ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸಂತಾ

 


ವಾಸಂತಿ ಅಮ್ಮ


Shyamala Madhav ಅವರ ತಾಯಿ ವಾಸಂತಿ ಅವರು  (28.08.1922 ರಿಂದ 31.08.2024) 102 ವರ್ಷಗಳ ಕಾಲ ಈ ಬುವಿಯಲ್ಲಿದ್ದು ಪರಿಪೂರ್ಣ ಜೀವನ ನಡೆಸಿದವರು. 

ಅವರ ಜನ್ಮದಿನದ ಸಂದರ್ಭದಲ್ಲಿ ಶ್ಯಾಮಲಾ ಮಾಧವ ಅವರ ಈ ಲೇಖನದ ಮೂಲಕ ಅವರನ್ನು ನೆನೆಯುತ್ತಿದ್ದೇನೆ:

ಮಂಗಳೂರ ತಂದೆಯ ಕುಟುಂಬದವರಿಗೆ ಇವರು ಪ್ರೀತಿಯ ವಸಂತಾ.  ತಾಯಿಯ ಕುಟುಂಬ ಹಾಗೂ ಶಾಲೆಯಲ್ಲಿ ವಸಂತಿ.

ಪಿ.ಟಿ. ಹಾಗೂ ಗೈಡಿಂಗ್ ಟೀಚರಾಗಿ ದುಡಿದ ಬೆಸೆಂಟ್ ಶಾಲೆಯಲ್ಲಿ  ಶಿಸ್ತು, ದಕ್ಷತೆಗೆ ಹೆಸರಾದ, ಈಗಲೂ ಸಹ ಶಿಕ್ಷಕಿಯರು,  ವಿದ್ಯಾರ್ಥಿನಿಯರು ಸ್ಮರಿಸಿಕೊಂಡು ಕಾಣ ಬರುವ ಆಟ ಟೀಚರ್. 

ಡಾ. ಶಿವರಾಮ ಕಾರಂತರ ಮುಂಬೈಯ ಕೊನೆಯ ಭೇಟಿಯಲ್ಲಿ,  ಡಾ. ನಿಂಜೂರರ ಮನೆಯಲ್ಲಿ ಅವರನ್ನು ಕಾಣ ಹೋಗಿ, ನಾನು ಬೆಸೆಂಟ್ ಶಾಲೆಯ ವಸಂತಿ ಟೀಚರ್ ಮಗಳೆಂದು ಪರಿಚಯಿಸಿಕೊಂಡಾಗ, "ಓ ! ಆಟ ಟೀಚರ್!  ಸಚ್  ಅ  ಡಿಸಿಪ್ಲಿನ್ಡ್  ಲೇಡಿ! ಈಗ ಅಂಥವರು ಎಲ್ಲಿ?" ಎಂದು ಉದ್ಗರಿಸಿದ್ದರು! 

ಮೂರು ತಿಂಗಳ ಪ್ರಾಯದಲ್ಲೇ ತಂದೆಯನ್ನು ಕಳಕೊಂಡ ನಮ್ಮಮ್ಮ, ತಂದೆಯ ಮನೆಯಾದ ಮಂಗಳೂರ ಸೀಗೆ ಬಲ್ಲೆ ಹೌಸ್ ನಲ್ಲೇ ಶೈಶವ ಹಾಗೂ ಬಾಲ್ಯದ ಆರು ವರ್ಷಗಳನ್ನು ಕಳೆದರು. ಸೀಗೆ ಬಲ್ಲೆ ಹೌಸ್, ನಮ್ಮೂರಿಗೆ, ಊರಜನರಿಗೆ ವಿದ್ಯೆಯ ಬೆಳಕನ್ನಿತ್ತ  ನಮ್ಮ ಮುತ್ತಜ್ಜ ಮಂಜಪ್ಪ ಅವರ ಮನೆ. 

