ಅಭಿವೃದ್ಧಿಯನ್ನು ಕಂಡಿತಾದರೂ, ಮಾರುಕಟ್ಟೆಯಲ್ಲಿ ಮೂಡಿದ ಊಹಾತ್ಮಕ ಆಧಾರದ ಚಟುವಟಿಕೆಗಳು ಆ ದೇಶದ ದಿವಾಳಿತನಕ್ಕೆಡೆ ಎಡೆ ಮಾಡಿಕೊಟ್ಟವು. ಅಂತಹ ಸನ್ನಿವೇಶದಲ್ಲಿ ಸ್ಯಾನ್ ಲೊರೆಂಜೊ ಎಂಬ ಮಾರಿಯಾ ಅವರಿದ್ದ ಊರಲ್ಲಿ ಪೋಷಕರಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಅವರ ಮಕ್ಕಳುಗಳು ಮನೆಯಲ್ಲಿ ಉಂಡಾಡಿ ಗುಂಡರಂತೆ ಹೇಗೆಂದರೆ ಹಾಗೆ ಹುಚ್ಚಾಟಗಳಲ್ಲಿ ಕಾಲಹರಣ ಮಾಡುತ್ತಿದ್ದವು. ಈ ಸಂದರ್ಭದಲ್ಲಿ ಮಕ್ಕಳಿಂದಾಗುವ ಅನಾಹುತಗಳನ್ನು ತಪ್ಪಿಸಲು ಆ ಮಕ್ಕಳಲ್ಲಿ ತಮ್ಮ ಬೋಧನಾ ಮಾದರಿಗಳನ್ನು ಪ್ರಯೋಗಿಸಲು ಮಾರಿಯಾ ಅವರಿಗೆ ಅವಕಾಶ ನೀಡಲಾಯಿತು. ಹೀಗೆ 1907ರಲ್ಲಿ, ಮಾರಿಯಾ ಅವರು ತಮ್ಮ ಆರ್ಥೋಫ್ರೆನಿಕ್ ಶಾಲೆಯಲ್ಲಿ ಅಭಿವೃದ್ಧಿಪಡಿಸಿದ ಕೆಲವು ಶೈಕ್ಷಣಿಕ ಸಾಮಗ್ರಿಗಳನ್ನು ಇಲ್ಲಿಗೆ ತರುವ ಮೂಲಕ ಮೊದಲ ಕಾಸಾ ಡೀ ಬಾಂಬಿನಿ (ಶಿಶುವಿಹಾರ) ಅನ್ನು ತೆರೆದರು.
ಮಾರಿಯಾ ಈ ಮಕ್ಕಳ ಪರಿಸರದಲ್ಲಿ ವಿವಿಧ ಚಟುವಟಿಕೆಗಳನ್ನು ರೂಪಿಸಿ ಅನೇಕ ವಸ್ತುಗಳನ್ನು ಹಾಕಿದರು. ಆದರೆ ಯಾವುದರಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡಿದ್ದರೋ ಅವುಗಳನ್ನು ಮಾತ್ರ ಇಟ್ಟುಕೊಂಡರು. ಈ ಪ್ರಯೋಗದ
ಮೂಲಕ "ಎಲ್ಲಿ ಮಕ್ಕಳಿಗೆ ಸಹಜವಾಗಿ ಅಭಿವೃದ್ಧಿ ಹೊಂದುವ ಚಟುವಟಿಕೆಗಳ ವಾತವರಣ ಇರುತ್ತದೊ ಅಲ್ಲಿ ಅವರಿಗೆ ಸ್ವಯಂ ತಾವೇ ಕಲಿಯುವ ಶಕ್ತಿ ಸಿದ್ಧಿಸುತ್ತದೆ" ಎಂಬುದನ್ನು ಕಂಡುಕೊಂಡರು. 1909ರ ಹೊತ್ತಿಗೆ ಮಾರಿಯಾ ಸುಮಾರು 100 ಮಕ್ಕಳಿಗೆ ತಾವು ರೂಪಿಸಿದ ಹೊಸ ವಿಧಾನದಲ್ಲಿ ಶಿಕ್ಷಣ ನೀಡಿದರು. ಈ ಅವಧಿಯಲ್ಲಿ ಅವರು ಬರೆದುಕೊಂಡಿದ್ದ ಟಿಪ್ಪಣಿಗಳು ಅದೇ ವರ್ಷ ಇಟಲಿಯಲ್ಲಿ ಪ್ರಕಟವಾದ ಅವರ ಮೊದಲ ಪುಸ್ತಕಕ್ಕೆ ವಸ್ತುಗಳನ್ನು ಒದಗಿಸಿದವು. ಇದು 1912 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ 'ದಿ ಮಾಂಟೆಸ್ಸರಿ ಮೆಥಡ್' ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಗೊಂಡಿತು. ಅತಿ ಶೀಘ್ರದಲ್ಲೇ ಇನ್ನೂ 20 ಭಾಷೆಗಳಿಗೆ ಅನುವಾದಗೊಂಡಿತು. ಕ್ಷಿಪ್ರ ಅವಧಿಯಲ್ಲೇ
