ರಿತುಪರ್ಣೋ ಘೋಷ್
ರಿತುಪರ್ಣೋ ಘೋಷ್
ರಿತುಪರ್ಣೋ ಘೋಷ್ ಹಿಂದಿ ಹಾಗೂ ಬೆಂಗಾಲಿ ಸಿನಿಮಾರಂಗದಲ್ಲಿ ಹೊಸ ಅಲೆ ಸೃಷ್ಟಿಸಿ ಮನೆಮಾತಾಗಿದ್ದವರು. ಅವರ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದವು.
1963ರ ಆಗಸ್ಟ್ 31ರಂದು ಜನಿಸಿದ ರಿತುಪರ್ಣೋ ಘೋಷ್, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ನಂತರ ಜಾಹೀರಾತು ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದರು.ಅವರು ಸತ್ಯಜಿತ್ ರೇ ಅವರ ಅಭಿಮಾನಿಯಾಗಿದ್ದರು.
ರಿತುಪರ್ಣೋ ಘೋಷ್ ನಿರ್ದೇಶಿಸಿದ ಮೊದಲ ಚಿತ್ರ 1994ರಲ್ಲಿ ತೆರೆಕಂಡ 'ಹಿರೇರ್ ಆಂಗ್ಟಿ'. ಮರುವರ್ಷವೇ ಅವರು ನಿರ್ದೇಶಿಸಿದ ‘ಯುನಿಶ್ ಏಪ್ರಿಲ್' ರಾಷ್ಟ್ರ ಪ್ರಶಸ್ತಿ ಗಳಿಸಿತು. ಮುಂದೆ ಅವರು ನಿರ್ದೇಶಿಸಿದ ದಹನ್, ಬೆಂಗಾಲಿ ಅಸುಕ್, ಉತ್ಸಬ್, ಶುಭೋ ಮಹೂರ್ತ್, ಚೋಕರ್ ಬಾಲಿ, ರೈನ್ ಕೋಟ್, ದಿ ಲಾಸ್ಟ್ ಲಿಯರ್, ಶೋಭ್ ಚರಿತೋ ಕಲ್ಪೋನಿಕ್, ಅಬೋಹೊಮಾನ್, ಚಿತ್ರಾಂಗದ್ ಚಿತ್ರಗಳಿಗೆ ಸಹಾ ರಾಷ್ಟ್ರಪಶಸ್ತಿ ಸಂದಿತು. ಚಿತ್ರಾಂಗದ್ ಅವರು ನಿರ್ದೇಶಿಸಿದ ಕಡೆಯ ಸಿನಿಮಾ. ಅವರಿಗೆ ಒಟ್ಟು ಹನ್ನೆರಡು ರಾಷ್ಟ್ರಪ್ರಶಸ್ತಿಗಳು ಸಂದಿದ್ದವು. 1998ರಲ್ಲಿ ನಡೆದ ಕಾರ್ಲೋವಿ ವಾರಿ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ದಹನ್ ಚಿತ್ರಕ್ಕೆ ಪ್ರತಿಷ್ಠಿತ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ ಒಲಿಯಿತು. 2004ರಲ್ಲಿ ಅದೇ ಸಿನಿಮೋತ್ಸವದಲ್ಲಿ ರೈನ್ ಕೋಟ್ ಸಿನಿಮಾ ಉತ್ತಮ ಚಿತ್ರವೆಂಬ ಕೀರ್ತಿಗೆ ಪಾತ್ರವಾಯಿತು.
ರಿತುಪರ್ಣೋ ಅವರ ಚಿತ್ರಗಳು ಮಹಿಳೆಯರ ಜೀವನ ಶೈಲಿ, ಅವರ ಅಂತರಂಗ, ಹಲವು ನಿಟ್ಟಿನ ಚಿಂತನೆಗಳನ್ನು ಅಭಿವ್ಯಕ್ತಿಸಿದ್ದವು. ಸ್ವತಃ ಬಣ್ಣ ಹಚ್ಚುವ ಮೂಲಕ ಅವರು ಕೆಲವು ಪಾತ್ರಗಳಿಗೆ ಜೀವ ತುಂಬಿದ್ದರು.
ರಿತುಪರ್ಣೋ ಅವರು ತಾವು ಧರಿಸುತ್ತಿದ್ದ ಪೋಷಾಕುಗಳಿಂದ ಜನಸಮುದಾಯದಲ್ಲಿ ಅಚ್ಚರಿಯ ವ್ಯಕ್ತಿಯಾಗಿ ಕಂಡಿದ್ದರು. ಒಮ್ಮೊಮ್ಮೆ ಅವರು ಯುವತಿಯರಂತೆ ಬಟ್ಟೆ ಧರಿಸಿ ಬೀದಿಗಿಳಿದುಬಿಡುತ್ತಿದ್ದರು. ಸೆಲ್ವಾರ್ ಧರಿಸಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬರುತ್ತಿದ್ದರು. ತಲೆ ಬೋಳಿಸಿಕೊಂಡು ಕಪ್ಪನೆಯ ಕನ್ನಡಕ ಧರಿಸಿ ಯುವತಿಯಂತೆ ನೈಲ್‌ಪಾಲಿಶ್, ಬಳೆಗಳನ್ನು ಧರಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಉತ್ಸಾಹವಿತ್ತು. ರಿತುಪರ್ಣೋ ಅವರು ಸಲಿಂಗಿಗಳ ಬೆಂಬಲಿಗರೂ ಆಗಿದ್ದರು. ಅವರು ನಿರ್ದೇಶಿಸಿದ ಕೆಲವು ಚಿತ್ರಗಳು ಸಲಿಂಗಿಗಳನ್ನು ಕುರಿತದ್ದಾಗಿದೆ.
ಕೇವಲ 49 ತುಂಬಿದ ರಿತುಪರ್ಣೋ ಘೋಷ್ 2013ರ ಮೇ 30ರಂದು ಈ ಲೋಕವನ್ನಗಲಿದರು.
On the birth anniversary of Rithuparno Ghosh
ಕಾಮೆಂಟ್‌ಗಳು