ಸೇಲಂ ನಲ್ಲಿ ನ್ಯಾಯಾಧೀಶರಾಗಿದ್ದ ತನ್ನ ದೊಡ್ಡಪ್ಪ  ರಾವ್ ಬಹದ್ದೂರ್ ರಾಮಪ್ಪ ಅವರಿಗೆ ಪತ್ನೀ ವಿಯೋಗವಾಗಿ ಅವರ ಎಳೆಯ ಹೆಣ್ಮಕ್ಕಳೂ ಇಲ್ಲಿ ಸೀಗೆ ಬಲ್ಲೆ ಹೌಸ್ ನಲ್ಲಿ ಸೋದರತ್ತೆ ದೇವಮ್ಮನ  ಆಶ್ರಯಲ್ಲಿದ್ದರು. ರಜಾದಿನಗಳಲ್ಲಿ ಈ ಸೋದರಿಯರೊಡನೆ ಒಂದಾಗಿ ಸೇಲಂ, ಏರ್ಕಾಡ್ ಗಳ ಎಸ್ಟೇಟ್ ಗೆ  ಹೋಗುತ್ತಿದ್ದುದನ್ನು, ಅಲ್ಲಿನ ಹಣ್ಣುಗಳ ತೋಟಗಳಲ್ಲಿ ತಮ್ಮ ಸುತ್ತಾಟವನ್ನೂ  ಅಮ್ಮನ ಮಾತುಗಳಲ್ಲಿ ಕೇಳಿದ್ದೇವೆ. ರಾತ್ರೆ ನಿದ್ರೆ ಬಾರದ ದೊಡ್ಡಪ್ಪನಿಗೆ ಮನೆಯ ಹಸುವಿನ ತಾಜಾ ಹಾಲಿನ ಚಾ ಸಿದ್ಧವಾದಾಗ, " ವಸಂತಾ, ಲಕ್ಷ್ಮೀ, ಮೀನಾ, ಏಳಿ, ಬನ್ನಿ, ಚಾ ಕುಡಿದು ಮಲಗಿ", ಎಂದು ದೊಡ್ಡಪ್ಪ ಎಬ್ಬಿಸುತ್ತಿದ್ದುದನ್ನು ಅಮ್ಮ ಸ್ಮರಿಸುತ್ತಿದ್ದರು.

ತನ್ನ ಕೊಪ್ಪಳ ಚಿಕ್ಕಮ್ಮನ ಬಳಿಗೆ ರಜಾದಿನಗಳಲ್ಲಿ ಹೋಗುತ್ತಿದ್ದುದನ್ನೂ, ಅವರ ಪ್ರೀತಿ, ವಾತ್ಸಲ್ಯವನ್ನೂ ಅಮ್ಮ ನೆನೆಯುತ್ತಿದ್ದರು.

ಅಮ್ಮನ ಮುಂದಿನ ಆರು ವರ್ಷಗಳು ಮಂಗಳೂರ ಇನ್ನೋರ್ವ  ದೊಡ್ಡಪ್ಪ ಪರಮೇಶ್ವರರ  ಮನೆ, ತುಳಸೀ ವಿಲಾಸದಲ್ಲಿ. ಎಕ್ಸೈಸ್ ಇನ್ಸ್ಪೆಕ್ಟರ್ ಆಗಿದ್ದ ದೊಡ್ಡಪ್ಪನ ಈ ವಿಶಾಲ ಬಂಗಲೆಯನ್ನು ನಿಂತು  ಕಟ್ಟಿಸಿದವರು, ಅಮ್ಮನ ತಂದೆಯೇ. 