ಮಾಂಟೆಸ್ಸರಿ ಶಿಕ್ಷಣ ವಿಧಾನದ ಅನುಷ್ಠಾನವು ವ್ಯಾಪಕ ವಿಸ್ತರಣೆ ಪಡೆದುಕೊಂಡಿತು. ಮಾಂಟೆಸ್ಸರಿ ಸೊಸೈಟಿಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಶಾಲೆಗಳು ಪ್ರಪಂಚದಾದ್ಯಂತ ಜೀವಂತವಾಗಿ ಹೊರಹೊಮ್ಮಿದವು. ಮಾರಿಯಾ ಅಮೆರಿಕಾದಲ್ಲಿ ಮತ್ತು ಯೂರೋಪಿನಾದ್ಯಂತ ವ್ಯಾಪಕವಾಗಿ ಸಂಚರಿಸಿದರು.
ಮಾರಿಯಾ 1917ರಿಂದ ಮೊದಲ್ಗೊಂಡಂತೆ ಸ್ಪೇನ್‌ನಲ್ಲಿ ವಾಸಿಸುತ್ತಿದ್ದರು. ಇವರ ಜೊತೆ ಮಾರಿಯೋ ಮತ್ತು ಅವರ ಪತ್ನಿ ಹೆಲೆನ್ ಕ್ರಿಸ್ಟಿ ಸಕ್ರಿಯರಾಗಿದ್ದರು. ಅಲ್ಲಿಯೇ ಮಾರಿಯೋ ಮತ್ತು ಹೆಲೆನ್ ತಮ್ಮ 4 ಮಕ್ಕಳಾದ ಮಾರಿಯೋ ಜೂನಿಯರ್, ರೊಲಾಂಡೋ, ಮರಿಲೀನಾ ಮತ್ತು ರೆನಿಲ್ಡೆ ಅವರನ್ನು ಬೆಳೆಸಿದರು. 1929ರಲ್ಲಿ, ಮಾರಿಯಾ ಮತ್ತು ಆಕೆಯ ಮಗ ಮಾರಿಯೋ ತಮ್ಮ ಕೆಲಸವನ್ನು ಶಾಶ್ವತಗೊಳಿಸಲು ಅಸೋಸಿಯೇಷನ್ ಮಾಂಟೆಸ್ಸರಿ ಇಂಟರ್ನ್ಯಾಷನಲ್ (AMI) ಅನ್ನು ಸ್ಥಾಪಿಸಿದರು.
ಯುರೋಪಿನಲ್ಲಿ ಮೂಡಿದ ಫ್ಯಾಸಿಸಂನ ಪ್ರಭಾವ ಮಾಂಟೆಸ್ಸರಿ ಚಳುವಳಿಯ ಮೇಲೂ ಗಣನೀಯ ಪ್ರಭಾವ ಬೀರಿತು. 1933ರ ಹೊತ್ತಿಗೆ ನಾಜಿಗಳು ಜರ್ಮನಿಯ ಎಲ್ಲಾ ಮಾಂಟೆಸ್ಸರಿ ಶಾಲೆಗಳನ್ನು ಮುಚ್ಚಿದರು. ಮುಸೊಲಿನಿ ಸಹಾ ಇಟಲಿಯಲ್ಲಿ ಅದೇ ರೀತಿ ಮಾಡಿದರು. 1936ರಲ್ಲಿ ಸ್ಪ್ಯಾನಿಷ್ ಅಂತರ್ಯುದ್ಧದಿಂದಾಗಿ ಅಲ್ಲಿಂದ ಪಲಾಯನ ಮಾಡಿದ ಮಾರಿಯಾ ಮತ್ತು ಮಾರಿಯೋ ಇಂಗ್ಲೆಂಡ್‌ಗೆ ಪ್ರಯಾಣಿಸಿ, ನಂತರ ನೆದರ್‌ಲ್ಯಾಂಡ್‌ಗೆ ಬಂದು ಅದಾ ಪಿಯರ್ಸನ್ ಅವರ ಕುಟುಂಬದೊಂದಿಗೆ ಉಳಿದುಕೊಂಡರು. ಅದಾ ಪಿಯರ್ಸನ್ ಮಾರಿಯೋ ಅವರ ಎರಡನೇ ಹೆಂಡತಿಯಾದರು.