ಆಗ ಗಂಜಾಂನಲ್ಲಿ ಇನ್ಸ್ಪೆಕ್ಟರ್ ಆಗಿದ್ದ  ಈ ದೊಡ್ಡಪ್ಪನ ಬಂಗಲೆ ತುಳಸೀ ವಿಲಾಸದಲ್ಲೂ ಸೀಗೆ ಬಲ್ಲೆ ಹೌಸ್ ನಂತೇ ಊರಿನಿಂದ ವಿದ್ಯಾಭ್ಯಾಸಕ್ಕಾಗಿ ಬಂದು ಮನೆ ತುಂಬಿದ ವಿದ್ಯಾರ್ಥಿಗಳು. ಒಟ್ಟು ಇಪ್ಪತ್ತೈದು ಜನರಿದ್ದ ಮನೆಯಲ್ಲಿ ಎಲ್ಲ ಊಟದ ಬಟ್ಟಲುಗಳಿಗೂ  ತಾನು ಅಮ್ಮನೆಂದೇ ಕರೆಯುತ್ತಿದ್ದ ದೊಡ್ಡಮ್ಮ, ಹೇಗೆ ಒಂದೇ ಪ್ರಕಾರ ಬಡಿಸುತ್ತಿದ್ದರು ಎಂದು ಅಮ್ಮ ನೆನಪಿಸಿಕೊಳ್ಳುತ್ತಿದ್ದರು.‌ ಅವರ ತುಳಸೀಪೂಜೆಯ ನಿಷ್ಠೆಯನ್ನೂ ಅಮ್ಮ ಸ್ಮರಿಸುತ್ತಿದ್ದರು. 

ತುಳಸೀ ಕಟ್ಟೆಯ ಬಳಿ ತಿಟ್ಟೆಯ ಮೇಲೆ ತಟ್ಟೆಯಲ್ಲಿ ದೊಡ್ಡಪ್ಪ ನಿಗಾಗಿ ಮಾವಿನೆಲೆಯಲ್ಲಿ ಉಪ್ಪಿನ ಹರಳುಗಳು.‌ ಅದರಿಂದ ಉಜ್ಜಿದ ಅಜ್ಜನ ಹಲ್ಲುಗಳು ಕೊನೆವರೆಗೂ ಕ್ಷೀಣಿಸದೆ ಸಧೃಢವಾಗಿದ್ದುದನ್ನೂ ಅಮ್ಮ ನೆನೆಯುತ್ತಿದ್ದರು. 

ಮನೆತುಂಬ ಮೆಡಿಕಲ್, ಇಂಜಿನಿಯರಿಂಗ್, ವಕೀಲಿ  ಹಾಗೂ ಸ್ನಾತಕೋತ್ತರ ತರಗತಿಗಳಲ್ಲಿ ಕಲಿಯುತ್ತಿದ್ದ ದೊಡ್ಡಪ್ಪನ ಮಕ್ಕಳು. ಅಮ್ಮ, ನನ್ನ ಸಣ್ಣ ಚಿಕ್ಕಪ್ಪನಂಥ  ಸಮೀಪ ಬಂಧುಗಳು. ಮಾಳಿಗೆಯಲ್ಲಿ ವಿದ್ಯೆಯನ್ನರಸಿ ಊರಿನಿಂದ ಬಂದವರು. 

ದೊಡ್ಡಪ್ಪ ಕುದುರೆ ಸಾರೋಟಿನಲ್ಲಿ ಕಂದಾಯ ವಸೂಲಿಗೆ ಹೋಗುವಾಗ ಖಡ್ಗ ಹಿಡಿದ ಭಟರಿಬ್ಬರು ಅಕ್ಕ ಪಕ್ಕದಲ್ಲಿ ಜೊತೆಯಾಗಿ ಓಡುತ್ತಾ ಸಾಗುತ್ತಿದ್ದ ವರ್ಣನೆಯನ್ನು ಈ ದೊಡ್ಡಮ್ಮನ ಅಣ್ಣನ ಮಗಳಾದ ನನ್ನ ಸೋದರತ್ತೆಯ ಮಾತುಗಳಲ್ಲೂ ಕೇಳಿದ್ದೇನೆ. 

ಆಕಸ್ಮಿಕವಾಗಿ ಸಂಭವಿಸಿದ ಪ್ರತಿಭಾವಂತರಾದ ಮನೆ ಮಕ್ಕಳ ಮರಣಗಳು, ತುಳಸೀ ವಿಲಾಸದ ಎಲ್ಲ ವೈಭವವನ್ನೂ ಮಣ್ಣುಗೂಡಿಸಿತು. ಎಲ್ಲವನ್ನೂ ತ್ಯಜಿಸಿ ಪ್ರಾರ್ಥನೆಗೆ ಶರಣಾದ ಅಜ್ಜ,  ಇಗರ್ಜಿ ಯಲ್ಲೇ ಕಾಲಕಳೆಯ  ತೊಡಗಿ, ಕೊನೆಗೆ ಕ್ರೈಸ್ತರಾಗಿ ಪರಿವರ್ತಿತರಾದರು. ಆದರೆ ತಮ್ಮ ಪತ್ನಿಯನ್ನು ತನ್ನ ಪಥಕ್ಕೊಯ್ಯುವಲ್ಲಿ ಅವರು ಸಫಲರಾಗಲೇ ಇಲ್ಲ. ಕೊನೆವರೆಗೂ ಅಜ್ಜಿ ತಮ್ಮ ನಿಷ್ಠೆ, ಶ್ರದ್ಧೆಯಿಂದ ಕದಲಲಿಲ್ಲ.

ತುಳಸೀ ವಿಲಾಸದಿಂದ ಮುಂದಿನ  ಅಮ್ಮನ ವಾಸ ಸಣ್ಣತ್ತೆ ಪೊನ್ನಮತ್ತೆಯ ಮನೆ ಮಾಧವ ವಿಲಾಸದಲ್ಲಾಯ್ತು. ಇಲ್ಲೂ ಅಷ್ಟೇ. ಮನೆ ಮಕ್ಕಳು; ವಿದ್ಯೆಯನ್ನರಸಿ ಊರಿಂದ ಬಂದು  ಆಶ್ರಯ ಪಡೆದ ಊರ ಬಂಧುಗಳು. 

ಅಮ್ಮ ಥರ್ಡ್ ಫಾರ್ಮ್ ನಲ್ಲಿದ್ದಾಗ  ಒಂದು ಮಧ್ಯಾಹ್ನ ಕೊಟ್ಟಿಗೆಯಲ್ಲಿ ಕುಳಿತು 'Gone With The Wind' ಓದುತ್ತಾ  ಸ್ಕಾರ್ಲೆಟ್ ಒಹಾರಾಗೆ ಮಾತೃ ವಿಯೋಗವಾಗುವ ವಿವರಕ್ಕೆ ಕರಗಿ ಕಣ್ಣೀರಾಗುತ್ತಿದ್ದಾಗ ಅಲ್ಲಿಗೆ ಬಂದ ಚಂಪಕ ವಿಲಾಸದ ಅಜ್ಜಿ, "ಮಗು ಯಾಕೆ ಅಳುತ್ತಿದ್ದಾಳೆ? ನೀನೇನಾದರೂ ಅಂದೆಯಾ?" ಎಂದು ಕೇಳಿದ್ದರಂತೆ.

ಮುಂದಿನ ವರ್ಷ ಅಮ್ಮನಿಗೂ ಮಾತೃವಿಯೋಗವಾಗಿತ್ತು.. ಚೆರ್ವತ್ತೂರಿನಲ್ಲಿ ಅಗ್ರಿಕಲ್ಚರ್ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಸೋದರಳಿಯ ಆನಂದಂಕಲ್  ಬಳಿಯಿದ್ದ ಅಮ್ಮನ ಅಮ್ಮ ಉದರಶೂಲೆಯಿಂದ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಈ ಸುದ್ದಿ ಬಂದಾಗ ಮಾಧವ ವಿಲಾಸದಲ್ಲಿ  ಮಾಲ್ಪುರಿ ಕಲಿಯುತ್ತಿದ್ದರು, ನಮ್ಮಮ್ಮ.  ಮುಂದೆಂದೂ ಅವರು ಮಾಲ್ಪುರಿ ಮಾಡ ಹೋಗಲಿಲ್ಲ.