1939ರಲ್ಲಿ ಭಾರತಕ್ಕೆ ಮೂರು ತಿಂಗಳ ಉಪನ್ಯಾಸಕ್ಕೆ ಎಂದು ಬಂದ ಮಾರಿಯಾ ಮತ್ತು ಮಾರಿಯೋ ಪ್ರವಾಸವು ಏಳು ವರ್ಷಗಳ ವಾಸ್ತವ್ಯಕ್ಕೆ ತಿರುಗಿತು. ಯುದ್ಧದ ಆ ಸನ್ನಿವೇಶದಲ್ಲಿ ಏಕಾಏಕಿ ಮಾರಿಯೋ ಅವರನ್ನು ಬಂಧಿಸಲಾಯಿತು. ಮಾರಿಯಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು. ಬ್ರಿಟಿಷ್ ಸರ್ಕಾರವು ಇವರನ್ನು ಇಟಾಲಿಯನ್ ಪ್ರಜೆಗಳೆಂದು ಹೀಗೆ ಬಂಧನಕ್ಕೊಳಪಡಿಸಿತು.
ಭಾರತದಲ್ಲಿ, ಮಾರಿಯಾ ಅವರು 'ಕಾಸ್ಮಿಕ್ ಎಜುಕೇಶನ್' ಎಂಬ ಯೋಜನೆಯ ಮೂಲಕ 6ರಿಂದ 12 ವರ್ಷ ವಯೋಮಿತಿಯ ಮಕ್ಕಳನ್ನು ಬೆಂಬಲಿಸುವ ತಮ್ಮ ಶಿಕ್ಷಣ ವಿಧಾನವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು. ಮಾರಿಯಾ ಅವರ 70 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾರಿಯೋ ಅವರನ್ನು ಬಿಡುಗಡೆ ಮಾಡಬೇಕೆಂಬ ವಿನಂತಿಯನ್ನು ಬ್ರಿಟಿಷ್ ಸರ್ಕಾರ ಪುರಸ್ಕರಿಸಿತು. ತಾಯಿ ಮತ್ತು ಮಗ ಒಂದುಗೂಡಿ ಸಾವಿರಕ್ಕೂ ಹೆಚ್ಚು ಭಾರತೀಯ ಶಿಕ್ಷಕರಿಗೆ ತರಬೇತಿ ನೀಡಿದರು.
ಮಾರಿಯಾ ಮತ್ತು ಮಾರಿಯೋ 1946ರಲ್ಲಿ ನೆದರ್ಲ್ಯಾಂಡ್ಸ್ಗೆ ಮರಳಿದರು. ಮುಂದಿನ ವರ್ಷ ಅವರು ಯುನೆಸ್ಕೋವನ್ನು ಉದ್ದೇಶಿಸಿ 'ಶಿಕ್ಷಣ ಮತ್ತು ಶಾಂತಿ' ಎಂಬ ವಿಷಯದ ಕುರಿತು ಮಾತನಾಡಿದರು. ಮಾರಿಯಾ ಅವರ ಹೆಸರು ಮೂರು ವರ್ಷ ಸತತವಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. 1951ರಲ್ಲಿ ಲಂಡನ್‌ನಲ್ಲಿ ನಡೆದ 9ನೇ ಅಂತರರಾಷ್ಟ್ರೀಯ ಮಾಂಟೆಸ್ಸರಿ ಕಾಂಗ್ರೆಸ್ ಅವರ ಜೀವನದ ಕೊನೆಯ ಕಾರ್ಯಕ್ರಮವಾಯಿತು.
ಮಾರಿಯಾ ಮಾಂಟೆಸ್ಸರಿ ಅವರು ತಮ್ಮ 81 ನೇ ವಯಸ್ಸಿನಲ್ಲಿ 1952ರ ಮೇ 6ರಂದು ನೆದರ್ಲ್ಯಾಂಡ್ಸ್ನಲ್ಲಿ ನಿಧನರಾದರು. ಅವರ ಪುತ್ರ ಮಾರಿಯೋ ಆ ಕೆಲಸದ ಪರಂಪರೆಯನ್ನು ಮುಂದುವರಿಸಿದರು.
On Remembrance Day of Maria Montessori known for Mintessori Education System
ಕಾಮೆಂಟ್‌ಗಳು