ಮೆಟ್ರಿಕ್ ಬಳಿಕ ಕಾಲೇಜ್ ಸೇರುವ ಹಂಬಲವಿದ್ದರೂ, ಅದು ಫಲಿಸದೆ, ಸೋದರತ್ತೆಯ ಆದೇಶದಂತೆ ಟೀಚರ್ಸ್ ಟ್ರೇನಿಂಗ್ ಮಾಡಿದರು, ಅಮ್ಮ. ಶಿಕ್ಷಕಿಯಾಗುವ ಅವಕಾಶಕ್ಕಾಗಿ ಬೆಸೆಂಟ್ ಶಾಲೆಗೆ ಹೋದಾಗ, ಕರೆಸ್ಪಾಂಡೆಂಟ್ ಏಕಾಂಬರರಾಯರು, ಮದರಾಸಿನ YMCA ಯಲ್ಲಿ  ಪಿ.ಟಿ.ಟ್ರೇನಿಂಗ್ ಮಾಡಿ ಬರುವಂತೆ ಆದೇಶಿಸಿದರು.

ಅಂತೆಯೇ  ಅಲ್ಲಿ ಪಿ. ಟಿ. ಹಾಗೂ ಗೈಡಿಂಗ್ ತರಬೇತಿ ಪಡೆದ ಅಮ್ಮನಿಂದ  ಅಲ್ಲಿನ ಪ್ರಿನ್ಸಿಪಾಲ್ ಆಂಗ್ಲ ಮಹಿಳೆ ಮಿಸ್ ಎಸ್ ಬುಕ್ ಬಗ್ಗೆ  ನಾವು ಸಾಕಷ್ಟು ಕೇಳಿದ್ದೇವೆ.  ಅಮ್ಮನ ಬಾಯಲ್ಲಿದ್ದ ಕೋರೆ ಹಲ್ಲೊಂದನ್ನು ತಾನೇ ಡೆಂಟಿಸ್ಟ್ ಬಳಿಗೆ ಕರೆದೊಯ್ದು ತೆಗೆಸಿದ ಮಿಸ್ ಎಸ್ ಬಕ್, ಅಮ್ಮನ ಪಾದದಲ್ಲಿ ಜನ್ಮತಃ ಒಂದಕ್ಕೊಂದು ಅಂಟಿಕೊಂಡಿದ್ದ ಉಂಗುರ ಬೆರಳು ಮತ್ತು ನಡುಬೆರಳನ್ನು ಶಸ್ತ್ರಕ್ರಿಯೆಯಿಂದ ಬೇರ್ಪಡಿಸ ಹೊರಟಿದ್ದರು. ಆದರೆ  ಮದರಾಸಿನಲ್ಲಿ ನ್ಯಾಯಾಧೀಶರಾಗಿದ್ದ ಅಮ್ಮನ ದೊಡ್ಡಪ್ಪ, ಅದು ಅನಗತ್ಯವೆಂದು ಬೇಡವೆಂದರು. 

ನಾವು ಮಕ್ಕಳಾಗಿದ್ದಾಗ ಅಮ್ಮನ ಈ ಬೆರಳಿನ ಬಗ್ಗೆ ನಾವು ಯೋಚಿಸಿದ್ದೇ ಇಲ್ಲ. ಆದರೆ ಮೊಮ್ಮಕ್ಕಳು, "ಅಮ್ಮಮ್ಮ, ಅದೇನು ನಿಮ್ಮ ಬೆರಳು ಹಾಗೆ?" ಎಂದು ಕೌತುಕದಿಂದ ಕೇಳಿದರೆ, ಅಮ್ಮ, ಅದು ತಾನು ಬಾಲ್ಯದಲ್ಲಿ ಅಂಟಿಸಿ ಬಿಟ್ಟುದೆಂದು ನಗುತ್ತಿದ್ದರು.

YMCA ಯ ಎಲ್ಲ ಶಿಸ್ತು, ಪರಿಣತಿಯೊಂದಿಗೆ ಹಿಂದಿರುಗಿದ ಅಮ್ಮ, ಬೆಸೆಂಟ್ ಶಾಲೆಯನ್ನು ಕ್ರೀಡೆ ಹಾಗೂ ಗೈಡಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆಸಿದರೆನ್ನಬೇಕು.  ದಸರಾ ಸ್ಪೋರ್ಟ್ಸ್ ಹಾಗೂ ಇಂಟರ್ ಸ್ಕೂಲ್ ಟೂರ್ನಮೆಂಟ್ ಗಳಲ್ಲಿ ಶೀಲ್ಡ್ ಗಳೂ, ಪ್ರೆಸಿಡೆಂಟ್ ಗೈಡ್ ಬ್ಯಾಜ್ ಗಳೂ ಶಾಲಾ ತಂಡ  ಹಾಗೂ ವಿದ್ಯಾರ್ಥಿಗಳನ್ನು ಅಲಂಕರಿಸಿದುವು. 

ಬೆಳ್ಳನೆ ನೀಳ ಕಾಯದ, ನೆಟ್ಟನೆ ನಿಲುವಿನ, ಗಂಭೀರ ನಡೆಯ, ಶುಭ್ರಶ್ವೇತವಸನರಾದ ನಮ್ಮ ತಂದೆ, ಅಮ್ಮನ ತುಳಸೀ ವಿಲಾಸದಮ್ಮನ  ಅಣ್ಣನ ಮಗ.. ಪರಸ್ಪರ ಮೆಚ್ಚಿಕೊಂಡ ಅವರ ವಿವಾಹವನ್ನು ನಡೆಸಿಕೊಟ್ಟವರು, ಅಮ್ಮನ  ಉಚ್ಚಿಲದ ತಲೆಬಾಡಿ ಮಾವಂದಿರು. 1946 ಆಗಸ್ಟ್ ಮೂವತ್ತರ  ಆ ಚೌತಿಯ ಹಬ್ಬದಂದು ರೈಲು ಸಂಚಾರ ಅದೇಕೋ ಇರದಿದ್ದರೂ, ಶಾಲೆಯ ಸಹಶಿಕ್ಷಕರೂ, ವಿದ್ಯಾರ್ಥಿಗಳೂ ನಡೆದುಕೊಂಡೇ  ಬಂದು ಮದುವೆ ಸಮಾರಂಭದಲ್ಲಿ ಹಾಜರಿದ್ದರು.

ಶಿಸ್ತು, ಕಠಿಣ ಪರಿಶ್ರಮಕ್ಕೆ ಹೆಸರಾದ ಟೀಚರ್ ನಮ್ಮಮ್ಮ, ಬೆಸೆಂಟ್ ಶಾಲೆಯ ಸೋಪಾನಗಳುದ್ದಕ್ಕೂ, , ಶಾಲಾ ಆವರಣದೊಳಗಿನ  ನಮ್ಮ ಮನೆಯಂಗಳದಲ್ಲೂ ನೆಟ್ಟು ಬೆಳೆಸಿದ ಹೂತೋಟದ ಸೊಬಗು ಅತಿಶಯ! 

ದಿನವಿಡೀ ಗೇಮ್ಸ್  ಪೀರಿಯಡ್ ಗಳು ಕೊನೆಗೆ ಸಂಜೆ  ಆಫ್ಟರ್ ಕ್ಲಾಸ್ ಗೇಮ್ಸ್, ನಂತರ ಗೈಡಿಂಗ್.. ಹೀಗಾಗಿ ಅಮ್ಮ ಮನೆಗೆ ಹೊಗುತ್ತಿದ್ದುದು ಸಂಜೆ ಆರೂವರೆಯ ಬಳಿಕ..ಮತ್ತೆ ತಡರಾತ್ರಿಯ ವರೆಗೆ ಅಮ್ಮ ಮನೆಗೆಲಸದ ದುಡಿವ ಯಂತ್ರ. 

ವರ್ತಕ ವಿಲಾಸದ ದಿನದ ದುಡಿಮೆಯ ಕೊನೆಗೆ ಸಂಜೆ ಐದೂವರೆಯ ರೈಲಲ್ಲಿ ಊರಿಗೆ ಹೋಗಿ ಶಾಲಾ ಕೆಲಸಗಳನ್ನು ನೋಡಿ ರಾತ್ರಿ ಹನ್ನೊಂದರ ರೈಲಿನಲ್ಲಿ ಹಿಂದಿರುಗುತ್ತಿದ್ದ ತಂದೆಯವರು, ಶಾಲಾ ಕರೆಸ್ಪಾಂಡೆಂಟರಾಗಿ  ತನುಮನದಿಂದ ದುಡಿದವರು.

 ಅವರು ಹಿಂದಿರುಗಿದ ಬಳಿಕವೇ ಅಮ್ಮನ ಊಟ. ತೀವ್ರ ಅಸ್ತಮಾ ರೋಗಿಯಾಗಿದ್ದ ತಂದೆಯವರು ರಾತ್ರಿ ನಿದ್ರಿಸುವುದು ಕಷ್ಟ ಸಾಧ್ಯವಿತ್ತು. ಉಬ್ಬಸ ಉಲ್ಬಣಿಸಿದಾಗಲೆಲ್ಲ ಔಷಧಿ, ಸರಿರಾತ್ರಿ ಯಲ್ಲಿ ಕಾಫಿ ಮಾಡಿ ಕುಡಿಸಿ, ಬೆನ್ನು ನೀವಿ  ಗಾಳಿ ಹಾಕಿ ಆರೈಕೆ ಮಾಡುವ ಅಮ್ಮ! 

ಗ್ಯಾಸ್, ಮಿಕ್ಸರ್, ಕುಕ್ಕರ್, ನೀರು ನಲ್ಲಿಗಳಿರದ ಕಾಲವದು.  ಒಲೆ ಉರಿಸಿ, ಬಾವಿಯಿಂದ ನೀರೆಳೆದು, ಕಡೆಯುವ ಕಲ್ಲಿನಲ್ಲಿ ಕಡೆದು, ಕಂಚು, ಹಿತ್ತಾಳೆಯ ಪಾತ್ರೆ, ಬಟ್ಟಲುಗಳನ್ನು ಹುಣಿಸೆ ಹುಳಿ, ಬೂದಿ ಹಚ್ಚಿ ತಿಕ್ಕಿ ಹೊನ್ನಿನಂತೆ ಹೊಳಪಿಸುವ ಅಮ್ಮ. ರವಿವಾರವೆಂದು ನೆರೆಕರೆಗೆಲ್ಲ ಅರಿಯುವಂತೆ ಮುಂಜಾನೆಯಿಂದಲೇ ಒಗೆಯುವ ಕಲ್ಲಿಗೆ ಬಡಿ ಬಡಿದು ಒಗೆಯುವ ಬಟ್ಟೆಯ ರಾಶಿ.  ಒಣಗಿದ ಸೀರೆ, ಪಂಚೆ, ಹೊದಿಕೆಗಳನ್ನು ಅಮ್ಮ, ಪಪ್ಪ ಇಬ್ಬರೂ ತುದಿಗಳನ್ನು ಹಿಡಿದು ಎಳೆದೆಳೆದು ಮಡಿಚಿಟ್ಟರೆ ಬೇರೆ ಇಸ್ತ್ರಿಯ ಅಗತ್ಯವೇ ಇರದಂತೆ. ಎಲ್ಲದರಲ್ಲೂ ಅಮ್ಮನ ಅಪ್ಪನ, ಓರಣ!.

ಹೆಡ್ ಮಿಸ್ಟ್ರೆಸ್ ಹಾಗೂ ಗೆಳತಿ ನಮ್ಮ ಪ್ರೀತಿಯ ರಾಧಾ ಎಲ್. ರಾವ್,  ಹಾಗೂ ಅಮ್ಮನ ಗೆಳತಿಯಾದ  ಟೀಚರ್ ಭಾಮಾಂಟಿಯಿಂದ ತೊಡಗಿ ಮನೆಗೆ ಬಂದು ಹೋಗುತ್ತಿದ್ದ ಶಿಕ್ಷಕರು; ಅಮ್ಮನ ಮಂಗಳೂರು ಬಂಧುಗಳು; ನಮ್ಮ ಪ್ರೀತಿಯ  ಶಾರದತ್ತೆ; ಶಾಲಾ ಸಂಬಂಧ ತಂದೆಯವರನ್ನು ಸಿಗಲು ಬರುತ್ತಿದ್ದ ಊರ ಹಿರಿ ಕಿರಿಯರು, ಬೆಸೆಂಟ್ ಶಾಲೆಯ ಸ್ಕೂಲ್ ಡೇ, ವಸಂತೋತ್ಸವ ದ ತಯಾರಿಯ  ಬಿಡುವಿರದ ಕೆಲಸಗಳು, ಇವೆಲ್ಲದರ ನಡುವೆ ಅಮ್ಮನ ಕೆಲಸ ನಡೆದೇ ಇರುತ್ತಿತ್ತು.

ಕಾಡಿದ ತೀವ್ರ ಅಸ್ತಮಾ, ಎಪ್ಪತ್ತೈದರ ಹರೆಯದಲ್ಲೆರಗಿದ ಭೀಕರ ಅಪಘಾತ , ಮತ್ತೆ ಕಾಣಿಸಿಕೊಂಡ ಬ್ಲಡ್ ಕ್ಯಾನ್ಸರ್, ಕೊನೆಗೂ ನಮ್ಮ ತಂದೆಯವರನ್ನು ನಮ್ಮಿಂದಗಲಿಸಿತು.

ಸದಾ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಸದಾ ಚೆನ್ನಿರುವೆನೆಂದೇ ಹೇಳುತ್ತಾ ಧೀಮಂತರಾಗಿ ಬಾಳಿದರು. 

ಅವರು ಕಟ್ಟಿ ನಿಲ್ಲಿಸಿದ ಮನೆಗಾಗಿ ಅದೇ ಶಿಸ್ತು, ಜೀವನ ಶ್ರದ್ಧೆಯಿಂದ ಕೊನೆಯವರೆಗೆ ಬಾಳಿ ಬದುಕುತ್ತಿದ್ದವರು, ನಮ್ಮಮ್ಮ.  ಹೆಚ್ಚಿಗೆ ಮಾತಿರದ, ಶಿಸ್ತಿನ ವಾತಾವರಣದಲ್ಲಿ ಬೆಳೆದ ನಾವು ಹಿರಿಯರಿಂದ ಕೇಳಿ ಅರಿತಿರಬೇಕಾದ ಮಹತ್ವಪೂರ್ಣ ಪೂರ್ವೇತಿಹಾಸವನ್ನು ಕೇಳಿ ನಮ್ಮದಾಗಿಸಿಕೊಳ್ಳಲಿಲ್ಲ ಎಂಬ ಖೇದ ನಮ್ಮದು. ಕೊನೆಯವರೆಗೆ ಮಾತು, ಉಚ್ಚಾರ, ನೆನಪು ಎಲ್ಲವೂ ಸ್ಫುಟವಾಗಿದ್ದ ಅಮ್ಮನನ್ನು, ಅವರಿದ್ದಾಗ ಕೇಳಿದರೆ, " ಯಾಕೆ ಅದೆಲ್ಲ? ಅದನ್ನೂ ಬರೆಯಲಿದೆಯೇನು?" ಅನ್ನುತ್ತಿದ್ದರು.

ನಮಗೋ, ಗತ ಇತಿಹಾಸ ಬಹಳ ಮುಖ್ಯ.  ಅದೆಲ್ಲವನ್ನೂ ಅರಿವ ದಾರಿ ಸದಾ ತೆರೆದಿರಲಿ, ಎಂಬ ಆಶಯವಿತ್ತು.

ಅಮ್ಮ 102 ತುಂಬಿ ಮೂರನೇ ದಿನ ನಮ್ಮನ್ನಗಲಿ ನಡೆದು ಬಿಟ್ಟರು. ಅವರು ಸದಾ ನನ್ನೊಡನಿದ್ದಾರೆ.


ಅಮ್ಮಾ,

ನಿಮ್ಮ ಬೇಬಿ.


—-

ಶ್ಯಾಮಲಾ ಮಾಧವ ಅವರ ತಾಯಿ  ವಾಸಂತಿ ಅವರ ಚೇತನಕ್ಕೆ ಗೌರವದಿಂದ ತಲೆಬಾಗುವೆ. ನಮಸ್ಕಾರ 🌷🙏🌷

On the birth anniversary of Vasanthi Amma 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